12 ಜೂನ್ 2012

ಇಲ್ಲಿ ಅಡಿಕೆ ಮರ ಇದ್ದಕ್ಕಿದ್ದಂತೆ ಸಾಯುತ್ತಿದೆ . . .!





 ಅಡಿಕೆ ಧಾರಣೆ ಏರುಪೇರಿನ ನಡುವೆಯೇ ಈಗ ಸವಣೂರಿನ ಅಡಿಕೆ ಬೆಳೆಗಾರನಿಗೆ ಈಗ ಮತ್ತೊಂದು ಆತಂಕ ಎದುರುರಾಗಿದೆ. ಇಲ್ಲಿ  ಅಡಿಕೆ ಮರಗಳು ಇದ್ದಕ್ಕಿದ್ದಂತೆ ಸಾಯುವುದು  ಈ ಹೊಸ ರೋಗ.

ಪುತ್ತೂರು ತಾಲೂಕಿನ ಸವಣೂರು ಬಳಿಯ ಸೋಂಪಾಡಿಯ ಅಡಿಕೆ ಬೆಳೆಗಾರ ಸಂಪತ್ ಕುಮಾರ್ ತೋಟದಲ್ಲಿ  ಈ ಹೊಸ ರೋಗ ಪತ್ತೆಯಾಗಿದೆ. ಇಲ್ಲಿ  ತೋಟದಲ್ಲಿ  ಅಡಿಕೆ ಮರವೊಂದು ಒಣಗಿದ ರೀತಿಯಲ್ಲಿ ಕಂಡುಬಂದಿತ್ತು. ಅದಾದ ಬಳಿಕ ಎರಡು ದಿನಗಳ ನಂತರ ಆಸುಪಾಸಿನ ಕೆಲವು ಮರಗಳು ಅದೇ ರೀತಿ ಒಣಗಿದೆ. ಅದರಲ್ಲಿ  ಗಿಡ ಹಾಗೂ ದೊಡ್ಡ ಅಡಿಕೆ ಮರ ಕೂಡಾ ಸೇರಿರುವುದು ಆತಂಕದ ವಿಚಾರವಾಗಿದೆ ಎನ್ನುತ್ತಾರೆ ಸಂಪತ್. ಈಗ ಸುಮಾರು ೨೫ ಅಡಿಕೆ ಮರಗಳಲ್ಲಿ  ಈ ಲಕ್ಷಣ ಕಂಡುಬಂದಿದೆ.  ಈ ಒಣಗಿದ ಅಡಿಕೆ ಮರವನ್ನು ಉರುಳಿಸಿ ನೋಡಿದಾಗ ಮರದ ತುದಿ ಅಂದರೆ ಮರದಲ್ಲಿ ಸೋಗೆ ಆರಂಭವಾಗುವ ಭಾಗದಲ್ಲಿ  ತುಂಡಾಗಿದೆ. ಆ ಭಾಗದಲ್ಲಿ  ಒಣಗಿನವರೆಗೆ ಕೊಳೆತು ಹೋಗಿರುವುದು ಕಂಡುಬಂದಿದೆ ಎಂದು ಸಂಪತ್ ವಿವರಿಸುತ್ತಾರೆ.ಆರಂಭದಲ್ಲಿ  ಸಿಡಿಲು ಬಡಿದು ಅಡಿಕೆ ಮರಕ್ಕೆ ಹಾನಿಯಾಗಿರಬಹುದು  ಎಂದು  ಅಂದಾಜಿಸಲಾಗಿತ್ತು , ಆದರೆ ಇದೀಗ ನಿಧಾನವಾಗಿ ಆಸುಪಾಸಿನ ಮರಳಿಗೂ ಹರಡುತ್ತಿರುವುದರಿಂದ ಸ್ವಲ್ಪ ಗಮನಿಸುವಂತೆ ಮಾಡಿದೆ.ಆದರೆ ಆಸುಪಾಸಿನ ಯಾವುದೇ ತೋಟಗಳಲ್ಲಿ  ಈಗ ಇಂತಹ ರೋಗ ಕಂಡುಬಂದಿಲ್ಲ.

ಕಳೆದ ವರ್ಷವೂ ಇತ್ತು :

ಸಂಪತ್ ಕುಮಾರ್ ಅವರಿಗೆ ಒಟ್ಟು  ಸುಮಾರು 1.5 ಎಕ್ರೆ ಅಡಿಕೆ ತೋಟ ಇದೆ. ಇದರಲ್ಲಿ  ಸುಮಾರು 600 ರಿಂದ 700 ಅಡಿಕೆ ಮರ ಇದೆ. ಸುಮಾರು 14 ವರ್ಷಗಳಿಂದ ಸಾವಯವ ಕೃಷಿಯನ್ನೇ ಮಾಡುತ್ತಿರುವ ಸೋಂಪಾಡಿಯಲ್ಲಿ ಈಗ ಕಾಡುತ್ತಿರುವ ರೋಗ ಅಚ್ಚರಿ ಮೂಡಿಸಿದೆ.ಕಳೆದ ವರ್ಷವೂ ಇದೇ ರೀತಿ ಅಡಿಕೆ ಮರ ಸಾಯುವುದು ಕಂಡಿತ್ತು. ಆಗಲೂ ಸಿಡಿಲು ಬಡಿದು ಹಾನಿಯಾಗಿರಬಹುದು ಎಂದು ಭಾವಿಸಿದ್ದರು. ಆಗ ಸುಮಾರು 25 ರಿಂದ 30 ಅಡಿಕೆ ಮರ ಸತ್ತಿತ್ತು. ಅದಾದ ಬಳಿಕ ಅಲ್ಲಿಗೇ ಮರ ಸಾಯುವುದು ನಿಂತಿತ್ತು. ಆದರೆ ಇದುವರೆಗೆ ಯಾವುದೇ ಇಲಾಖೆಗಳಿಗೆ ಈ ಬಗ್ಗೆ ಮನವಿ  ನೀಡಿಲ್ಲ.

ಕೊಳೆರೋಗ ಕಾರಣವೇ ?:

ಇಂತಹ ಹೊಸ ರೋಗಕ್ಕೆ ಅಡಿಕೆ ಕೊಳೆರೋಗ ಕಾರಣ ಇರಬಹುದೇ ಎಂಬ ಸಂದೇಹದ ಬಗ್ಗೆ ಪ್ರಶ್ನಿಸಿದಾಗ , ಕಳೆದ ವರ್ಷ ಈ ಪ್ರದೇಶದಲ್ಲಿ ಅಷ್ಟೊಂದು ಕೊಳೆರೋಗ ಇದ್ದಿರಲಿಲ್ಲ. ಅದರಲ್ಲೂ ದೊಡ್ಡ ಅಡಿಕೆ ಮರಕ್ಕಾದರೆ ಸರಿ ಕೊಳೆರೋಗ ಬಾಧಿಸಿತ್ತು ಎಂದು ಹೇಳಬಹುದು ಆದರೆ , ಸಣ್ಣ ಅಡಿಕೆ ಮರಗಳಿಗೂ ಕೊಳೆರೋಗ ಬಾಧಿಸಿರಲೇ ಇಲ್ಲ ಎನ್ನುತ್ತಾರೆ ಸಂಪತ್. ಅದರ ಜೊತೆಗೆ ಒಂದು ಪ್ರದೇಶದಲ್ಲೇ ಈರೀತಿ ಸಾಯುವುದಕ್ಕೆ ಕಾರಣವೇ ಗೊತ್ತಾಗುತ್ತಿಲ್ಲ ಅಂತಾರೆ ಅವರು.ಇನ್ನು  ಸುಳಿಕೊಳೆ ರೋಗವಾದರೆ ಅಡಿಕೆ ಮರದ ಸುಳಿಯೇ ಕೊಳೆಯಬೇಕಾಗಿತ್ತು , ಆದರೆ ಇಲ್ಲಿ  ಅಡಿಕೆ ಮರದ ಸುಳಿ ಕೊಳೆಯುವುದು ಗೊತ್ತಾಗುತ್ತಿಲ್ಲ , ಹಿಂಗಾರ ಬಿಡುವ ಪ್ರದೇಶ ಅಂದರೆ ಸೋಗೆ ಇರುವ ಕಡೆಯಲ್ಲೇ ಒಣಗುತ್ತದೆ ಎನ್ನುತ್ತಾರೆ ಸಂಪತ್ ಕುಮಾರ್ ತಾಯಿ  ಕಾಂಚನ.

ಒಟ್ಟಿನಲ್ಲಿ ಸವಣೂರಿನಲ್ಲಿ  ಅಡಿಕೆ ಮರಕ್ಕೆ ಕಂಡುಬಂದಿರುವ ಈ ರೋಗದ ಬಗ್ಗೆ ವಿಶೇಷವಾದ ಅಧ್ಯಯನ ಆಗಬೇಕಾಗಿದೆ.ಇದು ಹರಡುವ ರೋಗವೇ ಅಥವಾ ಮಣ್ಣಿನಿಂದ ಬರುವುದೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಯಬೇಕಾಗಿದೆ.