03 ಸೆಪ್ಟೆಂಬರ್ 2015

ಸಂದೇಶ ಕೃಷಿ ಪರವೂ ಇರಲಿ. .



ಪಕ್ಕದ ಮನೆಯಲ್ಲಿ  ಈರುಳ್ಳಿ ದಾಸ್ತಾನು,ತೆರಿಗೆ ಇಲಾಖೆ ಧಾಳಿ. .  ., ಈರುಳ್ಳಿಯೇ ಸ್ಪರ್ಧೆಗೆ ಬಹುಮಾನ. . . , ಈರುಳ್ಳಿ ಮಾಲೆಗೆ ಡಿಮ್ಯಾಂಡ್ . . .. ಹೀಗೇ ವಿವಿಧ ಮೆಸೇಜ್ ನಮಗೆಲ್ಲಾ ಬಂದೇ ಇದೆ. ಮೊನ್ನೆ ಮೊನ್ನೆ ಈರುಳ್ಳಿ ರೇಟ್ ಸಿಕ್ಕಾಪಟ್ಟೆ ಏರಿಕೆಯಾಯಿತು.ಎಲ್ಲರ ಮೊಬೈಲ್‍ಗೂ ಒಂದೊಂದು ಥರದ ಮೆಸೇಜ್, ವಿವಿಧ ಕಾರ್ಟೂನ್. ಎಲ್ಲವೂ ಧಾರಣೆ ಏರಿಕೆಯಾದ ಬಗ್ಗೆಯೇ ಇತ್ತು, ಅದರೊಳಗೆ ಒಂದು ವ್ಯಂಗ್ಯ, ತಮಾಷೆ ಅಷ್ಟೇ. ಆದರೆ ಅದರಾಚೆಗೆ ಸ್ವಲ್ಪ ಇಣುಕಿ. .  ಇದೆಲ್ಲಾ ಗ್ರಾಹಕ ಪರವಾಗಿಯೇ ಇದೆ. ರೈತರ ಪರವಾದ ಒಂದೇ ಒಂದು ಮೆಸೇಜ್ ಇತ್ತಾ. . ?.ನನ್ನೊಳಗೇ ನಾನು ಪ್ರಶ್ನೆ ಮಾಡುತ್ತಾ ಸಾಗಿದಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಈರುಳ್ಳಿ ಧಾರಣೆ ಏರಿಕೆಯಾದಾಗಂತೂ ಕೆಲವರು  ಹೇಳಿದರು , ಖರೀದಿಯೇ ಮಾಡಬೇಡಿ.. ವಿದೇಶದಲ್ಲಿ  ಹೀಗೆಯೇ ಮಾಡಿ ಧಾರಣೆ ಇಳಿಕೆ ಮಾಡಿದ್ದಾರೆ ಎಂದೂ ಹೇಳಿದ್ದರು.ಒಂದು ಕಡೆ  ನಾವು ವಿದೇಶದ ವ್ಯವಸ್ಥೆಯನ್ನು ವಿರೋಧಿಸಿತ್ತೇವೆ, ಮೋದಿ ಸರ್ಕಾರದ ನಡೆಯನ್ನು  , ರಾಜ್ಯ ಸರ್ಕಾರದ ನೀರಿಉನ್ನು ಖಂಡಿಸುತ್ತೇವೆ. ಮತ್ತೊಂದು ಕಡೆ ಅದೇ ವಿದೇಶಿ ನೀತಿ ಜಾರಿ ಮಾಡೋಣ ಅನ್ನುತ್ತೇವೆ.ಒಂದು ಕಡೆ 10 ರೂಪಾಯಿಗೆ 3 ಕೆಜಿ ಟೊಮೊಟೋ ಬೇಕು ಅನ್ನುತ್ತೇವೆ, ಇನ್ನೊಂದು ಕಡೆ ನಾವು ಬೆಳೆಯುವ ಅದ್ಯಾವುದೋ ವಸ್ತುವಿಗೆ ಎಷ್ಟೇ ರೂಪಾಯಿ ಸಿಕ್ಕರೂ ಸಾಲದು ಅನ್ನುತ್ತೇವೆ. ರೈತ ಬದುಕುಬೇಕು, ಬೆಳೆಯಬೇಕು ಅಂತ ಹೇಳುತ್ತೇವೆ , ಈ ಕಡೆ ರೇಟು ಸಿಕ್ಕಾಪಟ್ಟೆ ಅನ್ನುತ್ತೇವೆ. ಹಾಗಿದ್ದರೆ ನಮ್ಮ  ಕಾಳಜಿ ಯಾವುದು ?.

ಮೊನ್ನೆ ಈರುಳ್ಳಿ ರೇಟು ಹೆಚ್ಚಾದಾಗ ಅದನ್ನು  ಬೆಳೆಯುವ ರೈತನಿಗೆ ಇದೆಲ್ಲಾ ದಕ್ಕಿರಲಾರದು , ಆದರೆ ಕೊಂಚ ರೇಟು ಹೆಚ್ಚು ಸಿಕ್ಕಿರಬಹುದು. ಇಲ್ಲಿ ಏನನ್ನೂ ಬೆಳೆಯದ , ಕೇವಲ ಮದ್ಯವರ್ತಿಯಾದ ವ್ಯಕ್ತಿ ಸಾಕಷ್ಟು ಲಾಭ ಮಾಡಿದ್ದಾನೆ. ಇದಕ್ಕೆ ನಾವು ಈರುಳ್ಳಿ ಖರೀದಿ ಮಾಡುವುದಿಲ್ಲ ಎಂದರೆ ರೈತನಿಗೆ ಈ ರೇಟೂ ದಕ್ಕದು. ಆ ಬಳಿಕ ಸರ್ಕಾರವು  ಈ ವಿಚಾರದಲ್ಲಿ ಭಾರೀ ಕ್ರಮಕೈಗೊಂಡಂತೆ ಕಾಣಲಿಲ್ಲ.ಎಲ್ಲೇ ಆದರೂ ಮದ್ಯವರ್ತಿಗಳಿಗೆ ಲಾಭ ಮಾಡುವುದು ಇರುವುದೇ. ಆದರೆ ಅದರಲ್ಲಿ ನೇರ ಮಾರಾಟದ ವ್ಯವಸ್ಥೆ ಬಂದರೆ ಇದೆಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕೀತು, ಅದುವರೆಗೆ ಕಾಯೋಣ.
ಅಂದು ನನಗೂ ಹಾಗೆಯೇ ಆಗಿತ್ತು, ನಾನು ಬಾಳೆಗೊನೆ ಮಾರಾಟ ಮಾಡುತ್ತಿದೆ, ಅದೊಂದು ವ್ಯಾಪಾರಿಗೆ, ಅದೇ ವೇಳೆಗೆ ಖರೀದಿ ಮಾಡಲು ಒಬ್ಬರು ಬಂದರು, ನನ್ನೆದುರೇ ವ್ಯಾಪಾರವೂ ನಡೆಯಿತು. ನನ್ನ  ವಾಹನದಿಂದ ಖರೀದಿ ಮಾಡಿದ ವ್ಯಕ್ತಿಯ ವಾಹನಕ್ಕೇ ನೇರವಾಗಿ ಲೋಡ್ ಮಾಡಲಾಯಿತು. ಕೊನೆಗೆ ಎಲ್ಲಾ ವ್ಯವಹಾರ ಮುಗಿದ ಬಳಿಕ ಮತ್ತೊಂದು ಕಡೆ ಆತ ಸಿಕ್ಕಾಗ ಕೇಳಿದೆ, ಆಗ ತಿಳಿಯಿತು ಅಲ್ಲಿ  ವ್ಯಾಪಾರಿಗೆ ಸಿಕ್ಕಿದ್ದು  8 ರೂಪಾಯಿ.ಆದರೆ ನನಗೆ ನಷ್ಟವಾಗಿರಲಿಲ್ಲ.ಹೀಗಾಗಿ ಸಮಧಾನವಿತ್ತು. ಹಾಗಿದ್ದರೂ ನಾವು ಬೆಳೆದು ಕಷ್ಟಪಟ್ಟದ್ದು  ,ಆತ ಮದ್ಯವರ್ತಿಯಾಗಿದ್ದಕ್ಕೆ 8 ರೂಪಾಯಿ. ಮುಂದಿನ ಬಾರಿ ನಾನು ಈ ಬಗ್ಗೆ ಕೇಳಿದಾಗ ಆತ ಹೇಳಿದ್ದು, ನನಗೆ ಬಾಳೆಗೊನೆ ಬೇಡ. . !. ಅಂದರೆ ಮದ್ಯವರ್ತಿಗಳ ಶೋಷಣೆ ಇದ್ದದ್ದೆ.ಹಾಗೆಂದು  ಕೃಷಿಕನಿಗೆ ತಾನು ಬೆಳೆದ ಉತ್ಪನ್ನದ ಖರ್ಚು ಹಾಗೂ ಲಾಭಾಂಶ ಸಿಕ್ಕರೆ ಸಾಕು ಎಂದಷ್ಟೇ ಯೋಚಿಸಬೇಕಷ್ಟೇ.

ಧಾರಣೆ ಏರಿಕೆಯಾದಾಗ ಅದರ ಪಾಲು ಕೃಷಿಕನಿಗೂ ಲಭ್ಯವಾಗುತ್ತದೆ ನಿಜ. ಗ್ರಾಹಕರಿಗೆ ತೀರಾ ಹೊರೆಯಾಗುತ್ತದೆ ನಿಜ. ಆದರೆ ಖರೀದಿಯೇ ಮಾಡದೇ ಇದ್ದರೆ ಕೃಷಿಕನಿಗೆ ಕಹಿಯೇ. ಹಾಗಾಗಿ ನಮ್ಮ  ಸಂದೇಶ ಗ್ರಾಹಕರ ಪರ ಮಾತ್ರವಲ್ಲ  ಕೃಷಿಕರ ಪರವೂ ಇರಲಿ ಅಷ್ಟೇ.

ಕಾಮೆಂಟ್‌ಗಳಿಲ್ಲ: