ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಈಗ ವಿವಾದವಾಗುತ್ತಿದೆ.
ಕಾರಣ ಇಷ್ಟೇ,
ಇಡೀ ಕಾರ್ಯಕ್ರಮದ ಅತಿಥೇಯರ ಸಾಲಿನಲ್ಲಿ ಮುಸ್ಲಿಂ ಅಧಿಕಾರಿಯೊಬ್ಬರ ಹೆಸರು ಇದೆ ಎಂಬುದು.ಈಗ ಇದು ರಾಷ್ಟ್ರೀಯವಾಗಿ ಚರ್ಚೆಯಾಗುತ್ತಿರುವ ವಿಚಾರ.
ಈಗ ಇರುವುದು ಎರಡು ಪ್ರಶ್ನೆ,
* ಅಧಿಕಾರಿಯ ಹೆಸರು ಇದ್ದರೆ ಏನಾಗುತ್ತದೆ ? ,
* ಹೆಸರೇ ಬೇಕು ಏಕೆ, ಹುದ್ದೆಯ ಹೆಸರು ಮಾತ್ರಾ ಸಾಲದೆ?.
ಎರಡು ಪ್ರತಿಷ್ಟೆ
* ಹೆಸರು ತೆಗೆಯಲೇಬಾರದು
* ಹೆಸರು ತೆಗೆಸಲೇಬೇಕು.
ಇದರ ಜೊತೆಗೆ ರಾಜಕೀಯದ ಆಟ ಆಡುವ ಮೂಲಕ ತಮ್ಮ ಬೇಳೆ ಬೇಯಿಸುವ ಹಾಗೂ ಸೇಡು ತೀರಿಸಿಕೊಳ್ಳುವ ಒಂದು ತಂಡ.
ಇದಿಷ್ಟೇ ಸಂಗತಿಗಳ.
ಈಗ ಬಗೆಹರಿಯದ, ಬಗೆಹರಿಸಲಾಗದ ಸಮಸ್ಯೆ ಇದೆ. ಏಕೆಂದರೆ ಇದೆಲ್ಲಾ ಅತ್ಯಂತ ಸೂಕ್ಷ್ಮ ಸಂಗತಿ.
* *
ನಾನು ಇತ್ತೀಚೆಗಷ್ಟೇ ಕೇರಳದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದೆ.ಎಲ್ಲಾ ದೇವ್ಥಾನಗಳಲ್ಲಿ ಕಾಣಿಸಿದ್ದು "ಹಿಂದೂಯೇತರರಿಗೆ ಪ್ರವೇಶವಿಲ್ಲ".ಇದು ಅಲ್ಲಿ ವಿವಾದವೂ ಆಗುವುದಿಲ್ಲ. ನಿಯಮ ಪಾಲಿಸಿದರೆ ಮಾತ್ರವೇ ಒಳಗೆ ಪ್ರವೇಶ.
ಅದು ಬಿಡಿ, ಶಬರಿಮಲೆ ಅಯ್ಯಪ್ಪನಿಗೆ ಅತ್ಯಂತ ಪ್ರಿಯವಾದ ಹರಿವರಾಸನಂ ಹಾಡಿದ ,ಗುರುವಾಯೂರ್ ಕೃಷ್ಣನ ಅತ್ಯಮೂಲ್ಯ ಹಾಡುಗಳನ್ನು ಹಾಡಿದ ಕೆ.ಜೆ.ಜೇಸುದಾಸ್ ಅವರಿಗೇ ಇದುವರೆಗೆ ದೇವಸ್ಥಾನದ ಒಳಗೆ ಪ್ರವೇಶ ಸಾಧ್ಯವಾಗಿಲ್ಲ.ಆದರೆ ಇಂದಿಗೂ ಅವರು ದೇವರ ಹಾಡು ಹಾಡುತ್ತಲೇ ಇದ್ದಾರೆ. ಇಂದಿರಾಗಾಂಧಿ ಅವರಂತಹವರಿಗೂ ಕೇರಳದಲ್ಲಿ ದೇವಸ್ಥಾನ ಪ್ರವೇಶ ಸಾಧ್ಯವಾಗಿಲ್ಲ. ಇದೆಲ್ಲಾ ಭಾರೀ ವಿವಾದ ಆಗಿಲ್ಲ.ಕೇರಳದ ಮಾಧ್ಯಮಗಳು ಈ ಬಗ್ಗೆ ಆಗಾಗ್ಗೆ ಹೇಳಿಲ್ಲ. ಅದೂ ಅಲ್ಲದೆ ಕೇರಳ ಅಂದರೆ ಅದು ಕಮ್ಯೂನಿಸ್ಟ್ ರಾಜ್ಯ.ಹಾಗಿದ್ದರೂ ವಿವಾದಗಳು ಆಗಿಲ್ಲ, ಮಾಡುವುದೂ ಇಲ್ಲ.ಕಾರಣ, ಅದು ನಂಬಿಕೆ ಹಾಗೂ ಶ್ರದ್ದೆಯ ಕೇಂದ್ರ.ಒಂದು ವಿವಾದವು ಅನೇಕ ಮಂದಿಯ ಮೇಲೆ ಪರಿಣಾಮ ಬೀರುತ್ತದೆ.ದೇವಸ್ಥಾನ ಎಂದರೆ ಕಟ್ಟುಪಾಡುಗಳು ಅಗತ್ಯ.ಅಲ್ಲದೇ ಇದ್ದರೆ ದೇವಸ್ಥಾನ ಭಕ್ತರ ಸಂತೆ ಅಷ್ಟೇ.
ಮುಂದೆ ಬಂದಾಗ,
ಶಬರಿಮಲೆಯಲ್ಲಿ ಅನೇಕ ಕೇರಳ ಮಾಧ್ಯಮಗಳ ಮಾಹಿತಿ ಕೇಂದ್ರ ಕಾಣುತ್ತಿತ್ತು.ಈ ಬಗ್ಗೆ ಕೇಳಿದಾಗ ಅಲ್ಲಿಯ ಜನ ಹೇಳಿದರು, ಅತ್ಯಂತ ಹೆಚ್ಚು ಭಕ್ತಾದಿಗಳು ಬರುವ ಸಂದರ್ಭ, ಈ ಮಾಧ್ಯಮ ಕೇಂದ್ರಗಳೇ ಬಹಳಷ್ಟು ಸಮಸ್ಯೆ ನಿವಾರಣೆ ಮಾಡುತ್ತಾರೆ, ಭಕ್ತಾದಿಗಳಿಗೆ ಮಾಹಿತಿ ನೀಡುತ್ತಾರೆ.ಎಲ್ಲೂ ಗೊಂದಲ ಆಗದಂತೆ ಮಾಡುತ್ತಾರೆ ಅಂತ ಹೇಳಿದರು.ಹಾಗಂತ ಅಲ್ಲಿ ತಪ್ಪುಗಳು ಇದ್ದರೆ ಜವಾಬ್ದಾರಿಯುತವಾಗಿ ಹೇಳಿ ತೋರಿಸಿದರು, ವಿವಾದ ಮಾಡಲಿಲ್ಲ.ವಾದ ಮಂಡಿಸಲಿಲ್ಲ ಬದಲಾಗಿ ಭಕ್ತರಿಗೆ ಅನುಕೂಲವಾಗುವಂತೆ ಮಾಡಿದರು.ಹಿಂದೊಮ್ಮೆ, ಮಕರಜ್ಯೋತಿ ವಿಚಾರವಾಗಿ ಗೊಂದಲಗಳು,ಕಳೆದ ಬಾರಿ ಮಹಿಳೆಯರು ಪ್ರವೇಶಿಸುವ ಬಗ್ಗೆ ಇಡೀ ದೇಶದಲ್ಲಿ ವಿವಾದ ಸೃಷ್ಟಿ ಮಾಡಿದರೂ ಕಮ್ಯೂನಿಸ್ಟ್ ನಾಡಿನ ಮೀಡಿಯಾಗಳು ಎಚ್ಚರ ವಹಿಸಿದ್ದವು ಎಂದು ಶಬರಿಮಲೆಯಲ್ಲಿನ ಜನ ಹೇಳಿದರು.ಕಾರಣ ಇಷ್ಟೇ, ಅದು ನಂಬಿಕೆಯ ಪ್ರಶ್ನೆ ಎಂದವು.
ನಾನು ಶಬರಿಮಲೆ ಯಾತ್ರೆ ಮಾಡುವ ವೇಳೆ ಗಮನಿಸಿದೆ, ಅಲ್ಲಿ ವಯೋವೃದ್ಧರು, ಅತ್ಯಂತ ಪುಟ್ಟ ಮಕ್ಕಳೂ ಬೆಟ್ಟ ಹತ್ತಿ, ದೇವರ ದರ್ಶನ ಮಾಡಿ ವಾಪಾಸಾಗುತ್ತಿದ್ದರು.ಅಂದರೆ ಅದು ಅವರ ನಂಬಿಕೆ ಪ್ರಶ್ನೆ.ನಡೆದಾಡುವ ಶಕ್ತಿ ಭಗವಂತ ನೀಡುತ್ತಾನೆ ಎಂಬ ನಂಬಿಕೆ, ವಿಶ್ವಾಸವೇ ಅವರನ್ನು ಅಷ್ಟೂ ದೊಡ್ಡ ಬೆಟ್ಟ ಹತ್ತಿಸುವಂತೆ ಮಾಡುತ್ತದೆ.
ಮೂರು ದಿನ ಕೇರಳ ದೇವಸ್ಥಾನ ಭೇಟಿ ನೀಡಿ ನಮ್ಮೂರಿಗೆ ಬಂದಾಗ,
ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ವಿವಾದ ದೊಡ್ಡದಾಗುತ್ತಲೇ ಇತ್ತು.
ಅದಕ್ಕೂ ಮುನ್ನ ಒಂಚೂರು ಹಿಂದೆ ಹೋಗಿ, ಮೊನ್ನೆ ಮೊನ್ನೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ,ಈಗ ಪುತ್ತೂರು,ಸ್ವಲ್ಪ ಆಚೆ ನೋಡಿ, ತಿರುಪತಿ, ಶಬರಿಮಲೆ, ಕಟೀಲು, ಕೊಲ್ಲೂರು. . . . ಹೀಗೆ ವಿವಿಧ ದೇವಸ್ಥಾನಗಳ ವಿವಾದ ಕಾಣುತ್ತದೆ.ಎಲ್ಲೂ ಕೂಡಾ ತಾರ್ಕಿಕ ಅಂತ್ಯ ಕಂಡಿಲ್ಲ.ಕಾಣುವುದೂ ಇಲ್ಲ.ವರ್ಷಕ್ಕೊಮ್ಮೆ ವಿವಾದಗಳ ಸೃಷ್ಟಿ.ಜನರಲ್ಲಿ ಗೊಂದಲ ಅಷ್ಟೇ.ನಂಬಿಕೆ ಮೂಲ ಅಸ್ಥಿರ ಮಾಡುವ ಕೆಲಸ ಅಷ್ಟೇ.
ದೇವಸ್ಥಾನದ ಅಂದರೆ ಅದೊಂದು ನಂಬಿಕೆಯ ಪ್ರಶ್ನೆ.ಅಲ್ಲಿ ಕಂದಾಚಾರಗಳು ಇದ್ದರೆ ಎತ್ತಿ ತೋರಿಸಬೇಕು ನಿಜ.ಆದರೆ ಮಾಡಲೇಬಾರದು ಎಂದು ನಮ್ಮ ಅಭಿಪ್ರಾಯ ಅವರ ಮೇಲೆ ಹೇರುವ ಸ್ವಾತಂತ್ರ್ಯ ಯಾರಿಗಿದೆ ?. ಒಂದಷ್ಟು ಜನರಿಗೆ ಇಷ್ಟ ಇಲ್ಲದೇ ಇರಬಹುದು, ನಂಬಿಕೆ ಇಲ್ಲದೇ ಇರಬಹುದು.ಆಧರೆ ಅದಕ್ಕಿಂತ ಸಾವಿರ ಪಾಲು ಮಂದಿ ನಂಬುತ್ತಾರಲ್ಲಾ, ಅವರಿಗೆ ಮಾನಸಿಕ ನೆಮ್ಮದಿ ಸಿಕ್ಕಿದೆಯಲ್ಲಾ, ಅದಕ್ಕೆ ಗೌರವ ನೀಡಬೇಡ್ವೇ ?.ಅವರವರ ಧಾರ್ಮಿಕ ನಂಬಿಕೆ ಅವರವರಿಗೆ ಅಷ್ಟೇ.
ಇಲ್ಲೂ ಪುತ್ತೂರಿನಲ್ಲೂ ಅದೇ ಆಗಿರುವುದು.
ಜಿಲ್ಲಾಧಿಕಾರಿ ಹೆಸರು ಹಾಕುವುದುಕ್ಕೆ ಯಾರದ್ದೂ ವಿರೋಧ ಇಲ್ಲ, ಆದರೆ ಅಲ್ಲಿ ಅಧಿಕಾರಿ ಮುಸ್ಲಿಂ ಆಗಿರುವುದರಿಂದ ದೇವಸ್ಥಾನದ ಪ್ರಸಾದ ಸೇರಿದಂತೆ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೇ ಇರುವುದರಿಂದ ಅವಶ್ಯಕತೆ ಇದೆಯೇ ? ಎಂಬುದು ಪ್ರಶ್ನೆ. ಈ ಹಂತದಲ್ಲಿಯೇ ಆಮಂತ್ರಣ ಪತ್ರಿಕೆ ಮರುಮದ್ರಣ ಮಾಡಿಬಹುದಿತ್ತಲ್ಲಾ ?. ಏಕೆಂದರೆ ಅದೊಂದು ಶ್ರದ್ದೆಯ ಕೇಂದ್ರ ಹಾಗಾಗಿ ಭಕ್ತಾದಿಗಳ ಶ್ರದ್ದೆ, ನಂಬಿಕೆಯ ಮೇಲೆ ಹೊಡೆತ ನೀಡಬಾರದು ಎಂದು ಅಧಿಕಾರಿಗಳಿಗೆ ಅನಿಸಲಿಲ್ವೇ? ಎಂಬುದೇ ಮೂಲಪ್ರಶ್ನೆ.
ಜಾತ್ರಾ ಉತ್ಸವಕ್ಕೆ ಆಮಂತ್ರಣ ಪತ್ರಿಕೆ ಏಕೆ ಬೇಕು ಹಾಗೂ ಮುಸ್ಲಿಂ ಅಧಿಕಾರಿ ಜಾತ್ರೆಗೆ ಆಹ್ವಾನಿಸಿದರೆ ತಪ್ಪೇನು ಎಂದು ಅನೇಕರು ಪ್ರಶ್ನಿಸುತ್ತಾರೆ.
ನಿಜ, ಆದರೆ ,ಇಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಆಡಳಿತಾಧಿಕಾರಿಗಳು ಇರುತ್ತಾರೆ ಎಂದಾದ ಮೇಲೆ ಅವರೇ ಜಾತ್ರೆಗೆ ಆಹ್ವಾನಿಸಿದರೆ ಆಗಬಹುದಲ್ಲಾ ?. ಈ ವಿವಾದ ಮಾಡಿಸಬೇಕಾ ?. ಈಗ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಕಾರ್ಯನಿರ್ವಹಣಾಧಿಕಾರಿ ಕಳೆದ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾಗ ಇಂತಹ ಕೆಲಸ ಮಾಡಿದ್ದಾರೆ, ಆಗಲೇ ವಿರೋಧ ವ್ಯಕ್ತವಾದ ಮೇಲೂ ಈಗ ಎಚ್ಚರಿಕೆ ವಹಿಸಿಕೊಂಡಿದ್ದರೆ ಈಗ ಸಮಸ್ಯೆಯೇ ಬರುತ್ತಿರಲಿಲ್ಲ.ವಿವಾದಗಳು ಆಗುತ್ತಿರಲಿಲ್ಲ. ಅದೆಷ್ಟೋ ಜನರ ನಂಬಿಕೆಯ ಕ್ಷೇತ್ರದಲ್ಲಿ ಇಂತಹ ವಿವಾದಗಳು ನಡೆಯಲೇಬಾರದು.ಏಕೆಂದರೆ ಇಡೀ ಜಗತ್ತು ನಿಂತಿರುವುದು ನಂಬಿಕೆಯ ಮೇಲೆ.ಈಗಂತೂ ಇಂತಹ ನಂಬಿಕೆಗಳ ಕೇಂದ್ರವನ್ನೇ ಅಲ್ಲಾಸಿ ಇಡೀ ಸಮಾಜವನ್ನೇ ಅಸ್ಥಿರ ಮಾಡುವ ಕೆಲಸ ನಡೆಯುತ್ತಿದೆ.ಇದರಲ್ಲಿ ಕೆಲವು ಮೀಡಿಯಾಗಳ ಪಾತ್ರವೇ ಹೆಚ್ಚು.
ಇನ್ನು ಎಲ್ಲದಕ್ಕೂ ಕಾನೂನು ಕಡೆಗೇ ಗಮನ ನೀಡಲಾಗುತ್ತದೆ.ಇಲ್ಲಿಯೂ ಕೂಡಾ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ. ಗೌರವಾನ್ವಿತ ನ್ಯಾಯಾಲಯದ ಎಲ್ಲಾ ತೀರ್ಪುಗಳಿಗೆ ತಲೆಬಾಗಿ, ಅವರ ಸಲಹೆಯನ್ನೂ ಗೌರವಿಸುತ್ತಾ, ಧಾರ್ಮಿಕ ಸಂಗತಿಗಳ ವಿಚಾರಕ್ಕೆ ಬಂದಾಗ ಧರ್ಮದ ಒಳಗೂ ಕೆಲವೊಂದು ಕಾನೂನು, ನಿಯಮಗಳು ಇದೆಯಲ್ಲಾ, ಅದುವೇ ದೇವಸ್ಥಾನದಲ್ಲಿ ಪರಮಶ್ರೇಷ್ಟವಾಗಬೇಕಲ್ಲಾ ?.ಗಮನಿಸಿ,ಬೇರೆ ಧರ್ಮಗಳಲ್ಲಿ ದೇವಸ್ಥಾನಕ್ಕೆ ನೀಡುವ ಬಾಕಿ ಇದ್ದರೆ ಧಫನ ಮಾಡಲೂ ಬಿಡುವುದಿಲ್ಲ, ಧರ್ಮದ ಕಾನೂನೇ ಅಲ್ಲಿ ಮುಖ್ಯವಾಗುತ್ತದೆ.ಕೆಲವು ಧರ್ಮಗಳಿಗೆ ಅವರದೇ ಆದ ಕಾನೂನುಗಳೂ ಇದೆ.ಇದೆಲ್ಲಾ ತಪ್ಪು ಎನ್ನಲು ಆಗದು.ಹಾಗಿದ್ದರೂ ಇಲ್ಲಿ ಮಾತ್ರವೇ ಏಕೆ ವಿವಾದ ?
ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ, ಜನರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ, ಸಮಾಜ ಅಸ್ತಿರವಾಗುತ್ತಿದೆ ಅಷ್ಟೇ.
ಸಮಾಜವನ್ನು ಬದಲಾಯಿಸುವ ಓಘದಲ್ಲಿ ,ನಂಬಿಕೆ ಕಳಚಿಕೊಳ್ಳುವ ಈ ಹೊತ್ತಿನಲ್ಲಿಯೂ ಕನಸುಗಳು ಕಮರಿಹೋಗಿಲ್ಲ.
- - - - - - - - ------------------------------------------------------------------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ