17 ಮಾರ್ಚ್ 2010

ಕೆಂಪು ಸಂಕ - 1 . . .



ಕೆಂಪು ಸಂಕ . . . .!!!.

ಇಲ್ಲಿ ನಡೆಯುತ್ತಿರುವ ವಿಚಿತ್ರ ಆಟಗಳಾದರೂ ಯಾವುದು..?. ಜನ ದಿನನಿತ್ಯ ಮಾತನಾಡಿಕೊಳ್ಳುತ್ತಿರುವ ಸಂಗತಿಗಳಾದರೂ ಹೌದೇ?. ಇಂದಲ್ಲ .. ಅಂದಿನಿಂದಲೇ ಬಾಯಿಯಿಂದ ಬಾಯಿಗೆ ಸುದ್ದಿಗಳು ಹರಿದಾಡುತ್ತಲೇ ಇದೆ.ಆದರೆ ಕಣ್ಣಾರೆ ಕಂಡವರಿಲ್ಲ .. ಅನುಭವವಗಳನ್ನು ಹೇಳಿಕೊಳ್ಳುವವರಿದ್ದಾರೆ.ಹಾಗಿದ್ದರೆ ಆ “ಕೆಂಪುಸಂಕ”ದ ಮಹಾತ್ಮೆ ಎಂತಹದ್ದು . .?. ಇದು ಏನು ....??. ನಿಜಕ್ಕೂ ಹೌದೇ ..? ಎಂಬ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಉಂಟೇ . . .?

* * * * * * * * * * * * * * * * * * * * ** * * * *

ಅದು ಬಳ್ಪದ ಕಾಡು...

ಸುತ್ತಲೂ ಹಸಿರು ಮುಡಿ ಹಿಡಿದಿಟ್ಟಿರುವ ಪ್ರಕೃತಿ.ಕಾಡಿನ ಒಳಗೆ ಇರಿಂಟಿ ಸದ್ದು ,ಹಕ್ಕಿಯ ಇಂಚರ ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ.ಈ ಕಾಡನ್ನು ಸುಮಾರು 3 ಕಿಲೋಮೀಟರ್ ಸೀಳಿಕೊಂಡು ಗುತ್ತಿಗಾರಿನಿಂದ ಪಂಜಕ್ಕೆ ಹಾದುಹೋಗುವ “ಸಿಂಗಲ್” ರೋಡ್. ಈ ಕಾಡಿನ ನಡುವೆ ಕೆಂಪು ಬಣ್ಣ ಬಳಿದಿರುವ ಒಂದು ಸಂಕ “ಕೆಂಪು ಸಂಕ” . . !!. ಈ ರಸ್ತೆಗೆ ಆ ಕಾಲದಲ್ಲಿ ಡಾಮರು ಬೇರೆ ಇದ್ದಿರಲಿಲ್ಲ . ಇಂತಹ ರಸ್ತೆಯಲ್ಲಿ ಜನ ಓಡಾಡ್ತಾರೆ, ಪೇಟೆಗೆ ಹೋಗ್ತಾರೆ. ಬಸ್ಸು ಇಲ್ಲದ ಆ ಕಾಲದಲ್ಲೂ ಇದೇ ಕಾಡಲ್ಲಿ ಜನ ಒಡಾಡಬೇಕಾದ ಅನಿವಾರ್ಯತೆ ಇತ್ತು.. ಆದರೆ ರಾತ್ರಿಯಾಗುತ್ತಿದ್ದಂತೆ ಜನ ಸಂಚಾರ ಸಂಪೂರ್ಣ ಸ್ಥಬ್ಥ. . . ಒಂದೇ ಒಂದು ಮನುಷ್ಯ ವಾಸನೆ ಈ ಕಾಡಲ್ಲಿ ಇರುವುದೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅನಿವಾರ್ಯವಾದರೆ ಜನ ಒಬ್ಬೊಬ್ಬನೇ ಹೋಗೋದೇ ಇಲ್ಲ.ಇನ್ನೊಬ್ಬ ಬೇಕೇ ಬೇಕು.ಯಾಕೆಂದ್ರೆ ಅದು ಕಾಡು. ಪರಿಸ್ಥಿತಿ ಹೀಗಿರುವಾಗ ಮನೆಯಲ್ಲಿ ಯಾರಿಗಾದ್ರೂ ಮೈಗೆ ಹುಷಾರಿಲ್ಲ , ಗರ್ಭಿಣಿ ಮಹಿಳೆಯರಿದ್ದಾರೆ ಅಂದರೆ ದಿನಾಲೂ ತಲೆನೋವು. ವಾಹನಗಳು ಇಲ್ಲದ ಕಾಲವದು.ಎಷ್ಟೇ ದೂರವಾದ್ರೂ ನಡೆದುಕೊಂಡೇ ಹೋಗಬೇಕು.ಈ ಕಾಡಲ್ಲಿ ಹೋಗೋದೆಂದ್ರೆ ಭಯ. ಕಾಡು ಪ್ರಾಣಿಗಳ ಗರ್ಜನೆ ಒಂದು ಕಡೆಯಾದ್ರೆ ಅಲ್ಲಿರುವ "ಕೆಂಪುಸಂಕ"ದ ಭಯ ಇನ್ನೊಂದು ಕಡೆ.ಈ ಕೆಂಪು ಸಂಕದ ಬಗ್ಗೆ ದಿನಕ್ಕೊಂದರಂತೆ ಜನ ಕತೆಯನ್ನು ಹೇಳುತ್ತಿದ್ದರು.ಹೀಗಾಗಿ ಎಲ್ಲರ ಪ್ರಾರ್ಥನೆ ರಾತ್ರಿ ಯಾವುದೇ ಸಂಕಷ್ಠ ಬರದಿರಲಿ ಅಂತ. ಇನ್ನೂ ಹಗಲು ವೇಳೆ ಕಾಡುದಾರಿಯಲ್ಲಿ ನಡೆಯಲು ಆರಂಭವಾಗುವಾಗಲೇ ದೇವರಿಗೊಂದು ಸಲಾಂ.ಮುಂದೆ ಯಾವುದೇ ಆಪತ್ತು, ಭಯವಾಗದಿರಲಿ ಅಂತ ನಿವೇದನೆ.

ಹೀಗೆಲ್ಲಾ ಇದ್ದರೂ ಒಂದು ದಿನ ನಮ್ಮ ಚಂದ್ರ ಭಟ್ಟರಿಗೆ ಒಮ್ಮೆ ರಾತ್ರಿ ವೇಳೆ ಅದೇ ಕಾಡಲ್ಲಿ ಹೋಗಬೇಕಾಗಿ ಬಂತು.ಅನಿವಾರ್ಯ . ., ಹೋಗದೆ ವಿಧಿಯಿಲ್ಲ.ಅಣ್ಣನ ಹೆಂಡತಿಯ ಹೆರಿಗೆಯ ಸಮಯ. ಆಗೆಲ್ಲಾ ಯಾರೂ ಕೂಡಾ ಹೆರಿಗೆಗೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ.ಎಲ್ಲಾ ಮನೆಯಲ್ಲೇ.ವೈದ್ಯರೂ ಕೂಡಾ ಬೇಕಾದ್ರೆ ಮನೆಗೆ ಬರುತ್ತಿದ್ರು.ಹಾಗೆಯೇ ಚಂದ್ರ ಭಟ್ಟರಿಗೆ ಪಂಜಕ್ಕೆ ಆಸ್ಪತ್ರೆಗೆ ಹೋಗಬೇಕಾಗಿತ್ತು. ಪಂಜಕ್ಕೆ ಏನಿಲ್ಲವೆಂದರೂ 9 ಕಿಲೋ ಮೀಟರ್ ದೂರವಿದೆ. ಅಷ್ಟೂ ದೂರಾ ನಡೆದೇ ಹೋಗಲೇಬೇಕು.ಸರಿ .. ಒಬ್ಬನೇ ಅಷ್ಟೂ ದೂರ ಹೋಗುವುದಕ್ಕೆ ಒಬ್ಬ ಸಾತ್ ಬೇಕು ಅಂತ ಅನ್ನಿಸಿತು.ಅದಕ್ಕಾಗಿ ತಮ್ಮ ಗಂಗ ಭಟ್ಟರನ್ನು ಕರೆದುಕೊಂಡು ರಾತ್ರಿಯೇ ಮನೆಯಿಂದ ಹೆಜ್ಜೆ ಹಾಕಿದರು.ಕೈಯಲ್ಲಿ ಬ್ಯಾಟರಿಯ ಟಾರ್ಚ್ ಹಿಡಿದಿಕೊಂಡು ಹೆಜ್ಜೆ ಹಾಕುತ್ತಾ ಕಮಿಲ ಕಳೆದು ಬಳ್ಪ ಕಾಡು ಆರಂಭವಾಯಿತು.ಬಿಲ್ಲಮರದ ಚಡವು ಕಳೆದು ಮುಂದೆ ನಡೆದುಕೊಂಡು ಇಬ್ಬರು ಹೋಗುತ್ತಿದ್ದರು.ದೂರದಲ್ಲಿ ಅದೇನೋ ಓಡಾಡುತ್ತಿರುವುದು ಕಂಡಿತು. ಅದೇ ಕೆಂಪುಸಂಕದ ಬಳಿ . . . ಇಬ್ಬರಿಗೂ ಅದೇನೋ ಕಾಣುತ್ತಿದೆ. ಕೈಯಲಿದ್ದ ಟಾರ್ಚ್‌ನ ಬೆಳಕು ದೂರಕ್ಕೆ ಬಿತ್ತು. . ಮತ್ತೆ ಕಾಲ ಕೆಳಗೆ ಬೆಳಕು ಚೆಲ್ಲಿತು . . ಆದ್ರೆ ಇಬ್ಬರೂ ಆ ಬಗ್ಗೆ ಮಾತನಾಡಿಕೊಳ್ಳಲಿಲ್ಲ. ಸ್ವಲ್ಪ ದೂರ ನಡೆದಾಗ ಮತ್ತೆ ಅದೇ ಯಾವುದೋ ಒಂದು ಆಕೃತಿ ಕಂಡಂತಾಯಿತು. ಜೊತೆಗೆ ಸದ್ದೂ ಕೇಳಿತು.ಆಗ ಇಬ್ಬರೂ ಅದೇನೋ ಗೊಣಗಿಕೊಂಡರು.ಎದೆಯೊಳಗೆ ಅವಲಕ್ಕಿ ಕುಟ್ಟಲಾರಂಭಿಸಿತು. ಹೋಗದೆ ವಿಧಿಯಿಲ್ಲ. . ಇತ್ತ ಹೆಜ್ಜೆಯೂ ನಿಧಾನವಾಗುತ್ತಿದೆ.ಒಬ್ಬನ ಹೆಜ್ಜೆ ಹಿಂದೆ ಸರಿಯುತ್ತಿದ್ದರೂ 4 ಹೆಜ್ಜೆಗಳೂ ಕ್ಷಣಾರ್ಧದಲ್ಲಿ ಕಮಿಲಕ್ಕೆ ತಲಪುತ್ತಿತ್ತು.ಆದರೂ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಕೆಂಪುಸಂಕ ಹತ್ತಿರಕ್ಕೆ ಬಂತು . .. ಇಬ್ಬರಿಗೂ ಎದೆಯೊಳಗಡೆ ಢವ . .ಢವ .. ಇದ್ದಕ್ಕಿದ್ದಂತೆ ಕಪ್ಪುನಾಯೊಂದು ಸಂಕದ ಬಳಿಯಿಂದ ರೋಯ್ ಎಂದು ಓಡಿತು . . ಒಮ್ಮೆ ಎದೆ ಧಸಕ್ಕ ಎಂದರೂ ಅದು ನಾಯಿ . .. ಎಂದು ಇಬ್ಬರೂ ಸುಮ್ಮನಾಗಿ ಕೆಂಪುಸಂಕ ಕಳೆಯಿತು . . ವೇಗವಾಗಿ ಹೆಜ್ಜೆ ಪಂಜದ ಕಡೆಗೆ ಹೋಯಿತು.ಬೆಳಗಿನ ಜಾವ ಪಂಜದ ಡಾಕ್ಟರ ಜೀಪಲ್ಲಿ ಮನೆಗೂ ಬಂದರು.

* * * * * * * * * * * * * * * * * * * * * * * * * * * * * *

ಸಂಶಯ ಶುರುವಗಿದ್ದೇ ಮತ್ತೆ. ಅಲ್ಲಿ ಕಂಡ ಆಕೃತಿ ಯಾವುದು . .?. ಅದುವರೆಗೂ
ಅಲ್ಲೆಲ್ಲೂ ಕಾಣದ ನಾಯಿ ರೋಯ್ ಎಂದು ಸಂಕದ ಬಳಿಯಿಂದ ಓಡಿದ್ದು ಹೇಗೆ..?.ಅಲ್ಲಿ ಕೇಳಿದ ಸದ್ದಾದರೂ ಯಾವುದು...? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಲಾರಂಭಿಸಿತು.ಉತ್ತರ ಮಾತ್ರಾ ಸಿಕ್ಕಿರಲಿಲ್ಲ.ಇದು ಇಡೀ ಕಮಿಲಕ್ಕೆ ಒಂದು ವಾರಕ್ಕೆ ಸುದ್ದಿಯ ಆಹಾರವಾಯಿತು.ಇಷ್ಟಕ್ಕೇ ಆದ್ರೆ ಮುಗೀತಲ್ಲಾ.. ಇನ್ನೂ ಇಲ್ಲಿ ಇಂತಹದ್ದೇ ಘಟನೆ ಮತ್ತೆ ಮರುಕಳಿಸಿತು. . ಅದು ಇನ್ನಷ್ಟು ಭಯಾನಕ . . .

ಕಾಮೆಂಟ್‌ಗಳಿಲ್ಲ: