17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.

09 ಜೂನ್ 2011

ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .

ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .

ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.

ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.

ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು.

ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.

ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.

ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.

10 ಮೇ 2011

ಈ ದಾರಿ .

ಅವನು ಸುಮಾರು 3 ವರ್ಷದ ಬಾಲಕ. ಆ ಮನೆಗೆ ನಾನು ಖಾಯಂ ಅತಿಥಿ. ನನ್ನಲ್ಲಿ ಅತ್ಯಂತ ಸಲಿಗೆಯಿಂದ ಆತ್ಮೀಯತೆಯಿಂದ ಮಾತನಾಡುವ ಆ ಹುಡುಗ ನನಗೆ ಏನಿದ್ದರೂ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ. ತನ್ನೆಲ್ಲಾ ವಸ್ತುಗಳನ್ನು ಬಿಡಿ ಬಿಡಿಯಾಗಿ ತೋರಿಸಿ ಖುಶಿ ಪಡುತ್ತಿದ್ದ.

ಮೊನ್ನೆ ಯಾಕೋ ಅವನ ಮನೆಗೆ ಹೋಗಿದ್ದಾಗ , ಸ್ನಾನ ಮಾಡುವ ಹೊತ್ತಿಗೆ ಬಚ್ಚಲು ಮನೆಗೆ ಬಂದು , ನೋಡು ನೀನು ಲೈಫ್ಬಾಯಿ ಸೋಪನ್ನೇ ಹಾಕು. ಇದು ಕೆಂಪಗಿನದ್ದು , ಇದನ್ನು ಹಾಕಿದರೆ ಏನಾಗುತ್ತೆ ಗೊತ್ತಾ ? ಅಂತ ಕೇಳಿದ ಆ ೩ ವರ್ಷದ ಬಾಲಕ ಮತ್ತೆ ಹೇಳುತ್ತಾನೆ , ನೋಡು ಇದನ್ನು ಹಾಕಿ ಸ್ನಾನ ಮಾಡಿದರೆ ರೋಗ ಬರೋದಿಲ್ಲ , ಮೈಯಲ್ಲಿರುವ ಹುಳ ಸಾಯುತ್ತೆ , ಗಟ್ಟಿ ಮುಟ್ಟಾದ ದೇಹ ಇರುತ್ತೆ ಅಂತೆಲ್ಲ ಹೇಳಿದ. ಇದನ್ನು ಯಾರು ಹೇಳಿದ್ದು ನಿನಗೆ ಅಂತ ಕೇಳಿದರೆ ಆತ ಹೇಳುತ್ತಾನೆ , ಟಿವಿಯಲ್ಲಿ ಬರುತ್ತಲ್ಲಾ ಅಂತಾನೆ. ಇದಿಷ್ಟೇ ವಿಷಯ.

ಇದು ಒಂದಲ್ಲ ಪ್ರಕರಣ, ಇಂತಹ ಅನೇಕ ಅನುಭವ ಹಲವರಿಗಾಗಿದೆ.ಆಗುತ್ತಲೇ ಇದೆ.ಇದೆಲ್ಲಾ ಟಿವಿ ಪರಿಣಾಮ ಅಂತ ನಾವು ನೇರವಾಗಿ ಹೇಳಿಬಿಡಬಹುದು. ಆದ್ರೆ ಟಿವಿ ನೋಡೋದಿಕ್ಕೆ ನಾವ್ಯಾಕೆ ಬಿಡಬೇಕು ಅಂತ ಇನ್ನೊಂದು ಪ್ರಶ್ನೆಯೂ ಜೊತೆಗೆ ಹುಟ್ಟಿಕೊಳ್ಳುತ್ತದೆ. ಇಂದು ಟಿವಿ ನೋಡಿದ್ದರ ಪರಿಣಾಮವಾಗಿ ಅನೇಕ ಸಂಗತಿಗಳು ಮಕ್ಕಳ ಮನಸ್ಸನ್ನು ಬಹುಬೇಗನೆ ತಲಪುತ್ತದೆ. ಅದರ ಜೊತೆಗೆ ದುಷ್ಪರಿಣಾಮಗಳು ಕೂಡಾ. ಒಂದು ಪರಿಣಾಮದ ಜೊತೆಗೇ ಇದೂ ಕೂಡಾ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದು ವ್ಯವಸ್ಥೆಯನ್ನು ಹಳಿದು ಪ್ರಯೋಜನ ಇಲ್ಲ. ಒಂದರ ಜೊತೆಗೆ ಇನ್ನೊಂದು ಇದ್ದೇ ಇದೆ. ಆದರೆ ನಮ್ಮ ದೃಷ್ಠಿ ಯಾವುದು ಎನ್ನುವುದರ ಮೇಲೆ ಇಡೀ ದಾರಿ ಕಾಣಿಸುತ್ತದೆ.

ಇದೇ ನೋಡಿ ,
ಇಂದು ಒಂದು ರಾಮಾಯಣದ್ದೋ , ಅಥವಾ ಸಾಮಾಜಿಕ , ವ್ಯಾವಹಾರಿಕ ಸಂಗತಿಯನ್ನೋ ಇದೇ ದೃಶ್ಯದ ಮೂಲಕ ಆ ಮಗು ನೋಡಿದ ತಕ್ಷಣವೇ ಅದು ಗ್ರಹಿಸಿಕೊಳ್ಳುತ್ತದೆ. ಮರುದಿನವೇ ಅದರ ಅನುಷ್ಠಾನದಲ್ಲಿ ಅದು ತೊಡಗಿಕೊಳ್ಳುತ್ತದೆ. ಆ ವಿಚಾರವನ್ನು ಆ ಮಗು ಮತ್ಯಾರಲ್ಲೋ ಕೇಳಿ ಇನ್ನಷ್ಟು ಗಟ್ಟಿ ಮಾಡುತ್ತದೆ. ಎಲ್ಲೂ ಉತ್ತರ ಸಿಕ್ಕಿಲ್ಲ ಅಂದಾಕ್ಷಣ ಅದಕ್ಕೆ ತನ್ನದೇ ನಿರ್ಧಾರಕ್ಕೆ ಬರುತ್ತೆ ಅದು.
ಹಾಗಾಗಿ ಅದ್ಯಾವುದೇ ಹೊಸದು ಬರಲಿ ಅದನ್ನು ಮಗು ಬಲು ಬೇಗನೆ ಕಲಿತು ಬಿಡುತ್ತದೆ. ಈ ಗುಣ ಮಕ್ಕಳಲ್ಲಿ ಬೆಳೆಯಬೇಕು. ಆದರೆ ಅದಕ್ಕೆ ಸರಿಯಾದ ದಾರಿಯನ್ನು ಮಾತ್ರಾ ಜವಾಬ್ದಾರಿಯುತರು ತೋರಿಸಬೇಕಾಗುತ್ತದೆ ಅಷ್ಟೇ.

ಅದಿಲ್ಲದೇ ಹೋದಲ್ಲಿ ಮೊನ್ನೆ ಯಾರೋ ಹೇಳುತ್ತಿದ್ದರು , ಇಂದು ಮೊಬೈಲ್ , ಕಂಪ್ಯೂಟರ್ ಮಕ್ಕಳನ್ನು ಹಾಳು ಮಾಡಿದೆ ಅಂತ. ಅದಲ್ಲ , ಮಕ್ಕಳು ಹಾಳಾಗದಂತೆ ಅಲ್ಲಿ ಎಚ್ಚರ ವಹಿಸಬೇಕಾದ್ದು ಆಯಾ ಘಟ್ಟದ ಜವಾಬ್ದಾರಿಯುತರು. ಮನೆಯಲ್ಲಾದರೆ ಹೆತ್ತವರು , ಹಾಸ್ಟೆಲ್‌ನಲ್ಲಾದರೆ ವಾರ್ಡನ್ , ಶಾಲೆಯಲ್ಲಾದರೆ ಪ್ರಾಂಶುಪಾಲರು ಅಷ್ಟೇ. ಇದು ಮೂರು ಸಂದರ್ಭದಲ್ಲಿ ಎಚ್ಚರವಾಗಿದ್ದರೆ ಎಚ್ಚರ ತಪ್ಪುವವರು ಯಾರು ಹೇಳಿ ?.

24 ಏಪ್ರಿಲ್ 2011

ಕೊನೆಗೂ ಉಳಿಯುವುದು ಇದೇ. .

ಸಾಯಿಬಾಬಾ ತೀರಿಕೊಂಡರು.

ಎಷ್ಟೋ ಜೀವಗಳಿಗೆ ಸ್ಫೂರ್ತಿಯಾಗಿದ್ದ ಸಾಯಿಬಾಬಾ ತೀರಿಕೊಂಡರು ಎಂದಾಕ್ಷಣ ಅಲ್ಲೆಲ್ಲಾ ಮತ್ತೆ ನಿರಾಸೆಗಳು ತುಂಬಿಕೊಂಡವು. ಆದರೆ ಮತ್ತೆ ಅದೇ ಜೀವಗಳು ಯೋಚಿಸುತ್ತವೆ ಇನ್ನೊಂದು ಅವತಾರದಲ್ಲಿ ಈ ಮಹಾಪುರುಷ ಬಂದೇ ಬರುತ್ತಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತವೆ. ಏನಿದ್ದರೂ ಈಗ ಸಾಯಿಬಾಬಾ ಇಲ್ಲ , ಮುಂದಿನದ್ದು ಗೊತ್ತಿಲ್ಲ.

ಸತ್ಯಸಾಯಿ ಬಾಬಾರನ್ನು ನಾನಂತೂ ಕಾಣುವುದು ಒಬ್ಬ ಸಮಾಜ ಸೇವಕನಾಗಿ , ಸುಧಾರಕನಾಗಿ. ಒಂದು ಸರಕಾರಕ್ಕೆ ಮಾಡಲಾಗದ ಕೆಲಸವನ್ನು , ಒಂದು ಆಡಳಿತಕ್ಕೆ ಕಲ್ಪಿಸಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರು ದೇವತಾ ಮನುಷ್ಯ. ಆರಾಧನೆಗೆ ಯೋಗ್ಯರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಇದುವರೆಗೆ ಯಾವುದೇ ಟೀಕೆಗಳು ಬಂದರೂ ಆ ಬಗ್ಗೆ ಯೋಚಿಸುವುದಕ್ಕೂ ಹೋಗದೇ ಬಾಬಾ ಕೆಲಸಗಳನ್ನು ಒಪಿಕೊಂಡು ಬಿಡುವುದು ಹೆಚ್ಚು ಸೂಕ್ತ ಅಂತ ನಾನು ನಂಬಿದ್ದೆ. ಹೀಗೆ ಟೀಕೆಗಳು ಬರುತ್ತಿದ್ದಾಗ ಬಾಬಾ ಸಹೇಳುತ್ತಿದ್ದ ಮಾತುಗಳನ್ನು ಎಲ್ಲೋ ಓದಿದ್ದು ನೆನಪಿದೆ , “ಸಿಹಿ ಇದ್ದಲ್ಲಿಗೇ ಇರುವೆಗಳು ಬರುವುದಲ್ಲವೇ , ಸಿಹಿ ಇಲ್ಲದಲ್ಲಿ ಇರುವೆಗಳು ಇರೋದಿಲ್ಲ ಅಲ್ವಾ” ಅಂತ ಒಂದೇ ಮಾತಿನಲ್ಲಿ ಹೇಳಿದ್ದು ಅಲ್ಲಿ ದಾಖಲಾಗಿತ್ತು. ಅಂದರೆ ಟೀಕೆಗಳಿಗೆ ಉತ್ತರ ಇಲ್ಲ. ಕಾಯಕವೇ ಅದಕ್ಕೆ ಉತ್ತರ. ನಿಜವಾಗಿಯೂ ಈ ಮಾತು ನಮಗೂ ಅನ್ವಯ ಅಲ್ಲವೇ. ಟೀಕೆಗಳಿಗೆ ಉತ್ತರ ನೀಡುತ್ತಾ ಹೋಗುತ್ತಿದ್ದಂತೆಯೇ ಅ ಬೆಳೆಯುತ್ತಾ ಸಾಗುತ್ತೆ. ಹಾಂಗತ ಅದುವೇ ದೌರ್ಬಲ್ಯ ಅಂತ ಟೀಕಾಕಾರರು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.

ಅದಲ್ಲ , ಬಾಬಾ ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತ. ಉಚಿತ ವೈದ್ಯಕೀಯ ಸೇವೆ , ಶಿಕ್ಷಣ , ಡಿಯುವ ನೀರು , ಶಿಸ್ತು , ಸಾಮರಸ್ಯ , ಮಾನಸಿಕ ಧೈರ್ಯ ,. . ಹೀಗೇ ಒಂದೇ ಎರಡೇ. ಸಾಲು ಸಾಲು ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಮಾನ್ಯ ಒಬ್ಬ ಸ್ವಾಮಿಗೆ ಮಾಡಲು ಆಗದ ಕೆಲಸವೇ ಸರಿ.

ಇದಕ್ಕೆಲ್ಲಾ ದಾನಿಗಳೂ ಇದ್ದಾರೆ ಅನ್ನಿ. ದಾನ ಮಾಡುವವನೂ ಅಲ್ಲಿ ಭ್ರಷ್ಠಾಚಾರ , ಅವ್ಯಹಾರ ಇಲ್ಲ ಎಂದೇ ಅಲ್ಲವೇ ದಾನ ಮಾಡುವುದು. ಒಂದು ವೇಳೆ ಎಲ್ಲೆಲ್ಲಾ ಅವ್ಯಹಾರ ತಾಂಡವವಾಡುತ್ತಿದ್ದರೆ ಅಷ್ಟು ಪ್ರಮಾಣದ ದಾನ ಹರಿದುಬರಲು ಸಾಧ್ಯವಿತ್ತೇ?. ಅದೂ ಅಲ್ಲ ಸೇವಾಕರ್ತರಾಗಿ ವಿಧೇಶಗಳಿಂದಲೂ ವೈದ್ಯರು ಆಗಮಿಸುತ್ತಿದ್ದರೇ?. ಖಂಡಿತಾ ಇಲ್ಲ. ಹೀಗಾಗಿ ಬಾಬಾ ನಿಜಕೂ ಒಬ್ಬ ಶ್ರೇಷ್ಠ ಪುರುಷ.
ಬಾಬಾ ಎಂದೂ ನನ್ನನ್ನು ಪೂಜೆ ಮಾಡಿ ಎಂತ ಎಲ್ಲೂ ಹೇಳಿಲ್ಲ , ಭಕ್ತರೇ ಪೂಜಿಸುವಾಗ ಅವರು ಹೇಳಿದ್ದು , ನಿಮ್ಮ ತಂದೆ ತಾಯಿಯನ್ನು ಪೂಜಿಸಿ , ಕುಲದೇವರನ್ನು ಪೂಜಿಸಿ ಎಂದರೇ ವಿನಹ: ನಾನೇ ದೇವರು ಎಂದು ಹೇಳಿಲ್ಲ. ಆದರೂ ಭಜನೆ ಇತ್ಯಾದಿಗಳ ಮೂಲಕ ಮಾನಸಿಕವಾದ ನೆಮ್ಮದಿಗೆ ನಾಂದಿ ಹಾಡಿದರು. ಆನ ಬಂದು ಸೇರಿದರು. ಏನೋ ಶಕ್ತಿ ಕಂಡುಕೊಂಡರು. ಲಕ್ಷ ಲಕ್ಷ ಜನ ಅವರತ್ತ ಹೋದರು.
ಇಂದು ಯಾವುದೇ ಒಬ್ಬ ಸ್ವಾಮೀಜಿಯಾಗಲಿ , ಅಥವಾ ಇನ್ಯಾರೇ ಆಗಲಿ ಮಾಡದ ಕೆಲಸವನ್ನು ಬಾಬಾ ಮಾಡಿದ್ದಾರೆ. ಅಷ್ಟೋ ಜನರಿಗೆ ಆರೋಗ್ಯ , ಶಿಕ್ಷಣ ಒದಗಿಸಿದ್ದಾರೆ. ಹೀಗಾಗಿ ಅವರು ಗ್ರೇಟ್. ಅವರ ನಿಧನಕ್ಕೆ ಹನಿ ಹನಿ ಕಂಬನಿ.

ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ನಾವು ಮಾಡಿದ ಸಾಧನೆಗಳು , ಸಮಾಜಕ್ಕೆ ನೀಡಿದ ಕೊಡುಗೆಗಳು ಉಳಿದುಕೊಳ್ಳುವುದೇ ವಿನಹ, ಈ ದೇಹವಲ್ಲ ಅಲ್ವೇ. ಹಾಗೇ ಇಂದು ಬಾಬಾ ನಿಧನರಾದ ತಕ್ಷಣ ಅವರ ಸಮಾಜ ಕಾರ್ಯಗಳು ಕಾಣಿಸಿಕೊಳ್ಳುತ್ತವೆ.ಆ ಮೂಲಕ ಅವರು ಶಾಶ್ವತರಾಗುತ್ತಾರೆ.

ನಾವೂ ಹಾಗೆಯೇ ಟೀಕೆಗಳಿಗೆ ಕಡಿವಾಣ ಹಾಕಿ ಅವರ ಹಾದಿಯಲ್ಲೇ ಮುಂದುವರಿದರೆ ಒಳ್ಳೆಯದಲ್ವೇ. ಸಮಾಜಕ್ಕೆ ಕಿರು ಕಾಣಿಕೆ ನೀಡುವತ್ತ ಚಿಂತಿಸುವುದು ಒಳ್ಳೆಯದಲ್ವೇ.

12 ಏಪ್ರಿಲ್ 2011

ಸಂಬಂಧಗಳ ಹುಟ್ಟು . .

ಸಂಬಂಧಗಳು,
ಅದೊಂದು ಅದ್ಭುತ ಸೃಷ್ಠಿ. ಒಮ್ಮೆ ಅದರ ಜನನವಾದರೆ ಮುಗಿಯಿತು. ಅದಕ್ಕೆ ಮತ್ತೆ ಸಾವು ಎಂಬುದಿಲ್ಲ. ಆ ಸಂಬಂದಗಳು ಹಾಗೇ ಉಳಿದಕೊಂಡು ಬಿಡುತ್ತದೆ. ಅದಕ್ಕೆ ಎಷ್ಟೇ ಸರ್ಜರಿಗಳು ಮಾಡಿದರೂ ಮೊದಲಿನ ಸಂಬಂಧಗಳಿಂದ ಹೊಕ್ಕುಳ ಬಳ್ಳಿ ಬಿಡಿಸಿಕೊಳ್ಳುವುದೇ ಇಲ್ಲ. ಎಂತಹ ಒಂದು ಒಳ್ಳೆಯ ಲೋಕ ಇದು ಅಂತ ಅನಿಸಿಬಿಡುತ್ತದೆ ನನಗೆ.

ಒಂದು ಮಗು ಹುಟ್ಟಿಕೊಂಡಿತು ಅಂದಾಕ್ಷಣ ಅಲೊಬ್ಬಳು ಅಮ್ಮನೂ ಹುಟ್ಟಿಕೊಳ್ಳುತ್ತಾಳೆ. ಅಪ್ಪನೂ ಜನನವಾಗುತ್ತಾನೆ. ಆಗಲೇ ಹೊಸ ಅಜ್ಜ , ಅಜ್ಜಿ , ಸೋದರ‌ ಅತ್ತೆ , ಭಾವ , ಸೋದರಮಾವ , ಅಣ್ಣ , ತಮ್ಮ , ತಂಗಿ , ಅಕ್ಕ, ಚಿಕ್ಕಪ್ಪ , ಚಿಕ್ಕಮ್ಮ , ಮತ್ತಾತ , ಮತ್ತಜ್ಜಿ . . . . . . ಅಬ್ಬಾ ಎಷ್ಟೆಲ್ಲಾ ಸಂಬಂಧಗಳ ಹುಟ್ಟು ಇಲ್ಲಿ ಆಗಿಬಿಡುತ್ತದೆ. ಎಷ್ಟು ಜನರಿಗೆ ಸಂಭ್ರಮ. ನಾನು ಅಮ್ಮನಾದೆ ಎನ್ನವುಷ್ಟೇ ಖುಷಿ ಈ ಎಲ್ಲಾ ಸಂಬಂಧಗಳಲ್ಲೂ ಕಾಣುತ್ತದೆ.ಇಲ್ಲಿ ಆ ಸಂಬಂಧಗಳಿಗಿಂತ ದೊಡ್ಡದು ಯಾವುದೂ ಅಲ್ಲ. ಎಲ್ಲರಿಗೂ ಈ ಸಂಬಂಧಗಳ ನಡುವೆ ಬದುಕಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಸಂಬಂಧಗಳಲ್ಲಿ ಅನವಿಗೆ ಪ್ರೀತಿ , ಮಮತೆ ಇದ್ದೇ ಇರುತ್ತದೆ. ಎಲ್ಲಾದರು ಒಂದು ಹೊಕ್ಕುಳ ಬಳ್ಳಿಯ ಸಂಬಂಧ ಸೃಷ್ಠಿಯಾಗಿಲ್ಲ ಎಂದಾದರೆ ಎಂತಹ ಕೊರಗು ಇರುತ್ತದೆ ಅನ್ನೋದು ಅನುಭವಿಸಿದವರಿಗೆ ಮಾತ್ರಾ ತಿಳಿಯುವುದು.

ಈ ಸಂಬಂಧಗಳಿಗೆ ನಮ್ಮ ಪುಣ್ಯ ಭೂಮಿಯಲ್ಲಿ ಇರುವಷ್ಟು ಮಹತ್ವ ಬೇರೆ ಕಡೆ ಕಾಣಿಸದು. ಇಂದು ಇವನ ಹೆಂಡತಿಯಾದರೆ , ನಾಳೆ ಅವನ ಹೆಂಡತಿಯಾಗಿ ಬಿಡುವುದು ಸುಲಭ ಮತ್ತು ಅದು ಸಾಮಾನ್ಯ ಕೂಡಾ. ಆದರೆ ಈ ಸಂಬಂಧವನ್ನು ಹೊರತುಪಡಿಸಿ ಉಳಿದ ಎಲ್ಲವೂ ಕೂಡಾ ಅಳಿಸಲು ಸಾಧ್ಯವೇ ಇಲ್ಲ.

ಒಂದು ವೇಳೆ ವ್ಯಕ್ತಿ ಇಲ್ಲವಾದರೂ ಆ ಸಂಬಂಧಗಳು ಹಾಗೇ ಉಳಿದುಕೊಳ್ಳುತ್ತವೆ. ಈಗ ಇಲ್ಲವಾದ ಅವರು ನನಗೆ ಮಾವನ , ಅಣ್ಣನೋ , ಭಾವನೋ ಆಗಿದ್ದ ಎನ್ನುವುದು ಉಳಿದುಕೊಳ್ಳುತ್ತದೆ. ಹಾಗಾಗಿ ಈ ಸಂಬಂಧಗಳಿಗೆ ಸಾವಿಲ್ಲ.

ನಿಜಕ್ಕೂ ಈ ಸಂಬಂಧಗಳ ನಡುವೆ ಪಯಣಿಸೋದೇ ಒಂದು ಖುಷಿ.

12 ಮಾರ್ಚ್ 2011

ಸುನಾಮಿ ಎಂದರೆ ಇವರು ನಡುಗುತ್ತಾರೆ

ಮತ್ತೆ ನೆನಪಾಯಿತು 2004 ಡಿಸೆಂಬರ್ 26.




ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .

“ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.

ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್‌ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .

ಪುತ್ತೂರಿನ ಮೆಸ್ಕಾಂನಲ್ಲಿ ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.

ನಿನ್ನೆ ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.

ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.

01 ಮಾರ್ಚ್ 2011

ಇದೇನು ಹಗರಣವಾ ?

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . .


ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.

ಏನಿದು ?

ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್‌ಗಳು ನಡೆಯುತ್ತಾ ಇದೆ.




ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.

ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.

ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.

11 ಫೆಬ್ರವರಿ 2011

ಭೂಮಿ ಈಗ ರಜಸ್ವಲೆ. .

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.

ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.

ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.




ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.

ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.

ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.

ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.

04 ಫೆಬ್ರವರಿ 2011

ಪವರ್ ಫುಲ್ ಕರ್ನಾಟಕ

ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ.

ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.

ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.

02 ಫೆಬ್ರವರಿ 2011

ಕಾಡುವ ಜಾತ್ರೆ. . !

ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.

ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.

ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.

ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.

ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.

ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.