15 ಮಾರ್ಚ್ 2009

ಇದು ದೋಸೆ ಜಾತ್ರೆ. . . .




ಬೆಳಗ್ಗೆ ಪ್ಲಾನ್ ಹಾಕಿ ಹೊರಡೋಣ ಅಂದುಕೊಂಡಾಗಲೇ ಮನೆಯಿಂದ ಆದೇಶವಾಗಿತ್ತು. ಅದೊಂದು ದೈವಸ್ಥಾನಕ್ಕೆ ಹೋಗಬೇಕು.. ಆ ನಂತ್ರವೇ ಇತರ ಕೆಲಸ.... ಸರಿ ಇಲ್ಲ ಅನ್ನುವುದಕ್ಕಾಗಲಿಲ್ಲ.ಪ್ಲಾನ್ ಉಲ್ಟಾ ಹೊಡೆಯಿತೋ ಅಂದುಕೊಂಡು ಕಾರಿನಲ್ಲಿ ಹೋಗುವಾಗಲೇ ಮಿತ್ರರಿಗೆ ದೂರವಾಣಿ ಮೂಲಕ ನನ್ನ ಪ್ರೋಗ್ರಾಂ ಮತ್ತು ಯಾವಾಗ ಮುಗಿದೀತು ಅಂತ ಕೇಳಿದೆ.ಬನ್ನಿ ಸಿಗುತ್ತೆ ನೆಗೆಟಿವ್ ಚಿಂತನೆ ಬೇಡ ಫಾಸಿಟವ್ ಆಗಿಯೇ ಬನ್ನಿ ಅಂದ. ಸರಿ ಸುಳ್ಯದಿಂದ ಹೊರಟಾಗಲೇ ಗಂಟೆ 12.. ಆದ್ರೂ ಒಳಗೆ ಅನುಮಾನ.. ಸಂಪಾಜೆ ಬಂದಾಗ ಇನ್ನೂ ಅನುಮಾನ... ಡಾಮರು ರಸ್ತೆ ಬಿಟ್ಟು ಒಳ ಹೋಗಬೇಕು ಅಂದರು ಮಿತ್ರ... ರಸ್ತೆ ನೋಡಿದ್ರೆ ಅಯ್ಯೋ ಅನಿಸಿತ್ತು. ಕಾರು ಓಲಾಡುತ್ತಾ ಸಾಗಿತು.. ಮುಂದೆ... 7 ಕಿ ಮೀ ಒಳಗೆ ಕಾಡಿನಲ್ಲಿ ಹೋದಾಗ ಅಬ್ಬಾ.... ಬಂತು ಆ ಸ್ಟೋರಿಯ ಪ್ರದೇಶ.... ...ಮುಗೀತೋ ಇಲ್ವೋ...?? ಅಬ್ಬಾ ಇದೆ... ಕೊನೆಯ 10 ನಿಮಿಷ......

ಅಲ್ಲಿ ಜಾತ್ರೆ...!!


ಸುಳ್ಯದ ಸಂಪಾಜೆ ಸಂಪಾಜೆಯಿಂದ ತಿರುಗಿ ಸುಮಾರು 7 ಕಿಮೀ ದೂರ ಕಾನನದ ನಡುವೆ ಸಂಚರಿಸುತ್ತಾ ಸಾಗಿದಾಗ ಕೊಡಗಿನ ಗಡಿಭಾಗದ ದಟ್ಟ ಕಾನನದ ಪ್ರದೇಶದಲ್ಲಿ ಅರೆಕಲ್ ಎಂಬ ಪ್ರದೇಶವಿದೆ. ಹಕ್ಕಿಗಳ ಇಂಚರ ಬಿಟ್ಟರೆ ಬೇರೆ ಯಾವುದೇ ಸದ್ದು ಗದ್ದಲಗಳಿಲ್ಲದ ಈ ಭಾಗದಲ್ಲಿ ಅಯ್ಯಪ್ಪ ದೇವರ ಗುಡಿಯಿದೆ. ಇಲ್ಲಿನ ಜಾತ್ರೆಯ ಸಂದರ್ಭದಲ್ಲಿ ದೋಸೆ ಎರೆಯುವ ಆಚರಣೆ ನಡೆಯುತ್ತದೆ.ಊರಿನ ಮಹಿಳೆಯರೆಲ್ಲಾ ಸೇರಿಕೊಂಡು ಸಾಮೂಹಿಕವಾಗಿ ದೋಸೆಯನ್ನು ಎರೆದು ನಂತರ ಸಂಜೆಯ ವೇಳೆಗೆ ಅದನ್ನು ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ.ಅದಕ್ಕಾಗಿ ದೇವಸ್ಥಾನದಿಂದ ಅಕ್ಕಿ ಹಾಗೂ ಎಣ್ಣೆಯನ್ನು ಕೊಡುತ್ತಾರೆ.

ಅಯ್ಯಪ್ಪ ಸ್ವಾಮಿಯು ಹುಲಿ ಹಾಲಿಗಾಗಿ ಕಾಡಿಗೆ ಬಂದಿದ್ದ ಸಂದರ್ಭದಲ್ಲಿ ವಿಶ್ರಮಿಸಿದ ಸ್ಥಳ ಇದಾದ್ದರಿಂದ ಇಲ್ಲಿ ಅಯ್ಯಪ್ಪನ ಗುಡಿ ನಿರ್ಮಿಸಲಾಗಿದೆ ಎಂಬುದು ಇಲ್ಲಿನ ಇತಿಹಾಸ.ಅದರ ಹೊರತಾಗಿ ಬೇರಾವುದೇ ಪುರಾಣಗಳು , ಕಥೆಗಳು ಇಲ್ಲಿ ಅಲಭ್ಯ. ಆದರೆ ಈ ದೇವಸ್ಥಾನವು ಮಲೆಕುಡಿಯ ಹಾಗೂ ಕೊಡಗಿನ ಪಾಂಡೀರ ಜನಾಂಗದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ಅದಕ್ಕಿಂತಲೂ ಹೆಚ್ಚಾಗಿ ಬಡವರ ನಂಬಿಕೆಯ ಕೇಂದ್ರ ಪರಿಸರದ ಆರಾಧನೆಯ ತಾಣ. ಇಲ್ಲಿಗೆ ಮಲೆಕುಡಿಯರು ಸಂಪಾಜೆ ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದರೆ ಪಾಂಡೀರ ಜನಾಂಗದವರು ಕೊಡಗಿನ ಮಡಿಕೇರಿಯ ಗಾಳಿಬೀಡಿನಿಂದ ಬರುತ್ತಾರೆ.ಅತ್ಯಂತ ಶ್ರದ್ಧಾ ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದರ್ಥದಲ್ಲಿ ಇಲ್ಲಿ ಜಾತ್ರೆ ಎಂದರೆ ವೃತ. ಜಾತ್ರೆಯ ದಿನ ಈ ದೇವಸ್ಥಾನಕ್ಕೆ ಸಂಬಂಧ ಪಟ್ಟ 18 ಕುಂಟುಂಬದವರು ಬೆಳಗಿನಿಂದಲೇ ಉಪವಾಸವಿರುತ್ತಾರೆ. ಅಂದರೆ ವೃತದಲ್ಲಿರುತ್ತಾರೆ. ಅವರಿಗೆ ಸಂಜೆಯ ವೇಳೆಗೆ ಫಲಹಾರ ಅಥವಾ ದೋಸೆಯ ಆಹಾರವೊಂದೇ ಆ ದಿನದ ಊಟ. ಮಾತ್ರವಲ್ಲ ಅವರು ಆ ದಿನವಿಡೀ ಬಾಳೆ ಎಲೆಯಲ್ಲಿ ಊಟ ಮಾಡುವಂತಿಲ್ಲ. ಅದಕ್ಕಾಗಿ ಕಾಡಿನಲ್ಲಿ ದೊರೆಯುವ ಎಲೆಯೊಂದನ್ನು ತಂದು ಅದರಲ್ಲಿ ದೋಸೆಯನ್ನು ತಿನ್ನುತ್ತಾರೆ.ಈ ಉಪವಾಸವನ್ನು ಪಟ್ನಿ ಅಂತ ಕರೆಯಲಾಗುತ್ತದೆ.ದೇವರ ಸೇವೆಗಾಗಿ ಇಲ್ಲಿ ಉಪವಾಸ ಆಚರಿಸಲಾಗುತ್ತದೆ.ಈ ಉಪವಾಸಕ್ಕಾಗಿಯೇ ದೋಸೆ ತಯಾರಾಗಬೇಕು.ವಿಶೇಷ ಇರುವುದು ಇಲ್ಲಿ. ಕೇವಲ 18 ಕುಟುಂಬಗಳ ಉಪವಾಸದ ವೃತಕ್ಕೆ ದೇವಸ್ಥಾನದಿಂದ ಕೊಡಮಾಡುವ ಅಕ್ಕಿ ಹಾಗೂ ಎಣ್ಣೆಯನ್ನು ಊರಿನ ಎಲ್ಲಾ ಮಹಿಳೆಯರು ಮನೆಗೆ ಕೊಂಡೊಯ್ದು ಹಿಟ್ಟನ್ನು ತಯಾರಿಸಿ ನಂತರ ದೇವಸ್ಥಾನದ ವಠಾರಕ್ಕೆ ಬಂದು ಸಾಮೂಹಿಕವಾಗಿ ದೋಸೆಯನ್ನು ಎರೆಯುವ ಕೆಲಸವನ್ನು ಮಾಡುತ್ತಾರೆ.ಹೀಗೆ ದೋಸೆ ಎರೆಯುವ ಸಂದರ್ಭದಲ್ಲೇ ಇರಬಹುದು ಅಥವಾ ಇನ್ನಿತರ ಕೆಲಸ ಮಾಡುವ ವೇಳೆ ಮಾತನಾಡುವ ಹಾಗಿಲ್ಲ.ಅದಕ್ಕಾಗಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಪದ್ದತಿ ಇಲ್ಲಿದೆ.ಹೀಗೆ ತಯಾರಾದ ದೋಸೆಯನ್ನು ಇಲ್ಲೇ ಮುಚ್ಚಿಡಲಾಗುತ್ತದೆ. ನಂತರ ರಾತ್ರಿ ವೇಳೆ ದೇವರ ಪೂಜೆಯ ಬಳಿಕ 18 ಕುಟುಂಬಸ್ಥರಿಗೆ ಹಾಗೂ ಊರ ಮಂದಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಆಚರಣೆಯಿಂದ ಮಹಿಳೆಯರು ತೀರಾ ಸಂತಸವನ್ನು ಪಡುತ್ತಾರೆ.ಇನ್ನೊಂದು ಅಂಶವೆಂದರೆ ಇಲ್ಲಿ ಜಾತ್ರೆಯ ವೇಳೆ ಊಟಕ್ಕೆ ಹಲಸಿನ ಗುಜ್ಜೆ , ಹುರುಳಿ ಬಿಟ್ಟರೆ ಬೇರೆ ಪದಾರ್ಥಗಳನ್ನೂ ಮಾಡುವಂತಿಲ್ಲ.

ಈ ದೇವಸ್ಥಾನದ ಜಾತ್ರೆ ಆರಂಭವಾಗುವ ಮುನ್ನ ಗಾಳಿಬೀಡಿನಿಂದ ಅಂದರೆ ಸುಮಾರು 5 ರಿಂದ 10 ಕಿ ಮೀಗಳಷ್ಡು ದೂರ ದೇವಸ್ಥಾನಕ್ಕೆ ಸಂಬಂಧಪಟ್ಟವರು ಅಂದರೆ ತಕ್ಕಮಖ್ಯಸ್ಥರು ಕಾಲ್ನಡಿಗೆಯಲ್ಲಿ ಸಾಗಿ ಭಂಡಾರ ತಂದು ಪೂಜೆ ಮಾಡಲಾಗುತ್ತದೆ.ಇಲ್ಲಿನ ವಿಶೇಷವಾದ ಇನ್ನೊಂದು ಸಂಪ್ರದಾಯವೆಂದರೆ ಫಲಕ್ಕೆ ನಿಲ್ಲವುದು.ಅಂದರೆ ಮಕ್ಕಳಾಗದೇ ಇರುವವರು ಇಲ್ಲಿ ಬಂದು ಹರಕೆ ಹೇಳಿ ಸಿಂಗಾರದ ಎಸಳಿನ ಮೂಲಕ ಹರಕೆ ಹೇಳುವುದು. ಅದು ಈಡೇರುತ್ತದೋ ಇಲ್ಲವೋ ಎಂಬುದನ್ನು ಹೇಳಿಕೊಳ್ಳಲಾಗುತ್ತದೆ.ಮಾತ್ರವಲ್ಲ ಇಲ್ಲಿ ಸುಮಾರು 600 ರಿಂದ 900 ದಷ್ಟು ಕೋಳಿಗಳು ಹರಕೆ ರೂಪದಲ್ಲಿ ಬರುತ್ತದೆ.ರಾತ್ರಿ ವೇಳೆ ಕೊಡಗಿನ ಸಾಂಪ್ರದಾಯಿಕ ನೃತ್ಯಗಳು ಕೂಡಾ ನಡೆಯುತ್ತದೆ.ಈ ಎಲ್ಲಾ ಆಚರಣೆ ಮುನ್ನ ನಡೆಯುವ ಸಾಮೂಹಿಕ ದೋಸೆ ಎರೆಯುವ ಕಾರ್ಯಕ್ರಮಕ್ಕೆ ಊರಿನ ಜನರೆಲ್ಲಾ ಅತ್ಯಂತ ಶ್ರಧ್ದಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.ಹೀಗೆ ದೋಸೆ ಎರೆಯುವ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ.

ಇಲ್ಲಿ ದೇವರ ಬಗ್ಗೆಯಾಗಲಿ , ಆಚರಣೆಯ ಬಗ್ಗೆಯಾಗಲಿ ಮಾತನಾಡುವುದು ಬೇಡ. ಜಗತ್ತು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ದೇವರೂ ಹಾಗೆಯೇ ಅದೊಂದು ನಂಬಿಕೆ, ಶ್ರದ್ದೆ. ಗುಡಿಯೊಳಗೆ ಪೂಜೆ ಮಾಡಿ , ಇತ್ತ ಕಡೆ ಮಾಡುವ ಮೋಸ , ವಂಚನೆ, ಡೋಂಗಿಗಳ ಬದಲಾಗಿ ಬಡವರು ಆಚರಿಸುವ ಇಂತಹ ಆಚರಣೆಗಳು ಸಂಘಜೀವನವನ್ನು ಹೇಳಿಕೊಡುತ್ತದೆ ಮಾತ್ರವಲ್ಲ ಮಾನವೀಯ ಸಂಬಂಧಗಳನ್ನು ಹೇಳಿಕೊಡುತ್ತವೆ.ಇದು ಒಂದಿಷ್ಟು ಹಳ್ಳಿಗಳಲ್ಲಿ ಸಂಬಂಧಗಳು ಉತ್ತಮವಾಗಿ ಉಳಿಯಲು ಕೂಡಾ ಕಾರಣವಾಗಿವೆ. ಹಾಗಾಗಿ ಇಂತಹ ಕೆಲವು ಹಳ್ಳಿಗಳು ಇಂದು ನಗರದ ಬದುಕಿಗೆ ಕೂಡಾ ಉತ್ತಮ ಸಂದೇಶವನ್ನು ಕೊಡಬಲ್ಲುದು

ಇಂದು ಅಲ್ಲಲ್ಲಿ ಗಲಭೆಗಳು ನಡೆಯುತ್ತದೆ.ಜನಾಂಗದ ನಡುವೆ, ಧರ್ಮದ ನಡುವೆ ಅನಗತ್ಯ ಕಲಹಗಳು ನಡೆಯುತ್ತಲ್ಲಾ ಅವಕ್ಕೆಲ್ಲಾ ಏಕೆ ಈ ಜಾತ್ರೆಯೊಂದು ಆದರ್ಶವಾಗುವುದಿಲ್ಲ.?. ಎನ್ನವ ಪ್ರಶ್ನೆಯನ್ನು ನನ್ನೊಳಗೆ ಹಾಕಿಕೊಳ್ಳುತ್ತಾ ನಾವಲ್ಲಿಂದ ಹೊರಟು ಬಂದೆವು.

2 ಕಾಮೆಂಟ್‌ಗಳು:

ಮಿಥುನ ಕೊಡೆತ್ತೂರು ಹೇಳಿದರು...

ಜಾತ್ರೆಗಳೆಂದರೆ ಸುಮ್ಮನೆ ಮಾತಲ್ಲ.
ಧ್ವಜಾರೋಹಣದಂದು ಊರಿಗೆ ಬಂದವ ಅಥವಾ ಊರಿನಲ್ಲಿದ್ದವ ಧ್ವಜಾವರೋಹಣವಾಗುವವರೆಗೆ ಊರು ಬಿಟ್ಟು ಹೋಗಬಾರದು ಎಂಬ ನಂಬಿಕೆಯಿದೆ. ಅದು ತಪ್ಪು ನಂಬಿಕೆ. ಆದರೂ ಅದರ ಹಿಂದಿನ ಧ್ವನಿ; ಜಾತ್ರೆಗೆ ಕುಟುಂಬದವರು, ಬೇರೆ ಊರವರು ಬಂದಾಗ ಮನೆಮಂದಿಯೇ ಇರದಿದ್ದರೆ ಹೇಗೆ? ಜಾತ್ರೆ ಅಂದರೆ ಜನ ಸೇರುವುದು. ಬೇರೆ ಊರಿಗೆ ಹೋದರೆ ಜಾತ್ರೆಗೆ ಜನರೇ ಇಲ್ಲದಂತಾಗುತ್ತದಲ್ಲ? ಹೀಗಾಗಿ ಈ ನಂಬಿಕೆ.
ಜಾತ್ರೆ ಸಂದರ್ಭ ಒಂದೊಂದು ಮನೆಯವರಿಗೆ ದೇಗುಲದಲ್ಲಿ ಒಂದೊಂದು ಜವಾಬ್ದಾರಿಯಿರುತ್ತದೆ. ಅದನ್ನು ನಿಷ್ಟೆ, ಭಕ್ತಿಯಿಂದ ಪಾಲಿಸಬೇಕೆ. ಇಲಾಲು, ದೀಪ ಹಿಡಿಯುವುದು, ರಥ ಕಟ್ಟುವುದು, ಎಳೆಯುವುದು, ರಥದ ಮುಂದೆ ಕೆಲ ಮನೆಗಳಿಗೆ ಮೊದಲ ಪ್ರಸಾದದ ಮರ್ಯಾದೆ, ಊಟ ಬಡಿಸುವುದು, ಕಟ್ಟೆ ಪೂಜೆ ಮಾಡಿಸುವುದು, ಸೂಟೆದಾರದಲ್ಲಿ ಭಾಗವಹಿಸುವುದು ಹೀಗೆ...
ಪ್ರಿಯ ಪುಚ್ಚಪಾಡಿ ನಿಮ್ಮ ಲೇಖನ ಚೆನ್ನಾಗಿದೆ.

NATESH ಹೇಳಿದರು...

ಅಪರೂಪದ ಆಚರಣೆಯ ಈ ಜಾತ್ರೆಯ ವೈಶಿಷ್ಟ್ಯತೆಯ ಬಗ್ಗೆ ಚೆನ್ನಾಗಿ ಮಾಹಿತಿ ನೀಡಿದ್ದೀರಿ