20 ಡಿಸೆಂಬರ್ 2010

ನಂಬಿಕೆಗೆ ಪೆಟ್ಟು . !

ಜಗತ್ತು ಪ್ರಳಯವಾಗಿ ಮುಳುಗುತ್ತಂತೆ , ಅದ್ಯಾವುದೋ ಒಂದು ಆಕಾಶ ಕಾಯ ಭೂಮಿಗೆ ಅಪ್ಪಳಿಸಿ ಇಲ್ಲಿರೋ ಜನರೆಲ್ಲಾ ಸಾಯುತ್ತಾರಂತೆ. . . ಹೀಗೇ ಅಂತೆ ಕಂತೆಗಳ ನಡುವೆಯೂ ಇಲ್ಲಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ ಅಲ್ಲಿ ಧೈರ್ಯ ನೀಡೋದು ನಂಬಿಕೆ.ಇದು ಪರಶುರಾಮ ಸೃಷ್ಠಿ, ಇಲ್ಲಿಗೇನು ಆಗದು ಅನ್ನೋ ಬಲವಾದ ನಂಬಿಕೆ.ಹಾಗಾಗಿ ಇಲ್ಲಿ ಎಷ್ಟೇ ಮಳೆ ಬರಲಿ , ಬಿಸಿಲಿರಲಿ, ಗಾಳಿ ಇರಲಿ ಮನಸಿನ ಮೂಲೆಯಲ್ಲಿರೋ ಆ ನಂಬಿಕೆ ಊರನ್ನೇ ಗಟ್ಟಿಯಾಗಿಸಿದೆ. ಅಂತಹದ್ದೊಂದು ಸೃಷ್ಠಿ ಇತ್ತಾ , ಇಲ್ವಾ ಅನ್ನೋದು ಮತ್ತಿನ ಪ್ರಶ್ನೆ. ಆದರೆ ಆ ಒಂದು ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸಿದೆ.ಧೈರ್ಯ ತುಂಬಿದೆ.ಅಂತಹ ನಂಬಿಕೆಗಳು ಅದೆಷ್ಟೋ ಇಲ್ಲಿ ಇವೆ.ಈ ಭೂಮಿಯಲ್ಲಿರೋ ಸಮಸ್ತ ಜೀವಿಗಳೂ ಅದೇ ನಂಬಿಕೆಯ ತಳಹದಿಯಲ್ಲಿ ಬದುಕಿವೆ. ಆದರೆ ಆ ನಂಬಿಕೆಯನ್ನೇ ಬುಡಮೇಲು ಮಾಡಹೊರಟರೆ ಹೇಗೆ?. ಅಂತಹುದರ ಬಗ್ಗೆ ಯೋಚಿಸಬೇಕಾಗುತ್ತದೆ. ಯೋಚಿಸಲೇಬೇಕಾಗಿದೆ.ಯಾಕೆಂದರೆ ಇದು ಇಂದಿನ ಪ್ರಶ್ನೆಯಲ್ಲ ನಾಳೆಯ ಪ್ರಶ್ನೆ.

ನಂಬಿಕೆ ಅನ್ನೋದು ಹುಟ್ಟಿನಿಂದಲೇ ಆರಂಭವಾಗುತ್ತದೆ.ಅದು ಅಪ್ಪ ಎಂದು ಕರೆಯುವಲ್ಲಿಂದ ತೊಡಗಿ ಇಂದು ಮಾಡುವ ಎಲ್ಲಾ ಕೆಲಸಗಳ ಹಿಂದೆಯೂ ಅದೇ ನಂಬಿಕೆ ಅಡಗಿಕೊಂಡಿದೆ. ಅದೇ ನಂಬಿಕೆ ಕಳೆದುಕೊಂಡೆವೆಂದರೆ ನಮ್ಮೊಳಗೇ ಅಪಧೈರ್ಯ, ಅದರ ಜೊತೆಗೆ ಹೆದರಿಕೆ ಹೋಗಿ ವಂಚನೆಯ ಮುಖವಾಡ ಬೆಳೆದುಕೊಳ್ಳುತ್ತದೆ.ಆತ್ಮವಂಚನೆ ಹೆಚ್ಚಾಗುತ್ತದೆ. ಹಾಗೆಂದು ಇಂದು ಎಲ್ಲಾ ಕಡೆ ನಾವು ಸ್ವತಂತ್ರರು. ಅಷ್ಟು ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವ ಹಕ್ಕು ನಮಗಿಲ್ಲ. ಆದರೆ ಇಂದು ಇದೆಲ್ಲಾ ನಡೆಯುತ್ತದೆ.ಅಂತಹ ನಂಬಿಕೆಗಳ ವಿರುದ್ದ ಕತೆ ಕಟ್ಟಿ ಮಸಾಲೆ ಹಾಕಿ ಒಂದು ಇಶ್ಯೂ ಮಾಡಿ ದೊಡ್ಡ ಸಂಗತಿಯಾಗಿ ಲೋಕದ ಮುಂದೆ ಪ್ರಚುರ ಪಡಿಸಲಾಗುತ್ತದೆ.ನಂಬಿಕೆಯ ಮೇಲೆ ಹೊಡೆತ ಕೊಡಲಾಗುತ್ತಿದೆ.ಅನವಶ್ಯಕವಾಗಿ ತಲೆತಲಾಂತರದ ಕೊಂಡಿಗಳನ್ನು ಕಳಚುವ ಪ್ರಯತ್ನವಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದಲೂ ಇದು ಯೋಚಿಸಲೇಬೇಕಾಗುತ್ತದೆ.

ದೇವರಿದ್ದಾನಾ ಇಲ್ಲವೋ ಅನ್ನೋದು ಸೆಕಂಡರಿ. ಆದರೆ ಅದರ ಹೆಸರಿನ ನಂಬಿಕೆ ಜನರನ್ನು ಗಟ್ಟಿಗೊಳಿಸಿದೆ, ಆತ್ಮವಿಶ್ವಾಸ ತುಂಬಿಸಿದೆ.ಅದೊಂದು ಥರಾ ಪೆಟ್ರೋಲ್ ಇದ್ದ ಹಾಗೆ.ಮನುಷ್ಯನ ಮನಸ್ಸಿಗೆ ಆಗಾಗ ಆತ್ಮವಿಶ್ವಾಸ ತುಂಬಿಸುತ್ತದೆ. ಆದರೆ ದೇವರು , ನಂಬಿಕೆಗಳ ಹೆಸರಿನಲ್ಲಿ ಇನ್ನೊಬ್ಬರಿಗೆ ಹಾನಿ ಇಲ್ಲದ ಕೆಲವೊಂದು ಮೌಢ್ಯಗಳು ಇರಬಹುದು. ಒಂದು ವೇಳೆ ಅಂತಹ ಮೌಢ್ಯದಿಂದ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆಯೇ ?, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆಯೇ ಎಂದಾದರೆ ಅದೊಂದು ನಿಷೇಧಕ್ಕೆ ಒಳಗಾಗಬೇಕು.ಆದರೆ ಅಂತಹ ಅದ್ಯಾವುದೇ ತೊಂದರೆಯಾಗದೆ ಇದ್ದರೂ ಆ ನಂಬಿಕೆಯ ಮೇಲೆ ಪ್ರಹಾರ ಏಕೆ?. ಆ ನಂಬಿಕೆ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದಾದರೆ ಅದರ ವಿರುದ್ದ ದನಿ ಯಾಕೆ?. ಇದರಲ್ಲಿ ಮೀಡಿಯಾಗಳು ಮೂಗು ತೂರಿಸುವುದೇಕೆ?. ಅದು ಹಾಗಲ್ಲ ಹೀಗೆ, ಕಂದಾಚಾರ , ಮೌಢ್ಯ ಅಂತ ಮೀಡಿಯಾ ಯಾಕೆ ತೀರ್ಪು ಕೊಡಬೇಕು?. ಅದ್ಯಾರು ಬೇಕಾದರೂ ಪ್ರತಿಭಟಿಸಲು ಅದರ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ.ಅದು ಬಿಟ್ಟು ಒಂದು ಇಶ್ಯೂ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುವುದು ಯಾವ ಕಾರಣಕ್ಕೆ?. ಇದೆಲ್ಲವೂ ಕೂಡಾ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಉಳಿದುಕೊಳ್ಳಬೇಕು ಹಾಗೂ ಜಾತಿಗಳ ನಡುವೆ ಇನ್ನಷ್ಟು ದ್ವೇಷ ಉಂಟುಮಾಡೋ ಕುತಂತ್ರ. ಒಂದು ವೇಳೆ ಜನರ ನಂಬಿಕೆಯ ಮೇಲೆ ಹೊಡೆತ ಕೊಟ್ಟರೆ ಭವಿಷ್ಯದ ಜನ ಹೇಗಿರಬಹುದೆಂದು ಯೋಚಿಸಿ ನೋಡಿ. ಹುಟ್ಟಿಸಿದಾತನ ಮೇಲೇ ಅನುಮಾನ ಬಂದರೂ ಬರಬಹುದು.ಇಂದು ಕೆಲ ಜನರು ಮತ್ತು ಅವರಿಗೆ ಸಾತ್ ನೀಡುವ ಕೆಲವು ಮೀಡಿಯಾಗಳು ಅದನ್ನೇ ಮಾಡಹೊರಟಿವೆ ಅಂತ ಅನ್ನಿಸುತ್ತಿದೆ.

ಇತ್ತೀಚೆಗೆ ಕರಾವಳಿಯಲ್ಲಿ ಅಂತಹ ನಂಬಿಕೆಗಳ ಮೇಲೆ ಪ್ರಹಾರ ಶುರುವಾಗಿದೆ.ಅದು ಕಂದಾಚಾರ ಅಂತ ತಾವೇ ಸ್ವಯಂಘೋಷಿತವಾಗಿ ಹೇಳುವ ಬುದ್ದಿಗೇಡಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಾ ಒಂದು ಇಶ್ಯೂ ಸೃಷ್ಠಿ ಮಡುವ ಬೆರಳೆಣಿಕೆಯ ಮೀಡಿಯಾದ ಮಂದಿಗಳಿಂದಾಗಿ ಭವಿಷ್ಯದ ದಾರಿ ತಪ್ಪುತ್ತಿದೆ , ಸಮಾಜವನ್ನು ಅತಂತ್ರ ಮಾಡುವ ಪ್ರಯತ್ನ ನಡೀತಾ ಅಂತ ಒಂದು ಯೋಚನೆ ಶುರುವಾಗಿದೆ.ಈ ಬಗ್ಗೆ ಚರ್ಚೆಯೂ ಆಗುತ್ತಿದೆ.ನಿಜಕ್ಕೂ ಒಂದೊಳ್ಳೇ ಅಂತ್ಯವಾಗಲಿ ಅನ್ನೋದೇ ಹಾರೈಕೆ.ದುರಂತ ಅಂದರೆ ಅದೇ ಮಂದಿ ಒಂದೊಳ್ಳೇ ಇಶ್ಯೂ ಕ್ರಿಯೇಟ್ ಮಾಡೋದಿಲ್ಲ.ಒಳ್ಳೆಯ ಚರ್ಚೆಗೆ ಅವಕಾಶ ಸೃಷ್ಠಿ ಮಾಡೋದೇ ಇಲ್ಲ.

ವೆರಿ ಸ್ಯಾಡ್. .

ಕಾಮೆಂಟ್‌ಗಳಿಲ್ಲ: