14 ನವೆಂಬರ್ 2010

ನಿನ್ನೆಯೂ ಹೀಗೆ . ನಾಳೆಯೂ ಹಾಗೇ. .

ಸುತ್ತಲ ಹಸಿರು ತೋರಣದ ನಡುವಿನಿಂದ ಭಾಸ್ಕರ ಏಳುತ್ತಲಿದ್ದ , ದೂರದ ಕಾಡಿನಿಂದ ಹನಿ ಹನಿ ಬಿಂದುಗಳು ಸೇರಿಕೊಂಡು ತೊರೆಯಾಗಿ, ಹಳ್ಳವಾಗಿ,ನದಿಯಾಗಿ ಓಡೋಡುತ್ತಾ ಕಡಲು ಸೇರಲು ತವಕದಿಂದ ಸಾಗಿ ಬರುತ್ತಿತ್ತು, ಈ ಎಲ್ಲದರ ನಡುವೆ ಮೆತ್ತನೆಯ ಗಾಳಿಯು ಮನಸ್ಸಿಗೆ ಹಿತ ಕೊಡುವಂತಿತ್ತು.ಇವೆಲ್ಲವೂ ಅನುದಿನವೂ ತನ್ನ ಕಾಯಕವನ್ನು ಮಾಡೇ ಇರುತ್ತದೆ.ಇದಕ್ಕೇನು ಆಜ್ಞೆ ಬೇಕಾಗಿಲ್ಲ, ಇದಕ್ಕಾಗಿ ಯಾರನ್ನೂ ಕಾಯುವುದೂ ಇಲ್ಲ.ಆಜ್ಞೆ ಮಾಡಿದಂತೆ ಮಾಡೋದೂ ಇಲ್ಲ ,ಹಗಲಿರಲಿ ರಾತ್ರಿ ಇರಲಿ ನಿರಂತರ ಕಾಯಕ. ನಿನ್ನೆಯೂ ಹೀಗೇ ನಾಳೆಯೂ ಹಾಗೆಯೇ.

ಈಗ ನನ್ನ ಸುತ್ತ ಇದೇ ನಿನ್ನೆ . . . ನಾಳೆಗಳು.!.

ನಾನೆಂಬ ಈ ಜೀವಗಳು ಹೇಗೆ?.

ನಿನ್ನೆ . . ಮತ್ತು . . ನಾಳೆಗಳ ಮಧ್ಯೆ ವ್ಯತ್ಯಸ್ಥ ಮನಸ್ಸುಗಳು.!. ನಿನ್ನೆ ನಾನಾಗಿದ್ದರೆ ನಾಳೆ ನಾವು. ನಾಳೆ ನಾವಾಗಬೇಕಾದರೆ ನಿನ್ನೆ ನಾನು.

ಯಾಕಂದ್ರೆ,
ನಾನು ಮಾಡಿದ ಕೆಲಸ ಎಂಬ ಭಾವ ಅಲ್ಲಿ ಕಾಣಿಸುತ್ತಿದ್ದರೆ , ಅದರ ಹಿಂದೆ ಅನೇಕ “ನಾವು”ಸೇರಿಕೊಂಡಿರುತ್ತದೆ.ಆದರೆ ಜಗದ ಕಣ್ಣಿಗೆ ಅಲ್ಲಿ ಕಾಣಿಸೋದು ಮತ್ತು ಪ್ರಕಾಶಿಸೋದು “ನಾನು” ಮಾತ್ರಾ.

ಇನ್ನೊಂದು ನೋಡಿ , ನಾಳೆ “ನಾವು”ಗಳಿಂದ ಕೆಲಸವಾಗಬೇಕಾದರೆ ಇಂದು “ನಾನು” ಎಂಬೊಂದು ಭಾವವು ಕೆಲಸ ಮಾಡಿ ನಾವುಗಳ ಮುಂದೆ ದೇನ್ಯ ಭಾವದಿಂದ ಕೆಲಸ ಮಾಡುತ್ತದೆ.ನಾಳೆಯ ನಂತರ ಮತ್ತೆ ಅದೇ ನಾನು. . !.

ಇದು ನಿನ್ನೆಯಲ್ಲ ನಾಳೆಯೂ ನಡೆಯುತ್ತದೆ.

ಬೇಕಿದ್ದರೆ ಗಮನಿಸಿ,
ನಾನು ಎಂಬುದು ಎಷ್ಟಿರುತ್ತದೆಂದರೆ , ಇನ್ನೊಬ್ಬನ ಮೇಲೆ ಹೇರುವಿಕೆಯವರೆಗೆ. ಅದೊಂದು ಪ್ರಭುತ್ವವೂ ಆಗಿರುತ್ತದೆ. ಹಾಗಾಗಿ ಅಲ್ಲಿ ವಿನಂತಿಯಿಲ್ಲ ಆಜ್ಞೆ ಇರುತ್ತದೆ. ಪೀತಿ ಇರೋದಿಲ್ಲ ದರ್ಪ ಕಾಣಿಸುತ್ತದೆ.ಹಾಗಾಗಿ ಎಷ್ಟೋ ಸಾರಿ ಈ ಆಜ್ಞೆಗಳಿಗೆ ಬೆಲೆ ಸಿಗೋದಿಲ್ಲ. ಅಲ್ಲೊಂದು ಶೀತಲ ಸಮರವಿರುತ್ತದೆ. ಆದರೆ ಈ ನಾವು ಎಂಬಲ್ಲಿ ಈ ಆಜ್ಞೆಗಳು ಇರೋದಿಲ್ಲ.ಎಲ್ಲವೂ ಪ್ರೀತಿಯಿಂದ ಮಾಡಿದ ಕೆಲಸವಾಗಿರುತ್ತದೆ. ಇನ್ನು ನಿಮ್ಮಲ್ಲೊಂದು ಶಕ್ತಿ ಇದ್ದರೆ ಅದಕ್ಕೆ ಬೆಂಬಲವಿಲ್ಲ , ಅದಕ್ಕೊಂದು ವ್ಯಂಗ್ಯವಿರುತ್ತದೆ. “ನಾನು”ವಿಗೆ ಲಾಭವಿದ್ದರೆ ಮುಖಸ್ತುತಿ ಇರುತ್ತದೆ.ಇಲ್ಲದಿದ್ದರೆ ಕುಹಕವಿರುತ್ತದೆ.

ಇದ್ಯಾಕೆ ಎಂದರೆ,
ಮೊನ್ನೆ ಒಂದು ಘಟನೆಯಾಗಿತ್ತು. ಇದೇ ನಾನೆಂಬ ಭಾವದಲ್ಲಿ ಇನ್ನೊಬ್ಬರು ಹೇರಿದ ಸಂಗತಿಯದು. ಆದರೆ ಅದಕ್ಕೆ ರೆಸ್ಪಾನ್ಸ್ ಕೊಟ್ಟಿರಲಿಲ್ಲ.ಹಾಗಾಗಿ ಅಪಪ್ರಚಾರದ ಬಾಣಕ್ಕೆ ತುತ್ತಾಗಬೇಕಾಯಿತು. ಆದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.ಹೀಗಾಗಿ ಬಿಟ್ಟ ಬಾಣಗಳೆಲ್ಲವನ್ನೂ ಸಹಿಸಿಕೊಂಡಾಗ ಬಾಣ ಬೀಡೋರಿಗೂ ಸಾಕಾಯಿತು.ಸುಮ್ಮನಾದರು.ಇದೆಲ್ಲಾ ಮನಸ್ಸಿನೊಳಗೇ ಸುಳಿದಾಡುತ್ತಿತ್ತು. ಈ ಪ್ರಕೃತಿಯ ಒಳಗೇ ಇರೋ ನಾವು , ಪ್ರಕೃತಿ ಸೇರುವಾಗ ಏನೊಂದೂ ಇಲ್ಲದೆ , ಆ ನಂತರ ಎಲ್ಲವನ್ನೂ ಮೈಗೂಡಿಸಿಕೊಂಡ ನಾವುಗಳು ಮೆತ್ತಿಕೊಂಡ ಈ ದರ್ಪವಿದು. ನಾನೆಂಬ ಭಾವವನ್ನು ಈ ಪ್ರಕೃತಿ ಕೂಡಾ ಮಾಡಿದರೆ ಹೇಗೆ?. ಪ್ರಕೃತಿಯ ಮೇಲೆ ಏನೆಲ್ಲಾ ನಡೆಯೋದಿಲ್ಲಾ ಹೇಳಿ.

ಒಂದಂತೂ ಸತ್ಯ ಇತ್ತೀಚೆಗೆ ಪ್ರಕೃತಿಗೂ ಸಿಟ್ಟಾಗಿದೆ.ಮಳೆ ಬರಬಾರದ ಸಮಯಕ್ಕೆ ಮಳೆ ,ಒಮ್ಮಿಂದೊಮ್ಮೆಲೇ ಪ್ರವಾಹ, ಗಾಳಿ ಬಂದು ಇಡೀ ಸರ್ವನಾಶ , ಬೆಂಕಿಯ ಕೆನ್ನಾಲಿಗೆಗೆ ಇಡೀ ಭಸ್ಮವಾಗೋದು ಇದೆಲ್ಲಾ ಕೇಳಿದ್ದೇವೆ.ಇದೆಲ್ಲಾ ತಡೆಯೋದು “ನಾನು” ಎಂಬುದಕ್ಕೆ ಸಾಧ್ಯವಾಗಿದೆಯಾ?. ಸಾಧ್ಯವಾಗೋದೂ ಇಲ್ಲ. ಅಲ್ವಾ..?. ಇದು ಇಂದಲ್ಲ , ನಿನ್ನೆಯೂ ಹೀಗೆಯೇ ಇತ್ತು , ನಾಳೆಯೂ ಹೀಗೆಯೇ ಇರುತ್ತದೆ ಬಿಡಿ. ಯಾಕಂದ್ರೆ ನಾವು “ ನಾನು”ಗಳು. . !!.

ಕಾಮೆಂಟ್‌ಗಳಿಲ್ಲ: