02 ಜನವರಿ 2011

ಬಂದಿದೆ 2011

ಇನ್ನೊಂದು ವರ್ಷ ಇದೆ. 2012 ಬರಲು.

ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.

ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.

ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.

ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.

. . . . . . . . . . . . . . . .. . . . ..

ಕಾಮೆಂಟ್‌ಗಳಿಲ್ಲ: