15 ಆಗಸ್ಟ್ 2009
ಹಳ್ಳಿಯಿಂದ ರಾಜಧಾನಿವರೆಗೆ ಗಿಡ ಬೆಳೆಸುವ ರಾಷ್ಟ್ರೀಯ ಹಬ್ಬ. . . .
ಸ್ವಾತಂತ್ರ್ಯದ ದಿನ ಎಲ್ಲೆಡೆ ಧ್ವಜಾರೋಹಣ ... ಸಿಹಿ ಹಂಚುವುದು ..ಒಂದಷ್ಟು ಭಾಷಣ... ಕೊನೆಗೆ ಜನಗಣ ಮನ ... ವಂದನಾರ್ಪಣೆ.... ಡಿಸ್‌ಪಸ್... ಇದಿಷ್ಟು ದಿನದ ಕಾರ್ಯಕ್ರಮ.ಇಂದಲ್ಲ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಸಂಗತಿ.ಅದರ ಹೊರತಾಗಿ ಏನೋ ಯಾವುದೂ ಆಗುವುದೂ ಇಲ್ಲ. ಆದರೆ ಇಲ್ಲೊಂದು ಶಾಲೆಯಿದೆ ಇದು ಮಾತ್ರಾ ಇದಕ್ಕಿಂತ ಭಿನ್ನವಾಗಿ ಯೋಚಿಸಿದೆ.ರಾಷ್ಟ್ರೀಯ ಹಬ್ಬವೆಂದರೆ ಅದು ಸಿಹಿ ಹಂಚುವುದಕ್ಕೆ ಮಾತ್ರಾ ಸೀಮಿತವಲ್ಲ. ಅದರಾಚೆಗೂ ಆಲೋಚಿಸಿದೆ ಮತ್ತು ಅನುಷ್ಠಾನಕ್ಕೆ ಕೂಡ ತಂದಿದೆ.ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿದೆ.ರಾಷ್ಟ್ರೀಯ ಹಬ್ಬದಂದು ಇಡೀ ಊರನ್ನೇ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾಗಿದೆ ಮಾತ್ರವಲ್ಲ ರಾಜಧಾನಿಯವರೆಗೆ ಗಿಡ ಬೆಳೆಸಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ. ಹಾಗೆಂದ ಕೂಡಲೇ ಇದು ಖಾಸಗೀ ಶಾಲೆಯಲ್ಲ. 1 ನೇ ತರಗತಿಯಿಂದ 1o ನೇ ತರಗತಿಯವರೆಗೆ ಕ್ಲಾಸ್‌ಗಳಿರುವ ಕೊಠಡಿಗಳು ಸರಿಯಾಗಿಲ್ಲದ ಸರಕಾರಿ ಶಾಲೆ. ಈ ಶಾಲೆಯ ಹೆಸರು “ಸೂರ್ಯ”. ನಿಜಕ್ಕೂ ಇಲ್ಲಿ ಹೊಸ ಚಿಂತನೆಯ “ಸೂರ್ಯ” ಉದಯಿಸಿದ್ದಾನೆ. ಆದರೆ ಅದರ ಬೆಳಕು ಇನ್ನಷ್ಟೇ ಹರಿಯಬೇಕಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚಿಕ್ಕ ಹಳ್ಳಿ ಸೂರ್ಯ. ಊರು ಚಿಕ್ಕದಾಧರೂ ಸೂರ್ಯನಷ್ಟೇ ಪ್ರಖರವಾದ ಬೆಳಕು ಚೆಲ್ಲಬಹುದಾದ ಸಂಗತಿ ಇಲ್ಲಿದೆ.ಇಲ್ಲಿನ ಸರಕಾರಿ ಶಾಲೆಯೊಂದು ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಸೂರ್ಯದ ಈ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬದಂದು ಶಾಲಾ ಮಕ್ಕಳು ಊರ ತುಂಬೆಲ್ಲ ತುಂಬಿಕೊಂಡಿರುವ ಕಸಗಳನ್ನು , ಪ್ಲಾಸ್ಟಿಕ್‌ಗಳನ್ನು ಹೆಕ್ಕುತ್ತಾರೆ ಮತ್ತು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ.ಮಾತ್ರವಲ್ಲ ಊರ ಜನ ಸಂಗ್ರಹಿಸಿಡುವ ಪ್ಲಾಸ್ಟಿಕ್‌ಗಳನ್ನು ವಿದ್ಯಾರ್ಥಿಗಳು ಹೆಕ್ಕಿ ತರುತ್ತಾರೆ.ಊರ ಜನ ಕೂಡಾ ಶಾಲೆಯನ್ನು ಪ್ರೀತಿಯಿಂದ ಕಾಣುತ್ತಾರೆ.ಅದಕ್ಕಾಗಿ ಶಾಲೆಯ ಎದುರೇ “ ಇದು ನಮ್ಮ ಶಾಲೆ, ನಮ್ಮೂರ ಸೂರ್ಯ ಶಾಲೆ” ಎಂದೇ ಸ್ವಾಗತಿಸಲಾಗುತ್ತದೆ. ಹಾಗಾಗಿ ಮಕ್ಕಳಿಗೂ ಊರ ಜನರಿಗೂ ನಂಟು ಬೆಳೆದಿದೆ.ಊರ ಜನ ಕೂಡಾ ಈ ಪ್ಲಾಸ್ಟಿಕ್ ಅಭಿಯಾನದಲ್ಲಿ ಸಹಕರಿಸುತ್ತಾರೆ. ಮಕ್ಕಳು ಹೀಗೆ ಊರಿನಿಂದ ತಂದ ಪ್ಲಾಸ್ಟಿಕ್‌ಗಳನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ದಾಖಲಿಸಲಾಗುತ್ತದೆ. ಆ ಬಳಿಕ ಅತೀ ಹೆಚ್ಚು ಪ್ಲಾಸ್ಟಿಕ್ ಹೆಕ್ಕಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುವ ಮೂಲಕ ಮಕ್ಕಳ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತದೆ.ಶಾಲಾ ಅಭಿವೃದ್ದಿ ಸಮಿತಿಯು ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ಮಂಗಳೂರಿನ ತ್ಯಾಜ್ಯ ಘಟಕ್ಕೆ ನೀಡಿ ಮರು ಬಳಕೆಗೆ ಉಪಯೋಗಿಸಲಾಗುತ್ತದೆ. ಹೀಗಾಗಿ ಇಂದು ಸೂರ್ಯ ಎನ್ನುವ ಪುಟ್ಟ ಊರು ಸ್ವಚ್ಚವಾಗಿ ಕಂಗೊಳಿಸುತ್ತಿದೆ. ಸರಕಾರವು ನಿರ್ಮಲ ನಗರ ಯೋಜನೆ ಅನುಷ್ಠಾನಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸಿದರೆ ಇಲ್ಲಿ ಖರ್ಚಿಲ್ಲದೆ ಹಮ್ಮಿಕೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ಸಿನ ಹಾದಿಯಲ್ಲಿದೆ.
ಇದೇ ಸಂದರ್ಭದಲ್ಲಿ ಇನ್ನೊಂದು ಯೋಜನೆಯನ್ನು ಇದೇ ಶಾಲೆ ಹಮ್ಮಿಕೊಂಡಿದೆ.ಇದು ಕೂಡಾ ಅದೇ ರಾಷ್ಟ್ರೀಯ ಹಬ್ಬದಂದು ಗಿಡ ನೆಡುವ ಯೋಜನೆ. ಅಂದರೆ ಕಾಟಾಚಾರಕ್ಕಾಗಿ ಇಲ್ಲಿ ಗಿಡ ನೆಡುವುದಲ್ಲ. ಪ್ರತೀ ತರಗತಿಯ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡುತ್ತಾರೆ. ಅಂದರೆ ಒಂದು ರಾಷ್ಟ್ರೀಯ ಹಬ್ಬಕ್ಕೆ ೧೦ ಗಿಡ ನೆಡುತ್ತಾರೆ.ವರ್ಷದಲ್ಲಿ ಕನಿಷ್ಠ ೪ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೆ ನೆಡುವ ಗಿಡ ರಾಜಧಾನಿಯವರೆಗೂ ತಲುಪಬೇಕು ಎನ್ನುವುದು ಈ ಶಾಲೆಯ ಸಂಕಲ್ಪ. ಅಂದರೆ ಇವರ ಯೋಜನೆಗೆ ಉಳಿದ ಶಾಲೆಗಳು, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎನ್ನುವುದು ಶಾಲಾಭಿವೃದ್ದಿ ಸಮಿತಿಯ ಆಶಯ. ಹೀಗೆ ನೆಡುವ ಗಿಡವನ್ನು ಶಾಲಾ ಮಕ್ಕಳೇ ಆರೈಕೆ ಮಾಡುತ್ತಾರೆ. ಹಾಗೆಂದು ಇಲ್ಲಿ ಉಪಯೋಗಕ್ಕೆ ಬಾರದ ಗಿಡ ನೆಡಲಾಗುವುದಿಲ್ಲ. ಯಾವುದಾದರೂ ಹಣ್ಣಿನ ಗಿಡವನ್ನು ನೆಡಲಾಗುತ್ತದೆ. ಇದರಿಂದ ಮಕ್ಕಳಿಗೂ ಮುಂದೆ ಬಾಯಿ ಸಿಹಿ ಮಾಡಬಹುದಾಗಿದೆ ಎನ್ನವುದು ಯೋಜನೆಯ ಉದ್ದೇಶ.
ಇಲ್ಲಿ ಶಾಲಾ ಪಾಠದೊಂದಿಗೆ ಬಿಡುವಿನ ವೇಳೆಯಲ್ಲಿ ಪಾಠೇತರ ಚಟುವಟಿಕೆ , ಪರಿಸರದ ಬಗ್ಗೆಯೂ ಮಕ್ಕಳಿಗೆ ಹೇಳಲಾಗುತ್ತದೆ. ಇನ್ನು ರಾಷ್ಟ್ರೀಯ ಹಬ್ಬದಂದು ಪರಿಸರ , ವಿಜ್ಞಾನ ಇನ್ನಿತರ ವಿಚಾರಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಇನ್ನಷ್ಟು ಪರಿಸರ ಜಾಗೃತಿ ಮತ್ತು ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಾಲಾ ಮುಖ್ಯೋಪಾಧ್ಯಾಯ.
ಶಾಲೆಯ ಇಂತಹ ಚಟುವಟಿಕೆಯಿಂದಾಗಿ ವಿದ್ಯಾರ್ಥಿಗಳು ಈಗ ಪರಿಸರದ ಜಾಗೃತಿ ಬಗ್ಗೆ ಹಾಗೂ ಪರಿಸರ ಉಳಿಸುವ ಬಗ್ಗೆ ಹಿರಿಯರನ್ನೂ ನಾಚಿಸುವ ಹಾಗೆ ಮಾತನಾಡಬಲ್ಲರು. ಒಂದೇ ಉಸಿರಿನಲ್ಲಿ ನಮಗೆ ಇಂತಹ ಯೋಜನೆಗಳು ಬೇಕು ಎನ್ನುತ್ತಾರೆ. ಈ ಶಾಲೆಯಿಂದ ತುಂಬಾ ಕಲಿತಿದ್ದೇವೆ ಎನ್ನುತ್ತಾರೆ ಮಕ್ಕಳು.
ಒಟ್ಟಿನಲ್ಲಿ ಇಂದು ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿ ಎಳವೆಯಿಂದಲೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಸೂರ್ಯದ ಈ ಸರಕಾರಿ ಶಾಲೆಯಲ್ಲಿ ಸ್ಥಳೀಯರ ಮುಂದಾಳುತ್ವದಲ್ಲಿ ಆಯೋಜಿಸುವ ಇಂತಹ ಕಾರ್ಯಕ್ರಮಗಳೂ ಇಡೀ ರಾಜ್ಯಕ್ಕೆ ವ್ಯಾಪಿಸಬೇಕಾದ ಅಗತ್ಯವಿದೆ. ಆ ಮೂಲಕ ರಾಷ್ಟ್ರೀಯ ಹಬ್ಬಗಳು ಸಾರ್ಥಕತೆಯನ್ನು ಪಡೆಯಬೇಕಾಗಿದೆ. ಸೂರ್ಯದಂತಹ ಶಾಲೆಯಲ್ಲಿ ಉದಯಗೊಂಡ ಇಂತಹ ಯೋಜನೆಯ ಬೆಳಕು ಇಡೀ ರಾಜ್ಯಕ್ಕೆ ವ್ಯಾಪಿಸಲು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಗುರುತಿಸಬೇಕಾದ ಅಗತ್ಯವೂ ಇದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ತುಂಬ ಸಂತೋಷ ಆಯಿತು ಈ ಸುದ್ದಿ ಓದಿ
ಕಾಮೆಂಟ್ ಪೋಸ್ಟ್ ಮಾಡಿ