16 ಸೆಪ್ಟೆಂಬರ್ 2015

ಗಣೇಶ ಬರುತ್ತಾನೆ. . . ಸಿದ್ದವಾಗು ಮನಸ್ಸೇ. .


                                                             (ಚಿತ್ರ- ಇಂಟರ್ನೆಟ್)

ನಾಡಿನೆಲ್ಲೆಡೆಗೆ ಗಣೇಶ ಬಂದೇ ಬಿಟ್ಟ.. . . .
ಜನರೆಲ್ಲಾ ಪೂಜೆ ಮಾಡಿದರು,ಸಂಭ್ರಮದಿಂದ ಓಡಾಡಿದರು.ಸಿಹಿ ಹಂಚಿದರು. .. .
ಮತ್ತೆ ನೀರೊಳಗೆ ಸೇರಿ ಮರೆಯಾಗಿಯೇ ಬಿಟ್ಟ.  .!.
ನಮ್ಮ ಬದುಕಿನೊಳಗೆ ಆತ ಪ್ರವೇಶಿಸಲೇ ಇಲ್ಲ. . !.

ಗಣೇಶನ ಹಬ್ಬ ಬಂದಾಗ ನನಗೆ ಯಾವಾಗಲೂ ಕಾಡುತ್ತಿದ್ದ ಮತ್ತು ಕಾಡುವ ಪ್ರಶ್ನೆ ಅದೇ , ಆತ ಏಕೆ ನಮ್ಮ ಬದುಕಿನ ಒಳಗೆ ಪ್ರವೇಶಿಸಲಿಲ್ಲ ?. ಒಂದು. . ಎರಡು. . ಮೂರು. . .ನಾಲ್ಕು. . . . ,ವಾರಗಳ ಕಾಲ ಆತನಿಗೆ ಪೂಜೆ ನಡೆಯುತ್ತದೆ,  ಜನ ಓಡಾಡುತ್ತಾರೆ, ಸಂಭ್ರಮಿಸುತ್ತಾರೆ. ಆದರೆ ಆತ ಬದುಕಿನೊಳಗೆ ಪ್ರವೇಶಿಸುವುದೇ ಇಲ್ಲ..  .!.

ಅಂದು ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಗಣೇಶ ಉತ್ಸವವನ್ನು  ಸಂಘಟನೆಗಾಗಿ ಬಳಸಿಕೊಂಡರು, ಉತ್ಸವದ ಮೂಲಕ ಸಮಾಜದ ಸಾಮರಸ್ಯದ ಕಡೆಗೆ   ಗಮನಹರಿಸಿದರು, ಬದುಕಿಗೆ ಅರ್ಥ ಕೊಡುವ ರೀತಿಯಲ್ಲಿ  ಯೋಜಿಸಿದರು. ಅಂದು ಯಶಸ್ವಿಯಾಯಿತು. ಆ ಬಳಿಕವೂ  ನಡೆದು ಬಂತು. ಇತ್ತೀಚೆಗೆ ಕೆಲವು ಸಮಯಗಳಿಂದ ಅಲ್ಲಲ್ಲಿ  ಗಣೇಶ ಬರುತ್ತಾನೆ. ಪೂಜೆ ನಡೆಯುತ್ತದೆ. ನಂತರ ಅದೇ ಜಾಗದಲ್ಲಿ  ನೋಡಿದರೆ ಸಾಮರಸ್ಯವೂ ಇಲ್ಲ, ಸಂಘಟನೆಯೂ ಇಲ್ಲ. . .!. ಆತ ಏಕೆ ಹೀಗೆ ಮಾಡಿದ?.ಅಥವಾ ಆಚರಣೆಯ ಹಿಂದೆ ಲೋಪ ಇದೆಯಾ ?.

ಗಣೇಶನ ಪ್ರತಿಷ್ಟಾಪನೆಯಾದ ಬಳಿಕ ಅಲ್ಲಿ ಅನೇಕ ಪೂಜೆ, ಆಚರಣೆ, ಕಾರ್ಯಕ್ರಮಗಳು ನಡೆಯುತ್ತದೆ, ಕೊನೆಗೆ ಗಣೇಶನ ಶೋಭಾಯಾತ್ರೆ ನಡೆಯುವ ವೇಳೆ ಅಬ್ಬರ ಶುರುವಾಗುತ್ತದೆ. ಆ ಅಬ್ಬರ ಅಗತ್ಯವೂ ಸಕಾಲಿಕವೂ ಹೌದಾದರೂ ಕೆಲವೊಮ್ಮೆ ಅಲ್ಲಿಂದಲೇ ಅಶಾಂತಿ ಉಂಟಾಗುತ್ತದೆ, ಅಂದೊಂದು  ಮೆರವಣಿಗೆ ನೋಡಿದ್ದೆ, ಅಲ್ಲಿ  ಓಡಿದ ಸ್ಥಭ್ತ ಚಿತ್ರವೊಂದು ಸಮಾಜದ ನಡುವೆಯೇ ಬಿರುಕು ಮೂಡಲು ಕಾರಣವಾಯಿತು, ಮತ್ತೊಂದು ಮೆರವಣಿಗೆಯಲ್ಲಿ  ನಡೆದ ಸಣ್ಣ ವಿಚಾರ ಇಡೀ ಊರಿನಲ್ಲಿ  ಅನೇಕ ದಿನಗಳ ಕಾಲ ಚರ್ಚೆಯಾಯಿತು, ಪೊಲೀಸ್ ಠಾಣೆಯವರೆಗೂ ಸಾಗಿತು. ಹೀಗಾಗಿ ಗಣೇಶನ ಆಚರಣೆಯನ್ನು  ಈಗ ಬದುಕಿಗೆ ಸಮೀಕರಿಸುವ ಕೆಲಸ ಮಾಡಬೇಕು.

ಗಣೇಶನ ಬಗ್ಗೆ ಆತನ ಮೊಗದ ಬಗ್ಗೆ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖ ಇದೆ.ಗಣೇಶನ ದೇಹದ ಆಕಾರವೇ ಅತ್ಯಂತ ವಿಕಾರ. ನಾವು ಈಗ ನಮ್ಮ ಬದುಕಿಗೆ ಹೊಂದಿಸಿಕೊಂಡು ನೋಡಿದರೆ, ನಮ್ಮೊಳಗೂ ವಿವಿಧ ವಿಕಾರಗಳು ಇರುತ್ತವೆ, ಭಾವನೆಗಳಲ್ಲಿ  ಶುದ್ದತೆ ಇಲ್ಲ, ಮಾತುಗಳಲ್ಲಿ ವಿಶ್ವಾಸಾರ್ಹತೆ ಇಲ್ಲ, ಅಂತರಾತ್ಮದಲ್ಲಿ ಕಶ್ಮಲಗಳು ಇವೆ, ಇದೆಲ್ಲಾ ನಮ್ಮ ಆಕಾರ.ಈ ವಿಕಾರಗಳು ನಮ್ಮಿಂದ ದೂರವಾಗುವ ಹೊತ್ತಿಗೆ ಆತ್ಮಶುದ್ದತೆ, ಪರಿಪೂರ್ಣತೆ ಒದಗುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಈ ಆಕಾರಕ್ಕೆ ಶಾಂತತೆಯಿಂದ ಪೂಜೆ ನಡೆದು ,ಅಂದರೆ ಇದೆಲ್ಲಾ ವಿಕಾರಗಳ ಸಂಗ್ರಹ ಮಾಡಿ ಗಣೇಶನ ಪೂಜೆಯ ಬಳಿಕ ಮೂರ್ತಿ ವಿಸರ್ಜನೆ ಕಾರ್ಯ ನಡೆದಂತೆ , ನಮ್ಮೊಳಗಿನ ಎಲ್ಲಾ ವಿಕಾರಗಳೂ ಇದರ ಜೊತೆಗೇ ತೊಲಗಬೇಕು.ಆಗ ಬದುಕು ಪರಿಪೂರ್ಣವಾಗುತ್ತದೆ ಎಂಬುದು ಇದರ ಸಂದೇಶ ಎಂದು ನಾನು ನಂಬಿದ್ದೇನೆ.ಇನ್ನು ಗಣೇಶನ ಮೂರ್ತಿಯನ್ನು ನಮ್ಮ ಶರೀರ ಎಂದು ತಿಳಿದುಕೊಂಡರೆ. ಅದಕ್ಕೆ ಪೂಜೆ ನಡೆದು  , ಆರಾಧನೆ ನಡೆದರೂ ಅದುವೇ ಶಾಶ್ವತವಲ್ಲ, ಅದರೊಳಗೆ ಇರುವ ತತ್ತ್ವ, ಉತ್ತಮ ಕಾರ್ಯಗಳೇ ಶಾಶ್ವತ ಎನ್ನುವುದು  ಮತ್ತೊಂದು ಸಂದೇಶ. ಆಧ್ಯಾತ್ಮಿಕವಾಗಿ ತೆಗೆದುಕೊಂಡರೆ, ಕಾಲ ಉರುಳಿದಂತೆ ಮನುಷ್ಯ ರೂಪ ಬದಲಾಗುತ್ತದೆ, ಹಳೆಯ ಶರೀರ ವಿಸರ್ಜನೆಯಾಗುತ್ತದೆ, ಕೊನೆಗೆ ಉಳಿಯುವುದು  ಚೇತನ, ಜೀವಾತ್ಮ ಮಾತ್ರಾ ಎಂದು ನಾನು ನಂಬಿದ್ದೇನೆ.
ಮೌನವಾಗಿ ಯೋಚಿಸಿದಾದ,ನಾನೂ ಸೇರಿದಂತೆ ಎಲ್ಲೂ ಕೂಡಾ ಶುದ್ದತೆ ಕಾಣಿಸುತ್ತಿಲ್ಲ, ಹೀಗಾಗಿ ಗಣೇಶ ಈ ಬಾರಿ ನನ್ನ ಬದುಕಿನೊಳಗೆ ಪ್ರವೇಶಿಸಲಿ, ಎಲ್ಲರಿಗೂ ಶುಭ ಸಂದೇಶವನ್ನೇ ನೀಡುವಂತಾಗಲಿ.


ಕಾಮೆಂಟ್‌ಗಳಿಲ್ಲ: