22 ಡಿಸೆಂಬರ್ 2008
ನಾನು ಮಾಡಿದ ಒಳ್ಳೆಯ ಕೆಲಸಗಳು...
ಇದೇನು, ನಾವು ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದಿದೆಯಾ?. ಅವರವರ ಮಟ್ಟಿಗೆ ಅವರು ಮಾಡುವ ಎಲ್ಲಾ ಕೆಲಸಗಳು ಒಳ್ಳೆಯ ಕೆಲಸಗಳೇ.ಇನ್ನೊಬ್ಬ ಮಾಡುವ ಕೆಲಸಗಳು ಮಾತ್ರಾ ಕೆಟ್ಟ ಕೆಲಸಗಳಾಗಿರುತ್ತದೆ.ನಮ್ಮ ದೃಷ್ಠಿ ಹಾಗಿರುತ್ತದೆ, ನಮ್ಮ ಕಣ್ಣಿನ ನೇರಕ್ಕೆ ಮಾತ್ರಾ ಯೋಚಿಸುವುದು.ಅದೇ ಸರಿ ಎನ್ನುವುದು ನಮ್ಮ ಹಕ್ಕು ಅಂತ ಭಾವಿಸಿದ್ದೇವೆ. ಸೂಕ್ಷವಾಗಿ ನಮ್ಮ ಅಂತರ್ಯವನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ. ಆತ ಹೇಳುವುದನ್ನು ಕೇಳುವುದಿಲ. ನಮ್ಮ ನಿರ್ಧಾರವನ್ನು ಅದಕ್ಕೂ ಮೊದಲೇ ಪ್ರಕಟಿಸಿಯಾಗಿರುತ್ತದೆ.ಹಾಗಾಗಿ ಅಲ್ಲಿ , ಆತನ ಕೆಲಸಗಳೆಲ್ಲವೂ ಕೆಟ್ಟದ್ದಾಗಿಯೇ ಕಾಣುತ್ತದೆ. ಅಥವಾ ನನ್ನ ನೇರಕ್ಕೆ ಆತ ಇಲ್ಲ ಎಂದಾದಲ್ಲಿ ಆತನ ಬರಹ , ಆತನ ಕೆಲಸ ಎಲ್ಲವೂ ತಪ್ಪು.ಅದೊಂದು ಪೂರ್ವಾಗ್ರಹ ಪೀಡಿತವಾದ ಯೋಚನೆ.
ಇಷ್ಟಕ್ಕೂ ಈ ಒಳ್ಳೆಯ ಕೆಲಸಗಳು ನನಗೆ ನೆನಪಾದದ್ದು ಯಾಕೆ ಗೊತ್ತಾ?.ಮೊನ್ನೆ ಮನೆಯಲ್ಲಿ ಯಾವುದೋ ಪುಸ್ತಕವನ್ನು ಹುಡುಕಾಡುತ್ತಿದ್ದೆ. ಅದು ನನ್ನ ಮೆಚ್ಚಿನ ಪುಸ್ತವಾಗಿತ್ತು. ಆಗ ನನಗೆ ಇನ್ನೊಂದು ನನ್ನ ಕೈಬರಹದ ಪುಸ್ತಕ ಸಿಕ್ಕಿತ್ತು. ಅದು ನಾನು ೪ ನೇ ತರಗತಿಯಲ್ಲಿ ಬರೆಯುತ್ತಿದ್ದ ಹೋಂವರ್ಕ್ ಪುಸ್ತಕ ಅದರ ಮೊದಲ ಪುಟದಲ್ಲಿ ಬರೆದಿತ್ತು . ನಾನು ಮಾಡಿದ ಒಳ್ಳೆಯ ಕೆಲಸಗಳು. ಇದರ ಶೀರ್ಷಿಕೆ ನೋಡಿದಾಗ ನನಗೆ ಆಸಕ್ತಿ ಹೆಚ್ಚಿತು. ನನ್ನ ನೆನಪುಗಳೆಲ್ಲವೂ ಬಾಲ್ಯದ ಕಡೆಗೆ ಓಡಿತು. ಆಗ ನಮಗೆ ಪ್ರತಿದಿನ ಹೋಂವರ್ಕ್ ನೊಂದಿಗೆ ಆ ದಿನ ಮಾಡಿದ ಒಂದು ಒಳ್ಳೆಯ ಕೆಲಸದ ಬಗ್ಗೆ ಆ ಪುಸ್ತಕದಲ್ಲಿ ಬರೆಯಬೇಕಾಗಿತ್ತು. ಹಾಗೆ ದಾಖಲಿಸಿದ್ದ ಪುಸ್ತಕ ಅದು. ಅಬ್ಬಾ ೩೬೦ ಒಳ್ಳೆಯ ಕೆಲಸ ನಾನು ಮಾಡಿದ್ದೆ... ನಾನು ಮಾತ್ರವಲ್ಲ ನನ್ನ ಅಂದಿನ ಎಲ್ಲಾ ಮಿತ್ರರು ಮಾಡಿದ್ದಾರೆ. ಬಹುಶ: ಈಗ ಆ ಒಳ್ಳೆಯ ಕೆಲಸಗಳನ್ನು ದಾಖಲಿಸುವ ಪರಿಪಾಠವಿಲ್ಲ. ಆಗಲೇ ಸುಮ್ಮ ಸುಮ್ಮನೆ ಒಳ್ಳೆಯ ಕೆಲಸ ನಾವು ಮಾಡುತ್ತಿದ್ದೆವು..ಈಗ ಕತೆ ಕೇಳುವುದೇ ಬೇಡ. ಶ್ರೀರಾಮಚಂದ್ರ ಮಾಡದ್ದನ್ನು ಮಾಡುತ್ತಾರೆ. ಅದಿರಲಿ ನಾವು ಪ್ರತಿದಿನ ಬರೆಯುತ್ತಿದ್ದ ಒಳ್ಳೆಯ ಕೆಲಸದ ಒಂದು ಸ್ಯಾಂಪಲ್ ಹೇಳುತ್ತೇನೆ . ನಾನು ಇಂದು ರಸ್ತೆಯಲ್ಲಿದ್ದ ಮುಳ್ಳನ್ನು ಹೆಕ್ಕಿದ್ದೇನೆ , ನಾನು ಇಂದು ಮನೆಯಲ್ಲಿ ಕಸ ಗುಡಿಸಿದ್ದೇನೆ , ನಾನು ಇಂದು ನೀರು ತಂದಿದ್ದೇನೆ... ನಾನು ಇಂದು ಪಾಠ ಓದಿದ್ದೇನೆ ...... ಹೀಗೆ ಮುಂದುವರಿಯುತ್ತದೆ. ಆಗ ಅದುವೇ ದೊಡ್ದ ಕೆಲಸ ಅಂತ ನಮ್ಮ ತಲೆಯಲ್ಲಿ. ಆದರೆ ಅದನ್ನೂ ಮಾಡುತ್ತಿದ್ದೆವಾ ಅನ್ನುವುದು ಮತ್ತಿನ ಪ್ರಶ್ನೆ. ಆದರೂ ಪುಸ್ತಕದಲ್ಲಿ ಒಳ್ಳೆಯ ಕೆಲಸವಾಗುತ್ತಲೇ ಇತ್ತು. ಇಂತಹ ಒಳ್ಳೆಯ ಕೆಲಸಗಳ ದಾಖಲಾತಿ ಕೆಲ ಅವಾಂತರಕ್ಕೂ ಕಾರಣವಾಗುತ್ತಿತ್ತು. ಎರಡು ದಿನಕ್ಕೊಮ್ಮೆ ಅದೇ ಕೆಲಸ. ಒಮ್ಮೆ ನನ್ನ ಮಿತ್ರನ ತಂದೆ ಶಾಲೆಗೆ ಬಂದಿದ್ದರು ಶಾಲೆ ಟೀಚರ್ ಮಿತ್ರನ ತಂದೆಯಲ್ಲಿಕೇಳಿದರು ನಿಮ್ಮ ಮಗ ಇವತ್ತು ಮನೆಯನ್ನು ಗುಡಿಸಿದ್ದಾನಾ? ತಕ್ಷಣ ಇಲ್ಲ ಎನ್ನುವ ಉತ್ತರ ಮಿತ್ರನ ತಂದೆಯದ್ದು. ಟೀಚರ್ ಒಳ್ಳೆಯ ಕೆಲಸದ ಪುಸ್ತಕವನ್ನು ತೋರಿಸಿ ನೋಡಿ ನಿಮ್ಮ ಮಗ ಏನೆಲ್ಲಾ ಕೆಲಸ ಮಾಡಿದ್ದಾನೆ ಎನ್ನಬೇಕೇ... ಇದೆಲ್ಲಾ ಶುದ್ದ ಸುಳ್ಳು ಅಂತಲೂ ಮಿತ್ರನ ತಂದೆ ಹೇಳಿದರು. ಮಾತ್ರವಲ್ಲ ಹೀಗೆ ಸುಳ್ಳು ಬರೆದರೆ ಎರಡೆರಡು ಕೊಡಿ ಟೀಚರ್ ಎಂದರು. ನಂತರ ನಮಗೆಲ್ಲಾ ಗಡ .. ಗಡ... ಕೆಲಸ ಒಳ್ಳೆಯದೇ... ಆದರೆ ,,,?? ಒಳ್ಳೆಯ್ ಕೆಲಸ ಮಾಡಲು, ಬರೆಯಲು ಹೆದರಿಕೆ. ಮನೆಯಿಂದ ಆಕಸ್ಮಿಕವಾಗಿ ಶಾಲೆಗೆ ಬಂದರೆ ...? ಎಂಬ ಭಯ ಅನುದಿನವೂ ಕಾಡುತ್ತಿತ್ತು. ಅಂತೂ ೪ ನೆ ತರಗತಿ ಕಳೆದಿತ್ತು.. ನಾನಂತೂ ಬಚಾವ್ ಆಗಿದ್ದೆ. ಒಳ್ಳೆಯ ಕೆಲಸಗಳನ್ನೇ ಮಾಡಿದ್ದೆ....!!!!????. ಈಗ ಅಂತಹ ಒಳ್ಳೆಯ ಕೆಲಸಗಳಿಲ್ಲ ... ಒಳ್ಳೆಯದೇ ಆಯಿತು....
ಒಂದು ವೇಳೆ ಅಂತಹ ಹೋಂವರ್ಕ್ ಇರುತ್ತಿದ್ದರೆ ಇಂದಿನ ಪುಟಾಣಿಗಳು ಏನನ್ನು ಬರೆಯುತ್ತಿದ್ದರು ಎನ್ನುವುದಕ್ಕೆ ಸ್ಯಾಂಪಲ್ .. ನಾನು ಇಂದು ಮೊಬೈಲ್ ಚಾರ್ಜ್ ಮಾಡಿದೆ , ನಾನು ಇಂದು ಟಿ.ವಿಯನ್ನು ಆನ್ ಮಾಡಿದೆ , ನಾನು ಇಂದು ಫೋನ್ ರಿಸೀವ್ ಮಾಡಿದೆ, ನಾನು ಇಂದು ಕಾರಿನ ಡೋರ್ ತೆಗೆದೆ , ನಾನು ಇಂದು ಹೋಂವರ್ಕ್ ಮಾಡಿದೆ ....... ... ಹೀಗೆ ದಾಖಲಾಗುತ್ತಿತ್ತೋ ಏನೋ..?? ಅಥವಾ ಹಿರಿಯರೇ ಅವರು ಮಾಡಿದ ಕೆಲಸಗಳನ್ನು ಬರೆದುಕೊಡುತ್ತಿದ್ದರೋ ಗೊತ್ತಿಲ್ಲ....
ಅಂತೂ ಒಮ್ಮೆ ನನ್ನ ಬಾಲ್ಯದ ಒಳ್ಳೆಯ ಕೆಲಸಗಳು ನೆನಪಾಯಿತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್‌ಗಳು:
ಮಹೇಶಣ್ಣ
ನಿಮ್ಮ ಒಳ್ಳೆಯ ಕೆಲಸಗಳು " ಬಲು ಮಜವಿದೆ. ಅಂದಿಗೂ ಇಂದಿಗೂ ಹೋಲಿಕೆ ಚೆನ್ನಾಗಿದೆ....
ನಾನೂ ಚಿಕ್ಕದಿರುವಾಗ ಬರೆದಿಟ್ಟಿದ್ದೆ..ಟೀಚರ್ ನೋಡ್ತರಲ್ಲ..ಅದ್ಕೆ ಸುಳ್ಳೇ ಬರೆಯೋದು!
-ತುಂಬುಪ್ರೀತಿ.
ಚಿತ್ರಾ
ಕಾಮೆಂಟ್ ಪೋಸ್ಟ್ ಮಾಡಿ