13 ಜೂನ್ 2009

ಇಲ್ಲಿ ಕಣ್ಣೀರು ಬತ್ತಿ ಹೋಗಿದೆ..



ಆ ತಾಯಿಯ ಕಣ್ಣೀರು ಬತ್ತಿ ಹೋಗಿತ್ತು.. ಮುಖದಲ್ಲಿ ಒಣ ನಗು.. ಹೃದಯದಲ್ಲಿ ಭಾರವಾದ ನೋವು... ಆದರೂ ಬದುಕು ಅನಿವಾರ್ಯ ಏಕೆಂದರೆ ಆ ಮಕ್ಕಳು ಇದ್ದಾರಲ್ಲ... ಇದು ಕತೆಯಲ್ಲ ನಿಜ ಜೀವನದ ಒಂದು ತುಣುಕು ಅಷ್ಟೇ.. ನಿಜಕ್ಕೂ ಭಯಾನಕವೆನಿಸುತ್ತದೆ... ಮನಸ್ಸು ಕರಗಿಹೋಗುತ್ತದೆ... ಆ ಎಲ್ಲಾ ಘಟನೆಗಳನ್ನು ಕೇಳುತ್ತಾ ಮನಸ್ಸಿಗಾದ ಅನುಭವವನ್ನು ಇಲ್ಲಿ ದಾಖಲಿಸಬೇಕು ಎಂದೆನಿಸಿತು....

ಪೂರ್ವ ನಿಗದಿಯಂತೆ ಇಂದು ಮುಂಜಾನೆ ಕೊಕ್ಕಡ ಬಳಿಯ ಪಡ್ರಮೆ ಕಡೆಗೆ ಹೋಗುವುದಕ್ಕಿತ್ತು. ಆಗಲೇ ಅಲ್ಲಿ ಎಂಡೋಸಲ್ಫಾನ್ ಇಲ್ಲಿಯ ಗೇರು ತೋಟಕ್ಕೆ ಕಳೆದ ೨೦ ವರ್ಷ ಹಿಂದೆ ಸಿಂಪಡಿಸಿದ್ದರ ಪರಿಣಾಮವನ್ನು ಇಂದು ಅಲ್ಲಿಯ ಜನ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಹಾಗೂ ಅಲ್ಲಿನ ಮಿತ್ರರು ಹೇಳಿದ್ದರು. ಹಾಗಾಗಿ ಆ ಬಗ್ಗೆ ಕುತೂಹಲವಿತ್ತು. ಈ ಮೊದಲು ಚಿತ್ರದಲ್ಲಿ ಅಂತಹವುಗಳನ್ನು ಓದಿದ್ದೆನೇ ಹೊರತು ನೋಡಿರಲಿಲ್ಲ.

ನಾವು ಮೊದಲಿಗೆ ಹೋದದ್ದು ಒಂದು ಶಾಲೆಗೆ.. ಅಲ್ಲಿ ಮಕ್ಕಳು ಕುಣಿದು ಕುಪ್ಪಳಿಸಬೇಕಾಗಿತ್ತು. ಆಧರೆ ಕೆಲವರಿಗೆ ಬುದ್ದಿ ಭ್ರಮಣೆ.. ಇನ್ನೂ ಕೆಲವರಿಗೆ ಗಂಭಿರತೆ ಇಲ್ಲ... ಮುಂದೆ ಸಾಗಿತು ನಮ್ಮ ತಂಡ.. ಅಲ್ಲಿನ ಪರಿಸ್ಥಿತಿ ಕಂಡಾಗ ಮನಸ್ಸು ಕರಗಿತು.. ಆತ ೨೧ ವರ್ಷದ ಹುಡುಗ... ಏಳಲಾಗದು.... ಕೂರಲಾಗದು... ಅದೂ ಬಿಡಿ ಅತ್ಯಂತ ವಿಕಾರವಾಗಿ ಮಲಗಿಕೊಂಡಿರುವ ಸ್ಥಿತಿ... ಆತನ ತಾಯಿಯಿಂದಲೇ ಎಲ್ಲಾ ಆರೈಕೆ.. ಸರಿಯಾಗಿ ನೋಡಿದರೆ ಮನೆಯವರ ಜವಾಬ್ದಾರಿಯನ್ನು ಹೊರಬೇಕಾದ ಪ್ರಾಯ.... ಇನ್ನೂ ಮುಂದೆ ಹೋದಾಗ ಅದು ಇನ್ನೂ ಭೀಕರ ಅಲ್ಲಿ ಮಾನಸಿಕ ಅಸ್ವಸ್ಥರಾದ ಮನೆ ಮಂದಿ... ಏನೇನೋ ಕತೆ.. ಅಲ್ಲಿಂದಲೂ ಮುಂದೆ ಹೋದಾಗ.... ಕರುಳು ಹಿಂಡುವ ದೃಶ್ಯ.. ಅದಿನ್ನೂ ಒಂದೂವರೆ ವರ್ಷದ ಬಾಲೆ.. ಅದರ ಬೆಳವಣಿಗೆ ಕುಂಠಿತ.. ಪಾಪ ಆ ಮುಗ್ದ ಬಾಲೆ ಈ ಲೋಕಕ್ಕೆ ಏನು ಅನ್ಯಾಯ ಮಾಡಿತ್ತು...? ಸರಿ ಅಲ್ಲಿಂದಲೂ ಮುಂದೆ ಹೋದಾಗ ವಿಕಾರವಾಗಿ ನಗುವ ಮುಖ ... ಮಲಗಿದಲ್ಲಿಂದ ಏಳಲಾಗದ ಸ್ಥಿತಿ... ಅಬ್ಬಾ ಇದಿಷ್ಟು ನೋಡಿದಾಗಲೇ ಸಾಕೆನಿಸಿತು.. ಆದರೆ ಇನ್ನೂ ಆ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಇಂತಹ ವಿವಿದ ಕಾಯಿಲೆಗಳಿಂದ ಇದ್ದರು.. ಆದರೆ ಮನಸ್ಸು ಆಗಲೇ ಸಂಪೂರ್ಣ ಕರಗಿಹೋಯಿತು....

ನನ್ನೊಂದಿಗೆ ಹೋರಾಟಗಾರರಿದ್ದರು.. ಅವರು ಹೇಳಿದ ಮಾತು ಕೇಳಿ ನಾನು ಮೂಕನಾದೆ.... ನಮ್ಮ ಸಾಧನೆಯೇನೂ ಇಲ್ಲ ಎನಿಸಿತು.. ಮಾತ್ರವಲ್ಲ ಮಾಧ್ಯಮಗಳು ಇಂದು ಪ್ರಭಾವ ಶಾಲಿಯಲ್ಲವೇ ಎಂದು ಮನದೊಳಗೆ ಪ್ರಶ್ನೆ ಮೂಡಿತು..

ಇವರ ಕತೆ ಕೇಳಿ.. ಈ ವ್ಯಕ್ತಿ ಇಲ್ಲಿನ ಸ್ಥಿತಿಯನ್ನು ಸಂಪೂರ್ಣ ಚಿತ್ರೀಕರಿಸಿ ಮಂತ್ರಿಗಳಿಗೆ ತೋರಿಸಲು ರಾಜಧಾನಿಗೆ ಹೋಗಿದ್ದರಂತೆ.. ಆದರೆ ಅಲ್ಲಾದ ಅನುಭವ ಅವರಲ್ಲಿದ್ದ ಎಲ್ಲಾ ಆಸೆಗಳಿಗೆ ತಣ್ಣೀರು ಬಿತ್ತಂತೆ.. ಹಾಗೆ ಪತ್ರಿಕಾಗೋಷ್ಠಿ ಮಾಡೋಣ ಎಂದರೆ ಅವರ ಕಿಸೆಯಲ್ಲಿದ್ದುದು ಕೇವಲ ಒಂದುಸಾವಿರವಂತೆ.. ಹಾಗಿದ್ದರೂ ಅವರು ಮತ್ತೆ ಊರಿಗೆ ಬಂದು ಹೋರಾಟ ಆರಂಭಿಸಿದರು. ಸ್ವತ: ಈ ವ್ಯಕ್ತಿಯೇ ರೋಗ ಪೀಡಿತ.. ಒಂದು ಕಣ್ಣು ದೃಷ್ಠಿ ಕಳಕೊಂಡಿದೆ ಇನ್ನೊಂದು ಶೇಕಡಾ ೨೫ ಮಾತ್ರಾ ಕಾಣುತ್ತದೆ ಇದು ಯಾವಾಗ ಮಂದವಾಗುತ್ತದೆ ಅಂತ ಗೊತ್ತಿಲ್ಲ ಎನ್ನುವ ಈ ವ್ಯಕ್ತಿಗೆ ಇದರಿಂದ ಏನೂ ಪ್ರಯೋಜನವಿಲ್ಲ.ಈ ಹೋರಾಟ ಮಾಡುವುದರಿಂದ ಫಲ ಸಿಕ್ಕುತ್ತದೆ ಎನ್ನುವ ವಿಶ್ವಾಸ ಇಲ್ಲದಿದ್ದರೂ ಅವರ ಮನೆಯಲ್ಲಿರುವ ಅವರ ತಾಯಿ ಸುಮ್ಮನಿದ್ದರೆ ಕೇಳುತ್ತಾರಂತೆ .. ಇಂದು ಅವನಿಗೆ ಕಣ್ಣು ಕಾಣುವುದಿಲ್ಲ ಅಂತ.. ಹಾಗಾಗಿ ಮನೆಯವರ ಸಮಾಧಾನ ಮತ್ತು ಆತನ ಆತ್ಮ ತೃಪ್ತಿಗಾಗಿ ಈ ಹೋರಾಟ ಮಾಡುತ್ತಾರಂತೆ.. ಏಕೆಂದರೆ ಇಂದಿನ ಜನಪ್ರತಿನಿಧಿಗಳು ಈ ಸಮಾಜಕ್ಕೆ ನಾಲಾಯಕ್ಕು.. ನಾವು ಆರಿಸಿ ಕಳಿಸುತ್ತೇವಲ್ಲಾ ನಾವೇ ಮೂರ್ಖರು..

ಅಲ್ಲಿ ಶ್ರೀಮಂತ ದೇವರುಗಳಿಗೆ ಕೋಟಿ ಕೋಟಿ ಸುರಿಯುವ ನಾಯಕರು ಒಂದೆಡೆ.... ಇನ್ನೊಂದೆಡೆ ನಾಯಾಲಕ್ಕು ಎಂದು ಮಾಧ್ಯಮದ ಮಂದಿಗೆ ಬರೆಯುವ ಮಂತ್ರಿಗಳು ಇನ್ನೊಂದು ಕಡೆ . ಇಂತಹವರು ಒಮ್ಮೆಯಾದರೂ ಈ ಪ್ರದೇಶಕ್ಕ ಭೇಟಿ ನೀಡಿ ಕನಿಷ್ಠ ಸಾಂತ್ವಾನವನ್ನಾದರೂ ಹೇಳುವ ಸೌಜನ್ಯ ಇವರಲ್ಲಿದೆಯಾ..? ಕೇವಲ ಅಲ್ಲಿಕೂತು ಕುರ್ಚಿ ಕಾಯುವ ಕೆಲಸ ಮಾಡುವ ನಾಯಕರಿಂದ ಏನನ್ನು ಬಯಸಬಹುದು ಹೇಳಿ...? ಅದೇ ಕೆರಳದ ಸರಕಾರ ಎಲ್ಲಾ ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿದೆ... ಆದರೆ ಇಲ್ಲಿ ನಮ್ಮ ನಾಯಕರ ಗಮನಕ್ಕೇ ಬಂದಿಲ್ಲ ಕೇಳಿದರೆ ಕೋಟಿ ಲೆಕ್ಕ... ಅತಿ ಶೀಘ್ರದಲ್ಲಿ ಪರಿಹಾರ.. ಎನ್ನುವ ಬೊಗಳೆ...
ಆದರೂ ಇಲ್ಲಿಯ ಜನ ಕಣ್ಣೀರು ಬತ್ತಿ ಹೋದರೂ ಬದುಕು ಸಾಗಿಸುತ್ತಿದ್ದಾರಲ್ಲಾ.. ಅದು ಗ್ರೇಟ್... ದೇವರಿದ್ದಾನೆ ಎಂದಾದರೆ ಅಂತಹವರಿಗೆ ಒಲಿಯಬೇಕು. ಅದು ಬಿಟ್ಟು ಶ್ರೀಮಂತರನ್ನು ಮಾತ್ರಾ ಕಾಯುವ ಕೆಲಸ ಮಾಡಬೇಡ ದೇವಾ....


1 ಕಾಮೆಂಟ್‌:

Sunil HH ಹೇಳಿದರು...

ಈ ನಿಮ್ಮ ಲೇಖನವನ್ನು Tv9 ಗೆ ಕಳುಹಿಸಿ ನೋಡಿ ಅವರಲಿ ಮನವಿ ಮಾಡಿದರೆ ಇದನು ಚಿತ್ರೀಕರಿಸಿ ಪ್ರಕಟಿಸಬಹುದು.. ಅದರಿಂದ ಏನಾದರೂ ಬದಲಾವಣೆ ಅಗುತ ನೋಡೋಣ.