17 ಡಿಸೆಂಬರ್ 2011
ಕಾನನದೊಳಗಿನ ಮೌನದ ನಡುವೆ ಕಲ್ಲಿನ ಸದ್ದು. .!
ಅದು ದೊಡ್ಡ ಕಾಡು.ಸುತ್ತಲೂ ಮೌನ ಆವರಿಸಿದೆ.ಹಕ್ಕಿಗಳ ಕಲರವ, ಜೀರುಂಡೆಗಳ ಸದ್ದು ,ನೀರಿನ ಜುಳು ಜುಳು ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ. ಇಂತಹ ಸುಂದರ ಕಾಡಿನ ನಡುವೆ ಈಗ ಕೇಳಿರುವುದು , ಕೇಳುತ್ತಿರುವುದು ಕಲ್ಲು ಒಡೆಯುವ ಸದ್ದು!.ನಿಜ ನಂಬಲೇ ಬೇಕು.ಅದು ಹರಳು ಕಲ್ಲು ದಂಧೆ. .!.ಬಿಸಲೆ ರಕಿತಾರಣ್ಯದ ಒಳಗೆ ಈಗ ಇದು ಸಣ್ಣ ಸದ್ದು. .!.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಗಡಿಭಾಗದ ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಹೊಂಗಡಹಳ್ಳ ಹಾಗೂ ಜಗಟ ಸಮೀಪದ ಬಿಸಿಲೆ ರಕ್ಷಿತಾರಣ್ಯದೊಳಗಡೆ ಒಂದು ರೀತಿಯ ಹಸಿರು ಮಿಶ್ರಿತ ಕೆಂಪು ಬಣ್ಣದ ಹರಳು ಕಲ್ಲು ದಂಧೆ ನಡೆಯುತ್ತಿದೆ.ಕಳೆದ ಕೆಲವಾರು ವರ್ಷಗಳಿಂದ ಈ ಂಧೆ ನಡೆಯುತ್ತಿದೆ ಎಂಬ ಅನುಮಾನ ಈಗ ದಟ್ಟವಾಗುತ್ಗೀಗ ಸುಮಾರು 6 ರಿಂದ 8 ಎಕ್ರೆ ಪ್ರದೇಶದಲ್ಲಿ ಈ ಕಲ್ಲು ದಂಧೆ ನಡೆಯುತ್ತಿದೆ.ಹೀಗಾಗಿ ಬಿಸಲೆಯ ಈ ಪ್ರದೇಶದಲ್ಲಿ ಅರಣ್ಯ ನಾಶವಾದರೂ ಅಚ್ಚರಿ ಇಲ್ಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲಾ ಗಡಿ ಪ್ರದೇಶದ ಕೂಜಿಮಲೆ, ಸುಟ್ಟತ್‌ಮಲೆ , ಸೂಳೆಕೇರಿ ಪ್ರದೇಶಗಳಲ್ಲಿ ಭೂಮಿಯಡಿಯಲ್ಲಿ ದೊರಕುವ ನಸು ಕೆಂಪು ಹರಳುಕಲ್ಲುಗಳು ರಾಜ್ಯದಲ್ಲಿ ಪ್ರಸಿದ್ದಿಯಾಗಿತ್ತು.ಇತ್ತೀಚೆಗಿನವರೆಗೂ ಈ ದಂಧೆ ನಡೆಯುತ್ತಲೇ ಇತ್ತು.ಈಗ ಇದೇ ಮಾದರಿಯಲ್ಲಿ ಬಿಸಲೆಯಲ್ಲೂ ಇಂತಹದ್ದೇ ದಂಧೆ ನಡೆಯುತ್ತಿದೆ.
ಇಲ್ಲಿ ಹೇಗೆ ನಡೆಯುತ್ತಿದೆ ? :
ಬಿಸಿಲೆ ಪ್ರದೇಶದ ರಕ್ಷಿತಾರಣ್ಯವು ಪಶ್ಚಿಮ ಘಟ್ಟದ ಅಪರೂಪದ ಪ್ರದೇಶ.ಈ ಪ್ರದೇಶದಲ್ಲಿ ಸನೇಕ ಬಗೆಯ ಪ್ರಾಣಿಗಳು, ಪಕ್ಷಿಗಳು , ಜೀವಸಂಕುಲಗಳು, ವಿವಿಧ ಜಾತಿಯ ಗಿಡ ಮರಗಳು ಇವೆ.ಆದರೆ ಈಗ ಈ ದಂಧೆಕೋರರ ಧಾಳಿಯಿಂದಾಗಿ ಈ ಪ್ರದೇಶವು ಹಾನಿಯಾಗುತ್ತಿದೆ.ಲಭ್ಯ ಮಾಹಿತಿ ಪ್ರಕಾರ ಈ ದಂದೆಕೋರರು ಹರಳುಕಲ್ಲು ಸಿಗುವ ಜಾಗದಲ್ಲಿ ಒಂದು ವಾರಗಳ ಕಾಲ ಟೆಂಟ್ ಹಾಕುತ್ತಾರೆ.ಬೇಕಾದಷ್ಟು ಕಲ್ಲು ತೆಗೆದ ಬಳಿಕ ಅಲ್ಲೆ ಆಸುಪಾಸಿನಲ್ಲಿ ಮೊಬೈಲ್ ಸಿಗುವ ಕಾರಣ ವ್ಯಾಪಾರಿಗಳಿಗೆ ಹೇಳಿ ಬಿಸಲೆ ರಸ್ತೆ ಬಳಿಗೆ ಬಂದು ಅಲ್ಲೇ ವ್ಯಾಪಾರ ಕುದುರಿಸಿ ಹಣದೊಂದಿಗೆ ಊರಿಗೆ ಹಿಂತಿರುಗುತ್ತಾರೆ ಎಂಬ ಮಾಹಿತಿ ಇದೆ.ಈಗಾಗಲ ಇಲ್ಲಿ ಹರಳುಕಲ್ಲಿಗಾಗಿ ಅಗೆದು ಸುಮಾರು 3 ಮೀಟರ್ ಚೌಕಾಕಾರದ ಗುಂಡಿ ತೋಡಲಾಗಿದೆ.ಇದರ ಜೊತೆಗೆ ಕಾಡಿನಲ್ಲಿರುವ ಕಲ್ಲುಗಳು ಅನೇಕ ಹುಡಿಯಾಗಿದೆ.ಕೆಲವು ಕಲ್ಲುಗಳು ಭೂಮಿಯ ಮೇಲೆಯೇ ಸಿಗುವುದರಿಂದ ಕಲುಗಳನ್ನು ಹುಡಿಮಾಡಿದ ಕುರುಹುಗಳಿವೆ. ಇದೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಗೋಚರಿಸುತ್ತದೆ. ಇದರ ಜೊತೆಗೆ ಇಲ್ಲಿ ಚೌಕಾಕಾರದ ಗುಂಡಿಯಿಂದ ಮಣ್ಣು ತೆಗೆಯಲು ಬೆತ್ತದಿಂದ ತಯಾರಿಸಿದ ರಾಟೆ , ತಿಂಡಿ ತಿನಿಸುಗಳ ಪೊಟ್ಟಣ, ಬಟ್ಟೆ ,ಗುದ್ದಲಿಗಳು ಕೂಡಾ ಇರುವುದು ದಂಧೆಕೋರರ ಇರುವಿಕೆಯನ್ನು ಸೂಚಿಸುತ್ತದೆ. ಮೂಲಗಳ ಪ್ರಕಾರ ಇಲ್ಲಿ ದೊರಕುವ ಹರಳುಕಲ್ಲಿಗೆ ಪ್ರತೀ ಕೆಜಿಗೆ ಸುಮಾರು 2500 ರಿಂದ 5000 ರೂಪಾಯಿವರೆಗೂ ರೇಟು ಇದೆ ಎಂಬ ಮಾಹಿತಿ ಸಿಗುತ್ತದೆ.
ಇಲಾಖೆಗೆ ಗೊತ್ತಿಲ್ಲವೇ ?
ಬಿಸಲೆಯ ಈ ಪ್ರದೇಶದಲ್ಲಿ ಆರಂಭವಾಗಿರುವ ಈ ಹರಳು ಕಲ್ಲು ದಂಧೆಯ ಬಗ್ಗೆ ನಮ್ಮ ಕಾಡು ಇಲಾಖೆಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.ಹೊರಜಗತ್ತಿಗೆ ಗೊತ್ತಾಗದ ರೀತಿಯಲ್ಲಿ ಈ ದಂಧೆ ನಡೆಯುವುದಾದರೂ ಹೇಗೆ ?. ಇಲ್ಲಿ ಬಹುವಿಸ್ತಾರವಾದ ಈ ಅರಣ್ಯದಲ್ಲಿ ಅದೂ ರಸ್ತೆಯಿಂದ ಸುಮಾರು 7 ರಿಂದ 8 ಕಿಮೀ ದೂರ ನಡೆದುಕೊಂಡು ಹೋಗಿ ಈ ಕೆಲಸ ಮಾಡುವಾಗಲೂ ನಮ್ಮ ಇಲಾಖೆಗೆ ಗೊತ್ತಿಲ್ಲ.ಏಕೆಂದರೆ ಇಲ್ಲಿ ಕಾಡಿನೊಳಗೆ ಇಲಾಖೆಯವರ ಪ್ರವೇಶವೇ ಕಡಿಮೆ ಎನ್ನುವುದು ಇಲ್ಲಿ ತಿಳಿಯುತ್ತದೆ.ಇದನ್ನೇ ದಂಧೆಕೋರರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಅಷ್ಟೇ.ಇದರ ಜೊತೆಗೆ ಇಲಾಖೆಯೊಂದಿನ ಒಳ ಒಪ್ಪಂದವೂ ಇದಕ್ಕೆ ಕಾರಣ ಇರಬಹುದು ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಪ್ರದೇಶವೂ ಕೂಡಾ ಕೂಜಿಮಲೆಯಂತೆ ವ್ಯಾಪಕವಾಗಿ ಅರಣ್ಯ ನಾಶವಾಗುವುದು ಖಚಿತ ಎಂದು ಪರಿಸರ ಪ್ರೆಮಿಗಳು ಎಚ್ಚರಿಸಿದ್ದಾರೆ.
ಒಂದು ಕಡೆ ಪುಷ್ಟಗಿರಿ ವನ್ಯಧಾಮದ ಬಗ್ಗೆ ಆಸಕ್ತವಾಗಿರುವ ಅರಣ್ಯ ಇಲಾಖೆಗಳು, ಜನರಿಗೆ ಸರಿಯಾದ ಮಾಹಿತಿ ನೀಡದೆ ಇದ್ದರೆ ಇನ್ನೊಂದು ಕಡೆ ಸನಿಜವಾದ ಕಾಡುಗಳು ಈಗ ಯಾವುದಿದೆ ಅದರ ರಕ್ಷಣೆಗೆ ಮುಂದಾಗದೇ ಇರುವುದು ಇನ್ನೊಂದು ದೊಡ್ಡ ವಿಪರ್ಯಾಸ.ಇರುವ ಕಾಡನ್ನೇ ರಕ್ಷಿಸಲಾಗದೆ ಇನ್ನಷ್ಟು ಕಾಡನ್ನು ಸೇರ್ಪಡೆಗೊಳಿಸಿ ಅದೆಲ್ಲವೂ ವಿನಾಶದಂಚಿಗೆ ತರುವುದಕ್ಕೆ ಮುನ್ನ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ.