19 ಆಗಸ್ಟ್ 2008
ತೀರ್ಥಯಾತ್ರೆಯ ಹಾದಿಯಲ್ಲಿ ದೇವೇ ಗೌಡ...
ದೇವೇ ಗೌಡರು ರಾಜಕೀಯ ಚಾಣಾಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ.ಅವರು ಪರಿಸ್ಥಿತಿಯನ್ನು ಹೇಗೆ ಬೇಕಾದರೂ ನಿಭಾಯಿಸಬಲ್ಲರು. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ನಿದ್ದೆ ತೂಗುವಂತೆ ಮಾಡಿ ಎದುರಾಳಿಯನ್ನು ಕೆಡವಿ ಹಾಕಬಲ್ಲರು. ಅವರ ರಾಜಕೀಯ ಸಹವರ್ತಿ ರಾಮಕೃಷ್ಣ ಹೆಗಡೆಯವರಿಗೇ ತಿರುಗಿ ಮೆಟ್ಟಿಲ್ಲಲೇ?. ಈಗ ವಿಷಯ ಅದಲ್ಲ. ಅವರು ಕುಟುಂಬಿಕರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಹಾಗೆ ಬಂದವರು ದೇವಳದಲ್ಲಿ ಪೂಜೆಯನ್ನು ಸಲ್ಲಿಸಿ ದ್ರಾಕ್ಷೆಯಲ್ಲಿ ತುಲಾಭಾರವನ್ನೂ ಮಾಡಿಸಿದರು. ಆಗ ಚಿತ್ರ ತೆಗೆಯಲೂ ದೇವೇ ಗೌಡರ ಪರಮ ಪುತ್ರ ರೇವಣ್ಣ ಬಿಟ್ಟಿರಲೇ ಇಲ್ಲ.ಮಿತ್ರ ಅವರ ವಿರೋಧದ ನಡುವೆಯೂ ಒಮ್ಮೆ ಕ್ಲಿಕ್ಕಿಸಿದ್ದಾರೆ. ಆ ಚಿತ್ರವೂ ಇಲ್ಲಿದೆ. ಆ ಬಗ್ಗೆ ಅನುಭವವ ಇಲ್ಲಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರದಾನಿ ದೇವೇ ಗೌಡ ಹಾಗೂ ಅವರ ಪುತ್ರ ರೇವಣ್ಣ ಮತ್ತವರ ಕುಟುಂಬ ವರ್ಗವು ಆಗಮಿಸಿದ ವೇಳೆ ವಿಶೇಷವಾಗಿ ತುಲಾಭಾರ ಸೇವೆಯನ್ನು ನಡೆಸಿದರು.ದಿನ ಮುಂದಾಗಿಯೇ ಆಗಮಿಸಿದ್ದ ಅವರ ಕುಟುಂಬವು ಅಲ್ಲೇ ವಸತಿಯನ್ನು ಮಾಡಿತ್ತು. ನಮಗೂ ಅವರು ಬರುತ್ತಿರುವ ವಿಚಾರ ಮಧ್ಯಾಹ್ನದ ವೇಳೆಗೆ ತಿಳಿದಿತ್ತು. ಹಾಗಾಗಿ ಸಂಜೆ ವೇಳೆಗೆ ಸುಬ್ರಹ್ಮಣ್ಯಕ್ಕೆ ನಮ್ಮ ತಂಡ ಪಯಣ ಬೆಳೆಸಿತ್ತು. ನಮಗೂ ರೂಂ ವ್ಯವಸ್ಥೆ ಆಗಿತ್ತು.ನನ್ನ ಮನೆ ಸಮೀಪದಲ್ಲೇ ಇದ್ದರೂ ಮಿತ್ರರೊಂದಿಗೆ ಕುಕ್ಕೆ ಯಲ್ಲಿ ವಸತಿ. ಸರಿ ಮುಂಜಾನೆ ದೇವೇ ಗೌಡ್ರ ದರ್ಶನವಾಯಿತು. ಆಗಲೇ ದೂರವಾಣಿಗೆ ಮಿತ್ರರೊಬ್ಬರ ಸೂಚನೆ ಬಂತು ಇವತ್ತು ಯಾವುದೇ ಮಾಧ್ಯಮದವರನ್ನು ಬಿಡುವುದಿಲ್ಲವಂತೆ. ನಾವು ಎಲರ್ಟ್ ಆದೆವು. ಯಾರೂ ದೇವೇಗೌಡ ಮತ್ತವರ ಸೆಕ್ಯುರಿಟಿಯವರ ಬಳಿಗೆ ಹೋಗಲಿಕ್ಕಿಲ್ಲ. ಚಿತ್ರವನ್ನು ತೆಗೆಯುವುದು ಗ್ಯಾರಂಟಿ.ಹಾಗೆಯೇ ಆಯಿತು.ಎಲ್ಲರಿಗೂ ಬೇಕಾದಷ್ಟು ವಿಷುವಲ್ಸ್ ಸಿಕ್ಕಿತು. ಕೊನೆಗೆ ತುಲಾಭಾರದ ಸಮಯ ಬಂತು. ರೇವಣ್ಣ ಬಂದು "ತೆಗಿಬೇಡ್ರಿ ತೆಗಿಬೇಡ್ರಿ" ಅಂತ ಹೇಳುತ್ತಾ ತುಲಾಭಾರದ ಅಡ್ಡವೇ ಬಂದು ನಿಂತರು. ಚಿತ್ರದ ಆಸೆ ಬಿಟ್ಟಾಯಿತು. ಆಗ ಅಲ್ಲೇ ಒಂದು ಕನ್ನಡಿಯಲ್ಲಿ ತುಲಾಭಾರದ ಚಿತ್ರದ ಪ್ರತಿಬಿಂಬ ಕಾಣುತ್ತಿತ್ತು.ನಮ್ಮ ಕ್ಯಾಮಾರಾ ಅತ್ತ ತಿರುಗಿತು. ಆಗಲೂ ಸರಿಯಾಗಿ ಸಿಗುತ್ತಿರಲಿಲ್ಲ.
ನಡುವೆ ಮಿತ್ರ ಒಮ್ಮೆ ಕ್ಲಿಕ್ಕಿಸಿಯೇ ಬಿಟ್ಟ. ಏ ... ಏ...ಅಂತ ಒಳಗಿನಿಂದ ಯಾವನೋ ಒಬ್ಬ ಸೆಕ್ಯುರಿಟಿ ಬಂದ. ಆದರೂ ನಾವು ಕದಲಿಲ್ಲ.ನಂತರ ವಿವಿಧೆಡೆ ಅವರನ್ನು ಬೆಂಬೆತ್ತಿದೆವು. ನಾವು ಚಿತ್ರವನ್ನು ತೆಗೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ಯಾಕೆ ಅಷ್ಟು ಉತ್ಸಾಹ ಬಂತೆಂದರೆ ಅವರು ಚಿತ್ರ ತೆಗೀಬೇಡಿ ಅಂತ ಮಾತ್ರಾ ಹೇಳಿದರೇ ಹೊರತು.ಯಾಕೆ ತೆಗೀಬಾರದು ಅಂತ ಹೇಳಿಲ್ಲ. ಹಾಗಾಗಿ ಒಂದು ಕ್ಯೂರಿಯಾಸಿಟಿ ಬಂತು. ಕೊನೆಗೆ ಊಟವೂ ಆಯಿತು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಗುಮುಖದಿಂದಲೆ ಮಾತನಾಡಿದ ದೇವೇಗೌಡ "ಇದು ಪುಣ್ಯ ಕ್ಷೇತ್ರ ರಾಜಕೀಯವನ್ನು ಇಲ್ಲಿ ಮಾತನಾಡುವುದು ಸರಿಯಲ್ಲ ಎನ್ನುವುದು ನನಗೆ ಗೊತ್ತಿದೆ ಎನ್ನುತ್ತಲೇ ಮಾತು ಆರಂಭಿಸಿದ ಅವರು ದೇವರು ಪರಿಕ್ಷೆಯನ್ನು ಮಾಡುತ್ತಿದ್ದಾನೆ ಕೊನೆಯವರೆಗೂ ತಾಳುವುದೇ ಒಂದು ತಪಸ್ಸು ಆ ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡು ಕೊನೆಗೆ ಸತ್ಯ ಸತ್ಯವಾಗಿಯೇ ಇರುತ್ತದೆ.ಅಸತ್ಯ ಅಸತ್ಯವಾಗಿಯೇ ಇರುತ್ತದೆ ಎಂದರಲ್ಲದೆ ವಿಶ್ವಾಮಿತ್ರ ಋಷಿಗೂ ಸೋಲು ಬಂದಿದೆ. ಆತನೂ ಫೈಲ್ ಆಗಿದ್ದಾನೆ. ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದ ದೇವೇ ಗೌಡ ತನ್ನ ರಾಜಕೀಯ ಚಾಣಾಕ್ಷತನವನ್ನು ಇಲ್ಲೂ ಮೆರೆದರು. ಆಧ್ಯಾತ್ಮ ಸಾಧಕನಂತೆ ವಿವರಿಸಿದರು. ರಾಜಕೀಯ ಸನ್ಯಾಸ ತೆಗೆದುಕೊಂಡವರಂತೆಯೂ ಮಾತನಾಡಿದರು. ಆದರೆ ಅದೆಲ್ಲವೂ ನಿನ್ನೆ ಅವರ ಪಕ್ಷದಿಂದ ವಲಸೆ ಹೋದವರ ಬಗ್ಗೆ ಮಾತನಾಡದಿರಲೆಂದು ಅವರೇ ಏನಾದರೂ ಹೇಳುತ್ತಾ ಕಾರಿನತ್ತ ತೆರಳಿದರು. ಆಗ ಸಮಯವೂ ಮೀರಿತ್ತು.
ಹಾಗೆ ಅವರು ಮಾತನಾಡಿದ ವಿಷಯದ ಸುತ್ತ ನೋಡಿದರೆ ರಾಜಕೀಯದಲ್ಲಿ ಸದ್ಯ ಸೋತಿದ್ದೇನೆ ಎಂದು ಪರೋಕ್ಷವಾಗಿಯೇ ವಿಶ್ವಾಮಿತ್ರನ ಕತೆಯ ಮೂಲಕ ಹೇಳಿದ ದೇವೇಗೌಡ ದೇವರು ಪರಿಕ್ಷೆಯನ್ನು ಮಾಡುತ್ತಿದಾನೆ ಅದನ್ನು ಎದುರಿಸಿ ಮತ್ತೆ ಬರುತ್ತೇನೆ ಎಂತಲೂ ಪರೋಕ್ಷವಾಗಿ ಉತ್ತರಿಸಿದ ಗೌಡರು ಪಕ್ಷ ಸಂಘಟನೆಗಾಗಿ ಮತ್ತೆ ಹೆಚ್ಚುಕಾಲ ಕಳೆಯುತ್ತೇನೆ ಎನ್ನುತ್ತಾ ಕೇವಲ ೨ ಶಾಸಕರಿಂದ ಪಕ್ಷ ಕಟ್ಟಿಲ್ಲವೇ ಎಂದು ನೆನಪಿಸಿಕೊಂಡರು.ಒಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದ ಗೌಡರು ಎಲ್ಲವನ್ನು ಒಗಟಾಗಿ ಆಧ್ಯಾತ್ಮದ ರೀತಿಯಲ್ಲಿ ಹೇಳಿದ್ದು ಸುಬ್ರಹ್ಮಣ್ಯ ಭೇಟಿಯ ಹೈಲೈಟ್ಸ್ ಆಗಿತ್ತು.
ಒಟ್ಟಿನಲ್ಲಿ ದಿನಮುಂದಾಗಿ ಹೋದ ಮನಗೂ ಅಷ್ಟೊಂದು ಒಳ್ಳೆಯ ಸುದ್ದಿಯೂ ಸಿಗಲಿಲ್ಲ ಮಾರಾಯ ಇಡೀ ದಿನ ವೇಷ್ಟ್ ಅಂತ ಮಿತ್ರ ಹೇಳಿದ ನನಗೂ ಹೌದು ಎನಿಸಿತು.
ಇನ್ನೊಂದು ಸುದ್ದಿ - ಈ ತುಲಾಭಾರ ಸೇವೆಯನ್ನು ರೇವಣ್ಣ ಹೇಳಿಕೊಂಡದ್ದಂತೆ.ಯಾಕೆಂದು ಎಲ್ಲರಿಗೂ ಗೊತ್ತು. ರೇವಣ್ಣ ಅವರ ಭಾಷೆಯಲ್ಲೇ ಹೇಳುವುದಾದರೆ " ಏನು ಮಾಡೋಣರೀ ನಮ್ಮ್ ಸರ್ಕಾರ ಇಲ್ವಲ್ಲರೀ... ನಿಮ್ಮ್ ಸಹಕಾರ ಇರ್ಲಿ...ಶಾಸಕ್ರೂ ಆ ಕಡೆ ಈ ಕಡೆ ಹೋಗ್ತಾರ್ರೀ..."
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ