29 ನವೆಂಬರ್ 2011

ಇದು ಭಕ್ತಿ , ನಂಬಿಕೆ ಪ್ಲೀಸ್ ಇದಕ್ಕೆ ಧಕ್ಕೆ ಮಾಡಬೇಡಿ. .

ನಾಡಿನ ಅತ್ಯಂತ ಶ್ರದ್ಧಾ ಭಕ್ತಿಯ ತಾಣ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರಕ್ಕೆ ಹಿಂದೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದರು.ಆಗ ಭುಜ ನೋವಿನಿಂದ ಬಳಲುತ್ತಿದ್ದ ಸಚಿನ್ ಇಂದು ಶತಕದ ಶತಕ ಬಾರಿಸುವ ಹಂತದಲ್ಲಿದ್ದಾರೆ. ಸಚಿನ್ ಬಳಿಕವೂ ಕುಕ್ಕೆಗೆ ವಿವಿ‌ಐಪಿಗಳ ಭೇಟಿಯಿಂದ ಇಡೀ ದೇಶದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸುದ್ದಿ ಮಾಡಿತ್ತು.

ಈಗ ಮತ್ತೆ ಇನ್ನೊಂದು ರೀತಿಯಲ್ಲಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.

ಇದು ಮಾತ್ರಾ ಭಕ್ತಾದಿಗಳ ನಂಬಿಕೆಯ ಮೇಲೆ ನಡೆಯುತ್ತಿರುವ ಮಾನಸಿಕ ಧಾಳಿ ಎಂದರೆ ತಪ್ಪಾಗಲಾರದು.ಯಾಕೆ ಹೀಗೆ ? ಬೇಕಾ ಈ ಚರ್ಚೆ ?. ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಾ ಇದೆ. ಈ ಬಗ್ಗೆ ಏಕೆ ಇವರೆಲ್ಲಾ ಮಾತನಾಡೊಲ್ಲ ? ಕಳೆದ ವರ್ಷ ನಡೆದ ಚರ್ಚೆಯ ವೇಳೆಯೂ ಇಲ್ಲಿನ ಸತ್ಯಾಂಶವನ್ನು ತಿಳಿಸಲು ಯಾರಿಗೂ ಸಾಧ್ಯ ಆಗಿರಲಿಲ್ಲ.ಈ ಬಾರಿಯೂ ಅದೇ ಆಗುತ್ತಿದೆ.ಈ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಇಲ್ಲಿ ನನಗೆ ಅಭಿಪ್ರಾಯ ದಾಖಲಿಸಬೇಕು ಎಂದು ನನಗೆ ಅನ್ನಿಸಿದೆ.

ಈ ದೇಶದ ತುತ್ತ ತುದಿಯಲ್ಲಿ ದಿನವೂ ಜನ ಹೆದರಿಕೆಯಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರಗಡೆ ದಿನವೂ ಗುಂಡಿನ ಸದ್ದು ಕೇಳುತ್ತಿದೆ.ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಕೊಲ್ಲುತ್ತಿದ್ದಾರೆ.ಸರಕಾರಗಳು ಇದ್ದೂ ಇಲ್ಲದಂತಗಿದೆ. ನಮ್ಮ ಜವಾನರು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದರೂ ಅವರನ್ನು ತಪ್ಪಿಸಿ ಒಳನುಗ್ಗುತ್ತಲೇ ಇದ್ದಾರೆ ಆ ದ್ರೋಹಿಗಳು. ಇನ್ನೊಂದು ಕಡೆ ದೇಶದ ಒಳಗೆಲ್ಲಾ ಭಯವನ್ನು ಉತ್ಪಾದಿಸಲಾಗುತ್ತಲೇ ಇದೆ.ಅಂತಹವರಲ್ಲೊಬ್ಬ ಅಂದು ಸಿಕ್ಕಿಬಿದ್ದಿದ್ದಾನೆ, ಆತನಿಗೆ ರಾಯಲ್ ಟ್ರೀಟ್‌ಮೆಂಟ್ ಇಂದಿಗೂ ನಮ್ಮ ದೇಶದಿಂದ ಸಿಗುತ್ತಿದೆ, ಮತ್ತೊಂದು ಕಡೆ ನಮ್ಮ ದೇಶದ ಆಡಳಿತ ಸೌಧಕ್ಕೆ ಧಾಳಿ ಮಾಡಿದವರೂ ಇದ್ದಾರೆ. ಇವರೆಲ್ಲಾ ಇಂದಿಗೂ ಇಂಚು ಇಂಚಾಗಿ , ಹೆಜ್ಜೆ ಹೆಜ್ಜೆಗೂ ದೇಶಕ್ಕೆ ಕಾಟ ಕೊಡುತ್ತಲೇ ಇರಬೇಕಾದರೆ ಸರಕಾರಗಳು ಅದೇಕೋ ಏನೋ ಯಾವುದೂ ಕಂಡೂ ಕಾಣದಂತೆ, ಕುಳಿತಿವೆ ಅಂತ ಕಾಣುತ್ತೆ.

ಬಿಡಿ, ಅದೆಲ್ಲಾ ಆಡಳಿತಕ್ಕೆ , ರಾಜಕೀಯಕ್ಕೆ ಸಂಬಂಧಿಸಿದ ವಿಚಾರ. ಪರಿಸ್ಥಿತಿ ಹೀಗೆ ಇರುವಾಗ ಇಲ್ಲಿನ ಜನರಿಗೆ ನೆಮ್ಮದಿ ಬೇಕಲ್ಲಾ , ಅವರು ಎಲ್ಲಿಗೆ ಹೋಗೋದು ಹೇಳಿ ?. ನೆಮ್ಮದಿ ಅರಸಿಕೊಂಡು ಹೋಗಲು ಆಗುತ್ತೆಯೇ ?.ಒಂದು ಕಡೆ ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ನಡೆಯುತ್ತಲೇ ಇರುತ್ತವೆ ಅಲ್ಲೂ ಹೋಗೋದಾದ್ರೂ ಹೇಗೆ?. ಕೆಲವರಿಗೆ ಟೀಕೆ ಮಾಡುವುದರಲ್ಲಿ , ಇನ್ನೂ ಕೆಲವರಿಗೆ ವಿರೋಧಿಸುವುದರಲ್ಲಿ , ಇನ್ನೂ ಕೆಲವರಿಗೆ ರಾಜಕೀಯ ಮಾಡುವುರದಲ್ಲಿ , ಇನ್ನೂ ಅನೇಕರಿಗೆ ವಿವಾದ ಮಾಡುವುದರಲ್ಲಿ ನೆಮ್ಮದಿ ಸಿಗಬಹುದು. ಆದರೆ ಈ ದೇಶದ ಶೇಕಡಾ 80 ರಷ್ಟು ಜನ ಇಲ್ಲಿನ ದೇವರ ಮೊರೆ ಹೋಗಿದ್ದಾರೆ. ಅದು ರಾಮ , ರಹೀಮ, ಏಸು ಇನ್ಯಾವುದೇ ದೇವರ ಮೊರೆ ಹೋಗಿದ್ದಾರೆ,ಹೋಗುತ್ತಿದ್ದರೆ. ಅಲ್ಲಿ ಅದ್ಯಾವುದೋ ಆಚರಣೆಗೋ ನಂಬಿಕೆಗೋ ಒಳಪಟ್ಟು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾನೆ.ತಾನು ಮಾಡಿದ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತಾನೆ.ಇದರಲ್ಲಿ ತಪ್ಪಿಲ್ಲವಲ್ಲ. ಏಕೆಂದರೆ ಶೇ.80 ರಷ್ಟು ಜನರಿಗೆ ಇಂತಹ ಆಚರಣೆಯಲ್ಲಿ ನಂಬಿಕೆ ಇದೆ.ಉಳಿದ ಶೇ.20 ರಷ್ಟು ಜನರಿಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇಲ್ಲ, ಎಂದಾದರೆ ಬಿಡಿ ಒಪ್ಪಿಕೊಳ್ಳೋಣ. ನೀವೂ ಇದನ್ನೇ ಮಾಡಿ ಅಂತ ಯಾರಾದರೂ ಅವರಿಗೆ ಹೇಳಿದ್ದಾರಾ ? ಹೇಳುತ್ತಾರಾ? ಮತ್ಯಾಕೆ ಅವರಿಗೆ ತಲೆನೋವು?. ನಂಬಿಕೆ ಇಲ್ಲದ ಮೇಲೆ ನಾವು ನಿಮ್ಮ ಆಚರಣೆಗೋ ನಂಬಿಕೆಗೋ ಏಕೆ ಅಡ್ಡಿ ಬರಬೇಕು?. ಅದರಿಂದಾಗಿ ಇಡೀ ದೇಶಕ್ಕೋ ಸಮಾಜಕ್ಕೋ ಏನಾದ್ರೂ ತೊಂದರೆ ಇದೆಯೇ ?. ಅಲ್ಲಿನ ಭಯೋತ್ಪಾದಕರಂತೆಯೋ, ಕಾಶ್ಮೀರದ ಸಮಸ್ಯೆಯಂತೆಯೋ ಏನಾದರೂ ಇಡೀ ದೇಶಕ್ಕೆ ತೊಂದರೆಯಾಗುತ್ತೋ?. ಹಾಗಾದ್ರೆ ಸರಿ.ಇಂದೇ ಅದು ಅಂತಹ ಪದ್ಧತಿಗಳು ನಿಲ್ಲಬೇಕು.
ಸರಿ ಇದು ನಾಗರಿಕ ಸಮಾಜಕ್ಕೆ ಅವಮಾನ ಎನ್ನೋಣ , ಶೇ.80 ರಷ್ಟು ಮಂದಿ ಈ ಆಚರಣೆಗಳನ್ನು , ಪದ್ಧತಿಗಳನ್ನು ಒಪ್ಪುವುದಾರೆ ಕೇವಲ ಶೇ.20 ರಷ್ಟು ಮಂದಿಗಾಗಿ ಈ ಆಚರಣೆಯನ್ನು ಏಕೆ ನಿಲ್ಲಿಸಬೇಕು?. ಅಂತಹ ಮಂದಿ ಇದೇ ದೇವಸ್ಥಾನ , ದೇವರನ್ನು ಒಪ್ಪುವವರೂ ಅಲ್ಲ. ಆದರೆ ಈ 80 ಶೇಕಡಾ ಮಂದಿ ಇದೆಲ್ಲವನ್ನೂ ಸಹಿಸಿಕೊಂಡು ಇರೋದ್ರಿಂದಲೇ ಇದೆಲ್ಲಾ ನಡೀತದೆ. ಇನ್ನೊಂದು ನಾನು ಗಮನಿಸಿದಂತೆ ಇದೆಲ್ಲಾ ಹಿಂದೂ ಆಚರಣೆಗಳಲ್ಲಿ ಮಾತ್ರಾ ಅನ್ವಯವಾಗಿದೆ. ಅನ್ವವಾಗುತ್ತಿದೆ. ಯಾರೋಬ್ಬರೂ ಕೂಡಾ ಇತರ ಆಚರಣೆಗಳ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ.. . !.

ಸರಿ ಈಗ ಕುಕ್ಕೆಯ ವಿಚಾರವನ್ನು ನೋಡುವುದಾದರೆ , ಇಲ್ಲಿ ಸಮಸ್ಯೆ ಬಂದಿರೋದು ಬ್ರಾಹ್ಮಣರ ಎಂಜಲೆಲೆಯ ಮೇಲೆ ಶೂದ್ರರು ಮಾತ್ರಾ ಉರುಳಾಡುತ್ತಾರೆ ಅಂತ. ಇದು ಪೂರ್ವಾಗ್ರಹ ಪೀಡಿತ ಕೆಲವು ಮಾಧ್ಯಮಗಳ ಕತೆ. ಇಲ್ಲಿ ಬ್ರಾಹ್ಮಣರಿಂದ ತೊಡಗಿ ಎಲ್ಲರೂ ಈ ಎಂಜಲೆಲೆಯ ಮೇಲೆ ಉರುಳುತ್ತಾರೆ ಅನ್ನೊಂದು ಪ್ರಥಮ ವಿಚಾರ. ಕಳೆದ ವರ್ಷವೂ ಈ ಆಚರಣೆಗೆ ವಿರೋಧ ಬಂದಿತ್ತು. ಕುಕ್ಕೆಗೆ ಬಂದ ಇವರು ಇಲ್ಲಿನ ವಾಸ್ತವ ಅರಿತು ಹೇಳಿದರು , “ಇಲ್ಲಿ ಬ್ರಾಹ್ಮಣರೂ ಉರುಳುತ್ತಾರೆ ಎಂತ ಗೊತ್ತಿರಲಿಲ್ಲ ,ಕೇವಲ ಶೂದ್ರರು ಮಾತ್ರಾ ಉರುಳುತ್ತಾರೆ ಎಂದು ತಿಳಿದಿದ್ದೆವು” ಎಂದಿದ್ದರು. ಆದರೆ ಇಲ್ಲಿನ ಒಬ್ಬರು ಪತ್ರಕರ್ತರು ಅವರಿಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಅವರಲ್ಲೊಬ್ಬರು ಹೇಳಿದ್ದರು. ಆ ಪತ್ರಕರ್ತರೇ ನಂತರ ಪೊಲೀಸ್ ರಕ್ಷಣೆಯೊಂದಿಗೆ ಅವರನ್ನು ಕುಕ್ಕೆಯಿಂದ ಕಳುಹಿಸಿದ್ದರು ಎಂಬುದು ಬೇರೆ ಮಾತು.

ಇಲ್ಲಿ ನಾನು ನೋಡಿದ ಪ್ರಕಾರ ಹೀಗೆ ನಡೆಯುತ್ತದೆ , ಕುಕ್ಕೆ ದೇವಸ್ಥಾನದಲ್ಲಿ ಚಂಪಾಷಷ್ಠಿಯ 3 ದಿನಗಳ ಕಾಲ ಅತ್ಯಂತ ಮಹತ್ವದ ಕಾಲ. ಈ ಬಗ್ಗೆ ಪುರಾಣಗಳಲ್ಲೂ ಉಲ್ಲೇಖ ಇದೆ. ಈ 3 ದಿನಗಳ ಕಾಲ ದೇವರಿಗೆ ಪೂಜೆಯಾದ ಬಳಿಕ ಕೊಪ್ಪರಿಗೆ ಅನ್ನಕ್ಕೆ ಪೂಜೆ ಇರುತ್ತದೆ.ಇದು ಪಲ್ಲ ಪೂಜೆ. ಪೂಜೆಯ ನಂತರ ಈ ಅನ್ನವನ್ನು ದೇವಸ್ಥಾನತದಲ್ಲಿ ಸಂತರ್ಪಣೆ ಮಾಡುವ ಎಲ್ಲಾ ಕಡೆ ಪ್ರದೇಶಗಳಿಗೆ ಅನ್ನವನ್ನು ಕೊಂಡೋಗಿ ಅಲ್ಲಿ ತಯಾರು ಮಾಡಿದ ಅನ್ನಕ್ಕೆ ಹಾಕುತ್ತಾರೆ. ಈ ಎಲ್ಲಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಬ್ರಾಹ್ಮಣ ಸಂತರ್ಪಣೆ ಇರುತ್ತದೆ. ಎಲ್ಲರೂ ಕುಳಿತುಕೊಂಡ ಬಳಿಕ ದೇವರಿಗೆ ಅರ್ಚನೆ, ಬ್ರಾಹ್ಮಣ ಅರ್ಚನೆ ನಡೆದು ಸುಬ್ರಹ್ಮಣ್ಯನ ಹೆಸರಲ್ಲಿ ಸಂಕಲ್ಪ ನಡೆದು ಊಟ ಶುರುವಾಗುತ್ತದೆ. ಊಟದ ನಂತರ ಮತ್ತೆ ಸಂಕಲ್ಪ ನಡೆದು ದೇವರಿಗೆ ಗಂಟೆ ಬಡೆಯಲಾಗುತ್ತದೆ. ಇದಾದ ನಂತರ ಎಲ್ಲರೂ ಬಂದು ಈ ಎಲೆಯ ಮೇಲೆ ಉರುಳುತ್ತಾರೆ. ಇದರಲ್ಲಿ ಜಾತಿ ಎಂಬುದೇ ಇಲ್ಲ. ಕೆಲವೊಮ್ಮೆ 2000 ಜನ ಇರುತ್ತಾರೆ. ಇಲ್ಲಿ ಬಹುತೇಕ ಮಂದಿ ಈ ಸೇವೆ ಮಾಡಿದವರು ಒಂದಿಲ್ಲೊಂದು ಸಮಸ್ಯೆಯಿಂದ ಮುಕ್ತಿ ಪಡೆದವರೇ ಹೆಚ್ಚು. ಅದರಲ್ಲಿ ನಿವೃತ್ತ ನ್ಯಾಯಧೀಶರೂ ಕೆಲವೊಮ್ಮೆ ಇರುತ್ತಾರೆ ಎಂಬುದು ಕೂಡಾ ಗಮನಾರ್ಹ. ಹೀಗೆ ಈ ಸೇವೆಯ ಹೇಳಿಕೊಂಡದ್ದರಿಂದ ಅನೇಕರಿಗೆ ಮಾನಸಿಕವಾದ ನೆಮ್ಮದಿ ಸಿಕ್ಕಿದೆ. ಆ ನೆಮ್ಮದಿಯನ್ನು ತಡೆಯಲು ನಾವ್ಯಾರು ?. ಅವರ ಮಾನಸಿಕ ನೆಮ್ಮದಿ ಕಿತ್ತುಕೊಳ್ಳುವ ಹಕ್ಕು ನಮಗಿದೆಯೇ ?.





ಅದೇ ರೀತಿ ಇಲ್ಲಿ ಇನ್ನೊಂದು ಸೇವೆ ಇದೆ, ಕುಮಾರಧಾರಾ ನದಿಯಿಂದ ಸುಮಾರು 2.5 ಕಿಮೀ ದೂರ ಡಾಮರು ರಸ್ತೆಯಲ್ಲಿ ಉರುಳಿಕೊಂಡು, ಎಲ್ಲರೂ ರಸ್ತೆಯಲ್ಲಿ ಉಗುಳಿದ , ವಾಹನಗಳಿಂದ ಸುರಿದ ಎಣ್ಣೆಯ , ಚಪ್ಪಲಿಯಿಂದ ಮೆಟ್ಟಿದ ಡಾಮರು ರಸ್ತೆಯ ಮೇಲೆ ಉರುಳಿಕೊಂಡು ಬರುತ್ತಾರೆ. ಕೆಲವರಿಗೆ ಸುಮಾರು ೪ ಗಂಟೆ ಕಾಲ ತಗುಲುತ್ತದೆ ದೇವಸ್ಥಾನ ತಲುಪಲು.ಇದರಲ್ಲೂ ಮಾನಸಿಕ ನೆಮ್ಮದಿ ಸಿಗುತ್ತದೆ ಭಕ್ತರಿಗೆ.

ಹೀಗೆ ಸುಖಾಸುಮ್ಮನೆ ಒಂದು ನಂಬಿಕೆಯ ವಿರುದ್ದ ಮಾತನಾಡುತ್ತಾ, ಮಾನಸಿಕ ನೆಮ್ಮದಿಯನ್ನು ಕೆಡವಿ ಹಾಕಬಾರದು ಎನ್ನುವುದು ನನ್ನ ನಂಬಿಕೆ. ಏಕೆಂದರೆ ಇದೆಲ್ಲಾ ಸ್ವಯಂ ಪ್ರೇರಣೆಯಿಂದಲೇ ಆಗಬೇಕು.ಒತ್ತಾಯ ಬೇಕಿಲ್ಲ.ಮಾಡುವುದೂ ತರವಲ್ಲ.

ಹೀಗೆ ಮಾತನಾಡುವುದಾದರೆ ಅದ್ಯಾವುದೋ ಮಸೀದಿಯಲ್ಲಿ ನೀರಿಗೆ ಉಗುಳಿ ಅಲ್ಲಿನ ಮೌಲ್ವಿ ಕೊಡುತ್ತಾರೆ. ಇದನ್ನೇ ತೀರ್ಥ ಅಂತ ಲೀಟರ್ ಲೀಟರ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋಗಿ ಕುಡಿಯುತ್ತಾರೆ, ರೋಗ ಮುಕ್ತರಾಗುತ್ತಾರೆ. ಮತ್ತೊಂದು ಕಡೆ ಸೈತಾನನ್ನು ಬಿಡಿಸುತ್ತಾರೆ, ಪಾಪ ಕಳೆಯಲಿ ಎಂದು ಪ್ರಾಣಿ ಬಲಿ ನಡೆಸುತ್ತಾರೆ, ಕೋಳಿ ಬಲಿ ನಡೆಯುತ್ತದೆ ಇದಕ್ಕೆಲ್ಲಾ ಏನೆನ್ನವುದು?

ಹಾಗೆ ನೋಡುತ್ತಾ ಹೋದರೆ ತುಳುನಾಡಿನ ಎಲ್ಲಾ ಆಚರಣೆಗಳೂ ಕೂಡಾ ಶೋಷಣೆ ಮುಕ್ತ ಎನ್ನಲು ಆಗುತ್ತಾ ?. ದೈವಾರಾಧನೆಯಲ್ಲಿ ಕೂಡಾ ದೈವ ಪಾತ್ರಿ ಯಾರು ?.ಇಲ್ಲಿ ಶೋಷಣೆ ಅನ್ನೋದಕ್ಕಿಂತಲೂ ಹೆಚ್ಚು ಅದರಿಂದಾಗಿ ಜನರಿಗೆ ನೆಮ್ಮದಿ ಸಿಗುತ್ತಿದೆ, ಖುಷಿ ಪಡುತ್ತ್ತಾರೆ ಅಷ್ಟೇ. ಅಂತಹ ಶಕ್ತಿಯೊಂದು ಇನ್ನೂ ಹತ್ತಾರು ವರ್ಷಗಳ ಕಾಲ ರೋಗಮುಕ್ತ ಜೀವನ ನಡೆಸಲು ಅವರಿಗೆ ಸಹಕಾರಿಯಾಗುತ್ತದೆ. ಒಂದು ನಂಬಿಕೆ , ಆಚರಣೆಯ ಹಿಂದೆ ಇಂತಹದ್ದೆಲ್ಲಾ ಇರುತ್ತದೆ.ಇದನ್ನೆಲ್ಲಾ ಅಷ್ಟು ಸುಲಭವಾಗಿ ತೊಡೆದು ಹಾಕುವುದು , ಇದೆಲ್ಲಾ ಪುರೋಹಿತ ಶಾಹಿ ಎಂದೆಲ್ಲಾ ಅನಾವಶ್ಯಕ ವಿವಾದ ಎಬ್ಬಿಸುವುದರ ಬದಲು ಸಮಾಜವನ್ನು ಒಂದುಗೂಡಿಸುತ್ತಾ ಮಾನಸಿಕ ಪರಿವರ್ತನೆ ಮಾಡಬೇಕಾಗಿದೆ ಅಂತ ನನಗೆ ಅನಿಸುತ್ತದೆ.

15 ನವೆಂಬರ್ 2011

ಆತನೂ ಅನಿವಾರ್ಯ. . .

ನನಗೆ ಅನೇಕ ಬಾರಿ ಅನಿಸಿದ್ದಿದೆ,

ಈ ವಿಶಾಲವಾದ ಜಗತ್ತಿನಲ್ಲಿ ನಾವೆಲ್ಲಾ ಎಷ್ಟು ಸಣ್ಣವರು.ಆದರೂ ಎಂತಹ ಅಹಂಕಾರ ನಮಗೆ.ಒಂದು ಕ್ಷಣವೂ ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ನಾವು ಯೋಚಿಸಿದ್ದೇ ಇಲ್ಲ.ಏನೇ ಮಾತನಾಡಲಿ , ಯಾರೇ ಮಾತನಾಡಲಿ ಅದರಲ್ಲೊಂದು ಕುಹಕ, ಆ ಸಂಗತಿಯನ್ನು ಪೂರ್ಣ ಮನಸ್ಸಿನಿಂದ ಮೌನವಾಗಿ ಆಲಿಸಿ ಆ ಬಳಿಕ ಪ್ರತಿಕ್ರಿಯಿಸಲು ಹೋಗುವುದೇ ಇಲ್ಲ , ಅದಕ್ಕೂ ಮುನ್ನ ನಮ್ಮದೇ ಆದ ತೀರ್ಮಾನ ಮಾಡಿಯೇ ಬಿಡುತ್ತೇವೆ.ಹೀಗಾಗಿ ಅನೇಕ ಸಂಗತಿಗಳು ನಮಗೆ ಅರಿವೇ ಆಗುವುದಿಲ್ಲ. ನನಗೂ ಅನೇಕ ಬಾರಿ ಇಂತಹದ್ದೇ ಅನೇಕ ಸಂಗತಿಗಳು ಆಗಿವೆ. ಇದರಿಂದಾಗಿ ನನಗೇ ಮಾಹಿತಿಯ ಕೊರತೆ ಆದದ್ದಿದೆ.ಇದಕ್ಕೆ ಮೌನವಾಗಿ ಕೇಳದೇ ಇದ್ದದ್ದು ಕೂಡಾ ಕಾರಣ.ಮೌನವಾಗಿ ಯಾರು ಕೇಳುತ್ತಾರೆ ಅವರಿಗೆ ಹೆಚ್ಚು ಹೆಚ್ಚು ಮಾಹಿತಿಗಳು ಸಿಗುತ್ತವೆ ಅಂದುಕೊಳ್ಳುತ್ತೇನೆ. ಆ ಬಳಿಕವೇ ಮಾತನಾಡಬೇಕು ಎನ್ನವುದನ್ನು ನಾನು ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಅದರ ಜೊತೆಗೆ ಅನೇಕರಿಗೆ ಅವರ ಉದ್ಯೋಗದಲ್ಲಿ ಕೀಳರಿಮೆ.ಮೊನ್ನೆ ಒಂದು ಘಟನೆ ನಡೆಯಿತು. ನನ್ನ ವಾಹದ ಟಯರ್ ಪಂಕ್ಚರ್ ಆಯಿತು.ಅಂದು ಭಾನುವಾರ ಬೇರೆ.ನನಗಂತೂ ಅದು ತೀರಾ ಅಗತ್ಯ, ಅನಿವಾರ್ಯ ಕೂಡಾ. ನನ್ನ ಪರಿಚಯದವರಿಗೆ ಫೋನು ಮಾಡಿ ವಿಚಾರಿಸಿದಾಗ ಇಂದು ಯಾರೊಬ್ಬರೂ ಇಲ್ಲ ಎಂದರು.ಕೊನೆಗೆ ಸ್ವಲ್ಪ ದೂರದಲ್ಲಿ ಒಬ್ಬರು ಇದ್ದಾರೆ ಅವರ ಮನೆ ಅಲ್ಲೇ ಎಂದು ಹೇಳಿದ ಕಾರಣ ಆ ಜಾಗಕ್ಕೆ ಬೇರೆ ವಾಹನದಲ್ಲಿ ಹೋದೆ. ಆ ಗ್ಯಾರೇಜ್ ಮಾಲಕ ಅಂತೂ ಕೆಲಸ ಮಾಡಿಕೊಟ್ಟ. ಆ ಬಳಿಕ ಆತ ಹೇಳಿದ, ತನ್ನ ಸಂಕಷ್ಟ ಹೇಳಿಕೊಳ್ಳುತ್ತಾ, ನಮ್ಮ ಕೆಲಸ ಇದೇ ಅಲ್ಲವಾ , ಯಾರ‍್ಯಾರದ್ದಾರೂ ಕಾರು ಟಯರ್ ಬಿಚ್ಚಿ ಕೂಡಿಸುವುದಲ್ವಾ ? ಅಂತ ಹೇಳಿದ.
ಇದರಲ್ಲಿ ಆತನ ಒಳಗಿದ್ದ ಕೀಳರಿಮೆ ಅರಿವಾಯಿತು.

ನನಗನ್ನಿಸಿದ್ದು ಈ ಕೀಳರಿಮೆ ಏಕೆ ಅಂತ?. ಆತನ ಉದ್ಯೋಗ ಯಾವುದೇ ಇರಲಿ , ಆತ ಅನಿವಾರ್ಯವೇ. ಒಬ್ಬ ಟಯರ್ ಪಂಕ್ಚರ್ ಹಾಕುವವನು ಇಲ್ಲಿ ಇಲ್ಲ ಅಂತಾಗಿದ್ರೆ ಎಷ್ಟು ವಾಹನಗಳು ರಸ್ತೆಯಲ್ಲೇ ಉಳಿದುಕೊಳ್ಳುತ್ತಿತ್ತು?. ಒಬ್ಬ ಮೆಕ್ಯ್ಯಾನಿಕ್ ಇಲ್ಲಾ ಅಂದ್ರೆ ಎಷ್ಟು ಕಷ್ಟ ?. ಹೀಗೇ ಎಲ್ಲಾ ಕೆಲಸದವರೂ ಇಲ್ಲಿ ಅನಿವಾರ್ಯವೇ . ಹಾಗಾಗಿ ಅವನ ಆತ್ಮಗೌರವ ಇದ್ದೇ ಇರುತ್ತದೆ. ಆದರೆ ಅಲ್ಲಿ ಇರಬೇಕಾದದ್ದು ಪ್ರಾಮಾಣಿಕತೆ ಮಾತ್ರಾ ಅಲ್ಲವೇ?. ಹಾಗಾಗಿ ನನಗನ್ನಿಸುವುದು ಇಲ್ಲಿ ವೃತ್ತಿಗಿಂತ ಪ್ರೀತಿ ಮುಖ್ಯ ಅಂತ. ಈ ಜಗತ್ತಿನಲ್ಲಿ ಒಬ್ಬನಿಂಗ ಮತ್ತೊಬ್ಬ ಪ್ರತಿಭಾವಂತ ಇದ್ದೇ ಇರುತ್ತಾನೆ.ಹಾಗಾಗಿ ಈ ಜಗತ್ತಿನಲ್ಲಿ ನಾವೇ ಸರ್ವಶ್ರೇಷ್ಠ ಅಂತ ಅಂದುಕೊಳ್ಳುವುದಾದರೂ ಹೇಗೆ ?. ಎಷ್ಟೇ ಶ್ರೀಮಂತನಾಗಿರಲಿ ಆ ಕ್ಷಣದಲ್ಲಿ ಕಾರು ರಿಪೇರಿ ಮಾಡುವ ಮೆಕ್ಯಾನಿಕ್ ಇಲ್ಲಾಂದ್ರೆ ರಸ್ತೆಯಲ್ಲೇ ನಿಲ್ಲಬೇಕಲ್ಲಾ . . !.

12 ನವೆಂಬರ್ 2011

ಮಾರುಕಟ್ಟೆ ಕತೆ. .

ಕರಾವಳಿ ಜಿಲ್ಲೆಯ ಅಡಿಕೆ ಹಾಗೂ ರಬ್ಬರ್ ಬೆಳೆಗಾರರಿಗೆ ಈಗ ಗೊಂದಲದ ಸಮಯ. ಒಂದು ಕಡೆ ಅಡಿಕೆ ಮಾರುಕಟ್ಟೆಯಲ್ಲೀಗ ವದಂತಿಗಳದ್ದೇ ಸುದ್ದಿಯಾದರೆ ರಬ್ಬರ್ ಮಾರುಕಟ್ಟೆ ಒಂದೇ ದಿನದಲ್ಲಿ 10 ರೂಪಾಯಿ ದಿಢೀರ್ ಕುಸಿತ ಕಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ ಕೂಡಾ ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಕುಸಿತ ಕಂಡರೆ ಭಾರತದ ರಬ್ಬರ್ ಮಾರುಕಟ್ಟೆ ಸ್ಥಿರತೆಯನ್ನು ಕಾಯದುಕೊಂಡಿದೆ. ಅಡಿಕೆ ಹಾಗೂ ರಬ್ಬರ್ ಮಾರುಕಟ್ಟೆಯ ಈ ಏರಿಳಿತಗಳು, ವದಂತಿಗಳು ತಾತ್ಕಲಿಕ ಎಂಬುದನ್ನು ಬೆಳೆಗಾರರು ಗಮನಿಸಿಕೊಳ್ಳಬೇಕಾಗಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಈಗ ವದಂತಿಗಳು ಓಡಾಡುತ್ತಿವೆ. ಈ ವಾರ ಅಡಿಕೆ ಧಾರಣೆ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಹಳೆ ಅಡಿಕೆ ಧಾರಣೆಯು ೨೦೦ ರೂಪಾಯಿ ದಾಟಿ ಮುಂದಕ್ಕೆ ಹೋಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ಗುರುವಾರ ಬಂದರೂ ಧಾರಣೆ ಏರಿಕೆ ಕಾಣದೆ ಕೊಂಚ ಹಿಮ್ಮುಖವಾಗಿ ಕಂಡಿತು. ಇದರ ಬೆನ್ನಲ್ಲೇ ವದಂತಿಗಳು ಅಡಿಕೆ ಮಾರುಕಟ್ಟೆಯಲ್ಲಿ ಓಡಾಡತೊಗಿದೆ. ಹೀಗಾಗಿ ಆತಂಕಿತರಾದ ಬೆಳೆಗಾರರು ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದೆಲ್ಲವೂ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. ಅಡಿಕೆ ಮಾರುಕಟ್ಟೆಯ ವದಂತಿಗಳ ಪ್ರಕಾರ ಇನ್ನು ಧಾರಣೆ ಏರಿಕೆಯಾಗೋ ಲಕ್ಷಣವೇ ಇಲ್ಲ , ಇನ್ನಷ್ಟು ಕುಸಿತವಾಗುತ್ತದೆ ಎಂಬ ಗುಲ್ಲು ಹರಡುತ್ತಿದೆ. ಇದರ ಜೊತೆಗೆ ಕೇರಳ ಭಾಗದಿಂದ ಹೆಚ್ಚು ಅಡಿಕೆ ಬರುತ್ತಿದೆ ಎಂಬ ಮಾತೂ ಇದೆ. ಆದರೆ ವಾಸ್ತವವಾಗಿ ಇಂದು ಅಡಿಕೆ ಮಾರುಕಟ್ಟೆಯಲ್ಲಿ ಹಣ ಓಡಾಡುತ್ತಿಲ್ಲ. ಈ ಹಿಂದೆ ಕೂಡಾ ಇಂತಹದ್ದೇ ವಾತಾವರಣ ಸೃಷ್ಟಿಯಾಗಿ ಅಡಿಕೆ ಧಾರಣೆ ಕುಸಿತವಾಗಿತ್ತು. ಆ ನಂತರ ಏರಿಕೆ ಕಂಡಿತ್ತು. ಹೀಗಾಗಿ ಉತ್ತರ ಭಾರತ ವ್ಯಾಪಾರಿಗಳತ್ತ ಇಲ್ಲಿನ ವ್ಯಾಪಾರಿಗಳು ದೃಷ್ಟಿ ನೆಟ್ಟಿರುವುದರಿಂದ ಉತ್ತರ ಭಾರತದ ವ್ಯಾಪಾರಿಗಳು ಕೂಡಾ ಈಗ ಮಾರುಕಟ್ಟೆಯಲ್ಲಿ ಅಡಿಕೆ ಇದೆ ಎಂಬ ಲೆಕ್ಕದಲ್ಲಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲವರು ಅಡಿಕೆ ಧಾರಣೆ ಇಳಿಯುತ್ತಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಹೆದರಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಆರಂಭಿಸಿದ್ದಾರೆ.

ಈ ನಡುವೆ ಕಳೆದ ವಾರ ಅಡಿಕೆ ಧಾರಣೆ ೨೦೦ ರೂಪಾಯಿಗೆ ತಲಪಿತ್ತು. ಈ ನಡುವೆ ಗುರುವಾರ ಸಂಜೆಯ ವೇಳೆಗೆ ಹಳೆ ಅಡಿಕೆ ಧಾರಣೆಯು 189 , ಡಬ್ಬಲ್ ಚೋಲ್ 196 ಹಾಗೂ ಈಗಿನ ಹೊಸ ಅಡಿಕೆಯು 130 ರೂಪಾಯಿಗೆ ಆವಕಗೊಂಡಿದೆ.ಶುಕ್ರವಾರ ಕೂಡಾ ಇದೇ ಆಸುಪಾಸಿನ ಧಾರಣೆ ಸ್ಥಿರವಾಗಿದೆ.ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಈಗ ರೈತರ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂಬುದು ಬೆಳೆಗಾರರ ಅನಿಸಿಕೆ.ಕಳೆದ ಹಲವಾರು ಸಮಯಗಳಿಂದಲೂ ಕ್ಯಾಂಪ್ಕೋ ಅಡಿಕೆ ಧಾರಣೆ ಹಿಂದಕ್ಕೆ ಬಾರದಂತೆ ತಡೆದಿದೆ. ಅದೇ ರೀತಿ ಈ ಬಾರಿ ಕೂಡಾ ಯಾವುದೇ ಕಾರಣಕ್ಕೂ ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಇಳಿಸುವುದಿಲ್ಲ ಎಂದು ಹೇಳಿದೆ. ಗುರುವಾರದಂದು ಕ್ಯಾಂಪ್ಕೋದಲ್ಲಿ ೧೮೯ ರೂಪಾಯಿ ಇದ್ದರೆ ಇತರ ಕಡೆಗಳಲ್ಲಿ ಅಷ್ಟು ಧಾರಣೆ ಇಲ್ಲದೇ ಇದ್ದದ್ದು ಇದಕ್ಕೆ ಸಾಕ್ಷಿಯಾಗಿದೆ.ಇದರ ಜೊತೆಗೆ ಅಡಿಕೆ ಬೆಳೆಗಾರರು ಕೂಡಾ ಈಗ ದೃಢ ನಿರ್ಧಾರ ತಳೆಯಲೇಕಾಗಿದೆ.ಧಾರಣೆ ಕುಸಿತದ ವದಂತಿ ಬಂದ ತಕ್ಷಣವೇ ಅಡಿಕೆಯನ್ನು ಒಮ್ಮಲೇ ಮಾರುಕಟ್ಟೆಗೆ ಬಿಡುವುದರಿಂದ ಧಾರಣೆ ಇನ್ನಷ್ಟು ಕುಸಿತವಾಗುವುದು ನಿಶ್ಚಿತ.ಇದಕ್ಕಾಗಿ ಬೆಳೆಗಾರರೇ ಧಾರಣೆಯನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಲ್ಲಿ ಅಡಿಕೆ ದಾಸ್ತಾನು ಇಲ್ಲದೇ ಇದ್ದಾಗಲೂ ಧಾರಣೆ ಇಳಿಕೆಯ ಆಟ ಇದ್ದೇ ಇರುತ್ತದೆ. ಹೀಗೆ ಇಳಿಸುವುದರಿಂದ ವ್ಯಾಪಾರಿಗಳಿಗೆ ನಷ್ಟವಿಲ್ಲ. ಇದೆಲ್ಲವನ್ನೂ ಬೆಳೆಗಾರರು ಎಚ್ಚರಿಕೆಯಿಂದ ಗಮನಿಸಲೇಬೇಕಾಗುತ್ತದೆ.

ಜಾರಿದ ರಬ್ಬರ್ :

ರಬ್ಬರ್ ಧಾರಣೆ ವಿಪರೀತ ಕುಸಿತ ಕಂಡಿದೆ. ಬುಧವಾರದಂದು ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್‌ಗೆ 196.5 ರೂಪಾಯಿ ಇದ್ದ ಧಾರಣೆ ಗುರುವಾರ ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್ ಧಾರಣೆಯು 186 ರೂಪಾಯಿ. ಅಂದರೆ ಒಂದೇ ದಿನದಲ್ಲಿ 10 ರೂಪಾಯಿಯಷ್ಟು ಕುಸಿತ ಕಂಡಿದೆ.ಆದರೆ ಬ್ಯಾಂಕಾಂಗ್ ರಬ್ಬರ್ ಧಾರಣೆಯು 165 ರೂಪಾಯಿಗೆ ಇಳಿದಿದೆ.ಅಲ್ಲಿ ಕಳೆದ ಒಂದು ವಾರದಿಂದಲೇ ಕುಸಿತ ಕಂಡಿದೆ. ಇನ್ನು ಕುಲಾಲಾಂಪುರದಲ್ಲಿ 158 ರೂಪಾಯಿಗೆ ಇಳಿದಿದೆ.ಒಂದೇ ದಿನದಲ್ಲಿ 20 ರೂಪಾಯಿಯ ವ್ಯತ್ಯಾಸ ಕಂಡಿದೆ.ಶುಕ್ರವಾರದಂದು ಇನ್ನಷ್ಟು ಕುಸಿತ ಕಂಡಿದೆ.ಬ್ಯಾಂಕಾಂಗ್ ಧಾರಣೆಯು 161 ರೂಪಾಯಿ ಹಾಗೂ ಕುಲಾಲಾಂಪುರ ಧಾರಣೆ 154 ರೂಪಾಯಿಗೆ ಕುಸಿದರೆ ಭಾರತದಲ್ಲಿ ಮಾತ್ರಾ ಸ್ಥಿರತೆ ಕಾಯ್ದುಕೊಂಡಿದೆ. ಶುಕ್ರವಾರ ಕೂಡಾ 186 ರೂಪಾಯಿಯಲ್ಲೇ ರಬ್ಬರ್ ಖರೀದಿಯಾಗಿದೆ.

ಕಳೆದ ಮಾರ್ಚ್ ತಿಂಗಳ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ರಬ್ಬರ್ ಧಾರಣೆ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೈವಾನ್ ಪ್ರವಾಹ ಕಾರಣವಾಗಿದೆ.ಇದರ ಜೊತೆಗೆ ಚೀನಾದ ಸೇರಿದಂತೆ ಜಾಗತಿಕವಾದ ಆರ್ಥಿಕ ಏರುಪೇರು ಆಗುತ್ತಿರುವ ಕಾರಣದಿಂದಾಗಿ ರಬ್ಬರ್ ಕಂಪನಿಗಳು ಕೊಂಚ ಹಿನ್ನಡೆ ಅನುಭವಿಸಿವೆ. ಹೀಗಾಗಿ ರಬ್ಬರ್ ಬಳಕೆ ಕಡಿಮೆಯಾಗಿದೆ. ಈಗ ರಬ್ಬರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆ ಇರುವುದರಿಂದ ಜಾಗತಿಕ ಮಾರುಕಟ್ಟೆಯ ವ್ಯತ್ಯಾಸ ಕೂಡಾ ರಬ್ಬರ್ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಶೇರು ಮಾರುಕಟ್ಟೆ ಕುಸಿತ ಕಂಡಿರುವುದು ಕೂಡಾ ರಬ್ಬರ್ ಧಾರಣೆ ಹಿನ್ನಡೆಗೆ ಒಂದು ಕಾರಣ.ಅದರ ಜೊತೆಗೆ ಈ ವರ್ಷ ವಿವಿದ ಕಾರಣಗಳಿಂದಾಗಿ ಕಾರುಗಳ ಮಾರಾಟ ಕೂಡಾ ಕಡಿಮೆಯಾಗಿದೆ.ಈಗಿನ ಅಂದಾಜು ಪ್ರಕಾರ ದೇಶದಲ್ಲಿ ಸುಮಾರು ಶೇ.೨ ರಷ್ಟು ಕಾರು ಮಾರಾಟ ಕುಸಿತವಾಗಿದೆ. ಇನ್ನು ಟಯರ್ ಕಂಪನಿಗಳು ಕೂಡಾ ಬೇಡಿಕೆಗೆ ತಕ್ಕಷ್ಟೇ ಟಯರ್ ತಯಾರು ಮಾಡುತ್ತಿದ್ದಾರೆ. ಇನ್ನು ಚೀನಾದಂತಹ ದೇಶಗಳು ಈಗಾಗಲೇ ರಬ್ಬರ್ ದಾಸ್ತಾನು ಇರಿಸಿಕೊಂಡಿದೆ.ಇದೆಲ್ಲಾ ರಬ್ಬರ್ ಬೆಲೆ ಇಳಿಕೆಯ ಕಾರಣಗಳು.



ಆದರೆ ಇಡೀ ವಿಶ್ವದ ರಬ್ಬರ್ ಮಾರುಕಟ್ಟೆ ನೋಡಿದರೆ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಇದೇ ಕಾರಣಕ್ಕೆ ಹಿಂದೆ ರಬ್ಬರ್ ಮಾರುಕಟ್ಟೆಯು ೨೫೦ ರೂಪಾಯಿವರೆಗೆ ತಲುಪಬಹುದೆಂದು ರಬ್ಬರ್ ಮಾರುಕಟ್ಟೆ ವಿಶ್ಲೇಷಿಸಲಾಗಿತ್ತು. ಏಕೆಂದರೆ ಇಂದು ತೈಲ ಬೆಲೆ ಏರಿಕೆಯಾಗುತ್ತಲೇ ಇರುವ ಕಾರಣದಿಂದಾಗಿ ಸಿಂಥೆಟಿಕ್ ರಬ್ಬರ್ ತೀರಾ ದುಬಾರಿಯಾಗುವ ಕಾರಣದಿಂದಾಗಿ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಆದರೆ ಈಗಿನ ಕೆಲವು ತಾತ್ಕಾಲಿಕ ಸಮಸ್ಯೆಗಳಿಂದಾಗಿ ಧಾರಣೆ ಇಳಿಕೆಗೊಂಡರೂ ಕೂಡಾ ಮತ್ತೆ ನಿಧಾನವಾಗಿ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಇವೆ.ಅದುವರೆಗೆ ಬೆಳೆಗಾರರು ಇನ್ನು ಕಾಯಬೇಕು ಅಷ್ಟೇ.

02 ಅಕ್ಟೋಬರ್ 2011

ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್


ರಬ್ಬರ್ ಬೆಳೆಗಾರಿಗೆ ಟ್ಯಾಪಿಂಗ್ ಬಗ್ಗೆ ಇನ್ನು ಆತಂಕ ಬೇಡ.ಅದಕ್ಕಾಗಿಯೇ ಸಹಕಾರಿ ಚಿಂತನೆಯಡಿಯಲ್ಲಿ ಒಂದು ಹೆಲ್ಪ್ ಲೈನ್ ನಡೆಯುತ್ತಿದೆ. ಹಾಗೆಂದು ಇದು ಬ್ಯಾಂಕ್ ಅಲ್ಲ. ಆದರೆ ನಾವು ಇದನ್ನು ಬ್ಯಾಂಕ್ ಅಂತಲೇ ಕರೆಯಬಹುದು.ಏಕೆಂದರೆ ಟ್ಯಾಪರ‍್ಸ್ ಸಮಸ್ಯೆ ಯಾರೇ ಇದ್ದರೂ ಅವರು ನೇರವಾಗಿ ಸಂಪರ್ಕಿಸಿದರೆ ಅವರ ಸಮಸ್ಯೆ ಪರಿಹಾರ ನಿಶ್ಚಿತ.

ಇಂದು ಚಿನ್ನದ ಬೆಳೆಯಾಗಿಯೇ ಮೂಡಿಬಂದ ರಬ್ಬರ್ ಬೆಳೆಯತ್ತ ಜಿಲ್ಲೆಯ ರೈತರು ಮನಸ್ಸು ಹೊರಳಿಸಿದ್ದರು. ಆದರೆ ಈಗ ಎಲ್ಲರಿಗೂ ಒಂದು ಚಿಂತೆ ಆರಂಭವಾದದ್ದು ರಬ್ಬರ್ ಟ್ಯಾಪಿಂಗ್‌ನದ್ದು. ಇಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ತಮಿಳು ಮೂಲ ನಿವಾಸಿಗಳು ಹಾಗೂ ಶ್ರೀಲಂಕಾದಿಂದ ಆಗಮಿಸಿದ ತಮಿಳು ಭಾಷಿಕರು ಬಹುತೇಕ ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಈ ಕಾರ್ಮಿಕರೂ ಸಾಕಾಗದೆ ಕೇರಳದ ಕಾರ್ಮಿಕರೂ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಂತೂ ಇವರದೂ ಕೊರೆತ ಕಾಡಿ ಸ್ಥಳೀಯರೂ ಕೂಡಾ ಟ್ಯಾಪಿಂಗ್ ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ ಎಲ್ಲೆಡೆ ರಬ್ಬರ್ ಬೆಳೆ ಬೆಳೆದರೆ ಟ್ಯಾಪಿಂಗ್‌ಗೆ ಕಾರ್ಮಿಕರು ಎಲ್ಲಿಂದ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಅದಕ್ಕಾಗಿ ಸಹಕಾರಿ ತತ್ತ್ವದಲ್ಲಿ ಕಾರ್ಮಿಕರ ಬ್ಯಾಂಕ್ ಆರಂಭಗೊಳ್ಳುತ್ತಿದೆ.ಅದಕ್ಕಾಗಿ ಚಿಕ್ಕ ಪ್ರಯತ್ನವೊಂದು ನಡೆಯುತ್ತಿದೆ. ಈಗಾಗಲೇ ಈ ವ್ಯವಸ್ಥೆ ಬಳಸಿಕೊಂಡವರು ಖುಷಿ ಪಟ್ಟಿದ್ದಾರೆ.





ಇಂತಹ ಹೊಸ ಕಲ್ಪನೆಗೆ ಮುಂದಾದವರು ಸುಳ್ಯ ತಾಲೂಕಿನ ಪ್ರದೀಪ್ ಚಿಲ್ಪಾರ್. ಇವರು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಚಿಕ್ಕ ಸಹಕಾರಿ ಸಂಘಟನೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದಾರೆ.ಇದಕ್ಕಾಗಿ ಇವರು ಕಳೆದ ಒಂದು ವರ್ಷದಿಂದ ಶ್ರಮ ವಹಿಸಿ ಇಂದು ಸುಳ್ಯ ತಾಲೂಕಿನಲ್ಲಿ ಸುಮಾರು 60 ಜನ ಕಾರ್ಮಿಕರು ವಿವಿದೆಡೆ ರಬ್ಬರ್ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರು ಎಲ್ಲಿಂದ ಎಂಬ ಪ್ರಶ್ನೆ ಮೂಡಬಹುದು. ಪ್ರದೀಪ್ ಅವರ ಸಂಪರ್ಕದ ಮೂಲಕ ಒರಿಸ್ಸಾ , ಜಾರ್ಖಂಡ್ ಹಾಗೂ ಬಿಹಾರ ಪ್ರದೇಶದ ಜನರು ಇಲ್ಲಿ ರಬ್ಬರ್ ಕಾರ್ಮಿಕರು.

ಕಾರ್ಮಿಕರು ಎಲ್ಲಿಂದ ಮತ್ತು ಹೇಗೆ ?

ಇಲ್ಲಿ ರಬ್ಬರ್ ಕಾರ್ಮಿಕರ ಅಭಾವ ತೋರಿದಾಗ ತನ್ನ ಸಂಪರ್ಕದ ಮೂಲಕ ಕಾರ್ಮಿಕರನ್ನು ಹುಡುಕುವ ಪ್ರಯತ್ನವನ್ನು ಪ್ರದೀಪ್ ಮಾಡಿದರು. ಆಗ ಅವರಿಗೆ ಹೊಳೆದದ್ದು ಒರಿಸ್ಸಾ. ಅಲ್ಲಿನ ಬಹುಜನರಿಗೆ ಕೆಲಸವೇ ಇಲ್ಲ. ಅಂತಹ ಜನರಿಗೆ ಅಲ್ಲೇ ರಬ್ಬರ್ ಬಗ್ಗೆ ತರಬೇತಿ ನೀಡಿ ಇಲ್ಲಿಯೂ ವಿಶೇಷ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ಗೆ ಬಳಸಿಕೊಳ್ಳಲಾಯಿತು. ಬಹುಬೇಗನೆ ರಬ್ಬರ್ ಸಂಬಂಧಿತ ಕೆಲಸಗಳನ್ನು ಕಲಿತುಕೊಂಡ ಕಾರ್ಮಿಕರು ಈಗ ನುರಿತವರಾಗಿದ್ದಾರೆ. ಸದ್ಯಕ್ಕೆ ಒರಿಸ್ಸಾದ ಸಂಬಲ್‌ಪುರ್ ಸೇರಿದಂತೆ ಜಾರ್ಖಂಡ್‌ನ ಗಡಿಭಾಗದ ಜನರು ಈ ಕೆಲಸಕ್ಕೆ ಬರುತ್ತಿದ್ದಾರೆ. ಈಗ ಸುಳ್ಯ ತಾಲೂಕಿನ ವಿವಿಧ ರಬ್ಬರ್ ತೋಟಗಳಲ್ಲಿ 60 ಜನ ಕಾರ್ಮಿಕರು ಇದ್ದಾರೆ. ಇನ್ನಷ್ಟು ಬೇಡಿಕೆ ಇದ್ದು ಸದ್ಯದಲ್ಲೇ 300 ಜನರಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಹೇಗೆ ಇವರು ಕೆಲಸ ಮಾಡುತ್ತಾರೆ ?

ಇಲ್ಲಿ ರಬ್ಬರ್ ಬೆಳೆಗಾರ ಸಂಪರ್ಕಿಸಬೇಕಾದ್ದು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಸಹಕಾರಿ ಗೆಳೆಯ ಪ್ರದೀಪ್ ಅವರನ್ನು. ಆದರೆ ಇಲ್ಲಿ ಒಂದು ಬೇಡಿಕೆ ಇದೆ. ಏನೆಂದರೆ ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರಬ್ಬರ್ ಮರ ಬೇಕು. ಅಂದರೆ ಒಂದು ತೋಟದಲ್ಲಿ 2 ಜನ ಕಾರ್ಮಿಕರನ್ನು ಬಿಡಲೇಬೇಕಾಗುತ್ತದೆ. ಏಕೆಂದರೆ ಅವರು ಈ ಊರಿಗೆ ಹೊಸಬರು. ಹೀಗಾಗಿ ದಿನಕ್ಕೆ ಕನಿಷ್ಟ 600 ಮರ ಅಂದರೆ ಒಟ್ಟು 1200 ರಬ್ಬರ್ ಮರಗಳು ಇರುವ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕಾರ್ಮಿಕರು ತೋಟದಲ್ಲಿ ಟ್ಯಾಪಿಂಗ್‌ನಿಂದ ತೊಡಗಿ ರಬ್ಬರ್ ಶೀಟ್ ಮಾಡುವುದು , ರಬ್ಬರ್ ರೋಗಗಳನ್ನು ಪತ್ತೆ ಮಾಡುವುದು , ಅವುಗಳ ಆರೈಕೆ ಹೀಗೆ ಎಲ್ಲವನ್ನೂ ಅವರೇ ಮಾಡುತ್ತಾರೆ. ಇವರನ್ನು ನೋಡಿಕೊಳ್ಳಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಪ್ರದೀಪ್ ಅಥವಾ ಅವರ ಸೂಪರ್‌ವೈಸರ್‌ಗಳು ಆಗಮಿಸುತ್ತಾರೆ.15 ರಿಂದ 20 ಜನರಿಗೆ ಒಬ್ಬರಂತೆ ಸೂಪರ್‌ವೈಸರ್‌ಗಳು ಇದ್ದಾರೆ. ಆದರೆ ಕಾರ್ಮಿಕರ ಬಗ್ಗೆ ಸಮಾಧಾನ ಇಲ್ಲದೇ ಇದ್ದರೆ ಬೇರೆ ಕಾರ್ಮಿಕರನ್ನು ವ್ಯವಸ್ಥೆ ಮಾಡುತ್ತಾರೆ.ಹಾಗೆಂದು ಬೆಳೆಗಾರರು ಕೂಡಾ ಅವರತ್ತ ಲಕ್ಷ್ಯ ನೀಡಬೇಕಾಗುತ್ತದೆ. ಏಕೆಂದರೆ ಯಾವುದೋ ಊರಿನಿಂದ ಬಂದವರು ಎಂಬ ಧೋರಣೆಯ ಬದಲು ನಮ್ಮವರೇ ಎಂಬ ಭಾವನೆ ಬೆಳೆಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಕೆಲ ಕಾರ್ಮಿಕರು ಕನ್ನಡ , ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಾರ್ಮಿಕರ ವೇತನ ಎಲ್ಲವನ್ನೂ ಕೂಡಾ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಮೂಲಕವೇ ನೀಡಲಾಗುತ್ತದೆ.

ಬೆಳೆಗಾರರು ಏನು ಹೇಳುತ್ತಾರೆ ?

ಈಗಾಗಲೇ ಸುಳ್ಯ ತಾಲೂಕಿನಲ್ಲಿ ಇದೇ ಚಿಂತನೆಯಡಿಯಲ್ಲಿ ಸುಮಾರು ೨೦ ರಿಂದ ೩೦ ಕಡೆಗಳಲ್ಲಿ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.ಎಲ್ಲರೂ ಕೂಡಾ ಖುಷಿ ಪಟ್ಟಿದ್ದಾರೆ. ಮರ್ಕಂಜದ ರಬ್ಬರ್ ಬೆಳೆಗಾರ ರಮೇಶ್ ಕಾಟೂರಾಯ ಪ್ರಕಾರ , ಇದೊಂದು ಉತ್ತಮ ಪ್ರಯತ್ನ.ಈ ಮೂಲಕ ರಬ್ಬರ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಬೆಳೆಗಾರರಿಗೂ ಇದರಿಂದ ಪ್ರಯೋಜನವಾಗಿದೆ ಎನ್ನುತ್ತಾರೆ.ಇನ್ನೊಬ್ಬ ರಬ್ಬರ್ ಬೆಳೆಗಾರರ ಮರ್ಕಂಜದ ಮಾಪಲತೋಟ ಕೃಷ್ಣ ಭಟ್ , ಈ ಕಾರ್ಮಿಕರದ್ದು ಉತ್ತಮವಾದ ಕೆಲಸವಾಗಿರುತ್ತದೆ. ಊರಿನ ಕಾರ್ಮಿಕರಷ್ಟೇ ಗುಣಮಟ್ಟದ ಕೆಲಸ. ತಿಂಗಳಿಗೆ ಒಂದೇ ಒಂದು ರಜೆ ಮಾಡದೆ ಕೆಲಸ ಮಾಡುತ್ತಾರೆ. ಆದರೆ ಭಾಷೆಯದ್ದು ಮಾತ್ರಾ ಈಗ ಸಮಸ್ಯೆ.ಇದೊಂದು ಸಮಸ್ಯೆ ಹೊರತುಪಡಿಸಿದರೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷ್ಣ ಭಟ್.

ಕೇರಳದಲ್ಲಿ ಇದೆ ರಬ್ಬರ್ ಬ್ಯಾಂಕ್ :

ಇಲ್ಲಿ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಪ್ರದೀಪ್ ಅವರು ಬೆಳೆಗಾರರ ಅನುಕೂಲಕ್ಕಾಗಿ ಸಹಕಾರಿ ಮನೋಭಾವದಿಂದ ಈ ವ್ಯವಸ್ಥೆಯ ಮೂಲಕ ಕಾರ್ಮಿಕರ ಕೊರತೆ ನೀಗುವ ಪ್ರಯತ್ನ ಮಾಡಿದ್ದಾರೆ.
ಆದರೆ ಕೇರಳದಲ್ಲಿ ಈಗಾಗಲೇ ಇಂತಹದ್ದೇ ಬ್ಯಾಂಕ್ ರಚನೆಯಾಗಿದೆ. ಅಲ್ಲಿ ರಬ್ಬರ್ ಬೋರ್ಡ್‌ನ ಬೆಳೆಗಾರರ ಸಂಘದ ಮೂಲಕ ಕಾರ್ಮಿಕರ ಬ್ಯಾಂಕ್ ರಚನೆಯಾಗಿದೆ. ಅದಕ್ಕೆ ಬೋರ್ಡ್‌ನಿಂದಲೂ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸದ್ಯ ಯಾವುದೇ ಬ್ಯಾಂಕ್ ರಬ್ಬರ್ ಬೋರ್ಡ್ ಮೂಲಕ ರಚನೆಯಾಗಿಲ್ಲ. ಇದರಿಂದ ಕೇರಳದಲ್ಲಿ ಸಾಕಷ್ಟು ಪ್ರಯೋಜನವಾಗಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಹೇಳುತ್ತಾರೆ.

ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ :

ಇದ ರೀತಿಯ ವ್ಯವಸ್ಥೆಯನ್ನು ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂಬುದು ಪ್ರದೀಪ್ ಮಾತು. ಮೂಲತ: ಈ ಕಾರ್ಮಿಕರು ಗದ್ದೆಯ ಕೆಲಸಗಾರರು. ಸ‌ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಪ್ರಯೋಗಿಕವಾಗಿ ಗದ್ದೆಯೊಂದರಲ್ಲಿ ಸದ್ಯದಲ್ಲೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ಬಳಿಕ ಮುಂದೆ ಆಸಕ್ತ ರೈತರಲ್ಲಿಗೆ ಕಳುಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 3000 ಕಾರ್ಮಿಕರನ್ನು ಈ ಕಡೆ ತರಿಸಿ “ನಮ್ಮ ಗದ್ದೆ , ನಮ್ಮ ಅಕ್ಕಿ” ಎನ್ನುವ ಚಿಂತನೆಯ ಮೂಲಕ ತಾಲೂಕಿನಲ್ಲೂ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ನಡೆಸಲಾಗುವುದು ಎಂಬುದು ಪ್ರದೀಪ್ ಕನಸು. ಆದರೆ ಈ ಕಾರ್ಮಿಕರು ಅಡಿಕೆ ತೋಟಕ್ಕೆ ಒಗ್ಗಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಏಕೆಂದರೆ ತೋಟದ ಕೆಲಸವು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ. ಹೀಗಾಗಿ ಇದೆಲ್ಲವೂ ತರಬೇತಿಯಿಂದ ಅಸಾಧ್ಯ.

ಒಟ್ಟಿನಲ್ಲಿ ಕಾರ್ಮಿಕರ ಕೊರತೆಯಿಂದ ಚಿಂತಿತರಾಗಿದ್ದ ರಬ್ಬರ್ ಬೆಳೆಗಾರರಿಗೆ ಇಂದೊಂದು ಬೆಳವಣಿಗೆ ಆಶಾದಾಯಕವಾಗಿದೆ.ಕಾರ್ಮಿಕರಿಗಾಗಿ ಪರಿತಪಿಸುತ್ತಿದ್ದ ಬೆಳೆಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು. ಸಹಕಾರಿ ಮನೋಭಾವದ ಮೂಲಕ ಬೆಳೆಗಾರರಿಗೆ ಇನ್ನಷ್ಟು ಹೊಸ ನಿರೀಕ್ಷೆಗಳು ಚಿಗುರಿದಂತಾಗಿದೆ.


(ಈ ಸುದ್ದಿಯ ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. )

01 ಅಕ್ಟೋಬರ್ 2011

ಆತ ಹೇಳಿದ ಕತೆ. .

ನನ್ನ ಸ್ನೇಹಿತನೊಬ್ಬ ಒಂದು ಕತೆ ಬಿಡಿಸಿಟ್ಟ. ಅದು ನಮ್ಮ ಊರ ಭಾಷೆಯಲ್ಲಿ ಹೇಳುವುದಾದರೆ ಮಾತನಾಡಲೇಬಾರದು.ಮಾತನಾಡಿದರೆ ಆತ ಕೆಟ್ಟವನು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ ಅಂತ ನಾನು ಅಂದುಕೊಂಡಿದ್ದೇನೆ.

ಆತ ಹೇಳಿದ ಸಂಗತಿ , ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಇನ್ನೂ ಮಕ್ಕಳಾಗಿಲ್ಲ. ಅದಕ್ಕಾಗಿ ದೇವರು , ಮಂತ್ರ , ಪೂಜೆ , ಹರಕೆ ಹೀಗೆ ಎಲ್ಲವೂ ಆಗಿತ್ತು. ಆದರೆ ಮತ್ತೂ ಮಕ್ಕಳಾಗಿಲ್ಲ. ಕಾರಣ ಏನು ಎಂದು ವೈಜ್ಞಾನಿಕವಾಗಿ ಕಂಡುಹುಡುಕುವ ಕೆಲಸವನ್ನೂ ಮಾಡಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಲು ಬಂದಿದ್ದರಂತೆ. ಅಲ್ಲಿ ಅಂತಹ ಜನರನ್ನೇ ಮೋಸ ಮಾಡುವ ಗುಂಪೊಂದು ಇತ್ತು. ಆಸೆ ಹುಟ್ಟಿತು ಮತ್ತೂ ಒಂದಿಪ್ಪತ್ತು ಸಾವಿರ ಖರ್ಚು ಮಾಡಿದರು. ಆದರೂ ಪ್ರಯೋಜನವಿಲ್ಲ. ಕೊನೆಗೆ ಯಾರೋ ಹೇಳಿದಂತೆ ಸರಿಯಾದ ವೈದ್ಯರಲ್ಲಿ ಗುಪ್ತವಾಗಿ ಮಾತನಾಡಿ , ಆಪ್ತ ಸಮಾಲೋಚನೆ ಮಾಡಿ ಎಂದು ಸಲಹೆ ನೀಡದರಂತೆ. ಅಂತೂ ಹೆಂಡತಿಯ ಒತ್ತಾಯಕ್ಕೆ ಆಪ್ತ ಸಮಾಲೋಚನೆಗೆ ಹೋದರಂತೆ. ಆಗ ತಿಳಿಯಿತು ಅವನಿಗೇ ಚಿಕ್ಕದೊಂದು ಸಮಸ್ಯೆ.ಅದಕ್ಕಾಗಿ ಇಷ್ಟು ವರ್ಷ ಕಾಯಲೇ ಬೇಡವಿತ್ತು. ಚಿಕ್ಕದೊಂದು ಸರ್ಜರಿ ಮಾಡಿಸಿದರೆ ಮುಗೀತು ಎಂದರಂತೆ ವೈದ್ಯರು. ಒಂದು ವಾರದ ನಂತರ ಅದೂ ಆಯಿತು. ಆ ಬಳಿಕ ಅವಳು ಮಗುವನ್ನೂ ಪಡೆದಳು. ಇದು ಅವರೊಬ್ಬರ ಕತೆ ಅಲ್ಲ. ಅದೆಷ್ಟೋ ಜನರ ಕತೆ.

ಆದರೆ ಇಲ್ಲಿ ವಿಷಯ ಏನು ಗೊತ್ತಾ ? ಆಪ್ತ ಸಮಾಲೋಚಕರದ್ದೇ. ಅವನು ಅಂತಾನೆ ಈ ಸಮಾಲೋಚಕರು ಯಾರು ಎಲ್ಲಿರುತ್ತಾರೆ ಅಂತಾನೆ ಹಲವರಿಗೆ ಗೊತ್ತೇ ಇರುವುದಿಲ್ಲ. ಅವರಲ್ಲಿ ಕೆಲವರು ಸಮಾಲೋಚನೆಗಾಗಿ ಶುಲ್ಕವನ್ನೂ ವಿಧಿಸುತ್ತಾರೆ. ಅದೂ ಪರವಾಗಿಲ್ಲ. ಆತ ಹೇಳಿದ ಈಗ ಅದಕ್ಕಾಗಿಯೇ ಕೆಲವು ಬ್ಲಾಗ್‌ಗಳು ಶುರುವಾಗಿದೆ.ಅವೂ ಕೂಡಾ ಪ್ರಯೋಜನವಾದೀತು ಅಂತಾನೆ ಆತ.ಅದರ ಲಿಂಕ್ ಇಲ್ಲಿದೆ (http://www.dehaveene.blogspot.com/) ಬೇಕಾದವರು ನೋಡಬಹುದು. ಅದರ ಜೊತೆಗೆ ಆತ ಹೇಳಿದ ಈ ಸಮಾಲೋಚಕರಲ್ಲಿ ಕೆಲವರು ಗಂಟೆಗೆ 1 ಸಾವಿರ ರೂಪಯಿ ಶುಲ್ಕ ವಿಧಿಸುತ್ತಾರೆ ಅಂತೆ. .!.

ಇದು ಅಸಹ್ಯ ಅಂತ ಭಾವಿಸಬಾರದು. ಏಕೆಂದರೆ ಬದುಕು ಪೂರ್ತಿಯಾಗಬೇಕಾದರೆ ಅದೂ ಬೇಕು. ಅದೇ ಬದುಕು ಆಗಬಾರದು ಅಷ್ಟೆ. ಅದಿಲ್ಲದೇ ಇದ್ದಿದ್ದರೆ ಜಗತ್ತು ಯಾವಾಗಲೋ ಮುಗಿದುಹೋಗುತ್ತಿತ್ತು ಅಲ್ಲವೇ. ಅನಾದಿ ಕಾಲದ ದೇವಸ್ಥಾನದ ಕೆತ್ತನೆಗಳಲ್ಲೂ ಅದ್ಭುತವಾಗಿ ಹೇಳಲಾಗುತ್ತಿತ್ತು.


20 ಆಗಸ್ಟ್ 2011

ಯಾರು ಭ್ರಷ್ಟಾಚಾರಿ . . ?


ಆತನೊಬ್ಬ ಪದವೀಧರ. ಸಣ್ಣ ನೌಕರಿಯಲ್ಲೂ ಇದ್ದಾನೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೆಕು ಅಂತಾನೆ.ಅದರ ಬಗ್ಗೆ ಪ್ರತಿ ದಿನವೂ ಮಾತನಾಡುತ್ತಾನೆ. ಈಗಂತೂ ಯಾವಾಗಲೂ ಅದೇ ಮಾತು. ಆದರೆ . . ಆತನೇ ಹೇಳಿದ ಸಂಗತಿಯೊಂದು,

ಇತ್ತೀಚೆಗೆ ಒಂದು ಘಟನೆ ನಡೆಯಿತು. ಆತನಿಗೊಂದು ಜನ್ಮ ದಿನಾಂಕದ ದೃಢೀಕರಣ ಪತ್ರ ಬೇಕಾಯಿತು. ಅದಕ್ಕಾಗಿ ಆತ ಸುಮಾರು 60 ಕಿಲೋಮೀಟರ್ ಹೋಗಬೇಕು. ಬೆಳಗ್ಗೆ ಬಸ್ಸಲ್ಲಿ ಹೋದರೆ ಆತ ಬರುವಾಗ ಹೆಚ್ಚೂಕಮ್ಮಿ ಸಂಜೆಯಾಗುತ್ತದೆ. ಅದೂ ಅಲ್ಲದೆ ಆತನ ಒಂದು ದಿನ ರಜೆಯೂ ಹಾಕಬೇಕಾಗುತ್ತದೆ.

ಹಾಗೇ ಆತ ಅಂದೊಂದು ದಿನ ಹೊರಟೇ ಬಿಟ್ಟ. ಅದು ಪುರಸಭೆ. ಹೋದವನೇ ತನ್ನ ದಾಖಲೆ ಬೇಕೆಂದು ಕೇಳಿದ. ಕುಳಿತುಕೊಳ್ಳಿ ಸ್ವಲ್ಪ, ಎಂಬ ಉತ್ತರ ಆ ಅಧಿಕಾರಿಯದ್ದು. ಸ್ವಲ್ಪ ಹೊತ್ತಾದ ಮೇಲೆ ಒಂದು ಅರ್ಜಿ ಕೊಡಿ ಎಂದು ಹೇಳಿದ ಅಧಿಕಾರಿ. ಅದನ್ನೂ ಬರೆದುಕೊಟ್ಟಾಯಿತು. ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ ಅಧಿಕಾರಿ. ಇವತ್ತಿಗೆ ಆಗೋದಿಲ್ಲ ಎಂದ.

ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ ಎನ್ನುವ ಉತ್ತರ.

ಇನ್ನೂಮ್ಮೆ, ಸ್ವಲ್ಪ ಇವತ್ತೇ.. . ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು.

ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . .!.

ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ.

***************

ಈ ಘಟನೆಯ ನಂತರ ಆತ ಹೇಳುತ್ತಾನೆ ,

ನನಗೆ 100 ರೂಪಾಯಿ ಪ್ರಶ್ನೆ ಅಲ್ಲ. ನೋಡಿ ನನಗೆ ಬಸ್ಸಿಗೆ ಹೋಗಿ ಬರಲು 70 ರೂಪಾಯಿ ಬೇಕು. ಅದರ ಜೊತೆಗೆ ಇತರ ಖರ್ಚು ಅಂತ 30 ರೂಪಾಯಿ ಆಗುತ್ತೆ. ಇನ್ನು ಒಂದು ದಿನ ರಜೆ ಬೇರೆ ಅದಕ್ಕೆ ಕನಿಷ್ಟ 230 ರೂಪಾಯಿ ಲಾಸ್ ಆಗುತ್ತದೆ. ಹಾಗಿರುವಾಗ ನಾನು 100 ರೂಪಾಯಿ ಆತನಿಗೆ ಕೊಟ್ಟರೆ ಏನಾಯಿತು. ಇನ್ನೊಮ್ಮೆ ಹೋಗಲು ಉಳಿಯಿತಲ್ಲಾ , ಹಣವೂ, ಶ್ರಮವೂ ಉಳಿಯತಲ್ಲಾ ಅಂತ ಹೇಳುತ್ತಾನೆ ಆತ.

ಈಗ ಭ್ರಷ್ಟಾಚಾರಿ ಯಾರು ?.ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ?.

ಈಗ ನನಗೆ ನೆನೆಪಾಗುತ್ತದೆ , ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಇತ್ತೀಚೆಗೆ ಹೇಳಿದರು , ಕೊಡುವ ಕೈಗಳು ಕಡಿಮೆಯಾದಾಗ ಕೊಳ್ಳುವ ಕೈಗಳು ಕಡಿಮೆಯಾಗುತ್ತದೆ. ಕೊನೆಗೇ ಅದೇ ಇಲ್ಲವಾಗುತ್ತದೆ. ಹಾಗಾಗಿ ಇಂದು ಎಲ್ಲೆಡೆ ನಡೆಯುತ್ತಿರುವ ಧರಣಿ ಜೊತೆಗೆ ನಮ್ಮೊಳಗೇ ಕೂಡಾ ಧರಣಿಯಾಗಬೇಕು ಎಂದು ಹೇಳಿದ್ದು ಅನುರಣಿಸುತ್ತಲೇ ಇದೆ.



31 ಜುಲೈ 2011

ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?

ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು.

ಮೊನ್ನೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ರಾಜಕೀಯದ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತು. ಕರ್ನಾಟಕದ ಬಿಜೆಪಿಗೆ ಇದು ಹೊಸದಲ್ಲ ಬಿಡಿ.ಇಲ್ಲಿ ಶಿಸ್ತಿನ ಪಕ್ಷಕ್ಕೆ ಇದೆಲ್ಲಾ ಮಾಮೂಲು ಅಂತಾಗಿದೆ. ಹಾಗಿದ್ದರೂ ಈ ಬಾರಿ ಮಾತ್ರಾ ಗಂಭೀರ ವಿಚಾರ ಇದು. ಲೋಕಾಯುಕ್ತರು ಸಲ್ಲಿಸಿದ್ದ ಗಣಿ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರೂ ಇದೆ. ಹಾಗಾಗಿ ಈಗಂತೂ ನೈತಿಕತೆಯ ಪ್ರಶ್ನೆ. ಇದುವರೆಗೆ ಕರ್ನಾಟಕದ ಬಿಜೆಪಿಯಲ್ಲಿ ಇದು ಇದ್ದಂತೆ ಕಂಡುಬಂದಿರಲಿಲ್ಲ. ಆದರೆ ಈಗ ಇಡೀ ದೇಶದ ಜನ ನೋಡುತ್ತಿದ್ದಾರೆ ಈ ವರದಿಯನ್ನು ಅದರ ಜೊತೆಗೆ ಭ್ರಷ್ಠಾಚಾರದ ಬಗ್ಗೆ ಸಾಮಾನ್ಯ ಮನುಷ್ಯನೂ ಮಾತನಾಡುತ್ತಿದ್ದಾನೆ ಹಾಗಾಗಿ ಸರಕಾರಕ್ಕೆ ಅದಕ್ಕಿಂತಲೂ ಹೆಚ್ಚು ದೇಶದ ಬಿಜೆಪಿಗೆ ಇದೊಂದು ಮುಖ್ಯ ವಿಷಯ. ಹಾಗಾಗಿ ಇದು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಿ.

ವಿಷಯ ಅದಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಎಂಬ ಖ್ಯಾತಿಗೂ ಬಂದಿತು. ಆಗ ಎಷ್ಟು ಜನ ಸಂತಸ ಪಟ್ಟವರು. ಮೊನ್ನೆ ನನಗೊಬ್ಬರು ಹಿರಿಯರು ಹೇಳಿದರು , ಅಂದು 1978 - 80 ರ ಸುಮಾರಿಗೆ ಒಂದೇ ಒಂದು ಸೀಟು ಇದ್ದಿರಲಿಲ್ಲ ಬಿಜೆಪಿಗೆ , ಜನಸಂಘಕ್ಕೆ , ಆಗ ನಾವು ನಮ್ಮ ತೋಟ ಮಾರಿ ಪಾರ್ಟಿಗಾಗಿ ಕೆಲಸ ಮಾಡಿದ್ದೆವು. ಅದು ಮಾತ್ರವಲ್ಲ ಎಷ್ಟು ಜನ ಇದರಲ್ಲಿ ಹೋರಾಡಿದ್ದರು , ಆಗ ಅಧಿಕಾರ ಎಂಬುದು ನಮಗೆ ಕನಸಾಗಿತ್ತು ಎಂದು ಅವರು ವಿವರಿಸುತ್ತಿದ್ದರು , ಅದೆಷ್ಟೂ ಜನ ನ್ಯಾಯಕ್ಕಾಗಿ ಹೋರಾಡಿದ್ದಾರೆ ಇದೇ ಇಂದಿನ ಬಿಜೆಪಿಯಲ್ಲಿ, ಆದರೆ ಅದು ಅಧಿಕಾರಕ್ಕೆ ಅಲ್ಲ , ಊರ ಜನರಿಗಾಗಿ. ಹೀಗಿದ್ದ ಪಕ್ಷ ಇವತ್ತು ನೋಡಿದರೆ ಅಧಿಕಾರಕ್ಕಾಗಿಯೇ ಉಳಿದುಕೊಂಡಂತಿದೆ ಎನ್ನುತ್ತಾರೆ ಅವರು.ಆಗ ಇದೇ ಪಾರ್ಟಿಯಲ್ಲಿ ಜಾತಿ ಎಂಬುದು ಇದ್ದೇ ಇರಲಿಲ್ಲ.ಎಲ್ಲರೂ ಸಮಾನರು. ಒಬ್ಬ ನಾಯಕ.ಅವನ ಮಾತೇ ಅಂತಿಮ. ಆದರೆ ಎಲ್ಲರೂ ಜೊತೆಯಾಗಿ ಕೂತು ಚರ್ಚಿಸಿ ಮುಂದಿನ ನಡೆ ಇತ್ತು. ಆ ಬಳಿಕ ಎಲ್ಲವೂ ನಾಯಕ ಹೇಳಿದಂತೆ.ನಾಯಕನೇ ಮುಂದೆ.ಸುಳಿದವರು ಆತನ ಹಿಂದೆ. ಆದರೆ ಇವತ್ತು ನೋಡಿ ಎಲ್ಲರೂ ನಾಯಕರೇ , ಜಾತಿ ಜಾತಿ ಅಂತ ಪಕ್ಷದೊಳಗ ಜಾತಿ ನಾಯಕರು ಆಗಿ ಬಿಟ್ಟಿದ್ದಾರೆ.

ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು.

ಅವರು ಹೇಳಿದ್ದು ನಿಜ ಅನ್ನಿ.

ಹಿಂದೆಲ್ಲಾ ಬಿಜೆಪಿಯಲ್ಲಿ ಓಟಿಗೆ ನೋಟು ಕೊಡುತ್ತಿರಲಿಲ್ಲ. ಕಾರ್ಯಕರ್ತರೆಲ್ಲರೂ ಅವರೇ ಕೈಯಿಂದ ದುಡ್ಡು ಹಾಕಿ ಚುನಾವಣೆಗೆ ಶ್ರಮಿಸುತ್ತಿದ್ದರು. ಆದರೆ ಇಂದು ಅದೇ ಬಿಜೆಪಿಯಲ್ಲಿ ದುಡ್ಡು ಕೊಡದೆ ಚುನಾವಣೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಳಿಯುವುದಿಲ್ಲ. ಅದು ಬಿಡಿ ಅಂದು ಒಂದು ವಾರ್ಡ್‌ನಲ್ಲಿ ಇಷ್ಟೇ ಓಟು ಬಿಜೆಪಿಗೆ ಅಂತ ಲೆಕ್ಕ ಮಾಡಿ ಹೇಳುತ್ತಿದ್ದರು ಕಾರ್ಯಕರ್ತರು , ಆದರೆ ಇಂದು ಈ ಲೆಕ್ಕ ಎಲ್ಲಾ ತಲೆಕೆಳಗಾಗಿದೆ. ಹಾಗೆ ಲೆಕ್ಕ ಮಾಡುವವರೂ ಇಲ್ಲ , ಕೇಳುವವರೂ ಇಲ್ಲ.

ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ?. ಯಾಕೆಂದರೆ ಇಷ್ಟಲ್ಲಾ ರಾಜಕೀಯ ಪ್ರಹಸನಗಳು ನಡೆಯುತ್ತಿದ್ದರೂ ಹೈಕಮಾಂಡ್ ಯಾಕೆ ಸುಮ್ಮನೆ ಇತು. ನೋಡಿ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಏನು ಮಾಡಿತು? , ಇತ್ತ ನೋಡಿ ಕೇರಳದಲ್ಲಿ ಅಚ್ಯುತಾನಂದನ್ ಹಾಗೂ ಪಿಣರಾಯಿ ನಡುವಿನ ಜಗಳದಲ್ಲಿ ಏನು ಮಾಡಿತು ಅವರ ಹೈಕಮಾಂಡ್ ? ಅವುಗಳೆಲ್ಲಾ ಅಷ್ಟು ಬಲಾಡ್ಯವಾಗಿದ್ದರೆ ಬಿಜೆಪಿ ಹೈಕಮಾಂಡ್ ಯಾಕೆ ದುರ್ಬಲವಾಗಿದೆ ಅನ್ನೋದೇ ವಿಶೇಷ. . !

ಏನೇ ಇರಲಿ. ಶಿಸ್ತಿನ ಪಕ್ಷ , ಸಂಘಪರಿವಾರದ ಮಾರ್ಗದರ್ಶನದಲ್ಲಿ ಬೆಳೆಯುವ ಪಕ್ಷದಲಿ ಹೀಗೆ ಆಗಬಾರದಿತ್ತು.ಈಗ ಆದದ್ದಕ್ಕೆ ಮುಂದೆ ಪ್ರಾಯಶ್ಚಿತ್ತ ಇದ್ದೇ ಇದೆ ಬಿಡಿ.

23 ಜುಲೈ 2011

ಈತ ನಮ್ಮೂರಿನ ಮಿತ್ರ . .

ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!




ನಮ್ಮಲ್ಲೀಗ ಆಟಿ ತಿಂಗಳು.

ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!

ನಮ್ಮಲ್ಲೆಲ್ಲಾ ಆಟಿ . . ಅಲ್ಲೆಲ್ಲಾ ಹೇಳುವ ಆಷಾಡ ಮಾಸ.

ಇಲ್ಲಿ ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.

ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.


ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ

ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.

17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.