08 ಜೂನ್ 2012

ಬೆಟ್ಟದ ಮೇಲಿನ ಭಟ್ಟರ ಮನೆಗೆ 38 ವರ್ಷದ ಬಳಿಕ ಪ್ಲಾಸ್ಟಿಕ್ ಚಯರ್. . . !





ಅವರದು ಬೆಟ್ಟದ ಮೇಲಿನ ಬದುಕು. ಸರಿಸುಮಾರು 38  ವರ್ಷಗಳಿಂದ ಗಿರಿಗದ್ದೆಯಲ್ಲಿ ಅವರ ವಾಸ. ಈಗ ಅವರ ಮನೆಯೊಳಗೆ ಹೊಕ್ಕಿದೆ ಪ್ಲಾಸ್ಟಿಕ್ ಚಯರ್.ಹಾಂಗಂತ ಅವರು ಪ್ಲಾಸ್ಟಿಕ್ ಚಯರ್ ಕಂಡೇ ಇಲ್ಲ ಅಂತಲ್ಲ. ನಾಡಿನ ಸ್ಪರ್ಶವಿಲ್ಲದ ಪರಿಸರದ ಪ್ರೇಮಿ ಗಿರಿಗದ್ದೆ ಮನೆಗೆ ಈ ಚಯರ್    ತಲುಪಿದ್ದೇ ಒಂದು ವಿಶೇಷ ಸುದ್ದಿ.






ಇವರು ಗಿರಿಗದ್ದೆ ಮಹಾಲಿಂಗೇಶ್ವರ ಭಟ್. ಚಾರಣಪ್ರಿಯರಿಗೆ ಇವರನ್ನು ಪರಿಚಯಿಸಬೇಕಾದ್ದಿಲ್ಲ.ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಲೋ ಮೀಟರ್ ದೂರದಲ್ಲಿ  ಕುಮಾರಪರ್ವತದ ಹಾದಿಯ ಗಿರಿಗದ್ದೆಯಲ್ಲಿ ಇವರ ಮನೆ. ಗಿರಿಗದ್ದೆ ಭಟ್ಟರು ಅಂತಲೇ ಫೇಮಸ್ಸು.ಇಂದು ಫೇಸ್‌ಬುಕ್ ಮೂಲಕವೂ ಜಗತ್ತಿನ ಸಂಪರ್ಕ ಹೊಂದಿರುವ ಬೆಟ್ಟದ ಮನುಷ್ಯ. ಈ ಕುಟುಂಬ ಗಿರಿಗದ್ದೆಗೆ ಬಂದದ್ದು 1974  ರಲ್ಲಿ. ಆರಂಭದಲ್ಲಿ ಇಲ್ಲಿಗೆ ಬಂದವರು ಪರಮೇಶ್ವರ ಭಟ್ಟರು. ಆ ಬಳಿಕ ಅಂದರೆ ೩೮ ವರ್ಷಗಳಿಂದ ಇಲ್ಲೇ ವಾಸ.ಮಣ್ಣಿನ ಗೋಡೆಯಿಂದ ನಿರ್ಮಿಸಿಕೊಂಡ ಈ ಮನೆಯಲ್ಲಿ  ಪ್ಲಾಸ್ಟಿಕ್ , ಸಿಮೆಂಟ್ ಬಳಕೆ ಇತ್ತೀಚೆಗಿನವರೆಗೆ ಇರಲಿಲ್ಲ. ಆದರೆ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಚಾರಣಿಗರು ಇಲ್ಲಿ ತಂದು ಪ್ಲಾಸ್ಟಿಕ್ ಹಾಕುವುದು ಬಿಟ್ಟರೆ ಈ ಕುಟುಂಬ ಪ್ಲಾಸ್ಟಿಕ್ ಬಳಸುವುವುದು ತೀರಾ ಅಪರೂಪವಾಗಿತ್ತು.ಆ ಬಳಿಕ ನಾಲ್ಕೈದು ವರ್ಷದ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ  ಕಾಂಕ್ರೀಟ್ ಶೌಚಾಲಯ ನಿರ್ಮಾಣವಾಗಿದೆ. ಅದರ ಜೊತೆ ಜೊತೆಗೆ ಮನೆಯ ಹೊರ ಆವರಣದಲ್ಲಿ  ಒಂದಿಷ್ಟು ಸಿಮೆಂಟ್ ಬಳಿಯಲಾಗಿತ್ತು. ಮನೆಗೆ ಸೋಲಾರ್ ಲೈಟ್‌ಗಳು , ಜಲವಿದ್ಯುತ್ ವ್ಯವಸ್ಥೆ , ಮೊಬೈಲ್ ಹೀಗೆ ಎಲ್ಲವೂ ಬಂದಿತ್ತು.ಅದಾದ ನಂತರ ಈ ಬಾರಿ ಅಂದರೆ 38 ವರ್ಷದ ಬಳಿಕ ಈ ಪರಿಸರ ಸ್ನೇಹಿ ಮನೆಯೊಳಗೆ ಪ್ಲಾಸ್ಟಿಕ್ ಚಯರ್‌ಗಳು ಹೊಕ್ಕಿವೆ. ನಾಲ್ಕು ಚಯರ್ , ಟೀಪಾಯಿ ಎಲ್ಲವೂ ಪ್ಲಾಸ್ಟಿಕ್‌ನದ್ದೇ.ಇದನ್ನು ಮಂಗಳೂರಿನ A1ಎಂಬ ಕಂಪನಿಯೊಂದು ಗಿರಿಗದ್ದೆ ಮನೆಗೆ ಕೊಡುಗೆಯಾಗಿ ನೀಡಿದೆ. ಭಟ್ಟರು ಪ್ಲಾಸ್ಟಿಕ್ ಬಳಕೆಗೆ ಆಸಕ್ತಿ ಕಡಿಮೆ.ಹಾಗಿದ್ದರೂ ಪ್ಲಾಸ್ಟಿಕ್ ಚಯರ್ ಬೇಕು ಎನ್ನುವ ಆಕಾಂಕ್ಷೆ ಅವರಿಗಿತ್ತು. ಇದನ್ನು ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಮೀ ಹೊತ್ತುಕೊಂಡು ಗಿರಿಗದ್ದೆಗೆ ತರಲಾಗಿದೆ.ಇದುವರೆಗೆ ಇಲ್ಲಿ  ಮರದ ಬೆಂಚು ಇತ್ತು.ಈಗ ಇದೆಲ್ಲಾ ಹೊಸ ಸೇರ್ಪಡೆ.

ಭಟ್ಟರ ಬದುಕು ಹೇಗೆ ?

ಇದೊಂದು ಅತ್ಯಂತ ಸ್ವಾರಸ್ಯಕರ ಹಾಗೂ ಅಚ್ಚರಿಯ ಸಂಗತಿಗಳು.ಭಟ್ಟರು ಈ ಬಗ್ಗೆ ತಾನಾಗಿಯೇ ಮಾತನಾಡಲಾರರು. ಕೆದಕುತ್ತಾ ಹೋದರೆ ಸಂಗತಿಗಳ ಅನಾವರಣವಾಗುತ್ತದೆ.1974 ರ ಸುಮಾರಿಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿದ್ದ ಪರಮೇಶ್ವರರ ಭಟ್ಟರು ಕುಮಾರ ಪರ್ವತ ಏರಿದರು. ಹಾಗೇ ಇಳಿದು ಬರುವಾಗ ಕೊಂಚ ಆಯಾಸವಾಗಿ ಗಿರಿಗದ್ದೆಯಲ್ಲಿ ಕುಳಿತುಕೊಂಡರು. ಆಗ ಅಲ್ಲಿ ಮನೆಯ ಕುರುಹುಗಳು ಇರುವುದು ಅವರಿಗೆ ಕಂಡಿತು.ತಾನು ಇಲ್ಲಿ ವಾಸ್ತವ್ಯ ಹೂಡಿದರೆ ಹೇಗೆ ಎಂಬ ಪ್ರಶ್ನೆಯೊಂದಿಗೆ ಸುಬ್ರಹ್ಮಣ್ಯಕ್ಕೆ ತೆರಳಿದ ಭಟ್ಟರು ಕೆಲವೇ ಸಮಯದಲ್ಲಿ  ಗಿರಿಗದ್ದೆ ಕಡೆಗೆ ಕುಟುಂಬ ಸಹಿತರಾಗಿ ಹೆಜ್ಜೆ ಹಾಕಿದರು. ಗಿರಿಗದ್ದೆಯಲ್ಲಿ  ಮಣ್ಣಿನ ಮನೆ , ಕೊಟ್ಟಿಗೆ , ಹಟ್ಟಿ ನಿರ್ಮಿಸಿಕೊಂಡು ಏಕಾಂತ ಬದುಕು ಸಾಗಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಎಲ್ಲವೂ ಅವರ ಏಕಾಂತ ಬದುಕಿಗೆ ಸ್ಫೂರ್ತಿ ನೀಡಿದವು.ಆಗ ಅವರಿಗೆ ಸಾತ್ ನೀಡಿದವರು ಚಾರಣಿಗರು , ಚಾರಣಿಗರಿಗೆ ಆಶ್ರಯದಾತರಾಗಿಯೂ ಗಿರಿಗದ್ದೆ ಪರಮೇಶ್ವರ ಭಟ್ಟರು ಹೆಚ್ಚು ಆತ್ಮೀಯರಾದರು.

ಪರಮೇಶ್ವರ ಭಟ್ಟರೊಂದಿಗೆ ಅವರ ಮಕ್ಕಳೂ ಗಿರಿಗದ್ದೆ ವಾಸ ಇಷ್ಟ ಪಟ್ಟರು.ಕಾಲಾನಂತರ ಅಂದರೆ ಪರಮೇಶ್ವರ ಭಟ್ಟರಿಗೆ ವೃದ್ಧಾಪ್ಯ ಬಂದಾಗ, ಗಿರಿಗದ್ದೆ ಮನೆಯಲ್ಲಿ  ಮಹಾಲಿಂಗೇಶ್ವರ ಭಟ್ಟರು ಹಾಗೂ ನಾರಾಯಣ ಭಟ್ಟರು ಚಾರಣಿಗರ ಅನ್ನದಾತರಾದರು.ಮಹಾಲಿಂಗೇಶ್ವರ ಭಟ್ಟರೊಂದಿಗೆ ಅವರ ಅತ್ತೆ ಪರಮೇಶ್ವರಿ ಅಮ್ಮನೂ ಗಿರಿಗದ್ದೆ ಆಗಮಿಸಿದರು. ಈಗ ಈ ಅಜ್ಜಿಗೆ 76 ವರ್ಷ.ಅವರು ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ಹೋಗದೆ 7 ವರ್ಷಗಳಾಗಿದೆ.ಉಳಿದವರೆಲ್ಲಾ ತಿಂಗಳಿಗೆ ಒಂದೆರಡು ಬಾರಿ ಸುಬ್ರಹ್ಮಣ್ಯಕ್ಕೆ ಹೋಗಿಬರುತ್ತಾರೆ. ದಿನವೂ ಹೋಗಿ ಬರಲು ಕೆಲಸದವರು ಇದ್ದಾರೆ.ಅಂದರೆ ದಿನಕ್ಕೆ ಬೆಟ್ಟದ ಕಡೆಗೆ ೮ ಕಿಲೋ ಮೀಟರ್ ನಡಿಗೆ. .!.

ಗಿರಿಗದ್ದೆಗೆ ಸುಬ್ರಹ್ಮಣ್ಯದಿಂದ ಕೆಲಸಕ್ಕೆ ಪ್ರತೀದಿನ ಈಗ ಬರುತ್ತಾರೆ. ಸುಬ್ರಹ್ಮಣ್ಯದಿಂದ ಹೊರಡುವಾಗ 25 ಕೆಜಿ ಅಕ್ಕಿ , ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು 4 ಕಿಮೀ ಬೆಟ್ಟ ಏರುತ್ತಾ ಕಾಲ್ನಡಿಗೆ ಪಯಣ. ಅಲ್ಲಿ ಕೆಲಸ ಮುಗಿಸಿ ಸಂಜೆ ಮತ್ತೆ ಸುಬ್ರಹ್ಮಣ್ಯಕ್ಕೆ ಕಾಲ್ನಡಿಗೆ. ಇದರ ಜೊತೆಗೆ ಇನೊಬ್ಬರು ಸುಮಾರು 10 ಗಂಟೆ ವೇಳೆಗೆ ದನದ ಹಾಲನ್ನು ಕ್ಯಾನಲ್ಲಿ ತುಂಬಿಕೊಂಡು ಸುಬ್ರಹ್ಮಣ್ಯಕ್ಕೆ ಬರುತ್ತಾರೆ.ಈ ಹಾಲಿಗೂ ಹಾಗೇ ಒಳ್ಳೆ ಬೇಡಿಕೆ ಇದೆ.ಕೆಲವು ಆಯುರ್ವೇದ ಔಷಧಿಗಳಿಗೆ ಇಲ್ಲಿನ ಹಾಲು , ಬೆಣ್ಣೆ, ತುಪ್ಪಗಳೇ ಬೇಕು.ಏಕೆಂದರೆ ಇಲ್ಲಿರುವ ಮಲೆನಾಡು ಗಿಡ್ಡಜಾತಿಯ ಗೋವುಗಳು ಹಸಿರು ಹುಲ್ಲು ಸೇವಿಸಿ ಬಿಸಿಲಿಗೆ ಮೈಯೊಡ್ಡುವುದರಿಂದ ವಿಶೇಷ ಔಷಧಿಯುಕ್ತ ಹಾಲಿದು. ಹಾಗಾಗಿ ಈ ಹಾಲಿಗೆ ಬೇಡಿಕೆ ಇದೆ. ಇದೆಲ್ಲಾ ಇಲ್ಲಿ ನಿತ್ಯದ ಕಾಯಕ. ಇವರಿಗೆ ಹೀಗೆ ಬೆಟ್ಟ ಹತ್ತಲು ಇಳಿಯಲು ಸುಮಾರು 45 ನಿಮಿಷ ಸಾಕಾಗುತ್ತಂತೆ. . .!. ಉಳಿದವರಿಗೆ ಸುಮಾರು 1.30 ಗಂಟೆ. . !.

ಪ್ರತೀ ವರ್ಷ ಇಲ್ಲಿಗೆ ಸುಮಾರು 5 ರಿಂದ 10 ಸಾವಿರ ಚಾರಣಿಗರು ಬರುತ್ತಾರೆ ಎನ್ನುವ ಮಹಾಲಿಂಗೇಶ್ವರ ಭಟ್ಟರು , ಅತ್ಯಂತ ವಿ‌ಐಪಿಗಳು ಎನಿಸಿಕೊಂಡವರೂ ಬರುತ್ತಾರೆ. ಒಂದೊಳ್ಳೆ ಅನುಭವವಾಗುತ್ತದೆ, ಇಲ್ಲಿನ ಬದುಕು ಖುಷಿ ಕೊಡುತ್ತದೆ , ಒಂದು ರೀತಿಯ ಏಕಾಂತ ಬದುಕು , ಯಾವುದೇ ರಗಳೆ ಇಲ್ಲ ಎನ್ನುತ್ತಾರೆ.

ಕುಮಾರಪರ್ವತಕ್ಕೆ ಹೋಗುವ ಚಾರಣಿಗರು , ಹೋಗುವ ವೇಳೆ ಅಥವಾ ಬರುವ ವೇಳೆ ಭಟ್ಟರ ಮನೆಯಲ್ಲಿ ಊಟ ಮಾಡಿಯೇ ಮುಂದೆ ಹೋಗುತ್ತಾರೆ. ದಿನಮುಂದಾಗಿ ಭಟ್ಟರಿಗೆ ಮಾಹಿತಿ ನೀಡಿದರೆ ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಅಡುಗೆ ಸಿದ್ದ.ಅಲ್ಲೇ ಮನೆಯ ಹೊರಗಿನ ವಠಾರದಲ್ಲಿ ಅಡುಗೆ ಇರುತ್ತದೆ , ಸ್ವಸಹಾಯ ಪದ್ಧತಿ ಮೂಲಕ ಊಟ ಮಾಡಿದರೆ ಮುಗಿಯಿತು.ಒಂದು ದಿನದ ಊಟಕ್ಕೆ 250 ರೂಪಾಯಿ ಚಾರ್ಜ್ ಮಾಡುತ್ತಾರಂತೆ ಭಟ್ಟರು. ಕೆಲವು ಚಾರಣಿಗರು ಗಿರಿಗದ್ದೆ ಮನೆಯಲ್ಲೇ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಕುಮಾರಪರ್ವತ ಏರುವವರೂ ಇದ್ದಾರೆ.

ಒಟ್ಟಿನಲ್ಲಿ ಬೆಟ್ಟದ ಮೇಲಿನ ಈ ಭಟ್ಟರ ಬದುಕು ನಿಜಕ್ಕೂ ಸಾಹಸದ ಕೆಲಸ. ನಗರದ ಸಂಪರ್ಕವಿಲ್ಲದೆ ನಗರವಾಸಿಗಳ ಸಂಪರ್ಕದೊಂದಿಗೆ ಬದುಕುವ ಇವರದು ತಪಸ್ಸಿನ ಜೀವನ.ಈಗ ಈ ಬೆಟ್ಟದ ಮನೆಯೊಳಗೆ ಸೇರಿಕೊಂಡಿರುವ ಪ್ಲಾಸ್ಟಿಕ್ ಚಯರ್‌ಗಳು ಇಲ್ಲಿ ಸಾಂಕೇತಿಕ ಉಲ್ಲೇಖವಾದರೂ , ಇಂದು ಪ್ಲಾಸ್ಟಿಕ್ ಎಲ್ಲೆಲ್ಲಾ ಬಳಕೆಯಾಗುತ್ತದೆ ಮತ್ತು ಅದು ಎಲ್ಲಿಗೆಲ್ಲಾ  ತಪಲುತ್ತೆ ಎನ್ನುವುದೇ ನಿಗೂಢ.


-