ನಾಡಿನ ಅತ್ಯಂತ ಶ್ರದ್ಧಾ ಭಕ್ತಿಯ ತಾಣ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರಕ್ಕೆ ಹಿಂದೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದರು.ಆಗ ಭುಜ ನೋವಿನಿಂದ ಬಳಲುತ್ತಿದ್ದ ಸಚಿನ್ ಇಂದು ಶತಕದ ಶತಕ ಬಾರಿಸುವ ಹಂತದಲ್ಲಿದ್ದಾರೆ. ಸಚಿನ್ ಬಳಿಕವೂ ಕುಕ್ಕೆಗೆ ವಿವಿಐಪಿಗಳ ಭೇಟಿಯಿಂದ ಇಡೀ ದೇಶದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸುದ್ದಿ ಮಾಡಿತ್ತು.
ಈಗ ಮತ್ತೆ ಇನ್ನೊಂದು ರೀತಿಯಲ್ಲಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.
ಇದು ಮಾತ್ರಾ ಭಕ್ತಾದಿಗಳ ನಂಬಿಕೆಯ ಮೇಲೆ ನಡೆಯುತ್ತಿರುವ ಮಾನಸಿಕ ಧಾಳಿ ಎಂದರೆ ತಪ್ಪಾಗಲಾರದು.ಯಾಕೆ ಹೀಗೆ ? ಬೇಕಾ ಈ ಚರ್ಚೆ ?. ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಾ ಇದೆ. ಈ ಬಗ್ಗೆ ಏಕೆ ಇವರೆಲ್ಲಾ ಮಾತನಾಡೊಲ್ಲ ? ಕಳೆದ ವರ್ಷ ನಡೆದ ಚರ್ಚೆಯ ವೇಳೆಯೂ ಇಲ್ಲಿನ ಸತ್ಯಾಂಶವನ್ನು ತಿಳಿಸಲು ಯಾರಿಗೂ ಸಾಧ್ಯ ಆಗಿರಲಿಲ್ಲ.ಈ ಬಾರಿಯೂ ಅದೇ ಆಗುತ್ತಿದೆ.ಈ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಇಲ್ಲಿ ನನಗೆ ಅಭಿಪ್ರಾಯ ದಾಖಲಿಸಬೇಕು ಎಂದು ನನಗೆ ಅನ್ನಿಸಿದೆ.
ಈ ದೇಶದ ತುತ್ತ ತುದಿಯಲ್ಲಿ ದಿನವೂ ಜನ ಹೆದರಿಕೆಯಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರಗಡೆ ದಿನವೂ ಗುಂಡಿನ ಸದ್ದು ಕೇಳುತ್ತಿದೆ.ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಕೊಲ್ಲುತ್ತಿದ್ದಾರೆ.ಸರಕಾರಗಳು ಇದ್ದೂ ಇಲ್ಲದಂತಗಿದೆ. ನಮ್ಮ ಜವಾನರು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದರೂ ಅವರನ್ನು ತಪ್ಪಿಸಿ ಒಳನುಗ್ಗುತ್ತಲೇ ಇದ್ದಾರೆ ಆ ದ್ರೋಹಿಗಳು. ಇನ್ನೊಂದು ಕಡೆ ದೇಶದ ಒಳಗೆಲ್ಲಾ ಭಯವನ್ನು ಉತ್ಪಾದಿಸಲಾಗುತ್ತಲೇ ಇದೆ.ಅಂತಹವರಲ್ಲೊಬ್ಬ ಅಂದು ಸಿಕ್ಕಿಬಿದ್ದಿದ್ದಾನೆ, ಆತನಿಗೆ ರಾಯಲ್ ಟ್ರೀಟ್‌ಮೆಂಟ್ ಇಂದಿಗೂ ನಮ್ಮ ದೇಶದಿಂದ ಸಿಗುತ್ತಿದೆ, ಮತ್ತೊಂದು ಕಡೆ ನಮ್ಮ ದೇಶದ ಆಡಳಿತ ಸೌಧಕ್ಕೆ ಧಾಳಿ ಮಾಡಿದವರೂ ಇದ್ದಾರೆ. ಇವರೆಲ್ಲಾ ಇಂದಿಗೂ ಇಂಚು ಇಂಚಾಗಿ , ಹೆಜ್ಜೆ ಹೆಜ್ಜೆಗೂ ದೇಶಕ್ಕೆ ಕಾಟ ಕೊಡುತ್ತಲೇ ಇರಬೇಕಾದರೆ ಸರಕಾರಗಳು ಅದೇಕೋ ಏನೋ ಯಾವುದೂ ಕಂಡೂ ಕಾಣದಂತೆ, ಕುಳಿತಿವೆ ಅಂತ ಕಾಣುತ್ತೆ.
ಬಿಡಿ, ಅದೆಲ್ಲಾ ಆಡಳಿತಕ್ಕೆ , ರಾಜಕೀಯಕ್ಕೆ ಸಂಬಂಧಿಸಿದ ವಿಚಾರ. ಪರಿಸ್ಥಿತಿ ಹೀಗೆ ಇರುವಾಗ ಇಲ್ಲಿನ ಜನರಿಗೆ ನೆಮ್ಮದಿ ಬೇಕಲ್ಲಾ , ಅವರು ಎಲ್ಲಿಗೆ ಹೋಗೋದು ಹೇಳಿ ?. ನೆಮ್ಮದಿ ಅರಸಿಕೊಂಡು ಹೋಗಲು ಆಗುತ್ತೆಯೇ ?.ಒಂದು ಕಡೆ ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ನಡೆಯುತ್ತಲೇ ಇರುತ್ತವೆ ಅಲ್ಲೂ ಹೋಗೋದಾದ್ರೂ ಹೇಗೆ?. ಕೆಲವರಿಗೆ ಟೀಕೆ ಮಾಡುವುದರಲ್ಲಿ , ಇನ್ನೂ ಕೆಲವರಿಗೆ ವಿರೋಧಿಸುವುದರಲ್ಲಿ , ಇನ್ನೂ ಕೆಲವರಿಗೆ ರಾಜಕೀಯ ಮಾಡುವುರದಲ್ಲಿ , ಇನ್ನೂ ಅನೇಕರಿಗೆ ವಿವಾದ ಮಾಡುವುದರಲ್ಲಿ ನೆಮ್ಮದಿ ಸಿಗಬಹುದು. ಆದರೆ ಈ ದೇಶದ ಶೇಕಡಾ 80 ರಷ್ಟು ಜನ ಇಲ್ಲಿನ ದೇವರ ಮೊರೆ ಹೋಗಿದ್ದಾರೆ. ಅದು ರಾಮ , ರಹೀಮ, ಏಸು ಇನ್ಯಾವುದೇ ದೇವರ ಮೊರೆ ಹೋಗಿದ್ದಾರೆ,ಹೋಗುತ್ತಿದ್ದರೆ. ಅಲ್ಲಿ ಅದ್ಯಾವುದೋ ಆಚರಣೆಗೋ ನಂಬಿಕೆಗೋ ಒಳಪಟ್ಟು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾನೆ.ತಾನು ಮಾಡಿದ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತಾನೆ.ಇದರಲ್ಲಿ ತಪ್ಪಿಲ್ಲವಲ್ಲ. ಏಕೆಂದರೆ ಶೇ.80 ರಷ್ಟು ಜನರಿಗೆ ಇಂತಹ ಆಚರಣೆಯಲ್ಲಿ ನಂಬಿಕೆ ಇದೆ.ಉಳಿದ ಶೇ.20 ರಷ್ಟು ಜನರಿಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇಲ್ಲ, ಎಂದಾದರೆ ಬಿಡಿ ಒಪ್ಪಿಕೊಳ್ಳೋಣ. ನೀವೂ ಇದನ್ನೇ ಮಾಡಿ ಅಂತ ಯಾರಾದರೂ ಅವರಿಗೆ ಹೇಳಿದ್ದಾರಾ ? ಹೇಳುತ್ತಾರಾ? ಮತ್ಯಾಕೆ ಅವರಿಗೆ ತಲೆನೋವು?. ನಂಬಿಕೆ ಇಲ್ಲದ ಮೇಲೆ ನಾವು ನಿಮ್ಮ ಆಚರಣೆಗೋ ನಂಬಿಕೆಗೋ ಏಕೆ ಅಡ್ಡಿ ಬರಬೇಕು?. ಅದರಿಂದಾಗಿ ಇಡೀ ದೇಶಕ್ಕೋ ಸಮಾಜಕ್ಕೋ ಏನಾದ್ರೂ ತೊಂದರೆ ಇದೆಯೇ ?. ಅಲ್ಲಿನ ಭಯೋತ್ಪಾದಕರಂತೆಯೋ, ಕಾಶ್ಮೀರದ ಸಮಸ್ಯೆಯಂತೆಯೋ ಏನಾದರೂ ಇಡೀ ದೇಶಕ್ಕೆ ತೊಂದರೆಯಾಗುತ್ತೋ?. ಹಾಗಾದ್ರೆ ಸರಿ.ಇಂದೇ ಅದು ಅಂತಹ ಪದ್ಧತಿಗಳು ನಿಲ್ಲಬೇಕು.
ಸರಿ ಇದು ನಾಗರಿಕ ಸಮಾಜಕ್ಕೆ ಅವಮಾನ ಎನ್ನೋಣ , ಶೇ.80 ರಷ್ಟು ಮಂದಿ ಈ ಆಚರಣೆಗಳನ್ನು , ಪದ್ಧತಿಗಳನ್ನು ಒಪ್ಪುವುದಾರೆ ಕೇವಲ ಶೇ.20 ರಷ್ಟು ಮಂದಿಗಾಗಿ ಈ ಆಚರಣೆಯನ್ನು ಏಕೆ ನಿಲ್ಲಿಸಬೇಕು?. ಅಂತಹ ಮಂದಿ ಇದೇ ದೇವಸ್ಥಾನ , ದೇವರನ್ನು ಒಪ್ಪುವವರೂ ಅಲ್ಲ. ಆದರೆ ಈ 80 ಶೇಕಡಾ ಮಂದಿ ಇದೆಲ್ಲವನ್ನೂ ಸಹಿಸಿಕೊಂಡು ಇರೋದ್ರಿಂದಲೇ ಇದೆಲ್ಲಾ ನಡೀತದೆ. ಇನ್ನೊಂದು ನಾನು ಗಮನಿಸಿದಂತೆ ಇದೆಲ್ಲಾ ಹಿಂದೂ ಆಚರಣೆಗಳಲ್ಲಿ ಮಾತ್ರಾ ಅನ್ವಯವಾಗಿದೆ. ಅನ್ವವಾಗುತ್ತಿದೆ. ಯಾರೋಬ್ಬರೂ ಕೂಡಾ ಇತರ ಆಚರಣೆಗಳ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ.. . !.
ಸರಿ ಈಗ ಕುಕ್ಕೆಯ ವಿಚಾರವನ್ನು ನೋಡುವುದಾದರೆ , ಇಲ್ಲಿ ಸಮಸ್ಯೆ ಬಂದಿರೋದು ಬ್ರಾಹ್ಮಣರ ಎಂಜಲೆಲೆಯ ಮೇಲೆ ಶೂದ್ರರು ಮಾತ್ರಾ ಉರುಳಾಡುತ್ತಾರೆ ಅಂತ. ಇದು ಪೂರ್ವಾಗ್ರಹ ಪೀಡಿತ ಕೆಲವು ಮಾಧ್ಯಮಗಳ ಕತೆ. ಇಲ್ಲಿ ಬ್ರಾಹ್ಮಣರಿಂದ ತೊಡಗಿ ಎಲ್ಲರೂ ಈ ಎಂಜಲೆಲೆಯ ಮೇಲೆ ಉರುಳುತ್ತಾರೆ ಅನ್ನೊಂದು ಪ್ರಥಮ ವಿಚಾರ. ಕಳೆದ ವರ್ಷವೂ ಈ ಆಚರಣೆಗೆ ವಿರೋಧ ಬಂದಿತ್ತು. ಕುಕ್ಕೆಗೆ ಬಂದ ಇವರು ಇಲ್ಲಿನ ವಾಸ್ತವ ಅರಿತು ಹೇಳಿದರು , “ಇಲ್ಲಿ ಬ್ರಾಹ್ಮಣರೂ ಉರುಳುತ್ತಾರೆ ಎಂತ ಗೊತ್ತಿರಲಿಲ್ಲ ,ಕೇವಲ ಶೂದ್ರರು ಮಾತ್ರಾ ಉರುಳುತ್ತಾರೆ ಎಂದು ತಿಳಿದಿದ್ದೆವು” ಎಂದಿದ್ದರು. ಆದರೆ ಇಲ್ಲಿನ ಒಬ್ಬರು ಪತ್ರಕರ್ತರು ಅವರಿಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಅವರಲ್ಲೊಬ್ಬರು ಹೇಳಿದ್ದರು. ಆ ಪತ್ರಕರ್ತರೇ ನಂತರ ಪೊಲೀಸ್ ರಕ್ಷಣೆಯೊಂದಿಗೆ ಅವರನ್ನು ಕುಕ್ಕೆಯಿಂದ ಕಳುಹಿಸಿದ್ದರು ಎಂಬುದು ಬೇರೆ ಮಾತು.
ಇಲ್ಲಿ ನಾನು ನೋಡಿದ ಪ್ರಕಾರ ಹೀಗೆ ನಡೆಯುತ್ತದೆ , ಕುಕ್ಕೆ ದೇವಸ್ಥಾನದಲ್ಲಿ ಚಂಪಾಷಷ್ಠಿಯ 3 ದಿನಗಳ ಕಾಲ ಅತ್ಯಂತ ಮಹತ್ವದ ಕಾಲ. ಈ ಬಗ್ಗೆ ಪುರಾಣಗಳಲ್ಲೂ ಉಲ್ಲೇಖ ಇದೆ. ಈ 3 ದಿನಗಳ ಕಾಲ ದೇವರಿಗೆ ಪೂಜೆಯಾದ ಬಳಿಕ ಕೊಪ್ಪರಿಗೆ ಅನ್ನಕ್ಕೆ ಪೂಜೆ ಇರುತ್ತದೆ.ಇದು ಪಲ್ಲ ಪೂಜೆ. ಪೂಜೆಯ ನಂತರ ಈ ಅನ್ನವನ್ನು ದೇವಸ್ಥಾನತದಲ್ಲಿ ಸಂತರ್ಪಣೆ ಮಾಡುವ ಎಲ್ಲಾ ಕಡೆ ಪ್ರದೇಶಗಳಿಗೆ ಅನ್ನವನ್ನು ಕೊಂಡೋಗಿ ಅಲ್ಲಿ ತಯಾರು ಮಾಡಿದ ಅನ್ನಕ್ಕೆ ಹಾಕುತ್ತಾರೆ. ಈ ಎಲ್ಲಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಬ್ರಾಹ್ಮಣ ಸಂತರ್ಪಣೆ ಇರುತ್ತದೆ. ಎಲ್ಲರೂ ಕುಳಿತುಕೊಂಡ ಬಳಿಕ ದೇವರಿಗೆ ಅರ್ಚನೆ, ಬ್ರಾಹ್ಮಣ ಅರ್ಚನೆ ನಡೆದು ಸುಬ್ರಹ್ಮಣ್ಯನ ಹೆಸರಲ್ಲಿ ಸಂಕಲ್ಪ ನಡೆದು ಊಟ ಶುರುವಾಗುತ್ತದೆ. ಊಟದ ನಂತರ ಮತ್ತೆ ಸಂಕಲ್ಪ ನಡೆದು ದೇವರಿಗೆ ಗಂಟೆ ಬಡೆಯಲಾಗುತ್ತದೆ. ಇದಾದ ನಂತರ ಎಲ್ಲರೂ ಬಂದು ಈ ಎಲೆಯ ಮೇಲೆ ಉರುಳುತ್ತಾರೆ. ಇದರಲ್ಲಿ ಜಾತಿ ಎಂಬುದೇ ಇಲ್ಲ. ಕೆಲವೊಮ್ಮೆ 2000 ಜನ ಇರುತ್ತಾರೆ. ಇಲ್ಲಿ ಬಹುತೇಕ ಮಂದಿ ಈ ಸೇವೆ ಮಾಡಿದವರು ಒಂದಿಲ್ಲೊಂದು ಸಮಸ್ಯೆಯಿಂದ ಮುಕ್ತಿ ಪಡೆದವರೇ ಹೆಚ್ಚು. ಅದರಲ್ಲಿ ನಿವೃತ್ತ ನ್ಯಾಯಧೀಶರೂ ಕೆಲವೊಮ್ಮೆ ಇರುತ್ತಾರೆ ಎಂಬುದು ಕೂಡಾ ಗಮನಾರ್ಹ. ಹೀಗೆ ಈ ಸೇವೆಯ ಹೇಳಿಕೊಂಡದ್ದರಿಂದ ಅನೇಕರಿಗೆ ಮಾನಸಿಕವಾದ ನೆಮ್ಮದಿ ಸಿಕ್ಕಿದೆ. ಆ ನೆಮ್ಮದಿಯನ್ನು ತಡೆಯಲು ನಾವ್ಯಾರು ?. ಅವರ ಮಾನಸಿಕ ನೆಮ್ಮದಿ ಕಿತ್ತುಕೊಳ್ಳುವ ಹಕ್ಕು ನಮಗಿದೆಯೇ ?.
ಅದೇ ರೀತಿ ಇಲ್ಲಿ ಇನ್ನೊಂದು ಸೇವೆ ಇದೆ, ಕುಮಾರಧಾರಾ ನದಿಯಿಂದ ಸುಮಾರು 2.5 ಕಿಮೀ ದೂರ ಡಾಮರು ರಸ್ತೆಯಲ್ಲಿ ಉರುಳಿಕೊಂಡು, ಎಲ್ಲರೂ ರಸ್ತೆಯಲ್ಲಿ ಉಗುಳಿದ , ವಾಹನಗಳಿಂದ ಸುರಿದ ಎಣ್ಣೆಯ , ಚಪ್ಪಲಿಯಿಂದ ಮೆಟ್ಟಿದ ಡಾಮರು ರಸ್ತೆಯ ಮೇಲೆ ಉರುಳಿಕೊಂಡು ಬರುತ್ತಾರೆ. ಕೆಲವರಿಗೆ ಸುಮಾರು ೪ ಗಂಟೆ ಕಾಲ ತಗುಲುತ್ತದೆ ದೇವಸ್ಥಾನ ತಲುಪಲು.ಇದರಲ್ಲೂ ಮಾನಸಿಕ ನೆಮ್ಮದಿ ಸಿಗುತ್ತದೆ ಭಕ್ತರಿಗೆ.
ಹೀಗೆ ಸುಖಾಸುಮ್ಮನೆ ಒಂದು ನಂಬಿಕೆಯ ವಿರುದ್ದ ಮಾತನಾಡುತ್ತಾ, ಮಾನಸಿಕ ನೆಮ್ಮದಿಯನ್ನು ಕೆಡವಿ ಹಾಕಬಾರದು ಎನ್ನುವುದು ನನ್ನ ನಂಬಿಕೆ. ಏಕೆಂದರೆ ಇದೆಲ್ಲಾ ಸ್ವಯಂ ಪ್ರೇರಣೆಯಿಂದಲೇ ಆಗಬೇಕು.ಒತ್ತಾಯ ಬೇಕಿಲ್ಲ.ಮಾಡುವುದೂ ತರವಲ್ಲ.
ಹೀಗೆ ಮಾತನಾಡುವುದಾದರೆ ಅದ್ಯಾವುದೋ ಮಸೀದಿಯಲ್ಲಿ ನೀರಿಗೆ ಉಗುಳಿ ಅಲ್ಲಿನ ಮೌಲ್ವಿ ಕೊಡುತ್ತಾರೆ. ಇದನ್ನೇ ತೀರ್ಥ ಅಂತ ಲೀಟರ್ ಲೀಟರ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋಗಿ ಕುಡಿಯುತ್ತಾರೆ, ರೋಗ ಮುಕ್ತರಾಗುತ್ತಾರೆ. ಮತ್ತೊಂದು ಕಡೆ ಸೈತಾನನ್ನು ಬಿಡಿಸುತ್ತಾರೆ, ಪಾಪ ಕಳೆಯಲಿ ಎಂದು ಪ್ರಾಣಿ ಬಲಿ ನಡೆಸುತ್ತಾರೆ, ಕೋಳಿ ಬಲಿ ನಡೆಯುತ್ತದೆ ಇದಕ್ಕೆಲ್ಲಾ ಏನೆನ್ನವುದು?
ಹಾಗೆ ನೋಡುತ್ತಾ ಹೋದರೆ ತುಳುನಾಡಿನ ಎಲ್ಲಾ ಆಚರಣೆಗಳೂ ಕೂಡಾ ಶೋಷಣೆ ಮುಕ್ತ ಎನ್ನಲು ಆಗುತ್ತಾ ?. ದೈವಾರಾಧನೆಯಲ್ಲಿ ಕೂಡಾ ದೈವ ಪಾತ್ರಿ ಯಾರು ?.ಇಲ್ಲಿ ಶೋಷಣೆ ಅನ್ನೋದಕ್ಕಿಂತಲೂ ಹೆಚ್ಚು ಅದರಿಂದಾಗಿ ಜನರಿಗೆ ನೆಮ್ಮದಿ ಸಿಗುತ್ತಿದೆ, ಖುಷಿ ಪಡುತ್ತ್ತಾರೆ ಅಷ್ಟೇ. ಅಂತಹ ಶಕ್ತಿಯೊಂದು ಇನ್ನೂ ಹತ್ತಾರು ವರ್ಷಗಳ ಕಾಲ ರೋಗಮುಕ್ತ ಜೀವನ ನಡೆಸಲು ಅವರಿಗೆ ಸಹಕಾರಿಯಾಗುತ್ತದೆ. ಒಂದು ನಂಬಿಕೆ , ಆಚರಣೆಯ ಹಿಂದೆ ಇಂತಹದ್ದೆಲ್ಲಾ ಇರುತ್ತದೆ.ಇದನ್ನೆಲ್ಲಾ ಅಷ್ಟು ಸುಲಭವಾಗಿ ತೊಡೆದು ಹಾಕುವುದು , ಇದೆಲ್ಲಾ ಪುರೋಹಿತ ಶಾಹಿ ಎಂದೆಲ್ಲಾ ಅನಾವಶ್ಯಕ ವಿವಾದ ಎಬ್ಬಿಸುವುದರ ಬದಲು ಸಮಾಜವನ್ನು ಒಂದುಗೂಡಿಸುತ್ತಾ ಮಾನಸಿಕ ಪರಿವರ್ತನೆ ಮಾಡಬೇಕಾಗಿದೆ ಅಂತ ನನಗೆ ಅನಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ