02 ಅಕ್ಟೋಬರ್ 2011

ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್


ರಬ್ಬರ್ ಬೆಳೆಗಾರಿಗೆ ಟ್ಯಾಪಿಂಗ್ ಬಗ್ಗೆ ಇನ್ನು ಆತಂಕ ಬೇಡ.ಅದಕ್ಕಾಗಿಯೇ ಸಹಕಾರಿ ಚಿಂತನೆಯಡಿಯಲ್ಲಿ ಒಂದು ಹೆಲ್ಪ್ ಲೈನ್ ನಡೆಯುತ್ತಿದೆ. ಹಾಗೆಂದು ಇದು ಬ್ಯಾಂಕ್ ಅಲ್ಲ. ಆದರೆ ನಾವು ಇದನ್ನು ಬ್ಯಾಂಕ್ ಅಂತಲೇ ಕರೆಯಬಹುದು.ಏಕೆಂದರೆ ಟ್ಯಾಪರ‍್ಸ್ ಸಮಸ್ಯೆ ಯಾರೇ ಇದ್ದರೂ ಅವರು ನೇರವಾಗಿ ಸಂಪರ್ಕಿಸಿದರೆ ಅವರ ಸಮಸ್ಯೆ ಪರಿಹಾರ ನಿಶ್ಚಿತ.

ಇಂದು ಚಿನ್ನದ ಬೆಳೆಯಾಗಿಯೇ ಮೂಡಿಬಂದ ರಬ್ಬರ್ ಬೆಳೆಯತ್ತ ಜಿಲ್ಲೆಯ ರೈತರು ಮನಸ್ಸು ಹೊರಳಿಸಿದ್ದರು. ಆದರೆ ಈಗ ಎಲ್ಲರಿಗೂ ಒಂದು ಚಿಂತೆ ಆರಂಭವಾದದ್ದು ರಬ್ಬರ್ ಟ್ಯಾಪಿಂಗ್‌ನದ್ದು. ಇಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ತಮಿಳು ಮೂಲ ನಿವಾಸಿಗಳು ಹಾಗೂ ಶ್ರೀಲಂಕಾದಿಂದ ಆಗಮಿಸಿದ ತಮಿಳು ಭಾಷಿಕರು ಬಹುತೇಕ ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಈ ಕಾರ್ಮಿಕರೂ ಸಾಕಾಗದೆ ಕೇರಳದ ಕಾರ್ಮಿಕರೂ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಂತೂ ಇವರದೂ ಕೊರೆತ ಕಾಡಿ ಸ್ಥಳೀಯರೂ ಕೂಡಾ ಟ್ಯಾಪಿಂಗ್ ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ ಎಲ್ಲೆಡೆ ರಬ್ಬರ್ ಬೆಳೆ ಬೆಳೆದರೆ ಟ್ಯಾಪಿಂಗ್‌ಗೆ ಕಾರ್ಮಿಕರು ಎಲ್ಲಿಂದ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಅದಕ್ಕಾಗಿ ಸಹಕಾರಿ ತತ್ತ್ವದಲ್ಲಿ ಕಾರ್ಮಿಕರ ಬ್ಯಾಂಕ್ ಆರಂಭಗೊಳ್ಳುತ್ತಿದೆ.ಅದಕ್ಕಾಗಿ ಚಿಕ್ಕ ಪ್ರಯತ್ನವೊಂದು ನಡೆಯುತ್ತಿದೆ. ಈಗಾಗಲೇ ಈ ವ್ಯವಸ್ಥೆ ಬಳಸಿಕೊಂಡವರು ಖುಷಿ ಪಟ್ಟಿದ್ದಾರೆ.





ಇಂತಹ ಹೊಸ ಕಲ್ಪನೆಗೆ ಮುಂದಾದವರು ಸುಳ್ಯ ತಾಲೂಕಿನ ಪ್ರದೀಪ್ ಚಿಲ್ಪಾರ್. ಇವರು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಚಿಕ್ಕ ಸಹಕಾರಿ ಸಂಘಟನೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದಾರೆ.ಇದಕ್ಕಾಗಿ ಇವರು ಕಳೆದ ಒಂದು ವರ್ಷದಿಂದ ಶ್ರಮ ವಹಿಸಿ ಇಂದು ಸುಳ್ಯ ತಾಲೂಕಿನಲ್ಲಿ ಸುಮಾರು 60 ಜನ ಕಾರ್ಮಿಕರು ವಿವಿದೆಡೆ ರಬ್ಬರ್ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರು ಎಲ್ಲಿಂದ ಎಂಬ ಪ್ರಶ್ನೆ ಮೂಡಬಹುದು. ಪ್ರದೀಪ್ ಅವರ ಸಂಪರ್ಕದ ಮೂಲಕ ಒರಿಸ್ಸಾ , ಜಾರ್ಖಂಡ್ ಹಾಗೂ ಬಿಹಾರ ಪ್ರದೇಶದ ಜನರು ಇಲ್ಲಿ ರಬ್ಬರ್ ಕಾರ್ಮಿಕರು.

ಕಾರ್ಮಿಕರು ಎಲ್ಲಿಂದ ಮತ್ತು ಹೇಗೆ ?

ಇಲ್ಲಿ ರಬ್ಬರ್ ಕಾರ್ಮಿಕರ ಅಭಾವ ತೋರಿದಾಗ ತನ್ನ ಸಂಪರ್ಕದ ಮೂಲಕ ಕಾರ್ಮಿಕರನ್ನು ಹುಡುಕುವ ಪ್ರಯತ್ನವನ್ನು ಪ್ರದೀಪ್ ಮಾಡಿದರು. ಆಗ ಅವರಿಗೆ ಹೊಳೆದದ್ದು ಒರಿಸ್ಸಾ. ಅಲ್ಲಿನ ಬಹುಜನರಿಗೆ ಕೆಲಸವೇ ಇಲ್ಲ. ಅಂತಹ ಜನರಿಗೆ ಅಲ್ಲೇ ರಬ್ಬರ್ ಬಗ್ಗೆ ತರಬೇತಿ ನೀಡಿ ಇಲ್ಲಿಯೂ ವಿಶೇಷ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ಗೆ ಬಳಸಿಕೊಳ್ಳಲಾಯಿತು. ಬಹುಬೇಗನೆ ರಬ್ಬರ್ ಸಂಬಂಧಿತ ಕೆಲಸಗಳನ್ನು ಕಲಿತುಕೊಂಡ ಕಾರ್ಮಿಕರು ಈಗ ನುರಿತವರಾಗಿದ್ದಾರೆ. ಸದ್ಯಕ್ಕೆ ಒರಿಸ್ಸಾದ ಸಂಬಲ್‌ಪುರ್ ಸೇರಿದಂತೆ ಜಾರ್ಖಂಡ್‌ನ ಗಡಿಭಾಗದ ಜನರು ಈ ಕೆಲಸಕ್ಕೆ ಬರುತ್ತಿದ್ದಾರೆ. ಈಗ ಸುಳ್ಯ ತಾಲೂಕಿನ ವಿವಿಧ ರಬ್ಬರ್ ತೋಟಗಳಲ್ಲಿ 60 ಜನ ಕಾರ್ಮಿಕರು ಇದ್ದಾರೆ. ಇನ್ನಷ್ಟು ಬೇಡಿಕೆ ಇದ್ದು ಸದ್ಯದಲ್ಲೇ 300 ಜನರಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಹೇಗೆ ಇವರು ಕೆಲಸ ಮಾಡುತ್ತಾರೆ ?

ಇಲ್ಲಿ ರಬ್ಬರ್ ಬೆಳೆಗಾರ ಸಂಪರ್ಕಿಸಬೇಕಾದ್ದು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಸಹಕಾರಿ ಗೆಳೆಯ ಪ್ರದೀಪ್ ಅವರನ್ನು. ಆದರೆ ಇಲ್ಲಿ ಒಂದು ಬೇಡಿಕೆ ಇದೆ. ಏನೆಂದರೆ ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರಬ್ಬರ್ ಮರ ಬೇಕು. ಅಂದರೆ ಒಂದು ತೋಟದಲ್ಲಿ 2 ಜನ ಕಾರ್ಮಿಕರನ್ನು ಬಿಡಲೇಬೇಕಾಗುತ್ತದೆ. ಏಕೆಂದರೆ ಅವರು ಈ ಊರಿಗೆ ಹೊಸಬರು. ಹೀಗಾಗಿ ದಿನಕ್ಕೆ ಕನಿಷ್ಟ 600 ಮರ ಅಂದರೆ ಒಟ್ಟು 1200 ರಬ್ಬರ್ ಮರಗಳು ಇರುವ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕಾರ್ಮಿಕರು ತೋಟದಲ್ಲಿ ಟ್ಯಾಪಿಂಗ್‌ನಿಂದ ತೊಡಗಿ ರಬ್ಬರ್ ಶೀಟ್ ಮಾಡುವುದು , ರಬ್ಬರ್ ರೋಗಗಳನ್ನು ಪತ್ತೆ ಮಾಡುವುದು , ಅವುಗಳ ಆರೈಕೆ ಹೀಗೆ ಎಲ್ಲವನ್ನೂ ಅವರೇ ಮಾಡುತ್ತಾರೆ. ಇವರನ್ನು ನೋಡಿಕೊಳ್ಳಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಪ್ರದೀಪ್ ಅಥವಾ ಅವರ ಸೂಪರ್‌ವೈಸರ್‌ಗಳು ಆಗಮಿಸುತ್ತಾರೆ.15 ರಿಂದ 20 ಜನರಿಗೆ ಒಬ್ಬರಂತೆ ಸೂಪರ್‌ವೈಸರ್‌ಗಳು ಇದ್ದಾರೆ. ಆದರೆ ಕಾರ್ಮಿಕರ ಬಗ್ಗೆ ಸಮಾಧಾನ ಇಲ್ಲದೇ ಇದ್ದರೆ ಬೇರೆ ಕಾರ್ಮಿಕರನ್ನು ವ್ಯವಸ್ಥೆ ಮಾಡುತ್ತಾರೆ.ಹಾಗೆಂದು ಬೆಳೆಗಾರರು ಕೂಡಾ ಅವರತ್ತ ಲಕ್ಷ್ಯ ನೀಡಬೇಕಾಗುತ್ತದೆ. ಏಕೆಂದರೆ ಯಾವುದೋ ಊರಿನಿಂದ ಬಂದವರು ಎಂಬ ಧೋರಣೆಯ ಬದಲು ನಮ್ಮವರೇ ಎಂಬ ಭಾವನೆ ಬೆಳೆಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಕೆಲ ಕಾರ್ಮಿಕರು ಕನ್ನಡ , ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಾರ್ಮಿಕರ ವೇತನ ಎಲ್ಲವನ್ನೂ ಕೂಡಾ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಮೂಲಕವೇ ನೀಡಲಾಗುತ್ತದೆ.

ಬೆಳೆಗಾರರು ಏನು ಹೇಳುತ್ತಾರೆ ?

ಈಗಾಗಲೇ ಸುಳ್ಯ ತಾಲೂಕಿನಲ್ಲಿ ಇದೇ ಚಿಂತನೆಯಡಿಯಲ್ಲಿ ಸುಮಾರು ೨೦ ರಿಂದ ೩೦ ಕಡೆಗಳಲ್ಲಿ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.ಎಲ್ಲರೂ ಕೂಡಾ ಖುಷಿ ಪಟ್ಟಿದ್ದಾರೆ. ಮರ್ಕಂಜದ ರಬ್ಬರ್ ಬೆಳೆಗಾರ ರಮೇಶ್ ಕಾಟೂರಾಯ ಪ್ರಕಾರ , ಇದೊಂದು ಉತ್ತಮ ಪ್ರಯತ್ನ.ಈ ಮೂಲಕ ರಬ್ಬರ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಬೆಳೆಗಾರರಿಗೂ ಇದರಿಂದ ಪ್ರಯೋಜನವಾಗಿದೆ ಎನ್ನುತ್ತಾರೆ.ಇನ್ನೊಬ್ಬ ರಬ್ಬರ್ ಬೆಳೆಗಾರರ ಮರ್ಕಂಜದ ಮಾಪಲತೋಟ ಕೃಷ್ಣ ಭಟ್ , ಈ ಕಾರ್ಮಿಕರದ್ದು ಉತ್ತಮವಾದ ಕೆಲಸವಾಗಿರುತ್ತದೆ. ಊರಿನ ಕಾರ್ಮಿಕರಷ್ಟೇ ಗುಣಮಟ್ಟದ ಕೆಲಸ. ತಿಂಗಳಿಗೆ ಒಂದೇ ಒಂದು ರಜೆ ಮಾಡದೆ ಕೆಲಸ ಮಾಡುತ್ತಾರೆ. ಆದರೆ ಭಾಷೆಯದ್ದು ಮಾತ್ರಾ ಈಗ ಸಮಸ್ಯೆ.ಇದೊಂದು ಸಮಸ್ಯೆ ಹೊರತುಪಡಿಸಿದರೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷ್ಣ ಭಟ್.

ಕೇರಳದಲ್ಲಿ ಇದೆ ರಬ್ಬರ್ ಬ್ಯಾಂಕ್ :

ಇಲ್ಲಿ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಪ್ರದೀಪ್ ಅವರು ಬೆಳೆಗಾರರ ಅನುಕೂಲಕ್ಕಾಗಿ ಸಹಕಾರಿ ಮನೋಭಾವದಿಂದ ಈ ವ್ಯವಸ್ಥೆಯ ಮೂಲಕ ಕಾರ್ಮಿಕರ ಕೊರತೆ ನೀಗುವ ಪ್ರಯತ್ನ ಮಾಡಿದ್ದಾರೆ.
ಆದರೆ ಕೇರಳದಲ್ಲಿ ಈಗಾಗಲೇ ಇಂತಹದ್ದೇ ಬ್ಯಾಂಕ್ ರಚನೆಯಾಗಿದೆ. ಅಲ್ಲಿ ರಬ್ಬರ್ ಬೋರ್ಡ್‌ನ ಬೆಳೆಗಾರರ ಸಂಘದ ಮೂಲಕ ಕಾರ್ಮಿಕರ ಬ್ಯಾಂಕ್ ರಚನೆಯಾಗಿದೆ. ಅದಕ್ಕೆ ಬೋರ್ಡ್‌ನಿಂದಲೂ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸದ್ಯ ಯಾವುದೇ ಬ್ಯಾಂಕ್ ರಬ್ಬರ್ ಬೋರ್ಡ್ ಮೂಲಕ ರಚನೆಯಾಗಿಲ್ಲ. ಇದರಿಂದ ಕೇರಳದಲ್ಲಿ ಸಾಕಷ್ಟು ಪ್ರಯೋಜನವಾಗಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಹೇಳುತ್ತಾರೆ.

ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ :

ಇದ ರೀತಿಯ ವ್ಯವಸ್ಥೆಯನ್ನು ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂಬುದು ಪ್ರದೀಪ್ ಮಾತು. ಮೂಲತ: ಈ ಕಾರ್ಮಿಕರು ಗದ್ದೆಯ ಕೆಲಸಗಾರರು. ಸ‌ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಪ್ರಯೋಗಿಕವಾಗಿ ಗದ್ದೆಯೊಂದರಲ್ಲಿ ಸದ್ಯದಲ್ಲೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ಬಳಿಕ ಮುಂದೆ ಆಸಕ್ತ ರೈತರಲ್ಲಿಗೆ ಕಳುಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 3000 ಕಾರ್ಮಿಕರನ್ನು ಈ ಕಡೆ ತರಿಸಿ “ನಮ್ಮ ಗದ್ದೆ , ನಮ್ಮ ಅಕ್ಕಿ” ಎನ್ನುವ ಚಿಂತನೆಯ ಮೂಲಕ ತಾಲೂಕಿನಲ್ಲೂ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ನಡೆಸಲಾಗುವುದು ಎಂಬುದು ಪ್ರದೀಪ್ ಕನಸು. ಆದರೆ ಈ ಕಾರ್ಮಿಕರು ಅಡಿಕೆ ತೋಟಕ್ಕೆ ಒಗ್ಗಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಏಕೆಂದರೆ ತೋಟದ ಕೆಲಸವು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ. ಹೀಗಾಗಿ ಇದೆಲ್ಲವೂ ತರಬೇತಿಯಿಂದ ಅಸಾಧ್ಯ.

ಒಟ್ಟಿನಲ್ಲಿ ಕಾರ್ಮಿಕರ ಕೊರತೆಯಿಂದ ಚಿಂತಿತರಾಗಿದ್ದ ರಬ್ಬರ್ ಬೆಳೆಗಾರರಿಗೆ ಇಂದೊಂದು ಬೆಳವಣಿಗೆ ಆಶಾದಾಯಕವಾಗಿದೆ.ಕಾರ್ಮಿಕರಿಗಾಗಿ ಪರಿತಪಿಸುತ್ತಿದ್ದ ಬೆಳೆಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು. ಸಹಕಾರಿ ಮನೋಭಾವದ ಮೂಲಕ ಬೆಳೆಗಾರರಿಗೆ ಇನ್ನಷ್ಟು ಹೊಸ ನಿರೀಕ್ಷೆಗಳು ಚಿಗುರಿದಂತಾಗಿದೆ.


(ಈ ಸುದ್ದಿಯ ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. )

ಕಾಮೆಂಟ್‌ಗಳಿಲ್ಲ: