24 ಜುಲೈ 2010

ಕಲ್ಲುಗಳು ತುಂಬಿದ ಆತ್ಮವಿಶ್ವಾಸ. . .




ಆ ಕಲ್ಲುಗಳಿಗೆ ಎಂಥಾ ಶಕ್ತಿರೀ . . ಆ ಕಲ್ಲುಗಳು ಕೈಯೊಳಗಿದ್ರೆ ಮುಸ್ಸಂಜೆಯಿಂದ ತೊಡಗಿ ರಾತ್ರಿವರೆಗೂ ಎಲ್ಲಿದೆಂಲ್ಲಿಗೂ ಹೋಗೋವಾಗ್ಲೂ ಭಯಾನೇ ಆಗಲ್ಲ. ಯಾವುದೇ ಕ್ಷುದ್ರ ಶಕ್ತಿಯೂ ನಮ್ಮತ್ರ ಬರೋದಿಲ್ಲ , ಗುಮ್ಮನ ಕಾಟವೂ ಇರೋದಿಲ್ಲ. ಹಾಗೊಂದು ನಂಬಿಕೆ ಇತ್ತು.ನಾವು ಚಿಕ್ಕವರಿರುವಾಗ. . .

ನಿಜಕ್ಕೂ ಆಗ ಅದೊಂದು ಅಚ್ಚರಿ ಸಂಗತಿ. ನನ್ನನ್ನೂ ಸೇರಿಸಿ ನಾವೆಲ್ಲಾ ಚಿಕ್ಕವರಿದ್ದಾಗ ಹೆದರು ಪುಕ್ಕಲ.ಆಗ ನಾವಿನ್ನೂ ಎರಡೋ ಮೂರೋ ಕ್ಲಾಸ್. ಅಲ್ಲಿ , ಇಲ್ಲಿ ಕತೆ ಪುಸ್ತಕ ಓದಿದಾಗ ಕಾಣೋ ಈ ಭೂತಗಳ , ಗುಮ್ಮನ ಚಿತ್ರಗಳು. ಅದರ ಸುತ್ತಲೂ ಮನಸ್ಸಿನೊಳಗೆ ಹೆಣೆದುಕೊಳ್ಳೋ ಇನ್ನಷ್ಟು ಕತೆಗಳು.ಆಗ ಮನಸ್ಸಿನೊಳಗೆ ಅದೇನೋ ಭಯ.ಹೀಗಾಗಿ ಸಂಜೆ ಕತ್ತಲು ಆವರಿಸಿದ್ರೆ ಸಾಕು. ನಾವೆಲ್ಲಾ ಗೂಡು ಸೇರಿ ಗುಬ್ಬಚ್ಚಿಯಂತೆ ಸುರುಟಿ ಬಿಡುತ್ತಿದ್ದೆವು.ಇನ್ನು ಮನೆಯ ಹೊರಗೆ ಬರಬೇಕಾದ್ರೆ ಇಬ್ಬಿಬ್ರು ಬಾಡಿ ಗಾರ್ಡ್ ಬೇಕೇ ಬೇಕು.ರಾತ್ರಿ ಬಹಿರ್ದೆಸೆಗೆ ಹೋಗೂ ಸುದ್ದಿನೇ ಇಲ್ಲ.ಎಲ್ಲಾನೂ ಬೆಳಗ್ಗೆ ಎದ್ದ ಮೇಲೇನೇ. ಇಂತಹ ಹೆದರು ಪುಕ್ಕಲು ಸಮಯ ಅದು.ಆದ್ರೆ ಅಂತಹ ಭಯಕ್ಕೆ ಒಂದು ಮದ್ದಿತ್ತು. ಕೇವಲ ಮೂರೇ ಮೂರು ಕಲ್ಲು.ಅದೆರಲ್ಲೇ ಧೈರ್ಯ ತುಂಬುತ್ತಿತ್ತು.ಅದಕ್ಕೆ ನನ್ನ ಅಮ್ಮ ಕಾರಣರಾಗಿದ್ದರು.ಆ ಕಲ್ಲಲ್ಲಿ ಬೇರೇನೂ ಇಲ್ಲ.ಕೇವಲ ಕಲ್ಲು‌ಅದು.ಆದ್ರೂ ಒಂದು ಶಕ್ತಿ ನಮ್ಮ ಮನಸ್ಸಿಗೆ ಬರುತ್ತಿತ್ತು.

ಸಂಜೆಯ ವೇಳೆಗೆ ಅಂದರೆ ಸೂರ್ಯ ಕಡಲು ಸೇರುವ ಸಮಯವದು.ನನಗೆ ಅನಿವಾರ್ಯವಾಗಿ ಆಚೆ ಮನೆಗೆ ಹೋಗಲೇ ಬೇಕು.ಬಾಡಿ ಗಾರ್ಡ್‌ಗಳು ಯಾರೂ ಇಲ್ಲ. ಅಮ್ಮನಿಗೆ ಮನೆಯಲ್ಲಿ ಕೆಲಸವಿದೆ.ಬೇರಾರೂ ಬರೋರಿಲ್ಲ.ತೋಟ ದಾಟಿ ಆಚೆ ಮನೆಗೆ ಹೋಗ್ಬೇಕು.ಮತ್ತೆ ಬರ‍ಬೇಕು.ಅಬ್ಬಾ . . . ಭಯ ಮೈಯನ್ನೇ ಆಗ್ಲೇ ಸುತ್ತಿಕೊಂಡಿತ್ತು.ಆಗ ಅಮ್ಮ ಒಂದು ಮಂತ್ರ ಹೇಳಿಕೊಟ್ಟರು. ನೆಲದಿಂದ ಮೂರು ದೇವರ ಹೆಸರು ಹೇಳಿ ಕಲ್ಲು ಹಿಡ್ಕೋ. ಅದನ್ನು ಗಟ್ಟಿಯಾಗಿ ಹಿಡ್ಕೋ. .ಎಲ್ಲೂ ಬೀಳಿಸಬೇಡ.ಆಚೆ ಮನೆ ಬಂದಾಗ ಅಲ್ಲೇ ಎಲ್ಲಾದ್ರೂ ಇಡು.ಮತ್ತೆ ಬರೋವಾಗ್ಲೂ ಹಾಗೇ ಮಾಡು.ಏನೂ ಆಗಲ್ಲ ಅಂತ ಅಂದ್ರು. ಓಕೆ. ಹಾಗೇನೇ ಮಾಡಿಯಾಯ್ತು. 3 ಕಲ್ಲು. ರಾಮ , ಲಕ್ಷ್ಮಣ , ಸೀತೆ. . ಕಲ್ಲು ಕೈಯೊಳಗೆ ಗಟ್ಟಿಯಾಯ್ತು.ನಡು ತೋಟದಲ್ಲಿ ಕುಯ್ . . ಅನ್ನೋ ಸದ್ದು . . ಕೈ ಗಟ್ಟಿಯಾಯ್ತು. . 3 ದೇವರ ನೆನಪಾಯ್ತು. . ಸದ್ದು ಮಾಯವಾಯ್ತು. . ಮತ್ತೆ ಮುಂದೆ ಹೋದಾಗ ಇನ್ನೊಂದು ಸದ್ದು . . ಮತ್ತೆ ಕೈಸುತ್ತಿಕೊಂಡಿತು.ಕಲ್ಲು ನೆನಪಾಯ್ತು ಜೊತೆಗೆ 3 ದೇವರು ಕೂಡಾ.. . . ಆ ಹೊತ್ತಿಗೆ ಮನೆ ಬಂತು. ಮತ್ತೆ ಅಲ್ಲಿಂದ ಹೊರಡೋವಾಗ್ಲೂ 3 ಕಲ್ಲು, ಅದೇ ದೇವರು . . ಅದೇ ಕಲ್ಲು . . ಯಾವುದೇ ಸದ್ದಿಲ್ಲ.ಸೀದಾ ಸೀದಾ ಮನೆಗೆ. ಅಬ್ಬಾ ಆ 3 ಕಲ್ಲಿಗೆ ಅದೆಂತಹಾ ಶಕ್ತಿ.. ಅಂತ ದೇವರನ್ನೂ ಜೊತೆಗೆ ನೆನೆದುಕೊಂಡು 3 ಕಲ್ಲನ್ನೂ ಎಸೆದಾಯ್ತು.ಮತ್ತೆಲ್ಲಿಗೂ ಹೋಗೋವಾಗ್ಲೂ ಅದೇ ಕಲ್ಲು . . ಅದೇ ದೇವರು . ಅದೇ ಶಕ್ತಿ. .. ಹಾಗಿದ್ರೆ ಅದ್ಯಾವ ಶಕ್ತಿ . . ಅಂತ ಆಗ ನನ್ನನ್ನು ಕಾಡ್ತಾ ಇತ್ತು.

ಮನಸ್ಸಿಗೆ ಧೈರ್ಯ ತುಂಬೋ ಒಂದೇ ಒಂದು ಎಳೆ ಸಿಕ್ರೂ ಸಾಕು ನಾವು ಏನು ಬೇಕಾದ್ರೂ ಮಾಡಬಹುದು.ಒಂದು ಕ್ಷಣ ಇದು ಸಾಧ್ಯವಿಲ್ಲ ಅಂತ ನಾವೇನಾದ್ರೂ ಯೋಚ್ನೆ ಮಾಡಿದ್ರೂ ಸಾಕು ಅದು ಸಾಧ್ಯನೇ ಇಲ್ಲ.ನಮ್ಗೂ ಹಾಗೆ.ಆ ಮೂರು ಕಲ್ಲು ಅಂದು ಶಕ್ತಿ ತುಂಬಿತ್ತು.ಇಂದಿಗೂ ಅಮ್ಮ ಹೇಳುವ ಸಂಗತಿ ಇರಬಹುದು , ಮಿತ್ರರು ಹೇಳೋ ಸಂಗತಿಗಳು ಇರಬಹುದು , ಅಥವಾ ಮನಸ್ಸು ಹೇಳೋ ಸಂಗತಿಗಳು ಕೂಡಾ ಅದೇ ಕಲ್ಲಿನಂತೆ.ಮನಸ್ಸಿಗೆ , ಕೈಗಳಿಗೆ , ಕಾಲುಗಳಿಗೆ , ದೇಹಕ್ಕೆ ಅದೊಂದು ಟಾನಿಕ್‌ನಂತೆ.ಕೆಲಸ ಮಾಡಿಸಿ ಬಿಡುತ್ತದೆ.ಅದೇ ನೀನು ದಡ್ಡ , ನಿನಗೇನು ಸಾಧ್ಯವಿಲ್ಲ ಅಂತ ಒಂದು ಮಾತು ಹೇಳಿದ್ರೆ , ಅದೇ ಮನಸ್ಸು ಸೋತು ಬಿಡುತ್ತದೆ.ಮಾತ್ರವಲ್ಲ ಮನಸ್ಸಿಗೂ ಇದು ಸಾಧ್ಯವಿಲ್ಲ ಅಂತ ಅನ್ಸಿದ್ರೂ ಕೂಡಾ. ಅದರ ಜೊತೆಗೆ ಮಾಡೋ ಕೆಲಸಕ್ಕೆ ಒಂದೇ ಒಂದು ಗುಟುಕು ಒಳ್ಳೇ ಮಾತು ಸಿಕ್ರೂ ಸಾಕು ಅದೂ ಕೂಡಾ ಡಬಲ್ ಶಕ್ತಿ ಕೊಡುತ್ತೆ.

ಹಾಗಾಗಿ ಆ ಮೂರು ಕಲ್ಲುಗಳು ನನಗೆ ಯಾವಾಗಲೂ ನೆನಪಾಗುತ್ತಲೇ ಇರುತ್ತದೆ.ಮೂರು ಕಲ್ಲುಗಳ “ಶಕ್ತಿ” ಇಡೀ ನನ್ನ ಕೆಲಸದಲ್ಲಿ ಯಾವಾಗಲೂ ನೆನಪಾಗುತ್ತದೆ.

ಕಾಮೆಂಟ್‌ಗಳಿಲ್ಲ: