ಒಂದು ಸಂಪ್ರದಾಯ, ಒಂದು ಸಂಸ್ಕೃತಿ, ಒಂದು ಇತಿಹಾಸ...
![]() |
| ಈ ಚಿತ್ರ 2011 ರಲ್ಲಿ ತೆಗೆದದ್ದು |
ಒಂದು ಸಂಪ್ರದಾಯ, ಒಂದು ಸಂಸ್ಕೃತಿ, ಒಂದು ಇತಿಹಾಸ...
![]() |
| ಈ ಚಿತ್ರ 2011 ರಲ್ಲಿ ತೆಗೆದದ್ದು |
ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.
ಸುಮಾರು 100 ಕಿಮೀ ದೂರದಿಂದ ನಮ್ಮ ಮನೆಗೆ 20 ಹೋಳಿಗೆ ಹಾಗೂ 4 ತಿರುಪತಿ ಲಾಡು ಬಂತು..!. , ವಿಷಯ ಹೋಳಿಗೆಯದ್ದು ಅಲ್ಲ ಲಾಡಿನದ್ದೂ ಅಲ್ಲ. ಅದು ಪ್ರೀತಿಯದ್ದು, ಸ್ನೇಹದ್ದು. ಹೀಗಾಗಿ ಈ ಸಂಬಂಧಗಳನ್ನು, ಸ್ನೇಹವನ್ನು ನಾವು ಯಾವ ಲೆಕ್ಕದಲ್ಲಿಯೂ ಅಳೆಯುವುದಕ್ಕೆ ಸಾಧ್ಯವಿಲ್ಲ.
ಈ ಬಾರಿ ನಮಗೆ ದೀಪಾವಳಿ ಇಲ್ಲ. ಅಮ್ಮನಿಲ್ಲದ ಈ ದೀಪಾವಳಿ ಆಚರಿಸುವುದಾದರೂ ಹೇಗೆ? ಹಾಗಿದ್ದರೂ ಕೆಲವು ಜವಾಬ್ದಾರಿಗಳ ದೀಪ ಬೆಳಗಬೇಕಿತ್ತು.
ಪ್ರತೀ ವರ್ಷ ಅಮ್ಮನೇ ನನಗೆ ದೀಪಾವಳಿ. ಅಮ್ಮನೇ ನನಗೆ ಬೆಳಕು. ದೀಪಾವಳಿ ಹಾಗೂ ಇತರ ಎಲ್ಲಾ ಹಬ್ಬಗಳಲ್ಲೂ ಅಮ್ಮನೇ ಹಾಗೆ ಮಾಡು, ಹೀಗೆ ಮಾಡು ಎನ್ನುತ್ತಿದ್ದರು. ಈ ಬಾರಿ ಹಾಗೆ ಮಾಡು .. ಹೀಗೆ ಮಾಡು ಎಂದು ಹೇಳುವ ಮಾತುಗಳಿಲ್ಲ.ಅಮ್ಮನಿಲ್ಲ ದೀಪಾವಳಿ ಮಾತ್ರವಲ್ಲ ಯಾವ ಹಬ್ಬವೂ ಈ ವರ್ಷ ನನಗಿಲ್ಲ.
ಮಕ್ಕಳಿಗೆ ದೀಪಾವಳಿ ಖುಷಿ. ಈ ಖುಷಿಗೆ ಬೆಳಕಾಗಬೇಕಲ್ಲ. ಅಪ್ಪನೂ ಇಲ್ಲದ .. ಅಮ್ಮನೂ ಇಲ್ಲದ ದೀಪಾವಳಿ ನನಗೆ. ಆದರೆ ಮಕ್ಕಳಿಗೆ ಕತ್ತಲು ಕಳೆದು ಬೆಳಕಾಗುವ ದೀಪಾವಳಿ. ಪಟಾಕಿ ಸಿಡಿಸುವ ದೀಪಾವಳಿ.... ನನಗಿಲ್ಲದ ದೀಪಾವಳಿ,.... ಮಕ್ಕಳಿಗೆ ಸಂಭ್ರಮದ ದೀಪಾವಳಿ.... ಈ ಎರಡನ್ನೂ ಹೊಂದಿಸಿಕೊಳ್ಳುವುದು ಹೇಗೆ?. ಒಂದು ಇಡೀ ಕೊಂಡಿ ಕಳಚಿ ಇನ್ನೊಂದು ಕೊಂಡಿಯನ್ನು ಹಿಡಿಯುವ , ಮುನ್ನಡೆಸುವ ಜವಾಬ್ದಾರಿ. ಹೇಳಿದಷ್ಟು, ಬರೆದಷ್ಟು ಸುಲಭವಲ್ಲ. ಎಚ್ಚರಿಸುವವ ಇಲ್ಲದೆಯೇ ಎಚ್ಚರವಾಗಿರಬೇಕು. ಎಚ್ಚರಿಸುವವನು ಇಲ್ಲದೆ ಬಾಳ ನೌಕೆಯ ಸಾರಥಿಯಾಗಬೇಕು.
ಅಪ್ಪನೂ ಇಲ್ಲದ ಮೇಲೆ ದೀಪಾವಳಿ ಇತ್ತು. ಆದರೆ ಎಚ್ಚರಿಸುವ ಅಮ್ಮ ಇದ್ದರು. ಆಗಾಗ ಎಚ್ಚರಿಸುತ್ತಿದ್ದರು. ಎಲ್ಲಿ ಹಳಿ ತಪ್ಪುತ್ತದೋ ನೋಡಿ ಎಚ್ಚರಿಸುತ್ತಿದ್ದರು. ಹೆಚ್ಚು ಬರೆದರೂ ಅದೇನು ಅಂತ ಕೇಳುತ್ತಿದ್ದರು. ಆಗಾಗ ನನ್ನ ಲೆಕ್ಕ ಪುಸ್ತಕವನ್ನು ನೋಡಿ ಹೇಳುತ್ತಿದ್ದರು.. ಕೇಳುತ್ತಿದ್ದರು. "ಈ ಲೋಕದಲ್ಲಿ ಇರುವುದೆಲ್ಲಾ ಉಪಯೋಗಕ್ಕೆ ಇರುವುದು , ಆದರೆ ನಮಗೆ ಯಾವುದು ಅಗತ್ಯ ಎನ್ನುವುದು ನಮಗೆ ತಿಳಿದಿರಬೇಕು" ಎಂದು ಆಗಾಗ ಎಚ್ಚರಿಸುತ್ತಿದ್ದರು. ದೀಪಾವಳಿಯ ಪಟಾಕಿಯ ಭರಾಟೆಗೆ ನನಗೆ ನೆನಪಾದ್ದು ಈ ಮಾತು. ಇದೇ ಪಾಠ ಮಕ್ಕಳಿಗೂ ಹೇಳಿದೆ, ಪಟಾಕಿ ಬೇಕು.. ಸಂಭ್ರಮಕ್ಕೆ, ಆದರೆ ಎಷ್ಟು ಬೇಕು... ಅಂತ ಅಮ್ಮನ ಮಾತನ್ನು ಸ್ವಲ್ಪ ಡೈಲ್ಯೂಟ್ ಮಾಡಿ ಹೇಳುತ್ತಿದ್ದೆ. ಈಗ ನನಗೆ ಹೇಳುವವರು ಯಾರು ? ಕೇಳುವವರು ಯಾರು ?. ಅಮ್ಮ ಇಲ್ಲದ ಮೇಲೆ ಮನಸ್ಸಿನ ಓಟದಲ್ಲಿ ಅನೇಕ ಬಾರಿ ಎಡವಿದ್ದೇನೆ, ನಿಧಾನವಾಗಿ ಕುಳಿತು, ಅಮ್ಮ ಹೇಳಿದ್ದು ನೆನಪಿಸಿಕೊಳ್ಳುತ್ತಾ ಸಾವರಿಸಿಕೊಂಡು ತಪ್ಪನ್ನು ಸರಿ ಮಾಡುತ್ತೇನೆ.
ಈಚೆಗೆ ಯಾರಿಗೂ ಹೆಚ್ಚು ಕರೆ ಮಾಡುತ್ತಿಲ್ಲ, ಆದರೂ ಆಗಾಗ ವಾಟ್ಸಪ್ ನನ್ನನ್ನು ಕೆಣಕಿಸುತ್ತದೆ, ಯಾವುದೋ ಪೋಸ್ಟ್ ನೋಡಿದಾಗ ಕೆರಳಿಸುತ್ತದೆ, ವಿಷಾದವಾಗುತ್ತದೆ, ಪ್ರತಿಕ್ರಿಯೆ ನೀಡಲೇಬೇಕು ಎಂದು ಅನಿಸಿ ಬಿಡುತ್ತದೆ. ಅದನ್ನು ಹಾಕಿಯೂ ಆದ ಮೇಲೆ ಚರ್ಚೆಯೂ ಆಗುತ್ತದೆ... ಇದೆಲ್ಲಾ ಬೇಕಿತ್ತಾ ಅಂತ ಅಮ್ಮನ ಮಾತುಗಳು ನೆನಪಾಗುತ್ತದೆ, "ಜಗಳ ಯಾಕೆ, ಚರ್ಚೆ ಯಾಕೆ, ಆಗದಿದ್ದರೆ ಸುಮ್ಮನೆ ಇದ್ದು ಬಿಡು. "
ಅಮ್ಮನ ನೆನಪುಗಳು ಸದಾ ಕಾಡುತ್ತದೆ. ಅಪ್ಪನೂ ಆಗಾಗ ಎಚ್ಚರಿಸುತ್ತಾರೆ. ಅಪ್ಪ ಇಲ್ಲವಾದ ಮೇಲೆ ಅಮ್ಮ ಹಾಗಲ್ಲ ಹೀಗೆ ಎಂದರು. ಅನೇಕ ಬಾರಿ ನಮಗೆಷ್ಟೇ ಮಾಹಿತಿ ಇದ್ದರೂ ಅದರ ಪ್ರಾಕ್ಟಿಕಲ್ ಅನುಭವ ಬೇರೆಯೇ. ಅದು ಅಮ್ಮನೇ ಕೊಡುತ್ತಿದ್ದರು.
ಈಗೀಗ ಕೆಲವು ಸಮಯ ತಲೆಯೊಳಗೆ ಖಾಲಿಯಾಗಿ ಬಿಡುತ್ತದೆ, ಬ್ಲಾಂಕ್ ಆಗಿಬಿಡುತ್ತದೆ. ಕೃಷಿಯಲ್ಲಿ ಸಾಕಷ್ಟು ಕೆಲಸ ಇದ್ದರೂ ಮುಂದೆ ಯಾವುದು ಅಂತ ತಿಳಿದಿದ್ದರೂ ತಕ್ಷಣಕ್ಕೆ ಖಾಲಿಯಾಗಿಬಿಡುತ್ತದೆ. ಈಗ ಅದೆಲ್ಲಾ ಸುಧಾರಿಸುವ ಹಂತಕ್ಕೆ ಬಂದಿದೆ. ದೀಪಾವಳಿಯ ಸಮಯದಲ್ಲಿ ಅಮ್ಮ ನೆನಪಾದರು.
ದೀಪಾವಳಿಯ ಸಡಗರ ಎಲ್ಲೆಡೆಯೂ ಕೇಳಿತ್ತು. ಮಕ್ಕಳಿಗೂ ಖುಷಿಯಾಗಿತ್ತು. ಸದ್ದಿಲ್ಲದೆ ಮಧ್ಯಾಹ್ನ ಪತ್ನಿ, ಮಕ್ಕಳ ಜೊತೆ ತಂಗಿಯ ಮನೆಗೆ ಹೋದೆ, ಊಟ ಮಾಡಿದೆ, ನಿದ್ದೆ ಮಾಡಿದೆ ಸುಖಾ ಸುಮ್ಮನೆ ಬಂದೆ. ಮಕ್ಕಳು ಆಟವಾಡಿದರು, ಖುಷಿ ಪಟ್ಟರು. ಎಲ್ಲಾ ಕೆಲಸಗಳ ನಡುವೆಯೇ ಖಾಲಿಯಾಗುವ ಮನಸ್ಸುಗಳನ್ನು ಮರುಭರ್ತಿ ಹೇಗೆ ? ಎಂದು ಯೋಚಿಸುವ ಕಾಲ ಇದಲ್ಲ. ಮುಂದಿನ ಕೊಂಡಿಗಳಿಗೆ ದಾರಿದೀಪವಾಗಬೇಕು. ಅದು ಈ ಬಾರಿ ಆಚರಣೆಯೇ ಇಲ್ಲದ ದೀಪಾವಳಿಯ ನಡುವೆ ದೀಪವಾಗಬೇಕು. ಸುಲಭ ಇಲ್ಲ........
ಕಾಕತಾಳೀಯ ಎನ್ನುವುದೋ ಅಥವಾ ಏನೋ ಸೂಕ್ಷ್ಮವಾದ ಸಂಗತಿ ಇದೆಯೋ? ಮೌನವಾಗಿ ಕುಳಿತಾಗ ಯೋಚನೆಗಳು ಸಾಗುತ್ತವೆ...
ಇವರ ಬಗ್ಗೆ ಬರೆಯಲೇಬೇಕು. ಏಕೆಂದರೆ ಅಪರೂಪದ ವ್ಯಕ್ತಿತ್ವ. ಅದು ಹಿಂದುತ್ವದ ವ್ಯಕ್ತಿತ್ವ. ಹಿಂದುವಾಗಿ ಕಾಣುತ್ತಾ ಜಾತಿವಾದಿಗಳಾಗುವ ಕಾಲದಲ್ಲಿ ಇಂತಹವರ ಪರಿಚಯವಾಗಬೇಕು ಹಾಗೂ . ನನ್ನ ಮನಸ್ಸಿನಲ್ಲಿ ಇದು ದಾಖಲಾದ್ದನ್ನು ಅಕ್ಷರ ರೂಪಕ್ಕೆ ಇಳಿಸಬೇಕು. ಈ ವ್ಯಕ್ತಿತ್ವ ಶ್ರೀನಿವಾಸ ಉಬರಡ್ಕ.
ಶ್ರೀನಿವಾಸ ಉಬರಡ್ಕ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನನಗೆ ಪರಿಚಯ. ಪರಿಚಯ ಅನೇಕ ಸಮಯಗಳಿಂದ ಇದ್ದರೂ ಬಹಳ ಹತ್ತಿರ ಏನೂ ಇರಲಿಲ್ಲ. ಎಲ್ಲರಂತೆ ಅವರೂ ಒಬ್ಬರು ಪರಿಚಯಸ್ಥರು ಅಷ್ಟೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನನ್ನ ಪರಿಚಯಿಸಿದವರು ಲಕ್ಷ್ಮೀಶ ಗಬ್ಲಡ್ಕ ಹಾಗೂ ವೇಣುಗೋಪಾಲ ಮುರುಳ್ಯ. ಆರ್ ಎಸ್ ಎಸ್ ಪರಿಚಯದ ನಂತರ ಅವರಿಬ್ಬರೂ ನನಗೆ ಅಂದು ಸ್ಫೂರ್ತಿಯಾದ್ದು ಹಿಂದುತ್ವದ ಕಾರಣಕ್ಕೆ. ಜಾತಿಯ ಗೋಡೆಯನ್ನು ಬಿಟ್ಟು ದಾಟಿರುವುದಕ್ಕೆ. ಆ ಕಾರಣದಿಂದಲೇ ಅನೇಕರ ಮನೆಗೆ ಹಿಂದುವಾಗಿ ಹೋಗಿದ್ದೆ, ನಮ್ಮ ಮನೆಯಲ್ಲೂ ಹಿಂದೂಗಳಾಗಿಯೇ ಎಲ್ಲರೂ ಕಂಡಿದ್ದೆವು. ಈಗ ಶ್ರೀನಿವಾಸ ಅವರು ಕೂಡಾ ಹಿಂದುತ್ವದ ಕಾರಣದಿಂದ ಹೆಚ್ಚು ಆಪ್ತರಾಗುತ್ತಾ ಹೋದರು. ಅದಕ್ಕೆ ಈಚೆಗಿನ ಅವರ ಮನೆಯ ಖಾಸಗಿ ಕಾರ್ಯಕ್ರಮವೂ ಕಾರಣವಾಯಿತು. ಅದಕ್ಕಿಂತಲೂ ಮೊದಲು ಪರಿಚಯವು ಹೆಚ್ಚು ಪರಿಚಯವಾಗಲು ಕಾರಣವಿದೆ...
ಆಗ ಶ್ರೀನಿವಾಸ ಉಬರಡ್ಕ ಅವರಿಗೆ ಸಂಘದ ಜವಾಬ್ದಾರಿ ಇತ್ತು. ಚುನಾವಣೆಯ ಹೊತ್ತಿನಲ್ಲಿ ಸಂಘವು ಒಂದಿಷ್ಟು ಕೆಲಸ ಮಾಡಬೇಕು ಎಂಬ ಸೂಚನೆ ಇತ್ತು. ಅದನ್ನು ಶಿರಸಾ ಪಾಲಿಸಬೇಕಾಗಿತ್ತು ಅಲ್ಲಿನ ಜವಾಬ್ದಾರಿ ಇದ್ದವರಿಗೆ.
ಆ ಚುನಾವಣೆಯ ಹೊತ್ತಿನಲ್ಲಿ ನಾವು ನಮ್ಮ ಊರಿನ ಮೂಲಭೂತ ವ್ಯವಸ್ಥೆಗಳ ಬಗ್ಗೆ ಹೋರಾಟ ನಡೆಯುತ್ತಿದ್ದ ಕಾಲ. ಅನೇಕ ಸಮಯಗಳಿಂದ ಓಟು ಮಾಡಿ, ಅವರ ಜೊತೆಗೇ ವಿವಿಧ ಸ್ಥರದಲ್ಲಿ ಗುಪ್ತವಾಗಿ ಕೆಲಸ ಮಾಡಿಯೂ ನಾವು ಬೇಡಿಕೆಯೇ ಸಲ್ಲಿಸಬಾರದು ಎಂದು ಅರ್ಥವಾಗಿದ್ದ ಸಮಯ ಅದು. ಪತ್ರಿಕೆಯಲ್ಲಿ ಬರೆಯಬಾರದು ಎಂದು ಹೇಳಿದ್ದ ಸಮಯ ಅದು, ಉದ್ಘಾಟನೆಗೆ ಎಂದು ಕರೆಯಿಸಿ ಪರೋಕ್ಷವಾಗಿ ನಮಗೇ ಬೈದ ಸಮಯ ಅದು. ಇದೆಲ್ಲಾ ಆದ ಬಳಿಕ ಅಷ್ಟೂ ಸಮಯವೂ ಜೊತೆಯಾಗಿದ್ದರೂ ನಾವೆಲ್ಲರೂ ಪರಕೀಯರಂತೆ ಇರಬೇಕಾಗಿ ಬಂದಾಗ ನಾವೆಲ್ಲಾ ಜೊತೆಯಾಗಿ ನಮ್ಮೂರಿನ ಮೂಲಭೂತ ಸಮಸ್ಯೆ ನಿವಾರಣೆಗೆ ಯಾವ ಪಕ್ಷಗಳಿಗೂ ಮತ ನೀಡದೇ ಇರಲು ನಾವು ಒಂದಷ್ಟು ಜನ ಯೋಚನೆ ಮಾಡಿದ್ದೆವು. ಏಕೆಂದರೆ ಅದುವರೆಗೂ ನಾವು ಸಿದ್ಧಾಂತದ ಆಧಾರದಲ್ಲಿಯೇ ಮತ ಚಲಾಯಿಸುತ್ತಿದ್ದ ಹಾಗೂ ಅದೇ ಪಕ್ಷದ ಗಣ್ಯ ವ್ಯಕ್ತಿಗಳು ಆ ಸಿದ್ಧಾಂತಗಳಿಗೆ ಬೆಲೆ ಕೊಡಲಿಲ್ಲ. ಉಳಿದ ಪಕ್ಷಗಳಂತೆಯೇ ಮಾಡಿದ್ದರು ಕೂಡಾ. ನಮಗೂ ನೈತಿಕವಾಗಿ ಯಾವ ಪಕ್ಷಗಳಲ್ಲೂ ಕೇಳಲು ಆಗದೇ ಇರುವ ಸ್ಥಿತಿ ಇದ್ದುದರಿಂದ ಎಲ್ಲವೂ ಸಮಾನ ಎಂದು ತಿಳಿದು ಯಾವ ಸಿದ್ದಾಂತಗಳೂ ಇಲ್ಲವೆಂದು ನಮ್ಮ ನಿರ್ಧಾರ ಬದಲಾಯಿಸಲು ಯೋಚಿಸುತ್ತಿದ್ದೆವು. ಮತ ಬಹಿಷ್ಕಾರ ಅಥವಾ ನೋಟದ ಯೋಚನೆಯಲ್ಲಿ ಇದ್ದೆವು. ಆಗ ಶ್ರೀನಿವಾಸ ಉಬರಡ್ಕ ಅವರು ಮನೆಗೆ ಆಗಮಿಸಿ, ಆ ಪಕ್ಷಕ್ಕೆ ಏಕೆ ಮತ ನೀಡಬೇಕು ಹಾಗೂ ಸಿದ್ಧಾಂತಗಳನ್ನು ಏಕೆ ಬದಲಿಸಬಾರದು ಎಂದು ಹೇಳಿದ್ದರು. ಅದರ ಜೊತೆಗೆ ನಿಮ್ಮ ಮೂಲಭೂತ ವ್ಯವಸ್ಥೆಯ ಬಗ್ಗೆ ಚುನಾವಣೆಯ ನಂತರ ಮಾತಾಡೋಣ ಎಂದಿದ್ದರು. ಅವರ ಮಾತಿಗೆ ಬೆಲೆ ನೀಡಿದ್ದೆವು, ಏಕೆಂದರೆ ಶ್ರೀನಿವಾಸ ಉಬರಡ್ಕ ಅವರು ನೇರ ನಡೆ ನುಡಿಯವರು. ಅವರು ಪಕ್ಷದ ಹಿಂದೆ ಹೋದವರಲ್ಲ, ಆದರೆ ಸಂಘಟನೆಯ ಸೂಚನೆಯಂತೆ ಪಕ್ಷದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರು ಎನ್ನುವುದು ನಮಗೆ ತಿಳಿದಿತ್ತು.
ಅದಾಗಿ ಚುನಾವಣೆ ಮುಗಿದು ಕೆಲವು ಸಮಯವಾದರೂ ನಮ್ಮ ಬೇಡಿಕೆಗಳಿಗೆ ಯಾವ ಪ್ರತಿಕ್ರಿಯೆಯೂ ಇಲ್ಲದಾಗ ಮತ್ತೆ ಶ್ರೀನಿವಾಸ ಅವರಲ್ಲಿ ಕೇಳಿದಾಗ ನಾನು ಮಾತು ತಪ್ಪಿದ್ದೇನೆ, ಈಗ ಪಕ್ಷದವರು ಈ ಬಗ್ಗೆ ಮಾತು ಎತ್ತುತ್ತಿಲ್ಲ, ಅಂದು ಗಮನಕ್ಕೆ ತಂದಿದ್ದೇನೆ ಎಂದರು. ಆ ಬಳಿಕ ಶ್ರೀನಿವಾಸ ಉಬರಡ್ಕ ಅವರ ಜೊತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಜೊತೆಗಿನ ನನ್ನ ಸ್ನೇಹ ಹೀಗೇ ಮುಂದುವರಿಯುತ್ತದೆ, ಆದರೆ ಇನ್ನು ನೀವು ನಮ್ಮ ಯಾವುದೇ ಹೋರಾಟದಲ್ಲಿ ನಮ್ಮ ರಾಜಿಗೆ ಬರಬಾರದು ಎಂದು ಹೇಳಿದ್ದೆವು. ಮೌನವಾಗಿ ನಗಾಡಿದ ಅವರು ಸುಮ್ಮನಾದರು. ಅದಾದ ಬಳಿಕದ ಯೋಚನೆ ಆರಂಭಿಸುತ್ತಿದ್ದಾಗ ಕೇಂದ್ರ ಸರಕಾರದ ಚುನಾವಣೆ ಬಂದಿತ್ತು. ಮೋದಿ ಅವರ ಹೆಸರಿಗಾಗಿ ಆ ಬಾರಿ ಮೌನ ವಹಿಸಿದೆವು. ಪಂಚಾಯತ್ ಚುನಾವಣೆಯ ವೇಳೆಗೆ ಯಾರ ಮಾತನ್ನೂ ಕೇಳದೆ ನಾವು ಹೋರಾಟಕ್ಕೆ ಸಿದ್ಧರಾದೆವು. ಅಂದಿನಿಂದ ಇಂದಿನವರೆಗೆ ಹೀಗೇ ಮಾತುಕತೆಗಳಾದರೂ ನಮ್ಮ ಹೋರಾಟಕ್ಕೂ ಅವರಿಗೂ ವಿರೋಧ ಇದೆ. ಆದರೆ ಇತರ ಸಾಮಾಜಿಕ ಕೆಲಸಗಳ ಬಗ್ಗೆ ಸದಾ ಚರ್ಚೆ ಇದೆ.
ಅದಾದ ಬಳಿಕ ನನ್ನ ತಂದೆಯವರು ನಿಧನರಾದಾಗ ಕರೆ ಮಾಡಿ ಸಾಂತ್ವನ ಹೇಳಿದ, ಸಹಾಯ ಕೇಳಿದ, ಮನೆಗೆ ಬಂದು ಮಾತುಕತೆ ನಡೆಸಿ ಧೈರ್ಯ ತುಂಬಿದವರಲ್ಲಿ ಶ್ರೀನಿವಾಸ ಉಬರಡ್ಕ ಹಾಗೂ ತಳೂರು ಚಂದ್ರಣ್ಣನೂ ಇದ್ದರು.
ಇದೆಲ್ಲಾ ಘಟನೆಗಳ ನಂತರವೂ ಸ್ನೇಹ ಮುಂದುವರಿಯಿತು. ಸಾಮಾಜಿಕ ಸಂಗತಿಯನ್ನು ಬಿಟ್ಟು.
ಈಚೆಗೆ ಶ್ರೀನಿವಾಸ ಉಬರಡ್ಕ ಅವರ ಮಗಳ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು. ಸಹಜವಾಗಿಯೇ ನನಗೆ ಕುತೂಹಲ ಇತ್ತು. ಹಿಂದುತ್ವದ ಪ್ರತಿಪಾದಕ, ಜಾತಿ ವ್ಯವಸ್ಥೆಯನ್ನು ಯಾವ ಕಾರ್ಯಕ್ರಮದಲ್ಲೂ ತಾರದ ವ್ಯಕ್ತಿ, ಇಡೀ ಕುಟುಂಬದ ಸದಸ್ಯರ, ಇನ್ನೊಂದು ಕುಟುಂಬದ ಮಂದಿಯನ್ನು ಮನವೊಲಿಸಿ ತಾವು ನಂಬಿದ ಸಿದ್ದಾಂತವನ್ನು ಹೇಗೆ ಅನುಷ್ಟಾನ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೆ. ಆದರೆ ನನ್ನ ಯೋಚನೆ, ನಿರೀಕ್ಷೆಗೂ ಮೀರಿ ಅವರು ಕಾರ್ಯಕ್ರಮ ನಡೆಸಿದರು. ಈ ಮೂಲಕ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡರು ಎಂಬುದು ನನ್ನ ಭಾವನೆ. ಹೀಗಾಗಿ ಅಕ್ಷರದ ಮೂಲಕ ದಾಖಲಿಸಬೇಕಾಯಿತು.
ಈ ವಿವಾಹ ಕಾರ್ಯಕ್ರಮಕ್ಕೆ ಪೂರ್ವಯೋಜಿತವಾಗಿ ಬೆಳಗ್ಗೆಯೇ ಇರಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಂದ ಕೊಂಚ ತಡವಾಗಿ ಭಾಗವಹಿಸಬೇಕಾಯಿತು. ಜಾತಿಯಲ್ಲಿ ಬ್ರಾಹ್ಮಣ. ಆಚರಣೆಯಲ್ಲಿ ಹಿಂದುವಾಗಿದ್ದ ಶ್ರೀನಿವಾಸ ಅವರು ತಮ್ಮ ಮಗಳ ಮದುವೆಯಲ್ಲೂ ಸಂಪ್ರದಾಯಗಳೊಂದಿಗೆ ಹಿಂದುತ್ವವನ್ನು ಎತ್ತಿ ಹಿಡಿದರು. ಅದು ಸುಲಭದ ಕೆಲಸ ಅಲ್ಲ. ಮಾತು ಹಾಗೂ ಕೃತಿಯಲ್ಲಿ, ನೇರ ನಡೆನುಡಿ ಇದ್ದರೆ ಮಾತ್ರವೇ ಈ ರೀತಿ ನಡೆಯಲು ಸಾಧ್ಯ. ನನ್ನ ಅಜ್ಜನೂ ಒಬ್ಬರು ಇದ್ದರು. ಅವರಿಗೂ ಈ ರೀತಿ ನಡೆದುಕೊಳ್ಳಲು ಆಗಿತ್ತು. ಉಳಿದ ಎಲ್ಲೆಡೆಯೂ ಆಚರಣೆಯಲ್ಲೂ ವ್ಯತ್ಯಾಸ ಇದ್ದುದನ್ನು ಕಂಡಿದ್ದೇನೆ.
ಮದುವೆಯಲ್ಲಿ ಎರಡು ಕುಟುಂಬಗಳು, ಅದರಲ್ಲಿ ಇರುವ ಸಂಪ್ರದಾಯವಾದಿಗಳು, ಅವರ ಮನವೊಲಿಸುವುದು ಹಾಗೂ ಖಡಕ್ ಆಗಿ ಹೇಳುವುದು ಇದೆಲ್ಲಾ ಮದುವೆಯ ಕಾರ್ಯಕ್ರಮದಲ್ಲಿ ಸುಲಭದ ಕೆಲಸ ಅಲ್ಲ. ಸಂಘಟನೆ ಯಾವುದೇ ಇದ್ದರೂ ಅದೆಲ್ಲಾ ಬದಿಗಿರಲಿ ಎಂದು ಪುರೋಹಿತರಿಂದ ತೊಡಗಿ ಎಲ್ಲರೂ ಹೇಳುವ ಕಾಲದಲ್ಲಿ ಶ್ರೀನಿವಾಸರು ಮಗಳ ಮದುವೆಯಲ್ಲಿ ಸಮಾಜದಲ್ಲಿ ಉಪೇಕ್ಷಿತ ಸಮಾಜ ಎಂದು ಯಾವುದನ್ನು ಗುರುತಿಸುತ್ತದೋ ಅದೇ ಸಮುದಾಯದ ಯುವಕ ವೈಯಕ್ತಿಕ ಗೀತೆ ಹಾಡಿದರು, ಅಕ್ಷತೆ ಹಾಕಿದರು. ಮಂಟಪಕ್ಕೆ ಬಂದರು. ಅಂದರೆ ಇಡೀ ಹಿಂದೂ ಸಮಾಜವೇ ಬಂದಿದೆ ಎಂದೇ ಅರ್ಥವಾಯಿತು ಇಲ್ಲಿ. ಎಲ್ಲೂ ಯಾವ ತಾರತಮ್ಯ ಇಲ್ಲ. ಹಿಂದುತ್ವ ಎನ್ನುವುದು ಓಟಿಗಾಗಿಯೋ, ಉಪದೇಶಕ್ಕಾಗಿಯೋ ಇರುವ ಈ ಕಾಲದಲ್ಲಿ ನಾವೆಲ್ಲಾ ಇಂತಹವರಿಂದ ಪ್ರೇರಣೆಗೆ ಒಳಗಾದವರೇ.
ಅಂತಹ ಜನರು ಈಗಿಲ್ಲ... ಮಾತಿಗೂ ಕೃತಿಗೂ ವ್ಯತ್ಯಾಸ ಇದೆ ಎಂದು ಭ್ರಮನಿರಸನಗೊಂಡಿದ್ದೆ. ಓಟಿಗಾಗಿ ಮಾತ್ರವೇ ಹಿಂದುತ್ವ ಎಂದು ಭಾವಿಸಿಕೊಂಡಿದ್ದೆ. ಆದರೆ ಶ್ರೀನಿವಾಸ ಉಬರಡ್ಕ ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು. ಅವರ ಹಿಂದುತ್ವದ ಉದ್ದೇಶವೂ ಸಮಾನತೆಯೇ ಆಗಿದೆ ಎಂದು ಭಾವಿಸಿಕೊಂಡೆ. ಇಂತಹವರು ಯಾವತ್ತೂ ಪ್ರೇರಣೆಯೇ. ಇಂದು ನಾನು ಅನೇಕರಿಗೆ ವಿರೋಧಿ ಎಂದು ಅನಿಸಬಹುದು.ಅಭಿವೃದ್ಧಿ ಪರವಾಗಿ ಯೋಚಿಸುವುದು ನಿರಂತರ. ಆದರೆ ನಾನು ಇದುವರೆಗೂ ಕಲಿತ ಪಾಠ ಹಾಗೂ ಸ್ಫೂರ್ತಿಯಾದ ಹಿಂದುತ್ವ ಆಚರಿಸಿದ್ದೇನೆ. ಆದರೆ ಈಗ ಹೊಡಿ, ಬಡಿಯ ಕಡೆಗೆ ಮನಸ್ಸಿಲ್ಲ. ಹಿಂದುವಾಗಿ ದೇಶದ ಕಡೆಗೆ ಸಂಸ್ಕೃತಿ ಉಳಿಸುವ, ಬೆಳೆಸುವ ಯೋಚನೆಯನ್ನು ಎಂದಿಗೂ ಬಿಡದೇ ಇರಲು ಶ್ರೀನಿವಾಸ, ವೇಣುವಣ್ಣ ಅಂತಹವರು ಮುಖ್ಯ ಕಾರಣ.
ವಧೂವರರಿಗೆ ಶುಭಾಶಯ. ಅವರ ಮಗಳ ಬದುಕು ಸುಂದರವಾಗಲಿ. ಶುಭವಾಗಲಿ.
ಎಷ್ಟೇ ಹೇಳಿದರೂ ಇಂದು ಜಗತ್ತು ಉದ್ಯಮವಾಗಿ ಬದಲಾಗುತ್ತಿದೆ. ಏನೇ ಮಾತನಾಡಿದರೂ ಕೊನೆಗೆ ಬಂದು ನಿಲ್ಲಿವುದು ನನಗೇನು ಅಥವಾ ನಮಗೇನು ಲಾಭ ಎಂದೇ ? ಇಂತಹ ಕಾಲಘಟ್ಟದಲ್ಲಿ ಮಾನಸಿಕವಾಗಿ ಸ್ವಲ್ಪ ಯೋಚಿಸಬಲ್ಲ ಹಾಗೂ ಅಂತಹ ವಾತಾವರಣವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹೀಗಾಗಿ ಈಗ ಯೋಚಿಸಬೇಕಾದ ಕಾಲಘಟ್ಟ.
ಈ ಜಗತ್ತಿಗೆ, ಈ ಸಮಾಜಕ್ಕೆ ಕೊಡುಗೆ ಏನು ನೀಡಬಹುದು ? ಎಂಬ ಪ್ರಶ್ನೆಯನ್ನು ಒಬ್ಬರು ಕೇಳಿದರು. ಅನೇಕರು ವಿವಿಧ ರೀತಿಯ ಉತ್ತರ ನೀಡಿದರು. ಅವರವರ ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಉತ್ತರಗಳನ್ನು ನೀಡಿದರು. ಅದರಲ್ಲಿ ಬಹುಪಾಲು ಈ ಜಗತ್ತಿನಲ್ಲಿ ಸೃಷ್ಟಿಸಿಯಾಗಿದೆ ಕೂಡಾ. ಇನ್ನೇನಿದ್ದರೂ ಅದರದ್ದೇ ಮುಂದಿನ ಭಾಗ ಅಷ್ಟೇ…!. . ಅನೇಕ ಯುವ ಪತ್ರಕರ್ತರನ್ನು ಅದೇ ಪ್ರಶ್ನೆ ಕೇಳಿದಾಗ ಹೇಳುವ ಉತ್ತರ, “ ಈ ಸಮಾಜವನ್ನು ಬದಲಾಯಿಸಲು ನಾನು ಪತ್ರಿಕೋದ್ಯಮ” ಆಯ್ಕೆ ಮಾಡಿಕೊಂಡಿದ್ದೇನೆ ಎಂದೇ. ಇಂತಹ ಉದ್ದೇಶ ಇಟ್ಟುಕೊಂಡಿರುವ ಪತ್ರಕರ್ತರು ನಂತರ ಸೋಲುವುದು ಎಲ್ಲಿ ? ಎಂಬುದೇ ಬಹುದೊಡ್ಡ ಪ್ರಶ್ನೆ. ಈ ಬದಲಾವಣೆ ಆಗಬೇಕಾದ್ದು ಎಲ್ಲಿ ?. ಹಾಗಿರುವ ಬದಲಾವಣೆ ಏನು ?
ಇಂದಿನ ಕಾಲಘಟ್ಟದಲ್ಲಿ ಈ ದೇಶಕ್ಕೆ, ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ ಕೊಡುಗೆಯೇ ನೈತಿಕ ಮೌಲ್ಯಗಳು. ಈ ದೇಶದ ಪರಂಪರೆಯಾದ ನೈಜತೆಯ ಪುನರುತ್ಥಾನ ಅಷ್ಟೇ. ಅದನ್ನು ಚಿಂತಿಸುವ ಹಾಗೆ ಮಾಡಬೇಕಾದ್ದೇ ಪತ್ರಿಕೋದ್ಯಮ ವಿಭಾಗ, ಏಕೆಂದರೆ ಇಂದು ಯೋಚಿಸುವಂತೆ ಹಾಗೂ ಅದನ್ನು ಓದುವಂತೆ ಮಾಡುವು ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಅದು ಸೋಶಿಯಲ್ ಮೀಡಿಯಾ, ಆನ್ ಲೈನ್ ಮೀಡಿಯಾ, ಪತ್ರಿಕಾ ರಂಗ, ದೃಶ್ಯ ಮಾಧ್ಯಮ. ಇಲ್ಲೆಲ್ಲಾ ಸತ್ಯದ ಯೋಚನೆಯನ್ನು ಯೋಜಿಸುವ ಮನಸ್ಸುಗಳು ಬೆಳೆಯಬೇಕಾದ ಅವಶ್ಯಕತೆ ಇದೆ. ಏಕೆಂದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದು ಕಾಲಂ ಪ್ರಕಟವಾಗುತ್ತಿದೆ, “ಫ್ಯಾಕ್ಟ್ ಚೆಕ್” . ಅಂದರೆ ಅಷ್ಟೂ ಪ್ರಮಾಣದಲ್ಲಿ ಸುಳ್ಳುಗಳು ವಿಜೃಂಭಿಸುತ್ತವೆ, ಎಷ್ಟೆಂದರೆ ಸತ್ಯವೇ ಸುಳ್ಳೆಂದು ಹೇಳುವ ಕಾಲಘಟ್ಟ ಬಂದಾಗಿದೆ. ಹೀಗಾಗಿ ಇಲ್ಲೊಂದು ಬದಲಾವಣೆಯ ಪರ್ವ ಆರಂಭವಾಗಬೇಕಿದೆ.
ಇಷ್ಟೇ ಇಲ್ಲ, ಅದಾರಾಚೆಗೆ ಬಂದರೆ,ಒಂದು ಕುಟುಂಬದ ಕಣ್ಣೀರು, ಒಂದು ಕುಟುಂಬ ಖಾಸಗಿ ಬದುಕುಗಳೂ ಇಂದು ಉದ್ಯಮವಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲಿ ಇದಕ್ಕೇ ಪ್ರಾಶಸ್ತ್ಯ ಎಂದಾದರೆ ಒಂದು ಕಣ್ಣೀರು ಕೂಡಾ ಉದ್ಯಮವಾಗುತ್ತದೆ ಎಂದಾದರೆ ಅಲ್ಲಿ ಮನುಷ್ಯತ್ವ ಸಾಯುತ್ತಿದೆ ಎಂದೇ ಅರ್ಥ. ಒಂದು ಮನೆಯೊಳಗಿನ ಕಣ್ಣೀರಿಗೆ ಇಡೀ ಸಮಾಜವೇ ಬೆಳಕಾಗುತ್ತದೆಯಾದರೆ ಇಂದು ಸಮಾಜದಲ್ಲಿ ಯಾವ ಕುಟುಂಬಗಳೂ ಸಂಕಷ್ಟದಲ್ಲಿ ಇರಬಾರದಾಗಿತ್ತು. ಆದರೆ ಹಾಗಾಗುತ್ತಿಲ್ಲ, ಆ ಕುಟುಂಬದ ಸಂಕಷ್ಟದ ಕಣ್ಣೀರು ನೋಡುತ್ತಾ, ಆನಂದವೋ, ಮತ್ತೆ ಕಣ್ಣೀರೋ.. ? ಏನೋ ಒಂದು ಆಗುತ್ತಿದೆ ಎನ್ನುವುದು ಇಲ್ಲೊಂದು ಬದಲಾವಣೆ ಬೇಕಿದೆ ಎನ್ನುವುದರ ಸೂಚಕವಷ್ಟೇ.
ಇಷ್ಟೇ ಅಲ್ಲ, ನೈತಿಕ ಅಧ:ಪತನಗಳು ಎಲ್ಲಾಗುತ್ತಿವೆ ಎಂದರೆ ಮಾಧ್ಯಮ ರಂಗದಲ್ಲಿಯೇ..!. ಯಾವುದೋ ಖಾಸಗಿ ಕ್ಷಣಗಳು, ನೈತಿಕ ಅಧ:ಪತನದ ವಿಡಿಯೋ ಕೂಡಾ ಉದ್ಯಮವಾಗುತ್ತದೆ. ಸೆಕ್ಸ್ ವಿಡಿಯೋಗಳೂ ಕೂಡಾ ಸೋಶಿಯಲ್ ಮೀಡಿಯಾದಿಂದ ತೊಡಗಿ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತವೆ ಹಾಗೂ ಇಡೀ ದಿನ ಪ್ರಸಾರವಾಗುತ್ತದೆ ಎಂದಾದರೆ ಪ್ರತೀ ವ್ಯಕ್ತಿಯೂ ನೈತಿಕವಾಗಿ ಕುಸಿತವಾಗಿದ್ದಾನೆ ಎಂದೇ ಅರ್ಥ.ಇಲ್ಲೂ ಬದಲಾವಣೆಯ ನಿರೀಕ್ಷೆ ಇದೆ.
ಇಂದು ಪುಟ್ಟ ಪುಟ್ಟ ಮಾಧ್ಯಮ ಗಮನಿಸಿದರೂ, ಸಮಾಜದಲ್ಲಿ ಒಳ್ಳೆಯದನ್ನು ಫೋಕಸ್ ಮಾಡದೆ, ಕೊಲೆ, ಸುಲಿಗೆ, ಸೆಕ್ಸ್, ಸೇರಿದಂತೆ ಋಣಾತ್ಮಕ ಸಂಗತಿಗಳನ್ನೇ ಏಕೆ ಪ್ರಸಾರ ಮಾಡುತ್ತಿವೆ ಎಂಬ ಸಮೀಕ್ಷೆ ಮಾಡಿದರೆ, ಅದೆಲ್ಲವೂ ವ್ಯವಹಾರವಾಗಿದೆ, ಅದೆಲ್ಲಾ ಉದ್ಯಮವಾಗಿದೆ. ಅಂತಹ ಸಂಗತಿಗಳೇ ಓದಿಸುತ್ತವೆ, ಹೀಗೆ ಓದಿಸಿದರೆ ಮಾಧ್ಯಮ ಓಡುತ್ತದೆ, ಮಾಧ್ಯಮ ಓಡಿದರೆ ಹಣ ಬರುತ್ತದೆ…!. ಇಷ್ಟೇ ಇಲ್ಲಿರುವ ಸಂಗತಿಗಳು.
ಇಂತಹ ವ್ಯವಸ್ಥೆ ಬದಲಾಯಿಸಲು ತಕ್ಷಣಕ್ಕೆ ಸಾಧ್ಯವೇ ಇಲ್ಲ ಎಂಬುದೂ ವಾಸ್ತವ. ಆದರೆ ಸಣ್ಣ ಪ್ರಯತ್ನವೊಂದು ಆರಂಭವಾಗಬಹುದು ಅಷ್ಟೇ. ನದಿಯ ಮೊದಲ ಹನಿಯಂತೆ ಇದೂ ಒಂದು ಪ್ರಯತ್ನವಷ್ಟೇ. ರಚನಾತ್ಮಕವಾದ ದೃಷ್ಟಿಕೋನದಿಂದಲೇ ಹೆಜ್ಜೆ ಇರಿಸಿಕೊಂಡು ಸಮಾಜಕ್ಕೆ ಯಾವ ಉಪಯೋಗವೂ ಇಲ್ಲದ ಸುದ್ದಿಗಳ ಕಡೆಗೆ ಹೆಚ್ಚು ಫೋಕಸ್ ಮಾಡದೇ ಇರುವುದಷ್ಟೇ ಸದ್ಯದ ಪರಿಹಾರ. ಅಂತಹ ಮನಸ್ಥಿತಿಯನ್ನು ಯುವಪತ್ರಕರ್ತರು ಬೆಳೆಯಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ತರಬೇತಿಯೂ ಆ ನೆಲೆಯಲ್ಲಿಯೇ ನಡೆಯಬೇಕಿದೆ.ಇಂತಹ ನಡೆಯಲ್ಲೂ ಸವಾಲುಗಳು ಇರುತ್ತವೆ.
ವಾಸ್ತವದಲ್ಲಿ, ಉದ್ಯಮದ ನಡೆಗಿಂತಲೂ ರಚನಾತ್ಮಕವಾದ ನಡೆಗಳು ಯಾವತ್ತೂ ಹೆಚ್ಚು ಸವಾಲುಗಳೇ. ಇಂತಹ ಸಂಗತಿಗಳಲ್ಲಿ ದುಡ್ಡು ಆಗುವುದಿಲ್ಲ, ಇಂದಿನ ಸಮಾಜದಲ್ಲಿ ದುಡ್ಡ ಕೂಡಾ ಅಗತ್ಯವಾದ ಕಾರಣ ಇಂತಹ ರಚನಾತ್ಮಕ ನಡೆಗಳಲ್ಲಿ ದುಡ್ಡು ಆಗದೇ ಇದ್ದರೆ ಸಮಾಜದಲ್ಲಿ ಸಶಕ್ತವಾಗಿ ಬದುಕು ಹೇಗೆ ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕಾಗಿ ಒಂದಷ್ಟು ಸಹೃದಯ ಹಾಗೂ ನಿಜವಾಗೂ ಬದಲಾವಣೆಯ ಮನಸ್ಸುಳ್ಳ ಕೂಟಗಳು ಬೇಕಾಗಬಹುದು, ಅಂತಹ ಕೂಟವನ್ನು ಯುವಪತ್ರಕರ್ತರೇ ನಿರ್ಮಾಣ ಮಾಡುತ್ತಾ, ಸಮಾಜದಲ್ಲಿ ಬದಲಾವಣೆ, ಯೋಚಿಸುವ ಬದಲಾವಣೆ, ತರಲು ಸಾಧ್ಯವಿದೆ, ಒಮ್ಮೆ ಯೋಚನೆಗೆ ಬಂದರೆ ಉಳಿದೆಲ್ಲಾ ಬದಲಾವಣೆಗಳೂ ಸಹಜವಾಗಿಯೇ ಆಗುತ್ತದೆ. ಇಂತಹದ್ದೊಂದು ಪ್ರಯತ್ನ ಯುವಪತ್ರಕರ್ತರಿಂದ ನಡೆಯಲು , ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಲು ತರಬೇತಿ ಕೇಂದ್ರಗಳೂ ಗಟ್ಟಿಯಾಗಬೇಕು.
( ವಿವೇಕಾನಂದ ಪತ್ರಿಕೋದ್ಯಮ ಕಾಲೇಜಿನ ವಿಕಸನ ಪತ್ರಿಕೆಗಾಗಿ ಬರೆದದ್ದು )
ನಿನ್ನೆ ಸಂಘದ "ಪಾಸಿಟಿವ್ ಶಕ್ತಿ" ಯ ಬಗ್ಗೆ ನನ್ನ ಅನುಭವ ಹೇಳಿದ್ದೆ. ಅದೊಂದು ಸಮುದ್ರ. ಆ ಸಮುದ್ರವನ್ನು ನೋಡುತ್ತಾ, ಓದುತ್ತಾ ತಿಳಿದದ್ದು ಅದು. ಹಾಗೆಂದು ಯಾವತ್ತೂ ಆ ಅಗಾಧ ಶಕ್ತಿಯನ್ನು ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೋಪವೇ ಇಲ್ಲ, ನೆಗೆಟಿವ್ ಅಂಶಗಳೇ ಇಲ್ಲ.
ಆದರೆ 2021 ರಲ್ಲಿ ನಿಂತು ನೋಡಿದಾಗ ಇಪ್ಪತ್ತು ವರ್ಷಗಳಲ್ಲಿನ ಬದಲಾವಣೆ ಮಹತ್ವದ್ದು. ಅದಕ್ಕಿಂತಲೂ ಹಿಂದಿನವರಲ್ಲಿ ಮಾತನಾಡಿದರೆ ಭ್ರಮ ನಿರಸನವಾಗುತ್ತದೆ ಎನ್ನುತ್ತಾರೆ. ಹಾಗೆ ಭ್ರಮ ನಿರಸನವಾಗಲು Update ಆಗದೇ ಇರುವ ಕೊರತೆಯೋ ಎಂದು ಹಲವು ಬಾರಿ ಅನಿಸುತ್ತದೆ. ಇಂದಿನ ಯುಗ ವೇಗದ್ದು. ಈ ವೇಗದ ಯುಗದಲ್ಲಿ ತಕ್ಷಣವೇ ಅಪ್ಡೇಟ್ ಆಗಬೇಕಾಗುತ್ತದೆ. ಈ ವೇಗದ ಪರಿಣಾಮ ಪುಸ್ತಕಗಳಲ್ಲಿ ಕಾಣುವ ಯಾವ ಪಾಸಿಟಿವ್ ಶಕ್ತಿಗಳೂ ತಳಮಟ್ಟದಲ್ಲಿ ಕಾಣುತ್ತಿಲ್ಲ. ಹೀಗಾಗಿ ಹಿರಿಯ ಅನೇಕರಿಗೆ ಭ್ರಮನಿರಸನವಾಗುವುದು ಸಹಜ. ಅವರನ್ನು ಬದಿಗೆ ಸರಿಸುವುದು ಸಹಜವೇ, ಅವರೇ ಅಡ್ಡಿಯಾಗುವುದು ಸಹಜವೇ. ಏಷ್ಟೆಂದರೆ "ಅವರೇನೂ ಮಾಡಿಲ್ಲ..." ಎನ್ನುವಷ್ಟು ಬದಿಗೆ ತಳ್ಳುವುದು ಸಹಜ ಪ್ರಕ್ರಿಯೆ. ಅಂತಹ ಮೌಲ್ಯಗಳು ಇಂದು ಬೆಳೆಯುತ್ತಿರುವ ಕಾರಣವೇ ಯಾರು ಟೀಕೆ ಮಾಡಿದರೂ ತಕ್ಷಣವೇ ಯಾರಿದಂಲೋ ಪ್ರತಿಕ್ರಿಯೆ ಕೊಡಿಸಬೇಕಾಗುತ್ತದೆ. ಯಾರಿಂದಲೋ ಮಣಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿಕ್ರಿಯೆ ನೀಡಬೇಡಿ ಎಂದೂ ಹೇಳುವವರೂ ಇಲ್ಲದೇ ಇರುವುದೂ ಅದಕ್ಕೆ . ಏಕೆಂದರೆ ಈಗ ಅಧಿಕಾರ ಅಂದರೆ ಪವರ್ ಕೇಂದ್ರಿತ ವ್ಯವಸ್ಥೆ..!. ಇದರರ್ಥ ಆಂತರಿಕವಾದ ಮೌಲ್ಯಗಳ ಕುಸಿತ, ಬೌದ್ಧಿಕ, ವೈಚಾರಿಕ ವಿಷಯಗಳ ಕೊರತೆ, ಅಧಿಕಾರ ಕೇಂದ್ರಿತವಾದ ವ್ಯವಸ್ಥೆ, ಓಲೈಕೆಯ ಭಾಗ ಹೆಚ್ಚಾಗಿದೆ.
ಈ ಬದಲಾವಣೆಯ ಪರ್ವಗಳು ಆರಂಭವಾಗಿ ಹಲವು ಸಮಯಗಳು ಆದವು. ಈಗ ಅದರ ಪರಮೋಚ್ಛ ಸ್ಥಿತಿಯಷ್ಟೇ. ಸುಮ್ಮನೆ ಗಮನಿಸಿದರೆ ಸಂಘವು ಎಂದೂ ಟೀಕೆಗಳಿಗೆ ಉತ್ತರಿಸುತ್ತಿದ್ದು ಕಡಿಮೆಯೇ. ಟೀಕೆಗಳಿಗೆ ಕಾರ್ಯದ ಮೂಲಕ ಉತ್ತರ ಸಿಗುತ್ತಿತ್ತು ಅಷ್ಟೇ. ಈಗ ಹಾಗಲ್ಲ, ವಿವಿಧ ವಿಭಾಗಗಳು ಇದ್ದರೂ ಅಧಿಕಾರ ಕೇಂದ್ರಿತವಾದ ವ್ಯವಸ್ಥೆಗಳು ಬಲಗೊಂಡಿವೆ. ಸಂಘದ ಅಂಗ ಎನಿಸಿದ ಬಿಜೆಪಿಯೇ ಇಂದು ಸಂಘವಾಗಿ ಕಾಣುತ್ತದೆ. ಸಂಘದ ವಿವಿಧ ಸಂಘಟನೆಗಳು ಇದ್ದರೂ ಸಹಕಾರ ಭಾರತಿ, ಬಿಜೆಪಿ ಮಾತ್ರವೇ ಸಂಘ ಎಂದು ಕಾಣುತ್ತದೆ, ಅಲ್ಲಿ ಅಧಿಕಾರ ಪಡೆಯುವುದೇ ಸರ್ವ ಶ್ರೇಷ್ಟ ಎಂದು ಅನಿಸಿದೆ. ಇದಕ್ಕಾಗಿ ಸಂಘದ ಯಾರನ್ನೋ ಓಲೈಕೆ ಮಾಡಲೇಬೇಕು ಎಂಬುದು ಸರ್ವ ವಿಧಿತವಾಗಿದೆ. ಸಂಘದ ಉಳಿದ ಯಾವ ವಿಭಾಗದಲ್ಲೂ ಕೆಲಸ ಮಾಡುವುದೇ ನಗಣ್ಯವಾಗಿ ಬಿಡುತ್ತಿದೆ. ಬಿಜೆಪಿ, ಸಹಕಾರ ಭಾರತಿಯಲ್ಲಿ ಕೆಲಸ ಮಾಡಿದವನು ಮಾತ್ರವೇ ಕಾರ್ಯಕರ್ತ ಎಂಬ ಮಟ್ಟಿಗೆ ಬಂದಿರುವುದು ಈಗ ಬಹಿರಂಗ ಸಂಗತಿ. ಈ ಕಾರಣದಿಂದಲೇ ಇಂದು ಸೇವೆಗಿಂತಲೂ ಹೆಚ್ಚು ಓಲೈಕೆ ಎದ್ದು ಕಾಣುತ್ತದೆ. ಇದೆಲ್ಲಾ ಇವತ್ತು ಬಹುದೊಡ್ಡ ಪಾಸಿಟಿವ್ ಶಕ್ತಿಯೊಳಗೆ ನೆಗೆಟಿವ್ ಚಕ್ರಗಳು ಸುತ್ತುತ್ತಿವೆ.
ಈ ಕಾರಣದಿಂದಲೇ ಇಂದು ಕುಮಾರಸ್ವಾಮಿಯವರ ಹೇಳಿಕೆಗೆ ಇನ್ನಿಲ್ಲದಂತೆ ಎದ್ದು ಬಿದ್ದು ಹೇಳಿಕೆ ನೀಡಲೇಬೇಕಾಗಿ ಬಂತೇನೋ ಎಂದು ಅನಿಸುತ್ತದೆ. ಹಾಗಿದ್ದರೆ ಮೂಲ ವಿಚಾರದಲ್ಲಿ ಪ.ಪೂ ಗುರೂಜಿ ಅವರು ," ಸಂಘಟನೆಯಲ್ಲಿ ಅಹಂಕಾರ, ದರ್ಪ, ಒತ್ತಾಯ ಅಥವಾ ವ್ಯಕ್ತಿ ಪ್ರತಿಷ್ಟೆಗೆ ಅವಕಾಶವಿಲ್ಲ ಇವುಗಳಿಂದ ಸಂಘಟನೆಯಾಗುವುದಿಲ್ಲ. ವ್ಯಕ್ತಿಗತ ಅಭಿಮಾನದ ಲವಲೇಶವೂ ಇಲ್ಲದವರಿಂದಲೇ ಸಂಘಟನೆ ಕಟ್ಟಲು ಸಾಧ್ಯವಾಗುತ್ತದೆ" ಎಂದು ಹೇಳಿರುವುದಕ್ಕೆ ಅರ್ಥ ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಕಾರ್ಯಕ್ರಮದ ಮೊದಲು ಓದುವ ಸುಭಾಷಿತ ಓದಲು ಮಾತ್ರವೇ ಸೀಮಿತವಾಗಿದೆ ಎನ್ನುವುದು ಸುಳ್ಳಲ್ಲ.ಇವತ್ತು ಇಂತಹ ಹಲವು ನೆಗೆಟಿವ್ ಅಂಶಗಳು ಎದ್ದು ಕಾಣುವ ಕಾರಣದಿಂದಲೇ ತಳಮಟ್ಟದಲ್ಲಿ ಇತರೆಲ್ಲಾ ಸಂಘಟನೆಗಳಂತೆಯೇ ಎಲ್ಲಾ ವಿಭಾಗದಲ್ಲೂ ಒಬ್ಬನೇ ಕಾರ್ಯಕರ್ತ ಓಡಾಟ ಮಾಡುವ ಸ್ಥಿತಿ ಹೆಚ್ಚಾಗಿದೆ. ಅವನು ಭ್ರಷ್ಟಾಚಾರದಲ್ಲೂ, ಜಾತಿ ಸಂಘಟನೆಗಳಲ್ಲೂ , ಪಕ್ಷದಲ್ಲೂ, ಇತರ ಸಂಘಟನೆಯಲ್ಲೂ ಏಕ ವ್ಯಕ್ತಿ..!. ಇದು ಸಂಘಟನೆಯಲ್ಲಿಯೇ ಗೊತ್ತಿಲ್ಲದೆ ಆಗುತ್ತಿರುವ ಬದಲಾವಣೆ.
ಹೀಗಾಗಿ ಹಿಂದೂ ಸಮಾಜದ ಅಡಿಪಾಯವನ್ನು ಬಲಪಡಿಸುವ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ 1925 ರಲ್ಲಿ ಸ್ಥಾಪಿಸಿದ ಆರ್ ಎಸ್ ಎಸ್ ಗೂ 2021 ರಲ್ಲಿ ಕಾಣುವ ಆರ್ ಎಸ್ ಎಸ್ ಗೂ ಬದಲಾವಣೆ ಕಾಣುತ್ತದೆ. ಅಂದು ಭಗವಾಧ್ವಜದ ಹಿಂದೆ ಸಾಗಿ ವ್ಯಕ್ತಿಗಳು ಬದಲಾಗುತ್ತಾ ಇಂದು ವ್ಯಕ್ತಿಯ ಹಿಂದೆ ಗೊತ್ತಿಲ್ಲದೇ ತೆರಳುವ, ಗುಂಪುಗಳಾಗುವ ಹಂತ ಬಂದಿದೆ.ಇದಕ್ಕೆ ಕಾರಣ ಅಧಿಕಾರ ಹಾಗೂ ವ್ಯಕ್ತಿ ಪ್ರತಿಷ್ಟೆ.ಎಷ್ಟೆಂದರೆ ತಳಮಟ್ಟದಲ್ಲೂ ಜವಾಬ್ದಾರಿಯ ಹಂತಕ್ಕೆ ಬಂದಾಗ "ಅವನನ್ನು ಮಾಡಿ" "ಇವನನ್ನು ಬಿಡಿ" ಎಂದು ಹೇಳುವಷ್ಟು...!. ಹೀಗಾಗಿ ಈಗ ಗುಂಪುಗಳ ಸಂಖ್ಯೆ ಗೊತ್ತಿಲ್ಲದೆಯೇ ಹೆಚ್ಚಾಗಿದೆ.
ಇದರಿಂದಾಚೆ ಬಂದರೆ,
ಅಧಿಕಾರಗಳು ಲಭಿಸಲು ಆರಂಭವಾಯಿತು. ಅಂದಿನಿಂದಲೇ ಅಧಿಕಾರ ಕೇಂದ್ರಿತ ವ್ಯವಸ್ಥೆಗಳಾಗಿ ಮೂಲ ಸಂಗತಿಗಳು ಬದಲಾದವು. ಕೆಲವು ವರ್ಷದ ಹಿಂದೆ ಒಂದು ಪ್ರಮುಖ ದೇವಸ್ಥಾನದ ಆಡಳಿತ ಲಭ್ಯವಾಯಿತು. ಅಲ್ಲಿ ಸ್ವಚ್ಛ ಆಡಳಿತದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅಲ್ಲೊಂದು ಲೋಪ ಆಗಿತ್ತು. ಅದೊಂದು ಟೆಂಡರ್ ಪ್ರಕ್ರಿಯೆಯ ಸಂಗತಿ. ಆಗ ನಾನು ಪತ್ರಿಕೆಯಲ್ಲಿದ್ದೆ. ಪಕ್ಕಾ ಸ್ವಯಂಸೇವಕ. ಇತರ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ಪತ್ರಕರ್ತ. ಒಬ್ಬರು ಕೆಲವು ದಾಖಲೆ ತಂದು ತೋರಿಸಿದರು. ತಕ್ಷಣ ನಾನು ಸುದ್ದಿ ಮಾಡುವ ಬದಲು ಸಂಬಂಧಿತರ ಗಮನಕ್ಕೆ ತಂದು ಸುಮ್ಮನಾದೆ...!. ಆ ಸುದ್ದಿ ಸತ್ತು ಹೋಯಿತು. ಊರಿಗಿಡೀ ತಿಳಿಯಲೂ ಇಲ್ಲ...!. ಎಷ್ಟೆಂದೆರೆ ಆ ದಾಖಲೆ ನಾನು ಇರಿಸಿಕೊಳ್ಳಲೂ ಇಲ್ಲ...!. ಈ ಕಡೆ ಮಾಹಿತಿ ನೀಡಿದ ವ್ಯಕ್ತಿ ನನ್ನ ಮೇಲಿನ ನಂಬಿಕೆ ಕಳೆದುಕೊಂಡರು. 2021 ರಲ್ಲಿ ಇದನ್ನು ನೋಡಿದರೆ ಇಂತಹ ಹಲವು ಸಂಗತಿಗಳು ಕಾಣುತ್ತಿವೆ.....!
ಇನ್ನೊಂದು ಸಂಗತಿ, ಒಮ್ಮೆ ಒಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ನಾನು ಅತ್ಯಂತ ಗೌರವಿಸುವ ವ್ಯಕ್ತಿ. ಹಲವು ಸಂಗತಿಗಳು ಅವರು ಹೇಳಿದರೆ ಮುಗಿಯಿತು. ಏಕೆಂದರೆ ಅದರಲ್ಲಿ ಯಾವುದೇ ಕಲ್ಮಶವಿಲ್ಲ ಹಾಗೂ ಅದು ಸತ್ಯ ಅಂತಲೇ ನಂಬುತ್ತಿದ್ದೆ. ಏಕೆಂದರೆ ಆ ವ್ಯಕ್ತಿ ಅಷ್ಟೊಂದು ಪ್ರಾಮಾಣಿಕ. ಅದೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅವರು ಒಮ್ಮೆ ಹೀಗೆ ಮಾತನಾಡುತ್ತಾರೆ, " ಅವನು ನಮ್ಮನ್ನು ಬಿಟ್ಟರೆ ಏನೂ ಇಲ್ಲ. ಸಂಘಟನೆ ಅಂದರೆ ಹಾಗೇ, ಅವನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ, ಅವನು ಹಾಗೆ... ನಾವು ಇವನನ್ನು ಹೊರಗೆ ಇರಿಸಿದ್ದೇವೆ, ಇವನು ಅನಗತ್ಯ ಪ್ರಶ್ನೆ ಮಾಡುತ್ತಾನೆ.... ಇತ್ಯಾದಿ ಸಂಗತಿಗಳನ್ನು ಹೇಳಿದರು. ಆ ಕ್ಷಣದಲ್ಲಿ ನಾನು ಹೌದು ಎಂದು ಒಪ್ಪಿಕೊಂಡೆ ಏಕೆಂದರೆ ಆ ವ್ಯಕ್ತಿ ಅಂದು ಹಾಗೆಯೇ ಇದ್ದ ಕೂಡಾ ಹಾಗೂ ನಾನೂ ಯಾವುದನ್ನೂ ಯೋಚಿಸದೇ ಅದನ್ನು ಅನುಸರಿಸಿದೆ ಕೂಡಾ. ಏಕೆಂದರೆ ಅವರು ನಿಲ್ಕಷ್ಮಶ ಎಂದು ಅಂದುಕೊಂಡಿದ್ದೆ....! 2021 ರಲ್ಲಿ ನಿಂತು ಆಲೋಚಿಸುವಾಗ , ಚಿಂತನೆಗಳಲ್ಲಿ ವ್ಯತ್ಯಾಸ ಆದದ್ದು ಅರಿವಾಯಿತು, ಕಲುಷಿತವಾದ್ದು ಎಲ್ಲಿ ಎಂದು ಯೋಚಿಸುವಂತೆ ಮಾಡಿತು ಹಲವು ಸಂಗತಿಗಳು...!.
ಅಂತಹ ಹಲವು ಸಂಗತಿಗಳು ಇವೆ ನಾಳೆ ಬರೆಯುತ್ತೇನೆ. .........
ಯಾವತ್ತೂ ಒಂದು ಸಂಘಟನೆಯ, ಒಂದು ವ್ಯಕ್ತಿಯ ಬಗ್ಗೆ ಯಾವುದೇ ಕಾರಣ ಇಲ್ಲದೆ ಟೀಕೆ ಬರುವುದು ಎರಡು ಕಾರಣಗಳಿಗೆ, ಒಂದೋ ಆ ಸಂಘಟನೆ ಅಥವಾ ವ್ಯಕ್ತಿ ಬಲಿಷ್ಟವಾಗಿ ಬೆಳೆಯುತ್ತಿದ್ದಾನೆ ಅಥವಾ ಬೆಳೆದಿದ್ದಾನೆ ಎಂದರ್ಥ. ಇದು ದ್ವೇಷ ಭಾವನೆ ಕಾರಣ, ಈ ಕಾರಣದಿಂದ ಅನಗತ್ಯವಾಗಿ ಹಾಗೂ ಯಾವುದೇ ಕಾರಣ ಇಲ್ಲದೆ, ರಚನಾತ್ಮಕವಲ್ಲದೆಯೂ ಟೀಕೆಗಳು ಬರುತ್ತವೆ. ಆರ್ ಎಸ್ ಎಸ್ ಗೆ ಅಂತಹ ಯಾವ ಟೀಕೆಗಳ, ಹೊಗಳಿಕೆಗಳ ಅಗತ್ಯವೂ ಇಲ್ಲ. ಆ ಚಿಂತನೆಗಳು ಹಾಗೆಯೇ. ಯಾವ ಟೀಕೆಗೂ, ಯಾವ ತೆಗಳಿಕೆಗೂ ಬಗ್ಗೆಯೇ ಒಂದು ಸಂಘಟನೆ ಇಷ್ಟು ವರ್ಷಗಳ ಕಾಲ ಬೆಳೆದಿದೆ ಎಂದರೆ ಅದು ನಿರ್ಮಿಸಿದ ಸೇತುವೆ ಅಂತಹದ್ದೇ. ಯಾವ ಫಲಾಪೇಕ್ಷೆಯೂ ಇಲ್ಲದೆಯೇ ಅನೇಕರು ದುಡಿದಿದ್ದಾರೆ, ಬೆವರು ಹರಿಸಿದ್ದಾರೆ, ಮನೆ ಮಠ ತೊರೆದಿದ್ದಾರೆ. ಅನೇಕರು ಇದೇ ಸಂಘಟನೆಯಲ್ಲಿ ದುಡಿಯುತ್ತಾ ಸ್ವಂತದ್ದೆಲ್ಲವೂ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಂಘಟನೆಯ ಹಿಂದೆ ಅಪಾರ ಪರಿಶ್ರಮ ಇದೆ.
ಟೀಕೆಗಳಿಗೆ, ನಮ್ಮನ್ನು ನಿರ್ಲಕ್ಷ್ಯ ಮಾಡುವವರಿಗೆ ಏನು ಮಾಡಬೇಕು ಎಂದು ಸಂಘದ ಹಿರಿಯರು ಅಂದೇ ಹೇಳಿದ್ದರು, ಯಾವುದೇ ಸುಳ್ಳು ಟೀಕೆಗಳಿಗೆ, ಅಪಪ್ರಚಾರಗಳಿಗೆ ಉತ್ತರ ನೀಡಬಾರದು. ಏಕೆಂದರೆ ಅಂತಹ ಟೀಕೆಗಳು ನಿಮ್ಮ ಸಾಧನೆಗಳನ್ನು ಅಡ್ಡಿ ಮಾಡಲೇ ಇರುವಂತಹದ್ದು. ಈಗ ನೀವು ಮಾಡಬೇಕಾದ್ದು ಎರಡು ಹೆಜ್ಜೆ ಮುಂದಿನ ಕೆಲಸ. ಇನ್ನಷ್ಟು ಕೆಲಸ ಮಾಡಿ ಅಷ್ಟೇ ಸಾಕು. ಟೀಕೆ ಮಾಡುವವನು ನಮಗೆ ಇನ್ನಷ್ಟು ಸಹಾಯ ಮಾಡುತ್ತಾನೆ, ಆತ ನಮ್ಮ ಹುಳುಕು ತೋರಿಸುವ ಕೆಲಸ ಮಾಡಲಿ. ನಾವು ಅದನ್ನೆಲ್ಲಾ ಸರಿ ಮಾಡೋಣ. ನಾವು ಇನ್ನಷ್ಟು ಪರಿಪೂರ್ಣ ವ್ಯಕ್ತಿಯಾಗೋಣ ಎನ್ನುವುದನ್ನು ನಾನು ಕೇಳಿದ್ದೇನೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ನಾವು ಇನ್ನೂ ಪರಿಪೂರ್ಣರಾಗಬೇಕಿದೆ ಎಂದರ್ಥ, ಅದಕ್ಕಾಗಿ ಇನ್ನಷ್ಟು ಸಾಧನೆ ಮಾಡಿ ತೋರಿಸಬೇಕು. ಅದನ್ನು ಸದ್ದಿಲ್ಲದೆ ಮಾಡಿ, ಸಂಘಟನೆ ಮಾಡಿ ಎಂದಿದ್ದರು. ಆಗ ಇಡೀ ಸಮಾಜವೇ ಗಮನಿಸುತ್ತದೆ, ನಿಮ್ಮ ಶಕ್ತಿಯ , ಶ್ರಮದ ಪರಿಚಯವಾಗುತ್ತದೆ. ವಿರೋಧಿಗಳು ಇರಲಿ, ಮೌನವಾಗಿ ಎದುರಿಸಿ ಎಂದು ಧೈರ್ಯ ತುಂಬುವ, ಮನಸ್ಸಿಗೆ ಶಕ್ತಿ ನೀಡುವ, ಮನೋಬಲದ, ಆತ್ಮವಿಶ್ವಾಸ ಮಾತುಗಳು ಅಲ್ಲಿ ಸಿಗುತ್ತಿತ್ತು. ಈ ಕಾರಣಗಳಿಂದಲೇ ಸಂಘ, ನಿಜವಾದ ಸಂಘದ ಕಾರ್ಯಕರ್ತ ಎಲ್ಲಾ ಟೀಕೆಗಳಿಗೂ ಕಾರ್ಯದ ಮೂಲಕವೇ ಉತ್ತರಿಸುತ್ತಾರೆ. ಹಾಗಂತ ಸುಳ್ಳುಗಳನ್ನು ಹೇಳಬೇಡಿ, ಅನ್ಯಾಯ, ಅನಾಚಾರ ಮಾಡಬೇಡಿ, ಸತ್ಯದ ದಾರಿಯಲ್ಲಿ ನಡೆಯಿರಿ, ಗೆಲವು ನಮ್ಮದೇ, ಅದು ನಿಶ್ಚಿತ ಎಂದು ಹೇಳುತ್ತಿದ್ದರು.ಸತ್ಯ ಯಾವತ್ತೂ ಸೋಲುವುದಿಲ್ಲ, ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ, ಹೀಗಾಗಿ ಚಿಂತೆ ಬೇಡವೇ ಎಂದು ಭರವಸೆಯ ಮಾತುಗಳು ಸಂಘದಲ್ಲಿತ್ತು. ಸಂಘದ ಒಂದು ಗಂಟೆಯ ಬೈಠಕ್ ಎಂದರೆ, ಸಂಘದ ಅಭ್ಯಾಸ ವರ್ಗ ಎಂದರೆ, ಸಂಘದ ಒಂದು ಗಂಟೆಯ ಚಟುವಟಿಕೆ ಎಂದರೆ ಅಲ್ಲಿ ರೀಫ್ರೆಶ್ ಮೆಂಟ್ ಖಚಿತ. ಆರಂಭದ ಒಂದು ಹಾಡು ಇಡೀ ದಿನ ಲೈವ್ ಇಡುತ್ತದೆ. ಇಂತಹದ್ದರಿಂದಲೇ ಸಂಘ ಬೆಳೆದಿದೆ.
ಇಂದು ಯಾವುದೇ ಸಂಘಟನೆಗಳನ್ನು ಗಮನಿಸಿದರೂ ಒಂದೆರಡು ವರ್ಷದಲ್ಲಿ ಯಾವುದೋ ಇಗೋಗಳಿಗೆ ಬಲಿಯಾಗುತ್ತವೆ. ಹುಟ್ಟಿ ಸಾಯುತ್ತದೆ. ಕಾರಣ ಆ ಸಂಘಟನೆಯಲ್ಲಿ ಒಂದೇ ಮನಸ್ಥಿತಿಯಲ್ಲಿ ಕೆಲಸ ಮಾಡುವ ಮಂದಿ ಕಾಣದಾಗುತ್ತಾರೆ. ಈ ಎಲ್ಲಾ ಅಡೆ ತಡೆಗಳನ್ನೂ ದಾಟಿ ಈ ಸಂಘವು ಇಷ್ಟು ವರ್ಷಗಳ ಕಾಲ ಬೆಳೆದಿದೆ. ಇದಕ್ಕೆ ಮೂಲ ಕಾರಣ, ಆರಂಭದ ಆ ಚಿಂತನೆಗಳು. ಈ ಸಂಘಟನೆ ಯಾವತ್ತೂ ವ್ಯಕ್ತಿಯ ಹಿಂದೆ ಹೋಗಿ ಬೆಳೆದಿಲ್ಲ. ವ್ಯಕ್ತಿ ಶಾಶ್ವತವಲ್ಲ ಎಂದು ಇಂದಿಗೂ ಸಾರುವ ಆ ಚಿಂತನೆಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಹಿಂದೆ ಬೆಳೆಯುವ ಸಂಘಟನೆಗಳು ಶಾಶ್ವತವೂ ಅಲ್ಲ ಎನ್ನುವುದೂ ಸತ್ಯ. ಏಕೆಂದರೆ ಆರ್ ಎಸ್ ಎಸ್ ನಂತಹ ಇನ್ನೊಂದು ಸಂಘಟನೆ ಈ ದೇಶಲ್ಲಿ ಇನ್ನೊಂದು ಬೆಳೆದಿಲ್ಲ, ಬೆಳೆಯಲು ಸಾಧ್ಯವೂ ಆಗಿಲ್ಲ.
ಇಲ್ಲಿ ಭಗವಾಧ್ವಜವೇ ಗುರು, ಅದುವೇ ಸಾರ್ವಕಾಲಿಕ ನಾಯಕ. ಆ ತತ್ತ್ವದ ಅಡಿಯಲ್ಲಿಯೇ ಬೆಳೆದ ಸಂಘವು ಸಮಾಜ, ಸೇವೆ, ಸಹಬಾಳ್ವೆ, ಸಮಾನತೆ, ವ್ಯಕ್ತಿತ್ವ ವಿಕಸನ , ಆತ್ಮಸ್ಥೈರ್ಯ, ಪೂರ್ವ ಚಿಂತನೆ, ಪ್ಲಾನ್ , ವೈಚಾರಿಕ ಚಿಂತನೆ ಇತ್ಯಾದಿಗಳೇ ಈ ಸಂಘಟನೆ ಬೆಳೆಯಲು ಪ್ರಮುಖ ಕಾರಣ.
ಆರ್ ಎಸ್ ಎಸ್ ಶಾಖೆಗಳಿಗೆ ಹೋದಾಗಲೇ ಅಲ್ಲಿ ಇರುವ ವೈಚಾರಿಕ ಚಿಂತನೆ, ವ್ಯಕ್ತಿತ್ವ ವಿಕಸನದ ಚಿಂತನೆಗಳು ಕಾಣುತ್ತವೆ. ಎಲ್ಲರೂ ಜೊತೆಯಾಗುತ್ತಾ ಪರಸ್ಪರ ಸಹಕಾರಗಳು ವ್ಯಕ್ತಿಗೆ ಮಾನಸಿಕ ಧೈರ್ಯ ಹಾಗೂ ಶಕ್ತಿ ನೀಡುತ್ತವೆ. ಅನೇಕರು ಜಾತಿ ಆಧಾರಿತ ವ್ಯವಸ್ಥೆ ಎಂದು ಟೀಕಿಸುತ್ತಾರೆ, ಅಂತಹ ಜಾತಿಯ ವ್ಯವಸ್ಥೆ ಅದರೊಳಗೆ ಕಾಣುವುದಿಲ್ಲ. ಸಹಜವಾಗಿಯೇ ಚಿಂತನೆಯ ಆಧಾರಿತವಾಗಿ ಬೆಳೆಯುವ ಕಾರಣದಿಂದ ಚಿಂತಕರಿಂದಲೇ ಸಂಘಟನೆ ಮುಂದುವರಿಯುತ್ತದೆ. ಹಾಗಾಗಿ ಚಿಂತಕರ ಕೂಟ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ ಇಲ್ಲಿ.
ಆರ್ ಎಸ್ ಎಸ್ ವ್ಯಕ್ತಿ ನಿರ್ಮಾಣದ ಸಂಘಟನೆ. ಇಲ್ಲಿಗೆ ಯಾರೇ, ಯಾವುದೇ ವ್ಯಕ್ತಿ ಬರಲಿ. ಅವನಿಗೆ ಬೆಳೆಯುವ ಹಾಗೂ ಕಲಿಯುವ ಆಸಕ್ತಿ ಇದ್ದರೆ ಆತ ಸಹಜವಾಗಿಯೇ ಬೆಳೆಯುತ್ತಾ ಸಾಗುತ್ತಾನೆ, ಅನುಭವದ ಮಂಟಪವನ್ನು ಕಟ್ಟಿಕೊಳ್ಳುತ್ತಾನೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ನನ್ನ ಮನೆ, ನನ್ನ ಕುಟುಂಬ,ನನ್ನ ಗ್ರಾಮ, ನನ್ನ ರಾಜ್ಯ, ನನ್ನ ದೇಶದವರೆಗೆ ಚಿಂತನೆಗಳು ವಿಸ್ತಾರವಾಗುತ್ತದೆ. ಯಾರಿಗೇ ನೋವಾದರೂ ತಮಗೇ ನೋವಾದಷ್ಟು ಆ ಚಿಂತನೆಗಳು ಇದೆ. ನನ್ನ ಗ್ರಾಮ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದೂ ಕಲ್ಪನೆಯ ಆಧಾರದಲ್ಲಿ ಬೆಳೆಯುತ್ತದೆ.
ನನ್ನ ದೇಶದ ಕಲ್ಪನೆಯನ್ನು ನನ್ನೊಳಗೇ ಬಿತ್ತುವ ಆರ್ ಎಸ್ ಎಸ್ ಮೊದಲು ಕಲಿಸುವುದು ಯಾವುದೇ ಒಂದು ನಾಯಕತ್ವ ವಹಿಸುವಾಗ ಅದರ ಕನಸುಗಳನ್ನು. ನಾನು ಆ ಸಂಘಟನೆಯ ನಾಯಕತ್ವ ವಹಿಸಿಕೊಂಡರೆ ಏನು ಮಾಡಬೇಕು ಹಾಗೂ ಮಾಡಬಹುದು ಎನ್ನುವುದನ್ನು ಆರ್ ಎಸ್ ಎಸ್ ಮೂಲ ಚಿಂತನೆ ತಿಳಿಸಿಕೊಡುತ್ತದೆ. ಹೀಗಾಗಿಯೇ ಅಲ್ಲಿ ನಾಯಕರಿಗೆ ಕೊರತೆ ಇಲ್ಲ. ಪ್ರತೀ ವ್ಯಕ್ತಿಯೂ ಯಾವಾಗ ಬೇಕಾದರೂ, ಯಾವ ಸಂಘಟನೆಯಲ್ಲೂ ನಾಯಕತ್ವ ವಹಿಸಿಕೊಂಡರೆ ಅವರು ಸಮರ್ಥವಾಗಿ ವಿಚಾರ ಮಂಡಿಸಬಲ್ಲರು, ಮಾತನಾಡಬಲ್ಲರು ಕೂಡಾ. ಇದಕ್ಕಾಗಿಯೇ ಆರ್ ಎಸ್ ಎಸ್ ವ್ಯಕ್ತಿ ನಿರ್ಮಾಣದ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವ ರೂಪಿಸುವ ಕೇಂದ್ರ, ವ್ಯಕ್ತಿತ್ವ ವಿಕಸನದ ಕೇಂದ್ರ.
ಅನೇಕ ವರ್ಷಗಳ ಕಾಲ ವ್ಯಕ್ತಿತ್ವ ವಿಕಸನ, ವ್ಯಕ್ತಿ ನಿರ್ಮಾಣ ಮಾಡಿರುವ ಆರ್ ಎಸ್ ಎಸ್ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ವಿಭಾಗದಲ್ಲೂ, ಎಲ್ಲಾ ಆಯಾಮದಲ್ಲೂ ಬೆಳೆದಿದೆ. ಹೀಗಾಗಿ ಅದೊಂದು ಶಕ್ತಿ.
ಅಂತಹ ಸಂಘಟನೆಯಲ್ಲಿ ಪ್ರಚಾರಕ್ ಆಗಿ ಸೇವೆ ಮಾಡುವ ಹಂತಕ್ಕೆ ತಲುಪಿ ನಂತರ ನನ್ನ ಅನಿವಾರ್ಯತೆಯಿಂದ ಹಿಂದೆ ಸರಿದ ಒಂದು ಸಂದರ್ಭದಲ್ಲಿ ಸಂಘಟನೆಯ ಹಿರಿಯರೊಬ್ಬರು ಅಂದು ಹೇಳಿದ್ದರು, " ನೋಡು ಮಾರಾಯ, ನೀನು ಎಲ್ಲಾದರೂ ಇರು, ಒಮ್ಮೆ ಧ್ವಜ ಪ್ರಣಾಮ್ ಮಾಡಿದ ಮೇಲೆ ನೀನು ಸಂಘದ ಸ್ವಯಂ ಸೇವಕ. ನೀನು ಯಾವ ಕ್ಷೇತ್ರದಲ್ಲಿ ಇದ್ದಿಯೋ ಅಲ್ಲಿಯೇ ಕೆಲಸ ಮಾಡು, ಆದರೆ ಅದು ದೇಶಕ್ಕೆ, ನಿನ್ನ ಗ್ರಾಮದ ಅಭಿವೃದ್ಧಿ ದೃಷ್ಟಿ ಇರಲಿ ಅಷ್ಟೇ " ಎಂದು ಎರಡು ಬಾರಿ ಹೇಳಿದ್ದರು.
ಇಂದು ಈ ಮೇಲಿನ ಸಾಲುಗಳೇ ಹೆಚ್ಚು ಚರ್ಚೆಯಾಗುತ್ತಿರುವುದು. ಅನೇಕ ಅಧಿಕಾರಿಗಳು ಸಂಘಿಯ ಹಾಗೆ ಕಾಣುವುದು, ಅನೇಕ ಪತ್ರಕರ್ತರು ಬಲಪಂಥೀಯರ ಹಾಗೆ ಕಾಣುವುದು, ಅನೇಕ ಜನರು ಆರ್ ಎಸ್ ಎಸ್ ಎಂದು ಕಾಣುವುದು ಇದೇ ಕಾರಣಕ್ಕೆ. ಹಾಗೆಂದು ಆ ಪಾಸಿಟಿವಿಟಿಯನ್ನು ಬೆಳೆಸುವುದು ತಪ್ಪೋ ? ಸರಿಯೋ ಕಾಲದ ಚರ್ಚೆ. ಆದರೆ ಧ್ವಜ ಪ್ರಣಾಮ್ ಮಾಡಿದ ವ್ಯಕ್ತಿ, ತನಗೆ ಪಾಸಿಟಿವ್ ಚಿಂತನೆಗಳನ್ನು ಬಿತ್ತಿದ ಸಂಘಟನೆಯ ಬಗ್ಗೆ ಮಾತನಾಡುವುದು , ಅದರ ಪರವಾಗಿ ಒಂದು ಕ್ಷಣ ಯೋಚಿಸುವುದು ತಪ್ಪೋ ಸರಿಯೋ ಎಂಬುದೂ ಕಾಲಚ ಚರ್ಚೆ. ಆದರೆ ಆ ಸಂಘಟನೆಯ ಮೂಲ ಚಿಂತನೆ ಎಂದಿಗೂ ತಪ್ಪಾಗಿಲ್ಲ, ಅದರಲ್ಲಿ ಲೋಪವಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿಯೇ ಈ ಕಾಲದ ಚರ್ಚೆಗೆ ಉತ್ತರವಿಲ್ಲ.
ಸಂಘದ ಸುತ್ತಲಿನ ನನ್ನ ಅನುಭವದ ಬಗ್ಗೆ, ನಂಬರ್ ಬ್ಲಾಕ್ ಮಾಡಿದ ಬಗ್ಗೆ ನಾಳೆ ಬರೆಯುತ್ತೇನೆ......