14 ಆಗಸ್ಟ್ 2008

ಮಾನವೇ ಇವರು ದಾನವರೇ...



ಭಾವನೆಗಳಿಗೆ ಅಕ್ಷರ ರೂಪ ಕೊಡಲು ಅನೇಕ ದಿನಗಳಿಂದ ಸಾಧ್ಯವಾಗಿರಲಿಲ್ಲ.ಪ್ರತಿ ದಿನ ಒಂದಿಲ್ಲೊಂದು ಸುದ್ದಿಯ ಸುತ್ತ ತಿರುಗುತ್ತಲೆ ಇರುವಾಗ ಗಣಕಯಂತ್ರ ಮುಂದೆ ಕುಳಿತುಕೊಳ್ಳುವಾಗ ಸಮಯದ "ಗಣಕ" ಆರಂಭವಾಗುತ್ತದೆ.ಗಡಿಯಾರದ ಮುಳ್ಳು 12ಕ್ಕೆ ಬಂದ ಬಳಿಕವೇ ಹಾಸಿಗೆ ತೆರೆದುಕೊಳ್ಳುತ್ತದೆ. ಅನುದಿನದ ಎಲ್ಲಾ ಘಟನೆಗಳ ನಡುವೆ ಇದೊಂದು ಸಂಗತಿ ಮನಸ್ಸಿನೊಳಗೆ ಒಂದು ಸಂಚಲನವನ್ನು ಮೂಡಿಸಿದೆ.ಅಷ್ಟುಕ್ಕೂ ಅದು ಮಾನವರ ದಾನವ ಗುಣದ ಕತೆ. ಮೂಕ ಪ್ರಾಣಿಯ ನೋವಿನ ದುರಂತ ವೇದನೆ.

ನನಗೊಂದು ಪ್ರಶ್ನೆಗೆ ಯಾವಗಲೂ ಉತ್ತರ ಸಿಗುತ್ತಲೆ ಇಲ್ಲ. ಮನುಷ್ಯ ಯಾಕೆ ಇಷ್ಟು ಸ್ವಾರ್ಥಿ?.ಆತನಿಗೆ ಇನ್ನೊಬ್ಬನ ವೇದನೆ ,ಇನ್ನೊಂದು ಪ್ರಾಣಿಯ ವೇದನೆ ಅರ್ಥವಾಗೊಲ್ಲ?. ಅರ್ಥವಾಗುತ್ತಿದ್ದರೆ ಆತ ನಡೆದುಕೊಳ್ಳುವ ,ವರ್ತಿಸುವ ರೀತಿ ಇದಾ?.ಅದಕ್ಕೆ ನಾನು ಉದಾಹರಣೆಯನ್ನು ಕೊಡುತ್ತಾ ಮತ್ತೆ ಅದನ್ನೇ ನೆನಪಿಸಿಕೊಳ್ಳುವುದರ ಬದಲು ಒಂದು ಪ್ರಾಣಿಯ ಕತೆಯನ್ನು ವಿವರಿಸುತ್ತೇನೆ. ಇದನ್ನು ಧಾರ್ಮಿಕವಾಗಿ ಹೇಳುವುದಾದರೆ "ಗೋವು". ಸಾಮಾನ್ಯವಾಗಿ ಹೇಳುವುದಾದರೆ ದನ. ಅದರಾಚೆಗೆ ನೋಡುವುದಾದರೆ ಒಂದು ಮುಗ್ದ ಪ್ರಾಣಿ. ಆದರೆ ಅದು ರಸ್ತೆ ಬದಿಯಲ್ಲಿ ಕುತ್ತಿಗೆ ಮತ್ತು ಕಾಲನ್ನು ಬಳ್ಳಿಯಿಂದ ಬಿಗಿದು ಬಿದ್ದಿರುವ ಸ್ಥಿತಿಯಲ್ಲಿತ್ತು. ಅದಾಗಲೆ ಅಸು ನೀಗಿತ್ತು. ಆ ಪ್ರಕರಣ ಹಿಂದೆ ಹೋದಂತೆ ವಿವಿಧ ಸತ್ಯಗಳು ಹೊರಬರುತ್ತದೆ. ಈಗ ದನಕಳ್ಳರ ಸಂಖ್ಯೆ ಹೆಚ್ಚಿದೆ.ಅದಕ್ಕೆ ಕಾರಣಗಳು ಹಲವಾರು. ಅಂದು ಕೂಡಾ ಆ ದನವನ್ನು ಮನೆಯೊಂದರ ಹಟ್ಟಿಯಿಂದ ರಾತ್ರಿ ವೇಳೆ ಕಳ್ಳತನ ಮಾಡಲಾಗಿತ್ತು. ಆದರೆ ಕೆಲ ತರುಣರು ಇತ್ತೀಚೆಗೆ ಕೆಲ ಸ್ಥಳಗಳಲ್ಲಿ ದನ ಕದ್ದು ಸಾಗಿಸುವವರನ್ನು ಹಿಡಿಯಲೆಂದು ತಂಡಗಳನ್ನು ರಚಿಸಿಕೊಂಡಿರುತ್ತಾರೆ.ಅಂತಹ ತಂಡವೊಂದಕ್ಕೆ ಈ ಕಳ್ಳತನಗೈದು ಸಾಗಾಟ ಮಾಡುತ್ತಿದ್ದ ವಾಹನ ಕಣ್ಣಿಗೆ ಬಿತ್ತು.ಕೂಡಲೇ ಓಡಿಸಿಕೊಂಡು ಹೋದಾಗ ಸುಮಾರು 20 - 30 ಕಿಮಿ ದೂರದಲ್ಲಿ ದನವನ್ನು ವಾಹನದಿಂದ ಹೊರಗೆ ಎಸೆದು ಕಳ್ಳರು ಪರಾರಿಯಾದರು. ದನ ಸ್ಥಳದಲ್ಲೇ ಅಸು ನೀಗಿತ್ತು. ಅದು ವಾಹನದಲ್ಲೆ ಅಂತಹ ಸ್ಥಿತಿಯಲ್ಲಿತ್ತಾ ಅಥವಾ ಎಸೆಯುವಾಗ ಆ ಸ್ಥಿತಿಗೆ ಬಂದಿತ್ತಾ ಗೊತ್ತಿಲ್ಲ. ಆದರೆ ಒಂದು ಹಿಂಸಾತ್ಮಕ ರೂಪದಲ್ಲಿ ಆ ದನದ ಜೀವ ಕೊನೆಗೊಂಡಿತ್ತು. ಅದಕ್ಕೆ ಸಾಯುವುದಕ್ಕೂ ನೆಮ್ಮದಿಯನ್ನು ಕೊಡಲಿಲ್ಲ.

ಮನುಷ್ಯ ನೋಡಿ ಎಷ್ಟು ಕ್ರೂರಿ. ಹಿಂಸೆಯನ್ನು ತಡೆದುಕೊಂಡ ದನ ಹೇಗೆ ಇದ್ದಿರಬಹುದು?. ಮನುಷ್ಯನಿಗೆ ಒಂದು ಉಗುರು ತುಂಡಾದರೆ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಹಾಗೆಯೇ ದನವೂ ಒಂದು ಪ್ರಾಣಿಯಲ್ವಾ?. ಆ ದನ ಹಾಗೆ ಸಾಯುವುದಕ್ಕೆ ಯಾರು ಕಾರಣರು? ಓಡಿಸಿಕೊಂಡು ಹೋದ ತರುಣರೇ? ಅಥವಾ ದಾನವ ಗುಣದ ಮಾನವರೇ?. ಈ ಬಗ್ಗೆ ವಿಶ್ಲೇಷಣೆಯು ನನಗೆ ಅಗತ್ಯವಿಲ್ಲ ಮತ್ತು ನನಗೆ ಸಂಬಂಧಿಸಿದ್ದಲ್ಲ ಎಂದು ಅಂದು ಕೊಂಡ ಕಾರಣ , ಅಲ್ಲಿ ನನಗೆ ಅನ್ನಿಸಿದ್ದು ನಮ್ಮಂತೆ ಅದಕ್ಕೂ ಜೀವವಿದೆ , ಅದಕ್ಕೂ ಬದುಕುವ ಸ್ವಾತಂತ್ರ್ಯವಿದೆ. ಹಾಗಾಗಿ ಆ ಸ್ವಾತಂತ್ರ್ಯವನ್ನು ನಾವು ಕಸಿದುಕೊಳ್ಳುವುದು ತರವಲ್ಲ. ಸಾವು ಬರುದಾದರೆ ನೆಮ್ಮದಿ ಸಾವು ಬರಲಿ ಎಂದು ಮನುಷ್ಯರಿಗಿರುವಂತೆ ಪ್ರಾಣಿಗೂ ಇರಬಹುದಲ್ವಾ?.

1 ಕಾಮೆಂಟ್‌:

ಬಾನಾಡಿ ಹೇಳಿದರು...

ಅತ್ಯಂತ ಅಮಾನವೀಯ ಕೃತ್ಯ ಇದು. ಒಂದು ಚಿತ್ರ ಸಾವಿರ ಪದಗಳಿಗಿಂತಲು ಹೆಚ್ಚೆನ್ನುವುದನ್ನು ಈ ಫೊಟೋ ತೋರಿಸುತ್ತದೆ. ಮನುಷ್ಯ ಪಶುವಾಗುತ್ತಿದ್ದಾನೆ. ಛೇ.