ಅಂದು ಬೆಂಗಳೂರು ಬಸ್ಸು ಏರುವ ತವಕ. ಅದೇ ಸಮಯಕ್ಕೆ ಇಬ್ಬರು ಯುವಕರು ಬಸ್ಸಿನ ಬಾಗಿಲ ಬಳಿ ಚರ್ಚೆ ಮಾಡುತ್ತಿದ್ದರು. ಸಾಕಾಗಿ ಹೋಯ್ತು. ನಾಳೆ ಇನ್ನು ಅದೇ ಟ್ರಾಫಿಕ್, ಅದೇ ಆಫೀಸು, ಅದೇ ಒತ್ತಡ. ಸಾಕಾಗಿ ಹೋಯ್ತು, ಒಮ್ಮೆ ಈ ಕಡೆ ಬಂದರೆ ಸಾಗಿತ್ತು. ಅವರಿಬ್ಬರ ಚರ್ಚೆಯ ಸಾರಾಂಶ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇಬ್ಬರದೂ ಒಂದೇ ವಿಚಾರ, ನಗರದ ಬದುಕು ಸಾಕಾಯ್ತು. ಹಳ್ಳಿ ಬದುಕು ಇಷ್ಟವಾಯ್ತು...!. ಆದರೆ ಇಲ್ಲೊಂದು ಅಪಾಯವೂ ಜೊತೆ ಜೊತೆಗೇ ಕಂಡಿತು. ಇದು ಇಷ್ಟ ಪಟ್ಟ ಹಳ್ಳಿ ಬದುಕಲ್ಲ...!. ಅಲ್ಲಿನ ಒತ್ತಡಕ್ಕೆ ಕೃಷಿ, ಹಳ್ಳಿ ಬದುಕು ಈಗಷ್ಟೇ ಖುಷಿ.
ಇಂದು ಹಳ್ಳಿಯಿಂದ ಹೋದ, ಪಾರಂಪರಿಕ ಕೃಷಿ ಬದುಕಿನಿಂದ ದೂರವಾದ ಬಹುತೇಕ ಕುಟುಂಬಗಳ ಯುವಕರಲ್ಲಿ ಈಗ ಕೃಷಿ ಹಾಗೂ ನಗರದ ಬದುಕಿನ ನಡುವೆ ತೊಳಲಾಟ ಇದೆ. ಅದೋ.. ಇದೋ ಎಂಬ ಗೊಂದಲ ಇದೆ. ಇನ್ನೂ ಕೆಲವು ಯುವಕರು ಏಕಾಏಕಿ ನಗರದ ಉದ್ಯೋಗ ಬಿಟ್ಟು ಕೃಷಿ ಬದುಕು ಆರಂಭ ಮಾಡುತ್ತಾರೆ. ಮಣ್ಣು ಮೆತ್ತಿಕೊಂಡು ಕೆಲಸ ಮಾಡುತ್ತಾರೆ, ಸತತ ದುಡಿಯುತ್ತಾರೆ. ಆದರೆ ಇಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಭಿನ್ನವಾಗಿರುತ್ತದೆ. ಮತ್ತೆ ಮಣ್ಣು ತೊಳೆದು ಹೊರಟು ಬಿಡುತ್ತಾರೆ. ಇದಕ್ಕೆ ಅಪವಾದವಾಗಿ ಕೆಲವರು ಇದ್ದಾರೆ. ಹಾಗಂತ ಈ ಪ್ರಮಾಣ ಕಡಿಮೆಯಾಗಿದೆಯಷ್ಟೇ. ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಬೆಂಗಳೂರಲ್ಲಿ ಉನ್ನತ ಉದ್ಯೋಗದಲ್ಲಿದ್ದ ಯುವಕನೊಬ್ಬ ತನ್ನೂರಿಗೆ ಬಂದು ಕೃಷಿ ಮಾಡಿದ. ಎಲ್ಲಾ ಮೀಡಿಯಗಳೂ ಸೇರಿದಂತೆ ಅವನ ಮಿತ್ರರು ಶ್ಲಾಘಿಸಿದರು. ಆತನ ಕನಸುಗಳು ದೊಡ್ಡದೇ ಇದ್ದವು. ಕೈಯಲ್ಲಿ ಹಣವೂ ಇತ್ತು. ತನ್ನ ಕನಸುಗಳನ್ನು ಹಳ್ಳಿ ತನ್ನ ತೋಟದ ಮಣ್ಣಿನಲ್ಲಿ ಬಿತ್ತಿದ. ಊರ ಇತರ ಕೃಷಿಕರು ಸಹಕರಿಸಿಲ್ಲ, ಅನುಭವದ ಮಾತು ಹೇಳಿಲ್ಲ. ಆತ ಸೋಲುವುದನ್ನು ಅವರಿಗೆ ನೋಡಬೇಕಿತ್ತು. ನಿಧಾನವಾಗಿ ಅವನ ಯೋಜನೆ ಕುಸಿಯ ತೊಡಗಿತು. ಕೈಯಲ್ಲಿದ್ದ ಕಾಸು ಕರಗಿತು. ಕೃಷಿಯ ಆದಾಯ ಕಡಿಮೆಯಾಯಿತು. ಮತ್ತೆ ಬೆಂಗಳೂರು ಬಸ್ಸು ಏರಿ ಅಲ್ಲಿಂದ ವಿಮಾನವನ್ನೂ ಹಿಡಿದು ಒಂದು ವರ್ಷಗಳ ಕಾಲ ಕೃಷಿ ಬದುಕಿನಿಂದ ದೂರ ಇರಬೇಕಾಯಿತು. ವರ್ಷ ದುಡಿದು ಒಂದಷ್ಟು ಸಂಪಾದನೆ ಮಾಡಿ ಮತ್ತೆ ಮಣ್ಣು ಮೆತ್ತಿಕೊಂಡ , ಈಗ ಸವಾಲು ಸ್ವೀಕರಿಸಿ, ಸೋಲಿನ ಪಾಠ ಕಲಿತು ಭೂಮಿಯಲ್ಲಿ ಬೆಳೆ ಬಿತ್ತಿದ್ದಾನೆ ಯಶಸ್ಸಿನ ಫಸಲು ಸಿಗಬೇಕಿದೆ. ಹಾಗಂತ ಆತ ಸೋಲನ್ನು ಹೇಳಿಕೊಂಡಿಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿದ ಮತ್ತೆ ಮಣ್ಣಿಗೇ ಬಂದ. ಆದರೆ ಇದೂ ಅಪವಾದವಷ್ಟೇ. ಮಣ್ಣು ತೊಳೆದು ಹೊರಟವರು ಮತ್ತೆ ಬರುವರೇ ಎಂಬ ಪ್ರಶ್ನೆಯೂ ಮುಂದೆ ಇದೆ. ಹಾಗಿದ್ದರೆ ಏನು?.
ಕೃಷಿ ಬದುಕು ನೆಮ್ಮದಿ ನಿಜ. ಹಾಗಂತ ಸವಾಲುಗಳೇ ಇಲ್ಲ, ಸಮಸ್ಯೆಗಳೇ ಇಲ್ಲ ಎಂದಲ್ಲ. ನಿತ್ಯವೂ ಸವಾಲು, ಅನುಭವಗಳೇ ಇಲ್ಲಿ ಪಾಠ. ಮಣ್ಣಿನ ನಂಟು ಬಿಟ್ಟು ಬೆಂಗಳೂರು ಬಸ್ಸು ಏರಿ ಮತ್ತೆ ಮಣ್ಣು ಮೆತ್ತಿಕೊಳ್ಳುವೆಂಬ ಭ್ರಮೆ ಮೊದಲು ಬಿಡಬೇಕು. ಅದರ ಬದಲಾಗಿ ಮಣ್ಣಿನ ನಂಟಿನ ಜೊತೆಗೆ ಸಣ್ಣ ನೌಕರಿ ಮಾಡಿಕೊಂಡು ಸವಾಲು ಎದುರಿಸಲು ಕಷ್ಟವೇನಲ್ಲ. ಕೃಷಿ ಬದುಕೆಂದರೆ ನಿತ್ಯವೂ ಗಿಡದ ಜೊತೆ ಮಾತನಾಡಬೇಕಾದ ಬದುಕು. ಇಂತಹ ಬದುಕು ಹೊಸಪೀಳಿಗೆ ಬೆಳೆಸಿಕೊಂಡರೆ ಕೃಷಿಗೆ ಆಕ್ಸಿಜನ್ ಸಿಗುವುದರಲ್ಲಿ ಸಂದೇಹ ಇಲ್ಲ. ಇಂದು ಆಸಕ್ತರಿದ್ದಾರೆ ನಿಜ, ಆದರೆ ಯಶಸ್ಸು ಕಂಡವರು ಎಷ್ಟು ಮಂದಿ ಎಂಬ ಪ್ರಶ್ನೆಯನ್ನೂ ಜೊತೆಗೇ ಹಾಕಿಕೊಳ್ಳಬೇಕು. ನಗರದ ಉದ್ಯೋಗ ಹೋಗುವ ಮುನ್ನವೇ ಯೋಚನೆ ಬೇಕು, ಕೃಷಿ ಉಳಿವಿಗೆ ಸಣ್ಣ ನೌಕರಿ ಇಲ್ಲೇ ಏಕೆ ಮಾಡಲಾಗದು ?. ಈ ಒಂದು ಪ್ರಶ್ನೆ ಕೃಷಿ ಉಳಿವಿಗೆ, ದೇಶದ ಕೇಷಿ ಬೆಳವಣಿಗೆಗೆ ಸಹಕಾರಿ. ಇಂದು ಕೃಷಿ ಕಷ್ಟವೇನಲ್ಲ, ಎಲ್ಲವೂ ಯಾಂತ್ರೀಕರಣವಾಗುತ್ತಿರುವ ವೇಳೆ ಕೃಷಿಯೂ ಅದನ್ನು ಹೊರತಾಗಿಲ್ಲದ ಕಾರಣ ಶ್ರಮಕ್ಕಿಂತ ಐಡಿಯಾ ಇಲ್ಲಿ ಮುಖ್ಯವಾಗುತ್ತದೆ. ಯಶೋಗಾಥೆಗಿಂತ ಅನುಭವದ ಪಾಠವೇ ಇಲ್ಲಿ ಮುಖ್ಯವಾಗುತ್ತದೆ. ಆತ ಯಶಸ್ವಿಯಾದರೂ ಅದೇ ತಂತ್ರ ಇಲ್ಲಿ ಯಶಸ್ವಿಯಾಗದೇ ಇರಬಹುದು. ಹೀಗಾಗಿ ಅನುಭವದ ಪಾಠ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಇದಿಲ್ಲದೇ ಹೋದರೆ ಮಣ್ಣಿಗೆ ಬಂದಾಗ ನಗರದ ಕಚೇರಿ ಬದುಕು ಅಂದವಾಗುತ್ತದೆ , ನಗರದ ಬದುಕಿಗೆ ಹೋದಾಗ ಕೃಷಿ ಬದುಕು ಇಷ್ಟವಾಗುತ್ತದೆ ಅಷ್ಟೇ.
ಇತ್ತೀಚೆಗಿನ ಅಧ್ಯಯನದ ಪ್ರಕಾರ ನಗರದ ಬಹುತೇಕ ಯುವಕರು ಕೃಷಿಯತ್ತ ಆಸಕ್ತರಾಗಿದ್ದಾರೆ. ಪೇಸ್‍ಬುಕ್‍ನ ಅಗ್ರಿಕಲ್ಚರಿಸ್ಟ್ ಎಂಬ ಗ್ರೂಪಿನ ಮಾಹಿತಿ ಪ್ರಕಾರ, ಈ ಗುಂಪಿನ ಸುಮಾರು 1.10 ಲಕ್ಷ ಸದಸ್ಯರ ಪೈಕಿ ಶೇ.86 ರಷ್ಟು ಗಂಡಸರು ಹಾಗೂ ಶೇ.14 ರಷ್ಟು ಮಹಿಳೆಯರು ಇಲ್ಲಿ ಚರ್ಚೆ ಮಾಡುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶೇ.36 ರಷ್ಟು ಮಂದಿ 25 ರಿಂದ 34 ವಯೋಮಾನದ ಯುವಕರು ಈ ಗುಂಪಿನ ಸಕ್ರಿಯ ವೀಕ್ಷಕರು ಹಾಗೂ ಕೃಷಿಯ ಬಗ್ಗೆ ಮಾತನಾಡುವ ಸದಸ್ಯರು. ಶೇ.20 ರಷ್ಟು 18 ರಿಂದ 24 ವಯೋಮಾನದವರು. ಇನ್ನೂ ಒಂದು ಗಮನಿಸುವ ಅಂಶವೆಂದರೆ ಶೇ.60 ರಷ್ಟು ಅಂದರೆ ಈ ಗುಂಪಿನ ಸುಮಾರು 65 ಸಾವಿರ ಬೆಂಗಳೂರ ನಗರವಾಸಿಗಳು...!. ಇದರ ಅರ್ಥ ಇಷ್ಟೂ ಮಂದಿ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ ಎಂಬುದು ಇಲ್ಲಿ ತಿಳಿಯಲ್ಪಡುತ್ತದೆ.
ಅಂದರೆ ಈಗಿನ ಯುವ ಸಮೂಹ ಕೃಷಿಯತ್ತ ಆಸಕ್ತವಾಗಿದೆ. ಇದಕ್ಕೆ ಒತ್ತಡದ ನಡುವಿನ ಉದ್ಯೋಗವೂ ಕಾರಣವಾಗಿದೆ. ಇದೆಲ್ಲಾ ಇಷ್ಟ ಪಟ್ಟು ಕೃಷಿಯತ್ತ ಬರುವವರಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಉನ್ನತ ವ್ಯಾಸಾಂಗ ಮಾಡಿದವರೂ ಕಾಣಲಿ, ಹಳ್ಳಿ ಬದುಕಿನ ಜೊತೆಗೆ ಇಲ್ಲೇ ಸಣ್ಣದೊಂದು ಉದ್ಯೋಗ, ಉದ್ಯಮ ಮಾಡಲಿ. ಕೆಸರು ಮೆತ್ತುವಷ್ಟೇ ಉಳಿಸಿಕೊಳ್ಳುವುದೂ ಸುಲಭವಾಗಬೇಕು.
( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು -1 )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ