18 ನವೆಂಬರ್ 2008

ಹಳ್ಳಿಗಳನ್ನು ಬೆಸೆಯುವ ಸರದಾರ....




ಹಳ್ಳಿಗಳು ಸಂಪರ್ಕ ಪಡೆದರೆ ಮಾತ್ರಾ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ನಗ್ನ ಸತ್ಯ. ಹಾಗಾದರೆ ಇಂದು ಎಷ್ಟು ಹಳ್ಳಿಗಳು ಮುಕ್ತವಾಗಿ ವರ್ಷ ಪೂರ್ತಿ ನಗರವನ್ನು ಸಂಪರ್ಕಿಸುತ್ತದೆ. ಅಲ್ಲಿನ ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಾರೆ ಎನ್ನುವುದನ್ನು ನಾವು ಅನುದಿನವೂ ಗಮನಿಸುತ್ತಲೇ ಇರುತ್ತೇವೆ. ಅಂತಹ ಒಂದು ಅನುಭವ ಹಿಂದೊಮ್ಮೆ ಆಗಿತ್ತು.ಇತ್ತಿಚೆಗೆ ಹಳ್ಳಿಯೊಂದಕ್ಕೆ ಹೋಗಿದ್ದಾಗ ಅಲ್ಲಿನ ಜನರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಸಮಸ್ಯೆಯನ್ನು ವರದಿ ಮಾಡಲಾಗಿತ್ತು.ಇಲ್ಲೂ ದಾಖಲಿಸಿದ್ದೆ.ಅಂತಹ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ಸಂಪರ್ಕ ಸೇತುವಾಗಿ ಕಂಡುಬರುವವರು ಸುಳ್ಯದ ಗಿರೀಶ್ ಭಾರದ್ವಾಜ್. ಅವರ ಕುರಿತು ನಮ್ಮ ಚಾನೆಲ್ ಫೋಕಸ್ ನಲ್ಲಿ ಗುರುತಿಸಿತ್ತು. ಹಳ್ಳಿಗಳಿಂದ ಉತ್ತಮವಾದ ಅಭಿಪ್ರಾಯ ಬಂದಿತ್ತು. ಪತ್ರಕರ್ತ ವಲಯದಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಆದರೆ ಅವರ ಕುರಿತು ಮಾಡಿದ ಸುದ್ದಿಯಿಂದ ರಾಜ್ಯದ ಹಲವಾರು ಗ್ರಾಮಿಣ ಪ್ರದೇಶದ ಜನರಿಗೆ ಇಂತಹದ್ದೊಂದು ಸಂಪರ್ಕ ಸೇತು ನಮಗೂ ಆದೀತು ಎನ್ನುವ ಭಾವನೆ ಮೂಡಿದ್ದಂತೂ ಸತ್ಯ.ಇನ್ನು ಏನಿದ್ದರೂ ಜನ ಮತ್ತು ಸರಕಾರದ ಕೆಲಸ. ಗಿರೀಶರ ಸಹಕಾರ. ಆದುದರಿಂದ ಗಿರೀಶರ ಬಗ್ಗೆ ಇಲ್ಲಿ ಒಂದಿಷ್ಟು....

ಇಂದು ಬಹುತೇಕ ಹಳ್ಳಿಗಳು ಮಳೆಗಾಲದ 6 ತಿಂಗಳುಗಳ ಕಾಲ ನಗರದ ಸಂಪರ್ಕವನ್ನೇ ಕಡಿದುಕೊಂಡಿರುತ್ತದೆ. ಕಾರಣ ಆ ಊರಿನಲ್ಲಿ ಹರಿಯುವ ನದಿ. ಹೀಗಾಗಿ ಅಲ್ಲಿನ ಜನ ಅತ್ಯಂತ ಬವಣೆಪಡುತ್ತಿರುತ್ತಾರ್. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನರ ಬದುಕಿಗೆ ಆಶಾಕಿರಣವಾಗಿ ಮೂಡಿಬರುವುದು ತೂಗುಸೇತುವೆಗಳು.ಸುಳ್ಯದ ಗಿರೀಶ್ ಭಾರಧ್ವಾಜರು ಅಂತಹ ತೂಗು ಸೇತುವೆಗಳ ನಿರ್ಮಾಣದ ಸರದಾರ ಎನಿಸಿಕೊಂಡಿದ್ದಾರೆ.

ಹಳ್ಳಿಯ ಬದುಕೆಂದರೆ ಗುಡ್ಡ, ಹೊಳೆ, ಹಳ್ಳಗಳಿಂದ ಕೂಡಿರುತ್ತದೆ.ಅಲ್ಲಿನ ಕೃಷಿಕರಿಗೆ ಇಂತಹ ಹೊಳೆಗಳು ಬೇಸಗೆಯ ಕಾಲದಲ್ಲಿ ವರದಾನವಾದರೆ ಮಳೆಗಾಲದ ಅವಧಿಯಲ್ಲಿ ಸಂಕಷ್ಟವನ್ನು ನೀಡುತ್ತದೆ.ನಗರವನ್ನು ಸಂಪರ್ಕಿಸದಂತೆ ಮಾಡಿಬಿಡುತ್ತದೆ.ಒಂದೇ ಸಮನೆ ಮಳೆಸುರಿದರೆ ನದಿಗಳು ತುಂಬಿಹರಿದು ತಿಂಗಳುಗಟ್ಟಲೆ ದ್ವೀಪದಂತಾಗುತ್ತದೆ.ಸರಕಾರಗಳು ಉದ್ದದ ನದಿಗಳಿಗೆ ಸೇತುವೆಯನ್ನು ನಿರ್ಮಿಸುವ ಗೋಜಿಗೆ ಹೋಗುವುದಿಲ್ಲ. ಹಾಗೊಂದು ವೇಳೆ ಹೇಳಿದರೂ ಅದು ಭರವಸೆಯಾಗಿಯೇ ಉಳಿದಿರುತ್ತದೆ. ಹಾಗಾಗಿ ಹಳ್ಳಿಗರಿಗೆ ತಾವು ಬೆಳೆದ ಕೃಷಿಯುತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲಪಿಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ರೈತರು ಸಹಜವಾಗಿಯೇ ಹಿನ್ನಡೆಯನ್ನು ಅನುಭವಿಸುತ್ತಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ವರದಾನವಾಗುವುದು ಕಡಿಮೆ ಖರ್ಚಿನ, ತಾವು ನಡೆದಾಡಿಕೊಂಡು ಸಾಗಬಹುದಾದ ತೂಗುಸೇತುವೆಗಳು.ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದವರು , ನಿರ್ಮಾಣ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಿರೀಶ್ ಭಾರದ್ವಾಜ್. ಇವರು ಇದುವರೆಗೆ ನಿರ್ಮಿಸಿದ ತೂಗು ಸೇತುವೆಗಳು 75 ...





ಗಿರೀಶ್ ಭಾರಧ್ವಾಜರು ಸುಳ್ಯದ ಅರಂಬೂರಿನ ನಿವಾಸಿ.1975ರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಶಿಲ್ಪವೆಂಬ ಇಂಜಿನಿಯರಿಂಗ್ ವರ್ಕ್ ಶಾಪನ್ನು ತೆರೆದರು.ನಂತರ 1988 ರ ವೇಳೆಗೆ ಊರವರ ಬೇಡಿಕೆಯಂತೆ ಅವರು ಉಚಿತ ಶ್ರಮದ ಮೂಲಕ ಪ್ರಥಮವಾದ ತೂಗು ಸೇತುವೆಯನ್ನು ನಿರ್ಮಿಸಿದರು. ನಂತರ ವಿವಿಧ ಹಳ್ಳಿಗಳಿಂದ ಅಂತಹ ತೂಗು ಸೇತುವೆಗಳಿಗೆ ಬೇಡಿಕೆ ಬಂದಿತು. ಕರ್ನಾಟಕದ ವಿವಿದೆಡೆ ಇಂತಹ ತೂಗುಸೇತುವೆಗಳನು ಮಾಡಿದ ಇವರು ಆಂದ್ರ ಪ್ರದೇಶ, ಕೇರಳ, ಮೊದಲಾದೆಡೆ ಇಂತಹ ಸೇತುವೆಗಳನ್ನು ನಿರ್ಮಿಸಿರುವ ಗಿರೀಶರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಅವರಗೋಳ ಮತ್ತು ಘಟಗೇರಿ ಎಂಬ ಎರಡು ಹಳ್ಳಿಯನ್ನು ಸಂಪರ್ಕಿಸಲು ಘಟಪ್ರಭಾ ನದಿಗೆ 290 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ತೂಗು ಸೇತುವೆಯ ನಿರ್ಮಾಣದ ಮೊದಲು ವಿವಿಧ ಹಂತಗಳಿವೆ. ಎಲ್ಲಾ ಹಂತಗಳಲ್ಲೂ ಜಾಗ್ರತೆ ಅಗತ್ಯವಾಗಿದೆ. ಕೊನೆಯ ಹಂತದಲ್ಲಿ ಕಾರ್ಮಿಕರು ಅತ್ಯಂತ ಸಾಹಸದಿಂದ ಕೆಲಸ ನಿರ್ವಹಿಸುತ್ತಿರುತ್ತಾರೆ.ಇದೆಲ್ಲಾ ಶ್ರಮದ ಬಳಿಕ ಸಾರ್ವಜನಿಕರಿಗೆ ನಡೆದಾಡಲು ವ್ಯವಸ್ಥಿತವಾದ ಸೇತುವೆಯೊಂದು ಲೋಕಾರ್ಪಣಗೊಳ್ಳುತ್ತದೆ. ಇಂತಹ ತೂಗುಸೇತುವೆಗಳನ್ನು ನಿರ್ಮಿಸಲು ಅನೇಕ ಮಂದಿ ಪ್ರಯತ್ನಿಸಿದ್ದರು.ಆದರೆ ಗಿರೀಶರಷ್ಟು ಯಶಸ್ವಿಯಾಗಿ ಯಾರು ಕೂಡಾ ಮುಂದುವರಿದಿಲ್ಲ. ಈ ಕೆಲಸದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ ಎನ್ನುವ ಗಿರೀಶರು ಡಾಅಬ್ದುಲ್ ಕಲಾಮ್ ಅವರ ಚಿಂತನೆಯೇ ನನಗೆಸ್ಫೂರ್ತಿ ಎನ್ನುವ ಇವರು ಎರಡು ಹಳ್ಳಿಗಳನ್ನು ಸೇರಿಸಿದಾಗ ಸಿಗುವ ನೆಮ್ಮದಿಯೇ ಬೇರೆ ಎನ್ನುತ್ತಾರೆ. ಈ ನನ್ನ ವಿದ್ಯೆಯನ್ನು ಯಾರಿಗೆ ಬೇಕಾದರೂ ಧಾರೆ ಎರೆಯಬಲ್ಲೆ ಉರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಬಲ್ಲೆ ಎನ್ನುತ್ತಾರೆ ಗಿರೀಶ್. ಆದರೆ ಆ ವಿದ್ಯಾರ್ಥಿಗಳೆಲ್ಲರೂ ನಿಸ್ವಾರ್ಥ ಸೇವೆ ಮಾದಬೇಕು ಎಂಬುದು ಇವರ ಅಭಿಲಾಷೆ.

ಹಳ್ಳಿಗಳನ್ನು ಬೆಸೆಯುವ ಇಂತಹ ಸೇತುವೆಗಳು ನಿರ್ಮಾಣವಾದರೆ ಜನ ಅತ್ಯಂತ ಸಂತಸ ಪಡುತ್ತಾರೆ. ಅದಾದ ಬಳಿಕ ತಮ್ಮ ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಕ್ಕಿದೆ , ಮನೆಯ ಅವಶ್ಯಕ ವಸ್ತುಗಳನ್ನು ತರಲು ಅನುಕೂಲವಾಗುತ್ತದೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ.ಇನ್ನೂ ಅನೇಕರು ಹೊಸತಾದ ತೂಗು ಸೇತುವೆಗಳ ನಿರ್ಮಾಣಕ್ಕೆ ಒತ್ತಡ ಹಾಕುತ್ತಾರ್. ಸರಕಾರವು ಇಂತಹ ಜನರಿಗೆ ಸಹಾಯವನ್ನು ನೀಡಬೇಕಾಗಿದೆ.

ಒಟ್ಟಿನಲ್ಲಿ ಇಂದು ಹಳ್ಳಿಗಳು ನಗರದ ಸಂಪರ್ಕವನ್ನು ನದಿಗಳು ಕಾಟಕೊಡುತ್ತವೆ ಎನ್ನುವ ಒಂದೇ ಕಾರಣಕ್ಕೆ ದೂರವಾಗಿ ಬೀಡುತ್ತವೆ.ಅಲ್ಲಿನ ಜನರ ಬದುಕೇ ಕಷ್ಟವಾಗಿ ಬೀಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ವರದಾನವಾಗಿದೆ.

2 ಕಾಮೆಂಟ್‌ಗಳು:

shivu.k ಹೇಳಿದರು...

ಮಹೇಶ್,
ನೀವು ಗಿರೀಶ್ ಭರಾದ್ವಾಜ್ ರವರ ತೂಗು ಸೇತುವೆಗಳ ಸಾಧನೆಯನ್ನು ನಿಮ್ಮ ಬ್ಲಾಗಿನಲ್ಲಿ ಹಾಕಿ ಉತ್ತಮ ಕೆಲಸ ಮಾಡಿದ್ದೀರಿ. ಅವರಂಥ ಸಾಧಕರು ಇಡೀ ಪ್ರಪಂಚಕ್ಕೆ ಗೊತ್ತಾಗಬೇಕು. ಅದು ಅನೇಕ ಜನರಿಗೆ ಸ್ಪೂರ್ತಿಯಾಗಬೇಕು. ಡಾ: ಅಬ್ದುಲ್ ಕಲಂ ರವರ ಕನಸನ್ನು ಸಾಕಾರಗೊಳಿಸುವಲ್ಲಿ ಗಿರೀಶ್ ಭರಾದ್ವಾಜರ ಸಾಧನೆ ಮಹತ್ವದ್ದು. ಅವರ ೭೫ ದಾಟಿ ನೂರು.... ಸಾವಿರವಾಗಲಿ..... ಇಂದು ನಾನು ಆರೈಸುತ್ತೇನೆ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೌದು ನಾನು ಅಲ್ಲೊಂದು ವಿಷಯ ಮರೆತಿದ್ದೆ.ಇತ್ತೀಚೆಗೆ ಗಿರೀಶರಿಗೆ CNN-IBN ಚಾನೆಲ್ ಸಿಟಿಜನ್ ಜರ್ನಲಿಸ್ಟ್ ಪ್ರಶಸ್ತಿ ನೀಡಿ ಗೌರವಿಸಿದೆ.