31 ಡಿಸೆಂಬರ್ 2011

ಅವಲೋಕನದ ಕಾಲ ಇದು. . .

ಒಂದಿಡೀ ವರ್ಷ ಕಳೆದುಹೋಯಿತು. ಹೆಜ್ಜೆ ಇಡುತ್ತಾ ಬಹುದೂರ ಸಾಗಿಯಾಗಿ ಈಗ ಇನ್ನೊಂದು ಕಾಲಘಟ್ಟದಲ್ಲಿದ್ದೇವೆ. ಈಗ ಕುಂತು ಹಿಂದೆ ತಿರುಗಿ ನೋಡಬೇಕು.ಅಂತ ಅನಿಸುತ್ತೆ.

 ನಮಗೆ ಪ್ರತೀ ದಿನವೂ ಕೂಡಾ ಹೊಸದೇ.ಹಾಗೆಂದು ಪ್ರತಿ ದಿನವೂ ಬದಲಾವಣೆ ಇದ್ದೇ ಇರುತ್ತೆ. ಅದು ನಮಗೆ ಮಾತ್ರವಲ್ಲ ಈ ಪ್ರಕೃತಿಗೂ ಅನ್ವಯಿಸುತ್ತೆ. ಹಾಗಾಗಿ ಹಿಂದಿನ ಅನುಭವಗಳು , ಮುಂದಿನ ದಾರಿಯನ್ನು ಸುಲಭಗೊಳಿಸಬಹುದು. ಹಾಗಾಗಿ ಅವಲೋಕನ ಬೇಕು. ಅದಕ್ಕೆಂದೇ ಒಂದು ದಿನ ಅಂತ ಬೇಡ. ಆದರೆ ಇದೊಂದು ಮುಖ್ಯ ಘಟ್ಟ. ಏಕೆಂದರೆ 11 ಕಳೆದ 12 ಬರುವ ಹೊಸಕಾಲ ಇದು. ಅದರ ಜೊತೆ ಜೊತೆಗೇ ನಮ್ಮ ಸಾಧನೆಯ ಹಿಂದೆ ಅದ್ಯಾರದ್ದೋ ಸಹಕಾರ , ಪ್ರೋತ್ಸಾಹವೂ ಇರಬಹುದು , ಅದನ್ನೆಲ್ಲಾ ಒಮ್ಮೆ ನೆನಯಲೇ ಬೇಕಲ್ಲ.

 ಹಾಗೆ ನೆನೆಯುತ್ತಾ ಹೋದಾಗ , ಕುಂತು ಯೋಚಿಸುತ್ತಾ ಕುಳಿತಾಗ ,2011 ನನಗೇನು ದೊಡ್ಡ ಸಾಧನೆಯ ವರ್ಷವಲ್ಲ. ಆದರೆ ಖುಷಿಯ ವರ್ಷ. ಏಕೆಂದರೆ ಒಬ್ಬ ಪಾಪು ನಮ್ಮ ಮನೆಗೆ ಪ್ರವೇಶಿಸಿದ್ದಾನೆ.ಇಂದಿಗೆ ಆತನಿಗೆ 9 ತಿಂಗಳು ಕಳೆದು 10 ತಿಂಗಳ ಪ್ರಾಯ. ಇನ್ನು ಸಹೋದರಿಯ ವಿವಾಹ ಇದೆಲ್ಲಾ ಪ್ರಮುಖವಾದ ಖುಷಿಯ ಸಂಗತಿಗಳು. ಆದರೆ ಅತ್ತ ಕಡೆ ನೋಡಿದರೆ , ಮಾರ್ಚ್ ನಂತರ ನಾನೀಗ ಸುದ್ದಿ ಮಾಡುತ್ತಿರುವ ಪತ್ರಿಕೆ ಹೊಸದಿಂಗಂತಕ್ಕೆ ಪುತ್ತೂರಿನಿಂದ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ.ಒಂದು ಹಂತದಲ್ಲಿ ಮಾಧ್ಯಮ ರಂಗದಿಂದ ದೂರವಿದ್ದು ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವ ಒಲವು ಹೊಂದಿದ್ದರೂ ಅನಿರಿಕ್ಷಿತವಾಗಿ ಮತ್ತೆ ಆ ಕಡೆ ಸೆಳೆಯಿತು.ಮತ್ತೆ ಮತ್ತೆ ಅಲ್ಲೇ ಅವಕಾಶಗಳು ಸಿಗುತ್ತಿದೆ. ಆದರೆ ಪ್ರತೀದಿನದ ಒಂದು ಸ್ವಲ್ಪ ಭಾಗ ಕೃಷಿಯ ಕಡೆಗೆ ಗಮನಹರಿಸದೇ ಇರುವುದಿಲ್ಲ. ಆದರೆ ನನ್ನ ಪ್ರತೀದಿನದ ಆಗುಹೋಗುಗಳಲ್ಲಿ ನನ್ನ ಮಿತ್ರರ ಸಹಕಾರ ಇದ್ದೇ ಇದೆ.ಏಕೆಂದರೆ ನನ್ನೊಬ್ಬನಿಂದಲೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಂತಹ ಅಹಂಕಾರವೂ ನನಗಿಲ್ಲ. ಆದರೆ ಆತ್ಮವಿಶ್ವಾಸ ಇದೆ , ಯಾವುದೇ ಕೆಲಸವನ್ನು ಮಾಡಬಲ್ಲೆನೆಂಬ ವಿಶ್ವಾಸ ಇದೆ ಆದರೆ ಅದಕ್ಕೆ ಮಿತ್ರರ ಸಹಕಾರ ಬೇಕೇ ಬೇಕು. ಇದೆಲ್ಲಾ ಹಿಂದಿನ ಕತೆಯಾಯಿತು. ಆದರೆ ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳಲು ಬರುವುದಿಲ್ಲ. ಕೆಲವನ್ನು ಮನದಲ್ಲೇ ನೆನೆಸಿಕೊಂಡು ಅವುಗಳಿಗೆ ಕೃತಜ್ಞತೆ , ತಪ್ಪುಗಳಾಗಿದ್ದರೆ ಮಂಥನ ನಡೆಸುತ್ತಲೇ ಇದ್ದೇನೆ.

 ಇವುಗಳನ್ನೆಲ್ಲಾ ನೆನಪಿಸಿಕೊಂಡು 2012 ಹೇಗಿರಬೇಕು ?, ಇಲ್ಲ ತುಂಬಾ ನಿರೀಕ್ಷೆಗಳಿಲ್ಲ , ಬದುಕನ್ನು ಬಂದ ಹಾಗೆ ಸ್ವೀಕರಿಸುವುದು , ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಇದೆರಡು ಪ್ರಮುಖವಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ನನ್ನದೇ ಕೆಲವು ಸಿದ್ದಾಂತಗಳಿಗೆ ಗಂಟುಬಿದ್ದು ಕೊಂಚ ಹಿನ್ನಡೆಯಾಗಿದೆ.ಏಕೆಂದರೆ ನಂಬಿದ ಸಿದ್ದಾಂತಗಳು ಕೆಲವೊಮ್ಮೆ ನಮಗೇ ರಿವರ್ಸ್ ಹೊಡೆದಿದೆ.ಅವಕಾಶಗಳು ತಪ್ಪಿ ಹೋಗಿವೆ. ಹಾಗಾಗಿ ಈ ವರ್ಷ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು , ಸಿದ್ದಾಂತಗಳಿಗೆ ಗಂಟುಬೀಳದೆ. ಇನ್ನೊಂದು ಬಹುಮುಖ್ಯವಾದ್ದು ಈ ಬಾರಿ ಸೋಲನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ಸೋಲು ಅಂತ ಕಂಡರೆ ಅದರ ಸಮರ್ಥನೆ ಮಾಡದೆ ಆ ಸೋಲನ್ನು ಒಪ್ಪಿಕೊಂಡು ಬಿಡುವುದು. ಏಕೆಂದರೆ ಸೋಲು ಅಂದರೆ ರಾಜಿಯಾಗುವುದು ಅಷ್ಟೇ, ಇದು ಬಹುಮುಖ್ಯ ಅಂತ ಅನಿಸಿದೆ.