17 ಅಕ್ಟೋಬರ್ 2021

ದೇಸೀ ಗೋವಿನ ಪ್ರೀತಿ...! ಪಿಕ್‌ ಅಪ್‌ ಗೆ ಬಾಡಿಗೆ ಸಮರ್ಪಣೆಯೂ....!!



ನನಗ್ಯಾಕೋ ಗೋವು ಎಂದರೆ ಒಂಚೂರು ಪ್ರೀತಿ ಹೆಚ್ಚು. ನಮ್ಮನೆಯಲ್ಲಿ ಒಂದು ಹೋರಿ ಸಹಿತ ಒಂದು ದನ ಎರಡು ಕರು ಸಾಕುತ್ತಿದ್ದೇವೆ. ಹೋರಿ ಸಾಕುವುದು  ಕೂಡಾ ಪ್ರೀತಿಯ ಕಾರಣಕ್ಕೆ. ಅನೇಕರು "ಗಿರಾಕಿ"ಗಳು ಬಂದರು. ಹೋರಿ ಕೊಡಲು ಒತ್ತಾಯ ಮಾಡಿದರೂ, ಈಗಲೂ  ಹೋರಿ ಸಾಕುತ್ತಿದ್ದೇವೆ.
ಎಲ್ಲೇ ಹೋದರೂ ಸಂಜೆ ಬಂದು ಮನೆಯಲ್ಲಿ ಹಟ್ಟಿಯೊಳಗೆ ಹೋಗಲೇಬೇಕು. ಹಾಲು ಕರೆಯುವ ಕೆಲಸ ಇದ್ದೇ ಇದೆ. ಬೆಳಗ್ಗೆ 3.30 ಕ್ಕೆ ಹಾಲು ಕರೆದ ದಿನ ಇದೆ ರಾತ್ರಿ 11 ಕ್ಕೂ ಬಂದು ಹಾಲು ಕರೆದು, ಕರುವಿಗೆ ಹಾಲುಣಿಸಿದ ದಿನವೂ ಇದೆ. ಅದು ದೇಸೀ ದನ. ...!.ಇದಿಷ್ಟು ಬೇಸಿಕ್‌ ಹೇಳಲು ಕಾರಣ ಇದೆ. ಗೋವು ಸಾಕಾಣಿಕೆ ಹಾಗೂ ಆರೈಕೆಯ ಭಾಗವನ್ನು ಹೇಳಿಯೇ  ನಮ್ಮ ಗೋವಿನ ಕತೆಯನ್ನು ದಾಖಲಿಸಬೇಕಿತ್ತು.

ಸುಮಾರು ಹದಿನೈದು ವರ್ಷಗಳ ಹಿಂದಿನ ಕತೆ ಇದೆ. ಭಾರತೀಯ ಗೋ ತಳಿಯ ಬಗ್ಗೆ‌ ಎರಡು ಕಾರಣಗಳಿಂದ ಹೆಚ್ಚು ಇಷ್ಟವಾಯಿತು. ಒಂದು ಗೋವಿನ ಮಹತ್ವ, ಇನ್ನೊಂದು ಭೂಮಿಯ ಫಲವತ್ತತೆಯಲ್ಲಿ ದೇಸೀ ಗೋವಿನ ಪಾತ್ರದ ಬಗ್ಗೆ. ಇಲ್ಲೂ ಎರಡು ವಿಚಾರಗಳ ಕಡೆಗೆ ಆಕರ್ಷಿತನಾಗಿದ್ದೆ. ಮೊದಲನೆಯದು ನಾನು ಪಡೆದ  ದೇಸೀಯತೆಯ ಹಾಗೂ ದೇಶದ ಬಗೆಗಿನ ಶಿಕ್ಷಣ. ಇನ್ನೊಂದು ರಾಮಚಂದ್ರಾಪುರ ಮಠದ ಗೋ ತಳಿ ಸಂರಕ್ಷಣೆಯ ಕಾಳಜಿಗೆ ಸಹಕಾರ ನೀಡುವ ಪ್ರೀತಿ.

ಹೀಗಾಗಿ ರಾಮಚಂದ್ರಾಪುರ ಮಠದ ಕಡೆಯಿಂದ ದೇಸೀ  ಗೋ ತಳಿಯನ್ನು ಮನೆಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಾವೂ ಈ ಯೋಜನೆಯಲ್ಲಿ ಭಾಗಿಯಾದೆವು. ಅದು ಕಾಂಕ್ರೇಜ್‌ ತಳಿಯ ಗೋವು. ನಮ್ಮೂರಿಗೆ ಹೊಸನಗರದಿಂದ ಒಂದು ಲೋಡ್‌ ಅಂದರೆ 13  ಗೋವುಗಳನ್ನು  ತರುವ ಜವಾಬ್ದಾರಿ ನಮ್ಮ ಮೇಲಾಯಿತು. ಗೋವಿನ ತರುವ ಬಗ್ಗೆ ಅದೊಂದು ತಂಡ ಯೋಜನೆ ಸಿದ್ಧ ಮಾಡಿತು. ಲಾರಿಯಲ್ಲಿ  ಗೋವು ತರುವ ಕೆಲಸ ನಮ್ಮದಾಯಿತು. ನನ್ನ ಜೊತೆ ನನ್ನ ಕುಟುಂಬದ ಸಹೋದರನೂ ಜೊತೆಗಿದ್ದರು.

ಅಂದು ನಾವಿಬ್ಬರೂ ಲಾರಿಯಲ್ಲಿ ಸಂಜೆ ಹೊಸನಗರದಿಂದ ಹೊರಟಾಯಿತು. ಸುಮಾರು ಕುಂದಾಪುರದ ಬಳಿ ತಲುಪಿದಾಗ ತಡರಾತ್ರಿಯಾಯಿತು. ಅಷ್ಟರಲ್ಲಿ ಒಂದು ಜೀಪಲ್ಲಿ ಬಂದ ಬಜರಂಗದಳದ ತಂಡ ಲಾರಿಯನ್ನು ತಡೆಯಿತು. ತಡೆದ ಬಳಿಕ ಗಲಾಟೆಯೋ ಗಲಾಟೆ...! ,ಇದು ಕಸಾಯಿಖಾನೆಗೆ ಹೋಗುತ್ತಿದೆ ಎಂದು ಆ ರಾತ್ರಿಯಲ್ಲಿ ಬೊಬ್ಬಿಟ್ಟರು. ಯಾವ ಉತ್ತರ ನೀಡಿದರೂ ಕೇಳಲಿಲ್ಲ. ನಮಗೆಲ್ಲಾದರೂ ಸಮಸ್ಯೆಯಾದರೆ, ತಡೆಯಾದರೆ ತಿಳಿಸಲು ಮೊಬೈಲ್‌ ನಂಬರ್‌ ನೀಡಿದ್ದರು. ಆದರೆ ನಮ್ಮ ಬಳಿ ಮೊಬೈಲ್‌ ಇರಲಿಲ್ಲ. ಹೀಗಾಗಿ ಅಲ್ಲೇ ಪಕ್ಕದ ಯಾರದೋ ಮೊಬೈಲ್‌ ನಿಂದ ಕರೆ ಮಾಡಲು ಹೇಳಿದೆವು. ಆದರೆ ಆ ಕಡೆಯಿಂದ ಕರೆ ಸ್ವೀಕಾರವಾಗಲಿಲ್ಲ...!. ನಾವಂತೂ ಗಲಿಬಿಲಿಯಾದೆವು. ಅಷ್ಟರಲ್ಲಿ ಬೊಬ್ಬೆಯೂ ಹೆಚ್ಚಾಯಿತು, ಇದು ಕಸಾಯಿಖಾನೆಗೇ ಎಂದರು. ನನ್ನ ಜೊತೆಗಿದ್ದ ಅಣ್ಣನೂ ಹಲವು ಉತ್ತರ ನೀಡಿದರೂ ಒಪ್ಪಲಿಲ್ಲ ಆ ತಂಡ. ಕೊನೆಗೆ ಸಮೀಪದ ಪೊಲೀಸ್‌ ಠಾಣೆಗೆ ತೆರಳುವಂತೆ ಲಾರಿ ಚಾಲಕನಿಗೆ ಹೇಳಿದೆವು. ಲಾರಿ ಚಾಲಕ ಪೊಲೀಸ್‌ ಠಾಣೆಗೆ ತಿರುಗಿಸಿದ. ಅಷ್ಟರಲ್ಲಿ ಪೊಲೀಸರೂ ಸ್ಥಳಕ್ಕೆ ಬಂದರು. ಮೊದಲೇ ಮಾಹಿತಿ ಇದ್ದ ಪೊಲೀಸರು ನಮಗೆ ಸುಗಮವಾಗಿ ಹೋಗಲು ಅವಕಾಶ ಮಾಡಿಕೊಟ್ಟರು. ಹಾಗೆ ಊರಿಗೆ ಬಂದಾಗ ಬೆಳಗ್ಗೆ ಆಗಿತ್ತು.ಇಲ್ಲಿ 13 ಮನೆಗಳಿಗೆ ಕಾಂಕ್ರೇಜ್‌ ತಳಿಯ ಗೋವನ್ನು ತಲುಪಿಸಲಾಯಿತು. 

ಕಾಂಕ್ರೇಜ್‌ ತಳಿಯ ಗೋವು ನಮ್ಮ ಹಟ್ಟಿಯೊಳಗೆ ಬಂದ ಬಳಿಕ ನಿಧಾನವಾಗಿ ಇತರ ತಳಿಯ ಗೋವುಗಳನ್ನು ಮಾರಾಟ ಮಾಡಲಾಯಿತು. ಸವಾಲುಗಳು ಇದ್ದದ್ದು ಆಗಲೇ.ನಿಯಮದ ಪ್ರಕಾರ ಹಾಗೂ ದೇಸೀ ತಳಿಯ ಪ್ಯೂರಿಟಿ ಉಳಿಸಿಕೊಳ್ಳಲು ಸಂಕರ ಮಾಡಬಾರದು,  ಬೆದೆಗೆ ಬಂದಾಗ ಹೋರಿಯ ಬಳಿಯೇ ಕೊಂಡೋಗಬೇಕು. ಈ ಕೆಲಸ ಮಾತ್ರಾ ಸದಾ ನೆನಪಿನಲ್ಲಿ ಉಳಿಯಬೇಕಾದ್ದೇ ಆಗಿದೆ.  ನಮ್ಮ ಮನೆಯ ಕಾಂಕ್ರೇಜ್‌ ತಳಿಯ ಗೋವು ಬೆದೆಗೆ ಬಂದಿತು. ಇದನ್ನು ಸಂಕರಕ್ಕಾಗಿ ಹೋರಿಯ ಬಳಿಗೆ ಕೊಂಡೋದೆವು. ಇಬ್ಬರು ಕೆಲಸಗಾರರು ಹಾಗೂ ಪಿಕ್‌ ಅಪ್‌ ನಲ್ಲಿ ಹಾಕಿಕೊಂಡು ಆರಂಭದಲ್ಲಿ ಸಮೀಪದಲ್ಲೇ ಇದ್ದ ಮೊಗ್ರಕ್ಕೆ ಕೊಂಡೋದೆವು, ಅದಾಗಲಿಲ್ಲ, ನಂತರ ಕಾಂಚೋಡು ಕಡೆಗೆ ಹೋದೆವು , ಅದಾದ ಬಳಿಕ ಕಡಬದ ಬಳಿಯ  ಹೊಸಮಠ ಹತ್ತಿರದ ಕೂಡೂರಿಗೆ , ನಂತರ ಬೆಳ್ಳಾರೆ ಬಳಿಯ ನೆಟ್ಟಾರಿನ ಅರುಣ ಶಂಕರ ಅವರ ಮನೆಗೆ ಹಲವು ಬಾರಿ ಹೋಗಿದ್ದೆವು. ಪ್ರತೀ ಬಾರಿ ಪಿಕ್‌ ಅಪ್‌ ಹಾಗೂ ಇಬ್ಬರು ಕೆಲಸಗಾರರು. ಅಂತೂ ನಮ್ಮ ಹಟ್ಟಿಯಲ್ಲಿ ಕಾಂಕ್ರೇಜ್‌ ತಳಿ ಅಭಿವೃದ್ಧಿಯಾದವು. ಅಷ್ಟರವರೆಗೂ ನೀಡಿದ ಪಿಕ್‌ ಅಪ್ ಬಾಡಿಗೆ ಒಂದು ಸಮರ್ಪಣೆಯೇ ಆಯಿತು...!.‌ ಒಂದು ಉದ್ದೇಶಕ್ಕಾಗಿ ಇದ್ಯಾವುದೂ ಆಗ ಲೆಕ್ಕವೇ ಇರಲಿಲ್ಲ...! , ಲಾಭ-ನಷ್ಟದ ಲೆಕ್ಕವೇ ದಾಖಲಾಗಲಿಲ್ಲ..!. ಕಣ್ಣ ಮುಂದೆ ಇದ್ದದ್ದು ಉದ್ದೇಶ, ಒಂದು ಚಿಂತನೆ.. ಒಂದು ವಿಚಾರ ಅಷ್ಟೇ... ಅದು ದೇಸೀಯತೆ....!. 

ಕೊನೆಗೆ ಬೆಳ್ಳಾರೆ ಬಳಿಯ ಶೇಣಿಯ ಮನೆಗೆ ದನವನ್ನು ಕೊಂಡೋಗಿದ್ದೆವು. ಆ ದಿನ ಭಾರೀ ಮಳೆಯೂ ಬೇರೆ. ಅಲ್ಲಿನ ಹೋರಿ ಸಂಕರದ ಬಳಿಕ ನಾವೆಲ್ಲರೂ ಮನೆಗೆ ಬಂದಾಗಿತ್ತು. ಮರುದಿನ ಆ ಹೋರಿ ಹೃದಯಾಘಾತದಿಂದ ಮೃತಪಟ್ಟಿತ್ತು. ಅಂದಿಗೇ ನಾವು ತೀರ್ಮಾನಿಸಿದೆವು. ಇನ್ನು ದನವನ್ನು ಹೋರಿಯ ಬಳಿಗೆ ಸಂಕರಕ್ಕೆ ಕೊಂಡೊಯ್ಯಲು ಇಲ್ಲವೆಂದು. ಆ ಹೊತ್ತಿಗೆ  2012. ಅದಾಗಿ ಕಾಂಕ್ರೇಜ್‌ ತಳಿಯ ಹೋರಿ ಇಂಜೆಕ್ಷನ್‌ ಲಭ್ಯವಾಯಿತು. ಎಲ್ಲಾ ನಿಯಮವನ್ನು ಬದಿಗೆ ಸರಿಸಿ ಇಂಜೆಕ್ಷನ್‌ ನೀಡಿದೆವು ಕೂಡಾ. ಆದರೆ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಕಾಂಕ್ರೇಜ್‌ ತಳಿಯನ್ನು ವಾಪಾಸು ಮಾಡಲು ಮುಂದಾದೆವು. ಕೊನೆಗೆ ವೇಣೂರಿನ ಗೋಶಾಲೆಗೆ ನಮ್ಮೆಲ್ಲಾ ಕಾಂಕ್ರೇಜ್‌ ತಳಿಯನ್ನು ನೀಡಿದ ದಿನ ಮನಸ್ಸಿಗೆ ಬೇಸರವಾಗಿತ್ತು, ತಿಂಗಳ ಕಾಲ ಅದೇ ನೆನಪು ಕಾಡಿತ್ತು. ಆ ಕರುಗಳು ನನ್ನ ತಂದೆಯವರ ಹಾಸಿಗೆಯಲ್ಲಿ ಬಂದು ಮಲಗುತ್ತಿದ್ದುದು, ಪ್ರೀತಿಯ ಆಟ ಆಡುತ್ತಿದ್ದುದು ಎಲ್ಲವೂ ನೆನಪು.

ಅದರ ಜೊತೆಗೇ, ಹೀಗೆ ಕಾಂಕ್ರೇಜ್‌ ತಳಿ ಸಾಕುವ ವೇಳೆ  ವ್ಯಂಗ್ಯ ಮಾಡಿದವರು, ಅದಾಗದು ಎಂದವರು, ಅದು ಸುಮ್ಮನೆ...  ಎಂದವರು ಸಾಕಷ್ಟು ಮಂದಿ. ಯಾವುದಕ್ಕೂ, ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ. ಇದೊಂದು ಚಿಂತನೆ, ಇದೊಂದು ಬದ್ಧತೆ, ಇದೊಂದು ಸೇವೆ ಎಂದಷ್ಟೆ ನಿರಂತರ ಪ್ರಯತ್ನ ಮಾಡಿದ್ದೆವು. ಅದರ ಪರಿಣಾಮ ಯಶಸ್ಸೂ ಆಗಿತ್ತು, ಹಟ್ಟಿ ತುಂಬಾ ಕಾಂಕ್ರೇಜ್‌ ಗೋವುಗಳು ತುಂಬಿದ್ದವು ಕೂಡಾ.

ಮುಂದೆ, ನಮ್ಮೂರಿನದ್ದೇ ತಳಿ,  ದೇಸೀ ತಳಿ. ಮಲೆನಾಡು ಗಿಡ್ಡ  ಸಾಕಲು ಆರಂಭ ಮಾಡಿದೆವು. ಇಂದಿಗೂ ಆ ತಳಿ ಮುಂದುವರಿದಿದೆ. ಅದರಲ್ಲೂ ಪ್ಯೂರಿಟಿಗಾಗಿ ಹೋರಿಗೇ ಸಂಕರ ಮಾಡಿದೆವು, ಅದಕ್ಕೂ ಪಿಕ್‌ ಅಪ್‌ ಸೇರಿದಂತೆ ಸಾಗಾಟ ಮಾಡಿದೆವು. ಕೊನೆಗೆ ಮನೆಯಲ್ಲಿಯೇ ಹೋರಿ ಕರು ಲಭ್ಯವಾಯಿತು. ಹೋರಿ ದೊಡ್ಡದಾಯಿತು. 

ಅದೊಂದು ದಿನ ಹೋರಿಯ ಸಂಕರಕ್ಕಾಗಿ ಬಿಟ್ಟಿದ್ದೆವು. ನಮ್ಮ ಆಪ್ತ ದನ ಬಿಡುವ ವೇಳೆ ದನ ಕೊಂಬು ಕಣ್ಣಿನ ಬಳಿ ತಾಗಿತು. ಸ್ವಲ್ಪದರಲ್ಲೇ ಕಣ್ಣಿನ ಮೇಲಿನ ಗಾಯ ತಪ್ಪಿತು. ಕಣ್ಣು ವಾರಗಳ ಕಾಲ ಕೆಂಪಾಯಿತು. ಅಪಾಯದಿಂದ ಪಾರಾದರು. ಸೂಕ್ತ ಔಷಧಿ ತೆರಳಿ ವಾರಗಳ ಕಾಲ ವಿಶ್ರಾಂತಿ ಕೂಡಾ ಪಡೆದರು. ಅಂದಿನಿಂದ ಅಗತ್ಯ ಇದ್ದರೆ ಮಾತ್ರಾ ಹೋರಿಯನ್ನು ಸಂಕರಕ್ಕೆ ಬಿಡುತ್ತೇವೆ. ಸಾಧ್ಯವಾಗದೇ ಇದ್ದರೆ ಇಂಜೆಕ್ಷನ್‌ ಗೆ ಬರಲು ಹೇಳುತ್ತೇವೆ. ಹಾಗಿದ್ದರೂ ಹೋರಿಯನ್ನು ಸಾಕುತ್ತಿದ್ದೇನೆ.

ಅನೇಕ ಸಮಯಗಳ ಕಾಲ ನಮ್ಮಲ್ಲಿ ಸ್ಲರಿ ವ್ಯವಸ್ಥೆ, ಕಾಂಪೋಸ್ಟ್‌ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದ ಗೊಬ್ಬರ ತಯಾರು ಆಗುತ್ತಿರಲಿಲ್ಲ. ಹೊಳೆಗೆ ಸೇರುತ್ತಿತ್ತು. ಈ ಸಮಯದಲ್ಲಿ  ವಳಲಂಬೆ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್ಟರು ಅದಕ್ಕೊಂದು ಯೋಚನೆ ನೀಡಿದರು. ಅಂದಿನಿಂದ ಉತ್ತಮ ಗೊಬ್ಬರವೂ ಆಗುತ್ತಿದೆ. ಹೀಗಾಗಿ ತೋಟಕ್ಕೂ ಸುಲಭದಲ್ಲಿ ಗೊಬ್ಬರ ತಯಾರಾಗುತ್ತದೆ.

ಸಾದ್ಯವಾದಷ್ಟು ಕಾಲ ಗೋ ತಳಿ ರಕ್ಷಣೆ ಹಾಗೂ ದೇಸೀ ಗೋ ತಳಿಯನ್ನು ಸಾಕಲು ನಿರ್ಧರಿಸಿದ್ದೇನೆ. ಸೆಗಣಿಯಿಂದ ಗೊಬ್ಬರ ಮಾಡುತ್ತೇವೆ. ತೋಟಕ್ಕೂ ಯಥಾ ಸಾಧ್ಯ ಹಾಕುತ್ತೇವೆ. ಎಷ್ಟು ಕಾಲ ಸಾಧ್ಯ ಅಷ್ಟು ಕಾಲ ಗೋ ಸಾಕಾಣಿಗೆ ಇದೆ. 

ನಂಬಿದ ವಿಚಾರ, ಕೃಪಿ ಪ್ರೀತಿ, ಗೋ ಪ್ರೇಮವನ್ನು ಮುಂದುವರಿಸುವುದು. ಗೋವು ಎಂದರೆ ಪ್ರೀತಿಯೇ. ನಮ್ಮ ಮನೆಯ ಹೋರಿ ಈಗಲೂ ಯಾರೇ ಬಂದರೂ ಕೂಗುತ್ತದೆ, ನಮ್ಮನ್ನು ಎಚ್ಚರಿಸುತ್ತದೆ. ಇಂತಹ ಪ್ರೀತಿಯನ್ನು ಹೇಗೆ ಬಿಡಲು ಸಾಧ್ಯವಿದೆ. ದೇಸೀ ಗೋವಿನ ಮಹತ್ವ, ಪ್ರೀತಿ ಅದು ಅನುಭವಿಸಿದವನಿಗೆ ಮಾತ್ರಾ ಗೊತ್ತು. 

ಹಾಗಂತ ನಾವು ದನ ಮಾರಾಟ ಮಾಡಿಲ್ಲ ಅಂತಲೇ ಅಲ್ಲ, ಮಾರಾಟ ಮಾಡಿದ್ದೇವೆ ಕೂಡಾ. ಜರ್ಸಿ ಹೋರಿಯನ್ನು ಮಾರಾಟ ಮಾಡಿದ್ದೇವೆ, ದೇಸೀ ದನವನ್ನೂ ಸಾಕುವವರಿಗೆ ನೀಡಿದ್ದೇವೆ.ಅನೇಕ ಬಾರಿ ಗೋವಿನ ಬಗ್ಗೆ  ಭಯಂಕರ ಚರ್ಚೆ ಮಾಡುವವರನ್ನು ಕಂಡಾಗ ಒಳಗೊಳಗೇ ನಗಬೇಕಾಗುತ್ತದೆ ಕೂಡಾ.... 

ಈಗಲೂ ದೇಸೀ ತಳಿಯ ಗೋವನ್ನು ಸಾಕುತ್ತಿದ್ದೇನೆ. ಮನೆಯಿಂದ ಹೊರಗೆ ಹೋದರೆ ರಾತ್ರಿ 11 ಗಂಟೆಗಾದರೂ ಬಂದು ಹಟ್ಟಿಗೆ  ಹೋಗಲು ಇದೆ. ಬೆಳಗ್ಗೆ ಬೇಗನೆ ಮನೆಯಿಂದ ಹೊರಡುವಾಗಲೂ ಹಟ್ಟಿಗೆ ಹೋಗಲು ಇದೆ. ಈ ಸೇವೆ ಸದ್ಯ ನಡೆಯುತ್ತಿದೆ.










10 ಅಕ್ಟೋಬರ್ 2021

ಹೇಗೆ ಬದಲಾಯಿತು ವ್ಯವಸ್ಥೆ....! ಏಕೆ ಪಾಸಿವಿಟಿ ಬದಲಾಗುತ್ತಿದೆ...! ವ್ಯಕ್ತಿ ಪ್ರತಿಷ್ಟೆ ಏಕಾಗುತ್ತಿದೆ...!!



ನಿನ್ನೆ ಸಂಘದ "ಪಾಸಿಟಿವ್‌ ಶಕ್ತಿ" ಯ ಬಗ್ಗೆ ನನ್ನ ಅನುಭವ ಹೇಳಿದ್ದೆ. ಅದೊಂದು ಸಮುದ್ರ. ಆ ಸಮುದ್ರವನ್ನು ನೋಡುತ್ತಾ, ಓದುತ್ತಾ ತಿಳಿದದ್ದು ಅದು. ಹಾಗೆಂದು  ಯಾವತ್ತೂ ಆ ಅಗಾಧ ಶಕ್ತಿಯನ್ನು  ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೋಪವೇ ಇಲ್ಲ, ನೆಗೆಟಿವ್‌ ಅಂಶಗಳೇ ಇಲ್ಲ.

ಆದರೆ 2021  ರಲ್ಲಿ  ನಿಂತು ನೋಡಿದಾಗ ಇಪ್ಪತ್ತು ವರ್ಷಗಳಲ್ಲಿನ ಬದಲಾವಣೆ ಮಹತ್ವದ್ದು. ಅದಕ್ಕಿಂತಲೂ ಹಿಂದಿನವರಲ್ಲಿ ಮಾತನಾಡಿದರೆ ಭ್ರಮ ನಿರಸನವಾಗುತ್ತದೆ ಎನ್ನುತ್ತಾರೆ. ಹಾಗೆ ಭ್ರಮ ನಿರಸನವಾಗಲು Update  ಆಗದೇ ಇರುವ ಕೊರತೆಯೋ ಎಂದು ಹಲವು ಬಾರಿ ಅನಿಸುತ್ತದೆ. ಇಂದಿನ ಯುಗ ವೇಗದ್ದು. ಈ ವೇಗದ ಯುಗದಲ್ಲಿ ತಕ್ಷಣವೇ ಅಪ್ಡೇಟ್‌ ಆಗಬೇಕಾಗುತ್ತದೆ. ಈ ವೇಗದ ಪರಿಣಾಮ ಪುಸ್ತಕಗಳಲ್ಲಿ ಕಾಣುವ ಯಾವ ಪಾಸಿಟಿವ್‌ ಶಕ್ತಿಗಳೂ ತಳಮಟ್ಟದಲ್ಲಿ ಕಾಣುತ್ತಿಲ್ಲ. ಹೀಗಾಗಿ ಹಿರಿಯ ಅನೇಕರಿಗೆ ಭ್ರಮನಿರಸನವಾಗುವುದು  ಸಹಜ. ಅವರನ್ನು ಬದಿಗೆ ಸರಿಸುವುದು  ಸಹಜವೇ, ಅವರೇ ಅಡ್ಡಿಯಾಗುವುದು ಸಹಜವೇ. ಏಷ್ಟೆಂದರೆ "ಅವರೇನೂ ಮಾಡಿಲ್ಲ..." ಎನ್ನುವಷ್ಟು ಬದಿಗೆ ತಳ್ಳುವುದು  ಸಹಜ ಪ್ರಕ್ರಿಯೆ. ಅಂತಹ ಮೌಲ್ಯಗಳು ಇಂದು ಬೆಳೆಯುತ್ತಿರುವ ಕಾರಣವೇ ಯಾರು ಟೀಕೆ ಮಾಡಿದರೂ ತಕ್ಷಣವೇ ಯಾರಿದಂಲೋ ಪ್ರತಿಕ್ರಿಯೆ ಕೊಡಿಸಬೇಕಾಗುತ್ತದೆ. ಯಾರಿಂದಲೋ ಮಣಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿಕ್ರಿಯೆ ನೀಡಬೇಡಿ ಎಂದೂ ಹೇಳುವವರೂ ಇಲ್ಲದೇ ಇರುವುದೂ ಅದಕ್ಕೆ . ಏಕೆಂದರೆ ಈಗ ಅಧಿಕಾರ ಅಂದರೆ ಪವರ್‌ ಕೇಂದ್ರಿತ ವ್ಯವಸ್ಥೆ..!. ಇದರರ್ಥ ಆಂತರಿಕವಾದ ಮೌಲ್ಯಗಳ ಕುಸಿತ, ಬೌದ್ಧಿಕ, ವೈಚಾರಿಕ ವಿಷಯಗಳ ಕೊರತೆ, ಅಧಿಕಾರ ಕೇಂದ್ರಿತವಾದ ವ್ಯವಸ್ಥೆ, ಓಲೈಕೆಯ ಭಾಗ ಹೆಚ್ಚಾಗಿದೆ. 

ಈ ಬದಲಾವಣೆಯ ಪರ್ವಗಳು ಆರಂಭವಾಗಿ ಹಲವು ಸಮಯಗಳು ಆದವು. ಈಗ ಅದರ ಪರಮೋಚ್ಛ ಸ್ಥಿತಿಯಷ್ಟೇ. ಸುಮ್ಮನೆ ಗಮನಿಸಿದರೆ ಸಂಘವು ಎಂದೂ ಟೀಕೆಗಳಿಗೆ ಉತ್ತರಿಸುತ್ತಿದ್ದು ಕಡಿಮೆಯೇ. ಟೀಕೆಗಳಿಗೆ ಕಾರ್ಯದ ಮೂಲಕ ಉತ್ತರ ಸಿಗುತ್ತಿತ್ತು ಅಷ್ಟೇ. ಈಗ ಹಾಗಲ್ಲ, ವಿವಿಧ ವಿಭಾಗಗಳು ಇದ್ದರೂ ಅಧಿಕಾರ ಕೇಂದ್ರಿತವಾದ ವ್ಯವಸ್ಥೆಗಳು ಬಲಗೊಂಡಿವೆ. ಸಂಘದ ಅಂಗ ಎನಿಸಿದ ಬಿಜೆಪಿಯೇ ಇಂದು ಸಂಘವಾಗಿ ಕಾಣುತ್ತದೆ. ಸಂಘದ ವಿವಿಧ ಸಂಘಟನೆಗಳು ಇದ್ದರೂ ಸಹಕಾರ ಭಾರತಿ, ಬಿಜೆಪಿ ಮಾತ್ರವೇ ಸಂಘ ಎಂದು ಕಾಣುತ್ತದೆ, ಅಲ್ಲಿ ಅಧಿಕಾರ ಪಡೆಯುವುದೇ ಸರ್ವ ಶ್ರೇಷ್ಟ ಎಂದು ಅನಿಸಿದೆ. ಇದಕ್ಕಾಗಿ ಸಂಘದ ಯಾರನ್ನೋ ಓಲೈಕೆ ಮಾಡಲೇಬೇಕು ಎಂಬುದು ಸರ್ವ ವಿಧಿತವಾಗಿದೆ. ಸಂಘದ ಉಳಿದ ಯಾವ ವಿಭಾಗದಲ್ಲೂ ಕೆಲಸ ಮಾಡುವುದೇ ನಗಣ್ಯವಾಗಿ ಬಿಡುತ್ತಿದೆ. ಬಿಜೆಪಿ, ಸಹಕಾರ ಭಾರತಿಯಲ್ಲಿ ಕೆಲಸ ಮಾಡಿದವನು ಮಾತ್ರವೇ ಕಾರ್ಯಕರ್ತ ಎಂಬ ಮಟ್ಟಿಗೆ ಬಂದಿರುವುದು  ಈಗ ಬಹಿರಂಗ ಸಂಗತಿ. ಈ ಕಾರಣದಿಂದಲೇ ಇಂದು ಸೇವೆಗಿಂತಲೂ ಹೆಚ್ಚು ಓಲೈಕೆ ಎದ್ದು ಕಾಣುತ್ತದೆ. ಇದೆಲ್ಲಾ ಇವತ್ತು ಬಹುದೊಡ್ಡ ಪಾಸಿಟಿವ್‌ ಶಕ್ತಿಯೊಳಗೆ ನೆಗೆಟಿವ್‌ ಚಕ್ರಗಳು ಸುತ್ತುತ್ತಿವೆ.

 ಈ ಕಾರಣದಿಂದಲೇ ಇಂದು ಕುಮಾರಸ್ವಾಮಿಯವರ ಹೇಳಿಕೆಗೆ ಇನ್ನಿಲ್ಲದಂತೆ ಎದ್ದು ಬಿದ್ದು ಹೇಳಿಕೆ ನೀಡಲೇಬೇಕಾಗಿ ಬಂತೇನೋ ಎಂದು ಅನಿಸುತ್ತದೆ. ಹಾಗಿದ್ದರೆ ಮೂಲ ವಿಚಾರದಲ್ಲಿ ಪ.ಪೂ ಗುರೂಜಿ ಅವರು ," ಸಂಘಟನೆಯಲ್ಲಿ  ಅಹಂಕಾರ, ದರ್ಪ, ಒತ್ತಾಯ ಅಥವಾ ವ್ಯಕ್ತಿ ಪ್ರತಿಷ್ಟೆಗೆ ಅವಕಾಶವಿಲ್ಲ ಇವುಗಳಿಂದ ಸಂಘಟನೆಯಾಗುವುದಿಲ್ಲ. ವ್ಯಕ್ತಿಗತ ಅಭಿಮಾನದ ಲವಲೇಶವೂ ಇಲ್ಲದವರಿಂದಲೇ ಸಂಘಟನೆ ಕಟ್ಟಲು ಸಾಧ್ಯವಾಗುತ್ತದೆ" ಎಂದು ಹೇಳಿರುವುದಕ್ಕೆ ಅರ್ಥ ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಕಾರ್ಯಕ್ರಮದ ಮೊದಲು ಓದುವ ಸುಭಾಷಿತ ಓದಲು ಮಾತ್ರವೇ ಸೀಮಿತವಾಗಿದೆ ಎನ್ನುವುದು  ಸುಳ್ಳಲ್ಲ.ಇವತ್ತು ಇಂತಹ ಹಲವು ನೆಗೆಟಿವ್‌ ಅಂಶಗಳು ಎದ್ದು ಕಾಣುವ ಕಾರಣದಿಂದಲೇ ತಳಮಟ್ಟದಲ್ಲಿ ಇತರೆಲ್ಲಾ ಸಂಘಟನೆಗಳಂತೆಯೇ ಎಲ್ಲಾ ವಿಭಾಗದಲ್ಲೂ ಒಬ್ಬನೇ ಕಾರ್ಯಕರ್ತ ಓಡಾಟ ಮಾಡುವ ಸ್ಥಿತಿ ಹೆಚ್ಚಾಗಿದೆ. ಅವನು ಭ್ರಷ್ಟಾಚಾರದಲ್ಲೂ, ಜಾತಿ ಸಂಘಟನೆಗಳಲ್ಲೂ , ಪಕ್ಷದಲ್ಲೂ, ಇತರ ಸಂಘಟನೆಯಲ್ಲೂ ಏಕ ವ್ಯಕ್ತಿ..!. ಇದು ಸಂಘಟನೆಯಲ್ಲಿಯೇ ಗೊತ್ತಿಲ್ಲದೆ ಆಗುತ್ತಿರುವ ಬದಲಾವಣೆ. 

ಹೀಗಾಗಿ ಹಿಂದೂ ಸಮಾಜದ ಅಡಿಪಾಯವನ್ನು ಬಲಪಡಿಸುವ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ರಾಜಕೀಯ  ಸವಾಲುಗಳನ್ನು ಎದುರಿಸುವ ಉದ್ದೇಶದಿಂದ  1925 ರಲ್ಲಿ ಸ್ಥಾಪಿಸಿದ ಆರ್‌ ಎಸ್‌ ಎಸ್‌ ಗೂ 2021 ರಲ್ಲಿ  ಕಾಣುವ ಆರ್‌ ಎಸ್‌ ಎಸ್‌ ಗೂ ಬದಲಾವಣೆ ಕಾಣುತ್ತದೆ. ಅಂದು ಭಗವಾಧ್ವಜದ ಹಿಂದೆ ಸಾಗಿ ವ್ಯಕ್ತಿಗಳು ಬದಲಾಗುತ್ತಾ ಇಂದು ವ್ಯಕ್ತಿಯ ಹಿಂದೆ ಗೊತ್ತಿಲ್ಲದೇ ತೆರಳುವ, ಗುಂಪುಗಳಾಗುವ ಹಂತ ಬಂದಿದೆ.ಇದಕ್ಕೆ ಕಾರಣ ಅಧಿಕಾರ ಹಾಗೂ ವ್ಯಕ್ತಿ ಪ್ರತಿಷ್ಟೆ.ಎಷ್ಟೆಂದರೆ ತಳಮಟ್ಟದಲ್ಲೂ ಜವಾಬ್ದಾರಿಯ ಹಂತಕ್ಕೆ ಬಂದಾಗ "ಅವನನ್ನು ಮಾಡಿ" "ಇವನನ್ನು ಬಿಡಿ" ಎಂದು ಹೇಳುವಷ್ಟು...!. ಹೀಗಾಗಿ ಈಗ ಗುಂಪುಗಳ ಸಂಖ್ಯೆ ಗೊತ್ತಿಲ್ಲದೆಯೇ ಹೆಚ್ಚಾಗಿದೆ.

ಇದರಿಂದಾಚೆ ಬಂದರೆ,

ಅಧಿಕಾರಗಳು ಲಭಿಸಲು ಆರಂಭವಾಯಿತು. ಅಂದಿನಿಂದಲೇ ಅಧಿಕಾರ ಕೇಂದ್ರಿತ ವ್ಯವಸ್ಥೆಗಳಾಗಿ ಮೂಲ ಸಂಗತಿಗಳು ಬದಲಾದವು. ಕೆಲವು ವರ್ಷದ ಹಿಂದೆ ಒಂದು ಪ್ರಮುಖ ದೇವಸ್ಥಾನದ ಆಡಳಿತ ಲಭ್ಯವಾಯಿತು. ಅಲ್ಲಿ ಸ್ವಚ್ಛ ಆಡಳಿತದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅಲ್ಲೊಂದು ಲೋಪ ಆಗಿತ್ತು. ಅದೊಂದು ಟೆಂಡರ್‌ ಪ್ರಕ್ರಿಯೆಯ ಸಂಗತಿ. ಆಗ ನಾನು ಪತ್ರಿಕೆಯಲ್ಲಿದ್ದೆ. ಪಕ್ಕಾ ಸ್ವಯಂಸೇವಕ. ಇತರ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ಪತ್ರಕರ್ತ. ಒಬ್ಬರು ಕೆಲವು ದಾಖಲೆ ತಂದು ತೋರಿಸಿದರು. ತಕ್ಷಣ ನಾನು ಸುದ್ದಿ ಮಾಡುವ ಬದಲು ಸಂಬಂಧಿತರ ಗಮನಕ್ಕೆ ತಂದು ಸುಮ್ಮನಾದೆ...!. ಆ ಸುದ್ದಿ ಸತ್ತು ಹೋಯಿತು. ಊರಿಗಿಡೀ ತಿಳಿಯಲೂ ಇಲ್ಲ...!. ಎಷ್ಟೆಂದೆರೆ ಆ ದಾಖಲೆ ನಾನು ಇರಿಸಿಕೊಳ್ಳಲೂ ಇಲ್ಲ...!. ಈ ಕಡೆ ಮಾಹಿತಿ ನೀಡಿದ ವ್ಯಕ್ತಿ ನನ್ನ ಮೇಲಿನ ನಂಬಿಕೆ ಕಳೆದುಕೊಂಡರು. 2021 ರಲ್ಲಿ ಇದನ್ನು ನೋಡಿದರೆ ಇಂತಹ ಹಲವು ಸಂಗತಿಗಳು ಕಾಣುತ್ತಿವೆ.....! 

ಇನ್ನೊಂದು ಸಂಗತಿ,  ಒಮ್ಮೆ ಒಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ನಾನು ಅತ್ಯಂತ ಗೌರವಿಸುವ ವ್ಯಕ್ತಿ. ಹಲವು ಸಂಗತಿಗಳು ಅವರು ಹೇಳಿದರೆ ಮುಗಿಯಿತು. ಏಕೆಂದರೆ ಅದರಲ್ಲಿ ಯಾವುದೇ ಕಲ್ಮಶವಿಲ್ಲ ಹಾಗೂ ಅದು ಸತ್ಯ ಅಂತಲೇ ನಂಬುತ್ತಿದ್ದೆ. ಏಕೆಂದರೆ ಆ ವ್ಯಕ್ತಿ ಅಷ್ಟೊಂದು ಪ್ರಾಮಾಣಿಕ.  ಅದೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅವರು ಒಮ್ಮೆ ಹೀಗೆ ಮಾತನಾಡುತ್ತಾರೆ, " ಅವನು ನಮ್ಮನ್ನು ಬಿಟ್ಟರೆ ಏನೂ ಇಲ್ಲ. ಸಂಘಟನೆ ಅಂದರೆ ಹಾಗೇ, ಅವನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ, ಅವನು ಹಾಗೆ... ನಾವು ಇವನನ್ನು ಹೊರಗೆ ಇರಿಸಿದ್ದೇವೆ, ಇವನು ಅನಗತ್ಯ ಪ್ರಶ್ನೆ ಮಾಡುತ್ತಾನೆ....  ಇತ್ಯಾದಿ ಸಂಗತಿಗಳನ್ನು ಹೇಳಿದರು. ಆ ಕ್ಷಣದಲ್ಲಿ ನಾನು ಹೌದು ಎಂದು ಒಪ್ಪಿಕೊಂಡೆ  ಏಕೆಂದರೆ ಆ ವ್ಯಕ್ತಿ ಅಂದು ಹಾಗೆಯೇ ಇದ್ದ ಕೂಡಾ  ಹಾಗೂ ನಾನೂ ಯಾವುದನ್ನೂ ಯೋಚಿಸದೇ ಅದನ್ನು ಅನುಸರಿಸಿದೆ ಕೂಡಾ. ಏಕೆಂದರೆ ಅವರು ನಿಲ್ಕಷ್ಮಶ ಎಂದು ಅಂದುಕೊಂಡಿದ್ದೆ....!  2021 ರಲ್ಲಿ ನಿಂತು ಆಲೋಚಿಸುವಾಗ , ಚಿಂತನೆಗಳಲ್ಲಿ  ವ್ಯತ್ಯಾಸ ಆದದ್ದು ಅರಿವಾಯಿತು, ಕಲುಷಿತವಾದ್ದು ಎಲ್ಲಿ ಎಂದು ಯೋಚಿಸುವಂತೆ ಮಾಡಿತು ಹಲವು ಸಂಗತಿಗಳು...!. 

 ಅಂತಹ ಹಲವು ಸಂಗತಿಗಳು ಇವೆ ನಾಳೆ ಬರೆಯುತ್ತೇನೆ. .........




 

09 ಅಕ್ಟೋಬರ್ 2021

ಆರ್‌ ಎಸ್‌ ಎಸ್‌ ಎನ್ನುವ ವ್ಯಕ್ತಿತ್ವ ವಿಕಸನ ಕೇಂದ್ರ | ಅದೊಂದು ಪಾಸಿಟಿವ್‌ ಕೇಂದ್ರ |


 ಕಳೆದ ಒಂದು ವಾರದಿಂದ ಪತ್ರಿಕೆ ತೆರೆದರೆ ಅಲ್ಲಲ್ಲಿ ಆರ್‌ ಎಸ್‌ ಎಸ್‌ ಬಗ್ಗೆ ಹೊಗಳಿಕೆ ಹಾಗೂ ಟೀಕೆಗಳು ಕಾಣುತ್ತಿವೆ. ಆರ್‌ ಎಸ್‌ ಎಸ್‌ ಒಳ ಹೋದರೆ ತಿಳಿಯುವುದು ಅದೊಂದು ವ್ಯಕ್ತಿತ್ವ ವಿಕಸನದ ಕೇಂದ್ರ. ಅದೊಂದು ಸಮಾಜಕ್ಕೂ, ವ್ಯಕ್ತಿಗೂ ಪಾಸಿಟಿವ್‌ ಶಕ್ತಿ ನೀಡುವ ಸಂಘಟನೆ. 

ಯಾವತ್ತೂ ಒಂದು ಸಂಘಟನೆಯ, ಒಂದು ವ್ಯಕ್ತಿಯ ಬಗ್ಗೆ ಯಾವುದೇ ಕಾರಣ ಇಲ್ಲದೆ  ಟೀಕೆ ಬರುವುದು  ಎರಡು ಕಾರಣಗಳಿಗೆ, ಒಂದೋ ಆ ಸಂಘಟನೆ ಅಥವಾ ವ್ಯಕ್ತಿ ಬಲಿಷ್ಟವಾಗಿ ಬೆಳೆಯುತ್ತಿದ್ದಾನೆ ಅಥವಾ ಬೆಳೆದಿದ್ದಾನೆ ಎಂದರ್ಥ. ಇದು  ದ್ವೇಷ ಭಾವನೆ ಕಾರಣ, ಈ ಕಾರಣದಿಂದ ಅನಗತ್ಯವಾಗಿ ಹಾಗೂ ಯಾವುದೇ ಕಾರಣ ಇಲ್ಲದೆ, ರಚನಾತ್ಮಕವಲ್ಲದೆಯೂ ಟೀಕೆಗಳು ಬರುತ್ತವೆ. ಆರ್‌ ಎಸ್‌ ಎಸ್‌ ಗೆ ಅಂತಹ ಯಾವ ಟೀಕೆಗಳ, ಹೊಗಳಿಕೆಗಳ ಅಗತ್ಯವೂ ಇಲ್ಲ. ಆ ಚಿಂತನೆಗಳು ಹಾಗೆಯೇ. ಯಾವ ಟೀಕೆಗೂ, ಯಾವ ತೆಗಳಿಕೆಗೂ ಬಗ್ಗೆಯೇ ಒಂದು ಸಂಘಟನೆ ಇಷ್ಟು ವರ್ಷಗಳ ಕಾಲ ಬೆಳೆದಿದೆ ಎಂದರೆ ಅದು ನಿರ್ಮಿಸಿದ ಸೇತುವೆ ಅಂತಹದ್ದೇ. ಯಾವ ಫಲಾಪೇಕ್ಷೆಯೂ ಇಲ್ಲದೆಯೇ ಅನೇಕರು ದುಡಿದಿದ್ದಾರೆ, ಬೆವರು ಹರಿಸಿದ್ದಾರೆ, ಮನೆ ಮಠ ತೊರೆದಿದ್ದಾರೆ. ಅನೇಕರು ಇದೇ ಸಂಘಟನೆಯಲ್ಲಿ  ದುಡಿಯುತ್ತಾ ಸ್ವಂತದ್ದೆಲ್ಲವೂ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಂಘಟನೆಯ ಹಿಂದೆ ಅಪಾರ ಪರಿಶ್ರಮ ಇದೆ.

 ಟೀಕೆಗಳಿಗೆ, ನಮ್ಮನ್ನು  ನಿರ್ಲಕ್ಷ್ಯ ಮಾಡುವವರಿಗೆ  ಏನು ಮಾಡಬೇಕು ಎಂದು ಸಂಘದ ಹಿರಿಯರು ಅಂದೇ ಹೇಳಿದ್ದರು, ಯಾವುದೇ ಸುಳ್ಳು ಟೀಕೆಗಳಿಗೆ, ಅಪಪ್ರಚಾರಗಳಿಗೆ ಉತ್ತರ ನೀಡಬಾರದು. ಏಕೆಂದರೆ ಅಂತಹ ಟೀಕೆಗಳು ನಿಮ್ಮ ಸಾಧನೆಗಳನ್ನು ಅಡ್ಡಿ ಮಾಡಲೇ ಇರುವಂತಹದ್ದು. ಈಗ ನೀವು ಮಾಡಬೇಕಾದ್ದು ಎರಡು ಹೆಜ್ಜೆ ಮುಂದಿನ ಕೆಲಸ. ಇನ್ನಷ್ಟು ಕೆಲಸ ಮಾಡಿ ಅಷ್ಟೇ ಸಾಕು. ಟೀಕೆ ಮಾಡುವವನು ನಮಗೆ ಇನ್ನಷ್ಟು ಸಹಾಯ ಮಾಡುತ್ತಾನೆ, ಆತ ನಮ್ಮ ಹುಳುಕು ತೋರಿಸುವ ಕೆಲಸ ಮಾಡಲಿ. ನಾವು ಅದನ್ನೆಲ್ಲಾ ಸರಿ ಮಾಡೋಣ. ನಾವು ಇನ್ನಷ್ಟು ಪರಿಪೂರ್ಣ ವ್ಯಕ್ತಿಯಾಗೋಣ ಎನ್ನುವುದನ್ನು  ನಾನು ಕೇಳಿದ್ದೇನೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ನಾವು ಇನ್ನೂ ಪರಿಪೂರ್ಣರಾಗಬೇಕಿದೆ ಎಂದರ್ಥ, ಅದಕ್ಕಾಗಿ ಇನ್ನಷ್ಟು ಸಾಧನೆ ಮಾಡಿ ತೋರಿಸಬೇಕು. ಅದನ್ನು ಸದ್ದಿಲ್ಲದೆ ಮಾಡಿ, ಸಂಘಟನೆ ಮಾಡಿ ಎಂದಿದ್ದರು. ಆಗ ಇಡೀ ಸಮಾಜವೇ ಗಮನಿಸುತ್ತದೆ, ನಿಮ್ಮ ಶಕ್ತಿಯ , ಶ್ರಮದ ಪರಿಚಯವಾಗುತ್ತದೆ. ವಿರೋಧಿಗಳು ಇರಲಿ, ಮೌನವಾಗಿ ಎದುರಿಸಿ ಎಂದು ಧೈರ್ಯ ತುಂಬುವ, ಮನಸ್ಸಿಗೆ ಶಕ್ತಿ ನೀಡುವ, ಮನೋಬಲದ, ಆತ್ಮವಿಶ್ವಾಸ ಮಾತುಗಳು ಅಲ್ಲಿ ಸಿಗುತ್ತಿತ್ತು. ಈ ಕಾರಣಗಳಿಂದಲೇ ಸಂಘ, ನಿಜವಾದ ಸಂಘದ ಕಾರ್ಯಕರ್ತ ಎಲ್ಲಾ ಟೀಕೆಗಳಿಗೂ ಕಾರ್ಯದ ಮೂಲಕವೇ ಉತ್ತರಿಸುತ್ತಾರೆ.  ಹಾಗಂತ ಸುಳ್ಳುಗಳನ್ನು ಹೇಳಬೇಡಿ, ಅನ್ಯಾಯ, ಅನಾಚಾರ ಮಾಡಬೇಡಿ, ಸತ್ಯದ ದಾರಿಯಲ್ಲಿ  ನಡೆಯಿರಿ, ಗೆಲವು ನಮ್ಮದೇ, ಅದು ನಿಶ್ಚಿತ ಎಂದು ಹೇಳುತ್ತಿದ್ದರು.ಸತ್ಯ ಯಾವತ್ತೂ ಸೋಲುವುದಿಲ್ಲ, ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ, ಹೀಗಾಗಿ ಚಿಂತೆ ಬೇಡವೇ ಎಂದು ಭರವಸೆಯ ಮಾತುಗಳು ಸಂಘದಲ್ಲಿತ್ತು.  ಸಂಘದ ಒಂದು ಗಂಟೆಯ ಬೈಠಕ್‌ ಎಂದರೆ, ಸಂಘದ ಅಭ್ಯಾಸ ವರ್ಗ ಎಂದರೆ, ಸಂಘದ ಒಂದು ಗಂಟೆಯ ಚಟುವಟಿಕೆ ಎಂದರೆ ಅಲ್ಲಿ ರೀಫ್ರೆಶ್‌ ಮೆಂಟ್‌ ಖಚಿತ. ಆರಂಭದ ಒಂದು ಹಾಡು ಇಡೀ ದಿನ ಲೈವ್‌ ಇಡುತ್ತದೆ.  ಇಂತಹದ್ದರಿಂದಲೇ ಸಂಘ ಬೆಳೆದಿದೆ.

ಇಂದು ಯಾವುದೇ ಸಂಘಟನೆಗಳನ್ನು ಗಮನಿಸಿದರೂ ಒಂದೆರಡು ವರ್ಷದಲ್ಲಿ ಯಾವುದೋ ಇಗೋಗಳಿಗೆ ಬಲಿಯಾಗುತ್ತವೆ. ಹುಟ್ಟಿ ಸಾಯುತ್ತದೆ. ಕಾರಣ ಆ ಸಂಘಟನೆಯಲ್ಲಿ ಒಂದೇ ಮನಸ್ಥಿತಿಯಲ್ಲಿ ಕೆಲಸ ಮಾಡುವ ಮಂದಿ ಕಾಣದಾಗುತ್ತಾರೆ. ಈ ಎಲ್ಲಾ ಅಡೆ ತಡೆಗಳನ್ನೂ ದಾಟಿ ಈ ಸಂಘವು ಇಷ್ಟು ವರ್ಷಗಳ ಕಾಲ ಬೆಳೆದಿದೆ. ಇದಕ್ಕೆ ಮೂಲ ಕಾರಣ, ಆರಂಭದ ಆ ಚಿಂತನೆಗಳು. ಈ ಸಂಘಟನೆ ಯಾವತ್ತೂ ವ್ಯಕ್ತಿಯ ಹಿಂದೆ ಹೋಗಿ ಬೆಳೆದಿಲ್ಲ. ವ್ಯಕ್ತಿ ಶಾಶ್ವತವಲ್ಲ ಎಂದು ಇಂದಿಗೂ ಸಾರುವ ಆ ಚಿಂತನೆಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಹಿಂದೆ ಬೆಳೆಯುವ ಸಂಘಟನೆಗಳು ಶಾಶ್ವತವೂ ಅಲ್ಲ ಎನ್ನುವುದೂ ಸತ್ಯ. ಏಕೆಂದರೆ ಆರ್‌ ಎಸ್‌ ಎಸ್‌ ನಂತಹ ಇನ್ನೊಂದು ಸಂಘಟನೆ ಈ ದೇಶಲ್ಲಿ ಇನ್ನೊಂದು ಬೆಳೆದಿಲ್ಲ, ಬೆಳೆಯಲು ಸಾಧ್ಯವೂ ಆಗಿಲ್ಲ.  

ಇಲ್ಲಿ ಭಗವಾಧ್ವಜವೇ ಗುರು, ಅದುವೇ ಸಾರ್ವಕಾಲಿಕ ನಾಯಕ. ಆ ತತ್ತ್ವದ ಅಡಿಯಲ್ಲಿಯೇ ಬೆಳೆದ ಸಂಘವು  ಸಮಾಜ, ಸೇವೆ, ಸಹಬಾಳ್ವೆ, ಸಮಾನತೆ, ವ್ಯಕ್ತಿತ್ವ ವಿಕಸನ , ಆತ್ಮಸ್ಥೈರ್ಯ, ಪೂರ್ವ ಚಿಂತನೆ, ಪ್ಲಾನ್‌ , ವೈಚಾರಿಕ ಚಿಂತನೆ ಇತ್ಯಾದಿಗಳೇ ಈ ಸಂಘಟನೆ ಬೆಳೆಯಲು ಪ್ರಮುಖ ಕಾರಣ. 

ಆರ್‌ ಎಸ್‌ ಎಸ್‌ ಶಾಖೆಗಳಿಗೆ ಹೋದಾಗಲೇ ಅಲ್ಲಿ ಇರುವ ವೈಚಾರಿಕ ಚಿಂತನೆ, ವ್ಯಕ್ತಿತ್ವ ವಿಕಸನದ ಚಿಂತನೆಗಳು ಕಾಣುತ್ತವೆ. ಎಲ್ಲರೂ ಜೊತೆಯಾಗುತ್ತಾ ಪರಸ್ಪರ ಸಹಕಾರಗಳು ವ್ಯಕ್ತಿಗೆ ಮಾನಸಿಕ ಧೈರ್ಯ ಹಾಗೂ ಶಕ್ತಿ ನೀಡುತ್ತವೆ. ಅನೇಕರು ಜಾತಿ ಆಧಾರಿತ ವ್ಯವಸ್ಥೆ ಎಂದು ಟೀಕಿಸುತ್ತಾರೆ, ಅಂತಹ ಜಾತಿಯ ವ್ಯವಸ್ಥೆ ಅದರೊಳಗೆ ಕಾಣುವುದಿಲ್ಲ. ಸಹಜವಾಗಿಯೇ ಚಿಂತನೆಯ ಆಧಾರಿತವಾಗಿ ಬೆಳೆಯುವ ಕಾರಣದಿಂದ ಚಿಂತಕರಿಂದಲೇ ಸಂಘಟನೆ ಮುಂದುವರಿಯುತ್ತದೆ. ಹಾಗಾಗಿ ಚಿಂತಕರ ಕೂಟ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ ಇಲ್ಲಿ.

ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಸಂಘಟನೆ. ಇಲ್ಲಿಗೆ ಯಾರೇ, ಯಾವುದೇ ವ್ಯಕ್ತಿ ಬರಲಿ. ಅವನಿಗೆ ಬೆಳೆಯುವ ಹಾಗೂ ಕಲಿಯುವ ಆಸಕ್ತಿ ಇದ್ದರೆ ಆತ ಸಹಜವಾಗಿಯೇ ಬೆಳೆಯುತ್ತಾ ಸಾಗುತ್ತಾನೆ, ಅನುಭವದ ಮಂಟಪವನ್ನು ಕಟ್ಟಿಕೊಳ್ಳುತ್ತಾನೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ನನ್ನ ಮನೆ, ನನ್ನ ಕುಟುಂಬ,ನನ್ನ ಗ್ರಾಮ, ನನ್ನ ರಾಜ್ಯ, ನನ್ನ ದೇಶದವರೆಗೆ ಚಿಂತನೆಗಳು ವಿಸ್ತಾರವಾಗುತ್ತದೆ. ಯಾರಿಗೇ ನೋವಾದರೂ ತಮಗೇ ನೋವಾದಷ್ಟು ಆ ಚಿಂತನೆಗಳು ಇದೆ. ನನ್ನ ಗ್ರಾಮ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದೂ ಕಲ್ಪನೆಯ ಆಧಾರದಲ್ಲಿ ಬೆಳೆಯುತ್ತದೆ.

ನನ್ನ ದೇಶದ ಕಲ್ಪನೆಯನ್ನು ನನ್ನೊಳಗೇ ಬಿತ್ತುವ ಆರ್‌ ಎಸ್‌ ಎಸ್‌ ಮೊದಲು ಕಲಿಸುವುದು ಯಾವುದೇ ಒಂದು ನಾಯಕತ್ವ ವಹಿಸುವಾಗ ಅದರ ಕನಸುಗಳನ್ನು. ನಾನು ಆ ಸಂಘಟನೆಯ ನಾಯಕತ್ವ ವಹಿಸಿಕೊಂಡರೆ ಏನು ಮಾಡಬೇಕು ಹಾಗೂ ಮಾಡಬಹುದು  ಎನ್ನುವುದನ್ನು  ಆರ್‌ ಎಸ್‌ ಎಸ್‌ ಮೂಲ ಚಿಂತನೆ ತಿಳಿಸಿಕೊಡುತ್ತದೆ. ಹೀಗಾಗಿಯೇ ಅಲ್ಲಿ ನಾಯಕರಿಗೆ ಕೊರತೆ ಇಲ್ಲ. ಪ್ರತೀ ವ್ಯಕ್ತಿಯೂ ಯಾವಾಗ ಬೇಕಾದರೂ, ಯಾವ ಸಂಘಟನೆಯಲ್ಲೂ ನಾಯಕತ್ವ ವಹಿಸಿಕೊಂಡರೆ ಅವರು ಸಮರ್ಥವಾಗಿ ವಿಚಾರ ಮಂಡಿಸಬಲ್ಲರು, ಮಾತನಾಡಬಲ್ಲರು ಕೂಡಾ. ಇದಕ್ಕಾಗಿಯೇ ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವ ರೂಪಿಸುವ ಕೇಂದ್ರ, ವ್ಯಕ್ತಿತ್ವ ವಿಕಸನದ ಕೇಂದ್ರ.

ಅನೇಕ ವರ್ಷಗಳ ಕಾಲ ವ್ಯಕ್ತಿತ್ವ ವಿಕಸನ, ವ್ಯಕ್ತಿ ನಿರ್ಮಾಣ ಮಾಡಿರುವ ಆರ್‌ ಎಸ್‌ ಎಸ್‌ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ವಿಭಾಗದಲ್ಲೂ, ಎಲ್ಲಾ ಆಯಾಮದಲ್ಲೂ  ಬೆಳೆದಿದೆ. ಹೀಗಾಗಿ ಅದೊಂದು ಶಕ್ತಿ. 

ಅಂತಹ ಸಂಘಟನೆಯಲ್ಲಿ ಪ್ರಚಾರಕ್‌ ಆಗಿ ಸೇವೆ ಮಾಡುವ ಹಂತಕ್ಕೆ ತಲುಪಿ ನಂತರ ನನ್ನ ಅನಿವಾರ್ಯತೆಯಿಂದ ಹಿಂದೆ ಸರಿದ ಒಂದು  ಸಂದರ್ಭದಲ್ಲಿ ಸಂಘಟನೆಯ  ಹಿರಿಯರೊಬ್ಬರು ಅಂದು  ಹೇಳಿದ್ದರು, " ನೋಡು ಮಾರಾಯ, ನೀನು ಎಲ್ಲಾದರೂ ಇರು, ಒಮ್ಮೆ ಧ್ವಜ ಪ್ರಣಾಮ್‌ ಮಾಡಿದ ಮೇಲೆ ನೀನು ಸಂಘದ ಸ್ವಯಂ ಸೇವಕ. ನೀನು ಯಾವ ಕ್ಷೇತ್ರದಲ್ಲಿ ಇದ್ದಿಯೋ ಅಲ್ಲಿಯೇ ಕೆಲಸ ಮಾಡು, ಆದರೆ ಅದು ದೇಶಕ್ಕೆ, ನಿನ್ನ ಗ್ರಾಮದ ಅಭಿವೃದ್ಧಿ ದೃಷ್ಟಿ ಇರಲಿ ಅಷ್ಟೇ " ಎಂದು  ಎರಡು ಬಾರಿ ಹೇಳಿದ್ದರು. 

 ಇಂದು ಈ ಮೇಲಿನ ಸಾಲುಗಳೇ  ಹೆಚ್ಚು ಚರ್ಚೆಯಾಗುತ್ತಿರುವುದು. ಅನೇಕ ಅಧಿಕಾರಿಗಳು ಸಂಘಿಯ ಹಾಗೆ ಕಾಣುವುದು, ಅನೇಕ ಪತ್ರಕರ್ತರು ಬಲಪಂಥೀಯರ ಹಾಗೆ ಕಾಣುವುದು, ಅನೇಕ ಜನರು ಆರ್‌ ಎಸ್‌ ಎಸ್‌ ಎಂದು ಕಾಣುವುದು  ಇದೇ ಕಾರಣಕ್ಕೆ. ಹಾಗೆಂದು ಆ ಪಾಸಿಟಿವಿಟಿಯನ್ನು  ಬೆಳೆಸುವುದು ತಪ್ಪೋ ? ಸರಿಯೋ ಕಾಲದ ಚರ್ಚೆ. ಆದರೆ ಧ್ವಜ ಪ್ರಣಾಮ್‌ ಮಾಡಿದ ವ್ಯಕ್ತಿ, ತನಗೆ ಪಾಸಿಟಿವ್‌ ಚಿಂತನೆಗಳನ್ನು ಬಿತ್ತಿದ ಸಂಘಟನೆಯ ಬಗ್ಗೆ ಮಾತನಾಡುವುದು , ಅದರ ಪರವಾಗಿ ಒಂದು ಕ್ಷಣ ಯೋಚಿಸುವುದು ತಪ್ಪೋ ಸರಿಯೋ ಎಂಬುದೂ ಕಾಲಚ ಚರ್ಚೆ. ಆದರೆ ಆ  ಸಂಘಟನೆಯ ಮೂಲ ಚಿಂತನೆ ಎಂದಿಗೂ ತಪ್ಪಾಗಿಲ್ಲ, ಅದರಲ್ಲಿ ಲೋಪವಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿಯೇ ಈ ಕಾಲದ ಚರ್ಚೆಗೆ ಉತ್ತರವಿಲ್ಲ.

ಸಂಘದ ಸುತ್ತಲಿನ ನನ್ನ ಅನುಭವದ ಬಗ್ಗೆ, ನಂಬರ್‌ ಬ್ಲಾಕ್‌ ಮಾಡಿದ ಬಗ್ಗೆ ನಾಳೆ ಬರೆಯುತ್ತೇನೆ......

17 ಸೆಪ್ಟೆಂಬರ್ 2021

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯದ ಮೂಲಕ ಶುಭಾಶಯ ತಿಳಿಸುವ ಕಾಲ ಇದು...!

  



ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ. 

ಹಲವು ಕಾರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆ ಇರಬಹುದು. ಆದರೆ ಪ್ರಮುಖವಾದ ಎರಡು ಕಾರಣಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ  ಭಾರತದ ಕೀರ್ತಿಯನ್ನು  ಏರಿಸಿದ್ದು, ಕನಿಷ್ಟ ತಮ್ಮ ಸಂಪುಟ ಸಚಿವರಲ್ಲಿ  ಭ್ರಷ್ಟಾಚಾರ ನುಸುಳದಂತೆ ಮಾಡಿರುವುದು. ಭ್ರಷ್ಟಾಚಾರದಲ್ಲಿ  ಹಿಡಿತ ಸಾಧಿಸುವುದು ಅಷ್ಟು ಸುಲಭವಲ್ಲ. ತಾಂಡವಾಡುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದೂ  ಸುಲಭದ ಮಾತಲ್ಲ. ಆರಂಭವಾದ ಹೆಜ್ಜೆ ಮುಂದುವರಿಯಬಹುದು.

ಸರಿ ಸುಮಾರು 8 ವರ್ಷಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ ಭಾರೀ ಚರ್ಚೆ ಆಗುತ್ತಿತ್ತು. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಲೇಬೇಕು, ಎಂದಲ್ಲ, ಆದರೆ ಅವರ ಇಮೇಜ್‌ ಉಳಿಯಬಹುದಾ ? ಈ ದೇಶದಲ್ಲಿ ಇದೆಲ್ಲಾ ಸಾದ್ಯ ಇದೆಯಾ? ಮೋದಿ ಅವರ ಕನಸು ಈಡೇರಬಹುದಾ ? ಗುಜರಾತ್‌ ಒಂದು ರಾಜ್ಯ, ಭಾರತದ ಒಂದು ದೇಶ. ಇಲ್ಲಿ ಒಮ್ಮೆಲೇ ಎಲ್ಲವೂ ಸಾಧ್ಯವೇ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರ ಒಂದು ಕಡೆ, ಅಭಿವೃದ್ಧಿಯ ಲಿಸ್ಟ್‌ ಇನ್ನೊಂದು ಕಡೆ . ಗುಜರಾತ್‌ ಮಾದರಿಯ ಅಭಿವೃದ್ಧಿ ಇಡೀ ದೇಶಕ್ಕೆ ಸಾಧ್ಯವೇ ಎಂಬುದು  ಅಲ್ಲಿ ನಡೆಯುತ್ತಿದ್ದ ಚರ್ಚೆ. ನರೇಂದ್ರ ಮೋದಿ ಅವರ ಬಗ್ಗೆ ಅಂದು ಆ ಮಾದರಿಯ ಚರ್ಚೆ ಹಳ್ಳಿ ಹಳ್ಳಿಯಲ್ಲಿ  ನಡೆಯುತ್ತಿತ್ತು. ಕೊನೆಗೆ ಬಂದ ಅಭಿಪ್ರಾಯ, ಎಲ್ಲಾ ಡೆವಲೆಪ್ಮೆಂಟ್‌ ಸಾಧ್ಯವಿದೆ. ಎಲ್ಲವೂ ಸರಕಾರದ ಪಾಲಿಸಿಯಿಂದ ಸಾಧ್ಯವಿದೆ, ನರೇಂದ್ರ ಮೋದಿ ಅವರು ಅದನ್ನು ಮಾಡುತ್ತಾರೆ , ಅವರಿಗೆ ಸಾತ್‌  ನೀಡುವ ದೊಡ್ಡ ಕಾರ್ಯಕರ್ತರ ಪಡೆ ಇದೆ, ಅದು ಹಳ್ಳಿ ಹಳ್ಳಿಯವರೆಗೂ ಇದೆ. ಅವರೊಂದು ಟೀಂ ಮಾಡಿದ್ದಾರೆ, ಆ ಟೀಂ ಸೈಲೆಂಟಾಗಿ ಹಳ್ಳಿಯವರೆಗೂ ಇದೆ. ಅವರು ಎಲ್ಲಾ ಫೀಡ್‌ ಬ್ಯಾಕ್‌ ಕೊಡುತ್ತಾರೆ. ಅವರು ಯಾರು ಅಂತಲೇ ಗೊತ್ತಿಲ್ಲ...! ಹೀಗೆಲ್ಲಾ ಚರ್ಚೆ ನಡೆಯಿತು. ಅಂದರೆ ಅಷ್ಟೂ ಪ್ರಮಾಣದ ವಿಶ್ವಾಸ ನರೇಂದ್ರ ಮೋದಿ ಅವರಿಂದ ತೊಡಗಿ ಹಳ್ಳಿ ಆ "ಅನಾಮಧೇಯ" ಕಾರ್ಯಕರ್ತನವರೆಗೂ ಇತ್ತು.

ಮುಂದೆ ಹಳ್ಳಿ ಹಳ್ಳಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂಬ ಬ್ಯಾನರ್‌ ರಾರಾಜಿಸಿತು, ಸೋಶಿಯಲ್‌ ಮೀಡಿಯಾದಲ್ಲಿ ಹಲವು ಪೋಸ್ಟ್‌ ಗಳು ಬಂದವು. ಚುನಾವಣೆ ಕಳೆದಾಗ ಇತಿಹಾಸದಲ್ಲಿ  ಮೊದಲ ಬಾರಿ ಬಿಜೆಪಿ ಮೆಜಾರಿಟಿ ಪಕ್ಷವಾಯಿತು. ವ್ಯಕ್ತಿ ಆಧಾರಿತವಾಗಿ ಮೊದಲ ಬಾರಿಗೆ "ಬಿಜೆಪಿ" ಗೆದ್ದಿತು.  ಆ ಬಳಿಕ ವಿವಿಧ ಸವಾಲುಗಳನ್ನು ಉತ್ಯುತ್ಸಾಹದಿಂದ ಪ್ರಧಾನಿಗಳು ಮೆಟ್ಟಿ ನಿಂತರು. ದೇಶಕ್ಕೆ ದೇಶವೇ ಬೆರಗಾಯಿತು. ಒಂದು ಕಾಲದಲ್ಲಿ  ಅಮೇರಿಕಾ ತಮ್ಮ ದೇಶಕ್ಕೆ ಮೋದಿ ಬರುವುದು  ಬೇಡ ಎಂದಿದ್ದ ದೇಶವೇ ರೆಡ್‌ ಕಾರ್ಪೆಟ್‌ ಹಾಸಿತು. ಯಾವಾಗ ಬರುತ್ತೀರಿ ಎಂದು ಕರೆಯಿತು. 

ಎಲ್ಲಾ ದೇಶಗಳನ್ನೂ ಸುತ್ತಾಡಿದ ಮೋದಿ ಅವರು ವಿಶ್ವ ಮಟ್ಟದಲ್ಲಿ ದೇಶವನ್ನು  ಗಮನಸೆಳೆದರು. ಭಾರತ ವಿಶ್ವಗುರುವತ್ತ ಸಾಗಿತು.  ಮೋದಿ ಅವರ ಕನಸಿನ ಬಗ್ಗೆ ಒಂದು ಕಡೆ ದಾಖಲಾಯಿತು, ಭಾರತ ವಿಶ್ವಗುರುವಾಗಬೇಕು, ಪ್ರತೀ ಹಳ್ಳಿಯೂ ವಿಶ್ವಗುರುವಾಗಬೇಕು ". ಅಂದರೆ ಇದರ ಅರ್ಥ ಈ ದೇಶದ ಪ್ರತೀ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು.

ಜೊತೆಗೇ ಭ್ರಷ್ಟಾಚಾರ ಮುಕ್ತವಾಗಲು ಪಣ ತೊಟ್ಟರು, ತನ್ನ ಸಂಪುಟದಿಂದಲೇ ಇದನ್ನು ಆರಂಭ ಮಾಡಿದರು, ಭ್ರಷ್ಟಾಚಾರ ಇರುವ ಮಂದಿಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ, ಈ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಿದರು, ಪ್ರತೀ ವ್ಯಕ್ತಿಯೂ ಭ್ರಷ್ಟಾಚಾರ ಮುಕ್ತವಾಗಲಿ ಎಂದರು. 

ಪ್ರತೀ ಹಂತದಲ್ಲೂ ದೇಶದ ಪ್ರತೀ ವ್ಯಕ್ತಿಗೂ ಸಂದೇಶ ನೀಡುತ್ತಲೇ ಹೋದ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ನಂಬರ್‌ ವನ್‌ ನಾಯಕ ಎನಿಸಿದರು. ದೇಶಕ್ಕೆ ದೇಶವೇ ಕೊಂಡಾಡಿತು.

ಅನೇಕ ಕಂಪನಿಗಳಿಗೆ ಮನೆ ಹಾಕಿದರು ಎಂದು ಟೀಕೆಗಳು ಬಂದಿತು. ಈ ದೇಶದ ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಇರುವಾಗ ಸಹಜವಾಗಿಯೇ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಇದೇ ದೇಶದ ಮಂದಿಯ ಸಹಕಾರ ಪಡೆಯುವುದರಲ್ಲಿ  ತಪ್ಪಿಲ್ಲ ಅಂತಲೇ ಭಾವಿಸಲಾಯಿತು. ಇಷ್ಟೂ ವರ್ಷದ ವ್ಯವಸ್ಥೆಯನ್ನು ಕೇವಲ  5  ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬುದೂ ವಾಸ್ತವ ಸಂಗತಿಯೇ ಹೌದು. ಅದನ್ನೂ ಒಪ್ಪಿಕೊಳ್ಳಬೇಕಾದ್ದೇ. 

ಎರಡನೇ ಚುನಾವಣೆಯೂ ಹತ್ತಿರ ಬಂತು. ಈ ಬಾರಿ ದೇಶದ ಜನಕ್ಕೆ ಕರೆ ನೀಡಿದರು, ಪ್ರತೀ ವ್ಯಕ್ತಿಯೂ ಚೌಕೀದಾರ್‌ ಆಗಿ ಎಂದರು. ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬನೆ ಅಗತ್ಯ ಅದಕ್ಕಾಗಿ ಆತ್ಮನಿರ್ಭರ ಭಾರತ ಎಂದರು, ಕೃಷಿ ಆದಾಯ ದ್ವಿಗುಣ ಆಗಬೇಕು ಎಂದರು.. ಹೀಗೇ ಒಂದಷ್ಟು ಕನಸುಗಳನ್ನು ಎರಡನೇ ಬಾರಿ ಬಿತ್ತಿದರು.

ಆದರೆ ಈ ಬಾರಿ ಮಾತ್ರಾ ಆಶಾದಾಯಕ ಬೆಳವಣಿಗೆಗಳು ನಿಧಾನವಾದವು.

ಚೌಕೀದಾರ್‌ ಎಂದು ಗ್ರಾಮೀಣ ಭಾಗಗಳಲ್ಲಿ ನಡೆದ ಭ್ರಷ್ಟಾಚಾರಗಳನ್ನು  ವಿರೋಧ ಮಾಡಿದರೆ ಅವರದೇ ಪಕ್ಷದ ಮಂದಿ ವಿರೋಧಿ ಎಂದು ಕರೆಯುವುದು  ಮಾತ್ರವಲ್ಲ, ಕೇಸು ಹಾಕಿಸಿದರು..!. ಗ್ರಾಮೀಣ ರಸ್ತೆಯೊಂದು ಕಳಪೆಯಾದ್ದಕ್ಕೆ ಅದೇ ಪಕ್ಷದ ಕಾರ್ಯಕರ್ತ ವಿರೋಧ ಮಾಡಿದರು, ಆಗ ಅವರದೇ ಪಕ್ಷದ ಮುಖಂಡರು ಗುತ್ತಿಗೆದಾರನ ಪರ ನಿಂತರು..!

ಆತ್ಮನಿರ್ಭರ ಭಾರತ ಎನ್ನುತ್ತಾ ಕೆಲವು ಕಾರ್ಯಗಳ ಮೂಲಕ ದಾಖಲೆಗಳನ್ನು ಸೃಷ್ಟಿಸಿದರು, ಜನಸಾಮಾನ್ಯನಿಗೆ ಬಹುಪಾಲು ಯೋಜನೆಗಳು ಸಿಗದಾಯಿತು. ಗ್ರಾಮೀಣ ಭಾಗದ ರಸ್ತೆ, ಸೇತುವೆ, ನೆಟ್ವರ್ಕ್‌ ಇತ್ಯಾದಿಗಳು ಇಂದಿಗೂ ಪ್ರಧಾನಿಗಳ ಕನಸಿನ ಮಾತಾಯಿತು. ಕೇಳಿದರೆ, ಇಷ್ಟೂ ವರ್ಷಗಳಲ್ಲಿ ಆಗದ್ದು 8 ವರ್ಷಗಳಲ್ಲಿ ಆದೀತಾ ಎಂದರು...!. 

ಕೇಳಿದರೆ, ಕೃಷಿ ಆದಾಯ ದ್ವಿಗುಣ ಎಂದರು, ಕೃಷಿ ಅಭಿವೃದ್ಧಿ ಬಗ್ಗೆ ಮಾತನಾಡಿದರೆ, ಅದು ಸಾಧ್ಯವಿಲ್ಲ ಎಂದರು.

ಇದೆಲ್ಲಾ ಸಂಗತಿಗಳು ಪ್ರಧಾನಿಗಳು ತಲುಪುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಈಚೆಗೆ ಆ ಬೆಳವಣಿಗೆ ಅಪಾಯಕಾರಿಯಾಗಿ ಸಾಗುತ್ತಿದೆ. ಇದಕ್ಕೆ ಸರಿಯಾಗಿಯೇ ಈಡೀ ದೇಶದಲ್ಲಿ ಸರಿಯಾದ, ರಚನಾತ್ಮಕವಾಗಿ ಮಾತನಾಡುವ ವಿರೋಧ ಪಕ್ಷವೂ ಕಾಣುತ್ತಿಲ್ಲ. ಇದೆಲ್ಲಾ ಈಚೆಗೆ ಈ ದೇಶದ ಜನರಿಗೇ ಸಮಸ್ಯೆಯಾಗುತ್ತಿರುವುದು  ಸುಳ್ಳಲ್ಲ.

ಈಚೆಗೆ ಗ್ರಾಪಂ ಚುನಾವಣೆ, ಸಹಕಾರಿ ಸಂಘದ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಅವರ ಹೆಸರೇ ಮಾತನಾಡುತ್ತದೆ. ಆಯಾ ಪಂಚಾಯತ್‌ ಮಟ್ಟದಲ್ಲಿನ ಒಬ್ಬನೇ ಒಬ್ಬ ಅವರದೇ ಪಕ್ಷದ ನಾಯಕನ ಕೆಲಸ ಸದ್ದು ಮಾಡುವುದಿಲ್ಲ. ಅದರ ಬದಲಿಗೆ ಗುತ್ತಿಗೆಗಳು ಮಾತನಾಡುತ್ತವೆ, ಭ್ರಷ್ಟಾಚಾರಗಳು ಸದ್ದು ಮಾಡುತ್ತವೆ, ಪಕ್ಷದೊಳಗಿನ ಅಸಮಾಧಾನಗಳು, ಜಾತಿಗಳು ಮಾತನಾಡುತ್ತವೆ. ಇದು ತಪ್ಪಾಗುತ್ತಿದೆ ಎಂದು ಹೇಳುತ್ತಲೇ ಅಂತಹವರ ನಂಬರ್‌ ಗಳು ಬ್ಲಾಕ್‌ ಆಗುತ್ತವೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತನಾಡುತ್ತಲೇ ವಿರೋಧಿಗಳಾಗುವುದು  ಮಾತ್ರವಲ್ಲ ಅಂತಹವರ ಬಗ್ಗೆಯೇ ನೆಗೆಟಿವ್‌ ಅಭಿಪ್ರಾಯ ಸೃಷ್ಟಿ ಮಾಡಲಾಗುತ್ತದೆ. ವ್ಯಕ್ತಿ ಆಧಾರಿತವಾಗಿ ಯಾವುದೇ ವ್ಯವಸ್ಥೆ ಇರುವಾಗ ಎಲ್ಲಿ ಮಾತನಾಡಿದರೂ ಪರಿಹಾರ ಕಾಣದು. ಅದು ತಲುಪಬೇಕಾದಲ್ಲಿ ತಲುಪಿದರೂ ಪರಿಹಾರ ಕಾಣುವುದಿಲ್ಲ. ಏಕೆಂದರೆ ವ್ಯವಸ್ಥೆ ಶಿಥಿಲದ ಭಾಗ ಅದು.

ಇಂದು ಪ್ರಧಾನಿಗಳ ಹುಟ್ಟುಹಬ್ಬ, ಅವರಿಗೆ ಶುಭಾಶಯದ ಸುರಿಮಳೆಯೇ ಕಾಣುತ್ತದೆ. ಈ ಶುಭಾಶಯಗಳು ಗ್ರಾಮಮಟ್ಟದಲ್ಲಿ  ಕೆಲಸವಾಗಿ ಕಾಣಬಹುದೇ ? ಗ್ರಾಮಮಟ್ಟದಲ್ಲಿ  ಒಬ್ಬ ಅಂತಹ ನಾಯಕ ಸೃಷ್ಟಿಯಾಗಬಲ್ಲನೇ ? ಭ್ರಷ್ಟಾಚಾರದ ಸುಳಿವೇ ಇರದ ವ್ಯಕ್ತಿ ಕಾಣಬಲ್ಲನೇ ? ಹೀಗಾದರೆ ಪ್ರಧಾನಿಗಳಿಗೆ ಸಲ್ಲಿಸುವ ಶುಭಾಶಯ ಹೆಚ್ಚು ಪವರ್‌ ಫುಲ್‌ ಆಗಿರುತ್ತದೆ. ಇಲ್ಲವಾದರೆ ಬಾಯಿ ಮಾತಿನ ಶುಭಾಶಯವಷ್ಟೇ...!. 




09 ಏಪ್ರಿಲ್ 2021

3 ಸಾವಿರ ರೂಪಾಯಿಗೆ ಬೆಂಗಳೂರಿಗೆ ಹೋಗಬೇಕಾಗಿಲ್ಲ , ಭೂಮಿ ಇದೆ ಎಂದರು ಅಪ್ಪ

 


ಸುಮಾರು  20  ವರ್ಷದ ಹಿಂದಿನ ಮೊದಲ ಹೆಜ್ಜೆ ಅದು.

ಆಗ ತಾನೆ ‌ ಇಲೆಕ್ಟ್ರೋನಿಕ್ಸ್‌& ಕಮ್ಯುನಿಕೇಶನ್ ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್‌ ಮಾಡುವ ಹಂಬಲ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಕೆಲಸಕ್ಕೆ ಹೋಗುವ ಮನಸ್ಸು. ಯಾವ ಆಯ್ಕೆ ಎಂದು ಅಪ್ಪನ ಮುಂದೆ ಬಂದು ನಿಂತೆ. 

ಅಪ್ಪ ಹೇಳಿದ್ದು ಹೀಗೆ ,"‌ ಯಾವುದೇ ಕೋಟ ಇಲ್ಲದ ನಮಗೆ ಮೆರಿಟಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದರೆ ಹೋಗು, ಯಾರಲ್ಲೂ ಸೀಟಿಗಾಗಿ ಕೇಳಲು ಹೋಗುವುದಿಲ್ಲ, ದಮ್ಮಯ್ಯ ಹಾಕಲು ಹೋಗುವುದಿಲ್ಲ. ನನಗೆ ಕಲಿಸಿದ ಪಾಠ ಅದು. ಒಂದು ವೇಳೆ ಸಿಕ್ಕಿದರೆ ಎಷ್ಟು ಖರ್ಚಾದರೂ ಸರಿ ಕಲಿಸುವೆ. ಇಲ್ಲದೇ ಇದ್ದರೆ ಕೆಲಸ ನೋಡು" ಎಂದರು.  ನಾಳೆಯೇ ಹೋಗುವ ಬೇಕಾದರೆ ಬೆಂಗಳೂರು ಹೋಗುವ, ನನ್ನ ಚಿಕ್ಕಯ್ಯನಲ್ಲಿ ಮಾತನಾಡುವೆ ಎಂದರು. ತಕ್ಷಣವೇ ಅರ್ಜಿ ಹಾಕಿದೆ. ಡಿಪ್ಲೊಮಾದಲ್ಲಿ ಫಸ್ಟ್‌ ಕ್ಲಾಸ್‌ ಮಾರ್ಕ್‌ ಇತ್ತು. ಇಂಜಿನಿಯರಿಂಗ್‌ ಗೆ ಸೀಟು ಸಿಗಬಹುದೆಂದ ಆಶಾವಾದಲ್ಲಿದ್ದೆ. ಕೌನ್ಸಿಲಿಂಗ್‌ ಗೆ ಬೆಂಗಳೂರಿಗೆ ಅಪ್ಪನ ಜೊತೆ ಹೋದೆ. ಮೀಸಲಾತಿ ಇಲ್ಲದ ನನಗೆ ಸೀಟು ಸಿಗಲಿಲ್ಲ.ಅಪ್ಪನೂ ಏನೂ ಹೇಳಲಿಲ್ಲ. ಬೆಂಗಳೂರಲ್ಲಿ ಅಪ್ಪನ ಚಿಕ್ಕಯ್ಯನ ಜೊತೆ ಮಾತನಾಡಿದ್ದಾಯಿತು. ಯಾವುದೇ ದು:ಖ ಇಲ್ಲದೆ ಬೆಂಗಳೂರಿನಿಂದ ವಾಪಾಸ್‌ ಮನೆಗೆ ಬಂದಾಗ ನನ್ನ ವಯಸ್ಸು 22. 

ಹುಚ್ಚು ಮನಸ್ಸು. ಏನಾದರೂ ಮಾಡಲೇಬೇಕು. ಮಿತ್ರರೆಲ್ಲರೂ ಒಬ್ಬೊಬ್ಬರು ಒಂದೊಂದು ಯೋಚನೆಯಲ್ಲಿದ್ದರು. ಜೊತೆಯಲ್ಲಿದ್ದ ಒಂದಿಬ್ಬರು ಇಂಜಿನಿಯರಿಂಗ್‌ ಮಾಡಿದರೆ ಇನ್ನೂ ಕೆಲವರು ಕೆಲಸದ ನಿಮಿತ್ತ ಬೆಂಗಳೂರು ಬಸ್ಸು ಹತ್ತಿದರು.  ನಾನೂ ಬೆಂಗಳೂರು ಬಸ್ಸು ಹತ್ತಿದೆ. ಅಪ್ಪನ ಕೈಯಿಂದ ಹಣ ಪಡೆದು ಉದ್ಯೋಗದ ಕನಸಿನಲ್ಲಿ ಬೆಂಗಳೂರು ಬಸ್ಸಿಗೆ ಹತ್ತಿದ ನಾನು ಬಸ್ಸು ಇಳಿಯುವಾಗ ಮುಂಜಾನೆ. ಬೆಳಕು ಹರಿಯಲಿಲ್ಲ. ಮಿತ್ರರೆಲ್ಲಾ ಸೇರಿ ಬಸ್‌ ಸ್ಟ್ಯಾಂಡ್‌ ಬಳಿ ಗಂಟೆ ಲೆಕ್ಕದಲ್ಲಿ ಸಿಗುತ್ತಿದ್ದ ಅತಿಥಿ ಗೃಹದಲ್ಲಿ ಕೊಠಡಿ ಮಾಡಿ ಇಂಟರ್‌ ವ್ಯೂ ಗೆ ತೆರಳಿದ್ದಾಯಿತು. ಅದು ಆಗಿನ ಬಿಪಿಎಲ್‌ ಕಂಪನಿ. ಇಂಟರ್‌ ವ್ಯೂನಲ್ಲಿ ಪಾಸಾದಾ ನಮ್ಮ ಕೆಲವು ಮಿತ್ರರಲ್ಲಿ ನಾನೂ ಒಬ್ಬ. ಸಂಬಳ ಕೇಳಿದಾಗ ಆಗಿನ ದಿನದಲ್ಲಿ 3000  ರೂಪಾಯಿ..!. 6  ತಿಂಗಳ ಬಳಿಕ ವೇತನ ಏರಿಕೆ ಬಗ್ಗೆ ಹೇಳಿದ್ದರು.  15  ದಿನಗಳ ನಂತರ ಕಂಪನಿಗೆ ಸೇರಲು ಹೇಳಿದ್ದರು. 

ಎಲ್ಲಿಗೂ ಹೋಗದೆ ಮನೆಗೆ ಬಂದು ಅಪ್ಪನ ಜೊತೆ ವಿಷಯ ಹೇಳಿದಾಗ ಅಪ್ಪ ಹೇಳಿದ್ದು," 3000  ರೂಪಾಯಿ ಸಂಬಳಕ್ಕೆ ಬೆಂಗಳೂರು ಹೋಗಬೇಕಾಗಿಲ್ಲ, ಭೂಮಿ ಇದೆ. ಅದನ್ನೇ ನೋಡಿಕೊಂಡರೆ ಸಾಕು. ಇದೆಲ್ಲಾ ಮತ್ಯಾರಿಗೆ. ಕೃಷಿ ಆಗಿದೆ, ಇನ್ನೂ ಸ್ವಲ್ಪ ಕೃಷಿ ಮಾಡಲು ಇದೆ." ಎಂದರು. ನನ್ನ ಅಪ್ಪ ಹಾಗೆಯೇ, ಒಂದೇ ಮಾತು. ಆ ನಿಲುವಿನಲ್ಲಿ ಯಾವತ್ತೂ ಬದಲಾವಣೆ ಇರದು. ಮತ್ತೆ ಮತ್ತೆ ಕೇಳಿದಾಗಲೂ ಅದನ್ನೇ ಹೇಳಿದರು. ಕೊನೆಗೆ ಹೇಳಿದರೂ, ಎಷ್ಟಾದರೂ ಕೊನೆಗೆ ಬರಬೇಕಾದ್ದು ಕೃಷಿಗೇ, ವಯಸ್ಸಾದ ಮೇಲೆ ಬಂದು ಏನು ಮಾಡುವಿ ? ಈ ಭೂಮಿ ಮಾರುವುದಾ ಎಂದು ಕೇಳಿದರು. ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಆಗ ಒಳಗೊಳಗೇ ಸಿಟ್ಟಾಗುತ್ತಾ ಸುಮ್ಮನೆ ಕುಳಿತೆ. ಅಂದಿನಿಂದ ಯಾವತ್ತೂ ಅಪ್ಪ ನನಗೆ ಖರ್ಚಿಗೆ ಹಣ ಇಲ್ಲ ಎಂದದ್ದೇ ಇಲ್ಲ. ಏನೇ ಖರ್ಚು ಮಾಡಿದರೂ ತೆಗೆದು ತೆಗೆದು ಕೊಡುತ್ತಿದ್ದರು. ಅವರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ,  ನನಗೆ ಎಲ್ಲೂ ಯಾವುದೇ ತೊಂದರೆ ಆಗದಂತೆ ಅವರ ಜೀವಿತದ ಕೊನೆಯವರೆಗೂ ನೋಡಿಕೊಂಡಿದ್ದರು. ಅನೇಕ ಬಾರಿ ಸ್ವತ: ಕಲಿಯುವಿಕೆಗೇ ಅವಕಾಶ ಕೊಟ್ಟಿದ್ದರು. ಆಗಾಗ ಹೇಳುತ್ತಿದ್ದೆ, ನನ್ನ ಜೊತೆಗೆ ಇದ್ದವರಿಗೆ ಈಗ ಸಂಬಳ ಇಷ್ಟಂತೆ.. ಇಷ್ಟಂತೆ ಎಂದು. (ಈಗ ನನ್ನ ಜೊತೆ ಸೇರಿದವರಿಗೆ 1.5 ಲಕ್ಷ ಸಂಬಳವಂತೆ). ಅಪ್ಪ ಹೇಳಿದ್ದು, ಅಷ್ಟು ಸಂಬಳದಲ್ಲಿ  ಖರ್ಚಾಗಿ ಎಷ್ಟು ಉಳಿಯುತ್ತದೆಯಂತೆ..? ಅದು ನಾನು ನಿನಗೆ ಕೊಡುತ್ತೇನೆ ಎನ್ನುತ್ತಿದ್ದರು. ಅದನ್ನು ಮಾಡುತ್ತಿದ್ದರು ಕೂಡಾ. ಈಗ ಅನಿಸುತ್ತದೆ, ಅವರು ಕೃಷಿಯಿಂದ ಅದನ್ನೆಲ್ಲಾ ಹೇಗೆ ನಿಭಾಯಿಸುತ್ತಿದ್ದರು...?. ಭೂಮಿಗಾಗಿ ಹಾಗೂ ಭೂಮಿ ಉಳಿಯಲು ಎನ್ನುವುದು  ಈಗೀಗ ಅರ್ಥವಾಯಿತು. ಆ ಜವಾಬ್ದಾರಿ ಈಗ ಹೆಚ್ಚಾಗಿದೆ ಹಾಗೂ ಅವರಂತೆಯೇ ಮುಂದೆ ದಾಟಿಸಬೇಕು ಎಂಬ ಅರಿವು ಹೆಚ್ಚಾಯಿತು.

ಆದರೆ ಈ ನಡುವೆ ಕಾಲೇಜು  ದಿನಗಳಲ್ಲೇ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿಚಯವಾಗಿತ್ತು. ಹೀಗಾಗಿ ಸಾಮಾಜಿಕ ಕೆಲಸ ಕಾರ್ಯಗಳತ್ತ ಮನಸ್ಸಾಗಿತ್ತು. ಅಂದು ಸಾಮಾಜಿಕವಾಗಿ ನನ್ನನ್ನು ತೆರೆದುಕೊಳ್ಳಲು ಅವಕಾಶ ನೀಡಿತ್ತು. ಅದಕ್ಕೂ ಮುನ್ನ ಬರೆಯುವ ಹವ್ಯಾಸಕ್ಕೆ ವೇದಿಕೆ ನೀಡಿದ್ದು ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆ. ಬಾಳಿಲ ಶಾಲೆ ನನ್ನನ್ನು ಬರೆಯುವ ಹವ್ಯಾಸಕ್ಕೆ ತೆರೆಸಿ ಇಂದಿಗೂ ಗಟ್ಟಿ ಮಾಡಿಸಿದ್ದಕ್ಕೆ ಋಣಿಯಾಗಿದ್ದೇನೆ. ಸಾಮಾಜಿಕವಾಗಿ ಹೆಸರು ಮಾಡುವುದಕ್ಕೆ ಅವಕಾಶ ಮಾಡಿಸಿದ ಹಾಗೂ ಬೆಳೆಸಿದ ಸಂಘಕ್ಕೆ ನಾನು ಋಣಿ. 

ಬರೆಯುವ ಹವ್ಯಾಸ ನನಗೆ ಇಂದಿಗೂ ಮನಸ್ಸಿಗೆ ಖುಷಿ ನೀಡಿದೆ. ಸಾಮಾಜಿಕ ಕೆಲಸಗಳಿಗೆ ಈಗ ಸ್ವಲ್ಪ ವಿರಾಮ ನೀಡುತ್ತಿದ್ದೇನೆ. ಇಷ್ಟೂ ಸಮಯ ಅಪ್ಪ ದುಡಿದ ಹಣವನ್ನು ಸಮಾಜದ ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವಾಗ  ವಿಷಾದ ಮೂಡಿಸುತ್ತದೆ. ನನ್ನ ದುಡಿಮೆಯ ಹಣವೂ  ಸಮಾಜಕ್ಕಾಗಿ ವ್ಯಯ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಈಚೆಗೆ ಒಂದು ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡುತ್ತಾ ಒಬ್ಬರು ಹೇಳಿದರು," ಅವನು ಬದಲಾಗಿದ್ದಾನೆ, ಈಗ ಮೊದಲಿನ ಹಾಗಿಲ್ಲ ಎಂದರು.ಅದಕ್ಕಾಗಿ ನನಗೆ ಬೇಸರವಿಲ್ಲ. ಅಪ್ಪ ದುಡಿದ ಹಣದ ಭಾಗವನ್ನು ಸಮಾಜದ ಕೆಲವು ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ಇದೆ. ಅಪ್ಪನಿಗೂ ಬೇಸರ ಇರಲಿಲ್ಲ. ಅಜ್ಜನ ಹಾಗೆ ಪುಳ್ಳಿಯೂ ಎನ್ನುತ್ತಿದ್ದರು. ಆದರೆ ಆಗಾಗ ಎಚ್ಚರಿಸುತ್ತಿದ್ದರು. ಅಜ್ಜನ ಕೊನೆಯ ಕಾಲದ ಪರಿಸ್ಥಿತಿಗಳನ್ನು. ಹೀಗಾಗಿ ಆ ಸಭೆಯಲ್ಲಿ ಪ್ರಸ್ತಾಪವಾದ ನನ್ನ ಹೆಸರು ಅಪ್ಪ ಹೇಳಿದ ಸಂಗತಿಗಳು ತಾಳೆಯಾಯಿತು. ಈ ಕಾರಣದಿಂದಲೇ ಸಾಮಾಜಿಕ ಕೆಲಸಗಳಿಗೆ ವಿರಾಮ ನೀಡುತ್ತಿದ್ದೇನೆ.

ಆ ದಿನಗಳಲ್ಲಿ  ಸಾಮಾಜಿಕ ಕೆಲಸಗಳ ಕಡೆಗೆ ಹೆಜ್ಜೆ ಹೇಗಾಯಿತು ಹೇಳುತ್ತೇನೆ, ನನ್ನನ್ನುಅಲ್ಲಿಗೆ ಎಳೆದವರು ಯಾರು ?, ಏನೇನು ಆಗಿತ್ತು, ಏನೇನು ಮಾಡಿದೆ, ನನ್ನನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿದ್ದು ಹೇಗೆ ? ಯಾರು?  ಹೇಳುತ್ತೇನೆ. 




04 ನವೆಂಬರ್ 2018

ಹಳ್ಳಿಯಲ್ಲಿದೆ "ಭಾರತ", ನೋಡಲು ಒಳಕಣ್ಣು ತೆರೆಯಿರಿ....!


ಸಮಚಿತ್ತ , ಸಮಾಧಾನದಿಂದ ಭಾರತವನ್ನು  ಅವರು ವಿವರಿಸುತ್ತಿದ್ದರು. ಭಾರತದ ಕಲ್ಪನೆಯನ್ನು  ಹೇಳುತ್ತಿದ್ದರು.
 ಪ್ರತೀ ಮಾತುಗಳ ಹಿಂದೆ ಭರವಸೆ ಕಾಣುತ್ತಿತ್ತು, ವಿಶ್ವಾಸ ಇತ್ತು.  ತದೇಕಚಿತ್ತದಿಂದ ಅಷ್ಟೂ ಜನರು ಕೇಳುತ್ತಿದ್ದವರು.
ಹೌದು, ಅವರು ಹಾಗೆ ಮಾತನಾಡುವುದರ ಹಿಂದೆ ಅನುಭವ ಇದೆ. ಇಡೀ ಭಾರತ ಸುತ್ತಾಡಿದ ಅನುಭವ ಇದೆ. ಹಿಂದೆ ಶಂಕರಾಚಾರ್ಯರು ಭಾರತ ಪರಿಕ್ರಮ ಮಾಡಿದ್ದರು ಎಂದು ಓದಿದ್ದೆ, ಆದರೆ ಇಂದು ಅಂತಹದ್ದೇ ಸಂತರ ಮುಂದೆ ಇದ್ದೇವೆ.  ಅವರು ಸೀತಾರಾಮ ಕೆದಿಲಾಯ.



ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಸೇವೆ ಮಾಡುತ್ತಿದ್ದ ಹಾಗೂ ಈಗಲೂ ಸೇವೆ ಮಾಡುತ್ತಿರುವ ಸೀತಾರಾಮ ಕೆದಿಲಾಯ ಭಾರತ ಪರಿಕ್ರಮ ಯಾತ್ರೆ ಕೈಗೊಂಡರು. ಪಾದಯಾತ್ರೆಯ ಮೂಲಕ ಭಾರತವನ್ನು ಸುತ್ತಿದ ಸೀತಾರಾಮ ಕೆದಿಲಾಯರು ಹಳ್ಳಿಗಳ ಸ್ಥಿತಿಗತಿಯ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ. ಅವರೇ ಮಾತನಾಡಬೇಕು. ಈಗ ಅವರದ್ದು ಭಾಷಣ ಅಲ್ಲ, ಉಪದೇಶವೂ ಅಲ್ಲ. ಅನುಭವದ ಮಾತುಗಳು. ಆ ಮಾತುಗಳು ನಮಗೆ ಸ್ಫೂರ್ತಿಯಾಗಬೇಕು.

ಇತ್ತೀಚೆಗೆ ಪುತ್ತೂರಿನಲ್ಲಿ ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು. ಮಾತು ಆರಂಭಿಸಿದ್ದೇ, ಎದುರಿನ ಆತ್ಮಕ್ಕೆ ಶಿರಬಾಗಿ. ಇಡೀ ದೇಶದ ಸುತ್ತಿದ ವ್ಯಕ್ತಿ  ಮಾತು ಆರಂಭಿಸಿದ್ದು  ಹೀಗೆ " ಹಿರಿಯರಾದ ಡಾ.ಗೌರಿ ಪೈ ಅವರು ವೇದಿಕೆಗೆ ಬಂದು ಗೌರವಿಸಿದರು, ನಾನೇ ಅಲ್ಲಿಗೆ ಬರಬೇಕಾಗಿತ್ತು, ವೇದಿಕೆ ಬರುವ ಕಷ್ಟ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ.....". ಆತ್ಮಭಾವ ಹೀಗಿರಬೇಕು ಎಂಬ ಸಂದೇಶವನ್ನೇ ಆರಂಭದಲ್ಲಿ ನೀಡುತ್ತಾ ಗ್ರಾಮ ಭಾರತದ ಬಗ್ಗೆ ಸುಮಾರು 2 ಗಂಟೆಗಳ ಕಾಲ ಮಾತನಾಡಿದರು.
ದೇಶದ ಮಾಧ್ಯಮಗಳು ಪಾದಯಾತ್ರೆಯ ಸಂದರ್ಭ ಸಿಕ್ಕಾಗ ಅನೇಕ ಬಾರಿ ಅವರು ಹೇಳಿದ್ದರಂತೆ, " ಈ ದೇಶದಲ್ಲಿ  ಶೇಕಡಾ 95 ರಷ್ಟು ಒಳ್ಳೆಯ ಅಂಶಗಳು ಇವೆ, ಕೇವಲ ಶೇ.5 ರಷ್ಟು ಕೆಟ್ಟ ಅಂಶಗಳು ಇವೆ. ಇಂದು ಈ ಶೇ.5 ರಷ್ಟು ಅಂಶಗಳೇ ಪ್ರತಿನಿಧಿಸುವಂತಾಗಲು ಮಾಧ್ಯಮಗಳೇ ಕಾರಣವಾಗುತ್ತಿವೆ. ಪರಿಸರದಲ್ಲಿ ನೊಣ ಹಾಗೂ ಜೇನು ನೊಣ ಇದೆ.  ಮಾಧ್ಯಮದಗಳು ಮೂಗು ಜೇನುನೊಣದ್ದಾಗಬೇಕು. ದೇಶಕ್ಕೆ ಒಳ್ಳೆಯದನ್ನೇ ನೀಡಬೇಕು " ಎನ್ನುತ್ತಿದ್ದರಂತೆ.

ಇದಕ್ಕೆ ಪೂರಕವಾಗಿ ಹೇಳಿದ ಕೆದಿಲಾಯರು, 5 ವರ್ಷಗಳ ಕಾಲ ಇಡೀ ದೇಶ ಸುತ್ತಾಡಿದೆ. ಒಳ್ಳೆಯದನ್ನು ನೋಡುತ್ತಾ, ಕೇಳುತ್ತಾ, ಮಾತನಾಡುತ್ತಾ ದೇಶದ ಹಳ್ಳಿಗಳಿಗೆ ತೆರಳಿದೆ. ಇದರ ಪರಿಣಾಮ 5 ವರ್ಷಗಳ ಕಾಲ ಒಂದೇ ಒಂದು ದಿನವೂ ದೇಹಕ್ಕೆ ಗ್ಯಾರೇಜ್ ಬೇಕಾಗಿರಲಿಲ್ಲ..." ಇದು ಒಳ್ಳೆಯದರ ಪರಿಣಾಮ ಎಂದರು.

ಭಾರತದ ಆತ್ಮ ಹಳ್ಳಿಯಲ್ಲಿದೆ ನಿಜ.ಇಂದಿಗೂ ಭಾರತದ ಹಳ್ಳಿಗಳಲ್ಲಿ ಜೀವಂತಿಕೆ ಇದೆ. ನೆಮ್ಮದಿ ಇದೆ. ಪರಸ್ಪರ ಸಹಕಾರ, ಸಹಬಾಳ್ವೆ ಇದೆ. ಅನೇಕ ಹಳ್ಳಿಗಳಲ್ಲಿ ನ್ಯಾಯಾಲಯವೇ ಬೇಕಾಗಿಲ್ಲ. ಅಂದರೆ ಜಗಳವೇ ಇಲ್ಲ. ಅದಕ್ಕಿಂತಲೂ ಮಿಗಿಲಾಗಿ ಪ್ರೀತಿ ಇದೆ. ಸಮೃದ್ಧ ಕೃಷಿ ಇದೆ ಎನ್ನುತ್ತಾ ವಿವಿಧ ಉದಾಹರಣೆ ನೀಡಿದರು.

ಭಾರತದ ನಗರಗಳು ಇಂಡಿಯಾ ಆಗಿವೆ. ಇದಕ್ಕೆ ಹೆಚ್ಚು ಕಾಲ ಉಳಿಗಾಲವಿಲ್ಲ. ಮತ್ತೆ ನಿಜವಾದ ಭಾರತ ಕಾಣಲಿದೆ. ಇಂಡಿಯಾ ದೂರವಾಗುತ್ತಿದೆ. ಆಂಗ್ಲರು ಕೊಟ್ಟ ಇಂಡಿಯಾದ ಪರಿಣಾಮವೇ ಇಂದು ಕುಟುಂಬ ಪದ್ಧತಿ ದೂರವಾಗುತ್ತಿದೆ, ಮನುಷ್ಯರ ನಡುವೆ ಪ್ರೀತಿ ದೂರವಾಗುತ್ತದೆ. ಸಹಕಾರ, ಸಹಬಾಳ್ವೆ ಇಲ್ಲವೇ ಇಲ್ಲವಾಗಿದೆ. ಆದರೆ ಹಳ್ಳಿಯಲ್ಲಿ ಇದೆಲ್ಲಾ ಭಿನ್ನವಾಗಿದೆ. ಇಂದು ನಗರದ ಪ್ರಭಾರ ಅಂದರೆ ಇಂಡಿಯಾದ ಪ್ರಭಾವ ದೂರವಾಗಿ ಭಾರತದ ಪ್ರಭಾವ ಹೆಚ್ಚಾಗಲು ಹೆಜ್ಜೆ ಇಡಲೇಬೇಕು ಎನ್ನುವ ಸೀತಾರಾಮ ಕೆದಿಲಾಯರು ಪ್ರತೀ ಹಳ್ಳಿಗೆ , ನಗರಕ್ಕೆ ಇಂದು ಸ್ಫೂರ್ತಿ ನೀಡುತ್ತಿದ್ದಾರೆ. ಸತ್ಯ ದರ್ಶನ ಮಾಡಿಸುತ್ತಿದ್ದಾರೆ. ಎಲ್ಲಾದರೂ ಅವರ ಮಾತುಗಳನ್ನು  ಕೇಳಲೇಬೇಕು. ಒಂದಲ್ಲ ಹತ್ತು ಬಾರಿ. ಏಕೆಂದರೆ ಭವಿಷ್ಯದ "ಭಾರತ"ಕ್ಕಾಗಿ.



03 ಜುಲೈ 2018

ಘಟನೆ ನಾಲ್ಕು ........ ಬದುಕಿಗೆ ನೂರು ಪಾಠ.....!!




ಘಟನೆ 1:
ಅವರಿಗೆ ಅಂದು ರಾಜ್ಯದಲ್ಲೇ ಅತ್ಯುನ್ನುತ ಹುದ್ದೆ ದಕ್ಕಿತ್ತು. ಇಡೀ ರಾಜ್ಯದಲ್ಲಿ ಅಂತಹ ಅವಕಾಶ ಸಿಕ್ಕಿದ್ದು ಕೇವಲ ಇಬ್ಬರಿಗೆ. ಅದರಲ್ಲಿ ಇವರೂ ಒಬ್ಬರು.  ಅದಾಗಿ ಸರಿಯಾಗಿ 4 ವರ್ಷ ಕಳೆದಿತ್ತು. ಅವರದು ಕೃಷಿ ಕುಟುಂಬ. ಅವರ ತಂದೆಗೆ ಅನಾರೋಗ್ಯ ಕಾಡಿತು. ಕೃಷಿ ನೋಡಲು, ಕೆಲಸ ಮಾಡಿಸಲು ಜನರಲಿಲ್ಲ.  ಇಬ್ಬರು ಸಹೋದರರಲ್ಲಿ ಯಾರೂ ಮನೆ ನಡೆಸಲು ಒಪ್ಪಲಿಲ್ಲ. ತಂದೆಯ ಬಳಿಗೆ ಬರಲು ಸಿದ್ಧರಿರಲಿಲ್ಲ. ಒಂದು ವಾರ ಕಾದರು. ಆ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದರು. ಕೃಷಿ ನಡೆಸಿದರು. ತಂದೆ-ತಾಯಿಯ ಅಂತ್ಯ ಕಾಲದವರೆಗೂ ಚೆನ್ನಾಗಿ ನೋಡಿಕೊಂಡರು. ಸಮೃದ್ಧ ಕೃಷಿ ನಡೆಸಿದರು. ಇಂದಿಗೂ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯ ಅದೇ ಸ್ಥಿತಿ ಇದೆ.
ಈಗ ಈ ತಂದೆ ವೃದ್ಧರಾಗುತ್ತಿದ್ದಾರೆ. ಮಕ್ಕಳು ಸದ್ಯ ನಗರದಲ್ಲಿದ್ದಾರೆ. ಈ ಮಕ್ಕಳಿಗೆ ತಮ್ಮ ತಂದೆಯ ಕತೆ ತಿಳಿದಿದೆ. ಸಾಧನೆ ತಿಳಿಸಿದೆ. ಈಗ ಆದರ್ಶವಾಗಬೇಕಾದ್ದು ಯಾವುದು? ಎಂಬ ಬಹುದೊಡ್ಡ ಪ್ರಶ್ನೆ ಈಗ ಮುಂದಿದೆ....!. ಸಾಮಾಜಿಕ ಪರಿಸ್ಥಿತಿ ಈಗ ಕಣ್ಣಮುಂದೆ ಇದೆ.

ಘಟನೆ 2:
ಗ್ರಾಮೀಣ ಭಾಗವಾದರೂ ಎಲ್ಲಾ ಸೌಲಭ್ಯ ಹೊಂದಿದ ಕೃಷಿ ಭೂಮಿ ಇದೆ. ಮನೆಯಲ್ಲೇ ಎಲ್ಲಾ ವ್ಯವಸ್ಥೆ ಮಾಡಿಸಿದ್ದಾರೆ. ಮಕ್ಕಳಿಗೆ ಯಾವುದೂ ಕಡಿಮೆಯಾಗಬಾರದು ಎಂದು ಸಣ್ಣವರಿಂದಲೇ ಬೆಳೆಸಿದ್ದಾರೆ. ಮಕ್ಕಳು ಕಲಿತು ದೊಡ್ಡವರಾಗಿ ಹೆಸರಿನಿಂದ ಮುಂದೆ ಡಿಗ್ರಿ ಸೇರಿಸಿಕೊಂಡು ನಗರ ಸೇರಿದರು. ದೂರವಾದರು.
ಈಗ ತಂದೆ ಹಾರ್ಟ್ ಪೇಶೇಂಟ್ , ಶುಗರ್ ಇದೆ. ಸರಿಯಾಗಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ತಾಯಿಗೂ ಅನಾರೋಗ್ಯ ಇದೆ. ಇತ್ತೀಚೆಗೆ ತಾಯಿಗೆ ತನ್ನ ತಾಯಿಯ ವೈಕುಂಠ ಸಮಾರಾಧನೆಗೆ ಹೋಗಬೇಕಿತ್ತು. ಹಾಗೋ ಹೀಗೋ ಪೇಟೆಗೆ ಬಂದರು. ಯಾರದ್ದೋ ಕಾರಲ್ಲಿ ಏರಿದರು. ಮಕ್ಕಳ ಬಗ್ಗೆ ಹೇಳುತ್ತಾ.... ಅವನು ದೊಡ್ಡ ಕೆಲಸದಲ್ಲಿ ಇದ್ದಾನೆ ಎಂದೂ ಹೇಳುತ್ತಿದ್ದರು. ಮನೆಯ ಸುದ್ದಿ ಹೇಳುತ್ತಾ, ಸಂಜೆಯವರೆಗೆ "ಅವರನ್ನು" ನೋಡಲು ಪಕ್ಕದ ಮನೆಗೆ ಹೇಳಿದ್ದೇನೆ ಎಂದೂ ಹೇಳಿಕೊಂಡರು. ಆಗಾಗ ಏನೋ  ತನ್ನ ಸಂಕಟ ಹೇಳಿಕೊಂಡರು, ಮಕ್ಕಳಿದ್ದರೂ ಯಾರದೋ ಬೇರೆಯವರ  ಜೊತೆ....... !

ಘಟನೆ 3:
ಅದು ಕೃಷಿ ಕುಟುಂಬ. ಆತ ಉನ್ನತ ವ್ಯಾಸಾಂಗ ಮಾಡಿ ತಂದೆಯ ಜೊತೆಗೆ ಕೃಷಿಗೆ ಇಳಿದ. ಸಾಕಷ್ಟು ಭೂಮಿ, ಕೃಷಿಯೂ ಇತ್ತು. ಕೃಷಿಯಲ್ಲಿ ಆಧುನಿಕತೆಗೆ ಒತ್ತು ನೀಡಿದ. ಅದೃಷ್ಠವಶಾತ್  ವಿದ್ಯಾವಂತ ಹುಡುಗಿಯೊಂದಿಗೆ ಮದುವೆಯೂ ಆಯ್ತು. ಇಬ್ಬರಿಗೂ ಒಪ್ಪಿಗೆ ಇತ್ತು. ಎರಡೂ ಮನೆಯವರೂ ಈ ಬಗ್ಗೆ ಸಾಕಷ್ಟು ಮಾತುಕತೆ ಮಾಡಿಯೂ ಆಗಿತ್ತು. ಸ್ವತ: ಹುಡುಗಿಯ ತಂದೆ, ತಾಯಿ ಹಾಗೂ ಹುಡುಗಿಯ ಜೊತೆ ಮಾತುಕತೆ ನಡೆಸಿ,  ಕೃಷಿಯೇ ನನ್ನ ಬದುಕು ಎಂದೂ ಆ ಹುಡುಗ ಹೇಳಿದ. ಎಲ್ಲವೂ ಓಕೆ ಆದ ಬಳಿಕ ಮದುವೆಯೂ ಆಗಿತ್ತು.
ಈಗ ಎಲ್ಲಾ ಕಾರ್ಯಕ್ರಮಕ್ಕೆ ಹೋದಾಗ, ಜನರೆಲ್ಲಾ ಕೇಳುತ್ತಿದ್ದ ಪ್ರಶ್ನೆ..." ಇಷ್ಟು ಓದಿ ನೀನ್ಯಾಕೆ ಹಳ್ಳಿಗೆ ಬಂದೆ..." , " ಹಳ್ಳಿಯಾ..." , "ಕೃಷಿ ಕಷ್ಟ ಆಗಲ್ವಾ..." , " ಇನ್ನು ಯಾರಿಗೆ ಈ ಕೃಷಿ...".....!.  ಹೀಗೇ ಹತ್ತಾರು ಪ್ರಶ್ನೆಯ ನಂತರವೂ ಆ ಹುಡುಗಿ ಧೈರ್ಯಗೆಡಲಿಲ್ಲ. ತಾನು ನಂಬಿ ಬಂದ ಕೃಷಿಯನ್ನೇ , ಕೃಷಿಕನನ್ನೇ ನೆಚ್ಚಿಕೊಂಡಳು.

ಘಟನೆ 4:
ಆ ಕುಟುಂಬದ ಏಕೈಕ ಗಂಡು ಆತ. ಸಾಕಷ್ಟು ಓದಿದ್ದಾನೆ. ಸದ್ಯ ನಗರದಲ್ಲಿ ಕೈತುಂಬಾ ಸಂಬಳವೂ ಪಡೆಯುತ್ತಾನೆ. ಇತ್ತ ಹತ್ತಾರು ಎಕರೆ ಕೃಷಿ ಭೂಮಿ ಇದೆ. ಮನೆಯಲ್ಲಿ ಎಲ್ಲಾ ಸೌಲಭ್ಯ ಇದೆ. ಎಲ್ಲಾ ನೆಟ್ವರ್ಕ್ ಲಭ್ಯವಿದೆ. ಇಂಟರ್ನೆಟ್ ಸಹಿತ ಕೇಬಲ್ ಟಿವಿ ವ್ಯವಸ್ಥೆಯೂ ಇದೆ. ಕೃಷಿ ವರಮಾನವು ಆತ ಪಡೆಯುವ ಸಂಬಳದಷ್ಟೇ ಇದೆ. ಈಚೆಗೆ ಆ ಹುಡುಗನಿಗೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಮನೆಯವರು ಮುಂದಾದಾಗ ಬಂದ ಪ್ರಶ್ನೆ " ಆತ ಕೆಲ ವರ್ಷದ ನಂತರ ಕೃಷಿಗೆ ಬರುತ್ತಾನಾ " . ಸಹಜವಾಗಿಯೇ ಬಂದ ಉತ್ತರ "ಹೌದು, ಆತ ಒಬ್ಬನೇ ಇರುವುದು , ಇಲ್ಲೂ ಅಷ್ಟೇ ಆದಾಯ ಇದೆ.". ಅಲ್ಲಿಗೇ ಆ ಮದುವೆ ಪ್ರಸ್ತಾಪ ಮುರಿದು ಬಿತ್ತು.


                                                  ********

ಇದಿಷ್ಟು ಇಂದಿನ ವಾಸ್ತವ ಸಂಗತಿ.
ಈಗ ಇರುವ ಪ್ರಶ್ನೆ, ಪಾಠ ಮಾಡಬೇಕಿರುವುದು  ಯಾರಿಗೆ ?. ಎರಡು ಸಂಗತಿಗಳು ಇಂದು ಪ್ರಮುಖವಾಗಿ ಚರ್ಚೆಯಾಗಬೇಕು. ಬದುಕಿಗೆ ಶಿಕ್ಷಣ ನೀಡುವ ಒಂದು ಸರಿಯಾದ ಪಾಠ ಬೇಕು. ಅದು ಯಾರಿಗೆ ? ಈ ಸಮಾಜಕ್ಕಾ ? ಚಿಕ್ಕ ಮಕ್ಕಳಿಗಾ ?.
ಕೃಷಿ ಎಂದಾಗ, ಹಳ್ಳಿ ಎಂದಾಗ, ಗ್ರಾಮೀಣ ಭಾರತ ಎಂದಾಗ ಮಹಿಳೆಯರಲ್ಲಿ, ಹೆತ್ತವರಲ್ಲಿ ಇರುವ ಮನಸ್ಥಿತಿ ಏಕೆ ಅಷ್ಟೊಂದು ಕೀಳಾಗಿದೆ, ಏಕೆ ಬದಲಾಗಲಿಲ್ಲ ?  ಎಲ್ಲವೂ ಈಗ ಯಾಂತ್ರೀಕೃತ ಆಗಿರುವಾಗ ಕೆಲಸವೂ ಕಷ್ಟವೇನಿಲ್ಲ. ನನ್ನ ಮಕ್ಕಳು ಚೆನ್ನಾಗಿರಬೇಕು ಎಂಬ ಕಲ್ಪನೆ, ಯೋಚನೆ ಎಂದೂ , ಯಾರದ್ದೂ ತಪ್ಪಲ್ಲ. ಆದರೆ ಮೈಮುರಿಯದೇ ತಿನ್ನಬೇಕು ಎಂಬ ಮನಸ್ಥಿತಿ ದೂರವಾಗಲು ಪಾಠ ಬೇಕಿರುವುದು ಯಾರಿಗೆ ಎಂಬುದು ಪ್ರಶ್ನೆ. ಯಾವುದೋ ಒಬ್ಬ ಮಗಳು ಕೃಷಿಯ ಕಡೆಗೆ ಆಸಕ್ತರಾದರೆ ಇನ್ನೊಂದು ಮನೆಯವನಿಗೆ ಏಕೆ ಚಿಂತೆ ? ಎಂಬ ಬಗ್ಗೆಯೂ ಪ್ರಶ್ನೆಯಾಗಬೇಕು.
ಈ ಭೂಮಿ ಹಸಿರಾಗಿಯೇ ಇರಬೇಕಾದರೆ ಈಗಲೇ ಚಿಂತನೆ ನಡೆಯಬೇಕು. ಇಲ್ಲದೇ ಇದ್ದಲ್ಲಿ ಇಲ್ಲಿ ವೃದ್ಧಾಶ್ರಗಳೂ ಕಾಣಸಿಗದು....!

13 ಏಪ್ರಿಲ್ 2018

ಈ ಸಂಘರ್ಷ ಭವಿಷ್ಯದ ಅಪಾಯ...




                                                                 ( ಅಂತರ್ಜಾಲ ಚಿತ್ರ )

ಇತ್ತೀಚೆಗೆ ಯಾಕೋ ಭಯ ಶುರುವಾಗಿದೆ. ಹೀಗಿರಲಿಲ್ಲ ಈ ವ್ಯವಸ್ಥೆ. ಜಾತಿ ಮೂಲಕ ಗುರುತಿಸದೇ ಇದ್ದರೂ ಅದರೊಳಗೇ ತಂದು ದೂಡುವ ಸ್ಥಿತಿ ಬಂದಿದೆ. ಯಾವುದೋ ಒಂದು ಆದರ್ಶ, ಸಿದ್ಧಾಂತ , ತತ್ತ್ವ ನಂಬಿ ಬಹುದೂರ ಬಂದ ಬಳಿಕ ಈ ಆತಂಕ ಶುರುವಾಗುತ್ತಿದೆ. ಅದೂ ಈ ಚುನಾವಣೆಗೇ ಮುಗಿದರೆ ಅಡ್ಡಿ ಇಲ್ಲ, ಅಲ್ಲದೇ ಇದ್ದರೆ ಭವಿಷ್ಯದಲ್ಲಿ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷದ ಭಯ ಕಾಡಿದೆ.
ಕಳೆದ ಅನೇಕ ವರ್ಷಗಳಿಂದ ಚುನಾವಣೆಯ ನೋಡುವ, ಮತ ಚಲಾವಣೆ ಮಾಡುವ ಅವಕಾಶ ಸಿಕ್ಕಿದೆ. ಆದರೆ ಈ ಬಾರಿಯ ಚುನಾವಣೆ ಹೊಸತೊಂದು ಸಂಘರ್ಷದ ವಾತಾವರಣವನ್ನು ಸದ್ದು ಗದ್ದಲವಿಲ್ಲದೆ  ತೆರೆದಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಎಂದು ಭಾವಿಸಲೇಬೇಕಾಗುತ್ತದೆ. ಇಂತಹ ಸಂಘರ್ಷ ಇಲ್ಲವೆಂದು ಮಾತಿನ ನಡುವೆ ಹೇಳಿಕೊಳ್ಳಬಹುದು. ಆದರೆ ಅಂತರ್ಯದಲ್ಲಿ ಚರ್ಚೆ ಶುರುವಾಗಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಯಲ್ಲಿ ಧರ್ಮ-ಮತ ಸಂಘರ್ಷ ಹಾಗೂ ಇದೇ ಸೂಕ್ಷ್ಮ ಸಂಗತಿಯಾಗಿ ಚುನಾವಣೆಯಲ್ಲಿ ಕಂಡುಬಂದು ಮತ ಗಳಿಕೆಯ ದಾರಿಯೂ ಆಗಿದ್ದರೆ ಈ ಬಾರಿ ಜಾತಿಯೂ ಸೇರಿಕೊಂಡಿದೆ. ಇತ್ತೀಚೆಗಂತೂ ಇದು ವಿಪರೀತವಾಗುತ್ತಿದೆ. ಭವಿಷ್ಯದಲ್ಲಿ ಈ ರಾಜಕೀಯ ವ್ಯವಸ್ಥೆ ಧರ್ಮ ಸಂಘರ್ಷದ ಜೊತೆಗೆ ಜಾತಿ ಸಂಘರ್ಷವನ್ನೂ ತಂದಿಡುವುದು ನಿಶ್ಚಿತ. ಇದ್ದಂತಹ ಕೆಲವು ಆಶಾಕಿರಣಗಳು, ಸಮಾಜವನ್ನು ಸುಧಾರಣೆ ಮಾಡುವ ಬೆಳ್ಳಿ ರೇಖೆಗಳೂ ಮಸುಕಾಗುತ್ತದೆ. ಎಲ್ಲೇ ಸುತ್ತಾಡಿದರೂ ಅದು ಕೊನೆಗೆ ಬಂದು ನಿಲ್ಲುವುದು , ನಿಲ್ಲಿಸುವುದು  ಅದೇ ಜಾತಿ ವ್ಯವಸ್ಥೆ ಸುತ್ತ. ಹೀಗಾಗಿ ಈ ಜಾತಿ ಸಂಘರ್ಷ  ಭವಿಷ್ಯದಲ್ಲಿ ಸಣ್ಣ ಸಣ್ಣ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಬಂದಬಹುದು. ಇಂತಹ ಸನ್ನಿವೇಶ ರಾಜ್ಯದ ಬೇರೆ ಕಡೆಗಳಲ್ಲಿ ಕಂಡುಬಂದಿತ್ತು. ಆದರೆ ಇದೀಗ ಕರಾವಳಿ ಜಿಲ್ಲೆಯಲ್ಲೂ ಕಾಣುತ್ತಿದೆ.

ಕೆಲವು ಸಮಯಗಳ ಹಿಂದೆ ರಾಜ್ಯದಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪರ-ವಿರೋಧ ಅಭಿಪ್ರಾಯ ಬಂದಾಗ  ಧರ್ಮವನ್ನು ವಿಭಜನೆ ಮಾಡಲಾಗುತ್ತಿದೆ, ಈ ಸರಕಾರ ಹಿಂದೂ ವಿರೋಧಿ ಎಂಬೆಲ್ಲಾ ಅಭಿಪ್ರಾಯ ಬಂದವು. ಈ ಅಭಿಪ್ರಾಯ ಸತ್ಯವಾಗಿಯೂ ಕಂಡಿತ್ತು. ಹಾಗೆ ನೋಡಿದರೆ ಧರ್ಮ, ಮತ ಸಂಘರ್ಷ ಈ ಹಿಂದೆಯೂ ಇತ್ತು. ಆದರೆ ಈಗ ಜಾತಿ ಸಂಘರ್ಷದ ಜೊತೆಗೆ ಜಾತಿಯ ಒಳಗೆ ಸಂಘರ್ಷ ಉಂಟು ಮಾಡಿರುವುದು  ಈ ರಾಜಕೀಯ ವ್ಯವಸ್ಥೆ.  ಇಡೀ ರಾಜ್ಯದಲ್ಲಿಯೇ ಜಾತಿ ರಾಜಕಾರಣ ಹೆಚ್ಚುತ್ತಲೇ ಇದೆ. ಒಂದು ಧರ್ಮ ಅದರೊಳಗೆ ಇರುವ ಜಾತಿ ವ್ಯವಸ್ಥೆ ಹೊಗಲಾಡಿಸಬೇಕು ಎಂದು ಒಂದು ಕಡೆ ಜಾಗೃತಿ ಮೂಡಿಸುತ್ತಿದ್ದರೆ ಈ ಕಡೆಗೆ ಅದಕ್ಕಿಂತ 10 ಪಟ್ಟು ವೇಗದಲ್ಲಿ ಜಾತಿ ಆಧಾರಿತ ಟಿಕೆಟ್ ಕೊಡಲಾಗುತ್ತಿದೆ.

ಹೀಗಾಗಿ ಒಂದು ಸಿದ್ದಾಂತದ ಮೂಲಕ ರಾಜಕೀಯ ವ್ಯವಸ್ಥೆ ಶುದ್ದೀಕರಣವಾಗುತ್ತದೆ ಎಂಬ ಭಾವ ಇತ್ತು. ಅದೀಗ ಮರೆಯಾಗುತ್ತಿದೆ.  ರಾಜಕೀಯ ಕ್ಷೇತ್ರ ಏಕೆ  ಶುದ್ದೀಕರಣವಾಗಬೇಕು ಎಂದರೆ , ಮುಂದೆ ಆಳುವ ಮಂದಿ ಅದೇ ಜಾತಿ ವ್ಯವಸ್ಥೆಯಿಂದ ದೂರವಾಗಲೇಬೇಕಾದರೆ ಬಿತ್ತುವ  ಬೀಜವೇ ಶುದ್ದವಾಗಬೇಡವೇ ? ಧರ್ಮ - ಜಾತಿಯ ವಿಷ ಬೀಜವೇ ಬಿತ್ತಿದರೆ ಫಲವೂ ಅದೇ ಸಿಗುವುದು ಖಚಿತ. ಹೀಗಾಗಿ ರಾಜಕೀಯ ಕ್ಷೇತ್ರದ ಶುದ್ದೀಕರಣದ ಹಂತದಲ್ಲಿ ಗೆಲುವೇ ಮುಖ್ಯವೆಂದು ಮತ್ತೆ ಜಾತಿಯ ನಡುವೆ ಬಿದ್ದರೆ ಈ ಸಮಾಜದ ಉಳಿವು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಆತಂಕ ಇದೆ. ಈ ಸಂಘರ್ಷ , ಈ ಕಂದಕ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ.

ಕೆಲವು ಸಮಯದ ಹಿಂದೆ ಮನಸ್ಸು ಓಡುತ್ತದೆ.
ಒಂದು ಚಿಂತನೆಯ ಅಡಿಯಲ್ಲಿ ಬೆಳೆಯುತ್ತಾ ಅದೇ ಸತ್ಯವೆಂದು ನಂಬಿದ್ದಾಯಿತು. ಅದೇ ಕಾರಣದಿಂದ ಪ್ರಮುಖವಾದ ಮೆಟ್ಟಿಲಿನಿಂದ ಇಳಿದದ್ದೂ ಆಯಿತು. ಸಂಘರ್ಷ ಮಾಡಿದ್ದೂ ಆಯಿತು. ಅನೇಕರಿಂದ ಕೇಳಿಸಿಕೊಂಡದ್ದೂ ಆಯ್ತು. ಮಗುವಿನ ಓದಿಗೂ ಅದೇ ಚಿಂತನೆಯ ದಾರಿ ಹಿಡಿದದ್ದೂ ಆಯಿತು. ಸಾಮಾಜಿಕ ಕೆಲಸದಲ್ಲೂ ಅದೇ ದಾರಿಯನ್ನೂ ಹಿಡಿದಾಯಿತು. ಎಲ್ಲಾ ಆಗಿ ಕೊನೆಗೆ ಬಂದು ನಿಂತಿರುವುದು ದೂರದಲ್ಲಿ. ಮಾತನಾಡಿದ್ದೇ ತಪ್ಪಾಯ್ತೇ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಬಂದು ನಿಂತಿತು. ಯಾವುದು ಸತ್ಯವೆಂದು ಭಾವಿಸಿದ್ದೆವೋ ಅದೇ ನಾವಾಗಲಿಲ್ಲ...!. ನಾವು ನಾವಾಗಲೂ ಇಲ್ಲ...!. ಅವಕಾಶವಾದಿಗಳು ಮೇಲೆದ್ದು ಬಿಟ್ಟರು, ಜಾತಿ ಹಿಡಿದರು ಗೆದ್ದರು..!. ಸತ್ಯ ಸೋತಿತು....!.




“ಹಲಸು” ಕೇರಳ ರಾಜ್ಯದ ಹಣ್ಣು. . . ರೈತನಿಗೆ ಸಂದ ಗೌರವ !





ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು, ಆತ್ಮಹತ್ಯೆಯ ಹಿಂದೆ ಬಿದ್ದಿದ್ದರು. ದೂರದ ಇಸ್ರೇಲ್‍ನಲ್ಲಿ ಅದರ ತದ್ವಿರುದ್ಧ. ಎಲ್ಲರೂ ಯಶೋಗಾಥೆಯ ಹಿಂದೆ ಬಿದ್ದರು. ಆತ್ಮಹತ್ಯೆ ತಡೆಗೆ ಏನು ಮಾಡಬಹುದು ಎಂದು  ತಂಡ ರಚನೆ ಮಾಡಿದರು. ರೈತರು ಬೆಳೆಯುವ ಕೆಲವು ಉತ್ಪನ್ನಗಳನ್ನು ಕಡ್ಡಾಯ ಬಳಕೆ ಮಾಡಬೇಕು ಎಂದರು. ರೈತರೂ ಗೆದ್ದರು, ಆತ್ಮಹತ್ಯೆಯೂ ಕಡಿಮೆಯಾಯಿತು. ಪಕ್ಕದ ಕೇರಳವೂ ಅದೇ ಹಾದಿಯಲ್ಲಿದೆ. ಹಲಸು ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿದರು. ರೈತರೂ ಈ ಹಣ್ಣಿನ ಮೂಲಕ ಆದಾಯ ಸೃಷ್ಠಿ ಮಾಡಿಕೊಂಡರು.
ಇಡೀ ದೇಶದಲ್ಲಿ ಆಗಾಗ ಸುದ್ದಿಯಾಗುವ ಸಂಗತಿ ರೈತರ ಆತ್ಮಹತ್ಯೆ. ಆದರೆ ಪಕ್ಕದ ಕೇರಳದಲ್ಲಿ ಇಂತಹ ಸುದ್ದಿಗಳೇ ಅಪರೂಪ. ಇಲ್ಲವೇ ಇಲ್ಲ ಎಂದಲ್ಲ. ರೈತರ ಆತ್ಮಹತ್ಯೆಯ ಸರಾಸರಿ ತೆಗೆದರೆ ತೀರಾ ಕಡಿಮೆ. ಏಕೆ ಹೀಗೆ ಎಂದು ಪಾಸಿಟಿವ್ ಆಗಿ ಯೋಚಿಸಿದರೆ ಇಲ್ಲಿನ ಸರಕಾರಗಳು ಯಾವುದೇ ಬರಲಿ ರೈತರ ಬೇಡಿಕೆಗೆ ತಕ್ಷಣವೇ ಸ್ಪಂದಿಸುತ್ತವೆ, ರೈತ ಪರವಾದ ಯಾವುದೇ ಹೋರಾಟಕ್ಕೆ, ನ್ಯಾಯಯುತ ಬೇಡಿಕೆಗೆ ಪಕ್ಷಬೇಧವಿಲ್ಲದೆ ಹೋರಾಟ ನಡೆಯುತ್ತದೆ, ಸರಕಾರ ಸ್ಪಂದಿಸುತ್ತದೆ. ಅದರ ಜೊತೆಗೆ ಹೊಸ ಸಾಧ್ಯತೆಯತ್ತಲೂ ಸರಕಾರ ಹೇಳುತ್ತದೆ. ಈಗಲೂ ಅಂತಹದ್ದೇ ಪ್ರಯತ್ನ ಕೇರಳದಲ್ಲಾಗಿದೆ. ಹಲಸಿನ ಹಣ್ಣನ್ನು ರಾಜ್ಯದ ಹಣ್ಣು ಎಂದು ಸರಕಾರ ಘೋಷಿಸಿದೆ. ಅನೇಕ ಸಮಯಗಳಿಂದ ಹಲಸಿನ ಬಗ್ಗೆ ಕೇರಳದಲ್ಲಿ ಆಂದೋಲನ, ಚಳುವಳಿಯೇ  ನಡೆಯುತ್ತಿತ್ತು. ರಬ್ಬರ್, ತೆಂಗು ಮೊದಲಾದ ಕೃಷಿಯಿಂದಲೇ ಕಂಗೊಳಿಸುತ್ತಿದ್ದ ಕೇರಳದಲ್ಲಿ ಹಲಸಿನ ಆಂದೋಲನ ಶುರುವಾಗಿ ಸುಮಾರು 10 ವರ್ಷಗಳಾಗಿದೆ. ಹಲಸು ಮೇಳದಿಂದ ತೊಡಗಿ ವಿವಿಧ ಚಳುವಳಿ ನಡೆಯಿತು. ಇದರ ಪರಿಣಾಮ ವಿವಿಧ ಸಣ್ಣ ಸಣ್ಣ ಉದ್ಯಮಗಳು ಹುಟ್ಟಿಕೊಂಡಿದೆ.ಈಗ ಹಲಸು ಬೆಳೆಸುವ ಮೂಲಕ ರೈತನಿಗೆ ಆದಾಯ ತರಲು ಸಾಧ್ಯವಿದೆ ಎಂದು ಅನಿಸಿದೆ. ಹೀಗಾಗಿ ಕೇರಳದ ಸರಕಾರವೇ ರೈತರ ನೆರವಿಗೆ ಬಂದಿದೆ. ಕೇರಳದ ಕೃಷಿ ಸಚಿವರು ಈ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ಮಾಡಿದರು, ಸಾಧ್ಯತೆ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಇಡೀ ರಾಜ್ಯದಲ್ಲಿ ಸರಕಾರದ ವತಿಯಿಂದ ಹಲಸಿನ ವಾಹನ ಓಡಿಸಿದರು. ಜನರಲ್ಲಿ, ಕೃಷಿಕರಲ್ಲಿ ಜಾಗೃತಿ ಮೂಡಿಸಿದರು. ಹೊಸ ಹೊಸ ತಳಿಯ ಹಲಸನ್ನು ಪರಿಚಯಿಸಿದರು. ಇದೀಗ ಹಲಸು ರಾಜ್ಯದ ಹಣ್ಣು ಎಂಬ ಘೋಷಣೆ ಮಾಡಿದರು. ಇಡೀ ಕೇರಳದ ರೈತರಿಗೆ ಇಷ್ಟು ಸಾಕು. ಈಗ ಹಲಸಿನ ಮೂಲಕವೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಉಪಬೆಳೆಯಾಗಿ ಬೆಳೆಯಲೂ, ಉದ್ಯಮಗಳು ಬೆಳೆಯಲು ಸಾಧ್ಯವಾಯಿತು.
ಹಾಗೆ ನೋಡಿದರೆ ಕೇರಳ ಮಾತ್ರವಲ್ಲ ಕರ್ನಾಟಕದಲ್ಲೂ ಹಣ್ಣು ಬೆಳೆಯುವ ಅನೇಕ ಕೃಷಿಕರು ಇದ್ದಾರೆ. ಆದರೆ ಮಾರುಕಟ್ಟೆ ಸಮಸ್ಯೆಯ ಕಾರಣದಿಂದ , ಈ ಬಗ್ಗೆ ಸಾಕಷ್ಟು ಜಾಗೃತಿ ಅರಿವು ಇಲ್ಲದ ಕಾರಣದಿಂದ ಸರಕಾರದ ಸಹಾಯವೇ ಇಲ್ಲದ ಕಾರಣದಿಂದ ಸೊರಗುತ್ತಿರುವುದು  ಕಂಡುಬರುತ್ತದೆ. ಮೂಲತ: ಕೇರಳದವರಾಗಿ ಪುತ್ತೂರು ತಾಲೂಕಿನ ಕಬಕ ಬಳಿಯ ನರ್ಸರಿ ನಡೆಸುತ್ತಿರುವ ಅನಿಲ್ ಪ್ರತೀ ವರ್ಷ ಸುಮಾರು 75 ಸಾವಿರದಿಂದ 1 ಲಕ್ಷ ಹಲಸು ಗಿಡವನ್ನು ಮಾಡಿ ದೇಶದ ವಿವಿದೆಡೆಗೆ ಮಾರಾಟ ಮಾಡುತ್ತಾರೆ.ಕೇರಳದಲ್ಲಿ ಹಲಸಿನ ಜಾಗೃತಿ ಆರಂಭವಾದ ಬಳಿಕ ಪ್ರತೀ ವರ್ಷ ಗಿಡಗಳಿಗೆ ಬೇಡಿಕೆ ವ್ಯಕ್ತವಾಯಿತು. ಇಂದಿಗೂ ಈ ಬೇಡಿಕೆ ಕಡಿಮೆಯಾಗಿಲ್ಲ. ಇದರ ಪ್ರಭಾವ ಪಕ್ಕದ ತಮಿಳುನಾಡಿನಲ್ಲೂ ಕಂಡಿತು. ಹೀಗಾಗಿ ಹಲಸಿನ ಗಿಡಕ್ಕೆ ಬೇಡಿಕೆ ಹೆಚ್ಚಾದಾಗ ಹೊಸತಂತ್ರವನ್ನು ಅನಿಲ್ ಕಂಡುಕೊಂಡರು. ಈಗ ಸಾಕಷ್ಟು ಗಿಡ ಮಾರಾಟಕ್ಕೂ ಅನಿಲ್ ಶಕ್ತವಾದರು. ಇದು ಅನಿಲ್ ಒಬ್ಬರ ಕತೆಯಲ್ಲ ಕೇರಳದಲ್ಲಿ ಸಾಕಷ್ಟು ನರ್ಸರಿಗಳಲ್ಲಿ ಇಂದು ಹಲಸಿನ ಗಿಡಕ್ಕೆ, ಹೊಸ ಹೊಸ ತಳಿಯ ಗಿಡಕ್ಕೆ ಬೇಡಿಕೆ ವ್ಯಕ್ತವಾಗುತ್ತಲೇ ಇದೆ.
 ಕೇರಳದ ಮೂಲದಿಂದ ಆಗಮಿಸಿ ಸುಮಾರು 5 ಎಕ್ರೆಯಲ್ಲಿ ಜಾರ್ಜ್ ಎಂಬ ಕೃಷಿಕ ರಂಬುಟಾನ್ ಹಣ್ಣಿನ ತೋಟ ಮಾಡುತ್ತಾರೆ. ರಂಬುಟಾನ್ ಬೇಡಿಕೆಯನ್ನು ಗಮನಿಸಿ 5 ಎಕ್ರೆ ಜಾಗ ಖರೀದಿ ಮಾಡಿ ಅಲ್ಲಿ ಸಂಪೂರ್ಣವಾಗಿ ಹಣ್ಣಿನ ಗಿಡವನ್ನು  ಬೆಳೆಸಿದರು. ಈಗ ಹಣ್ಣು ಕಟಾವು ಮಾಡುತ್ತಿದ್ದಾರೆ. ಹೀಗೆ ಹತ್ತಾರು ಮಂದಿ ಹಣ್ಣಿನ ತೋಟ ಮಾಡಿ ಕೇರಳದಲ್ಲೇ ಮಾರುಕಟ್ಟೆ ಹುಡುಕುತ್ತಾರೆ.
ಕರ್ನಾಟಕದಲ್ಲೇ ಇರುವ ಅನೇಕರು ಹಣ್ಣಿನ ತೋಟ ಮಾಡಿ ಮಾರುಕಟ್ಟೆಗಾಗಿ ಪರದಾಟ ಮಾಡುತ್ತಾರೆ. ಎಲ್ಲೋ ಕೆಲವರು ಸಾಹಸಪಟ್ಟು ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾರೆ. ಹಣ್ಣಿನ ತೋಟವೂ ಆದಾಯ ತರಬಲ್ಲುದು ಎಂಬ ಕಲ್ಪನೆ ಇದ್ದರೂ ಇಂದಿಗೂ ತೋಟಗಾರಿಕಾ ಬೆಳೆಯಾಗಿ ಸಾಕಷ್ಟು ಪ್ರೋತ್ಸಾಹ ರಾಜ್ಯದಲ್ಲಿ ಸಿಗುವುದಿಲ್ಲ. ಮಾವು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆಗಳೂ ಸಾಕಷ್ಟು ಇದ್ದರೂ ರಾಜ್ಯದ ಹಣ್ಣು ಎಂಬ ಘೋಷಣೆ ಇಲ್ಲಿಲ್ಲ. ಇದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಾಣುತ್ತಿಲ್ಲ. ಹೀಗಾಗಿ ರೈತನಿಗೆ ಆದಾಯ ಹೆಚ್ಚುವುದು ಕೂಡಾ ಕಷ್ಟವಾಗಿದೆ, ಯಶೋಗಾಥೆಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ, ಹೊಸ ಬಗೆಯ ಕಲ್ಲಂಗಡಿ ಬೆಳೆಯಲಾಗುತ್ತದೆ. ರೈತನಿಗೆ ಯಾವತ್ತೂ ಉಪಬೆಳೆಗಳು ಆದಾಯ ದ್ವಿಗುಣಕ್ಕೆ ಕಾರಣವಾದರೆ, ಸರಕಾರದ ಸಣ್ಣ ಪ್ರೋತ್ಸಾಹ ಕೂಡಾ ದೊಡ್ಡದಾಗಿ ಕಾಣುತ್ತದೆ. ರಾಜ್ಯದಲ್ಲೂ ಯಾವುದಾದರೊಂದು ಹಣ್ಣನ್ನು ರಾಜ್ಯದ ಹಣ್ಣು ಎಂದು ಘೋಷಿಸಿದರೆ ಸಹಜವಾಗಿಯೇ ಮಾರುಕಟ್ಟೆ ಹೆಚ್ಚುತ್ತದೆ, ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತನಿಗೂ ಆದಾಯ ಹೆಚ್ಚಾಗುತ್ತದೆ. ಸರಕಾರಗಳು ಈ ದಿಸೆಯಲ್ಲಿ ಏಕೆ ಆಲೋಚಿಸಬಾರದು ಇಲ್ಲಿ ?. ಇಂತಹ ಸಣ್ಣ ಸಣ್ಣ ಮೆಟ್ಟಿಲುಗಳೇ ರೈತನ ಆದಾಯಕ್ಕೆ ದೊಡ್ಡ ಮೆಟ್ಟಿಲುಗಳೇ ಆಗುತ್ತದೆ.

17 ಮಾರ್ಚ್ 2018

ಕೃಷಿಕರೇ ಕಂಡುಹಿಡಿಯಬೇಕಾದ "ಇ" ಕೃಷಿ ಮಾರುಕಟ್ಟೆ ವ್ಯವಸ್ಥೆ







ಕಳೆದ ಕೆಲವು ದಿನಗಳ ಹಿಂದೆ ಕಾಳುಮೆಣಸು ದರ ಇಳಿಕೆಯ ಹಾದಿಯಲ್ಲಿತ್ತು. ಹಾಗಿದ್ದರೂ ಕೃಷಿಕ ಶಂಕರ ಭಟ್ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಮಾತನಾಡುತ್ತಾ, "ಇಂದಿಗೂ ನಾನು ಕಾಳುಮೆಣಸನ್ನು ಕನಿಷ್ಠ 800 ರೂಪಾಯಿಗೆ ಮಾರಾಟ ಮಾಡುತ್ತಿದ್ದೇನೆ" ಎನ್ನುತ್ತಿದ್ದರು. ಅದು ಹೇಗೆ ಎಂದು ಕೇಳಿದಾಗ ಅವರು ಹೇಳಿದ್ದು "ಆನ್‍ಲೈನ್" ಮಾರುಕಟ್ಟೆ, ಇ ಮಾರುಕಟ್ಟೆಯ ಹೆಸರು. ಹಾಗಿದ್ದರೆ, ಕೃಷಿಕರಿಗೂ ಆನ್‍ಲೈನ್ ಮೂಲಕ ತಾವೇ ಬೆಳೆಯುವ ಕೃಷಿ ವಸ್ತುಗಳ ಮಾರಾಟ ಸಾಧ್ಯವೇ ಎಂಬ ಪ್ರಶ್ನೆ ಬಂದಾಗ, ಬಹುತೇಕ ಕೃಷಿಕರ ಮಕ್ಕಳು ಇರುವುದು ನಗರದಲ್ಲಿ. ಹಾಗಿದ್ದರೆ ಏಕೆ ಕಷ್ಟ ಎಂಬ ಮರುಪ್ರಶ್ನೆ...!.

ಭಾರತ ಕೃಷಿ ದೇಶ, ಭಾರತದ ಆರ್ಥಿಕ ವ್ಯವಸ್ಥೆ ನಿಂತಿರುವುದೇ ಕೃಷಿ ಮೇಲೆಯೇ. ಹೀಗಿರುವಾಗ ಕೃಷಿಯ ಲೆಕ್ಕಾಚಾರ , ಕೃಷಿ ಉತ್ಪಾದನೆಯ ವ್ಯವಹಾರ, ಕೃಷಿ ಮಾರುಕಟ್ಟೆಯನ್ನು ಲೆಕ್ಕ ಹಾಕುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ಇಂದು ವಿಶೇಷ ಕೋರ್ಸ್‍ಗಳೂ ಆರಂಭವಾಗುತ್ತಿದೆ. ಕೃಷಿಗೆ ಬೇಕಾದ ಎಲ್ಲಾ ಸವಲತ್ತು, ಬೆಂಬಲ ಬೆಲೆ, ಸಬ್ಸೀಡಿ ಎಲ್ಲವೂ ಸಿಗುತ್ತಿದ್ದರೂ ಮತ್ತೆ ಮತ್ತೆ ಚರ್ಚೆಯಾಗುವುದು ಕೃಷಿ ಮಾರುಕಟ್ಟೆ ವ್ಯವಸ್ಥೆ. ಕೃಷಿಕ ತಾನೇ ಬೆಳೆದ ಟೊಮೊಟೋ ರಸ್ತೆ ಬದಿ ಚೆಲ್ಲಿದಾಗ ದೂರದ ಎಲ್ಲೋ ಇರುವ ಕೃಷಿಕನಿಗೂ ನೋವಾಗುತ್ತದೆ. ಎಲ್ಲೋ ಜೋಳದ ಬೆಲೆ ಕುಸಿತವಾದಾಗ ಇನ್ನೆಲ್ಲೋ ಇರುವ ಕೃಷಿಕನಿಗೂ ಬೇಸರವಾಗುತ್ತದೆ. ಒಂದು ಕಡೆ ರೈತ ಟೊಮೊಟೋ ರಸ್ತೆ ಬದಿ ಎಸೆದರೆ ಇನ್ನೊಂದು ಕಡೆ ಟೊಮೊಟೋಗೆ 15 ರೂಪಾಯಿ ಕೊಟ್ಟು ಖರೀದಿ ಮಾಡುವ ಸ್ಥಿತಿ ಇರುತ್ತದೆ. ಹೀಗಿರುವಾಗಲೂ ರೈತ ಟೊಮೊಟೋ ಏಕೆ ರಸ್ತೆ ಬದಿ ಚೆಲ್ಲುತ್ತಾನೆ ಎಂಬ ಪ್ರಶ್ನೆಗೆ ಉತ್ತರ "ಮಾರುಕಟ್ಟೆ ವ್ಯವಸ್ಥೆ". ಹೀಗಾಗಿ ಕೃಷಿ ಮಾರುಕಟ್ಟೆಯ ವ್ಯವಸ್ಥೆ ಸುಧಾರಣೆ ಹೇಗೆ ಎಂಬ ಬಗ್ಗೆ ಮತ್ತೆ ಮತ್ತೆ ಚರ್ಚೆಯಾಗುತ್ತದೆ. ಈಗ ಕೃಷಿ ಆರ್ಥಿಕತೆ ಬಗ್ಗೆ ಸಾಕಷ್ಟು ಅಧ್ಯಯನವಾಗಬೇಕು. ಈ ಮೊದಲು ನಡೆಸಿದ ಸಮೀಕ್ಷೆ ಹಾಗೂ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯ ನಿರ್ವಹಣೆಯ ಸಿದ್ಧಾಂತಗಳ ಅಳವಡಿಕೆಯನ್ನು ಅಧ್ಯಯನ ಮಾಡಿದಾಗ ಭವಿಷ್ಯದಲ್ಲಿ ಇ- ಬಿಸಿನೆಸ್ ಅಥವಾ ಇ ಕೃಷಿ ಮಾರುಕಟ್ಟೆ ಎನ್ನುವ ಪರಿಕಲ್ಪನೆಗೆ ಹೆಚ್ಚು ಅವಕಾಶ ತೆರೆದುಕೊಂಡಿದೆ.
ಭಾರತದ ಆರ್ಥಿಕ ತಜ್ಞರು ಕೃಷಿ ಕಡೆಗೆ ಹೆಚ್ಚಿನ ಗಮಹರಿಸುತ್ತಿದ್ದಾರೆ. ಕೃಷಿ ಮಾರುಕಟ್ಟೆಗಾಗಿಯೇ ವಿಶೇಷ ಕೋರ್ಸ್ ರಚನೆಯಾದರೆ ಅದರಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಆಹಾರದ ಉತ್ಪಾದನೆ, ಸರಬರಾಜು ಮತ್ತು ಬಳಕೆಯ ಬಗ್ಗೆ, ಕೃಷಿ ಸರಕುಗಳು ಮತ್ತು ಸೇವೆಗಳ ಬಗ್ಗೆ ವಿಶೇಷ ತರಬೇತಿ ಅಗತ್ಯವಾಗುತ್ತದೆ. ಹಾಗೂ ಅಂಗಡಿ ಮಾಲಕರು ಯಾವ ರೀತಿಯ ಆಹಾರವನ್ನು ಖರೀದಿ ಮಾಡುತ್ತಾರೆ. ಪ್ರಸಕ್ತ ಜನರ ಆಹಾರ ಪದ್ಧತಿಯಲ್ಲಾದ ಬದಲಾವಣೆ, ಡಯೆಟ್, ಮಾರುಕಟ್ಟೆ ಅವಶ್ಯಕತೆಗಿಂತ ಹೆಚ್ಚುವರಿ ಬೆಳೆ ಬೆಳೆಯಲಾಗುತ್ತದೆಯೇ ಇತ್ಯಾದಿ ವಿವರಗಳನ್ನು ಅಧ್ಯಯನ ಬೇಕಾಗುತ್ತದೆ ಎಂಬ ಸಲಹೆ ಬಂದಿದೆ. ಈ ಟ್ರೆಂಡ್ ಈಗಾಗಲೇ ಶುರುವಾಗುತ್ತಿದ್ದು ಪೇಸ್‍ಬುಕ್‍ನಂತಹ ಜಾಲತಾಣಗಳಲ್ಲಿ ಕೃಷಿಕರು ತಾವೇ ಬೆಳೆದ ವಸ್ತುಗಳನ್ನು  ಮಾರಾಟ ಮಾಡುತ್ತಿದ್ದಾರೆ, ಈ ಬಗ್ಗೆ ಆಸಕ್ತ ವಿದ್ಯಾರ್ಥಿಗಳು ಅಧ್ಯಯನ ಆರಂಭಿಸಿದ್ದಾರೆ. ಕೃಷಿ ಗ್ರೂಪುಗಳಲ್ಲಿ 2.5 ಲಕ್ಷಕ್ಕೂ ಅಧಿಕ ಮಂದಿ ಇದ್ದರೆ ಅದರಲ್ಲಿ ಶೇ.50 ಕ್ಕಿಂತ ಹೆಚ್ಚು ಕೃಷಿಕರು ಇರುವುದು  ಕೃಷಿಕರೂ ಸಾಮಾಜಿಕ ತಾಲತಾಣಗಳ ಬಳಕೆಯ ಅಭ್ಯಾಸವನ್ನು ಕೃಷಿಗೆ ಸಹಕಾರಿಯಾಗುವಂತೆ ಮಾಡಬಹುದಾಗಿದೆ.
ಪುತ್ತೂರು ಕಬಕ ಬಳಿಯ ಕೃಷಿಕ ಶಂಕರ ಭಟ್ ವಡ್ಯ ಇ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ರಾಜ್ಯದ ವಿವಿದೆಡೆ ಕೃಷಿಕರು, ಯುವಕೃಷಿಕರು ಈ ತಂತ್ರವನ್ನು ಬಳಕೆ ಮಾಡುತ್ತಿದ್ದಾರೆ. ಶಂಕರ ಭಟ್ ಅವರು ಕೆಲ ವರ್ಷದ ಹಿಂದೆ ಬಾಳೆ ಬೆಳೆದಾಗ ಧಾರಣೆ ಕುಸಿತ ಕಂಡಿತು. 1 ಕೆಜಿ ಬಾಳೆಗೆ 8 ರೂಪಾಯಿಗೆ ಮಾರಾಟ ಮಾಡಬೇಕಾದ ಸಂದರ್ಭ ಬಂತು. ಹಾಗೆಂದು ಮಾರುಕಟ್ಟೆ ಧಾರಣೆ ಗಮನಿಸಿದರೆ 20 ರೂಪಾಯಿ ಇತ್ತು. ಈ ವ್ಯತ್ಯಾಸ ಗಮನಿಸಿದ ಶಂಕರ್ ಭಟ್ ತಾವೇ ಬೆಳೆದ ಬಾಳೆಯನ್ನು ಮೌಲ್ಯವರ್ಧನೆ ಮಾಡಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಬಾಳೆಹಣ್ಣು ಹಲ್ವ ಮಾಡಲು ನಿರ್ಧರಿಸಿದರು. ಬಳಿಕ ಮಾರುಕಟ್ಟೆಗೆ ತಂದಾಗ ಕೆಜಿಗೆ 120 ರೂಪಾಯಿ ಲಭ್ಯವಾಯಿತು. ಬಳಿಕ ಬಾಳೆಗೊನೆ ಮಾರಾಟದ ಬದಲಾಗಿ ಮೌಲ್ಯವರ್ಧನೆ ಮಾಡಿಯೇ ಮಾರಾಟ ಮಾಡುವ ಪ್ರಕ್ರಿಯೆ ನಡೆಸಿದರು. ನಿಧಾನವಾಗಿ ಪೇಸ್‍ಬುಕ್, ವ್ಯಾಟ್ಸಪ್ ಸೇರಿದಂತೆ ಇತರ ಮಾಧ್ಯಮ ಉಪಯೋಗಿಸಿ ಇ ಮಾರುಕಟ್ಟೆಗೆ ಇಳಿದರು. ಈಗ ಮನೆಯಿಂದಲೇ ನೇರವಾಗಿ ಗ್ರಾಹಕರ ಕೈಗೆ ಕೃಷಿ ವಸ್ತುಗಳು ಸಿಗುತ್ತಿದೆ. ಇತ್ತೀಚೆಗೆ ಕಾಳುಮೆಣಸು ಧಾರಣೆ ಕುಸಿತವಾದ ಸಂದರ್ಭದಲ್ಲೂ ಶಂಕರ ಭಟ್ ಅವರಿಗೆ ಸುಮಾರು 800 ರೂಪಾಯಿಯಿಂದ 1000 ರೂಪಾಯಿವರೆಗ ಲಭ್ಯವಾಗಿದೆ. ಇ ಮಾರುಕಟ್ಟೆ ಮೂಲಕ ಗ್ರಾಹಕರ ಕೈಗೆ ತಲಪಿದೆ. ಈಗ ಅಡಿಕೆ, ರುದ್ರಾಕ್ಷಿ, ಕಾಳುಮೆಣಸು, ಬಾಳೆಹಣ್ಣು ಹಲ್ವ ಇತ್ಯಾದಿಗಳ ಮಾರಾಟ ಆನ್ ಲೈನ್‍ನಲ್ಲಿ. ಇಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಕೃಷಿಕ ಬೆಳೆದ ವಸ್ತುಗಳ ಮೇಲೆ ಆತನಿಗೆ ಮೊದಲಾಗಿ ನಂಬಿಕೆ ಇರಬೇಕು ಎನ್ನುವುದು  ಶಂಕರ ಭಟ್ ಅವರ ಅಭಿಮತ. ಮಾರಾಟದ ಸಂದರ್ಭ ಅದರಲ್ಲಿ ಕಲಬೆರಕೆ ಇತ್ಯಾದಿಗಳು ನಡೆದರೆ ವಿಶ್ವಾಸಾರ್ಹತೆ ಕಡಿಮೆಯಾಗಿ ಮಾರುಕಟ್ಟೆ ಕುಸಿತವಾಗಬಹುದು ಎನ್ನುವ ಸತ್ಯ ಅರಿತಿರಬೇಕು.
ಹಾಗಿದ್ದರೆ ಈಗ ಪ್ರಶ್ನೆ ಇರುವುದು, ಸಾಮಾನ್ಯ ಅದರಲ್ಲೂ ಗ್ರಾಮೀಣ ಭಾಗದ ಅದರಲ್ಲೂ ಇ ಮಾರುಕಟ್ಟೆ ವ್ಯವಸ್ಥೆ ಅರಿಯದ ಕೃಷಿಕರಿಗೆ ಇದೆಲ್ಲಾ ಸಾಧ್ಯವೇ ಎಂಬುದು. ಇಂದು ಬಹುತೇಕ ಕೃಷಿಕರ ಮಕ್ಕಳು ಪೇಸ್‍ಬುಕ್, ವ್ಯಾಟ್ಸಪ್‍ಗಳಲ್ಲಿ ಸಕ್ರಿಯ. ಅದರ ಜೊತೆಗೆ ಇನ್ನೂ ಹಲವಾರು ಮಂದಿ ನಗರ ಪ್ರದೇಶದಲ್ಲೇ ಉದ್ಯೋಗ ಮಾಡುವವರು. ಹೀಗಾಗಿ ಇಂದಲ್ಲ ನಾಳೆಯಾದರೂ ಹಂತ ಹಂತವಾಗಿ ಅನುಷ್ಠಾನ ಸಾಧ್ಯವಿದೆ ಎಂಬುದು ಅಭಿಮತ. ಆದರೆ ಎಲ್ಲಾ ಕೃಷಿ ವಸ್ತುಗಳನ್ನು ಇ ಮಾರುಕಟ್ಟೆ ಮೂಲಕ ಅಸಾಧ್ಯ. ಅದಕ್ಕಾಗಿ ಮತ್ತೊಂದು ದಾರಿ ಕಂಡುಹಿಡಿಯಬೇಕಾಗುತ್ತದೆ. ಕೃಷಿಕರು ಬೆಳೆದ ವಸ್ತುಗಳಿಗೆ ಕೃಷಿಕರೇ ಮಾರುಕಟ್ಟೆ ಹುಡುಕಿಕೊಂಡರೆ ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗೆ ದೂರವಿಲ್ಲ. 2020 ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಇದೂ ಸಹಕಾರಿಯಾಗಬಲ್ಲುದು. ರಾಷ್ಟ್ರದ ಆಹಾರ ಭದ್ರತೆಯ ಜೊತೆಗೆ ಕೃಷಿಕರ ಆದಾಯದ ಭದ್ರತೆಯಾಗಬಹುದು.


( ಮಣ್ಣಿಗೆ ಮೆಟ್ಟಿಲು - ಹೊಸದಿಗಂತ)