06 ಸೆಪ್ಟೆಂಬರ್ 2009

ನೇಗಿಲಯೋಗಿಯ ಕತೆಯ ಕೇಳಿಲ್ಲಿ . .. . .



ಆತ ರೈತ .
ದೇಶದ ಬೆನ್ನೆಲುಬು.. ಅನ್ನ ನೀಡುವ ಅನ್ನದಾತ . . .ಪ್ರಾಣ ರಕ್ಷಕ ಹೀಗೆ ಏನೆಲ್ಲಾ ವಿಶೇಷಣಗಳನ್ನು ಆತನಿಗೆ ನೀಡಬಹುದೋ ಅದೆಲ್ಲವೂ ಆತನಿಗೆ ನೀಡಬಹುದು. ಆದರೆ ಆತನ ಜೀವನ ಮಟ್ಟ ಸುಧಾರಿಸದು.. ಹಾಗಾದ್ರೆ ಏನು ಮಾಡಬಹುದು ..? ಆತನಿಗಾಗಿ ಏನನ್ನು ಯೋಚಿಸಬಹುದು..? ಏನನ್ನೂ ಇಲ್ಲ..! ನಿಜಕ್ಕೂ ಇದು ಸತ್ಯ. ಅಂತಹ ಒಂದು ಘಟನೆಯೊಂದು ಇದೆ. ಇದಕ್ಕೂ ಮುನ್ನ ಒಂದು ಸಂಗತಿ.ಈಗಿನಂತೆ ಆಹಾರ ಬೆಳೆಯ ಕೊರತೆಯಾದರೆ 2050 ರವೇಳೆಗೆ ಏಷ್ಯಾದ ಅನೇಕ ಕಡೆಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿ ಕಾಡಲಿದೆ ಎಂಬ ವರದಿಯೊಂದು ಬಂದಿದೆ.ಆಗ ರೈತ ನೆನಪಾಗುತ್ತಾನೆ. ಆದರೆ ಆಗ ಆತನೇ ಇರುವುದಿಲ್ಲವಂತೆ...!!

ಮೊನ್ನೆ ರೈಲಲ್ಲಿ ಹೋಗುತ್ತಿದ್ದೆವು. ಯಾರೋ ಒಬ್ಬರು ಪ್ರಯಾಣಿಕರು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಚಾರ ರೈತನದ್ದಾಗಿತ್ತು. ನಿಜಕ್ಕೂ ಅವರು ಹೇಳುತ್ತಿರುವ ಸಂಗತಿಯ ಒಳಹೋದರೆ ಅದು ಕಾನೂನು ಪರಿಧಿಯೊಳಗೆ ಸರಿಯಿತ್ತು. ಆದರೆ ಅದರ ಹೊರತಾಗಿ ಅಂದರೆ ದೇಶದ ವ್ಯವಸ್ಥೆಯ ಒಳಗೆ ನೋಡಿದಾಗ ಹಾಗಾಗಬಾರದಿತ್ತು ಅಂತ ಅನ್ಸುತ್ತೆ.ಆತ ರೈತ, ಸುಮಾರು 60 ರಿಂದ 70 ವರ್ಷದ ಒಳಗಿನ , ಹೊಲದಲ್ಲಿ ಕೆಲಸ ಮಾಡಿದ ಜೀವ. ಆತನಿಗೆ ಹಾಸನಕ್ಕೆ ಬರುವುದಕ್ಕಿತ್ತು. ರೈಲಲ್ಲಿ ಟಿಕೆಟ್ ಪಡೆದಿದ್ದ. ಆತನಿಗೆ ಯಾರೋ ಹೇಳಿದರಂತೆ ನೀವ್ಯಾಕೆ ಆ ರೈಲಲ್ಲಿ ಹೋಗುತ್ತೀರಿ. ನೋಡಿ ಈ ರೈಲಲ್ಲಿ ಹೋಗಿ. ಇದು ನಿಮಗೆ ಹತ್ತಿರವಾಗುತ್ತದೆ ಎಂದರಂತೆ. ಹಾಗಾಗಿ ಆತ ಈ ರೈಲ್ಲನ್ನು ಏರಿದ. ಹಾಗೆ ರೈಲು ಮುಂದೆ ಹೋಯಿತು. ಟಿಕೆಟ್ ಚಕ್ಕಿಂಗ್‌ಗೆ ಅಧಿಕಾರಿ ಬಂದ. ಈ ರೈತ ಟಿಕೆಟ್ ನೀಡಿದ್ದೇ ತಡ. ನೀವ್ಯಾಕೆ ಈ ರೈಲಲ್ಲಿ ಬಂದದ್ದು ..ಇಳೀರಿ..ಇಳೀರಿ.. ಇಲ್ಲಿಂದ 45 ರುಪಾಯಿ ಕೊಟ್ಟು ಬಸ್ಸು ಏರಿ ಅಲ್ಲಿಗೇ ಹೋಗಿ ...ಇನ್ನೊಂದು ರೈಲಲ್ಲಿ ಬನ್ನಿ ಎಂದು ಗದರಿಸತೊಡಗಿದ. ಕಂಗಾಲಾದ ರೈತ ಹೇಳಿದ ನೋಡಿ ಸ್ವಾಮಿ ನಾನು ಟಿಕೆಟ್ ಮಾಡಿದ್ದೇನೆ. ನಂಗೊತ್ತಿಲ್ಲ ಯಾರೋ ಹೇಳಿದ್ರು ಇದರಲ್ಲಿ ಹೋಗಿ ಅಂತ. ಇನ್ನು ನನ್ನಲ್ಲಿ ಇರುವುದು 20 ರುಪಾಯಿ ನಾನು ಹೇಗೆ ಹೋಗಲಿ ಅಂತ ಕೇಳಿದ. ಆದರೆ ರೈಲು ಅಧಿಕಾರಿ ಕೇಳಲೇ ಇಲ್ಲ. ಆಗ ಜನ ಸೇರಿದರು. ಆದರೂ ರೈಲು ಅಧಿಕಾರಿ ಕೇಳಲೇ ಇಲ್ಲ. ಅಂತೂ 50 ರುಪಾಯಿ ದಂಡ ಕಟ್ಟಲೇ ಬೇಕಾಯಿತು. ಅದನ್ನು ಯಾರೋ ಒಬ್ಬರು ಕೊಟ್ಟರು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು. ಆದರೆ ವಿಷಯ ಅದಲ್ಲ..

ಈ ದೇಶ ರೈತನಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ...

ಈ ರಾಜ್ಯದಲ್ಲಿ ರೈತ ಗೀತೆ ಬಂದಿದೆ .. ನೇಗಿಲ ಯೋಗಿಯ ನೋಡಲ್ಲಿ ಅನುರಣಿಸುತ್ತಿದೆ...

ಶೇಕಡಾ 3 ರ ದರದಲ್ಲಿ ಸಾಲವಿದೆ.. ಉಚಿತ ವಿದ್ಯುತ್ ಇದೆ . . .

ಸಾವಯವ ಕೃಷಿಗೆ ಇನ್ನೂ ಸವಲತ್ತಿದೆ....

..... ಹೀಗೇ ಒಂದಲ್ಲ ಹತ್ತಾರು ಯೋಜನೆಗಳು ಸರಕಾರಗಳು ರೈತರಿಗಾಗಿ ಹಾಕಿಕೊಳ್ಳುತ್ತಿದೆ.
ಯಾಕಾಗಿ...?. ಪ್ರಚಾರಕ್ಕಂತೂ ಅಲ್ಲ. ಓಟಿಗಾಗಿಯೂ ಇರಬಹುದು. ಆಧರೆ ಅದಕ್ಕಿಂತಲೂ ಹೆಚ್ಚು ಈ ದೇಶದ ಅನ್ನದಾತ ಆತ.ಒಂದು ವೇಳೆ ಆತ ಮಾರಾಟವನ್ನು ನಿಲ್ಲಿಸಿ ಸ್ವಂತಕ್ಕಾಗಿ ಮಾತ್ರವೇ ಅಕ್ಕಿ ತಯಾರಿಸಿದ ಎಂದು ಇಟ್ಟುಕೊಳ್ಳಿ ದೇಶದ ಸ್ಥಿತಿ ಏನಾದೀತು..? ಒಂದು ಕ್ಷಣ ಯೋಚಿಸಿ..? ಹಾಗಿದ್ದರೂ ಈ ಅಧಿಕಾರಿಗೆ ಕೊಂಚವಾದರೂ ಮಾನವೀಯತೆ ಬೇಡವೇ ಎಂಬುದು ಒಂದು ಪ್ರಶ್ನೆ. ಸರಕಾರ ನಿಜಕ್ಕೂ ರೈತನ ಪ್ರಯಾಣಕ್ಕೆ ವಿಶೇಷವಾದ ವ್ಯವಸ್ಥೆ ಮಾಡಲಿ. ಎಲ್ಲಾ ಯೋಜನೆಗಳಂತೆ ಇದೂ ಕೂಡಾ ಆತನಿಗೆ ಸಿಗಲಿ. ಅಲ್ಲಿ ಅನಗತ್ಯವಾಗಿ ಮಂತ್ರಿಗಳ ಪ್ರಯಾಣಕ್ಕೆ ಖರ್ಚು ಮಾಡುವ ಸರಕಾರ ನೇಗಿಲಯೋಗಿಗೆ ನೀಡಲಿ.ಅಥವಾ ವರ್ಷಕ್ಕೆ ಒಂದಿಷ್ಟು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಿ.ಅದು ಬಿಟ್ಟು ಏನೂ ಅರಿಯದ ಟಿಕೆಟ್ ಪಡೆದಿದ್ದ ಆ ರೈತನ ಮೇಲೆ ದಂಡ ಕಟ್ಟು ಎಂದು ಹೇಳುವ ಆ ಅಧಿಕಾರಿಗೆ ಒಂದು ದಿನದ ಅನ್ನದ ಹಿಂದಿನ ಕಷ್ಠದ ಅರಿವು ಆಗಬೇಕು. ಆತನಿಗೆ 20 - 25 ರುಪಾಯಿಗೆ ಅಕ್ಕಿ ಸಿಗುತ್ತಲ್ಲಾ ಅದರ ಹಿಂದಿರುವ ದುಡಿಮೆ ಆತನಿಗೆ ಅರಿವಿಲ್ಲ. ತನಿಗೆ ಏನಿದ್ದರೂ ಇಲ್ಲಿ ರೈಲಲ್ಲಿ ಹೋಗಿ 20 - 25 ಸಾವಿರ ಎಣಿಸಿಯೇ ಗೊತ್ತು ವಿನಹ: ಒಂದು ತುತ್ತು ಅನ್ನದ ಹಿಂದಿರುವ ಕನಿಷ್ಠ ಗೊತ್ತಿಲ್ಲ. ಹಾಗಾಗಿ ಆತ ರೈತನಿಗೆ ದಂಡ ಕಟ್ಟಲು ಹೇಳಿದ್ದು.. . .

ಬಿಡಿ ಒಂದು ತುತ್ತು ಅನ್ನದ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸಿನೋಡಿ. ಆದರೂ ನಾವು ಕೊಡುವುದು 20 - 27 ರುಪಾಯಿ. ಅದಲ್ಲ ಈ ಬೆಲೆ ಇನ್ನೂ ಏರಲಿದೆಯಂತೆ. ಏಕೆಂದರೆ ರೈತರ ಸಮಸ್ಯೆ ಕಡಿಮೆಯಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ವರ್ಷದಿಂದ ವರ್ಷಕ್ಕೆ ಅಕ್ಕಿಯ ಉತ್ಪಾದನೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ 2050 ರ ವೇಳೆಗೆ ಆಹಾರದ ಸಮಸ್ಯೆ ಎದುರಾಗಲಿದೆ.ಇದಕ್ಕಾಗಿ ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾದೀತು ಎಂದು ವರದಿ ಹೇಳಿದೆ. ಅದು ಬಿಡಿ ಈ ಬಾರಿ ಪ್ರಕೃತಿ ಮುನಿದ ಪರಿಣಾಮವಾಗಿ ಬಿಹಾರ, ಉತ್ತರಪ್ರದೇಶ , ಅಸ್ಸಾಂ, ಸೇರಿದಂತೆ ರಾಜ್ಯದ ವಿವಿದೆಡೆ ಭತ್ತದ ಉತ್ಪಾದನೆ ಶೇಕಡಾ 15 ರಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ೧೧೦ ಕೋಟಿ ಜನರ ಹೊಟ್ಟೆ ತುಂಬಿಸುವ ಚಿಂತೆ ಎದುರಾಗಲಿದೆ.

ಇದೆಲ್ಲದರ ನಡುವೆಯೇ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದವರೊಬ್ಬರು ಹೇಳುತ್ತಿದ್ದರು. ನಮ್ಮ ಹಿರಿಯರು ನಮಗೆ ಗದ್ದೆಗೆ ಇಳಿಯುದಕ್ಕೆ ಕಲಿಸಲಿಲ್ಲ ಕಂಪ್ಯೂಟರ್ ಗುಂಡಿಯನ್ನು ಅದುಮಲು ಹೇಳಿಕೊಟ್ಟರು ..., ನಮ್ಮ ಹಿರಿಯರು ಮನಗೆ ಮಣ್ಣಿನ ವಾಸನೆ ತೋರಿಸಿಲ್ಲ .. ,ನಮಗೆ ನಗರದ ವಾಸನೆ ತೋರಿಸಿದರು..., ಹೀಗಾಗಿ ಇಂದು ನಗರದಲ್ಲಿ ದಿಕ್ಕು ಕಾಣದಾದರೆ ಹಳ್ಳಿಗೆ ಬರಲೂ ಆಗದೆ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾ.. ಇಂದಿನ ಆರ್ಥಿಕ ಸಂಕಷ್ಠದಲ್ಲಿ ನಗರದಲ್ಲಿ ಉದ್ಯೋಗ ಕಳೆದುಕೊಂಡರೆ ಹಳ್ಳಿಯಲ್ಲಿ ಬದುಕಲಾದ ಸ್ಥಿತಿ ಬಂದಿದೆ ಎಂದು ಅವರು ಹೇಳುತ್ತಿದ್ದಾಗ ಹಿಂದೆ ಕುಳಿತಿದ್ದ ಅಜ್ಜ ಹೌದು ಎಂದು ತಲೆದೂಗುತ್ತಿದ್ದರು. ಇನ್ನೊಬ್ಬರು ಹೇಳುತ್ತಿದ್ದರು ಕೃಷಿ ಇಂದು ಯಾಂತ್ರೀಕರಣವಾದಾಗ ಮಾತ್ರಾ ಕೃಷಿ , ರೈತ ಉಳಿದುಕೊಳ್ಳಲು ಸಾಧ್ಯ. ಆದರೆ ಇಂದು ನ್ಯಾನೋ ಕಾರು ಬರುತ್ತದೆ ಎಂದಾಗ ಭಾರೀ ಪ್ರಚಾರ ಸಿಗುತ್ತದೆ. ರೈತರೂ ಸೇರಿ ಎಲ್ಲರೂ ಕ್ಯೂನಲಿ ನಿಂತು ಕಾರಿಗೆ ಬುಕ್ ಮಾಡುತ್ತಾರೆ. ಆದರೆ ಕೃಷಿ ಉಪಕರಣವೊಂದು ಕಂಡುಹುಡುಕಿದರೆ ಅದನ್ನು ಕೇಳುವವರೇ ಇರುವುದಿಲ್ಲ. ಬುಕ್ ಮಾಡಿ ಎಂದರೆ ಜನರೇ ಬರುವುದಿಲ್ಲ ಎನ್ನುತ್ತಾರೆ.

ಇವೆರಡು ಸಂಗತಿಗಳ ನಡುವೆ ಗಿರಕಿಹೊಡೆಯುತ್ತಾ ಮುಂದೆ ಸಾಗಿದರೆ ಸರಕಾರ ಅನೇಕ ಯೋಜನೆಗಳನ್ನು ರೈತರಿಗಾಗಿ ಕೊಡುತ್ತದೆ. ಆದರೆ ಯಾವುದೂ ಆತನಿಗೆ ಸರಿಯಾಗಿ ತಲಪುವುದಿಲ್ಲ. ಆತನಿಗೆ ಯಾವಾಗಲೂ ಹೀಗೆಯೇ ಬಸ್ಸಲ್ಲಿ , ರೈಲಲ್ಲಿ ದಂಡ ಕಟ್ಟಿಯೇ ಪ್ರಯಾಣಿಸಬೇಕು.... ಸಾಲ ಮಾಡಿಯೇ ಸಾಲ ತೀರಿಸಬೇಕು... ತನಗೆ ನಷ್ಠ ಮಾಡಿಯೇ ಜನರ ಹೊಟ್ಟೆ ತುಂಬಿಸಬೇಕು..... ಆದರೂ ನೇಗಿಲಯೋಗಿಯ ನೋಡಲ್ಲಿ .. . .. . ..!

ಕಾಮೆಂಟ್‌ಗಳಿಲ್ಲ: