06 ಡಿಸೆಂಬರ್ 2008
ನಾವೆಷ್ಟು ಮುಂದುವರಿಯಬೇಕಿದೆ ..?
ಹದ್ದಿನ ಕಣ್ಣು ಅಂತ ನಾವು ಮೊನ್ನೆ ಮೊನ್ನೆಯವರೆಗೆ ಹೇಳಿಕೊಂಡು ಬಂದಿದ್ದೆವು.ಈಗ ನೋಡಿದರೆ ಹದ್ದೇ ನಮ್ಮ ದೇಶದ ಮೇಲೆ ಕಣ್ಣಿಟ್ಟ ಸುದ್ದಿ ಬಯಲಾಗಿದೆ.ಇದೇನು ಅಂತ ವಿವರಿಸಬೇಕಾಗಿಲ್ಲ. ಮೊನ್ನೆ ಕಾಶ್ಮೀರದಲ್ಲಿ ಹದ್ದೊಂದನ್ನು ನಮ್ಮ ಸೈನಿಕ ಬಳಗವು ಹಿಡಿದಾಗ ಅದರ ರೆಕ್ಕೆಯಲ್ಲಿ ಟ್ರಾನ್ಸ್ ಮಿಟರ್ ಅಳವಡಿಕೆಯಾದದ್ದು ತಿಳಿದಿದೆ.ಈ ಹಿಂದೆಯೂ ಇಂತಹ ಒಂದು ಸಂಗತಿ ಬೆಳಕಿಗೆ ಬಂದಿತ್ತು.ಆದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಗ ಮಾತ್ರಾ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಅತ್ತ ಪಾಕ್ ನಿಂದ ಛೂ.... ಬಿಡುತ್ತಿರುವ ಭಯೋತ್ಪಾದನೆಯ ವಿಷ ಬೀಜ. ಇಲ್ಲಿ ಮತಾಂಧತೆಯ ಬಹುದೊಡ್ಡ ಹಾಸಿಗೆಯಿದೆ. ಇವುಗಳೆಲ್ಲದರ ನಡುವೆ ನಮ್ಮ ಹೆಮ್ಮೆಯ ಯೋಧರು ಹೋರಾಡಬೆಕಾದ ಅನಿವಾರ್ಯತೆಯಿದೆ. ಇದರೊಂದಿಗೆ ನಮ್ಮ ಆತಂರಿವಾಗಿ ನಡೆಯುವ ರಾಜಕೀಯದ ಭಯೋತ್ಪಾದಕರ ಕಾಟವು ನಿರಂತರವಿದೆ. ಹೀಗೆ ಸವಾಲುಗಳ ನಡುವೆ ಇರುವ ಭಾರತದಲ್ಲಿ ಈಗ ಹದ್ದುಗಳ ಮೂಲಕವೂ ಪಾಕ್ ಅಥವಾ ಉಗ್ರ ಸಂಘಟನೆಗಳು ಮಾಹಿತಿಯನ್ನು ಕಲೆಹಾಕುವ ಯತ್ನ ನಡೆಸುತ್ತಿವೆ ಎಂದರೆ ತಪ್ಪಾಗದು. ಆದುದರಿಂದ ಈ ದೇಶಕ್ಕೆ ಇನ್ನೂ ಭದ್ರತೆ ಬೇಕು. ಪ್ರತಿಯೊಬ್ಬನೂ ಕೂಡಾ ತನ್ನ ಭದ್ರತೆಯ ಬಗ್ಗೆ ಯೋಚಿಸದೆ ನಮ್ಮ ಮನೆಯ ಬಗ್ಗೆ ಚಿಂತಿಸಬೆಕಾದ ಅನಿವಾರ್ಯತೆಯಿದೆ. ಆದರೆ ನಮ್ಮ ರಾಜಕಾರಣಿಗಳ ಮನಸ್ಥಿತಿ ನೋಡಿದರೆ ಅಸಹ್ಯವೆನಿಸುತ್ತದೆ. " ನಮಗೆ ಭದ್ರತೆ ಕೊಡಿ" ಅಂತ ದುಂಬಾಲು ಬೀಳುತ್ತಾರಲ್ಲಾ. ಇತ್ತ ದೇಶಕ್ಕೆ ದೇಶವೇ ನಲುಗುತ್ತಿದೆ. ಭದ್ರತೆ ಸಾಕಾಗುವುದೇ ಇಲ್ಲ. ಕಟ್ಟೆಚ್ಚರ ವಹಿಸಿದಷ್ಟು ಕಣ್ಣು ತಪ್ಪಿಸುವ ಚತುರರಿದ್ದಾರೆ. ಆದರೆ ರಾಜಕಾರಣಿಗಳಿಗೆ ಚಿಂತೆ ಅವರದ್ದು ಮತ್ತು ಓಟಿನ ಲೆಕ್ಕ ಮಾತ್ರಾ.ಎಂತಹ ದುರಂತ ನಮ್ಮದು. ಅಂತಹ ರಾಜಕಾರಣಿಗಳಿಲ್ಲದೆ ಈ ದೇಶ ಬದುಕಬಲ್ಲದು. ಒಂದರ್ಥದಲ್ಲಿ ದೇಶ ಇನ್ನಷ್ಟು ಬಲಿಷ್ಠವೂ ಆದೀತು , ಸರ್ವಶಕ್ತವು ಆದೀತು. ಅಂತಹ ನಾಯಕರಿಲ್ಲದೆ ದೇಶವನ್ನು ಆಳುವ ಜನರು ಇದ್ದಾರೆ. ಮನೆಗೆ ಬೆಂಕಿ ಬಿದ್ದಾಗ ಹಾಸಿಗೆಯನ್ನು ರಕ್ಷಿಸಲು ಹೊರಟಂತೆ ನಮ್ಮ ನಾಯಕರು ಇಂದು ಹದ್ದುಗಳ ಮೂಲಕವೂ ಟ್ರಾನ್ಸ್ ಮಿಟರ್ ನಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಗಮನಿಸುವ ಹಂತಕ್ಕೆ ಬಂದು ನಿಂತಿದ್ದಾರೆ. ಆದರೆ ಅದೆಲ್ಲವನ್ನೂ ತಿಳಿಯದ ಅರಿಯದ ತಿಳಿಗೇಡಿ ನಾಯಕರು ಕಪಟ ರಾಜಕಾರಣಿಗಳು ತಮ್ಮ ಬಗ್ಗೆಯೆ ಚಿಂತಿಸುತ್ತಾರಲ್ಲಾ. ಅಲ್ಲಲ್ಲಿ ರಾಜಕೀಯ ಮಾಡುತ್ತಾರಲ್ಲಾ .. ಮನಸ್ಸು ರೋಷದಿಂದ ಕುದಿಯುತ್ತದೆ. ಆದರೆ ಏನು ಮಾಡೋಣ ... ಏನೂ ಮಾಡುವ ಹಾಗಿಲ್ಲ..... ಎನ್ನುವ ಬೇಸರವಿದೆ.
ಇಂದು ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಬಹುತೇಕ ಎಲ್ಲಾ ನಾಯಕರು [ಕೆಲವರನ್ನು ಬಿಟ್ಟು] ಇಲ್ಲಿನ ಆಂತರಿಕ ಭದ್ರತೆ ಯ ಬಗ್ಗೆಯಾಗಲಿ ಅದೆಷ್ಟೋ ಅಮಾಯಕರು ಪ್ರತಿದಿನ ಬಾಂಬ್ ಸ್ಫೋಟದಲ್ಲಿ ಬದುಕು ಕಳಕೊಳ್ಳುವವರ ಬಗ್ಗೆಯಾಗಲಿ. ಜೀವದ ಹಂಗು ತೊರೆದು ದೇಶವನ್ನೇ ಕಾಪಾಡುವ ಯೋಧರ ಬಗ್ಗೆಯಾಗಲಿ ಇವರು ಒಂದು ಕ್ಷಣ ಚಿಂತಿಸಿದ್ದಾರಾ.? ಏನಿದ್ದರೂ ಓಟಿನ ಬೇಟೆ .. ಹಣದ ಹೊಳೆಯ ಬಗ್ಗೆಯೇ ಚಿಂತೆ. ಇನ್ನು ಚುನಾವಣೆ ಹತ್ತಿರ ಬಂತು. ಮೊನ್ನೆಯ ಸ್ಫೋಟಕ್ಕೆ ಬೇರೊಬ್ಬ ರಾಜಕಾರಣಿಯ ತಲೆದಂಡದ ಮೂಲಕ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಯತ್ನ ಮಾಡಿ ಮತ್ತೆ ಓಟನ್ನು ಪಡೆಯುವ ಹಪಾಹಪಿ ಇವರಿಗಿದೆಯಲ್ಲಾ... ... ಇವರು ಒಂದು ಕ್ಷಣವಾದರೂ ನಮ್ಮ ಯೋಧರಿಗೆ ಅತ್ಯುತ್ತಮವಾದ ಸಲಕರಣೆಗಳ ಒದಗಣೆಯ ಚಿಂತನೆ ಮಾಡಿದ್ದಾರೆ... ಅಲ್ಲಿ ಪಾಕ್ ನಿಂದ ಹದ್ದಿನ ಮೂಲಕವೂ ಇಲ್ಲಿನ ವಿಚಾರಗಳನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಏನಿಲ್ಲವೆಂದರೂ ೩ ರಿಂದ ೫ ಲಕ್ಷ ಖರ್ಚಾಗಬಹುದಾಗಿದೆ. ಇಂತಹ ಎಷ್ಟು ಹದ್ದುಗಳು ದೇಶದೊಳಕ್ಕೆ ಬಂದಿದೆಯೋ ಭಗವಂತನೆನ್ನುವ ಭಗವಂತನೇ ಬಲ್ಲ. ಇದುವರೆಗೆ ಉಗ್ರರ ನುಸುಳುವಿಕೆಯ ಬಗ್ಗೆ ಮಾತ್ರಾ ಎಚ್ಚರ ವಹಿಸಬೇಕಾಗಿದ್ದ ಯೋಧರು ಈಗ ಹದ್ದುಗಳು , ಹಕ್ಕಿಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಇಂತಹ ಹಲವಾರು ಸಮಸ್ಯೆಗಳು ಅನುದಿನವೂ ಎದುರಾಗುತ್ತಲೇ ಇದೆ. ಅದಕ್ಕೆಲ್ಲಾ ಪರಿಹಾರವನ್ನು ರಾಜಕಾರಣಿಗಳು ಮಾಡಬೇಕೆನ್ನುವ ಪರಿಜ್ಞಾನವನ್ನು ಬೆಳೆಸಿಕೊಳ್ಳಲಿ.
ಇನ್ನು ಇದಕ್ಕೆ ಹೊರತಾಗಿ ಹೇಳುವುದಾದರೆ ನಮ್ಮ ಪೊಲೀಸ್ ವ್ಯವಸ್ಥೆ. ಇದು ನಮ್ಮ ರಾಜಕಾರಣಿಗಳ ತರನೇ ಇರುವ ಇನ್ನೊಂದು ವ್ಯವಸ್ಥೆ. ಚಿಕ್ಕ ಪುಟ್ಟ ಕಳ್ಳರನ್ನು ಹಿಡಿಯುವುದಕ್ಕೆ ಸೀಮಿತವೋ ಏನೋ. ಅವರಿಗೂ ಅಧಿಕಾರವಿಲ್ಲ. ಕೈಯಲ್ಲಿ ಗನ್ನು ಇದ್ದರೂ ಸುಮ್ಮನೆ ಅದು ಬೆದರುಗೊಂಬೆ.. ಕೆಲವು ಪೊಲೀಸರಿಗೆ ಪೊಲೀಸ್ ಎಂಬ ಅಹಂ ಬೇರೆ. ಅವರನ್ನು ಬಿಟ್ಟವರು ಬೇರೆ ಇಲ್ಲ ಎನ್ನುವ ದರ್ಪ. ಮಾತನಾಡಿದರೆ ಏರು ಸ್ವರವೇ. ಸೌಜನ್ಯದ ಪದವೇ ಅವರ ಡಿಕ್ಚನರಿಯಲ್ಲಿ ಇಲ್ಲ.ಖಾಕಿ ತೊಟ್ಟ ತಕ್ಷಣ ಅದರಲ್ಲೇನೋ ಇದೆ ಎನ್ನುವ ಮೆಂಟಾಲಿಟಿ. ಏಕೆಂದರೆ ನನಗೂ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಂದ ಅನುಭವವೊಂದು ಆಗಿತ್ತು. ಹಾಗೆಂದು ಎಲ್ಲರಿಗೂ ಆ ಪಟ್ಟ ಕಟ್ಟಲಾಗುವುದಿಲ್ಲ. ಹಾಗೆ ಅಹಂ ಇರುವ ಪೊಲೀಸರಿಂದಲೇ ಅನೇಕ ಘಟನೆಗಳು ಹಿಡಿಯಲಾಗುವುದಿಲ್ಲ. ಎಲ್ಲಾ ಮುಗಿದ ಬಳಿಕ ಆ ಜಾಗಕ್ಕೆ ತೆರಳುತ್ತಾರೆ. ಉದಾಹರಣೆಗೆ ಬಾಂಬ್ ಸ್ಪೋಟಗಳು. ಮೊದಲೆ ಸೂಚನೆ ಇದ್ದಿರುತ್ತದೆ ಆದರೆ ಪೊಲೀಸ್ ನಿಷ್ಕ್ರ್‍ಇಯವಾಗಿರುತ್ತದೆ. ಹಾಗಾಗಿ ಅಂತಹ ಇಲಾಖೆಗಳಿಂದಲೂ ಭದ್ರತೆ ಕನಸಿನ ಮಾತು.ತಮಾಷೆ ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು ಇದುವರೆಗಿನ ಎಲ್ಲಾ ಘಟನೆಗಳನ್ನು ನೋಡಿದರೆ ಅವರ [ಭಯೋತ್ಪಾದಕರ] ಅಂತ್ಯ ನಮ್ಮವರ [ ಪೊಲೀಸರ] ಆರಂಭ. ಅಂದರೆ ಅವರ ಕೆಲಸ ಮುಗಿದು ಸ್ಫೋಟದ ನಂತರ ಪೊಲೀಸರಿಗೆ ಕೆಲಸ ಆರಂಭವಾಗುತ್ತದೆ. ಅದು ಸತ್ಯವೂ ಆಗಿದೆ.
ಇದೆಲ್ಲವನ್ನೂ ಗಮನಿಸಿದಾಗ ನಾವೆಷ್ಟು ಮುಂದುವರಿಯಬೇಕಾಗಿದೆ... ಮುಂದುವರಿಯಲಿದೆ ....?. ಗುರಿ ತಲುಪಬಲ್ಲೆವೇ...??????. ಇಂದಿನ ಈ ಕಾಲಘಟ್ಟದಲ್ಲಿ ಇದು ಸಾಧ್ಯವೇ...??? ಏನೋ ಗೊತ್ತಿಲ್ಲ. ಅಂತೂ ನಮ್ಮ ಯೋಧರಿಗೆ ಎಲ್ಲಾ ಸೌಲಭ್ಯಗಳು ಸಿಗಲಿ... ಬಲಿದಾನವಾದೆ ಹೋರಾಡಿ ದೇಶದ ಗೌರವನ್ನು ಎತ್ತಿ ಹಿಡಿಯಲಿ...
ಜೈ ಜವಾನ್ ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ಕಷ್ಟ. ಢೋಂಗಿ ಜಾತ್ಯತೀತತೆಯಿರುವಷ್ಟು ಕಾಲ ಭಯೋತ್ಪಾದನೆ ನಿಲ್ಲುವುದು ಕಷ್ಟ.
ಕಾಮೆಂಟ್ ಪೋಸ್ಟ್ ಮಾಡಿ