09 ಜೂನ್ 2011

ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .

ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .

ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.

ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.

ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು.

ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.

ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.

ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.

ಕಾಮೆಂಟ್‌ಗಳಿಲ್ಲ: