14 ಆಗಸ್ಟ್ 2008
ಮಳೆ .... ಹಾನಿ.... ನೋವು....
ಮಳೆಯೇ ಏನು ನಿನ್ನ ಲೀಲೆ?.
ಬಡವರ ಮೇಲೂ ನಿನಗೆ ಕರುಣೆಯಿಲ್ಲವೇ..?? ಅಂತ ಪ್ರಶ್ನಿಸಿಬಿಡಬೇಕು ಎಂದು ನನ್ನ ಮಿತ್ರ ಅತ್ಯಂತ ಆವೇಶಭರಿತನಾಗಿ ಹೇಳುತ್ತಾ , ದೇವರಿದ್ದಾರಾ.. ಅವನಿದ್ದರೆ ಹೇಗೆ ಮಾಡುತ್ತಿದ್ದನಾ ..... ಅಂತ ಮಿತ್ರ ನನ್ನ ತಲೆ ತಿನ್ನುತ್ತಲೆ ಇದ್ದ. ಆತ ಹಾಗೆ ಕೇಳುವುದಕ್ಕೂ ಕಾರಣವಿತ್ತು. ಆ ಘಟನೆ ನೋಡಿದ ಯಾರಾದರೂ ವಿಷಾದಿಸದೇ ಇರಲಾರರು. ಚಿತ್ರದಲ್ಲಿ ನೋಡಿದಾಗ ಇದೇನು ಅಂತ ನಾವೆಲ್ಲಾ ಕೇಳಿದರೂ ಅಚ್ಚರಿಯಿಲ್ಲ. ಆದರೆ ಅಲ್ಲಿನ ನಿಜ ಸಂಗತಿ ಮಾತ್ರಾ ಭಯಾನಕ.
ಆ ಘಟನೆಯನ್ನು ವಿವರಿಸುತ್ತಾ ಸಾಗುವುದಾದರೆ ..., ಬೆಳ್ತಂಗಡಿಯ ನೆರಿಯ ಸಮೀಪದ ಇಟ್ಯಡ್ಕದಲ್ಲಿ ಸಂಭವಿಸಿದ ಭಾರೀ ಕುಸಿತದಿಂದ ಇಲ್ಲಿನ ಕೃಷಿಕ ಜನಾರ್ಧನ ಶೆಟ್ಟಿಯವರಿಗೆ ಈಗ ಉಳಿದಿರುವುದು ಕೇವಲ ಒಂದು ತೆಂಗಿನ ಮರ ಮಾತ್ರಾ.ಉಳಿದೆಲ್ಲವೂ ಮಣ್ಣಿನಿಂದ ಆವೃತವಾದ ಅತ್ಯಂತ ದುರಂತದ ಸಂಗತಿ.
ಇಟ್ಯಡ್ಕದ ಜನತೆಗೆ ರಾತ್ರಿ ಬೆಳಗಾಗುವುದರಲ್ಲಿ ಅಲ್ಲೋಲಕಲ್ಲೋಲವಾದ ಅನುಭವ.ಸಂಜೆಯವರೆಗೆ ನಡೆದಾಡಿದ ತೋಟ ಮರುದಿನ ಮುಂಜಾನೆ ನೋಡುತ್ತಿರುವಾಗ ಎಲ್ಲವೂ ಮಾಯ.ಅಲ್ಲಿ ಮಣ್ಣಿನ ರಾಶಿ ಮಾತ್ರ ಕಂಡುಬಂದಿತ್ತು.ರಾತ್ರಿ ಸುಮಾರು 12 ರಿಂದ 1 ಗಂಟೆಯ ಸುಮಾರಿಗೆ ಭಾರೀ ಸದ್ದು ನಂತರದ 10 ನಿಮಿಷದಲ್ಲಿ ಎಲ್ಲವೂ ನಡೆದು ಬಿಟ್ಟಿದೆ.ಹಲವರ ತೋಟಗಳು ಇಲ್ಲವಾಯಿತು.ಅಲ್ಲಿನ ನಿವಾಸಿ ಜನಾರ್ಧನ ಶೆಟ್ಟಿಯವರಿಗೆ 1.8 ಎಕ್ರೆ ಅಡಿಕೆ ತೋಟದ ಕೃಷಿ. ಆದರೆ ಈ ಕುಸಿತದಿಂದಾಗಿ ಈಗ ಉಳಿದಿರುವುದು ಕೇವಲ ಒಂದು ತೆಂಗಿನ ಮರ ಮತ್ತು ಮನೆ ಮಾತ್ರಾ.ಉಳಿದ ಎಲ್ಲಾ ಅಡಿಕೆ ತೋಟ, ಕೃಷಿಯೆಲ್ಲವೂ ಇಲ್ಲವಾಗಿದೆ.ಅವರ ದನ ಹಾಗೂ ಎಮ್ಮೆಯನ್ನು ಅತ್ಯಂತ ಕಷ್ಟದಿಂದ ರಕ್ಷಿಸಿದ್ದಾರೆ.ಹಟ್ಟಿ ಇತ್ಯಾದಿ ಎಲ್ಲವೂ ನಾಪತ್ತೆಯಾಗಿದೆ. ಇದಲ್ಲದೆ ಅವರೊಬ್ಬ ಕೂಲಿ ಕಾರ್ಮಿಕ. ಈಗ ಮುಂದಿನ ಬದುಕಿನ ಬಗ್ಗೆ ಅವರಿಗೆ ಚಿಂತೆ ಶುರುವಾಗಿದೆ.
ಇದು ಕೇವಲ ಒಬ್ಬರ ಕತೆಯಲ್ಲ.ಇಲ್ಲಿನ ಹಲವಾರು ಕೃಷಿಕರ ಅಡಿಕೆ ತೋಟಗಳು ಗುಡ್ಡ ಕುಸಿದದಿಂದಾಗಿ ನೀರಿನೊಂದಿಗೆ ಮಣ್ಣು ಕೂಡಾ ಮಿಶ್ರವಾಗಿ ತೋಟದೊಳಕ್ಕೆ ಹರಿದುಬರುತ್ತಿರುವ ಕಾರಣ ತೋಟಗಳೆಲ್ಲವೂ ಮಣ್ಣಿನಿಂದ ಆವೃತವಾಗುತ್ತಿದೆ.ಹೀಗಾಗಿ ಆ ತೋಟಗಳೂ ನಾಶದ ಭೀತಿಯಲ್ಲಿದೆ. ಈ ಘಟನೆಯನ್ನು ನೋಡಿದಾಗಿನ ಅನುಭವ ಅತ್ಯಂತ ದಿಗ್ಭ್ರಮೆ ಮೂಡಿಸುತ್ತದೆ.
ಇಲ್ಲಿ ನೋಡಿ.ಈ ಘಟನೆಯನ್ನು ನೋಡಲು ಬಂದ ಅಷ್ಟೂ ಜನ ಸಂತ್ರಸ್ತ ಜನರಿಗೆ ಸಮಾಧಾನ ಹೇಳುವುದರ ಬದಲು ಅಬ್ಬಾ ನೀವು ಬದುಕಿದ್ದೇ ಪುಣ್ಯ.. ನಿಮ್ಮ ತೋಟವೆಲ್ಲಾ ಹೋಯಿತಲ್ಲಾ ... ಎಷ್ಟು ಕಷ್ಟ ಪಟ್ಟು ಕೃಷಿ ಮಾಡಿದ್ದೀರಲ್ಲಾ... ಇಂತಹ ಮಾತುಗಳು ಅಲ್ಲಿ ಹರಿಯುತ್ತಲೆ ಇತ್ತು. ಜನ ಯಾವ ರೀತಿ ಯೋಚಿಸುತ್ತಾರಲ್ಲಾ..?.
ಕೊನೆಗೆ ನಾನು ಕೂಡಾ. ಯಾಕೆಂದ್ರೆ ನಮ್ಮಲ್ಲಿ ಆ ವ್ಯಕ್ತಿ ಮಾತನಾಡುತ್ತಾ ನನಗೆ ಕೃಷಿ ಎಂದರೆ ಇನ್ನು ಒಂದು ತೆಂಗಿನ ಮರ ಮಾತ್ರಾ ಅಂತ ಅಳುತ್ತಾ ಹೇಳಿದರು. ಆದರೆ ಆಗ ನಾನು ಮೈಕ್ ಅವರಿಗೆ ಹಿಡಿದಿರಲಿಲ್ಲ. ಅದೇ ಮಾತನ್ನು ಮತ್ತೆ ಕ್ಯಾಮರಾ ಮುಂದೆ ಹೇಳಿಸಿದೆ. ಅವರ ನೋವನ್ನು ಮತ್ತೆ ನೆನಪಿಸಿದೆ. ನಾನು ಕೂಡಾ ಅವರಿಗೆ ಮಾನಸಿಕವಾದ ನೋವನ್ನು ನೀಡಿರಬಹುದು. ಅದಕ್ಕೆ ನಾನು ವಿಷಾದಿಸಬೇಕಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ