25 ಅಕ್ಟೋಬರ್ 2008

ಇಲ್ಲಿ ನಾವೇ ಎಲ್ಲಾ....!!




ದೇವಸ್ಥಾನಗಳೆಂದರೆ ನಂಬಿಕೆಯ , ಮಾನಸಿಕ ನೋವನ್ನು ತಣಿಸುವ ಕ್ಷೇತ್ರಗಳು. ಅಲ್ಲಿಗೆ ಹೋದರೆ ನೆಮ್ಮದಿ ಸಿಗುತ್ತದೆ, ಅಲ್ಲಿ ಸೇವೆ ಮಾಡಿಸಿದರೆ ಖಂಡಿತಾ ಒಳ್ಳೆಯದಾಗುತ್ತದೆ.... ಇದು ಬಹುತೇಕ ಜನರ ಕಲ್ಪನೆ. ಇನ್ನೊಂದು ಅರ್ಥದಲ್ಲಿ ನಂಬಿಕೆ.
ನಾನು ಗಮನಿಸಿದಂತೆ ಇಂದು ಧಾರ್ಮಿಕ ಹುಚ್ಚುತನ ಹೆಚ್ಚಾಗುತ್ತಿದೆ.ಹಾಗಾಗಿ ಇಂದು ಎಲ್ಲೆಲ್ಲೂ ರಶ್... ಪುಣ್ಯ ಕ್ಷೇತ್ರಗಳ ಒಳಹೊಕ್ಕಿ ನೆಮ್ಮದಿಯಿಂದ ಬಂದರೇ ಪುಣ್ಯ.
ಯಾಕೆಂದ್ರೆ ಯಾವುದೇ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಹೊರಬರುವಾಗ ಇನ್ನೊಂದು ನೋವನ್ನು ಹೊತ್ತುಕೊಂಡೇಬರಬೇಕಾಗುತ್ತದೆ. ನಾವು ಕಳೆಯಲು ಹೋದ ನೋವಿನೊಂದಿಗೆ ಇನ್ನೊಂದು ಹೊಸತು ಸೇರಿಕೊಳ್ಳುತ್ತದೆ. ಬಹುಶ: ದೇವರಿಗೆ ಇದೆಲ್ಲಾ ಕಾಣಿಸುವುದಿಲ್ಲವೇ ಅಂತ ಅನ್ನಿಸುತ್ತದೆ. ನಾವು ಇಲ್ಲಿನ ಪ್ರಮುಖ ದೇವಸ್ಥಾಗಳಿಗೆ ಹೋಗಿ ಅಲ್ಲಿ ಭಕ್ತರ ಹರಿವು ಜಾಸ್ತಿಯೇ ಇರುತ್ತದೆ. ಹೇಗಿದ್ದರೂ ಪ್ರಮುಖ ದೇವಸ್ಥಾನವಲ್ವೇ. ಆದರೆ ಅಲ್ಲಿನ ಸಿಬ್ಬಂದಿಗಳು ಇರುತ್ತಾರಲ್ಲಾ ಅವರಿಗೆ ಮನುಷ್ಯತ್ವವೆಂಬುದೇ ಇರುವುದಿಲ್ಲ. ಯಾವುದಾದರೊಂದು ಕೇಳಿದರೆ ಅದಕ್ಕೆ ಸರಿಯಾದ ಮಾಹಿತಿಯೂ ಇಲ್ಲ. ಉದ್ದಟತನದ ಪರಮಾವಧಿ. ಒಮ್ಮೊಮ್ಮೆ ಅನಿಸುತ್ತದೆ ಆ ಕ್ಷೇತ್ರದ ಸುಪ್ರೀಂ ಅವರೇ ಏನೋ . ದೇವರಿಗೆ ಅಲ್ಲಿ ಎರಡನೇ ಸ್ಥಾನವೇನೋ ಅಂತ ಅನಿಸಿಬಿಡುತ್ತದೆ. ಅದು ಅಲ್ಲಿ ಇಲ್ಲಿ ಅಂತ ಅಲ್ಲ ಎಲ್ಲಾ ಕಡೆಗಳಲ್ಲೂ ಅದೇ ವ್ಯವಸ್ಥೆ. ಹಾಗೆಂದು ನೀವು ಒಂದು ಕಾನನದ ನಡುವಿನ ಪ್ರಶಾಂತವದ ದೇವಸ್ಥಾನಕ್ಕೆ ಹೋಗಿ.ಅಲ್ಲಿ ಜನವೂ ಇರುವುದಿಲ್ಲ. ಸುಂದರ ಪರಿಸರದ ಮಧ್ಯೆ ಕೇಳುವ ಇಂಪಾದ ಹಾಡುಗಳೇ , ಹಕ್ಕಿಗಳ ಕಲರವವೇ ನಮ್ಮ ಮನಸ್ಸಿಗೆ ಹೊಸ ದಾರಿಯನ್ನು ತೊರಿಸಿತು.ನೆಮ್ಮದಿ ಸಿಕ್ಕಿತು. ಅಲ್ಲ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗಬೇಕೆಂದೇನೂ ಇಲ್ಲವಲ್ಲ. ಸುಂದರ ಸೊಬಗಿನ ಕಾಡಿನ ನಡುವೆ ಸ್ವಲ್ಪ ಹೊತ್ತು ಏಕಾಂಗಿಯಾಗು ಕುಳಿತು ಮೌನವಾದರೆ, ಧ್ಯಾನಸ್ಥವಾದರೆ ಏನು ಖುಷಿ ದೇವಸ್ಥಾನಕ್ಕೆ ಹೋದದ್ದಕ್ಕಿಂತ ಎರಡು ಪಟ್ಟು ಪುಣ್ಯ. ನಾನಂತೂ ಇತ್ತೀಚೆಗೆ ದೇವಸ್ಥಾನಕ್ಕೆ ಸೇವೆ ಸಲ್ಲಿಸಲೆಂದು ಹೋಗುವುದು ಕೊಂಚ ಕಡಿಮೆ ಮಾಡಿ ಮನೆಯ ತೋಟದ ನಡುವೆ , ಕಾಡಿನ ಬಳಿಯೇ ಮನೆಯ ಮಾಡಿರುವ ನಾವು ಸಂಜೆಯ ವೇಳೆಗೆ ಪರಿಸರವನ್ನು ಆಸ್ವಾದಿಸುತ್ತಾ ಖುಷಿಯನ್ನು ಸ್ಪಡೆಯುತ್ತೇನೆ. ಯಾಕೆಂದರೆ ಪ್ರತಿಷ್ಠಿತ ಎನಿಸಿದ ,ಅನಗತ್ಯ ಪ್ರಚಾರ ನೀಡುವ ಕೆಲವು ದೇವಸ್ಥಾನಗಳ ಒಳಹೊಕ್ಕು ಹೊರಬಂದಾಗ ಅಲ್ಲಿನ ಹುಳುಕುಗಳು, ಸಿಬ್ಬಂದಿಗಳ ದರ್ಪ ಎಲ್ಲವೂ ನೋಡಿದಾಗ ಅಯ್ಯೋ ಅಲ್ಲಿ ನೆಮ್ಮದಿಯ ಅರಸಾಟದಲ್ಲಿ ಭಕ್ತರಿದ್ದಾರಾ ಅಂತ ಅನ್ನಿಸುತ್ತದೆ. ಹಾಗಾಗಿ ಭಗವಂತನಿಗೆ ಇಲ್ಲಿಂದಲೇ ಇನ್ನೊಮ್ಮೆ ನಮಸ್ಕಾರ.

ಕಾಮೆಂಟ್‌ಗಳಿಲ್ಲ: