06 ಜುಲೈ 2009
ಇಲ್ಲಿ ಡಿಗ್ರಿ ಓದಿದವರು ಇಬ್ಬರೇ....!!
ಒಂದು ಕಡೆ ನಾಗಾಲೋಟದಿಂದ ಓಡುವ ನಗರಗಳು.ಇನ್ನೊಂದು ಕಡೆ ಅಭಿವೃದ್ದಿಯ ಹೆಸರಿನಲ್ಲಿ ಬದಲಾವಣೆಯನ್ನು ಕಾಣುವ ಸಮಾಜ.ಇದೆಲ್ಲದರ ಭ್ರಮೆಯಲ್ಲಿ ಇಡೀ ಜಗತ್ತು ಬದಲಾಗಿದೆ ಎನ್ನುವ ತಲೆಭಾರ... ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ.?.
ಅದರಾಚೆಗೆ ಬಂದು ನೋಡಿದಾಗಲೂ ಕಾಣುವುದು ಅದೇ ಬದಲಾವಣೆ..ಅದೇ ಅಭಿವೃದ್ದಿಯ ಮಂತ್ರ.
ಇತ್ತೀಚೆಗೆ ಹಿರಿಯ ಅಧಿಕಾರಿಗಳೊಬ್ಬರ ಜೊತೆ ಮಾತನಾಡುತ್ತಿದ್ದಾಗ ಇದೇ ಅಭಿವೃದ್ದಿಯ ಅದರಲ್ಲೂ ನಗರದ ಸುಂದರ ಕಲ್ಪನೆ ಮತ್ತು ಅದರ ಬದಲಾವಣೆಯ ಬಗ್ಗೆ ಕೇಳುತ್ತಿದ್ದಾಗ ಅವರು ಇನ್ನೊಂದು ಮಗ್ಗುಲಲ್ಲಿ ಅದನ್ನು ಯೋಚಿಸುವ ದಾರಿ ತೋರಿಸಿದರು.ನಂತರ ಅವರು ವಿವರಿಸಿದರು ನಗರವೊಂದರ ರಸ್ತೆ ಅಗಲೀಕರಣ ಉದಾಹರಣೆಯನ್ನು ಕೊಡುತ್ತಾ ನಗರದ ರಸ್ತೆ ಅಗಲೀಕರಣದಿಂದಾಗಿ ಸಲ್ಲಿರುವ ಹತ್ತಾರು ಗೂಡಂಗಡಿಗಳು ಮಾಯವಾಗುತ್ತದೆ. ರಸ್ತೆ ಅಗಲವಾತ್ತದೆ. ಪಾರ್ಕಿಂಗ್‌ಗೆ ಜಾಗವಾಗುತ್ತದೆ. ವಾಹನಗಳ ಸುಲಭ ಸಂಚಾರವಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರಿಗೆ, ಹಳ್ಳಿ ಜನರಿಗೆ ಏನು ಪ್ರಯೋಜನ..?. ಅಲ್ಲಿ ಮತ್ತೆ ದುಪ್ಪಟ್ಟು ವ್ಯಾಪಾರವಾಗುವುದು ಅದೇ ಶ್ರೀಮಂತ ವ್ಯಾಪಾರಿಗೆ. ಬಡ ಗೂಡಂಗಡಿ ವ್ಯಾಪಾರಿಗೆ ಏನು ಗತಿ..? ಹಾಗೆಂದು ರಸ್ತೆ ಅಗಲೀಕರಣವಾಗಲಿ, ನಗರ ಅಭಿವೃದ್ದಿ ಆಗಬಾರದು ಎನ್ನುವ ಧೋರಣೆ ಇದಲ್ಲ. ನಿಜಕ್ಕೂ ನಗರದ ಅಭಿವೃದ್ದಿ ಇಂದು ಅಗತ್ಯಕ್ಕಿಂತ ಹೆಚ್ಚಾಗಿ ನಡೆದರೆ ಅದೇ ಒಂದು ಹಳ್ಳಿಯ , ಒಂದು ಗ್ರಾಮದ ಅಭಿವೃದ್ದಿ ಅದೇ ವೇಗದಲ್ಲಿ ನಡೆಯುತ್ತಿಲ್ಲ. ಆದರೂ ನಾವು ಅದೇ ನಗರದ ಅಭಿವೃದ್ದಿ ನೋಡಿ ಭಾರತ ಅಭಿವೃದ್ದಿಯ ಪಥದಲ್ಲಿದೆ ಅಂತ ಕರೀತೇವೆ. ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ..?
ಅದಕ್ಕೆ ಒಂದು ಹಳ್ಳಿಯ ಕಡೆಗೆ ಹೋಗ ಬೇಕು. ಆಗ ಅಲ್ಲಿನ ಸತ್ಯ ದರ್ಶನವಾಗುತ್ತದೆ. ಇಂದಿಗೂ ಅದೆಷ್ಟೂ ಹಳ್ಳಿಗಳು ಬೆಳಕನ್ನೇ ಕಂಡಿಲ್ಲ.ಅಂತಹ ಹಳ್ಳಿಯೊಂದರ ಕತೆ ಇಲ್ಲಿದೆ.
ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ.ಪುತ್ತೂರಿನಿಂದ ಸರಿಸುಮಾರು 60 ರಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಹಾಗೆ ನೋಡಿದರೆ ಈ ಗ್ರಾಮಗಳು ಸೌಲಭ್ಯಗಳಿಂದಲೂ ದೂರವೇ ಇದೆ. ಈ ಗ್ರಾಮದಲ್ಲಿನ ಬಾರ್ಯ, ಬೊಟ್ಟಡ್ಕ ಪ್ರದೇಶದಲ್ಲಿ 30 ಮನೆಗಳಿವೆ. ಇವರಿಗೆ ಅಭಿವೃದ್ದಿ ಎಂಬುದು ಮರೀಚಿಕಯೇ ಸರಿ.ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಈ ಭಾಗ ಇನ್ನೂ ಬೆಳಕು ಕಂಡಿಲ್ಲ. ಅದು ಮಾತ್ರವಲ್ಲ ವ್ಯವಸ್ಥಿತವದ ರಸ್ತೆ ಸಂಪರ್ಕ, ಸೇತುವೆಗಳೂ ಈ ಗ್ರಾಮಕ್ಕಿಲ್ಲ.ಇಲ್ಲಿನ ಜನರ ಬದುಕೇ ಒಂದು ಸರ್ಕಸ್.ಇವರು ಅರ್ಜೆಂಟಾಗಿ ಪೇಟೆಗೆ ಹೋಗಬೇಕು ಅಂದ್ರೆ ಇಲ್ಲಿನ ಜನ ಐದಾರು ಕಿಲೋಮೀಟರ್‌ಗಳಷ್ಟು ದೂರ ನಡೆದೇ ಸಾಗಬೇಕು. ಮೊಬೈಲ್ ಸಂಪರ್ಕವಂತೂ ಇಲ್ವೇ ಇಲ್ಲ.ದೂರವಾಣಿಯೂ ಇಲ್ಲಿಗೆ ದೂರವಾಗಿದೆ. ಅದು ಬಿಡಿ ಮಳೆಗಾಲವಂತೂ ಇವರ ಬದುಕು ದ್ವೀಪದಂತಾಗುತ್ತದೆ. ಬಾರ್ಯವನ್ನು ಸಂಪರ್ಕಿಸುವ ನಿಡ್ಯಮೇರು ಎಂಬ ಹೊಳೆ ತುಂಬಿ ಹರಿಯುವ ಕಾರಣದಿಂದ ಇರುವ ರಸ್ತೆ ಸಂಪರ್ಕವೇ ಕಡಿದುಹೋಗುತ್ತದೆ. ಆಗ ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುಸಂಕದಲ್ಲಿ “ಸರ್ಕಸ್” ಮಾಡಿ ಅನಿವಾರ್ಯವಾಗಿ ಸಾಗಬೇಕು. ಹೀಗಾಗಿ ಹೊರ ಜಗತ್ತಿನ ಸಂಪರ್ಕವೇ ಅವರಿಗಿಲ್ಲ.ಇನ್ನು ಜೀಪು ಹೊರತು ಪಡಿಸಿ ಬೇರಾವ ವಾಹನಗಳು ಇಲ್ಲಿ ಓಡಾಡಲ್ಲ. ಹಾಗಾಗಿ ಜೀಪಿನ ಹೊರತಾಗಿ ಬೇರೆ ವಾಹನದ ಪ್ರಯಾಣ ಇಲ್ಲಿ ಇವರಿಗೆ ಕನಸೇ ಸರಿ.ಅದು ಬಿಡಿ ನಗರದಲ್ಲಿರುವಂತೆ ಮನೆಗೆರಡರಂತೆ ಇಲ್ಲಿ ವಾಹನವೇ ಇಲ್ಲ.ಈ ಬಾಗದಲ್ಲಿ ಸ್ವಂತ ವಾಹನ ಇರುವವರೇ ಇಲ್ಲ. ಎಲ್ಲರಿಗೂ ಕಾಲುಗಳೇ ಆಧಾರ.ಅಲ್ಲಿಂದ ನಂತರ ಗ್ರಾಮಕ್ಕೆ ಬರುವ ಒಂದೆರಡು ಸರಕಾರಿ ಬಸ್ಸು....!!. ಇನ್ನು ಇಲ್ಲಿನ 30 ಮನೆಗಳಲ್ಲಿ ಪದವಿ ಶಿಕ್ಷಣ ಪಡೆದವರು ಕೇವಲ ಇಬ್ಬರು. .4ಮಂದಿ ಪಿಯುಸಿ ಶಿಕ್ಷಣ ಪಡೆದರೆ ಇನ್ನು ಬಹುತೇಕರು ಎಸ್.ಎಸ್.ಎಲ್.ಸಿಯಲ್ಲಿ ಶಾಲೆ ಬಿಡಬೇಕಾದ ಸಂದರ್ಭವೇ ಹೆಚ್ಚು.
ಬೌಗೋಳಿಕವಾಗಿ ನೋಡಿದರೆ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮವು ಒಟ್ಟು 17,118 ವಿಸ್ತೀರ್ಣವಿದೆ.ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶ. ಹಾಗಾಗಿ ಈ ಗ್ರಾಮ ವಿಸ್ತಾರವಾಗಿದ್ದರೂ ಗ್ರಾಮ ಪಂಚಾಯತ್‌ಗೆ ಆದಾಯ ಕಡಿಮೆಯೇ. ಹಾಗೆಂದು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಯನ್ನು ವಿವರಿಸಿದರೆ ಅರ್ಥವೂ ಆಗುತ್ತಿಲ್ಲ. ಇದುವರೆಗೆ ಒಬ್ಬ ಜನಪ್ರತಿನಿಧಿ ಮಾತ್ರಾ ಈ ಭಾಗಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದು ಬಿಟ್ಟರೆ ಬೇರಾವ ಜನನಾಯಕರೂ ಇತ್ತ ಬೇಟಿ ಕೊಟ್ಟಿಲ್ಲ. ಅಧಿಕಾರಿಗಳಂತೂ ತಲೆಹಾಕಿಲ್ಲ. ಅಭಿವೃದ್ದಿಯ ಕೆಲಸವೂ ಆಗಿಲ್ಲ. ಗ್ರಾಮ ಪಂಚಾಯತ್ ಕೂಡಾ ಇಲ್ಲಿನ ಅಭಿವೃದ್ದಿಯ ಬಗ್ಗೆ ಯೋಚಿಸುತ್ತದೆ ಆದರೆ ಶಕ್ತಿ ಇಲ್ಲದೆ ದಿಕ್ಕೆಟ್ಟು ಕೂತಿದೆ.
ಒಟ್ಟಿನಲ್ಲಿ ಹಳ್ಳಿಯೊಂದರ ಕತೆ ಹೀಗಿರುವಾಗ ಅಭಿವೃದ್ದಿಯ ಮಂತ್ರ ಪಠಿಸುವ ಜನನಾಯಕರಿಗೆ ಇದೆಲ್ಲವೂ ಅರ್ಥವಾಗುತ್ತಿಲ್ಲವೇ ಅಥವಾ ಅಭಿವೃದ್ದಿಯ ನಾಟಕವಾಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುತ್ತದೆ.ಗ್ರಾಮೀಣ ಭಾಗದ ಅದೆಷ್ಟೂ ಹಳ್ಳಿಗಳು ಇಂದು ಇದೇ ರೀತಿಯಾಗಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ.ಕೆಲವು ಕಡೆ ಸರಿಯಾದ ಬಸ್ಸುಗಳ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು ಸಂಜೆ ಮನೆಗೆ ತಲಪುವಾಗ ದೀಪ ಉರಿಸುವ ಹೊತ್ತಾಗಿರುತ್ತದೆ. ಮರಿದಿನ ಬೆಳಗ್ಗೆ ಮತ್ತೆ ದೀಪ ಆರುವ ಮುನ್ನವೇ ಮನೆಯಿಂದ ಹೊರಬೀಳಬೇಕು ಇಲ್ಲವಾದ್ರೆ ಶಿಕ್ಷಣವೂ ಇಲ್ಲದೆ ಕತ್ತಲಲ್ಲಿರಬೇಕಾಗುತ್ತದೆ. ಎಂತಹ ಅಜಗಜಾಂತರ ...!!. ಒಂದೆಡೆ ಮನೆಬಾಗಿಲಿಗೆ ಮಕ್ಕಳನ್ನು ತಂದು ಬಿಡುವ ಶಿಕ್ಷಣ ಇನ್ನೊಂದು ಕಡೆ ಶಾಲೆಯ ಬಾಗಿಲನ್ನು ಅರಸಿಕೊಂಡು ಹೋಗುವ ಶಿಕ್ಷಣ. ಇಂತಹ ಸಂದಿಗ್ದ ಪರಿಸ್ಥಿತಿ ಇಲ್ಲಿದೆ. ಆದರೂ ಭಾರತ ಶ್ರೀಮಂತ ದೇಶ. ಸುಖೀ ದೇಶ.ನೆಮ್ಮದಿ ಇಲ್ಲಿದೆ.ಏಕೆಂದರೆ ಇದ್ದುದರಲ್ಲೇ ಸಂತೋಷ ಪಡುವ ಸಮಾಜ ನಮ್ಮದು. ಇರುವ ಸಮಸ್ಯೆಯನ್ನು ಹಾಗೆಯೇ ಸ್ವೀಕರಿಸುವ ಗುಣ ನಮ್ಮದು. ಹಾಗಾಗಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಅದುವೇ ಒಂದು ಅಭ್ಯಾಸವಾಗಿಬಿಡುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
2 ಕಾಮೆಂಟ್‌ಗಳು:
ಹೌದು. ನಿಮ್ಮ ಅಭಿಪ್ರಾಯ ಸರಿ
please see my blog
http://ilaone.blogspot.com
love,
ilabhat
ಕಾಮೆಂಟ್ ಪೋಸ್ಟ್ ಮಾಡಿ