16 ನವೆಂಬರ್ 2010

ಶುರುವಾಗಿದೆಯಂತೆ ಪ್ರಳಯ - 2012

ಪ್ರಳಯ ಶುರುವಾಗಿದೆಯಂತೆ . .!.

2012 ಕ್ಕೆ ಪ್ರಳಯವಾಗುತ್ತದೆ ಅಂತ ಕಳೆದ ವರ್ಷದಿಂದಲೇ ಸುದ್ದಿ ಶುರುವಾಗಿತ್ತು. ಅದಲ್ಲ ಆಗೋದಿಲ್ಲ ಅಂತ ಕೆಲವರು , ಆಗುತ್ತೆ ಅಂತ ಇನ್ನೂ ಕೆಲವರು ವಾದಿಸಿದ್ದರು. ಈ ನಡುವೆ ಇದಕ್ಕಾಗಿಯೇ ಒಂದು ಸಮ್ಮೇಳನವು ಕೂಡಾ ನಡೆಯುವುದರಲ್ಲಿತ್ತು.ಆದರೆ ಅದೇಕೋ ಏನೋ ಆ ಸಮ್ಮೇಳನ ಕೂಡಾ ಪ್ರಳಯವಾಗೋ ಮುನ್ನವೇ ಸದ್ದಿಲ್ಲದೆ ನಿಂತೇ ಹೋಯಿತು. ಆದರೆ ಈಗಂತೂ ಪ್ರಳಯ ಶುರುವಾಗಿದೆಯಂತೆ , ಹಾಗಂತ ಹಳ್ಳಿ ಜನ ಮಾತನಾಡುತ್ತಿದ್ದಾರೆ. ಯಾಕೆ ಗೊತ್ತಾ?. ಕಾರಣವಿದೆ.ಅವರು ಹೇಳುವುದರಲ್ಲೂ ಹುರುಳಿದೆ.

ಎಂತ ಮಾರಾಯ್ರೆ ಮಳೆಯೇ ನಿಲ್ಲುತ್ತಿಲ್ಲ , ಏನು ಅವಸ್ಥೆ ಈ ವರ್ಷದ್ದು , ಮಳೆ ನಿಲ್ಲದೇ ಇದ್ದರೆ ಹೇಗೆ?.ಇರುವ ಭತ್ತ ನೆಲಕ್ಕೆ ಬಿದ್ದು , ನಾಟಿ ಕೊಳೆಯುತ್ತಿದೆ , ಊಟಕ್ಕೆ ಏನು ಮಾಡೋದು? ಎಂದು ರೈತ ಕೇಳುತ್ತಿದ್ದಾನೆ.

ಅಲ್ಲಾ ಮಾರಾಯ್ರೆ , ಮಳೆ ಬರ್ತಾ ಇದೆ, ಅಡಿಕೆ ಬೀಳುತ್ತಾ ಇದೆ , ಅಂಗಳದಲ್ಲಿ ಹಾಕಿದ ಅಡಿಕೆ ಕೊಳೆಯುತ್ತಿದೆ , ಕೆಲವು ಕಡೆ ಅಂಗಳದಲ್ಲೇ ಅಡಿಕೆ ಹುಟ್ಟಿದೆ.ಏನು ಮಾಡೋದೇ ಗೊತ್ತಾಗ್ತಾ ಇಲ್ಲ , ರೋಗವೂ ಮತ್ತೆ ಶುರುವಾಗಿದೆ ಅಂತಾನೆ ಅಡಿಕೆ ಬೆಳೆಗಾರ.

ಅಲ್ಲಾ ಸ್ವಾಮಿ , ಹೀಗೆ ಮಳೆ ಬಂದ್ರೆ ಹೇಗೆ , ರಬ್ಬರ್‌ಗೆ 200 ರುಪಾಯಿ ದಾಟಿದೆ.ಆದ್ರೆ ಏನು ಟ್ಯಾಪಿಂಗ್ ಮಾಡೋದಾದ್ರೂ ಹೇಗೆ.ರೇಟಿದೆ ನಮ್ಗೆ ಮಾತ್ರಾ ಸಿಕ್ತಾ ಇಲ್ಲ ಅಂತಾನೆ ರಬ್ಬರ್ ಬೆಳೆಗಾರ.

ಅಯ್ಯೋ ಏನು ಮಳೆ. ಕೆಲಸ ಮಡೋದಾದ್ರೂ ಹೇಗೆ ಅಂತಾನೆ ಕೂಲಿ ಕಾರ್ಮಿಕ.

ಇದೆಲ್ಲಾ ಪ್ರತಿದಿನವೂ ಹಳ್ಳಿಯಲ್ಲಿ ಕೇಳೋ ಮಾತು.ಹಿಂದೆಲ್ಲಾ ದೀಪಾವಳಿಯ ಹೊತ್ತಿಗೆ ಮಳೆ ಕಡಿಮೆಯಾಗಿ ಚಳಿ ಶುರುವಾಗುವ ಹೊತ್ತು.ಅಂತಹದ್ದರಲ್ಲಿ ಇಂದು ಕೂಡಾ ಸಂಜೆ ಭಾರೀ ಮಳೆ ಬರುತ್ತಿದೆ.

ಬೆಳಗ್ಗೆ ಹಿಮ ಬಿದ್ದರೆ , ಇನ್ನು ಮಳೆ ದೂರ ಹೋಯಿತು ಅನ್ನೋ ವಾಡಿಕೆ ಹಿಂದೆಲ್ಲಾ ಇತ್ತು.ಆದರೆ ಈಗ ಆ ವಾಡಿಕೆ ಇಲ್ಲವೇ ಇಲ್ಲ.ಬೆಳಗ್ಗೆ ಹಿಮ , ಮಧ್ಯಾಹ್ನ ಸುಡುಬಿಸಿಲು , ಸಂಜೆ ಭಾರೀ ಮಳೆ.ಒಂದೇ ದಿನ 3 ಕಾಲ.ಮನುಷ್ಯನಿಗೆ ಈಗ ಅರ್ಜೆಂಟಲ್ವಾ ಹಾಗೇ ಈ ಕಾಲಗಳಿಗೂ ತುರ್ತು ಶುರುವಾಗಿದೆ. ಇನ್ನು ಈ ಕಾಲ ಮಾನ ಬದಲಾಗೋ ಹಾಗೆ ಕಾಣುತ್ತಿಲ್ಲ. ಇದು ಬದಲಾದ ಕಾಲಮಾನ.ಇನ್ನು ಬದಲಾಗೋ ಲಕ್ಷಣ ಇಲ್ಲ.ಪ್ರಕೃತಿಗೆ ಘಾಸಿಯಾಗಿದೆ.ಇನ್ನು ಪ್ರತೀ ವರ್ಷ ಹೀಗೇನೆ ಅಂತಾರೆ ಹಿರಿಯರು. ಯಾಕಂದ್ರೆ ಇದುವೇ ಒಂದು ಪ್ರಳಯ.ಕಲಿ ಕಾಲದಲ್ಲಿ ಮಾತ್ರಾ ಹೀಗಾಗುತ್ತೆ.ಈ ರೀತಿಯಾಗಿ ನಾಶವಾಗುತ್ತೆ.ಇದನ್ನ ಪ್ರಳಯ ಅಂತಾರೆ ಹಳ್ಳಿ ಜನ.

ಆಗ ಯಾರೋ ಒಬ್ಬರು ಹೇಳಿದರು , ಮುಂದಿನ ವರ್ಷ ಹೀಗೇ 10 ತಿಂಗಳು ಮಳೆ ಇರುತ್ತಂತೆ ಅಂತ. ಹೀಗೆ 10 ತಿಂಗಳು ಮಳೆ ಬಂದ್ರೆ ಕೃಷಿಯೆಲ್ಲಾ ನೀರು ಪಾಲು. ಅಡಿಕೆ ಸಿಂಗಾರವೇ ಕರಟುತ್ತೆ , ಭತ್ತದ ನಾಟಿಯೇ ಅಸಾಧ್ಯ. ಅದೇ ಒಂದು ನಾಶ. ಅದನ್ನೇ ಪ್ರಳಯ ಅಂತ ಕರೆಯೋದು ಅಲ್ವಾ?. ಈ ರೀತಿ ಮಳೆ ಬಂದ್ರೆ ಕೃಷಿ ನಾಶ. ಕೃಷಿ ನಾಶವಾದ್ರೆ ಅನ್ನ ನಾಶ. ಅನ್ನ ನಾಶವಾದ್ರೆ ?. ಸ್ಟಾಕ್ ತೆಗೆಯೋದು . . . ಇದು ಎಷ್ಟು ದಿನ. . ?. ಆಗ ಬೆಲೆ ಏರಿಕೆ ಕಾಡುತ್ತೆ. ಇದರ ನಿಯಂತ್ರಣ ಹೇಗೆ?. ಇದುವೇ ಪ್ರಳಯ ಅಂತಾರೆ ಆ ಜನ.

ಏನೇ ಇರಲಿ.ಇಂದು ಕಾಲ ಮಾನ ಬದಲಾಗಿದೆ.ಮಳೆ ಬರೋ ಕಾಲಕ್ಕೆ ಮಳೆ ಬರೋದಿಲ್ಲ.ಮಳೆ ನಿಲ್ಲೋ ಸಮಯದಲ್ಲಿ ಮಳೆ ನಿಲ್ಲೋದಿಲ್ಲ , ಚಳಿ ಕಾಲದಲ್ಲಿ ಚಳಿಯೇ ಮಾಯ.ಬಿಸಿಲು ಎಂದರೆ ಸುಡು ಬಿಸಿಲು. ಹೀಗೆ ಈ ಬದಲಾದ ಕಾಲವನ್ನು ಸಹಿಸಿಕೊಳ್ಳಬೇಕಾಗಿದೆ.ಎದುರಿಸಬೇಕಾಗಿದೆ.ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಬೇಕಾಗಿದೆ.ಅದೊಂದೇ ದಾರಿ.ಸವಾಲುಗಳಿಗೆ ಎದೆಯೊಡ್ಡಿ ನಡೆಯಲೇಬೇಕಾಗಿದೆ ಅಷ್ಟೇ.

ಪ್ರಕೃತಿಯ ಮುಂದೆ ನಾವೆಲ್ಲಾ ಏನು . .?. ತಂತ್ರಜ್ಞಾನಗಳಿಂದ ಇದನ್ನೇನಾದರೂ ತಡೆಯಲು ಸಾಧ್ಯವೇ. .?. ಏನಾದರೂ ಪ್ರಯೋಗ ಮಾಡಲು ಆದೀತೇ . .?.ಕಾಲವೇ ಉತ್ತರ ಹೇಳಬೇಕು. . . .

ಕಾಮೆಂಟ್‌ಗಳಿಲ್ಲ: