26 ಆಗಸ್ಟ್ 2008
ಇದು epsilon....
ಇದೊಂದು ತರದ ವಾದ ಎನ್ನಬಹುದೋ ಅಥವಾ ನವೋಲ್ಲಾಸದ ಕಿಡಿ ಅನ್ನಬಹುದೋ ಅಂತ ಗೊತ್ತಿಲ್ಲ.ಅಂತೂ ನನಗೆ ಇಷ್ಟವಾದ ನಾಲ್ಕು ವಾಕ್ಯಗಳು.
ನಾವು ಒಂದು ತೂಗುಸೇತುವೆಯ ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದ ಸಂದರ್ಭ. ತೂಗು ಸೇತುವೆಗಳು ದೂರದ ನಗರದಲ್ಲಿ ನಿಂತು ನೋಡಿದರೆ ಅದೊಂದು ಸಾಮಾನ್ಯವಾದ ವ್ಯವಸ್ಥೆ. ಆದರೆ ಅದರ ಒಳಗೆ ಹೋದಾಗಲೇ ಅಲ್ಲಿನ ಸಮಸ್ಯೆಯ ಆಳ ... ಅಗಾಧತೆ ಅರಿವಾಗುವುದು. ಒಂದು ತೂಗು ಸೇತುವೆ ಏನನ್ನೆಲ್ಲಾ ಮಾಡಬಹುದು? ಕಲ್ಪಿಸಲೂ ಅಸಾಧ್ಯ!. ತುಂಬಾ ಅಗಲವಾದ ನದಿ , ಅದರಾಚೆಗೆ ಹತ್ತಾರು ಮನೆಗಳು. ಮಳೆಗಾಲದ ಅವಧಿಯಲ್ಲಿ ಅಲ್ಲಿನ ಜನ ದಡ ಸೆರುವುದು ಹೇಗೆ?. ನಗರದಿಂದ ಕೂಳನ್ನು ತರುವುದು ಹೇಗೆ? ನಗರಕ್ಕೆ ತಾವು ಬೆಳೆದ ಉತ್ಪನ್ನಗಳನ್ನು ತಲಪಿಸುವುದು ಹೇಗೆ?. ಸರಕಾರಗಳು ತುಂಬಾ ಅಗಲವಾದ ನದಿಗಳಿಗೆ ಸೇತುವೆಯನ್ನು ರಚಿಸುವುದು ಕಷ್ಟದ ಮಾತು ಮತ್ತು ಅದು ಅಷ್ಟೊಂದು ಸುಲಭದಲ್ಲಿ ಆಗುವ ಮಾತೂ ಅಲ್ಲ.ಅಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ಹಳ್ಳಿಗರಿಗೆ ವರದಾನವಾಗಿಯೇ ಕಾಣುತ್ತದೆ ಮತ್ತು ಅದು ಹೌದು ಕೂಡಾ. ಅಂತಹ ತೂಗು ಸೇತುವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ , ನಿರ್ಮಿಸಿದ ಗಿರೀಶ್ ಭಾರಧ್ವಾಜರ ಭೇಟಿಗೆ ಹೋಗಿದ್ದೆವು. ನಮ್ಮೆಲ್ಲಾ ಕಾರ್ಯ ಮುಗಿದ ಬಳಿಕ ಕಾರಿನ ಬಳಿ ಸಾಗುವ ವೇಳೆ ಅಲ್ಲಿ ಅವರ ಕಾರಿನ ಹಿಂದೆ ಒಂದು ವಾಕ್ಯ ಕಂಡಿತು . ಅದು" epsilon.."
ಆ ಬಗ್ಗೆ ಏನು ಅಂತ ಕೇಳಿದಾಗ ಅವರು ವಿವರಿಸಿದ್ದು ಹೀಗೆ ,
"ನವಗಣಿತದಲ್ಲೊಂದು ಮೂಲಕಲ್ಪನೆಯಲ್ಲಿ ಮಧುರ ಭಾವ ಎಷ್ಟೇ ಕಿರಿದಾದರೂ ಶೂನ್ಯವಲ್ಲವಂತೆ ಇದೆಂದು ಕೋವಿದದು ನುತಿಪರು ಈ ಪುಣ್ಯ ಧನವ
ನಮ್ಮ ಕಲ್ಪನೆಗೂ ಸಿಲುಕಿದಷ್ಟು ಸಣ್ಣದಹುದಂತೆ ಆದರೂ ಅದು ಶೂನ್ಯವಲ್ಲವಂತೆ ಈ ಮಹಾಪ್ರಜ್ಞೆಯ ಆಶ್ರಯದಲ್ಲಿರುವ ನಾನು ಶೂನ್ಯವಾಗುವ ತನಕ epsilon.."
ಈ ನಾಲ್ಕು ಸಾಲಿನ ಒಳಗಿನ ಅರ್ಥ ಎಷ್ಟು ಅಗಾಧ. ನಾವು "ಶೂನ್ಯ"ವಾಗುವ ತನಕ ಎನ್ನುವ ಮಾತೇ ಒಂದು ಅಗಾಧತೆಯನ್ನು ಉಂಟುಮಾಡುತ್ತದೆ. ನಾವೆಷ್ಟೇ ದೊಡ್ಡವರಾಗಲಿ, ಹಣ ಸಂಪಾದಿಸುವವರಾಗಲಿ ನಮ್ಮಲ್ಲಿ "ಅಹಂ" ನಲಿದಾಡಿದರೆ ಅದುವೇ ದೊಡ್ಡದಾದ ಶಾಪ ನಮಗೆ. ನಾನು ಎಷ್ಟೋ ಜನರನ್ನು ವೀಕ್ಷಿಸಿದಂತೆ ಜನ ಒಂದು ಹಂತದವರೆಗೆ "ಸಾಮಾನ್ಯರಂತೆ" ,ಕೊಂಚ ಸ್ಥಾನ ಮಾನ ದೊರಕಿದ ಬಳಿಕ ನಾನೇ "ರಾಜ" ಎಂಬ ಭಾವದಲ್ಲಿ ಮೆರೆಯುತ್ತಾರೆ. ಆರಂಭದಲ್ಲಿ ಹತ್ತಾರು ಬಾರಿ ಫೋನ್ ಮಾಡುತ್ತಿದ್ದವ ಮತ್ತೆ ತಿಂಗಳಿಗೊಮ್ಮೆಗೆ ತಲಪುತ್ತದೆ ಇನ್ನೊಮ್ಮೆ ಮರೆತೇ ಹೋಗಿರುತ್ತದೆ.ಅದಕ್ಕೆ ಕಾರಣ "ಬ್ಯುಸಿ". ಇದೆಲ್ಲವೂ ಮನುಷ್ಯನ ಗುಣ.
ಇಂತಹ ಸಂದರ್ಭದಲ್ಲಿ ಗಿರೀಶರ ಕಾರಿನಲ್ಲಿದ್ದ ಆ ವಾಕ್ಯ ನನಗೆ ಇಷ್ಟವಾಯಿತು.
ನನಗೂ epsilon ಅರ್ಥದಲ್ಲೇ ಬದುಕಬೇಕು ಎಂಬ ಕಲ್ಪನೆಯಿದೆ.ಆದರೆ ನಾನೂ ಮನುಷ್ಯನಲ್ಲವ್ವೇ ಒಮ್ಮೆಮ್ಮೆ "ಹಾಗೂ" ಆಗಿಬಿಡಬಹುದು, "ಹೀಗೂ" ಆಗಬಹುದು. ಆದರೆ ಉದ್ದೇಶ "ಅಹಂ" ಇಲ್ಲದ ಬದುಕು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ