ಅಂಗಡಿ ಬಾಗಿಲು ಹಾಕಿ ಮಹಡಿಯ ಮೇಲೆ ನಿಂತು ಮೂಕಪ್ರೆಕ್ಷಕನಾಗಿ ನೋಡುವುದು ಅಷ್ಟೇ ಆತನ ಕೆಲಸವಾಗಿತ್ತು ಆಗ. ಹೀಗಾಗಿ ಈ ಸಂಕಟದ ನಡುವೆಯೇ ಅಲ್ಲೊಂದು ಇಲ್ಲೊಂದು ಸಲಹೆ ಹೇಳುವಾಗಲೂ ನಂಬಿಕೆ ಇಲ್ಲ. ಎಲ್ಲೋ ಓದಿದ , ಕೇಳಿದ ಮಾತುಗಳೇ ಆಗ ಸಲಹೆ. ಬೇರೇನೂ ಹೇಳಲಾರ , ಹೇಳುವುದೂ ಇಲ್ಲ. . .!.
ಆನೆಯನ್ನೇ ಪಳಗಿಸಿದ ಮನುಷ್ಯ, ಆನೆ ಸಿಟ್ಟಾದಾಗ ಏನು ಮಾಡಬಹುದು ಎನ್ನುವುದರ ಸಣ್ಣ ಪರಿಚಯ ಇದು. ಇತ್ತೀಚೆಗೆ ಪುತ್ತೂರಿನಲ್ಲೇ ಅಂತಹ ಘಟನೆಯೊಂದು ನಡೆಯಿತು. ದೂರ ತ್ರಿಶೂರ್ ನಲ್ಲೋ , ಮೈಸೂರಿನಲ್ಲೋ ಆನೆ ದಾಳಿಯ ಘಟನೆ ನಡೆದಾಗ ಇಲ್ಲಿ ಕೂತು , ಹೀಗೆ ಮಾಡಬಹುದಿತ್ತು ಎಂತ ಪ್ರತಿಕ್ರಿಯೆ ನೀಡುವ ಮನುಷ್ಯ, ನಮ್ಮೆದುರೇ ಆನೆ ಬಂದಾಗ ನಿಜಕ್ಕೂ ಉತ್ತರ ನೀಡುವುದು ಬಿಡಿ , ಬದುಕಿಗಾಗಿ , ಜೀವಕ್ಕಾಗಿ ದಾರಿ ಹುಡುಕುವ ಸಂದರ್ಭವೇ ಹೆಚ್ಚು. ಸೂಕ್ತ ಸ್ಥಳ ಸಿಕ್ಕ ನಂತರವೇ ಉಳಿದ ಸಲಹೆಗಳು.
ಸುಮಾರು 3 ದಿನಗಳ ಕಾಲ ಆನೆ ರಾದ್ದಾಂತವೇ ಎಬ್ಬಿಸಿತು. ಲಾರಿಯಲ್ಲಿ ಸಾಗಾಟ ಮಾಡುವಾಗ ಆದ ಸಣ್ಣ ನೋವು , ಇಡೀ ನಗರಕ್ಕೆ , ನಗರದ ಜನರಿಗೇ 3 ದಿನಗಳ ಕಾಲ ನೋವು ಕೊಟ್ಟಿತು. ಇದೆಲ್ಲಾ ಒಂದು ಉಲ್ಲೇಖ ಮಾತ್ರಾ. ಅದರ ಸೂಕ್ಷ್ಮಗಳು , ಹಾಗೂ ಆ ಕ್ಷಣ ಮನುಷ್ಯ ಮಾಡುವ ರೀತಿ ನಿಜಕ್ಕೂ ಒಂದು ಸ್ಟೋರಿಯೇ ಸರಿ.
ಒಂದು ಕುತೂಹಲ. ಆ ಕುತೂಹಲದೊಳಗೆ ಹಲವಾರು ಪ್ರಶ್ನೆಗಳು , ಅಲ್ಲೇ ಒಂದು ಸಲಹೆ , ಅದಕ್ಕೊಂದು ಉಪಮೆ. ಇದೆಲ್ಲಾ ಕೇಳುತ್ತಾ ನಿಂತಾಗ ಈ ಬದುಕೇ ಹೀಗಲ್ಲಾ .....! ಅಂತ ಅನಿಸಿಬಿಡುತ್ತದೆ. ಯಾವುದೇ ರೀತಿಯಿಂದಲೂ ಸಂಬಂಧ ಪಡದ ಸಂಗತಿ ಅದು , ಆದರೂ ಒಂದು ಕುತೂಹಲ. ಅಲ್ಲೇನಾಗಿದೆ ಎಂಬ ಉತ್ಸಾಹ. ಅಲ್ಲಿ ಗೆಲುವಾದರೆ ಅಷ್ಟೇ.. , ಸೋಲಾದರೆ ಮತ್ತಷ್ಟು ಕುತೂಹಲ ,ಆ ಕುತೂಹಲವೇ ಪ್ರಶ್ನೆಯಾಗಿ ಮತ್ತಷ್ಟು ಜನರಿಗೆ "ಪದ"ಬಂಧ. . .!.
ಇದೇ ಅಲ್ಲವೇ ಬದುಕು. . , ಕೈಮೀರಿದ ಆ ಹೊತ್ತು ಯಾವುದೂ ನಮ್ಮ ಕೈಯಲ್ಲಿಲ್ಲ , ಆಗಲೇ ಬಳಕೆಯಾಗಬೇಕು ವಿವೇಕ.