ನನಗೆ ಪಾಠಕ್ಕೆ ಇರಲಿಲ್ಲ ಆದರೆ ಗುರುಗಳು ಅಂತ ಹೇಳಬಹುದು .. ಹಿತೈಷಿ ಅಂತಅನ್ನಲೂ ಬಹುದು ... ಮಿತ್ರ ಅಂತ ಹೇಳಲೂಬಹುದಾದ , ನಾನು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಪ್ರೀತಿಸುವವರಲ್ಲಿ ಒಬ್ಬರಾದ ಸುಬ್ರಹ್ಮಣ್ಯದ ಮಂಜುನಾಥ ಭಟ್ ಸಂಸ್ಕೃತದ ಬಗ್ಗೆ ಲೇಖನವೊಂದನ್ನು ಯಾವುದೋ ಸಂಚಿಕೆಗೆ ಬರೆದಿದ್ದರು. ಅದು ನನಗೆ ಹೆಚ್ಚು ಆಪ್ಯಾಯಮಾನವೆನಿಸಿತ್ತು. ಅದರ ಪಡಿಯಚ್ಚು ಇಲ್ಲಿದೆ....
ಭಾರತದ ಇತಿಹಾಸದಲ್ಲಿ ಸಂಸ್ಕೃತವು ಒಂದು ಭಾಷೆಯಾಗಿ, ದೇಶದ ಸಮಗ್ರತೆಯ ಬಹುದೊಡ್ಡ ಸಂಕೇತವಾಗಿ ಕಾರ್ಯನಿರ್ವಹಿಸಿದೆ. ಋಷಿಮುನಿಗಳ ಧ್ವನಿಯಾಗಿ, ಮಾನವನ ಬದುಕಿನ ಉನ್ನತಿಯ ಮೌಲ್ಯಗಳ ರೂವಾರಿಯಾಗಿ ಸಂಸ್ಕೃತ ಈ ದೇಶದ ಜೀವನಾಡಿಯಾಗಿತ್ತು. ಬುದ್ಧಿಜೀವಿಗಳ ಹಾಗು ವಿದ್ವಾಂಸರ ಆಧ್ಯಾತ್ಮಿಕ ಸಂವಾದ ಸಂಸ್ಕೃತದಲ್ಲಿಯೇ ನಡೆಯುತ್ತಿತ್ತು. ಅದು ಜವಸಾಮಾನ್ಯರ ಆಡುಮಾತಿನ ಮಾಧ್ಯಮವಾಗಿ ದೇಶದ ಉದ್ದಗಲಕ್ಕೂ ಅಪಾರ ಪ್ರಭಾವ ಬೀರಿದೆ. ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯಲ್ಲಿ ಸಂಸ್ಕೃತದ ಕೊಡುಗೆ ಗಣನೀಯವಾಗಿದೆ. ಹೊಸ ಪದಗಳ ಸೃಷ್ಟಿಗೆ ಹಾಗು ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಇಂದಿಗೂ ಸಂಸ್ಕೃತ ಸ್ಪೂರ್ತಿಯಾಗಿದೆ.
ಐದಾರು ಸಾವಿರ ವರ್ಷಗಳ ಅಸ್ತಿತ್ವವಿರುವ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಭಾರತೀಯರ ಜೀವನ ಪರಂಪರೆಯಲ್ಲಿ ಹಾಸುಹೊಕ್ಕಾಗಿ ಸೇರಿಹೋಗಿದೆ. ಅದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ಭಾರತೀಯತೆಗೆ ಪೂರಕ ಸಂಸ್ಕೃತ ಜ್ಞಾನ ಮತ್ತು ಸಂಸ್ಕೃತ ಶಿಕ್ಷಣ ಎಂಬುದು ನಿರ್ವಿವಾದ. ಈ ಕುರಿತು ಕನ್ನಡ ವಿದ್ವಾಂಸರು, ದೇಶದ ನೇತಾರರು ಹಾಗು ಪಾಶ್ಚಾತ್ಯ ವಿದ್ವಾಂಸರು ಅಲ್ಲಲ್ಲಿ ಕಾಲಾನುಕಾಲಕ್ಕೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಉದಾ;- ಸಂಸ್ಕೃತ ಬಲ್ಲವನೇ ಸುಸಂಸ್ಕೃತ ಎನ್ನುವಷ್ಟರ ಮಟ್ಟಿಗೆ ಆ ಭಾಷೆಯಲ್ಲಿ ಜ್ಞಾನನಿಧಿಯಡಗಿದೆ - ದ.ರಾ.ಬೇಂದ್ರೆ.
ಭಾರತವರ್ಷದ ಸಂಸ್ಕೃತಿಗೆ ಸಂಸ್ಕೃತವು ತಾಯಿಬೇರು. ಇತರ ಭಾಷೆಗಳಿಗೆ ಹೇಗೋ ಹಾಗೆಯೇ ಕನ್ನಡದ ಬೆಳವಣಿಗೆಗೆ ಸಂಸ್ಕೃತವು ಕೇವಲ ಅವಶ್ಯಕ.-ಮಾಸ್ತಿ ವೆಂಕಟೇಶ ಅಯ್ಯಂಗಾರ.
The eduction of any Hindu child is incomplete, unless he has got some knowledge of Sanskrit. — Gandiji. ಇತ್ಯಾದಿ.
ಆದ್ದರಿಂದಲೇ ಭಾರತಸ್ಯ ಪ್ರತಿಷ್ಠೇ ದ್ವೇ, ಸಂಸ್ಕೃತಂ ಸಂಸ್ಕೃತಿಸ್ತಥಾಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿ ಭಾರತದ ಎರಡು ಪ್ರತಿಷ್ಠೆಗಳು ಎಂಬ ಮಾತು ಜನಜನಿತವಾಗಿದೆ.
ಸಂಸ್ಕೃತ ಪಾಣಿನಿಯ ವ್ಯಾಕರಣದಿಂದ ಸಂಸ್ಕಾರಗೊಂಡ ಮೇಲೆ ಇದಕ್ಕೆ ಸಂಸ್ಕೃತ ಎಂಬ ಹೆಸರು ಬಂದಿದ್ದಾಗಿ ತಿಳಿದುಬರುತ್ತದೆ. ವಿಸ್ತೃತವಾದ ವ್ಯಾಕರಣದಿಂದಲೇ ಅತ್ಯಂತ ಕಡಿಮೆ ವಿಕಾರಕ್ಕೊಳಗಾದ ಭಾಷೆ ಎಂಬುದೂ ಅಷ್ಟೆ ಸತ್ಯ.ಇಂದಿನ ಅವಸರದ ಯುಗದಲ್ಲಿ ಈ ವ್ಯಾಕರಣವೇ ಸಂಸ್ಕೃತ ಕಲಿಕೆ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ಸಂಸ್ಕೃತಿ ಎಂಬ ಶಬ್ದದ ಅರ್ಥಕೂಡಾ ಬಹುಮುಖವಾದದ್ದು ಮತ್ತು ನಮ್ಮ ಜೀವನಕ್ಕೆ ಬಹುಮುಖ್ಯ ವಾದದ್ದು. ನಿಘಂಟಾಗಲಿ, ವಿಶ್ವಕೋಶವಾಗಲಿ ಪ್ರಾಚೀನ ಸಾಹಿತ್ಯಕೃತಿಗಳಾಗಲಿ ಸಂಸ್ಕೃತಿ ಎಂಬ ಶಬ್ದದ ಅರ್ಥ ವಿವರಣೆಯನ್ನ ಪೂರ್ತಿಯಾಗಿ ನೀಡಿಲ್ಲ. ಬದಲಾಗಿ ಇದಕ್ಕೆ ಸಂವಾದಿಯಾದ ಸಂಸ್ಕಾರ ಎಂಬ ಪದ ನಮ್ಮ ಪೂರ್ವಿಕರ ಪ್ರಯೋಗದಲ್ಲಿದೆ. ಷೋಡಷ ಸಂಸ್ಕಾರ, ಬುದ್ದಿಸಂಸ್ಕಾರ ಇತ್ಯಾದಿಯಾಗಿ. ಈ ಶಬ್ದಕ್ಕೆ ಪರಿಭಾಷೆ ನೀಡುವಾಗ ಸಂಸ್ಕಾರೋ ನಾಮ ಸ ಭವತಿ, ಯಸ್ಮಿನ್ ಜಾತೇ ಪದಾರ್ಥೋ ಭವತಿ ಯೋಗ್ಯಃ ಕಸ್ಯಚಿದರ್ಥಸ್ಯ ಯಾವುದರಿಂದ ಒಂದು ಪದಾರ್ಥಕ್ಕೆ ಅಥವಾ ವ್ಯಕ್ತಿಗೆ ಯೋಗ್ಯತೆ ಅಥವಾ ಅರ್ಹತೆ ಒದಗಿ ಬರುತ್ತದೋ ಅದು ಸಂಸ್ಕಾರ ಎಂದರು. ಇಂತಹ ಒಳ್ಳೆಯ ಸಂಸ್ಕಾರ ಪಡೆದವ ಸುಸಂಸ್ಕೃತ. ಈ ಸುಸಂಸ್ಕೃತನ ಗುಣಸಂಪತ್ತು ಸಂಸ್ಕೃತಿ.
ಸಂಸ್ಕೃತಿ ಎಂಬ ಪದಕ್ಕೆ ಸಮನಾರ್ಥಕ ಪದ ಲ್ಯಾಟಿನ್ ಮೂಲದ ಕಲ್ಟ್ (cult) ಕಲ್ಟಸ್(cultus)
ನಿಂದಾದ ಕಲ್ಚರ್. ಇದು ಕೃಷಿ ಅಥವಾ ಉಳುಮೆ ಎಂಬರ್ಥ ಕೊಡುವ ಭೂವಾಚಕ ಶಬ್ದ (ಅಗ್ರಿಕಲ್ಚರ್, ಹಾರ್ಟಿಕಲ್ಚರ್) ಈ ಅರ್ಥದಿಂದ ನೋಡಿದಾಗ ಸಂಸ್ಕೃತಿ ನಮ್ಮ ಮನಸ್ಸಿನ ಕೃಷಿ, ಬುದ್ಧಿಯ ವ್ಯವಸಾಯ, ಅಂತರಂಗದ ಸಂಸ್ಕಾರ, ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರ, ಮೊದಲಾದ ಕಲೆಗಳ ಮೂಲಕ ಉಂಟಾಗುವ ಉತ್ತಮ ಸಂಸ್ಕಾರವೇ ಕಲ್ಚರ್ ಅಥವಾ ಸಂಸ್ಕೃತಿ. ಒಬ್ಬ ವ್ಯಕ್ತಿಗೆ, ಸಮಾಜಕ್ಕೆ ಒಂದು ಸಂಸ್ಕೃತಿ ಇರುವಂತೆ, ದೇಶಕ್ಕೂ ಒಂದು ಸಂಸ್ಕೃತಿ ಇರುತ್ತದೆ. ಭಾರತಕ್ಕೆ ಅಂತಹ ಸಂಸ್ಕೃತಿಯನ್ನು ಒದಗಿಸಿದ ಭಾಷೆ ಸಂಸ್ಕೃತ. ಈ ಸಂಸ್ಕೃತಿಯನ್ನು ಉಳಿಸಿ ಬಳಸಿ ಬೆಳೆಸಬೇಕಾದರೆ ಅದರ ಕುರಿತು ಸರಿಯಾದ ಅರಿವು ಬೇಕು. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಸಂಸ್ಕೃತದ ಹೂರಣದ ಕುರಿತು ಸ್ವಲ್ಪ ಮಾಹಿತಿ.
ಸಂಸ್ಕೃತ ಎಂದೊಡನೆ ದೇವರ ಪೂಜೆ, ಯಜ್ಞ ಹವನಗಳಿಗೆ ಬೇಕಾದ ಮಂತ್ರದ ಭಾಷೆಯೆಂದೋ, ಕಾಳಿದಾಸ ಭಾಸಾದಿಗಳ ಸಾಹಿತ್ಯದ ಭಾಷೆಯೆಂದೋ ಅಥವಾ ದೇವ ಭಾಷೆಯೆಂದೊ ಭಾವಿಸುವ ಪರಿ ಸಾಮಾನ್ಯವಾಗಿ ಕಾಣುತ್ತೇವೆ. ಸಂಸ್ಕೃತದಲಿ ಗಣಿತ, ಖಗೋಲ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ಹಾಗು ಪ್ರಕೃತಿ ವಿಜ್ಞಾನದೊಂದಿಗೆ ಸಾಮರಸ್ಯದ ಬದುಕಿಗೆ ಬೇಕಾದ ವಿಚಾರದ ಧಾರ್ಮಿಕೇತರ ಸಾಹಿತ್ಯವು ಸಾಕಷ್ಟಿವೆ.
ವಸುಧೈವ ಕುಟುಂಬಕಂ ಎಂಬ ಭಾವವನ್ನ ನಿಜವಾದ ಅರ್ಥದಲ್ಲಿ ಬೆಳೆಸುವ ಈ ಭಾಷೆಯ ಅಧ್ಯಯನ, ಅಧ್ಯಾಪನ ಹಾಗು ಸಂಶೋಧನೆಗಳು ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಪ್ರಾರಂಭವಾಗುತ್ತಿದೆ. ಇತ್ತೀಚಿನ ಕೆಲವು ವಿಶ್ವ ಸಂಸ್ಕೃತ ಸಮ್ಮೇಳನಗಳು ಟೊರಿನೋ, ಪ್ಯಾರಿಸ್, ಫಿಲಿಡಲ್ಫಿಯಾ, ಲೈಡನ್, ವಿಯನ್ನ ಗಳಲ್ಲಿ ನಡೆದಾಗ ಅಲ್ಲಿ ಭಾರತೀಯ ವಿದ್ವಾಂಸರಿಗಿಂತ ವಿದೇಶಿ ವಿದ್ವಾಂಸರೇ ಹೆಚ್ಚಿದ್ದದ್ದು ಅದಕ್ಕೊಂದು ಉದಾಹರಣೆ. ಆದರೆ ಸಂಸ್ಕೃತದ ಜನ್ಮಭೂಮಿಯಾದ ಭಾರತದಲ್ಲಿ ಜಾತಿ, ಮತ, ಓಟ್ ಬ್ಯಾಂಕ್ ಹಾಗು ರಾಜಕೀಯ ಒತ್ತಡಗಳ ಕಾರಣದಿಂದ ಸಿಗಬೇಕಾದ ಪ್ರಾಶಸ್ತ್ಯ ಸಿಗದಿರುವುದು ಬೇಸರದ ಸಂಗತಿ.
ಇಂದಿನ ವೈಜ್ಞಾನಿಕ ಯುಗಕ್ಕೂ ಉಪಯುಕ್ತವೆನಿಸುವ ಗ್ರಂಥಗಳು ಸಂಸ್ಕೃತದಲ್ಲಿವೆ. ರಾಮಾಯಣ, ಮಹಾಭಾರತಗಳು ಜಾಗತಿಕ ಸಾಹಿತ್ಯದಲ್ಲಿ ಮುನ್ನಡೆ ಪಡೆದ ಮೇರುಕೃತಿಗಳು. ಭUವದ್ಗೀತೆ ಧಾರ್ಮಿಕ ಅಂಶದೊಂದಿಗೆ ಇಂದಿನ ಕಾರ್ಯನಿರ್ವಹಣಾ ಕೌಶಲ್ಯವನ್ನು ತಿಳಿಸುತ್ತದೆ. ಪಾಣಿನಿ, ಪತಂಜಲಿಯಂತಹ ಭಾಷಾವಿಜ್ಞಾನಿಗಳು ಜಗತ್ತಿನಲ್ಲಿ ಬೇರಿಲ್ಲ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ದೇವಲಸ್ಮೃತಿಗಳು ಧರ್ಮದ ಜೊತೆಗೆ ಸಮಯೋಚಿತ ಪರಿವರ್ತನೆಯಬಗೆಗೆ ಭಾರತೀಯರ ಕಾಳಜಿಗೆ ಸಾಕ್ಷಿ. ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕಿ ನೀತಿಶಾಸ್ತ್ರಗಳು ರಾಜಕೀಯ, ಆಡಳಿತ, ಕಲೆ, ಸಂಸ್ಕೃತಿಗಳಿಗೆ ಮಾರ್ಗದರ್ಶಕ. ವಾಸ್ಸ್ಯಾಯನನ ಕಾಮಸೂತ್ರಕ್ಕೆ ಸರಿಯಾದ ವೈಜ್ಞಾನಿಕ ಕಾಮಶಾಸ್ತ್ರ ಇನ್ನೊಂದಿಲ್ಲ. ಕಾವ್ಯನಾಟಕಾದಿಗಳಲ್ಲಿ ಭರತನ ನಾಟ್ಯಶಾಸ್ತ್ರ, ಕಾಳಿದಾಸ, ಭಾಸ, ಭವಬೂತಿ ಮುಂತಾದವರ ಸಾಹಿತ್ಯ ಕೃತಿಗಳು ಗಮನಾರ್ಹ. ಪಂಚತಂತ್ರ, ಹಿತೋಪದೇಶಗಳಂತಹ ಶಿಶುಸಾಹಿತ್ಯಗಳು ಅನ್ಯತ್ರ ದುರ್ಲಭ.
ವೈಜ್ಞಾನಿಕ ತಳಹದಿ ಹೊಂದಿದ ಈ ಭಾಷೆಯ ಶಬ್ದ ಸಂಪತ್ತು, ವ್ಯಾಕರಣ ತೀರಾ ವಿಶಿಷ್ಟವಾದದ್ದು. ಇಡೀ ಶಬ್ದಕೋಶವನ್ನ ಕಂಠಪಾಠ ಮಾಡುವ ವ್ಯವಸ್ಥೆ ಸಂಸ್ಕೃತದಲ್ಲಿದೆ. ವ್ಯಾಕರಣದಲ್ಲಿ ಸ್ವರ, ವ್ಯಂಜನ, ಅನುನಾಸಿಕ, ಅನುಸ್ವಾರ ಮತ್ತು ವಿಸರ್ಗಗಳ ಉತ್ಪತ್ತಿ ಸ್ಥಾನ ಮತ್ತು ಉಚ್ಚರಿಸಲು ಮಾಡಬೇಕದ ಪ್ರಯತ್ನವನ್ನು ಕ್ರಿಸ್ತಪೂರ್ವ ದಲ್ಲಿಯೇ ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿ ನಿಖರವಾಗಿ ಹೇಳಿದ್ದಾನೆ. ಇದು ಉಚ್ಚಾರದೋಷ ನಿವಾರಣೆಗೆ ಅತ್ಯಂತ ಸಹಾಯಕ. ವೈಜ್ಞಾನಿಕ ಕ್ರಮಾನುಸಾರ ಭಾಷೆಯೊಂದರ ಒಂದು ರೀತಿಯ ರಾಸಾಯನಿಕ ವಿಶ್ಲೇಷಣೆ ಯನ್ನ ನಾವಿಲ್ಲಿ ಕಾಣುತ್ತೆವೆ.
ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಅಗ್ರಸ್ಥಾನ ವರಹಾಮಿಹಿರನದು. ಸೂರ್ಯ ನಮ್ಮ ಗ್ರಹಮಾಲೆಯ ಮತ್ತು ಚರಾಚರಸೃಷ್ಟಿಯ ಆಧಾರ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಕೋಪರ್ನಿಕಸ್‌ಗಿಂತ ಸಾವಿರಾರು ವರ್ಷ ಮೊದಲೇ ಪ್ರತಿಪಾದಿಸಿದಾತ. ಅವನ ಬೃಹತ್ ಸಂಹಿತೆಯು ಖಗೋಳ, ಸಸ್ಯ, ಪ್ರಾಣಿ, ಕೃಷಿ, ರಸಾಯನ, ಭೂಗೋಳ, ಛಂದಸ್ಸು, ಶಿಲ್ಪ, ಶರೀರ, ಔಷಧ, ಮನಃಶಾಸ್ತ್ರಾದಿ ಸಕಲ ವಿದ್ಯೆಗಳನ್ನೊಳಗೊಂಡ ಒಂದು ವಿಶ್ವಕೋಶ. ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ ಎಂಬ ಮಂತ್ರ ಇದನ್ನೇ ದೃಢೀಕರಿಸುತ್ತದೆ. ಖಗೋಳಶಾಸ್ತ್ರಜ್ಞರು ಆಕಾಶಗಂಗೆಯ ಪರಿಘವಾಗಿಯೂ ಸೌರಮಾಲೆಯ ಕೇಂದ್ರವಾಗಿ ಇರುವುದು ಒಂದು ಗೆಲೆಕ್ಸಿ. ಇಂತಹ ಅಸಂಖ್ಯಾತ ಗೆಕ್ಸಿಗಳಿವೆ ಎಂದಿರುವುದನ್ನು ಹಿಂದೆಯೆ ಅನೇಕ ಕೋಟಿ ಬ್ರಹ್ಮಾಂಡ ಭಗವಂತ ಇದರ ನಾಯಕ ಎಂದ ಹಿರಿಯರು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳನ್ನು ನಿಖರವಾಗಿ ಹೇಳುತ್ತಾ ಬಂದಿರುವುದು ಸಂಸ್ಕೃತದಲ್ಲಿರುವ ಖಗೋಳಜ್ಞಾನದ ಹರಹನ್ನು ತಿಳಿಸುತ್ತದೆ.
ವಿಜ್ಞಾನದ ಮೂಲವಾದ ಗಣಿತದ ಬೆಳವಣಿಗೆಗೆ ಸಂಸ್ಕೃತದ ಕೊಡುಗೆ ಅಪಾರವಾದದ್ದು. ಇಂದು ಪ್ರಪಂಚದಲ್ಲಿ ಉಪಯೋಗಿಸುವ ಅಂಕಿಗಳು (೧,೨,೩) ಹಾಗು ಶೂನ್ಯ (೦),ದಶಮಾನ ಪದ್ದತಿ ಭಾರತೀಯರ ಅನ್ವೇಷಣೆ. ಈ ಪದ್ದತಿ ಅರಬರ ಮೂಲಕ ಯೂರೋಪ್ ತಲುಪಿದ್ದರಿಂದ ಅದನ್ನು ಅರೇಬಿಯ ಪದ್ದತಿ ಎನ್ನುತ್ತಾರೆ. ಈ ದಿಸೆಯಲ್ಲಿ ಖ್ಯಾತ ಗಣಿತ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟ, ಬ್ರಹ್ಮಸ್ಪುಟ ಸಿದ್ದಾಂತ ದ ಬ್ರಹ್ಮಗುಪ್ತ, ಲೀಲಾವತಿ ಮತ್ತು ಬೀಜಗಣಿತದ ಕೊಡುಗೆಯಿತ್ತ ಭಾಸ್ಕರಾಚಾರ್ಯ, ಸಮಕೋನ, ವೃತ್ತ ಮತ್ತು ಚತುರ್ಭುಜಗಳ ವಿವರಣೆ ನೀಡುವ ಶುಲ್ಪ ಸೂತ್ರ ಗಳನ್ನು ಗಮನಿಸಲೇ ಬೇಕು.
ವೇzಗಳ ಮೂಲವುಳ್ಳ ಆಯುರ್ವೇದ, ಯುದ್ದದಲ್ಲಿ ಕತ್ತರಿಸಿಹೋದ ಅವಯವಗಳನ್ನು ಪುನ: ಜೋಡಿಸುವ ಪ್ಲಾಸ್ಟಿಕ್ ಸರ್ಜರಿಯಂತಹ ಶಸ್ತ್ರಚಿಕಿತ್ಸೆಯ ಜೊತೆಗೆ ದೇಹ ಮತ್ತು ಮನ:ಸ್ವಾಸ್ಥ್ಯದೊಂದಿಗೆ ಆರೋಗ್ಯಪೂರ್ಣ ಸಾಮಾಜಿಕ ಬೆಳವಣಿಗೆಗೆ ಬೇಕಾದ ವ್ಯಕ್ತಿಗತ ವಿವರಗಳನ್ನು ನೀಡುವ ಚರಕ,ಸುಶ್ರುತ, ಹಾಗು ವಾಗ್ಭಟರ ಗ್ರಂಥಗಳಾಗಲಿ, ಪತಂಜಲಿಯ ಯೋಗ ಸೂತ್ರಗಳಾಗಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸರ್ವರೂ ಗಮನಿಸಬೇಕಾದ ಗ್ರಂಥಗಳು.
ಸಸ್ಯಶಾಸ್ತ್ರ ಮತ್ತು ಕೃಷಿವಿಜ್ಞಾನದ ಕುರಿತು ಪರಾಶರ ಮುನಿಗಳು ಬರೆದಿರುವ ಗ್ರಂಥಗಳು ಧಾರಾಳ ಇವೆ. ಅಗ್ನಿಪುರಾಣ ಮತ್ತು ಬೃಹತ್ಸಂಹಿತೆಯಲ್ಲಿ ವೃಕ್ಷಾಯುರ್ವೇದದ ಅಮುಲ್ಯ ವಿವರಗಳಿವೆ. ಮಾನಸಾರ, ಕಶ್ಯಪ ಶಿಲ್ಪಂ, ಪ್ರತಿಮಾಲಕ್ಷಣ, ಮಯಮಿತಂ, ಸಮರಾಂಗಣ ಸೂತ್ರಧಾರ ಇವೆಲ್ಲ ಬಗೆಬಗೆಯ ಕಟ್ಟಡಗಳು, ದೇವಸ್ಥಾನಗಳು, ಗ್ರಾಮ ಮತ್ತು ನಗರಗಳ ವಿನ್ಯಾಸಗಳ ತಾಂತ್ರಿಕತೆ ಮತ್ತು ಶಿಲ್ಪ ವೈಭವವನ್ನು ಕುರಿತು ವಿವರಿಸುತ್ತವೆ. ಅಭಿಲಷಿತಾರ್ಥ ಚಿಂತಾಮಣಿ, ತಿಲಕ ಮಂಜರಿ ಚಿತ್ರಕಲೆಯನ್ನು ತಿಳಿಸುತ್ತವೆ. ಶಾರ್ಙದೇವನ ಸಂಗೀತ ರತ್ನಾಕರ, ದಾಮೋದರನ ಸಂಗೀತ ದರ್ಪಣ, ಹರಪಾಲನ ಸಂಗೀತ ಸುಧಾ ಮೊದಲಾದವು ಸಂಗೀತ ಶಾಸ್ತ್ರದ ಪ್ರಸಿದ್ದ ಗ್ರಂಥಗಳು. ನಾರಾಯಣ ಪಂಡಿತನ ನವರತ್ನಪರೀಕ್ಷಾ ಪ್ರತಿಯೊಂದು ರತ್ನದ ಮೂಲಸ್ಥಾನ, ಅಪ್ಪಟತನ, ಬೆಲೆ, ಬಣ್ಣ ಮೊದಲಾದವನ್ನ ನಿರ್ಧರಿಸಲು ಬೇಕಾದ ಮಾಹಿತಿ ನೀಡುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರವು ಸಮಾಜಶಾಸ್ತ್ರ ಹಾಗು ರಾಜಕೀಯ ಶಾಸ್ತ್ರಗಳನ್ನೊಳಗೊಂಡ ಒಂದು ಮೇರು ಕೃತಿ. ಇವುಗಳ ಜೊತೆಗೆ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಆಗಮಶಾಸ್ತ್ರ, ತಂತ್ರಶಾಸ್ತ್ರ ಮುಂತಾದ ವಿಜ್ಞಾನದ ಬೇರೆ ಬೇರೆ ಕವಲುಗಳಿಗೆ ಸಂಬಂಧಪಟ್ಟ ಗ್ರಂಥಗಳೂ ಸಂಸ್ಕೃತದಲ್ಲಿ ಹೇರಳವಾಗಿವೆ.
ಇಂತಹ ಒಂದು ಸಮೃದ್ಧ ಭಾಷೆ ಇಡೀ ಜಗತ್ತಿಗೇ ಪಸರಿಸಬೇಕಾದದ್ದು ಕೇವಲ ನಿರ್ಧಿಷ್ಟ ಜಾತಿ ಮತ್ತು ವೃತ್ತಿಗೆ ಸೀಮಿತವಾಗಿ ಪೌರೋಹಿತ್ಯ ಮತ್ತು ಪ್ರವಚನಗಳಿಗೆ ಮಾತ್ರ ಮಿತಿಗೊಂಡಿದೆ. ಕೇಂದ್ರ ಸರಕಾರ ಪಾರಂಪರಿಕ ಭಾಷೆ ಎಂಬ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ್ದರೂ ಮೃತಭಾಷೆ ಎಂಬ ಹಣೆಪಟ್ಟಿ ತೆಗೆಯಲು ಸಾಧ್ಯವಾಗಿಲ್ಲ. ಸಂಸ್ಕೃತಕ್ಕೆ ಎರಡನೆ ತವರುಮನೆಯಾದ ಜರ್ಮನಿಯಂತಹ ಪಾಶ್ಚಾತ್ಯ ದೇಶ ಈ ಭಾಷೆಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಿದ್ದರೂ, ಕಂಪ್ಯೂಟರ್‌ಗೆ ಸೂಕ್ತಭಾಷೆ ಎಂಬ ಹೆಗ್ಗಳಿಕೆಯಿದ್ದರೂ ಭಾಷೆಯ ಬಗೆಗಿನ ಅಭಿಮಾನವನ್ನು ನಾವು ಕೇವಲ ಮೌಖಿಕವಾಗಿಯಷ್ಟೇ ವ್ಯಕ್ತಪಡಿಸುತ್ತಿದ್ದೆವೆ.
ಈ ಭಾಷೆಯಲ್ಲಿನ ಸತ್ವ ಜನೋಪಯೋಗಿಯಾಗಬೇಕಾದರೆ ಸರಳ ವಿಧದ ಕಲಿಕೆಯೊಂದಿಗೆ ಸಂಸ್ಕೃತ ಅಧ್ಯಯನ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು. ಭಾಷೆಯ ಸಾಧ್ಯತೆ ವಿಸ್ತರಿಸಬೇಕು. ಸಾಕಷ್ಟು ಉದ್ಯೋಗಾವಕಾಶಗಳು ಹೆಚ್ಚಬೇಕು. ವ್ಯವಹಾರದಲ್ಲಿ ಬಳಕೆಯಾಗದ ಭಾಷೆಗಳಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಕಷ್ಟ. ಹಾಗಾಗಿ ಹೆಚ್ಚು ಹೆಚ್ಚು ವ್ಯವಹಾರದಲ್ಲಿ ಬಳಕೆಯಾಗಬೇಕು. ಯಾವುದೇ ಕ್ಷೇತ್ರದ ಅಧ್ಯಯನಕ್ಕೆ ಸಮರ್ಥವಾದ ಈ ಭಾಷೆಯನ್ನು ಬಳಸಿಕೊಂಡು ಬದುಕಿಗೆ ಬೇಕಾದ ಕ್ಷೇತ್ರವನ್ನು ಆಯ್ದುಕೊಳ್ಳುವ ಅವಕಾಶ ಸೃಷ್ಟಿಯಾಗಬೇಕು.ಸಂಸ್ಕೃತ ಮತ್ತು ಇತರ ವಿಭಾಗಗಳ ಅಂತರ್‌ವಿಷಯ ಅಧ್ಯಯನ ಕ್ರಮ (Inter disciplinary studies) ಸಂಸ್ಕೃತ ಕಲಿಯ ಬೇಕೆಂಬ ವಾತಾವರಣ ಸರಕಾರದಿಂದ ಸೃಷ್ಟಿ, ವೃತ್ತಿಯಾಧಾರಿತ ಉದ್ಯೋಗ ಕೈಗೊಳ್ಳಲು ಸಂಸ್ಕೃತ ಅಧ್ಯಯನ ಮಾಡಿದವರಿಗೆ ಹೆಚ್ಚಿನ ಅವಕಾಶಗಳು, ಭಾಷೆಯ ಬಗೆಗಿನ ಮಡಿವಂತಿಕೆ ದೂರವಾಗಿ ಬಳಸುವವರಿಗೆ ಅನಿರ್ಬಂಧಿತ ಪ್ರೋತ್ಸಾಹ ದೊರೆಯಬೇಕು.
ಸರಳ ಸಂಸ್ಕೃತ ಪ್ರಚಾರ ಮತ್ತು ಬೆಳವಣಿಗೆಗೆ ಸಂಸ್ಕೃತ ಭಾರತಿ ಸಾಕಷ್ಟು ಕೆಲಸ ಮಾಡುತ್ತಿದೆ. ಅದಕ್ಕೆ ಸರಕಾರದ ಹೆಚ್ಚಿನ ಬೆಂಬಲವೂ ದೊರೆಯಬೇಕು. ಹಾಗಾದಾಗ ನಮ್ಮ ದೃಷ್ಟಿಕೋನ ಬದಲಿಸಬಲ್ಲ ಅಪೂರ್ವ ಶಕ್ತಿಯಿರುವ, ಯೋಚನೆ, ಭಾವನೆ, ಹೃದಯ, ಮನಸ್ಸು ಎಲ್ಲ ಒಂದಾಗಲಿ ಎಂಬ ಆಶಯವಿರುವ ಸಂಸ್ಕೃತ ಭಾಷೆಯ ಪುನರುತ್ಥಾನವಾಗಿ ಜಗತ್ತು ಲವಲವಿಕೆಯಿಂದ ಕೂಡಿದ ಒಂದು ಹಕ್ಕಿಯ ಗೂಡಾಗುವುದರಲ್ಲಿ ಸಂಶಯವಿಲ್ಲ.
----ಶುಭಂ ಭವತು----
ಮಂಜುನಾಥ ಭಟ್, ಕುಕ್ಕೆಸುಬ್ರಹ್ಮಣ್ಯ
5 ಕಾಮೆಂಟ್‌ಗಳು:
ಸಾರ್,
ನಾನು ಸಂಸ್ಕೃತದ ಬಗ್ಗೆ ತಿಳಿದಿದ್ದೆ. ಆದರೆ ನೀವು ಕೊಟ್ಟ ಮಾಹಿತಿ ಆಳವಾಗಿದೆ. ನನಗೆ ಹೊಸದಾಗಿ ಕೆಲವು ವಿಚಾರಗಳು ತಿಳಿದಂತಾಯಿತು. ಇಂತಹ ಮಹತ್ತರ ಮಾಹಿತಿ ಕೊಟ್ಟ ನಿಮಗೆ ಥ್ಯಾಂಕ್ಸ್. ಹೀಗೆ ಬರೆಯುತ್ತಿರಿ.
ಆಹಾಂ ನನ್ನ ಎರಡು ಬ್ಲಾಗಿಗೊಮ್ಮೆ ಬಿಡುವು ಮಾಡಿಕೊಂಡು ಬನ್ನಿ. ಅಲ್ಲಿ ಹೊಸದಾದ ವಿಚಾರಗಳು ಮತ್ತು ಫೋಟೋಗಳಿವೆ. ನಿಮಗಿಷ್ಟವಾಗಬಹುದು.
ಮಂಜುನಾಥ ಭಟ್ ಅಭಿಪ್ರಾಯ ಒಪ್ಪತಕ್ಕದ್ದೇ. ಹಾಗೇ ಸಂಸ್ಕೃತವನ್ನು ಬಲ್ಲವರ ಎದುರು ಯಾರಾದರೂ ಉತ್ಸಾಹಿಗಳು ತಪ್ಪಾಗಿ ಉಚ್ಹರಿಸಿದರೆ ಅವರು ಯಾಕಾಗಿ ಮಾತನಾಡಿದೆವೋ ಎಂಬಂತೆ ಬಲ್ಲವರು ವರ್ತಿಸುವುದೂ ಉಂಟು. ಇಂಥ ಸೀಮಿತ ಪಂಡಿತರ ಬಾಯಲ್ಲಿಯಷ್ಟೇ ಆ ಭಾಷೆ ಇರುವುದು. ಬಹುಶ ಯಾರಿಗೂ ಅರ್ಥವಾಗದ ಕಾರಣವೋ ಏನೋ ಬೈಗುಳಕ್ಕೆ ಸಂಸ್ಕೃತ ಮಾತಾಡ್ತೀಯಾ ಎಂದು ಹೇಳುತ್ತಿರುವುದು ಕ್ರೂರ ವ್ಯಂಗ್ಯ. ಹೇಗೆಂದರೆ ಬಿದ್ದವನ ಮೇಲೊಂದು ಗುದ್ದು ಕೊಟ್ಟಂತೆ..
ಅಭಿನಮನಾನಿ ಮಂಜುನಾಥ ಮಹೋದಯ,
ಅನ್ಯದೇಶೇಷು ಅಸ್ಯಾಃ ಭಾಷಾಯಾಃ ಮಹತೀಂ ಜನಾಃ ಜಾನಂತಃ ಅಧ್ಯಯನಸ್ಯ ಅನಿವಾರ್ಯತಾಂ ಪ್ರಕಲ್ಪಿತವಂತಃ |ಅಸ್ಮಾಕಂ ದೇಶೇ ತು ಅನ್ಯಸ್ಯ ಭಾರ್ಯಾ ರೂಪವತೀ ಗುಣವತೀ ಚ ಇತಿ ಭಾವಃ | ಕಿಂ ಕರವಾಮ !!?
ಇಂಥ ಲೇಖನಗಳು ಬೇಕು.
ಶಾಲೆಯಲ್ಲಿ ಕಲಿಸಬೇಕು.
ಪ್ರಯೋಜನವಿಲ್ಲದ್ದು ಎಂಬ ಭಾವ ಕೊನೆಗೊಳ್ಳಬೇಕು.
ಕಲಿಯೋ ಆಸೆ ನಂಗೂ ಇದೆ. ಕಲ್ಸೋರ್ಯಾರು?
ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ತಾವು ಒಪ್ಪಿಗೆ ಕೊಟ್ಟರೆ ಕೆಲವು ವಿಷಯ ಕಾಪಿ ಮಾಡುತ್ತೇವೆ
ಕಾಮೆಂಟ್ ಪೋಸ್ಟ್ ಮಾಡಿ