ಅವರು ಕೇವಲ ಮೇಷ್ಟ್ರು ಅಲ್ಲ.ಬದುಕನ್ನು ರೂಪಿಸುವ ಮೇಷ್ಟ್ರು ಅವರು.ಆ ಮೇಷ್ಟ್ರು ಎಲ್ಲೇ ಸಿಕ್ಲಿ ಅವ್ರಿಗೊಂದು ಗೌರವ ಬೇರೇನೇ. ಅದಕ್ಕೇ ಹೇಳಿದ್ದು "ಮುಂದೆ ಗುರಿ ಹಿಂದೆ ಗುರು "ಅಂತ.ಗುರುವಿನ ಬಲವಿದ್ದರೆ ಗುರಿ ಸಾಧಿಸಿಂದತೆಯೇ.ಹಾಗೇ ನನ್ನ ಬದುಕಿಗೆ ದಾರಿ ತೋರಿದ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೊಂದು ಶುಭಾಶಯ.
ಅಂದ ಹಾಗೆ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಓದಿದ್ದು ಮನೆ ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಮಿಲದಲ್ಲಿ.ಅಲ್ಲಿಂದ ನಂತ್ರ ಐದನೇ ಕ್ಲಾಸ್‌ನಿಂದ ಏಳನೇ ಕ್ಲಾಸ್‌ವರೆಗೆ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರಿನಲ್ಲಿ. ಆ ನಂತರ ಹೈಸ್ಕೂಲಿಗೆ ಮನೆಯಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ.ಈ ಶಾಲೆಯನ್ನು ಮಾತ್ರಾ ನಾನು ಯಾವಾಗಲೂ ನೆನಪಿಸಿಕೊಳ್ಳಲೇ ಬೇಕು.ಇಲ್ಲಿನ ಎಲ್ಲಾ ಮೇಷ್ಟ್ರುಗಳನ್ನೂ ಕೂಡಾ.ಇಲ್ಲಿ ನಾಲ್ಕು ಸಾಲು ಬರೆಯುವುದಕ್ಕೆ ಕಾರಣವಾಗಿದ್ದೇ ಈ ಶಾಲೆ.ಹಾಗಂತ ಉಳಿದ ಶಾಲೆ ಅಕ್ಷರ ಕಲಿಸಿಲ್ಲ ಅಂತ ಅಲ್ಲ.ಅಲ್ಲಿನ ಮೇಷ್ಟ್ರುಗಳೂ ತಿದ್ದಿದ್ದಾರೆ.( ಈ ಬಾರಿ ಬಾಳಿಲದಲ್ಲಿ ನನಗೆ ಕಲಿಸಿದ ಮೇಷ್ಟ್ರು ಪಿ.ಎನ್.ಭಟ್ಟರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಿಕ್ಕಿದೆ.)
ಸುಬ್ರಹ್ಮಣ್ಯ , ವಿವೇಕಾನಂದ ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಾಗಿದೆ.ಈಗ ಇಲ್ಲಿದ್ದೇನೆ. ಅಂತೂ ಎಲ್ಲಾ ಮೇಷ್ಟ್ರುಗಳನ್ನು ನೆನಪಿಸಿಕೊಂಡು ಅವರಿಗೊಂದು ಥ್ಯಾಕ್ಸ್ ಹೇಳಿದ ನಂತ್ರ ನಮ್ಮೂರ ಕಡೆ ನೋಡಿದಾಗ ಅಲ್ಲೊಂದು ಗ್ರಾಮದಲ್ಲಿ ಹೆಚ್ಚು ಸಂಖ್ಯೆಯ ಮೇಷ್ಟ್ರು ಇದ್ದಾರೆ ಅಂತ ಗೊತ್ತಾಯ್ತು. ಅವರು ಹಳ್ಳಿ ಮೇಷ್ಟ್ರಲ್ಲ . . ಅದು ಮೇಷ್ಟ್ರ ಹಳ್ಳಿ.ಈ ಹಳ್ಳಿಯಲ್ಲಿನ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು.
* * * * * * * * * * * * * * * * * * * *
ಅದು ಏನೇಕಲ್ ಎಂಬ ಪುಟ್ಟ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಗ್ರಾಮ ಹೇಳಿಕೊಳ್ಳುವುದಕ್ಕೆ ಪುಟ್ಟ ಗ್ರಾಮವಾದರೂ ಈ ಹಳ್ಳಿಯ ಕೊಡುಗೆ ದೊಡ್ಡದೇ.ಈ ಊರಿನಲ್ಲಿರುವ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು. ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ರಾಜ್ಯದ ವಿವಿದೆಡೆ ಶಿಕ್ಷಕರಾಗಿ ಇಂದು ದುಡಿಯುತ್ತಿದ್ದಾರೆ.ಅಷ್ಟೆ ಏಕೆ ವಿದೇಶದಲ್ಲೂ ಉಪನ್ಯಾಸಕರಾಗಿ ಕೆಲಸ ಮಾಡೋದ್ರಲ್ಲೂ ಇಲ್ಲಿನ ಜನ ಇದ್ದಾರೆ.ಈ ಊರಿಗೆ ದಿವಂಗತ ಪಿ.ಎಸ್.ರಾಮಣ್ಣ ಗೌಡರೇ ಮೊದಲ ಶಿಕ್ಷಕರು. ಆ ಬಳಿಕ ಇಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡೋಕ್ಕೆ ಇಲ್ಲಿನ ಹೈದರು ಶುರುಮಾಡಿದರು.ಹಿರಿಯರ ಮಾದರಿಯ ಹೆಜ್ಜೆ , ಮುಂದಿನವರಿಗೆಲ್ಲಾ ದಾರಿದೀಪವಾಯಿತು.ಹಾಗಾಗಿ ಶಿಕ್ಷಕರಾಗುವವರ ಸಂಖ್ಯೆ ಇಲ್ಲಿ ಬೆಳೆಯುತ್ತಲೇ ಹೋಯಿತು.ಕಳೆದ 2 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಹಳ್ಳಿಯಲ್ಲಿ 165 ಜನ ಶಿಕ್ಷಕರು ಪಟ್ಟಿಯಲ್ಲಿ ಸಿಕ್ಕಿದ್ದಾರೆ.
ಇದ್ಯಾಕೆ ಇಲ್ಲಿ “ಗುರು”ತ್ವಾಕರ್ಷಣ ಬಲ ? ಅಂತ ಕೇಳಿದ್ರೆ , ಹಿರಿಯರ ಮಾರ್ಗದರ್ಶನ ಮತ್ತು ಅವರ ಆದರ್ಶದ ಹೆಜ್ಜೆಗಳ ಪ್ರೇರೇಪಣೆ ಒಂದು ಕಡೆಯಾದ್ರೆ ಇಲ್ಲಿನ ಯುವಕ ಮಂಡಲದ ಪಾತ್ರವೂ ಮುಖ್ಯವಾಗಿದೆಯಂತೆ.ಯುವಕ ಮಂಡಲದಲ್ಲಿ ಯುವಕರು ಜೊತೆಯಾಗಿ ಸೇರಿದಾಗ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಹಿರಿಯರ ಪ್ರೋತ್ಸಾಹ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಯಿತು ಅದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೇ ಇರುವ ಭವಿಷ್ಯ ಮನಗಂಡು ಶಿಕ್ಷರಾದರು ಅಂತಾರೆ ಇವರು.ಇದರ ಜೊತೆಗೆ ಈ ಪುಟ್ಟ ಗ್ರಾಮವು ಆರ್ಥಿಕವಾಗಿಯೂ ಹಿಂದಿತ್ತು.ಹೀಗಾಗಿ ಉನ್ನತ ಶಿಕ್ಷಣವು ಕನಸಿನ ಮಾತಾಗಿತ್ತು.ಜೊತೆಗೆ ಬಹುತೇಕ ಮನೆಯವರು ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಓದಿದ ಮಂದಿಗೆ ಉದ್ಯೋಗವೂ ಬೇಗನೆ ಬೇಕಿತ್ತು. ಹೀಗಾಗಿ ಕಡಿಮೆ ವ್ಯಾಸಾಂಗ ಮಾಡಿ ಬೇಗನೆ ಉದ್ಯೋಗ ಗಿಟ್ಟಿಸಿಕೊಳ್ಳುವ ಅನಿವಾರ್ಯತೆಯೂ ಇತ್ತು.ಆಗ ಶಿಕ್ಷಣ ಕ್ಷೇತ್ರ ಇವರನ್ನು ಆಕರ್ಷಿಸಿದೆ.
ಈಗ ನೋಡಿದರೆ ಈ ಪುಟ್ಟ ಗ್ರಾಮ ಅಷ್ಟೊಂದು ಹಿಂದೆ ಉಳಿದಿಲ್ಲ. ಆದರೂ ಕೂಡಾ ಇಂದಿನ ಹೆಚ್ಚಿನ ಯುವಕರೂ ಶಿಕ್ಷಣ ಕ್ಷೇತ್ರದತ್ತಲೇ ಆಕರ್ಷಿತರಾಗಿದ್ದಾರೆ.ಮೊದಲಿನ ಸಮೀಕ್ಷೆಯಂತೆ 165 ಜನ ಶಿಕ್ಷಕರಿದ್ದರೆ ಆ ಬಳಿಕವೂ ಇದೇ ಕ್ಷೇತ್ರಕ್ಕೆ ಬರುವುದಕ್ಕೆ ಟ್ರೈನಿಂಗ್ ಮಾಡಿದವರು ಇದ್ದಾರೆ.ಇನ್ನು ಕಂಪ್ಯೂಟರ್ ತರಬೇತಿ ಶಿಕ್ಷಕರು ಇಲ್ಲಿದ್ದಾರೆ. ಇವರೆಲ್ಲಾ ಸೇರಿದಾಗ 250 ರ ಗಡಿ ದಾಡುತ್ತದೆ. ಇನ್ನೂ ಈ ಏನೇಕಲ್ಲಿನಲ್ಲಿ ವಿಶೇಷ ಅಂದ್ರೆ ಸುಮಾರು 50 ಕ್ಕೂ ಅಧಿಕ ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರೋದು ಗಮನಾರ್ಹವಾಗಿದೆ. 1984 ರ ಸುಮಾರಿಗೆ ಒಂದೇ ವರ್ಷದಲ್ಲಿ 22 ಜನರು ಶಿಕ್ಷಕರಾಗಿ ನೇಮಕವಾದದ್ದು ಇಲ್ಲಿನ ಹೆಮ್ಮೆಗೆ ಇನ್ನೊಂದು ಗರಿ.
ಹಾಗಂತ ಈ ಪುಟ್ಟ ಗ್ರಾಮದ ಜನಸಂಖ್ಯೆ ಸುಮಾರು 2000. ಇಲ್ಲಿನ ಮನೆ ಹಾಗೂ ಜನಸಂಖ್ಯೆ ಆಧಾರವನ್ನು ನೋಡಿದರೆ ಸರಾಸರಿ ಮನೆಗೊಬ್ಬರಂತೆ ಇಲ್ಲಿ ಶಿಕ್ಷಕರಿದ್ದಾರೆ. ಅದು ಮಾತ್ರ ಅಲ್ಲ, ಇನ್ನು ಸರಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ , ಯೋಧರಾಗಿ , ಬ್ಯಾಂಕ್ ಅಧಿಕಾರಿಗಳಾಗಿ , ಪ್ರಾಂಶುಪಾಲರಾಗಿಯೂ ಸೇವೆ ಮಾಡೋವವರು ಈ ಊರಲ್ಲಿ ಇದ್ದಾರೆ.ಇನ್ನೂ ವಿಶೇಷ ಅಂದ್ರೆ ವಿದೇಶದಲ್ಲೂ ಉಪನ್ಯಾಸಕರಾಗಿ ಸೇವೆ ಮಾಡೋರು ಇದೇ ಏನೇಕಲ್ಲಿನ ಮಂದಿ ಇದ್ದಾರೆ.
ಉದ್ಯೋಗ ಅಂತ ಅಂದ್ರೆ ಸಾಫ್ಟ್‌ವೇರ್ ಅಂತ ತಿಳಿದಿರೋ ಇಂದಿನ ಕಾಲದಲ್ಲಿ ಪಾಠ ಹೇಳಲು , ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಜನ ಸಿಗದೇ ಇರೋ ಈ ವೇಳೆಯಲ್ಲಿ ಅದರಲ್ಲೂ ಕೆಲವು ವಿಷಯಗಳನ್ನು ಬೋಧಿಸಲು ಅಧ್ಯಾಪರುಗಳೇ ಸಿಗುತ್ತಿಲ್ಲವಾಗುತ್ತಿರುವ ಇಂದಿನ ದಿನದಲ್ಲಿ ಏನೇಕಲ್ ಎಂಬ ಪುಟ್ಟ ಗ್ರಾಮದ ಜನತೆ ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹ್ಯಾಟ್ಸ್ ಅಪ್ ಏನೇಕಲ್ ಪ್ಯೂಪಲ್ಸ್. ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ನೀಡುತ್ತಿರುವ ಈ ಗ್ರಾಮ ನಿಜಕ್ಕೂ ರಾಜ್ಯದ ಹೆಮ್ಮೆ.
. . . . . . . . . .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ