14 ಆಗಸ್ಟ್ 2010

“ಅನ್ನ”ದ “ಸ್ವಾತಂತ್ರ್ಯ”ಕ್ಕಾಗಿ ಹೋರಾಟ . . .!!

ಮೊನ್ನೆ ಒಬ್ರು ಕೇಳಿದ್ರು.ಒಬ್ಬ ಮನುಷ್ಯನಿಗೆ ದಿನಕ್ಕೆ ಎಷ್ಟು ಕೇಜಿ ಅಕ್ಕಿ ಬೇಕು ಅಂತ. .?. ಏ. . .!!, ಅದೇನು ಒಂದರ್ಧ ಕೇಜಿ ದಿನಕ್ಕೆ, ಅಂತ ನಾವು ಅಂದಾಜು ಲೆಕ್ಕ ಬಿಟ್ಟೆವು.ಆದ್ರೆ ಅವ್ರು ಒಂದು ಲೆಕ್ಕ ಹೇಳಿದ್ರು.ಒಬ್ಬ ವ್ಯಕ್ತಿ ಅರ್ಧ ಕೇಜಿ ದಿನಕ್ಕೆ ಅಕ್ಕಿ ಬಳಸಿದ್ರೆ ತಿಂಗಳಿಗೆ ಎಷ್ಟು . . ?.ಸುಮಾರು 15 ಕೆಜಿ, ವರ್ಷಕ್ಕೆ ಎಷ್ಟಾಯಿತು. . ? ಸುಮಾರು 180 ಕೆಜಿ, ಅಂದಾಜು ಆತ 60 ವರ್ಷ ಬದುಕಿದ್ರೆ ಎಷ್ಟು ಬೇಕು . .?, ಸುಮಾರು 10,800 ಕೆಜಿ. . . !!. ಹೀಗೇ ಸಾಗಿದ ಅವರ ಲೆಕ್ಕ ನಮ್ಮ ಕುಟುಂಬ , ತಾಲೂಕು, ರಾಜ್ಯಕ್ಕೆ ಎಷ್ಟು ಅಕ್ಕಿ ಬೇಕು ದಿನಕ್ಕೆ ಅಂತ ಪ್ರಶ್ನೆ ಸಾಗಿತು. ಇಷ್ಟಲ್ಲಾ ಅಕ್ಕಿ ಬೇಕಾಗೋವಾಗ ಇಲ್ಲಿನ ಬೆಳೆ ಎಷ್ಟು. . .?. ನಿಜ ಅಲ್ವಾ ನಮ್ಮಲ್ಲಿ ಅನ್ನದ ಸ್ವಾತಂತ್ರ್ಯ ಇದೆಯಾ. . ?. ಅದನ್ನೇ ಯೋಚನೆ ಮಾಡ್ತಿರಬೇಕಾದ್ರೆ ಸುಳ್ಯದಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ರು.


ಅಲ್ಲಿ ಇದ್ದದ್ದು ಲೆಕ್ಕ ಮಾಡಿ 132 ಜನ.ಅವರ ಹೋರಾಟ ಅದೇ ಅನ್ನದ ಸ್ವಾತಂತ್ರ್ಯಕ್ಕಾಗಿ. ಹೋರಾಟ ಅಂದಾಗ ಅಲ್ಲೇನು ಉಪವಾಸ, ಸತ್ಯಾಗ್ರಹ , ಪ್ರತಿಭಟನೆ ಇದ್ದಿರಲೇ ಇಲ್ಲ.ಇದ್ದದ್ದು ಒಂದಷ್ಟು ಮನಸ್ಸು , ಇನ್ನೊಂದು ಚೂರು ಉತ್ಸಾಹ ಮಾತ್ರಾ. ಈ ಹೋರಾಟದಲ್ಲಿ ಅನ್ನದಾತರ ಜೊತೆ ಕೈಜೋಡಿಸಿದವರು ಹವಾನಿಯಂತ್ರಿತ ಕೊಠಡಿಯಲ್ಲಿ ದುಡಿಯುವ ದೇಹಗಳು. ಇವರಿಗೆಲ್ಲಾ ಲೀಡರ್ ಆಗಿದ್ದುದ್ದು ಒಬ್ಬ ಆಧ್ಯಾತ್ಮ ಗುರು.ಅವರು ನಿತ್ಯಾನಂದ.





ಅಂದು ದೇಶಕ್ಕೆ ಸ್ವಾತಂತ್ರ್ಯ ಬೇಕು ಅಂತ ಸಾವಿರಾರು ಮಂದಿ ಹೋರಾಟ ಮಾಡಿದ್ರು , ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅದೇ ಕೈಗಳು ಅನ್ನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಅದಕ್ಕೇನು ದೊಡ್ಡ ಪ್ರಚಾರವಿಲ್ಲ. ಅದು ಪ್ರಚಾರಕ್ಕೆ ಮಾಡಿದ ಕಾರ್ಯಕ್ರಮವೂ ಅಲ್ಲ. ಆದರೆ ಅದು ಅನಿವಾರ್ಯದ ಹೋರಾಟ. ಅನ್ನದ ದಾಸ್ಯ ಬಂದರೆ ಈ ದೇಶದ ಕತೆ ಮುಗಿಯಿತು ಎನ್ನುವುದು ಈ ಕಾರ್ಯಕ್ರಮದ ಒಟ್ಟಾರೆ ಸಂದೇಶವಾಗಿತ್ತು.


ಅದು ಸುಳ್ಯದ ದೊಡ್ಡ ಗದ್ದೆ.ಇಲ್ಲಿನ ಚನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ಅವರ ಭೂಮಿ.ಆದರೆ ಕಳೆದ ಕೆಲವು ವರ್ಷಗಳಿಂದ ನಾನಾ ಕಾರಣಗಳಿಂದ ಇಲ್ಲಿ ಬೇಸಾಯ ನಡೀತಾ ಇರಲಿಲ್ಲ.ಈ ಗದ್ದೆ ಸುಮಾರು 10 ಎಕ್ರೆ ವಿಸ್ತಾರವಾಗಿದೆ.ಕಳೆದ ಕೆಲವು ವರ್ಷಳಿಂದ ಹಾಗೇ ಸುಮ್ಮನೆ ಕೃಷಿ ಇಲ್ಲದೆ ಪಾಳು ಬಿದ್ದಿರುವುದನ್ನು ಇಲ್ಲೇ ಸಮೀಪದ ಅರಂಬೂರಿನ ತ್ರೈಂಬಕ ಆಶ್ರಮದ ಗುರು ನಿತ್ಯಾನಂದ ಅವರ ಕಿವಿಗೂ ಬಿತ್ತು. ಮೂಲತ: ಆಂದ್ರ ಪ್ರದೇಶದ ಇವರು ತಮ್ಮ ಯೋಜನೆಗಳ ಮೂಲಕ ನಾನಾ ಕಡೆ ಹಲವಾರು ಭಕ್ತರನ್ನು ಹೊಂದಿದ್ದರು. ಕರ್ನಾಟಕದಲ್ಲಿ ಚಿಕ್ಕಮಗಳೂರು , ಮೂಲ್ಕಿ , ಸುಳ್ಯದಲ್ಲಿ ಆಶ್ರಮ ಇದೆ. ಗುಜರಾತ್‌ನಲ್ಲಿ ಕಾಲಭೈರವೇಶ್ವರ ಟ್ರಸ್ಟ್ ಎಂಬ ಪ್ರದಾನ ಕಚೇರಿಯೂ ಇದೆ.ಇದೆಲ್ಲದರ ಪ್ರಮುಖ ರುವಾರಿ ಈ ನಿತ್ಯಾನಂದರು.ಈಗಾಗಲೇ ವಿವಿದ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಆಹಾರ ಬೆಳೆಗಳಿಗೆ ಉತ್ತಜನ ನೀಡಿ ತಾವು ಕೂಡಾ ಸ್ವತ: ಉಳುಮೆ ಮಾಡಿ ಜನರನ್ನು ಆಹಾರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸದವರೂ ಹೌದು.ಭಾರತದಾದ್ಯಂತ ಒಟ್ಟು 6000 ಎಕ್ರೆ ಪ್ರದೇಶದಲ್ಲಿ ಆಹಾರ ಬೆಳೆಗಳನ್ನು ಇವರು ಬೆಳೆಸುತ್ತಿದ್ದಾರೆ.4500 ಗೋವುಗಳನ್ನು ಸಾಕುತ್ತಿದ್ದಾರೆ.


ಇವರು ಸುಳ್ಯದಲ್ಲೂ ಕೃಷಿ ಮಾಡುವುದಕ್ಕೆ ಮುಂದಾದಾಗ ಹರಪ್ರಸಾದ ಮತ್ತು ಇತರ ಎಲ್ಲರೂ ಸಹಕರಿಸಿದರು.ಹಾಗಾಗಿ ಒಂದು ಆಂದೋಲನವೇ ಇಲ್ಲಿ ನಡೆಯಿತು.ಈ ನಿತ್ಯಾನಂದರಿಗೆ ಇಲ್ಲಿ ಬೆಳೆದ ಅಕ್ಕಿ ಬೇಕಾಗಿಲ್ಲ.ಅದೆಲ್ಲವೂ ಇಲ್ಲಿನ ಜನರಿಗೆ ಸೇರುತ್ತದೆ.ಆದರೆ ಹುಲ್ಲು ಮಾತ್ರಾ ಬೇಕಂತೆ.ಯಾಕೆಂದ್ರೆ ಅವರ ಗೋವುಗಳಿಗೆ ಊಟಕ್ಕೆ.ಅವರ ಪ್ರಕಾರ ಇಲ್ಲಿ 10 ಎಕ್ರೆಯಲ್ಲಿ ಬೆಳೆದ ಅಕ್ಕಿಯು 100 ಕುಟುಂಬಗಳಿಗೆ ಸಾಕಂತೆ. ಇಂದು ಎಲ್ಲಾ ಇದೆ ಅನ್ನದ ಸ್ವಾತಂತ್ರ್ಯ ಮಾತ್ರಾ ಇನ್ನೂ ಇಲ್ಲ ಎಂಬುದು ಇವರ ವಾದ.ಅನ್ನದ ದಾಸ್ಯ ಬಂದರೆ ದೇಶ ಸರ್ವನಾಶವಾಗುತ್ತದೆ ಎಂಬ ಕಾರಣಕ್ಕಾಗಿ ಈ ಜಾಗೃತಿ ಮಾಡಲಾಗುತ್ತಿದೆ ಎನ್ನುವ ನಿತ್ಯಾನಂದರು ಇದಕ್ಕಾಗಿ ತನ್ನ ಅನುಯಾಯಿಗಳನ್ನು ಬರಹೇಳುತ್ತಾರೆ.ಹಾಗಾಗಿ ಇಂಜಿನಿಯರ್ಗಳು , ಬ್ಯಾಂಕ್ ಉದ್ಯೋಗಿಗಳು ಎಲ್ಲರೂ ಗದ್ದೆಗೆ ಇಳಿದು ಅನ್ನದಾತರೊಂದಿಗೆ ಕೈಜೋಡಿಸುತ್ತಾರೆ.ಈ ಮೂಲಕ ಸೇವೆ ಎಂಬ ಯಜ್ಞ ನಡೆಯುತ್ತದೆ.





ನಿಜಕ್ಕೂ ನಿತ್ಯಾನಂದರು ಒಬ್ಬ ಸಮಾಜದ ಗುರು ಅಂತ ನನಗನ್ನಿಸುತ್ತದೆ.ಯಾಕೆಂದ್ರೆ ಇವರು ಥಿಯರಿಟಿಕಲ್ ಆಗಿಲ್ಲ , ಪ್ರಾಕ್ಟಿಕಲ್ ಮಾತ್ರಾ ಆಗಿದ್ದಾರೆ.ಯಾಕೆಂದ್ರೆ ಇಂದು ಅನೇಕ ಮಠಗಳು , ಕೆಲ ನಾಯಕರು ಬಾಯಲ್ಲಿ ಸ್ವದೇಶಿ . . ಸಾವಯವ , ನಮ್ಮ ಆಹಾರ ನಮಗೇ . . , ನಾವೇ ತಯಾರಕರು . . ನಾವೇ ಉತ್ಪಾದಕರು ಅಂತೆಲ್ಲಾ ಹೇಳುತ್ತಾರೆ.ಆದ್ರೆ ಕೃತಿ ರೂಪಕ್ಕೆ ಇಲ್ಲವೇ ಇಲ್ಲ.ಇಲ್ಲಿ ಹಾಗಲ್ಲ ಸ್ವತ: ನಿತ್ಯಾನಂದರೇ ಗದ್ದೆಗೆ ಇಳಿಯುತ್ತಾರೆ.ಅವರನ್ನು ಜನ ಸ್ವಾಮೀಜಿ ಅಂತಾರೆ ಆದ್ರೆ ನಿತ್ಯಾನಂದರು ಅಂತಾರೆ ನಾನು ಸ್ವಾಮಿಯಲ್ಲ , ಸಂಸಾರಿ ಅಂತಾರೆ.ನಾನೇ ಸ್ವತ: ಕೇಳಿದೆ ನಿಮ್ಮನ್ನು ಸ್ವಾಮಿ ಅಂತ ಕರಿಲಾ ಅಂದ್ರೆ . . ನೀವ್ ಏನ್ ಬೇಕಾದ್ರೂ ಕರೀರಿ, ನಂಗೇನು ಅಡ್ಡಿಯಿಲ್ಲ . . ಆದ್ರೆ ನಾನು ಮಾತ್ರಾ ನಾನೇ ಅಂತಾರೆ..!


ಒಟ್ಟಾರೆ ನೋಡಿದ್ರೆ ಇವತ್ತು ಈ ಆಂದೋಲನ ಅಗತ್ಯವಾಗಿದೆ.ನಮ್ಮೂರಲ್ಲೇ ನೋಡಿದ್ರೆ . . ಮೊನ್ನೆ ಗದ್ದೆ ಇದ್ದ ಜಾಗದಲ್ಲಿ ಇವತ್ತು ರಬ್ಬರ್ ಕಾಣಿಸುತ್ತಿದೆ. . ಮೊನ್ನೆ ಮೊನ್ನೆ ಅಡಿಕೆ ತೋಟ ಕಾಣಿಸುತ್ತಿತ್ತು.ಇಂದು ಅಲ್ಲೇ ಇನ್ನೊಂದು ಬೆಳೆ ಬಂದಿದೆ.ಎಲ್ಲೂ ಕೂಡಾ ಹೊಸದಾದ ಗದ್ದೆಗಳು ಇಲ್ವೇ ಇಲ್ಲ. ಅದು ಅಸಲಾಗೋದಿಲ್ಲ ಅನ್ನೋದು ಎಲ್ಲರ ಬಾಯ್ಲಲೂ ಇರೋ ಮಾತು.ಇನ್ಯಾವುದಾದರೂ ಲಾಭದಾಯಕ ಕೃಷಿ ಮಾಡಿ ಅಕ್ಕಿ ತಂದರಾಯಿತು ಅನ್ನೋದು ಎಲ್ಲರ ಅಭಿಪ್ರಾಯ.ಆದ್ರೆ ಹಸಿವಾಗುತ್ತೆ ಅಂತ ದುಡ್ಡನ್ನೋ , ಅಡಿಕೆಯನ್ನೋ , ರಬ್ಬರ್ ಅನ್ನೋ ತಿನ್ನೋದಕ್ಕೆ ಆಗೋಲ್ಲ ಅಲ್ವಾ. . ?.ಹಸಿದ ಹೊಟ್ಟೆಗೆ ಅನ್ನ , ಗೋಧಿ , ಜೋಳವೇ ಬೇಕಲ್ವಾ. .?. ಹಾಗಾಗಿ ಉಳಿದ ಬೆಳೆಗಳು ನಮ್ಮ ಆರ್ಥಿಕ ಸಾಮರ್ಥ್ಯಕ್ಕಾಗಿ , ಬಲಿಷ್ಠತೆಗಾಗಿ ಅದೂ ಇರಲಿ.ಅದರ ಜೊತೆಗೆ ಒಂದರ್ಧ ವರ್ಷಕ್ಕೆ ಬರೋವಷ್ಟು ಅಕ್ಕಿಯನ್ನು ನಾವೇ ಬೆಳೆದರೆ ಹೇಗೆ.. .? .


ನಮ್ಮಲ್ಲೂ ಹಾಗೆಯೇ , ನಮ್ಮ ಮನೆ ಜಮೀನಿನಲ್ಲಿ ಅಡಿಕೆ , ರಬ್ಬರ್ ಫಸಂದಾಗಿದೆ. ಒಂಚೂರು ಖಾಲಿ ಜಾಗ ಇನ್ನೂ ಇದೆ.ಹಾಗಾಗಿ ಒಂದು ಐಡಿಯಾ ಹಾಕಿದೀವಿ. ಜನ ಸಿಗೋಲ್ಲ ಎಂಬ ಕೂಗಿದೆ.ಇದ್ದವರಿಗೆ ನಾಟಿ ಗೊತ್ತಿಲ್ಲ. ಏನಾದ್ರೂ ಮಾಡಿ ಅನ್ನದ ಸ್ವಾತಂತ್ರ್ಯ ಪಡೀಬೇಕು ಅನ್ನೋ ಛಲ ಇದೆ.ಅದಕ್ಕಾಗಿ ಪ್ರಯತ್ನ ನಡೀತಾ ಇದೆ.

ಮನಸ್ಸಿನಲ್ಲಿದ್ದ ಈ ಯೋಚನೆಗಳಿಗೆ ಇನ್ನಷ್ಟು ಶಕ್ತಿ ತುಂಬಿರೋರು ಈ ನಿತ್ಯಾನಂದರು ಅಂದರೆ ತಪ್ಪಲ್ಲ.ಏನೇ ಆಗ್ಲಿ ಇನ್ನೊಂದು ಹತ್ತೋ ಹದಿನೈದು ವರ್ಷದೊಳಗೆ ಈ ಸಂಗ್ರಾಮ ಅನಿವಾರ್ಯವಾಗ್ಲೂ ಬಹುದು . . . .

3 ಕಾಮೆಂಟ್‌ಗಳು:

Nanda Kishor B ಹೇಳಿದರು...

ನಿಜ,
ಬರಹ ಇಷ್ಟವಾಯಿತು. ಹೃದಯಕ್ಕೆ ಹತ್ತಿರವಾಯಿತು ಕೂಡ...

-
nanda kishora

Dr Madhusudhan joshi ಹೇಳಿದರು...

nijaaku intha aandoalanagalu ellede nadedare nitya vu anandavannu namma anna daata padeya bahudu illavadare munde hasivaadare rabbaralla computerugalanna tinno kaala bandre gati enu nityanandarantha swamijigalanetrutva labhisiruvady santasada sangati

Nanda Kishor B ಹೇಳಿದರು...

ಈ ಲೇಖನಕ್ಕೆ ಪೂರಕವಾಗಿ ಇಂದಿನ ಉದಯವಾಣಿಯ ಜನತಾವಾಣಿ columnನಲ್ಲಿ ಒಂದು ಪ್ರತಿಕ್ರಿಯೆ ಬಂದಿದೆ.