22 ಅಕ್ಟೋಬರ್ 2010

ಕೆಂಪು ಸಂಕ - 5

. . . . . . . . . ಒಂದು ಕ್ಷಣ ಯೋಚಿಸಿದ ಸೋಮಪ್ಪ ಗೌಡರು , ತನ್ನ ನೆನಪಿನ ಬುತ್ತಿಯನ್ನು ಬಿಚ್ಚ ತೊಡಗಿದರು. ನೋಡಿ ಜೋಯಿಸರೇ , ನನಗೆ ಗೊತ್ತಿದ್ದ ಪ್ರಕಾರ ಅಂತ ಮಾತಿಗೆ ಶುರುವಿಟ್ಟರು , ಆವತ್ತು ಸುಮಾರು ಇಪ್ಪತ್ತು ವರ್ಷದ ಹಿಂದೆ ಗುತ್ತಿಗಾರಿನಿಂದ ಬಳ್ಪಕ್ಕೆ ಟಿಂಬರ್ ರಸ್ತೆ ಅಂತ ಇತ್ತು. ಊರು ಬೆಳೆಯುತ್ತಾ ಸಾಗಿದಾಗ ಈ ರಸ್ತೆಯೇ ಊರ ಜನರಿಗೆ ರಸ್ತೆಯಾಯಿತು. ಆ ನಂತ್ರ ಇದೂ ಟಾರು ರಸ್ತೆ ಆಗಬೇಕು ಎಂದೆನಿಸಿತು , ಹಾಗಾಗಿ ಊರ ಜನರ ಪ್ರಯತ್ನದಿಂದಾಗಿ ಟಿಂಬರು ರಸ್ತೆಯು ಟಾರು ರಸ್ತಯಾಗುವ ಎಲ್ಲಾ ಹಂತಗಳಿಗೂ ಬಂತು. ಆಗ ಬಳ್ಪದ ಈ ಕಾಡಿನಲ್ಲಿ ಇರುವ ಚಿಕ್ಕ ಚಿಕ್ಕ ಹೊಳೆಗಳಿಗೆ ಸೇತುವೆ ಕಟ್ಟಲಾಗಿತ್ತು. ಆದ್ರೆ ಜೋಯಿಸ್ರೇ . . . . ಎಂದು ಸೋಮಪ್ಪ ಗೌಡರು ಮಾತು ನಿಲ್ಲಿಸಿದರು. ಹ್ಹೂಂ . . ಎಂದ ಜೋಯಿಸರು, ಹ್ಹಾ. . ಹ್ಹಾ. . ಹೇಳಿ ಅಂತದ್ರು , ಮತ್ತೆ ಮುಂದುವರಿಸಿದ ಸೋಮಪ್ಪ ಗೌಡರು , ಈ ಕಾಡಲ್ಲಿ ಸೇತುವೆ ಕಟ್ಟುವ ವೇಳೆ ಅಲ್ಲೊಂದು ಕಡೆ ಒಬ್ಬ ಕೆಲಸದವನು ಸಂಕದಿಂದ ಬಿದ್ದು ಸತ್ತನಂತೆ , ಆಗ ಅದೇನೂ ಸೌಕರ್ಯ ಇದ್ದಿರಲಿಲ್ಲ ಅಲ್ವಾ , ಹಾಗಾಗಿ ಆತ ಅಲ್ಲೇ ಸತ್ತನಂತೆ.ಇದರಿಂದಾಗಿ ಕೆಲ ದಿನ ಸೇತುವೆ ಕೆಲಸ ನಿಂತಿತು. ಆ ನಂತ್ರ ಮತ್ತೆ ಅದೇ ಸೇತುವೆ ನಿರ್ಮಾಣವಾಯಿತಂತೆ.ಆಗ ಯಾವನೋ ಒಬ್ಬ ಮೇಸ್ತ್ರಿಗೆ ಅನ್ನಿಸಿತಂತೆ ಇದಕ್ಕೊಂದು ಕೆಂಪು ಬಣ್ಣದ ಬಳಿದ್ರೆ ಹೇಗೆ. ಹೇಗೂ ಇಲ್ಲೊಬ್ಬ ಸತ್ತಿದಾನೆ ಅಂತ ಇದಕ್ಕೆ ಕೆಂಪು ಬಣ್ಣ ಕೊಟ್ರು. ಆ ಕಾಡಿನ ನಡುವೆ ಅದೊಂದೇ ಕೆಂಪು ಬಣ್ಣದ ಸೇತುವೆ. ಇಷ್ಟು ಹೇಳುವಾಗ ಸೋಮಪ್ಪ ಗೌಡರ ಬಾಯಿ ಒಣಗಿತು. ಒಂದು ಒಣ ಕೆಮ್ಮು ಹಾಕಿ ಮತ್ತೆ ಮಾತು ಮುಂದುವರಿಸಿ ಜೋಯಿಸ್ರೇ , ಈ ಸೇತುವೆಗೆ ಕೆಂಪು ಬಣ್ಣ ಬಳಿದ ಕಾರಣದಿಂದಾಗಿ ಜನ ಇದನ್ನು ಕೆಂಪು ಸಂಕ ಅಂತ ಕರೀತಾರೆ. ಸಂಕ ಅಂದ್ರೆ ನಮ್ಮ ಭಾಷೆಯಲ್ಲಿ ಸೇತುವೆ ಅಂತಲ್ವಾ ?. ಹಾಗಾಗಿ ಇದೊಂದು ಕೆಂಪು ಸಂಕ ಅಂತ ಜನ ಕರೆದ್ರು. ನೋಡಿ ಜೋಯಿಸ್ರೇ “ಬೇರೆ ಎಲ್ಲಾದ್ರೂ ಕೆಂಪು ಬಣ್ಣ ಬಳಿದ ಸಂಕ ಇದೆಯಾ” ?. “ ಅದು ಇಲ್ಲ” ಅಂದರು ಜೋಯಿಸರು , ಕವಡೆಯ ಕಡೆ ನೋಡಿದರು. ಬಳಿಕ ಹ್ಹೂಂ . . . ಎಂದರು.

ಒಂದು ಕ್ಷಣ ಮೌನ ಇತ್ತು ಆಚಳ್ಳಿಯ ಮನೆಯಲ್ಲಿ. ಆ ಮೌನದ ನಡುವಿನಲ್ಲಿ ಶಿವರಾಮ ಜೋಯಿಸರು ಶಾಂತವಾಗಿ ಹೇಳಿದರು , ಇದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲ. ಆದರೆ ಒಂದು ಮಾಡಬಹುದು ಊರ ಜನರೆಲ್ಲಾ ಸೇರಿ ಒಂದು ಶಾಂತಿ ಹೋಮವನ್ನು ಆ ಸಂಕದ ಪಕ್ಕದಲ್ಲಿ ಮಾಡಿದರೆ ಒಳ್ಳೆಯದು. ಇದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾದ್ದನ್ನು ತಪ್ಪಿಸಬಹುದು.ಇಲ್ಲಾಂದ್ರೆ ಇನ್ನೂ ಒಂದೆರಡು ಜೀವಗಳು , ಅಥವಾ ದೇಹಗಳು ಅದೇ ಕಾಡಿನಲ್ಲಿ ಅಥವಾ ಅದೇ ಸಂಕದ ಆಸುಪಾಸಿನಲ್ಲಿ ಬಿದ್ದರೂ ಬೀಳಬಹುದು ಅಂತ ಹೇಳಿದರು.

ಜೋಯಿಸರೇ , ಹಾಗಾದ್ರೆ ಅದು ಯಾವುದರ ಕಾಟ ?, ಎಂದು ಸೋಮಪ್ಪ ಗೌಡರು ಮೆಲ್ಲನೆ ಕೇಳಿದರು. ನೋಡಿ ಗೌಡ್ರೆ , ಅದು ಯಾವುದು ಅಂತ ಸರಿಯಾಗಿ ಹೇಳುವುದು ಕಷ್ಠ. ಯಾಕೆಂದ್ರೆ ಅಲ್ಲಿ ಏನೋ ಒಂದು ಸಂಚಾರ ಇದೆ , ಅದರ ಜೊತೆಗೆ ಭೂತವೂ ಸೇರಿಕೊಂಡಿದೆ , ಒಟ್ಟಿಗೆ ಆ ಸತ್ತ ವ್ಯಕ್ತಿಯ ಪ್ರೇತವೂ ಅಲ್ಲಿದೆ. ಇನ್ನು ವನದೇವಿಯ ಪ್ರದೇಶ ಬೇರೆ. ಹಾಗಾಗಿ ಇದರಿಂದೆಲ್ಲಾ ಒಟ್ಟಾಗಿ ಕಾಟ ಶುರುವಾಗಿದೆ. ಅಂತಂದ್ರು ಜೋಯಿಸರು. ಇದಕ್ಕೆಲ್ಲಾ ಮುಕ್ತಿ ಪಡೀಬೇಕಾದ್ರೆ ಸ್ವಲ್ಪ ಕಷ್ಠ ಅಂತ ಅನಿಸುತ್ತೆ. ಅದಕ್ಕಾಗಿ ಒಂದು ಹೋಮ ಮಾಡಿ ಅಷ್ಟೆ. ಆದ್ರೆ ಒಂದು ಸಂಗತಿ ಊರ ಜನರೆಲ್ಲಾ ಸೇರಬೆಕು.ಒಬ್ಬೊಬ್ಬನೇ ಮಾಡಿದರೆ ಪ್ರಯೋಜನ ಇಲ್ಲ ಅಂತನೂ ಹೇಳಿದ್ರು.

ಸರಿ, ಅಂತ ಸೋಮಪ್ಪ ಗೌಡರು ಶಿವರಾಮ ಜೋಯಿಸರಿಗೆ ಒಂದಿಷ್ಟು ಕಾಣಿಕೆ ಹಾಕಿ , ಬರ್ತೇನೆ ಅಂದರು. ಆಗ ಜೋಯಿಸರ ಪತ್ನಿ , ಹೋ . ಗೌಡ್ರೇ , ಬನ್ನಿ ಅಪರೂಪ. ಚಾ ಕುಡಿಯಿರಿ ಅಂದ್ರು. ಆಯ್ತು ಅಂತ ಚಾ ಕುಡಿದ ಸೋಮಪ್ಪ ಗೌಡರು , ಅಲ್ಲಿಂದ ಹೊರಡುವಾಗ ಮದ್ಯಾಹ್ನ ಆಗಿತ್ತು. ಊಟ ಮಾಡಿ ಹೋಗಿ ಗೌಡ್ರೆ ಅಂದಾಗ, ಬೇಡ ಅಂದ ಸೋಮಪ್ಪ ಬೇಗನೆ ಕಮಿಲದ ಕಡೆ ಹೆಜ್ಜೆ ಹಾಕಿದ್ರು.ಇಂದು ಸಂಜೆಯೇ ಈ ವಿಚಾರವನ್ನು ಊರ ಜನರಿಗೆ ಹೇಳಬೇಕು ಎಂದು ನಿರ್ಧಾರ ಮಾಡಿಯೇ ಬಂದರು ಅವರು.ಕಮಿಲಕ್ಕೆ ಬಂದವರೇ ಸಂಜೆ ಎಲ್ಲರೂ ಅಂಗಡಿ ಬಳಿ ಬರಬೇಕು ಎಂದು ಕಮಿಲದಲ್ಲಿ ಹೇಳಿದರು.ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ಸುದ್ದಿ ಹೋಯಿತು.ಇಂದು ಸಂಜೆ ಅಂಗಡಿ ಬಳಿ ಬರಬೇಕಂತೆ , ಗೌಡ್ರು ಜೋಯಿಸರ ಬಳಿಗೆ ಹೋಗಿದ್ದಾರೆ , ಕೆಂಪುಸಂಕದ ಬಗ್ಗೆ ಏನೋ ಕೇಳಿದ್ದಾರಂತೆ ಎಂದೆಲ್ಲಾ ಸುದ್ದಿ ಹರಡಿತು. ಸಂಜೆ ಐದು ಗಂಟೆ ಆಯಿತು.ಜನ ಒಬ್ಬೊಬ್ಬರೇ ಕಮಿಲದ ಕಡೆ ಹೆಜ್ಜೆ ಹಾಕಿದರು.ಅಂಗಡಿ ಬಳಿ ಆರು ಗಂಟೆಯ ಹೊತ್ತಿಗೆ ಸುಮಾರು 300 ಜನ ಸೇರಿದ್ದರು. ಗೌಡರು ಮನೆಯಿಂದ ಬರುವಾಗ ಸ್ವಲ್ಪ ತಡವೇ ಆಗಿತ್ತು. ಅಂಗಡಿ ಬಳಿಗೆ ಬಂದ ಎಲ್ಲರೂ ಮತ್ತೆ ಅದೇ ಕೆಂಪುಸಂಕದ ಬಗ್ಗೆಯೇ ಮಾತನಾಡುತ್ತಿದ್ದರು.

ಕಾಮೆಂಟ್‌ಗಳಿಲ್ಲ: