12 ಅಕ್ಟೋಬರ್ 2010

ಕೆಂಪು ಸಂಕ - 4

. . . ಹೀಗೇ ಕೆಂಪುಸಂಕದ ಬಗ್ಗೆ ಕತೆಗಳು ಹುಟ್ಟಿಕೊಂಡವು.ಎಲ್ಲವು ಕೂಡಾ ಭಯ ಹುಟ್ಟಿಸುವ ಕತೆಗಳೇ ಆಗಿದ್ದವು.ಆದರೆ ಅದೆಲ್ಲವೂ ಕತೆ ಅನ್ನಲೂ ಆಗುತ್ತಿಲ್ಲ.ಯಾಕೆಂದ್ರೆ ಎಲ್ಲವೂ ಕೆಂಪುಸಂಕದ ಆಸುಪಾಸಿನಲ್ಲಿ ಒಬ್ಬೊಬ್ಬರಿಗೆ ಆದ ಅನುಭವಗಳೇ ಆಗಿದ್ದವು. ಯಾರೊಬ್ಬರೂ ಕೂಡಾ ಸತ್ಯ ಏನು ಎಂಬುದರ ಬಗ್ಗೆ ಚರ್ಚಿಸುತ್ತಿರಲಿಲ್ಲ.ನಿನ್ನೆ ನಡೆದ ಸಂಗತಿಗಳ ಬಗ್ಗೆಯೇ ಕಮಿಲದ ಪೇಟೆಯಾದ್ಯಂತ ಮಾತನಾಡುತ್ತಲೇ ಇದ್ದರು. ನಾಳೆ ಏನು? ಎಂಬುದರ ಬಗ್ಗೆ ಅಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ ಇತ್ತು. ಕಮಿಲದಿಂದ ಬಳ್ಪಕ್ಕೆ ಹೋಗದೇ ಇರಲಾಗುವುದಿಲ್ಲ.ಏನಾದರೂ ಮನೆ ಸಾಮಾನುಗಳು , ದಿನಸಿಗಳು ಬೇಕಂದ್ರೆ ಬಳ್ಪಕ್ಕೆ ಹೋಗಲೇ ಬೇಕು. ಆಗ ಬಳ್ಪದ ಕಾಮತ್ತರ ಅಂಗಡಿಯೇ ದೊಡ್ಡ ಅಂಗಡಿ. ಹಾಗಾಗಿ ಬಳ್ಪ ಒಂದಿಲ್ಲೊಂದು ಕಾರಣಕ್ಕೆ ಅನಿವಾರ್ಯವಾಗಿತ್ತು ಕಮಿಲದ ಜನಕ್ಕೆ.ಇನ್ನು ಪುತ್ತೂರು , ಸುಬ್ರಹ್ಮಣ್ಯಕ್ಕೆ ಹೋಗಬೇಕಾದರೂ ಬಳ್ಪ ಕ್ರಾಸ್‌ವರೆಗೆ ಕಾಲ್ನಡಿಗೆ ಮಾಡಲೂ ಬೇಕಿತ್ತು. ಬಸ್ಸು , ಜೀಪುಗಳು ಇಲ್ಲವೇ ಇಲ್ಲ. ಹೀಗಾಗಿ ಕಮಿಲದ ಜನರಿಗೆ ಕೆಂಪುಸಂಕವು ಒಂದು ದೊಡ್ಡ ಸಮಸ್ಯೆಯಾಗಿತ್ತು.

* * * * * * * * * * * * * * * * * * * * * * * *

ಎಂದಿನಂತೆ ಅಂದು ಸಂಜೆ ಕೂಡಾ ಎಲ್ಲರೂ ಕಮಿಲದ ಅಂಗಡಿ ಬಳಿ ಕುಳಿತು ಇದೇ ಕೆಂಪುಸಂಕದ ಬಗ್ಗೆ ಮಾತನಾಡುತ್ತಾ ಇದ್ದರು.ಆಗ ಊರ ಗೌಡ ಸೋಮಪ್ಪ ಸೇರಿದಂತೆ ಇತರ ಕೆಲವರೂ ಅಲ್ಲಿಗೆ ಬಂದರು. ಎಲ್ಲರ ಮುಖದಲ್ಲಿ ಒಂದೇ ಚಿಂತೆ ಮುಂದೇನು ಅಂತ.?. ಅದೇ ಚಿಂತೆಯಲ್ಲಿ ಎಲ್ಲರೂ ಮೌನವಾಗಿದ್ದ ವೇಳೆ ಕಮಿಲದ ಊರ ಗೌಡ ಸೋಮಪ್ಪ ಹೇಳಿದ್ರು, ಹೀಗೆ ಕೂತರೆ ಆಗದು ಆವತ್ತು ಭಟ್ಟರಿಗೆ , ನಿನ್ನೆ ವೆಂಕಪ್ಪನಿಗೆ ಇವತ್ತು ಶಶಿಧರನಿಗೆ ನಾಳೆ ಇನ್ನೊಬ್ಬನಿಗೆ ಹೀಗೆ ಆದ್ರೆ ಹೇಗೆ ?, ಅದು ಏನಂತ ಗೊತ್ತಾಗಬೇಕು.ಹಾಗಾಗಿ ಒಂದು ನಿರ್ಧಾರ್‍ಕಕೆ ಬರೋಣ , ನಾಳೆ ನಾನು ಆಚಳ್ಳಿಗೆ ಹೋಗ್ತೇನೆ , ಎಲ್ಲರೂ ಆಯ್ತು , ನಾಳೆ ಸಂಜೆ ಮಾತನಾಡೋಣ ಎಂದು ಎಲ್ಲರೂ ಮನೆಗೆ ಹೋದರು.ಮರುದಿನ ಬೆಳಗ್ಗೆ ಸೋಮಪ್ಪ ಗೌಡರು ಆಚಳ್ಳಿ ಜೋಯಿಸರಲ್ಲಿಗೆ ಪ್ರಶ್ನೆ ಕೇಳಲು ಹೋದರು..ಏನಾದರೂ ಪ್ರಯೋಜ ಆದೀತಾ ಅಂತ ಅವರ ಭಾವನೆಯಾಗಿತ್ತು.

* * * * * * * * * * * * * * * * * * *

ಸೋಮಣ್ಣ ಗೌಡರು ಬೆಳಗ್ಗೆಯೇ ಮನೆಯಿಂದ ಆಚಳ್ಳಿ ಕಡೆಗೆ ಹೊರಟರು. ಕಮಿಲಕ್ಕೆ ಬಂದು ದೇವಸ್ಯ ಮಾರ್ಗವಾಗಿ ಆಚಳ್ಳಿಗೆ ಬಂದಾಗ ಶಿವರಾಮ ಜೋಯಿಸರು ಆಗ ತಾನೆ ಸ್ನಾನ ಮಾಡಿ ಕಾಫಿ ಕುಡಿದು ಹೊರ ಬಂದಿದ್ದರು. ಬೇರೆ ಊರಿನ ಒಂದೆರಡು ಜನ ಇದ್ದರು. ಅವರನ್ನೆಲ್ಲಾ ಬಿಟ್ಟ ನಂತರ , ಏನು ಸೋಮಪ್ಪ ಗೌಡರೇ ಬನ್ನಿ, ಅಂತ ಒಳ ಕರೆದ್ರು. ಏನಿಲ್ಲ , ಜೋಯಿಸರೇ ಒಂದು ಸಮಸ್ಯೆ ಇದೆ ಅಂತ ಹೇಳಿದರು ಸೋಮಪ್ಪ. ಬನ್ನಿ ಕುಳಿತುಕೊಳ್ಳಿ , ಅಂತ ತಮ್ಮ ಮುಂದೆ ಕುಳಿತುಕೊಳ್ಳಿಸಿ , ಸಮಸ್ಯೆ ಹೇಳಿ ಅಂತಂದ್ರು. ಅಲ್ಲಾ ಜೋಯಿಸರೇ ನಿಮಗೂ ಗೊತ್ತಿರಬಹುದು , ಕಮಿಲದಿಂದ ಮುಂದೆ ಆ ಕೆಂಪುಸಂಕ ಅಂತ ಇದೆಯಲ್ಲಾ ಅಲ್ಲಿ ಕೆಲವೊಂದು ಘಟನೆಗಳು ಆಗಿವೆ, ಅದು ಏನಂತ ಹೇಳಲು ಆಗೋದಿಲ್ಲ , ವಿಚಿತ್ರವಾದ ಘಟನೆಗಳು ಅಲ್ಲಿ ನಡೆಯುತ್ತದೆ , ಹಾಗಾಗಿ ಜನ ಬಳ್ಪದ ಕಡೆಗೆ ಹೋಗಲು ಹೆದರ್ತಾರೆ , ಅತ್ತ ಕಡೆ ಹೋಗದಿದ್ರೆ ಹೇಗೆ ? ನಮ್ ಜನರಿಗೆ ಏನಾದ್ರು ಬೇಕಾದ್ರೆ ಆ ಕಡೆಯೇ ಹೋಗ್ಬೇಕಲ್ಲಾ ?. ಈಗ ಅದಕ್ಕೇನು ಪರಿಹಾರ , ಏನದು . .?.


ಹ್ಹೂಂ. . . , ಅಂದ್ರು ಜೋಯಿಸರು.ನೋಡೋಣ , ಅದು ನನ್ನ ಪ್ರಕಾರ ಏನಾದ್ರು ಕಾಡು ಪ್ರಾಣಿ ಇರಬಹುದು. ಅಂತ ಮೇಲ್ನೋಟಕ್ಕೆ ಹೇಳಿದ್ರು. ಆದರೂ ಗೌಡರಿಗೆ ಅದು ಸಮಾಧಾನ ಆಗಲಿಲ್ಲ.ಸರಿ ಎಂದು ಕವಡೆ ತಿರುವಿದರು. ಅದೇನೋ ಮಂತ್ರ ಹೇಳುತ್ತಾ ಇನ್ನೊಮ್ಮೆ ಕವಡೆ ತಿರುವಿ ಒಂದಷ್ಟು ಕವಡೆ ತೆಗೆದು ಲೆಕ್ಕ ಹಾಕಿದರು. ಏಳನೇ ಮನೆಯಲ್ಲಿ ಶನಿ , ಎಂಟರಲ್ಲಿ ಶುಕ್ರ , ಐದರಲ್ಲಿ ಮಾಂದಿ . . . ಹೀಗೆ ಹೇಳುತ್ತಾ ಹೋದರು. ಗೌಡರಿಗೆ ಆತಂಕ ಹೆಚ್ಚಾಯಿತು. ಶನಿಯಿಂದ ದೋಷ . . . ಮಾಂದಿ ವಕ್ರ ದೃಷ್ಠಿ . . ಎಂದು ಅವರಷ್ಟಕ್ಕೇ ಹೇಳಿದರು. ಗೌಡರು ಮತ್ತೆ ಆತಂಕದಿಂದ ಜೋಯಿಸರ ಮುಖ ನೋಡುತ್ತಿದ್ದರು. ಹೂಂ . . ಹೂಂ ಹೂಂ. . ಎಂದ ಜೋಯಿಸರು, ಇಲ್ಲಾ . . ಏನೂ ಅತಹದ್ದೊಂದು ಕಾಣುತ್ತಿಲ್ಲ , ಆ. .ಆದ್ರೆ . . ಎಂದು ಮಾತು ನಿಲ್ಲಿಸಿ ಕವಡೆಯತ್ತ ನೋಡಿದ್ರು , ಗೌಡರ ಮುಖ ಬೆವರಿತು. ಹಾಗೆ ಹಣೆವರೆಸಿಕೊಂಡರು. ಸ್ವಲ್ಪ ಮೌನದ ನಂತರ ಜೋಯಿಸರು ಹೇಳಿದ್ರು , ಅಲ್ಲಿ ಒಂದು ಸಂಚಾರ ಇರುವುದು ಕಾಣುತ್ತದೆ , ಆ ಸಂಚಾರದ ಹೊತ್ತಲ್ಲಿ ಹೋಗುವಾಗ ಈ ರೀತಿಯ ಅನುಭವ ಆಗಬಹುದು , ಇದು ಹೀಗೇ ಇದ್ರೆ ಒಂದೆರಡು ಜೀವ ಹೋದೀತು , ಇಲ್ಲಾಂದ್ರೆ ಅಲ್ಲಿ ದೇಹವೊಂದು ಕಂಡೀತು. ಅದೂ ಅಲ್ಲದಿದ್ದರೆ ಮತ್ತೆ ಒಂದೆರಡು ದೇಹ ಅಲ್ಲಿ ಸಿಗ್ಬಹುದು ಅಂತಂದ್ರು ಅವರು. ಅದಕ್ಕಾಗಿ ಆ ಸಂಚಾರವನ್ನು ಬಂಧಿಸಬೇಕು.ಅದೊಂದು ಕ್ಷುದ್ರ ಶಕ್ತಿ ಅಂತ ಹೇಳಿದ್ರು ಜೋಯಿಸರು.

ಅಲ್ಲಾ ಗೌಡ್ರೇ , ಆ ಸಂಕ ಹೇಗೆ ಮಾಡಿದ್ದಾರೆ , ಯಾವಾಗ ಕಟ್ಟಿದ್ರು ಅನ್ನೋದು ನಿಮಗೆ ಗೊತ್ತಿದೆಯಾ ಎಂಬ ಪ್ರಶ್ನೆ ಹಾಕಿದ್ರು, ಜೋಯಿಸರು.

ಗೊತ್ತಿದೆ ಎಂದು ವಿವರಿಸಲು ತೊಡಗಿದರು ಸೋಮಪ್ಪ ಗೌಡರು. . . . .

* * * * * * * * * * * * * * * * * * * * * * * * * * *

ಕಾಮೆಂಟ್‌ಗಳಿಲ್ಲ: