18 ಸೆಪ್ಟೆಂಬರ್ 2015

ನದಿ ಮೂಲ ಸೃಷ್ಟಿಸೋಣ. . ನದಿ ತಿರುಗಿಸೋಣ. .!



                                                           (ಚಿತ್ರ - ಇಂಟರ್ನೆಟ್ ))

ಮೊನ್ನೆ ಮಿತ್ರನೊಬ್ಬ ಸಿಕ್ಕಿದ, ಆತ ಕೇಳಿದ ಪ್ರಶ್ನೆ ಇಷ್ಟೇ, ಅಲ್ಲಾ ಮಾರಾಯ, ಎತ್ತಿನಹೊಳೆ ಯೋಜನೆಯಾದ್ರೆ ನಿನಗೇನು ನಷ್ಟ?, ನಮಗೂ ಬೇರೆ ಬೇರೆ ಕಡೆಯಿಂದ ನೀರು ಬರುತ್ತಲ್ಲಾ. . .

ಪರಿಚಯಸ್ಥರೊಬ್ಬರು  ಮೊನ್ನೆ ಮಾತನಾಡುತ್ತಿದ್ದರು, ಒಂದು ಹೊಸ ನದಿಯನ್ನು ನಮಗೆ ಸೃಷ್ಟಿಸಲು ಸಾಧ್ಯವಿದೆಯಾದರೆ ನದಿ ತಿರುಗಿಸಬಹುದು, ನೀರಿನ ಮೂಲವನ್ನು  ಮರುಸೃಷ್ಟಿ ಮಾಡಬಹುದಾದರೆ ಇನ್ನೊಂದು ಯೋಜನೆ ಹಾಕಿಕೊಳ್ಳಬಹುದು, ಇದೆರಡೂ ಅಸಾಧ್ಯ ಎಂದಾದರೆ ನದಿ ತಿರುವು ಅಥವಾ ಪರಿಸರದ ಇಚ್ಚೆಗೆ ವಿರುದ್ದವಾದ ಕೆಲಸ ಮಾಡಲೇಬಾರದು.

ಮತ್ತೊಬ್ಬ ಗೆಳೆಯ ಹೇಳಿದ, ಅಲ್ಲಾರೀ, ಇಷ್ಟೊಂದು ದೊಡ್ಡ ಗಲಾಟೆ ಮಾಡೋ ಅವಶ್ಯಕತೆ ಇದಿಯಾ, ಕುಡಿಯಲು ನೀರಿಲ್ಲ, ಅನೇಕ ವರ್ಷಗಳಿಂದ ನಮ್ಮ ಗಂಟಲು ಒಣಗಿದೆ, ಕಲುಷಿತ ನೀರೇ ಗತಿಯಾಗಿದೆ, ಕ್ಲೋರೈಡ್‍ಯುಕ್ತ ನೀರೇ ಗತಿ, ಕೊಳವೆ ಬಾವಿ  700 ಅಡಿ ಹೋದರೂ ಸರಿಯಾಗಿ ನೀರಿಲ್ಲ, ಕೃಷಿ ಮಾಡಿ ಬದುಕು ಸಾಗಿಸೋದೇ ಕಷ್ಟವಾಗಿದೆ, ನಮ್ಮದೇ ನಾಡಿನ ಜನ, ಅವರಿಗೆ ನೀರು ಕೊಟ್ಟರೆ ಏನಾಗುತ್ತೆ, ಅದೇಗೋ ಮಳೆ ನೀರು ತಾನೆ?. .

ಇದೆಲ್ಲಾ ಪ್ರಶ್ನೆಗಳ ಬಳಿಕ ಎತ್ತಿನಹೊಳೆ ಯೋಜನೆ ಕಡೆಗೇ ಮನಸ್ಸು ಇಳಿಯಿತು. ಮೌನದಿಂದಲೇ ಉತ್ತರ ಹುಡುಕಹೊರಟಾಗ, ಕುಡಿಯುವ ನೀರು ವಿತರಣೆಗೆ, ಅಲ್ಲಿನ ಜನರಿಗೆ ನೀರು ನೀಡುವುದಕ್ಕೆ ವಿರೋಧ ಇಲ್ಲವೇ ಇಲ್ಲ, ಅಲ್ಲಿನ ಜನರ ಸಂಕಷ್ಟ ನೋಡಿದರೆ ಖಂಡಿತವಾಗಿಯೂ ನೀರು ನೀಡಲೇಬೇಕು. ಆದರೆ ಈ ಯೋಜನೆಯ ಬಗ್ಗೆ ಮಾತ್ರವೇ ವಿರೋಧ.ಏಕೆಂದರೆ ಇದು ಯಶಸ್ಸು ಹೇಗೆ ಸಾಧ್ಯ. .?

ಈಗ ಅವರು ಹೇಳುವುದು  ಮಳೆಗಾಲದ ನೀರು ಸರಬರಾಜು ಮಾತ್ರಾ. . !, ಆದರೆ ಈ ಯೋಜನೆಯ  ಸಮಗ್ರ ವರದಿಯಲ್ಲಿ  ಅದಕ್ಕಿಂತ ಭಿನ್ನವಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಲು ಇನ್ನೂ ಕಾಲಾವಕಾಶ ಬೇಕು, ಏಕೆಂದರೆ ಆ ವರದಿಯ ಅಧ್ಯಯನ ನಾನಿನ್ನೂ ಮಾಡಿಲ್ಲ, ಇನ್ನೂ ಕಾಲಾವಕಾಶ ಬೇಕು. ಏಕೆಂದರೆ ವರದಿಯ ಆಳಕ್ಕೆ ಇಳಿಯಲು ಸಮಯ ಬೇಕು.ಆದರೆ ಮೇಲ್ನೋಟದ ಸಂಗತಿಯೇ ಈ ಯೋಜನೆ ಯಶಸ್ಸು ಕಾಣದು ಎಂದು ಹೇಳುತ್ತದೆ.ಮಳೆಗಾಲದ ನೀರು ಎಂದು ಹೇಳುವ ಆಳುವ ಮಂದಿ, ಅಲ್ಲಿನ ಜನರಿಗೆ 24 ಟಿಎಂಸಿ ನೀರು ಕೊಡುತ್ತೇವೆ ಎನ್ನುತ್ತಾರೆ.ಮಳೆಗಾಲ ಇಲ್ಲಿನ ಪರ್ವತದಲ್ಲಿ  ಬಿದ್ದ ನೀರನ್ನು  ಪಿಲ್ಟರ್ ಮಾಡಿ ಚಿಕ್ಕ ಅಣೆಕಟ್ಟು ಕಟ್ಟಿ ರವಾನೆ ಮಾಡುತ್ತಾರೆ.ಇದೆಲ್ಲಾ ಒಪ್ಪುವ ಮಾತೇ, ಏಕೆಂದರೆ ತಾಂತ್ರಿಕವಾಗಿ ಭಾರತ ಮುಂದುವರಿದಿದೆ.

ಈಗ ಆಳುವ ಮಂದಿ ಹೇಳುವ ಉತ್ತರ ಇಷ್ಟೇ, ನದಿ ತಿರುವು  ಮಾಡುವುದಿಲ್ಲ, ಮಳೆಗಾಲದ ಬಿದ್ದ ನೀರನ್ನು  ಮಾತ್ರವೇ ಹಾಯಿಸುವುದು, ಈ ವಿರೋಧ ಅನಗತ್ಯ ಎಂದು.ಆದರೆ ನನಗೆ ಕಾಡುವ ಪ್ರಶ್ನೆ ಎಂದರೆ, ಒಂದು ವೇಳೆ ಮಳೆ ಕಡಿಮೆಯಾದರೆ ?.ನೀರು ಸರಬರಾಜು ಹೇಗೆ ?.ಆಗ ಅಲ್ಲಿನ ಜನ ಸುಮ್ಮನಿರುತ್ತಾರೆಯೇ, ಕೆಲವು ದಿನಗಳು ಮಾತ್ರವೇ ನೀರು ಸರಬರಾಜು ಮಾಡಿ ನಂತರ ನೀರಿಲ್ಲ ಎಂದರೆ ಹೇಗೆ, ಅಲ್ಲಿನ ಜನ ಎಲ್ಲಿಗೆ ಹೋಗುವುದು ?, ಆಗ ಆಳುವ ಮಂದಿ ಮಾಡುವ ಕೆಲಸ ಏನು ?. ಈಗಾಗಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ,ಇಲ್ಲಿಯೇ ನೀರು ಇಂಗುವುದು  ಸಾಕಾಗುವುದಿಲ್ಲ  ಎಂದು ಜಲತಜ್ಞರು  ಹೇಳುತ್ತಾರೆ, ಹೀಗಾಗಿ ಬೇಸಗೆಯಲ್ಲಿ  ನೀರಿಮಟ್ಟ ತೀರಾ ಕೆಳಕ್ಕೆ ಹೋಗುತ್ತದೆ ಎನ್ನುವುದು  ಇಲ್ಲಿನ ಎಲ್ಲರಿಗೂ ಈಗ ಅನುಭವಕ್ಕೆ ಬಂದಿದೆ. ಇನ್ನೂ ಒಂದು ಮುಖ್ಯವಾದ ಅಂಶ ಎಂದರೆ, ಎತ್ತಿನ ಹೊಳೆ ಅಥವಾ ಪಶ್ಚಿಮಘಟ್ಟ ಪ್ರದೇಶದಲ್ಲಿ  ಮಳೆ ನಿರಂತರವಾಗಿರುತ್ತದೆ ಎಂದು  ಆಳುವ ಮಂದಿ ಯೋಚಿಸಿದ್ದಾರೆ, ದೂರಾಲೋಚನೆ ಮಾಡಿದ್ದಾರೆ, ನಿಜ, ಅದಕ್ಕೆ ಕಾರಣ ಇಲ್ಲಿನ ಅರಣ್ಯ ಪ್ರದೇಶ ಎಂಬುದೂ ಅವರು ಒಪ್ಪಿಕೊಳ್ಳಬೇಕಾಗುತ್ತದೆ, ಇಂತಹ ಅಲ್ಲದೇ ಇದ್ದರೂ ಕೃತಕವಾಗಿ ಅಲ್ಲೂ ಅರಣ್ಯ ಬೆಳೆಸುವ ಕೆಲಸ ಏಕೆ ಮಾಡಬಾರದು ?.ಅಲ್ಲೂ ನೀರು ಇಂಗಿಸುವ, ಕೆರೆಗಳ ಅಭಿವೃಧ್ಧಿ ಏಕೆ ಮಾಡಬಾರದು ?.ಇದನ್ನೇ ನಾನು ನದಿ ಮೂಲದ ಸೃಷ್ಟಿ ಎಂದು ಕರೆಯುತ್ತೇನೆ.
ಇದೆಲ್ಲಾ ಬಿಟ್ಟು, ಇಷ್ಟು ದೊಡ್ಡ ಮಟ್ಟದ ಅಂದರೆ ಕೋಟಿ  ಕೋಟಿಗೂ ಅಧಿಕ ಮೊತ್ತದ ಈ ಯೋಜನೆಯ ಉದ್ದೇಶ ಏನು, ಮಳೆ ಕಡಿಮೆಯಾಗುವ ಇಂದಿನ ಸಂದರ್ಭ ಇಂತಹ ಯೋಜನೆ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಲು ಯಾರಿದ್ದಾರೆ ?.

ಹೀಗಾಗಿ ಈಗ ಈ ಯೋಜನೆಗೆ ಸಮ್ಮತಿ ಇಲ್ಲ ಏಕೆಂದರೆ, ಭವಿಷ್ಯದಲ್ಲಿ  ಎತ್ತಿನಹೊಳೆ ಮಾತ್ರವಲ್ಲ, ಇತರ ನದಿಗಳ ಮೂಲಗಳೂ, ಇತರ ಬೆಟ್ಟಗಳ ಮಳೆಗಾಲದ ನೀರೂ, ಬೇಸಗೆಯಲ್ಲಿ  ನದಿ ಮೂಲದ ನೀರೂ ಬೇಕಾಗುವುದು ನಿಶ್ಚಿತ.ಹೀಗಾದರೆ, ನಮ್ಮ ಊರಿನ ಪ್ರಮುಖ ನದಿಗಳೂ ಬೇಗನೆ ಬತ್ತಿ ಹೋಗುವುದೂ ಸತ್ಯ. ಈ ನದಿಗಳೂ ಬೇಗನೆ ಬತ್ತಿದರೆ ಅದಕ್ಕೆ ಸೇರುವ ಹೊಳೆ, ನದಿ ಪಕ್ಕದ ಬಾವಿ, ಕೆರೆಗಳಲ್ಲೂ ನೀರು ಕಡಿಮೆಯಾಗುತ್ತದೆ ಎಂದು ಹೇಳಬೇಕಾಗಿಲ್ಲ. ಕೆರೆ, ಬಾವಿಗಳಲ್ಲಿ  ನೀರು ಕಡಿಮೆಯಾದಂತೆ ಕೊಳವೆ ಬಾವಿಯ ಒಳಕ್ಕೆ ಇಳಿಯಲೇ ಬೇಕಾಗುತ್ತದೆ, ಮತ್ತಷ್ಟು ಕೊಳವೆ ಬಾವಿ ಬೇಕಾಗುತ್ತದೆ.ಆಗ ಅಂತರ್ಜಲ ಮಟ್ಟ ಇಳಿಕೆಯಾಗುತ್ತದೆ, ಸಮುದ್ರಕ್ಕೆ ಸೇರುವ ನೀರೂ ಕಡಿಮೆಯಾಗುತ್ತದೆ, ಹಿನ್ನೀರು  ಬರಲಾರಂಭಿಸುತ್ತದೆ. . .  ಹೀಗೇ ಸಮಸ್ಯೆಗಳ ಮೇಲೆ ಸಮಸ್ಯೆ ಬರಲಿದೆ. . ಇದೆಲ್ಲಾ ಭವಿಷ್ಯದ ಯೋಚನೆ ಅಷ್ಟೇ.

ಇಲ್ಲಿ  ಈಗ ಮೊದಲು ಸಂಕಷ್ಟ ಅನುಭವಿಸುವವರು  ನಗರದಮಂದಿ. ಕುಡಿಯುವ ನೀರಿಗೇ ಸಂಕಷ್ಟ ಬಂದೀತು.ಅದಕ್ಕೇ ಮೊನ್ನೆ ಮಿತ್ರರೊಬ್ಬರು ಅಣಕಿಸುತ್ತಿದ್ದರು, ಈಗ ನದಿಗಾಗಿ ಹೋರಾಟ ಮಾಡುತ್ತಿದ್ದಾರೆ,ಅಂದು ಪರಿಸರದ ಹೆಸರಿನಲ್ಲಿ  ಕೃಷಿಕರಿಗೆ, ಗ್ರಾಮೀಣ ಜನರಿಗೆ ಕಸ್ತೂರಿರಂಗನ್ ಭಯ ಇದ್ದಾಗ, ನಗರದ ಮಂದಿ ದೂರವೇ ಇದ್ದರು, ಪರಿಸರ ಉಳಿಯಬೇಕು, ಕಸ್ತೂರಿರಂಗನ್ ವರದಿ ಜಾರಿಯಾಗಬೇಕು ಎಂದು ಹೇಳಿದ್ದರು.ಈಗ ಅವರಿಗೇ ಸಂಕಷ್ಟ ಬಂದಿದೆ ಎಂದು ಹೇಳುತ್ತಿದ್ದರು.  .!,

1 ಕಾಮೆಂಟ್‌:

ಅರವಿಂದ ಹೇಳಿದರು...

ನಮಸ್ಕಾರ,

ಹಿಂದೆ ಸುಂದರರಾಯರು ಬರೆದ ಈ ಲೇಖನ ಎತ್ತಿನಹೊಳೆ ಕುರಿತಾಗಿ ಹಲವು ಮಾಹಿತಿಗಳನ್ನೊಳಗೊಂಡಿರುತ್ತದೆ. ತಮಗೆ ಸಹಾಯವಾಗಬಹುದು.

http://sundararao.blogspot.in/2013/10/blog-post_18.html

"ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು"

ಇಂತಿ
ಅರವಿಂದ