22 ಫೆಬ್ರವರಿ 2009
ದಿಕ್ಕಿಲ್ಲದ ಪರಿಹಾರ....
ಏನು ಪರಿಹಾರ....?????
ರೈತ ಪರ ಸರಕಾರ ಎಂದು ಹೇಳಿಕೊಳ್ಳುವ ಯಾವುದೇ ಸರಕಾರಗಳು ರೈತ ಪರ ಇರುವುದು ಸ್ಪಲ್ಪ ಕಡಿಮೆಯೇ.ಇರಲಿ ಈಗ ಆ ಬಗ್ಗೆ ಯೋಚಿಸುವ ,ದಾಖಲಿಸುವುದಕ್ಕೆ ಹೋಗುವುದಿಲ್ಲ.ಕಾರಣ ನಾನು ಹೇಳಬೇಕೆಂದಿದ್ದು ,ದಾಖಲಿಸಬೇಕೆಂದಿದ್ದು ಅದಲ್ಲ.ಆದರೂ ಮೊದಲಿಗೆ ಈ ಅಕ್ಷರ ದಾಖಲಿಸಬೇಕಾಗಿ ಬಂದಿದೆ ಕಾರಣ ಕೊನೆಗೆ ತಿಳಿಸುವೆ.
ನಾನು ಅಡಿಕೆ ಬೇರುಹುಳಕ್ಕೆ ಸಂಬಂಧಿಸಿದ ವಿಚಾರ ಸಂಕಿರಣವೊಂದಕ್ಕೆ ಹೋಗಿದೆ. ಅಲ್ಲಿ ರಾಜ್ಯದ ಪ್ರತಿಷ್ಠಿತ ಕೃಷಿ ವಿವಿಯ ವಿಜ್ಞಾನಿಗಳು ಕರಾವಳಿಯ ಪ್ರಮುಖ ಸಂಶೋಧನಾ ಕೇಂದ್ರದ "ಪ್ರಮುಖ" ವಿಜ್ಞಾನಿಗಳು ಬಂದಿದ್ದರು.ನಾವು ಯಾವಾಗಲೂ ಇಂತಹ ಕಾರ್ಯಕ್ರಮಕ್ಕೆ ಹೋಗುವಾಗ ಒಂದು ರೀತಿಯ ಪೂರ್ವಾಗ್ರಹ ಪೀಡಿತರಂತೆ ಭಾಗವಹಿಸುವುದು ಸಾಮಾನ್ಯ ಏಕೆಂದರೆ ಇಲ್ಲಿ ವಿಜ್ಞಾನಿಗಳ ಹೆಚ್ಚಿನವರು ವಿವರಿಸುವುದು ಪುಸ್ತಕದ ಒಳಗಿನ ಮತ್ತು ಹಳೆಯ ಕತೆಗಳನ್ನೇ.ಪ್ರಶ್ನೆ ಕೇಳಿದರೆ ನೀವು ಹಾಗೆಲ್ಲಾ ಮಾಡಿದರೆ ಆಗದು ಎಂದು ಗದರಿಸಿ ಸುಮ್ಮನಿರಿಸಿ ಬಿಡುತ್ತಾರೆ. ಆದರೆ ಇಂದು ನಾವು ಹೋದಾಗ ಪೂರ್ವಾಗ್ರಹ ಪೀಡಿತರಂತೆ ಹೋಗಲಿಲ್ಲ. ಬದಲಾಗಿ ಬ್ಲಾಂಕ್ ಆಗಿ ಹೋದೆವು. ಅದಕ್ಕೂ ಒಂದು ಕಾರಣವಿತ್ತು. ಅಲ್ಲಿ ಕಾರ್ಯಕ್ರಮ ಸಂಯೋಜಿಸುವವರು ಮಾಜಿ ರಾಷ್ಡ್ರಪತಿ ಎಜಿಜೆ ಕಲಾಂ ಅವರಿಗೆ ಇ ಮೈಲ್ ಬರೆದು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದರು.ಹಾಗಾಗಿ ಈ ವಿಜ್ಞಾನಿಗಳಿಗೆ ಅನೇಕ ವರ್ಷದ ಹಿಂದಿನ ಸಮಸ್ಯೆ ಕೂಡಾ ಹೊಸದಾಗಿ ಕಂಡಿತು.ಅದೆಷ್ಟೋ ಮಾಧ್ಯಮಗಳು ಈ ಬಗ್ಗೆ ಗಮನಸೆಳೆದಿದ್ದರೂ ಎಚ್ಚರವಾಗಿರಲಿಲ್ಲ. ಈಗ ಕಲಾಂ ಅವರ ನಿರ್ದೇಶನದಂತೆ ಆ ವಿಜ್ಞಾನಿಗಳು ಬಂದಿದ್ದಾರೆ ಎಂಬ ದೃಷ್ಠಿ ಬೆಳೆಸಿಕೊಂಡು ನಾವು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಒಬ್ಬರಾದೆವು.ಅಲ್ಲಿ ಆ ವಿಜ್ಞಾನಿ ವಿವರಿಸುತ್ತಿದ್ದರು , ನೂರಾರು ಬೆಳೆಗಾರರು , ಬೇರು ಹುಳದ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಬಂದಿದ್ದರು. ಕಾರ್ಯಕ್ರಮದ ಅರ್ಧದಲ್ಲಿ ನಮಗೂ ಅರಿವಾಗತೊಡಗಿತು ಇದು ಹಳೆಯ ಕ್ಯಾಸೆಟ್.ಹೊಸ ಟೋನ್...ಹೊಸತೇನೂ ಇಲ್ಲ.ಒಂದು ವಿಚಾರ ಮಾತ್ರಾ ಇಲ್ಲಿ ಖುಷಿ ಕೊಟ್ಟಿದ್ದೇನೆಂದರೆ ಈ ವಿಜ್ಞಾನಿ ರೈತರ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಆದರೆ ಕೊನೆಯ ರಿಸಲ್ಟ್ ಮಾತ್ರಾ ಅದೇ ರಾಗ ಅದೇ ಹಾಡು.
ಈ ಮಾಹಿತಿಯ ಬಳಿಕ ನಾವು ಆ ವಿಜ್ಞಾನಿಯೊಂದಿಗೆ ಮಾತನಾಡಿದೆವು.ಅವರು ಮಾತನಾಡುವ ಆರಂಭದಲ್ಲಿ ನೀವು ಏನೇನಾದರೂ ಕೇಳಬೇಡಿ ಎಂದೇ ಮಾತು ಆರಂಭಿಸಿದರು. ಮೊನ್ನೆ ನಿಮ್ಮ ಚಾನೆಲ್‌ನವರು ಕೇಳಿದರು, ರೋಗ ಶುರುವಾಗಿ 10 ವರ್ಷವಾಯಿತು ನೀವೇನು ಮಾಡುತ್ತೀರಿ, ಎಂದು ಪ್ರಶ್ನೆ ಹಾಕಿದರು. ಅವರಿಗೆ ಏನು ಗೊತ್ತು ನಾವು ಅಧ್ಯಯನ ಮಾಡುತ್ತಲೇ ಇದ್ದೇವೆ, ಎಂದು ಹೇಳುತ್ತಾ ಮಾತು ಆರಂಭಿಸಿದರು. ತಕ್ಷಣ ನಾವು ಕೇಳಿದೆವು ಹಾಗಾದ್ರೆ ಈ ಬೇರು ಹುಳ ಶುರುವಾಗಿ ನಿಜಕ್ಕೂಎಷ್ಟು ವರ್ಷವಾಯಿತು ಸರ್ ಎಂದಾಗ, ಅದು ಅಡಿಕೆ ಬೆಳೆ ಶುರುವಾದಾಗಲೇ ಇದೆ ಅಂತಾರೆ. ಹಾಗಾದ್ರೆ ಅವರು ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ಎಂದಾಗ, ಇನ್ನೇನೋ ಉತ್ತರ. ಕೊನೆಗೆ ಈ ರೋಗಕ್ಕೆ , ಕೀಟಕ್ಕೆ ಪರಿಹಾರ ಏನು ಅಂದರೆ, ಇಂತದ್ದೇ ಅಂತ ಪರಿಹಾರ ಇಲ್ಲ.ತೋಟಗಳನ್ನು ಅಗೆದು, ಅಥವಾ ರಾತ್ರಿ ವೇಳೆ ಹುಳುಗಳನ್ನು ತೋಟಗಳಲ್ಲಿ ಹಿಡಿದು ಕೊಲ್ಲುವುದು ಒಂದೇ ದಾರಿ ಎಂದರು. [ ತಿಗಣೆ ಕೊಲ್ಲುವ ಜೋಕ್‌ನಂತೆ]..
ಇನ್ನು ಮಾತನಾಡಿ ಪ್ರಯೋಜನವಿಲ್ಲ ಅಂತ ನಾನು ಮಾತು ನಿಲ್ಲಿಸಿದೆ. ವಿಜ್ಞಾನ ಸೋತಿದೆಯೇ ಅಂತ ಮನದೊಳಗೆ ಹೇಳಿಕೊಂಡೆ.ಯಾಕೆಂದರೆ ಬೇರುಹುಳ ಶುರುವಾಗಿ ಅದೆಷ್ಟೋ ವರ್ಷವಾಯಿತು ಅಂತ ಹೇಳುತ್ತಾರೆ, ನಾವು ಕೆಲಸ ಮಾಡುತ್ತಿದ್ದೇವೆ ಅಂತಾರೆ. ಪರಿಹಾರ ಕೇಳಿದ್ರೆ ಹಿಡಿದು ಕೊಲ್ಲಿ ಅಂತಾರೆ.ಇದನ್ನು ಹೇಳು ಅವರು ಬೇಕಾ..?.ನಮ್ಮ ತೋಟದಲ್ಲೇ ಕೆಲಸ ಮಾಡುವ ಸೀನಪ್ಪನೂ ಹೇಳುತ್ತಾನೆ...!!. ಆದರೂ ಗೌರವ ...
ನನ್ನ ಮಿತ್ರ ಬಿಟ್ಟಿಲ್ಲ .ಆ ವಿಜ್ಞಾನಿಯನ್ನು ಕೇಳಿದ, ನೀವು ಈಗ ಇಲ್ಲಿನ ತೋಟಕ್ಕೆ ಬರುವುದಕ್ಕೆ ಏನು ಕಾರಣ ಅಂತ ಕೇಳಿದ. ಆಗ ,ನೀವು ಕಲಾಂ ಹೆಸರು ಹೇಳಬೇಕೆಂದರೆ ಆಗಲ್ಲ.ನಾವು ಈ ಕಡೆ ಹಿಂದೆಯೇ ಬಂದಿದ್ದೇವೆ ಆದರೆ "ಕಾಂಟ್ಯಾಂಕ್ಟ್"ಗೆ ಯಾರೂ ಸಿಕ್ಕಿರಲಿಲ್ಲ ಅಂತಾರೆ. ಮತ್ತೆ ಕಲಾಂ ಕಾರಣರಲ್ವಾ ಅಂದಾಗ , ಇಲ್ಲ.. ಇಲ್ಲ ಅಂದ್ರು.ಹಾಗಾದ್ರೆ ನೀವು ಇಷ್ಟು ಸಮಯ ಏನು ಮಾಡ್ತಿದ್ರಿ ಅಂತ ಕೇಳಿದಾಗ ,ಆ ವಿಜ್ಞಾನಿ ಸಿಡಿಮಿಡಿಯಾದ್ದು ಮಾತ್ರಾ ಅವರ ಮನಸ್ಥಿತಿಯನ್ನು ತಿಳಿಸಿತು.ಹೆಚ್ಚು ಬೇಡ ಅಂತ ಪ್ಯಾಕ್ ಮಾಡಿದೆವು.
ಇಲ್ಲಿ ಗಮನಿಸಬೇಕಾದ್ದು ಅಂದರೆ ಬಹುತೇಕ ಎಲ್ಲಾ ಇಂತಹ ಕೃಷಿ ಸಂಬಂಧಿ ವಿಚಾರ ಸಂಕಿರಣಗಳಲ್ಲಿ ವಿಜ್ಞಾನಿಗಳಿಗೆ ರೈತರ ಅನುಭವ ಮುಖ್ಯವಾಗುವುದಿಲ್ಲ.ವಿಜ್ಞಾನಿಗಳು ಏನು ಓದಿದ್ದಾರೆ ಅದನ್ನು ಹೇಳುತ್ತಾರೆ. ಆ ಬಗ್ಗೆ ಪ್ರಾಕ್ಟಿಕಲ್ ಆದ ವಿಶ್ಲೇಷಣೆ ಇರುವುದಿಲ್ಲ. ಅವರು ಏನಿದ್ರೂ ಆ ಕೆಮಿಕಲ್ ಇಷ್ಟು ಹಾಕಿ.. ಅಷ್ಟು ಹಾಕಿ ಎನ್ನುವ ಗಿಳಿ ಪಾಠ ಹೇಳಿಹೋಗುತ್ತಾರೆ. ನೋಡಿ ಅವರು ಹೇಳಿದ ಪರಿಹಾರ ಎಷ್ಟು ಪ್ರಾಕ್ಟಿಕಲ್ ಅಂತ ನಾವೇ ಆಲೋಚಿಸಬೇಕು.. ಬೇರು ಹುಳ ಕಾಣಿಸಿಕೊಂಡು ಅದೆಷ್ಟೋ ವರ್ಷವಾಯಿತು ಅಂತಾರೆ... ಕೃಷಿಭೂಮಿಯಲ್ಲಿ ಆ ಬಗ್ಗೆ ಅಧ್ಯಯನ ನಡೆದಿಲ್ಲ ಹಾಗಾಗಿಯೇ ಅದಕ್ಕೆ ಪರಿಹಾರವೂ ಸಿಕ್ಕಿಲ್ಲ. ಆದರೆ ಒಂದಂತೂ ಸತ್ಯ ಇಂತಹ ಸಂಕಿರಣಗಳಿಂದ ಒಂದಷ್ಟು ಎಚ್ಚರವಾಗುತ್ತದೆ.ಸರಕಾರಕ್ಕೂ ಅರಿವಾಗುತ್ತದೆ. ರೈತರೊಬ್ಬರ ಆ ಒಂದು ಸಂದೇಶ ಒಂದು ಹೊಸ ದಿಕ್ಕನ್ನು ತೋರಿಸಿದೆ ಅಂದರೆ ತಪ್ಪಾಗಲಾರದು.
ಇನ್ನು ರೈತ ಪರ ಸರಕಾರಗಳಿಗೆ ಇಂತಹ ಸಮಸ್ಯೆಗಳ ಅರಿವಾಗುವುದಿಲ್ಲ.ಸರಕಾರದ ಅಲ್ಲಿನ ಪ್ರತಿನಿಧಿಗಳಿಗೆ 10 ವರ್ಷಗಳಿಂದ ರೋಗವಿದ್ದರೂ ಸರಕಾರದ ಗಮನಸೆಳೆಯಲಾಗಲಿಲ್ಲ.ಇನ್ನು ಹಳದಿ ರೋಗ ಕೂಡಾ ಬಂದು ಸಂವತ್ಸರಗಳೇ ಉರುಳಿತು.ಹಲವಾರು ಮಂದಿ ಭೂಮಿ ಮಾರಿ ಹೋದರು. ಆದರೂ ಸರಕಾರದ ಗಮನವನ್ನು ಆ ಪ್ರತಿನಿಧಿ ಸೆಳೆಯಲೇ ಇಲ್ಲ.ಈಗ ಬಂದು ನಾಡಿದ್ದು ಅಧಿವೇಶನ ವೇಳೆಗೆ ಮಾತನಾಡುತ್ತೇನೆ ಅಂತಾರೆ.ಈ ರೋಗ ಶುರುವಾಗಿ ಇಷ್ಟು ವರ್ಷವಾಯಿತಲ್ಲಾ ತಾವ್ಯಾಕೆ ಮಾತನಾಡಿಲ್ಲ ಅಂದರೆ ಅದು ರೈತರದ್ದೂ ತಪ್ಪಿದೆ...ನಾನೂ ಕೃಷಿಕ ತೋಟಕ್ಕೆ ಸಾವಯವವೇ ಹಾಕಬೇಕು,.. ರಾಸಾಯನಿಕ ಹಾಕಬಾರದು .. ಎಂದು ಪೀಠಿಕೆ ಹಾಕಯತ್ತಾರೆ... ಹಾಗಾದ್ರೆ ಕೃಷಿಕರು ಯಾರತ್ರ ಮಾತನಾಡಬೇಕು... ಸಮಸ್ಯೆ ಯಾರಲ್ಲಿ ಹೇಳಬೇಕು..
ನಮ್ಮ ತಲೆಗೆ ನಮ್ಮದೇ ಕೈ ಅಂತಾರೆ ಹಾಗೆನಾ ಇದು...???
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ