ಈಗಂತೂ ಹಳ್ಳಿಯಲ್ಲಿ ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.
ಅದೇನೇ ಇರ್‍ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್‍ತಾನೆ. ಇದು ಹಳ್ಳಿ ಕತೆ.
ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್‍ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.
ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.
ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.
ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.
ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ