15 ನವೆಂಬರ್ 2010

ಕೆಂಪು ಸಂಕ -6

. . . . ಆದರೆ ಸೋಮಪ್ಪ ಗೌಡರು ಮನೆಯಿಂದ ಕಮಿಲಕ್ಕೆ ಬರೋವಾಗ ಸ್ವಲ್ಪ ತಡವೇ ಆಗಿತ್ತು.ಗೌಡರು ಬಂದ ತಕ್ಷಣವೇ ಅಂಗಡಿ ಬಳಿ ಸೇರಿದ್ದ ಎಲ್ಲರೂ “ಗೌಡ್ರು ಬಂದ್ರು . . ಗೌಡ್ರು ಬಂದ್ರು”ಅಂತ ಎದ್ದು ನಿಂತರು. ಹಾಗೇ ಅಂಗಡಿ ಬಳಿ ಬಂದ ಗೌಡ್ರಿಗೆ ಎದುರು ಸಿಕ್ಕವನು ವಾಡ್ಯಪ್ಪ. “ಹ್ಹಾ. . , ಏನು ವಾಡ್ಯಪ್ಪ , ಏನ್ ಸಮಾಚಾರ “, ಎಂದುಕೊಂಡು ನೇರವಾಗಿ ಅಂಗಡಿಯೊಳಗೆ ಹೋಗಿ “ಏ , ಚನ್ನ ಒಂದು ಬೀಡ ಕೊಡು”, ಎಂದು ಬೀಡ ತೆಗೆದುಕೊಂಡು ಬಾಯಿಗೆ ಹಾಕಿ ಮೆಲ್ಲುತ್ತಾ , ಬಸ್ ಸ್ಟ್ಯಾಂಡ್ ಕಡೆಗೆ ಬಂದರು.ಆಗಲೇ ಸಮಯ ರಾತ್ರಿ ಎಂಟಾಗುತ್ತಾ ಬಂದಿತ್ತು.ಕಮಿಲ ಪೇಟೆಯಲ್ಲಿ ಅಷ್ಟಮಿ ಕಾರ್ಯಕ್ರಮಕ್ಕೆ ಜನಸೇರುವಂತೆ ಜನ ಸೇರಿದ್ದರು.ಎಲ್ಲರಿಗೂ ಒಂದೇ ಕುತೂಹಲ, ಕೆಂಪು ಸಂಕದ್ದು ಏನು ಕತೆ?.

* * * * * * * * * * * * * * * * * * * * *

ಸಭೆ ಶುರುವಾಯಿತು.

ಗೌಡ್ರು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಒಂದು ಚೆಯರ್ ಹಾಕಿ ಕುಳಿತಿದ್ದರು. ಮುಂದುಗಡೆ ಎಲ್ಲರೂ ಕುತೂಹಲದಿಂದ ಕುಳಿತಿದ್ದರು. ಇನ್ನು ಸ್ವಾಗತ , ಪ್ರಸ್ತಾವನೆ ಎಲ್ಲಾ ಆಲ್ಲಿಲ್ಲ.ಊರಿನ ಮುಖಂಡರೂ , ಪ್ರಮುಖರೂ ಆದ್ದರಿಂದ ಅವರ ಮುಂದೆ ಮಾತನಾಡುವ ಧೈರ್ಯ ಇರೋರೇ ಸ್ವಲ್ಪ ಕಡಿಮೆ. ಅವರು ಹೇಳಿದ ಕೆಲಸ ಅಚ್ಚುಕಟ್ಟಾಗಿ ಮುಗಿಸೋರೇ ಅಲ್ಲಿದ್ದರು.ಹಾಗಾಗಿ ಗೌಡ್ರೇ ನೇರವಾಗಿ ಮಾತಿಗೆ ಶುರುವಿಟ್ಟರು.

“ ನಿಮಗೆಲ್ಲಾ ಗೊತ್ತಿರಬಹುದು , ನಾನು ಆಗ ಜೋಯಿಸರಲ್ಲಿಗೆ ಹೋಗಿ ಕೆಂಪುಸಂಕದ ಬಗ್ಗೆ ಕೇಳಿದ್ದೇನೆ.ಜೋಯಿಸರು ಹೇಳಿದ್ದಾರೆ , ಅಲ್ಲೊಂದು ಸಂಚಾರವಿದೆ , ಇದಕ್ಕೆ ನಿವೃತ್ತಿಯಾಗಬೇಕಂತೆ , ಅದಕ್ಕಾಗಿ ಶಾಂತಿ ಹೋಮ ಆಗಬೇಕಂತೆ, ಇಲ್ಲವಾದರೆ ಇಡೀ ಊರಿಗೆ ಅಪಾಯ ಉಂಟಂತೆ , ಈ ಶಾಂತಿ ಹೋಮ ಮಾಡಿಸದೇ ಇದ್ದರೆ , ಇನ್ನೂ ಒಂದೆರಡು ಜೀವಗಳು ಹೋಗಬಹುದೆಂದು ಜೋಯಿಸರು ಹೇಳಿದ್ದಾರೆ” ಎಂದು ಮಾತು ಮುಗಿಸುವ ಮುನ್ನವೇ , ಜಯರಾಮ ಕೇಳಿದ, “ ಅಲ್ಲ ಅದು ಯಾವುದರ ಸಂಚಾರವಂತೆ ?”.

“ಹ್ಹಾ. . , ಅದು ಸಂಚಾರ ಯಾವುದು ಅಂತ ಸ್ಪಷ್ಠ ಇಲ್ಲ , ಒಂದು ಭೂತ ಇದೆಯಂತೆ ಜೊತೆಗೆ ಒಬ್ಬ ಸತ್ತ ವ್ಯಕ್ತಿಯ ಪ್ರೇತವೂ ಇದೆಯಂತೆ ಹೀಗಾಗಿ ಸಮಸ್ಯೆಯಾಗಿದೆ ಎಂದಿದ್ದಾರೆ ಜೋಯಿಸರು” ಎಂದರು ಗೌಡ್ರು.

ಅಷ್ಟೊತ್ತಿಗೆ ಸುಂದರ ಕೇಳಿದ , “ಅಲ್ಲ ಈಗ ಈ ಹೋಮ ಮಾಡುವುದಾದರೆ ಎಲ್ಲಿ..?.”

“ಹೌದು , ಅದು ಎಲ್ಲಿ . . ಎಲ್ಲಿ ..” , ಎಂದು ಎಲ್ಲರೂ ಧ್ವನಿಗೂಡಿಸಿದರು ,

ಅದನ್ನೂ ಜೋಯಿಸರು ಹೇಳಿದ್ದಾರೆ , ಅದೇ ಕೆಂಪುಸಂಕದ ಬಳಿಯಲ್ಲಿ ಊರಿನ ಎಲ್ಲರೂ ಸೇರಿಕೊಂಡು ಮಾಡಬೇಕಂತೆ , ಇನ್ನು ಊರಿನ ಒಬ್ಬನಾದರೂ ಇದರಲ್ಲಿ ಪಾಲ್ಗೊಳ್ಳದೇ ಹೋದರೆ ಪ್ರಯೋಜನವಿಲ್ಲ ಅಂತ ಹೇಳಿದ್ದಾರೆ ಜೋಯಿಸರು ,ಅಂದ್ರು ಗೌಡ್ರು.

ಎಲ್ಲರೂ ಅವರ ಮಾತಿಗೆ ತಲೆದೂಗುತ್ತಿದ್ದರು. ಹೌದು ಆ ಶಾಂತಿ ಹೋಮ ಆಗಲೇಬೇಕು ಅಂತ ಎಲ್ಲರೂ ಮಾತನಾಡಿಕೊಂಡರು.

“ಹಾಗಿದ್ರೆ ಯಾವಾಗ ದಿನ ಇಂದೇ ನಿಶ್ಚಯ ಮಾಡುವ” ಎಂದು ಗಿರಿಯಪ್ಪ ಹೇಳಿದ.

“ಹೇಳಿ .. ನೀವೇ ಹೇಳಿ” ಅಂದ್ರು ಗೌಡ್ರು.

ತಕ್ಷಣ ವಿಜಯೇಶ ಹೇಳಿದ, “ಅಲ್ಲಾ ಅದು ಫಾರೆಸ್ಟ್ ಲ್ಯಾಂಡ್ ಅಲ್ವಾ. ?, ಅವರು ಬಿಡ್ತಾರ.? ಅಲ್ಲಿ ಹೋಮ ಮಾಡೋದಿಕ್ಕೆ?”. ,

ಗೌಡ್ರಿಗೆ ಸಿಟ್ಟು ಬಂತು , “ನಾನು ಕೇಳಿದ್ದು ಫಾರೆಸ್ಟ್‌ನವರು ಬಿಡ್ತಾರ ಅಂತ ಅಲ್ಲ , ಹೋಮಕ್ಕೆ ದಿನ ಹೇಳಿ ಅಂತ , ಅದೆಲ್ಲಾ ನಾನು ನೋಡ್ಕೊಳ್ಳುತ್ತೇನೆ ನಿಮಗೇನು ತಲೆಬಿಸಿ” ಅಂತ ಜೋರಾಗೇ ಹೇಳಿದರು.

ಸೋಮಪ್ಪ ಗೌಡರ ಈ ಮಾತಿಗೆ ಸಭೆಯಲ್ಲಿ ಸ್ವಲ್ಪ ವಿರೋಧ ಬಂತು. ವಿಜಯೇಶ ಜೊತೆಗಾರರಿಗೂ ಬಿಸಿಯಾಯಿತು.

“ಅಲ್ಲಾ ನೀವು ಹಾಗೆ ಹೇಳಿದರೆ ಹೇಗೆ ಗೌಡ್ರೆ , ನಾಳೆ ಹೋಮಕ್ಕೆ ಶುರುವ ಮಾಡಿದಾಗ ಫಾರೆಸ್ಟ್‌ನವನ್ರು ಬಂದು ಕಿರಿಕಿರಿ ಮಾಡಿದರೆ ಮತ್ತೆ ಏನು ಮಾಡುವುದು , ಅದಕ್ಕೆ ಈಗಲೇ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ” ಅಂದ ಕುಶಾಲಪ್ಪ ,

ಗೌಡ್ರ ಸಿಟ್ಟೂ ಕಡಿಮೆಯಾಯಿತು. “ ಆಯಿತು . . ಆಯಿತು. . . ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ , ನಮ್ಮ ಪಾರೆಸ್ಟ್‌ವನರು ಏನೂ ಮಾಡ್ಲಿಕ್ಕಿಲ್ಲ. ಮಾತಾಡ್ತೇನೆ” . “ಈಗ ಹೋಮಕ್ಕೆ ದಿನ ಹೇಳಿ ಅಂದ್ರು”.

ಸೀನಪ್ಪ ಎದ್ದು ನಿಂತು ಹೇಳಿದ , “ಹೆಚ್ಚು ದಿನ ಹೋಗೋದು ಬೇಡ , ಮುಂದಿನ ತಿಂಗಳ 12 ರಂದೇ ಆದರೆ ಹೇಗೆ ?. ಮರುದಿನ ಅಮವಾಸ್ಯೆ ಬೇರೆ. ಅಮವಾಸ್ಯೆ ಹತ್ತಿರವಾಗೋವಾಗ ಈ ಪ್ರೇತಗಳೆಲ್ಲಾ ಹೆಚ್ಚು ಓಡಾಡ್ತವಲ್ಲಾ , ಹಾಗಾಗಿ ಆವತ್ತೇ ಆದರೆ ಹೇಗೆ ?”.

“ಹೇಗೆ . .” ಎಂದು ಸೋಮಪ್ಪ ಗೌಡ್ರು ಸಭೆಯ ಅಭಿಪ್ರಾಯ ಕೇಳಿದ್ರು.

ಸೂರಪ್ಪ ಹೇಳಿದ , “ಅಲ್ಲ ಅಮವಾಸ್ಯೆಯಂದೇ ಆದರೆ ಹೇಗೆ?.

“ಹೇಗೆ .. ಹೇಗೆ . . ಹೇಳಿ. . ಹೇಳಿ. . ” ಎಂದು ಗೌಡ್ರು ಸಭೆಯ ಮುಂದೆ ಕೇಳಿದ್ರು.

“ಅಮವಾಸ್ಯೆಯವತ್ತು ಬೇಡ . ಮುಂದಿನ ತಿಂಗಳು 12 ರಂದೇ ಆಗಬಹುದು” ಎಂದು ಸಭೆಯ ಎಲ್ಲರೂ ಹೇಳಿದರು.
“ ಹ್ಹಾ. . ಸರಿ ಹಾಗದ್ರೆ ಮುಂದಿನ ತಿಂಗಳು 12 ರಂದು ಕೆಂಪುಸಂಕದ ಬಳಿಯಲ್ಲಿ ಶಾಂತಿ ಹೋಮ”.

“ಇನ್ನು ದಿನ ಹೆಚ್ಚಿಲ್ಲ ಇವತ್ತು ತಾರೀಕು 28 ಆಯಿತು.13 ದಿನ ಇದೆ , ಸಾಕಲ್ಲ”ಅಂದ್ರು ಗೌಡ್ರು.

“ಹೋ. . ಅದು ಸಾಕು”. ಅಂದಿತು ಸಭೆ.

“ಹೋಮದ ಖರ್ಚು ಹೇಗೆ. . ?” ಎಂದು ಕೇಳಿದ ಸೂರಪ್ಪ ,

“ಹ್ಹಾ . ಅದಕ್ಕೆ ಊರಿನ ಎಲ್ಲರಿಂದಲೂ 20 ರುಪಾಯಿ ಪಡೆದರೆ ಹೇಗೆ”. ಕೇಳಿದ್ರು ಗೌಡ್ರು.

ಅಂದಿನ ಕಾಲದಲ್ಲಿ 20 ರುಪಾಯಿಯೆಂದರೆ ಅದೇ ದೊಡ್ಡದು.

ಅದಕ್ಕೆ “ಅದು ಜಾಸ್ತಿಯಾಯಿತು. 15 ರುಪಾಯಿ ಸಾಕು” ಎಂದ ಸೂರಪ್ಪ ,

ಸಭೆಯೂ ಸೂರಪ್ಪನ ಮಾತಿಗೆ ಧ್ವನಿಗೂಡಿಸಿತು.

“ಆಯಿತು ಹಾಗಾದ್ರೆ 15 ರುಪಾಯಿ ಸಂಗ್ರಹಿಸೋಣ” ಎಂದರು ಸೋಮಪ್ಪ ಗೌಡರು.

“ಸರಿ . . , ಹೋಮ ಮಾಡುವುದಕ್ಕೆ ಪುರೋಹಿತರು ಯಾರು ಆಗಬಹುದು” ಎಂದು ಮತ್ತೆ ಗೌಡ್ರು ಪ್ರಶ್ನೆ ಮಾಡಿದರು.

ಆಗ ಅಲ್ಲಿದ್ದವರು ಯಾರೋ ಹೇಳಿದರು , “ನೋಡಿ ಇಲ್ಲಿ ಸಭೆಯ ಪಕ್ಕದಲ್ಲೇ ಇದ್ದಾರಲ್ಲ ನಮ್ಮ ಬರ್ಲಾಯಬೆಟ್ಟು ಭಟ್ಟರು , ಅವರೇ ಆಹಬಹುದು. ಊರಿನ ಪ್ರಯುಕ್ತ ಶಾಂತಿ ಹೋಮ ಅಲ್ವಾ ಅವರೂ ಒಪ್ಪಬಹುದು” ಅಂದರು.

ಆಗ ಸಭೆಯಲ್ಲಿದ್ದ ಅವರ ಮಗ ಅನಂತ ಭಟ್ಟ ಹೇಳಿದ “ಆಗಬಹುದು ಅವರಿಗೆ ಪುರುಸೊತ್ತು ಉಂಟಾ ಇಲ್ವಾ ಗೊತ್ತಿಲ್ಲ , ಅವರು ಮಡಿಕೇರಿಯಲ್ಲೂ ಪೂಜೆಗೆ ಹೋಗ್ತಾರೆ , ಕೇಳಬೇಕಷ್ಟೆ”. ಎಂದರು.

“ಹ್ಹಾ. . ಸರಿ ಕೇಳಲು ನಾನು ಬ‍ರ್ತೇನೆ” ಅಂದರು ಸೋಮಪ್ಪ ಗೌಡರು.

“ಸರಿ ಹಾಗಾದ್ರೆ ಇನ್ನೇನಾದ್ರೂ ಕೇಳಲು ಉಂಟಾ ?” ಅಂತ ಕೇಳಿದ್ರು ಗೌಡ್ರು.

“ ಇಲ್ಲ . . ಇಲ್ಲ ..” ಅಂದ್ರು ಸಭೆಯ ಮಂದಿ.

ಆಗಲೇ ಗಂಟೆ ಒಂಭತ್ತಾಗಿತ್ತು.ಮೊದಲೇ ಕೆಂಪುಸಂಕದ ಹೆದರಿಕೆ , ಹಾಗಗಿ ಎಲ್ಲರೂ ಸಭೆಯ ಮುಗಿತಾಯಕ್ಕೆ ಬಂದರು.ಸಭೆ ಮುಗಿಯಿತು ಗೌಡ್ರು ಎದ್ದರು ಎಲ್ಲರೂ ಹೊರಟರು.

ಈ ವಿಜಯೇಶ ಮತ್ತು ಆತನ ಸಂಗಡಿಗರಿಗೆ ಮಾತ್ರಾ ಸ್ವಲ್ಪ ಅಸಮಾಧಾನವಿತ್ತು.ಅವರು ಎಲ್ಲರೂ ಹೋದ ಮೇಲೆ ಚರ್ಚೆ ಮಾಡಿದರು ,
“ ಇವತ್ತು ಸಭೆ ಕರೆದದ್ದು ಯಾಕೆ ?, ಎಲ್ಲರ ಸಂಶಯ ನಿವಾರಣೆ ಮಾಡಬೇಕು ಅಂತ ತಾನೆ?.ಆದರೆ ಇವರೇನು ಹಿಟ್ಲರ್ ಹಾಗೆ ವರ್ತನೆ ಮಾಡುತ್ತಾರೆ.ಅವರು ಹೇಳಿದ್ದು ಮಾತ್ರಾ ಕೇಳಬೇಕು ಅಂತ ಅವರದ್ದು ಯೋಚನೆಯಾ ?. ಸೋಮಪ್ಪ ಗೌಡ್ರು ಮುಖಂಡರು ಆಗಿರಬಹುದು , ಆದರೆ ಅವರ ಸರ್ವಾಧಿಕಾರಿ ಧೋರಣೆಗೆ ಎಲ್ಲಾ ಬೇಡ” ಎಂದು ಮಾತನಾಡುತ್ತಿದ್ದರು.

ಅಷ್ಟೊತ್ತಿಗೆ ದೂರದೆಲ್ಲೆಲ್ಲೋ ಒಂದು ವಿಕಾರದಲ್ಲಿ ಕೂಗಿದಂತೆ ಕೇಳತೊಡಗಿತು.

“ಅದೇನೋ ಸದ್ದು. .” ಅಂತ ವಿಜಯೇಶ ಕೇಳಿದ , ಒಂದು ಕ್ಷಣ ಮೌನ.

“ಹೌದು. . ಹೌದು. .” ಎಲ್ಲಿಂದ ಅದು . . ಮತ್ತೆ ಮೌನ. .

ಅದು “ಅದೇ ಬಳ್ಪ ಕಾಡಿನಿಂದ . .” ಅಂದ ಆ ಗುಂಪಿನ ಒಬ್ಬ.

“ಅದ್ಯಾವುದಾದರೂ ಹಕ್ಕಿ ಆಗಿರಬಹುದು. . .” ಅಂತ ಮತ್ತೆ ಟೀಕೆ ಮುಂದುವರಿಸಿದರು.

ವಿಕಾರ ಸದ್ದು ಮತ್ತೆ ಹತ್ತಿರ ಹತ್ತಿರವಾದಂತೆ ಕೇಳಿಸಿತು. ಗುಂಪಿನಲ್ಲಿದ್ದವರಿಗೂ ಸ್ವಲ್ಪ ತಳಮಳ ಶುರುವಾಯಿತು.

“ಸರಿ. . ನಾಳೆ ಮಾತಾಡೋಣ. .” ಎಂದು ಮಾತಾನಾಡುತ್ತಾ ಮುಂದೆ ಹೊರಟರು.

ಆಗಲೇ ಈ ಶಾಂತಿ ಹೋಮದ ವಿರುದ್ದ ಒಂದು ಅಪಸ್ವರ ಕಾಣಿಸಿಕೊಂಡಿತು.

* ** * * * * * * * * * * * * * * * * * * * * *

ಕಾಮೆಂಟ್‌ಗಳಿಲ್ಲ: