23 ಆಗಸ್ಟ್ 2009
ಗುಹೆಯೊಳಗೆ ಜಲಪಾತ .......
ಪ್ರಕೃತಿಯೊಳಗಿನ ವೈಚಿತ್ರ್ಯವನ್ನು ಬಲ್ಲವರು ಯಾರೂ ಇಲ್ಲ. ಅದರೊಳಗೆ ಏನೆಲ್ಲಾ ಹುದುಗಿರಬಹುದು ಎಂಬುದು ಕಲ್ಪನೆಗೂ ನಿಲುಕುವುದಿಲ್ಲ. ಅಂತಹ ವೈಚಿತ್ರ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಅನಂತಾಡಿಯಲ್ಲಿದೆ . ಇಲ್ಲಿನ ಗುಹೆಯೊಳಗೆ ಜಲಪಾತವೊಂದಿದೆ. ಇದನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಈ ಗುಹೆಯೊಳಗೆ ಭಕ್ತರು ತೀರ್ಥ ಸ್ನಾನ ಮಾಡಿ ಪಾವನರಾಗುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ಅನಂತಾಡಿಯ ಸನಿಹದಲ್ಲಿ ಸುಳ್ಳಮಲೆ ಎಂಬ ಪ್ರದೇಶವಿದೆ. ದಟ್ಟ ಕಾನನದ ನಡುವೆ ಇರುವ ಈ ಪ್ರದೇಶವು ಈಗ ಜನರ ಆಕರ್ಷಣೆಯ ಮತ್ತು ಪೂಜ್ಯ ಭಾವನೆಯ ಪ್ರದೇಶವಾಗಿದೆ. ಇಲ್ಲಿರುವ ಗುಹೆಯೇ ಈ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಮನುಷ್ಯ ಯಾವಾಗಲೂ ನಂಬಿಕೆ, ವಿಶ್ವಾಸದ ಮೇಲೆಯೇ ಬದುಕುತ್ತಾನೆ.ಹಾಗಾಗಿ ಅಲ್ಲಿ ಪರಿಶುದ್ದತೆ ಇರುತ್ತದೆ.ಕೆಲವೊಮ್ಮೆ ಆ ನಂಬಿಕೆಗಳು ಹುಸಿಯಾಗುವುದೂ ಇದೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಅಂತಹ ನಂಬಿಕೆಗಳು ಇಲ್ಲಿ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಬೆಳೆದಿದೆ. ಅದು ಇಲ್ಲಿ ಗುಹೆಯ ರೂಪದಲ್ಲಿ ಕಾಣಿಸುತ್ತದೆ. ಸುಳ್ಳ ಮಲೆಯ ಈ ಪ್ರದೇಶದಲ್ಲಿರುವ ಗುಹೆಯ ಒಳಗಡೆ ಕಿರು ಜಲಪಾತವೊಂದು ಧಮುಕುತ್ತದೆ. ಈ ಜಲಪಾತದಲ್ಲಿ ಸ್ನಾನ ಮಾಡಿದರೆ ಎಲ್ಲಾ ವ್ಯಾಧಿಗಳು ನಿವಾರಣೆಯಾಗಿ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದಲ್ಲಿ ಕೇವಲ 4 ದಿನ ಮಾತ್ರಾ ಇಲ್ಲಿ ತೀರ್ಥ ಸ್ನಾನ ಮಾಡಬಹುದಾಗಿದೆ. ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವಿರುವುದಿಲ್ಲ. ಶ್ರಾವಣ ಮಾಸದ ಅಮವಾಸ್ಯೆಯಿಂದ ಆರಂಭಗೊಂಡು ಗಣೇಶ ಚೌತಿಯವರೆಗೆ ಇಲ್ಲಿ ಗುಹೆಯೊಳಗಡೆ ಪ್ರವೇಶವಿರುತ್ತದೆ. ದಕ್ಷಿಣ ಭಾರತದ ಏಕೈಕ ಮತ್ತು ಅತ್ಯಂತ ಹೆಸರುವಾಸಿಯಾದ ಈ ಪ್ರದೇಶದಲ್ಲಿ ಕಾರಣಿಕ ಪುರುಷರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ.ಅನೇಕ ಪವಾಡಗಳು ಇಲ್ಲಿ ನಡೆದಿದೆ ಎಂದೂ ಹೇಳಲಾಗುತ್ತದೆ. ಶ್ರಾವಣ ಮಾಸದ ಅಮವಾಸ್ಯೆಯಂದು ಇಲ್ಲಿ ಸ್ಥಳಿಯ ಮನೆತನದವರು ಬಂದು ಪೂಜೆ ಮಾಡುತ್ತಾರೆ. ಮಾತ್ರವಲ್ಲ ಅಂದು ಇನ್ನೊಂದು ಮನೆತನದವರು 16 ಗಂಟಿನ ಬಿದಿರಿನ ಏಣಿಯನ್ನೂ ಕೂಡಾ ತಯಾರಿಸುತ್ತಾರೆ. ಇದರ ಮೂಲಕ ಗುಹೆಯೊಳಗಡೆ ಇಳಿಬೇಕಾಗುತ್ತದೆ.ಈ ಗುಹೆಯೊಳಗಡೆ “ಗೋವಿಂದಾ...” ಎನ್ನುವ ಘೋಷಣೆಯೊಂದಿಗೆ ಇಳಿಯುತ್ತಾರೆ.
ಈ ಗುಹೆಯೊಳಗಡೆ ತೀರಾ ಕತ್ತಲು ಆವರಿಸಿರುತ್ತದೆ. ಕೃತಕವಾಗಿ ವ್ಯವಸ್ಥೆ ಮಾಡಿಕೊಂಡ ಬೆಳಕೇ ದಾರಿ ದೀಪವಾಗುತ್ತದೆ. ಗುಹೆಯುದ್ದಕ್ಕೂ ನೀರಿನ ಹನಿಗಳು ಮುತ್ತಿಕ್ಕುವ ಇಲ್ಲಿ ಬೆನ್ನು ಬಗ್ಗಿಸಿಕೊಂಡೇ ಸಾಗಬೇಕು. ಅರ್ಧ ದಾರಿಯಲ್ಲಿ 16 ಗಂಟಿನ ಬಿದಿರಿನ ಏಣಿ ಸಿಗುತ್ತದೆ ಅದರಲ್ಲಿ ಇಳಿದು ಕೆಳಗಡೆ ಇಳಿದ ಬಳಿಕ ಅತ್ಯಂತ ಕಿರು ದಾರಿಯಲ್ಲಿ ಅಂದರೆ ಒಬ್ಬ ಮಾತ್ರಾ ಹೋಗಬಹುದಾದ ಹಾದಿಯಲ್ಲಿ ಒಳಸಾಗಿದಾಗ ಅಲ್ಲಿ ಜಲಪಾತ ಬೀಳುತ್ತಿರುತ್ತದೆ. ಅದರೊಳಗಡೆ ಸ್ನಾನ ಮಾಡಿದಾಗ ಪಾವನರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿದೆಡೆ ತೀರ್ಥ ಸ್ನಾನದ ಕ್ಷೇತ್ರಗಳಿವೆ. ಆದರೆ ಈ ಪ್ರದೇಶವು ಅದೆಲ್ಲಕ್ಕ್ಕಿಂತ ಭಿನ್ನವಾಗಿದೆ ಪ್ರಕೃತಿಯ ನಡುವೆ ಇರುವ ಈ ಪ್ರದೇಶಕ್ಕೆ ದುರ್ಗಮವಾದ ಹಾದಿಯಿದೆ. ಅದೆಲ್ಲವನ್ನೂ ಕ್ರಮಿಸಿ ಮುಂದೆ ಸಾಗಿದಾಗ ಗುಹೆಯಿರುವ ಪ್ರದೇಶ ಸಿಗುತದೆ. ಇಲ್ಲಿಗೆ ಮಹಿಳೆಯರು - ಪುರುಷರೆನ್ನದೆ ಅನೇಕರು ಈ ೪ ದಿನಗಳ ಕಾಲ ಆಗಮಿಸಿ ಗುಹೆಯೊಳಗಡೆ ಸಾಗಿ ಸ್ನಾನವನ್ನು ಮಾಡುತ್ತಾರೆ. ಈ ತೀರ್ಥವು ಉತ್ತರದ ಕಾಶಿಯಿಂದ ಇಳಿದು ಬರುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.ಗುಹೆಯ ಬಳಿಯಿರುವ ಬಿಳಿ ಬಣ್ಣದ ಹೂವುಗಳು ಕೂಡಾ ಆಕರ್ಷಕವಾಗಿ ಕಾಣುತ್ತದೆ.ಈ ಪ್ರದೇಶವು ಗುಡ್ಡ ಪ್ರದೆಶದಲ್ಲಿದೆ. ಆದರೆ ಇಲ್ಲಿ ಗುಹೆಯೊಳಗೆ ಇರುವ ಜಲಪಾತ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಜಲಪಾತದ ನೀರು ಈ ಪ್ರದೆಶದಲ್ಲಿ ಎಲ್ಲೂ ಹರಿಯದೆ ಸುಮಾರು 3ಕಿಲೋ ಮೀಟರ್ ದೂರದಲ್ಲಿ ಮೇಲೇಳುತ್ತದೆ. ಈ ನಡುವೆ ಇಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರು ಗೋವಿಂದಾ.. ಎನ್ನುವ ಘೋಷಣೆ ಜೋರಾಗಿ ಹಾಕಿದರೆ ನೀರು ಕೂಡಾ ಹೆಚ್ಚಾಗಿ ಬರುತ್ತದೆ ಎನ್ನುತ್ತಾರೆ ಮಾತ್ರವಲ್ಲ ಇಲ್ಲಿ ಸ್ನಾನದ ವೇಳೆ ಭಕ್ತರು ಬಿಡುವ ವೀಳ್ಯದೆಲೆ ಹಾಗೂ ಅಡಕೆಯನ್ನು ಜಲಪಾತದ ಬಳಿ ಬಿಟ್ಟು ಬರುತ್ತಾರೆ. ಈ ವಸ್ತುಗಳೂ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ನೀರಿನಿಂದ ಮೇಲೆ ಬರುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು. ಹೀಗೆ ತೀರ್ಥ ಸ್ನಾನ ಮಾಡಿದ ಬಳಿಕ ಇಲ್ಲಿರುವ ದೇವರ ಕಲ್ಲುಗಳಿಗೆ ಪೂಜೆಯನ್ನು , ಪ್ರಾರ್ಥನೆಯನ್ನು ಮಾಡುತ್ತಾರೆ.
ಮೊನ್ನೆ ನಾವು ಕೂಡಾ ಈ ಪ್ರದೇಶಕ್ಕೆ ಹೋಗಿದ್ದೆವು. ಅತ್ಯಂತ ಉತ್ಸಾಹದಲ್ಲಿ ಹೋಗಿದ್ದೆವು.ಅಲ್ಲಿ ತಲಪಿದ ಬಳಿಕ ಒಂದಷ್ಟು ಜನರ ತಂಡ ಆ ಗುಹೆಯೊಳಗಡೆ ಹೋಗಿ ಬಂದರ. ನಂತರ ನಮ್ಮನ್ನೂ ಅಲ್ಲಿಯ ಜನ ಒಳಹೋಗಲು ಒತ್ತಾಯಿಸಿದರ.ಹಾಗೆ ನಾವು ಸ್ವಲ್ಪ ಆತಂಕದ ನಡುವೆಯೇ... ಮುಂದಡಿ ಇಟ್ಟೆವು... ಮುಂದೆ ಸಾಗಿ... ಏಣಿ ಇಳಿದು ಕೊಂಚ ಸಾಗಿದಾಗ ಕಡಿದಾದ ದಾರಿ... ಅಲ್ಲೂ ಸಾಗಿ ಒಳಹೋಗಾದ ಜಲಪಾತ ಕಂಡಿತು... ಅದರೊಳಗೆ ಆಮ್ಲಜನಕದ ಕೊರತೆ ಆಗ ಕಾಣುತ್ತಿತ್ತು... ಆದರೂ ನಮ್ಮೊಂದಿಗೆ ಇದ್ದವರು ಮಾತ್ರಾ ಬಿಡಲಿಲ್ಲ.. ನಾವೂ ತೀರ್ಥ ಸ್ನಾನ ಮಾಡುವಂತೆ ಮಾಡಿದರು... ಹಾಗೆ ಆಮ್ಲಜನಕದ ಕೊರತೆಯ ಪರಿಣಾಮ ..ನಮ್ಮನ್ನೂ ಗೋವಿಂದಾ...ಗೋವಿಂದಾ ಎನ್ನುವಂತೆ ಮಾಡಿತು... ಬೇಗ ಬೇಗ ಗೋವಿಂದ ಹಾಕಿ ಹೊರಬಂದಾಗ ಅಬ್ಬಾ..ಗೋವಿಂದಾ ಎಂದೆನಿಸಿತು... ಅದುವರೆಗೆ ನೆನಪಾಗದ ಗೋವಿಂದರುಗಳೆಲ್ಲಾ ಆಗ ನೆನಪಾದ್ದು ನಂತರ ನಮಗೆ ನಾವೇ ಹೇಳಿಕೊಂಡು ನಗುವಂತೆ ಮಾಡಿತು. ಆದರೆ ಆ ಕಾರ್ಯಕ್ರಮ ಮಾತ್ರಾ ಖುಷಿ ನೀಡಿತ್ತು. ಹೊಸತೊಂದು ಅನುಭವ ನೀಡಿತ್ತು. ಪ್ರಕೃತಿಯ ಅಚ್ಚರಿಯನ್ನು ಕಾಣುವಂತೆ ಮಾಡಿತ್ತು,......
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
4 ಕಾಮೆಂಟ್‌ಗಳು:
ಅದೇ ಗ್ರಾಮದ ಇನ್ನೊಂದು ಮೂಲೆಯಲ್ಲಿರುವ ನನಗೆ ನಿಮ್ಮ ಗೋವಿಂದಾ...ಗೋವಿಂದಾ ಕೇಳಲೇ ಇಲ್ಲ. ವಿವರಣೆ ಚೆನ್ನಾಗಿತ್ತು.
ಒಳ್ಳೆಯ ಮಾಹಿತಿ....ಈ ಗುಹೆ ಬಗ್ಗೆ ಕೇಳಿದ್ದೆ, ಆದ್ರೆ ಇಷ್ಟು ಗೊತ್ತಿರಲಿಲ್ಲ...
ಧನ್ಯವಾದಗಳು ವೇಣು ಹಾಗೂ ಗೋವಿಂದ ಭಟ್ಟರಿಗೆ
ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಮಹೇಶ್
ಕಾಮೆಂಟ್ ಪೋಸ್ಟ್ ಮಾಡಿ