14 ಜನವರಿ 2013

ತಂತ್ರಜ್ಞಾನ : ಅಂತರ-ಜ್ಞಾನ. . .




ನನ್ನ ಮಿತ್ರನೊಬ್ಬ  ಇಂದು ಸಿಕ್ಕಿದ.  ಆತ ಮಾತನಾಡುತ್ತಾ ಹೇಳುತ್ತಿದ್ದ , ಈ ಮೊಬೈಲ್‌ಗೆ ಈಗ 10 ಸಾವಿರ. ವರ್ಷದ ಹಿಂದೆ ಇದೇ ಸೌಲಭ್ಯ ಇದ್ದ  ಬೇರೆ ಕಂಪನಿಯ ಮೊಬೈಲ್‌ಗೆ 35 ಸಾವಿರ  ಬೆಲೆ ಇತ್ತು. ಈಗ ತೀರಾ ಅಗ್ಗ ಎಂದು  ಹೇಳುತ್ತಿದ್ದ. ಅದು  ನಿಜವೂ ಹೌದು.
ಚಿತ್ರ - ನೆಟ್

ಕಾಲ ಬದಲಾಗಿದೆ.

ಅಂದೆಲ್ಲಾ ಒಂದು  ಮೊಬೈಲ್ ಕೊಳ್ಳುವುದು ಇರಲಿ , ನೋಡಿದರೇ ಅದೊಂದು ಅಚ್ಚರಿ. ನನಗೆ ಈಗಲೂ ನೆನಪಿದೆ , ಮೊಬೈಲ್ ಕೈಯಲ್ಲಿ  ಹಿಡಿಯುವುದಕ್ಕಾಗಿ , ಸಿಮ್ ಪಡೆಯುವುದಕ್ಕಾಗಿ  ಕ್ಯೂನಲ್ಲಿ  ಇಡೀ ದಿನ ನಿಂತು , ಅದಕ್ಕಾಗಿ  ವಿವಿಧ ಅಧಿಕಾರಿಗಳೊಂದಿಗೆ ಮಾತನಾಡಿ , ಅಂತೂ ಸಿಮ್ ಸಿಕ್ಕಾಗ ಮೊಬೈಲ್ ಬಂತು  ಎನ್ನುವ ಸಂದರ್ಭ. . . !. ಈಗ ಹಾಗಿಲ್ಲ , ಸಿಂ ಬೇಕಾ ಸಿಂ . .  ಎಂದು  ಕಂಪನಿಯೇ ಮನೆ ಬಾಗಿಲಿಗೆ ತಂದು ಕೊಡುತ್ತಿದೆ.

ಅದಕ್ಕಿಂತಲೂ ಹಿಂದೆ ನೋಡಿದರೆ. . .  , ಇನ್ನೂ ಅಚ್ಚರಿಯಾಗುತ್ತದೆ.

ಆಗ ಟಿವಿ ಇಲ್ಲವೇ ಇಲ್ಲ. ಎಲ್ಲೋ ಊರಲ್ಲಿ  ಒಂದೂ ಎರಡೋ ಮನೆಯಲ್ಲಿ  ಮಾತ್ರಾ. ಅದಕ್ಕೊಂದು  ಏಂಟೆನಾ. ಅದನ್ನು  ತಿರುಗಿಸಿ  , ನೋಡಬೇಕು, ಸಣ್ಣ ಗಾಳಿ ಬಂದರೆ ಮತ್ತೆ ಮರದ ತುದಿಗೆ ಏರಲೇ ಬೇಕು. ಆ ಬಳಿಕ ದೊಡ್ಡ ಡಿಶ್ ವ್ಯವಸ್ಥೆ ಬಂದಾಗ ಒಟ್ಟು  ಟಿವಿ ಡಿಶ್‌ಗೆ 40  ಸಾವಿರ ರೂಪಾಯಿವರೆಗೆ ಆಗುತ್ತಿತ್ತು. ಆಗ ಸಿನಿಮಾ ನೋಡಲು , ಕ್ರಿಕೆಟ್‌ನೋಡಲು  ಟಿವಿ ಇದ್ದವರ ಮನೆಗೆ ಎಲ್ಲರೂ ಹಾಜರ್. ಕೆಲವು ಕಡೆ ಟಿಕೆಟ್ ನೀಡಿ  ಟಿವಿ ನೋಡಿದ್ದೂ ಇದೆ. ಈಗ ಆ ಕಾಲ ಇಲ್ಲವೇ ಇಲ್ಲ, ಎಲ್ಲಾಮನೆಯಲ್ಲೂ  ಡಿಶ್ ಟಿವಿ.

ಮತ್ತೂ ಹಿಂದಕ್ಕೆ ಹೋದರೆ , ರೇಡಿಯೋ ಕಾಲ ಅದು. ಕ್ರಿಕೆಟ್ ಕಮೆಂಟರಿ ಕೇಳಲು ಪಕ್ಕದ ಮನೆಗೆ ಹೋಗಬೇಕಾದ ಕಾಲ ಅದು. ಊರಲ್ಲಿ  ಒಂದೋ ಎರಡೋ ರೇಡಿಯೋ. ಕ್ರಿಕೆಟ್ ಸಂದರ್ಭದಲ್ಲಿ  ಕಾಮೆಂಟರಿ ಕೇಳಲು ರೇಡಿಯೋ ಮುಂದೆ ಕೂತು  ಹರಟುತ್ತಿದ್ದರು.ಈಗ ಅಂತಹ ರೇಡಿಯೋ ಇಲ್ಲವೇ ಇಲ್ಲ.

ಈಗ ಇದಾವುದೂ ಇಲ್ಲ. ಕಾಲ ಬದಲಾಗಿದೆ.

ತಂತ್ರಜ್ಞಾನಗಳು  ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಹೋಗುತ್ತಿದೆ. ನಾವು ನೋಡುವ ಒಳ್ಳೆಯ  ಸನ್ನಿವೇಶವನ್ನು  ಮನೆಯಲ್ಲಿರುವ ಹೆಂಡತಿಗೋ , ಅಮ್ಮನಿಗೋ , ಮಗುವಿಗೋ ತಕ್ಷಣವೇ ನೇರಪ್ರಸಾರವಾಗಿ ತೋರಿಸಬಹುದು. ಅದಕ್ಕಾಗಿ 3ಜಿ ಸೇವೆ ಇದೆ.  ಈಗ ಅದೂ ಬದಲಾಗಿ 4 ಜಿ ವ್ಯವಸ್ಥೆ ಹತ್ತಿರವಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ  ಇಂಟರ್‌ನೆಟ್ ಇಲ್ಲವೇ ಇಲ್ಲ , ಸಾಧ್ಯವೇ ಇಲ್ಲ  ಎನ್ನುವ ಕಾಲವೇ ಈಗಿಲ್ಲ. ಯಾವುದೇ ಹಳ್ಳಿಯ ಮೂಲೆಯಲ್ಲಿ  ಕೂತು ಕೂಡಾ ಪ್ರಪಂಚವನ್ನು ಇಂಟರ್‌ನೆಟ್ ಮೂಲಕ ಸುತ್ತಾಡುವ ವ್ಯವಸ್ಥೆ ಈಗ ಬರುತ್ತಿದೆ.

ಹೀಗಿದ್ದರೂ ಕೂಡಾ ನಾವು  ಇವುಗಳ ಸರಿಯಾದ ಬಳೆಕೆಯಲ್ಲಿ  ಮಾತ್ರಾ ಇನ್ನೂ  ಮುಂದುವರಿದಿಲ್ಲ ಅಂತ ನನಗನ್ನಿಸುತ್ತದೆ. ಮೊನ್ನೆ ಮೊನ್ನೆ ನಮ್ಮ ದೇಶದ ಸೈನಿಕರನ್ನು  ಪಾಕ್‌ನ ದ್ರೋಹಿಗಳು ಅಮಾನುಷವಾಗಿ ಹತ್ಯೆ ಮಾಡಿದರು. ಇಲ್ಯಾಕೆ ಹೀಗಾಯಿತು. ಇಂದು ಮೊಬೈಲ್ ಕ್ಷೆತ್ರದಲ್ಲಿ  ಆದ ಪ್ರಗತಿಯ ಒಂಚೂರು ಭಾಗವನ್ನಾದರೂ ರಕ್ಷಣಾ ಕ್ಷೇತ್ರದಲ್ಲಿ ಮಾಡುತ್ತಿದ್ದರೆ , ಇದಕ್ಕಾಗಿ  ಯಾವುದಾದರೂ ಕಂಪನಿ ಪೈಪೋಟಿ ಮಾಡುತ್ತಿದ್ದರೆ ಸಾಕಾಗಿತ್ತು.  ದೇಶವನ್ನು  ಕಾಪಾಡುವ ಯೋಧರಿಗೂ  ಉಪಕಾರವಾಗುತ್ತಿತ್ತು  ಅಂತ ನಾನು ಯೋಚಿಸುತ್ತಿದೆ.