20 ಫೆಬ್ರವರಿ 2008

ಕೊರಗರಿಂದ ಯಕ್ಷಗಾನ....



ಇಲ್ಲೊಂದು ಯಕ್ಷಗಾನ ಪ್ರದರ್ಶನ.

ಈ ಯಕ್ಷಗಾನಕ್ಕೆ ಇಷ್ಟೊಂದು ವಿಶೇಷ ಏನು ಅಂತೀರಾ?.

ಇದೆ ಈ ಯಕ್ಷಗಾನವನ್ನು ರಂಗದಲ್ಲಿ ಪ್ರಸ್ತುತ ಪಡಿಸಿದ್ದು ಕೊರಗರು.ಹಾಗಾಗಿ ಇದು ಉಳಿದೆಲ್ಲಾ ಯಕ್ಷಗಾನಗಳಿಗಿಂತ ಭಿನ್ನವಾಯಿತು.

ಯಕ್ಷಗಾನವು ಸುಳ್ಯ ತಾಲೂಕಿನ ಪಂಜದಲ್ಲಿ ನಡೆಯಿತು.ಕೊರಗರ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿತ್ತು.

ಇಡೀ ಕಾರ್ಯಕ್ರಮದಲ್ಲಿ ಜನ ಸಾಗರವೇ ಇಲ್ಲದಿದ್ದರೂ ಕೊರಗರು ಕೂಡಾ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿದರು ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡುವುದಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಿತ್ತು.ಇದೇ ರೀತಿಯಾಗಿ ಹಿಂದುಳಿದವರ ಉದ್ದಾರವನ್ನು ಮಾಡುತ್ತಾ ಸಾಗಿದರೆ ಇಲ್ಲಿನ ಅಸಮಾನತೆಗಳು ದೂರವಾಗಲು ಸಾಧ್ಯ. ಹೀಗಲ್ಲದೆ ಉಳ್ಳವರಿಂದ ತೆಗೆದು ಇಲ್ಲದವರಿಗೆ ಕೊಡುವುದರಿಂದ ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ತಾನೆ?.
ಆರಂಭದ ಕಾರ್ಯಕ್ರಮ ಇದಾದ ಕಾರಣ ಸಹಜವಾಗಿಯೇ ಲೋಪಗಳು ಇದ್ದೇ ಇತ್ತು.ಮುಂದೆ ಇದೆಲ್ಲವೂ ನಿವಾರಣೆಯಾದರೆ ಅತ್ಯಂತ ಯಶಸ್ವಿ ಕಾರ್ಯಕ್ರಮ ಎಂದಾಗುವುದರಲ್ಲಿ ನಿಸ್ಸಂದೇಹ.

19 ಫೆಬ್ರವರಿ 2008

42 ವರ್ಷದ ಬಳಿಕ ಡಾಮರೀಕರಣ...!!?





ನೀವಿದನ್ನು ನಂಬಿ ... ನಂಬಲೇಬೇಕು ಕೂಡಾ...


ಅಬ್ಬಾ....!

ಸುಬ್ರಹ್ಮಣ್ಯ - ಪುತ್ತೂರು ರಸ್ತೆಗೆ ಡಾಮರೀಕರಣಕ್ಕೆಮಂಗಳವಾರದಂದು ಚಾಲನೆ ನೀಡಲಾಯಿತು.ಈ ರಸ್ತೆಯು ಮರುಡಾಮರೀಕರಣಗೊಳ್ಳದೆ ಸುಮಾರು 42 ವರ್ಷ ಕಳೆದಿದೆ. ಹಾಗಾಗಿ ಈಗ ನಂಬಿ ಅಂತ ನಾನು ಹೇಳಿದ್ದು.

ಡಾಮರೀಕರಣವನ್ನು ಸುಬ್ರಹ್ಮಣ್ಯದಿಂದ ಸುಮಾರು 25 ಕಿ ಮೀ ದೂರದಿಂದ ಆರಂಭಗೊಂಡಿದ್ದು ಸುಬ್ರಹ್ಮಣ್ಯದ ಕಡೆಗೆ ಆಗಮಿಸುತ್ತಿದೆ.ಅದರಾಚಗೆ ಇನ್ನೊಬ್ಬರು ಗುತ್ತಿಗೆದಾರರು ಡಾಮರೀಕರಣ ಮಾಡುತ್ತಾರೆ.

ಅಂದು ರಸ್ತೆ ಸರಿಯಿಲ್ಲ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪಂಜ ಜೇಸೀ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿದೆ ರಸ್ತೆ ತಡೆ ಹಾಗೂ ಪ್ರತಿಭಟನೆ ಮಾಡಲಾಗಿತ್ತು. ಆಗ ಅಧಿಕಾರಿಗಳು ಮರುಡಾಮರೀಕರಣದ ಭರವಸೆ ನೀಡಿದ್ದರು.
ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಗುಂಡ್ಯ - ಸುಬ್ರಹ್ಮಣ್ಯ ಬಹುತೇಕ ಸುಧಾರಿಸಿದೆ. ಆದರೆ ಉಪ್ಪಿನಂಗಡಿ-ಕಡಬ ರಸ್ತೆ ಮಾತ್ರಾ ಹದಗೆಟ್ಟಿದೆ. ಅದೊಂದು ದುರಸ್ಥಿಯಾದರೆ ಸುಬ್ರಹ್ಮಣ್ಯ ಸಂಪರ್ಕವು ಭಕ್ತರಿಗೆ ಸ್ವಲ್ಪ ನೆಮ್ಮದಿಯಾದೀತು.

ಈಗ ಜನಪ್ರತಿನಿಧಿಗಳಿಲ್ಲ ಹಾಗಾಗಿ ಅಭಿನಂದನೆ ಬೇಕಾಗಿಲ್ಲ ಅದೊಂದು ನೆಮ್ಮದಿ.

ಅಂತೂ ಡಾಮರೀಕರಣ ಶುರುವಾಯಿತಲ್ಲಾ... ಅದರಿಂದಲೇ "ಕನಸೊಂದು" ಶುರುವಾಗಿದೆ..........!!

17 ಫೆಬ್ರವರಿ 2008

ಭವಿಷ್ಯದ ವಿಷ್ಯ ಏನು..?



ಮೊನ್ನೆ ಮೊನ್ನೆಯ ಘಟನೆ.

ನೆನಪಿನ್ನೂ ಹಾಗೇ ಇದೆ...

ಇಂತಹ ಹಲವು ಘಟನೆಗಳು ಭಾರತದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ನಡೆದಿದೆ.ಅದರಿಂದ ನಾವಾದರೂ ಕಲಿತ ಪಾಠ ಏನು?.ಆ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?.

ದಾವಣಗೆರೆಯ ಹೊನ್ನಾಳಿಯಲ್ಲಿ ಇಬ್ಬರು ಬೈಕ್ ಚೋರರು ಸೆರೆಸಿಕ್ಕರು.ನಂತರ ಅವರಿಗೆ ಜಾಮೀನು ಸಿದ್ದಗೊಂಡಿತು.ಜೈಲ್ ಅಧಿಕಾರಿಗಳು ಸೂಕ್ಷ್ಮವಾಗಿ ಅವರನ್ನು ಗಮನಿಸಿದ ಕಾರಣದಿಂದಾಗಿ ಆರೋಪಿಗಳ ಹಿಂದಿನ ಸತ್ಯ ಬಯಲಾಯಿತು.ಅವರಿಬ್ಬರೂ "ಉಗ್ರ"ರು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿತು.ನಂತರದ ಸಂಗತಿಗಳು ದಿನನಿತ್ಯದ ಪತ್ರಿಕೆಗಳಲ್ಲಿ ಬರುತ್ತಿದೆ.ಅವರ ಬಂಧನದ ನಂತರ ಹತ್ತು ಹಲವು ವಿಚಾರಗಳು ಹೊರಬಂದವು. ಐ ಟಿ ಕಂಪನಿಗಳಿಂದ ಹಿಡಿದು ನಮ್ಮ ಆರ್ಥಿಕ ವ್ಯವಸ್ಥೆ ,ಜನ ಸಾಮಾನ್ಯರ ನೆಮ್ಮದಿಗೆ ಭಂಗ ತರುವ ಹಲವು ವಿಚಾರಗಳು ಪೊಲೀಸರ ತನಿಖೆಯಿಂದ ಬಹಿರಂಗವಾಗುತ್ತಾ ಸಾಗಿ ಅವರ ಬೇರುಗಳ ಜಾಲಾಟ ನಡೆಯುತ್ತದೆ.ಇಂತಹ ಪ್ರಕರಣಗಳು ನಮ್ಮಲ್ಲಿ ಇದು ಮೊದಲಲ್ಲ.ಅಂತಹ ಆರೋಪಿಗಳಿಗೆ ಏಕೆ ಕಠಿಣ ಶಿಕ್ಷೆಯಾಗಬಾರದು?. ಆದರೂ ಏಕೆ ಶಿಕ್ಷೆಯಾಗುತ್ತಿಲ್ಲ?.ಸಂಸತ್ ಭವನದ ಮೇಲೇ ಧಾಳಿ ಮಾಡಿದವರ ಜೀವ ರಕ್ಷಿಸಿದ "ಪುಣ್ಯಾ"ತ್ಮರು ನಾವಲ್ಲವೇ?. ಹಾಗಿರುವಾಗ ಇಂದಿನ ಪ್ರಕರಣಕ್ಕೆ ಶಿಕ್ಷೆಯಾದೀತೆಂಬ ವಿಶ್ವಾಸ ಹೇಗೆ ಬರಲು ಸಾಧ್ಯ?. ಆದರೂ ಪೊಲೀಸರು ಶ್ರಮ ಪಟ್ಟು ಕೆಲಸ ನಿರ್ವಹಿಸುತ್ತಾರಲ್ಲಾ ಅದು ಗ್ರೇಟ್.

ಹೀಗೆ ಅನೇಕ "ಧಾಳಿ" ಪ್ರಕರಣಗಳು ನಮ್ಮ ಮುಂದೆ ಇರುವಾಗ.... ನಡೆದಿರುವಾಗ.... ನಮ್ಮ ಜನ ಏಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ.?.ನಮ್ಮ ನಡುವೆ ಸಂಶಯಿತ ವ್ಯಕ್ತಿಗಳು ಸುಳಿದಾಡುತ್ತಿರುವಾಗ ನಾವೇ ಸ್ವತಹ ತನಿಖೆಗೆ ಮುಂದಾಗಿದ್ದೇವಾ..? ಏಕೆಂದರೆ ನಮಗಿನ್ನೂ ಎಚ್ಚರಿಕೆ ಬಂದಿಲ್ಲ.ಇಂದು ದಾವಣಗೆರೆಯ ಪ್ರಕರಣದಲ್ಲಿ ಯಾರೊಬ್ಬರಿಗೂ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಅಂತಹ "ಉಗ್ರ"ರು ಮಾಡಬಹುದಾಗಿದ್ದ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ಭವಿಷ್ಯ ಅಷ್ಟು ಸುಲಭವಿಲ್ಲ ಎಂಬುದು ಗೋಚರವಾಗುತ್ತದೆ.

ಹೀಗಾಗಿ ನಮ್ಮ ಮುಂದಿನ ಬದುಕು ಭದ್ರ ಎನಿಸುವುದಿಲ್ಲ ಏಕೆ ಗೊತ್ತಾ.ಮನೆಯಿಂದ ಪೇಟೆಯ ಕಡೆಗೆ ಹೋದ ನಮ್ಮ ಅಣ್ಣಂದಿರು , ಅಕ್ಕಂದಿರು, ತಂದೆ, ತಾಯಿ ಮತ್ತೆ ಸುಭದ್ರವಾಗಿ ಮನೆಗೆ ಸೇರಬಹುದೆಂಬ ನಂಬಿಕೆ ಇಲ್ಲವಾಗಿದೆ.ನಗರದ ಯಾವುದೇ ಕಡೆಗಳಲ್ಲಿ ಅವಘಡಗಳು ನಡೆಯಬಹುದು. ಈಗ ಅದೂ ಅಲ್ಲ ಹಳ್ಳಿ ಹಳ್ಳಿಗಳೂ ಮುಂದೆ ಉಗ್ರರ ತಾಣವಾಗುಬಹುದು ಎನ್ನುವ ಆತಂಕ ಜನರಿಗೆ ಕಾಡಿದರೆ ಅಚ್ಚರಿಯಿಲ್ಲ.

ಇಂತಹ "ಉಗ್ರ" ಘಟನೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ಕ್ರಮ ಅಗತ್ಯವಿತ್ತು.ಒಮ್ಮೆ ಜಾರಿಯಾಗಿತ್ತು ಕೂಡಾ.ಆದರೆ ಅದಕ್ಕೆ ರಾಜಕೀಯ ಸ್ಪರ್ಶ ಸೋಂಕಿ ಆ ಕಾನೂನು ಇಲ್ಲವಾಯಿತು.ಇಂತಹ ರಾಜಕೀಯ ವಿಚಾರಗಳೇ "ಉಗ್ರ"ರೂಪಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಿಲ್ಲ.ಹೀಗಾಗಿ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲವಾಗಿದೆ.ನಾವು ನಿರೀಕ್ಷಿಸದೇ ಬರುವ ಅವಘಡಗಳು ಒಂದೆಡೆಯಾದರೆ ಇವುಗಳೆಲ್ಲಾ ನಾವೇ ಬರಿಸಿಕೊಳ್ಳುವ ಅವಘಡಗಳೆಂದರೆ ತಪ್ಪಾಗಲಾರದು. ಹೀಗಾಗಿ ಮುಂದಿನ ಬದುಕು ನಿರೀಕ್ಷಿಸಿದಷ್ಟು ಸುಲಭವಿಲ್ಲ ಎನ್ನುವುದು ಗ್ಯಾರಂಟಿ.

ಬದುಕಿನ ಭದ್ರತೆಯ ಬಗ್ಗೆ ಮಾತನಾಡುವಾಗ ಇನ್ನೊಂದು ವಿಚಾರ ನೆನಪಿಗೆ ಬರುತ್ತಿದೆ.ಈಗ ನಗರದಲ್ಲಿ ಐಟಿ ಉದ್ಯಮಗಳಿಗೆ ಹೊಡೆತ ಆರಂಭವಾಗಿದೆ.ನಮ್ಮ ಎಲ್ಲಾ ಐಟಿ ಕಂಪನಿಗಳು ವಿದೇಶವನ್ನು ಅವಲಂಬಿಸಿರುವ ಕಾರಣ ಅಲ್ಲಿ ಆರ್ಥಿಕ ಪರಿಸ್ಥಿತಿಯು ನಮಗೆ ಹೊಡೆತವನ್ನುಂಟು ಮಾಡಿದೆ. ಇಗ ಡಾಲರ್ ಮೌಲ್ಯವು ಕುಸಿದ ಕಾರಣದಿಂದ ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ನಷ್ಟವಾಗುತ್ತಿದೆ.ಇದರ ಪರಿಣಾಮ ಐಟಿ ಉದ್ಯೋಗಿಗಳಿಗೆ ಭೀತಿ ಆರಂಭವಾಗಿದೆ.ಈಗಾಗಲೇ ಪ್ರತಿಷ್ಠಿತ ಕಂಪನಿಯೊಂದು ಸುಮಾರು ೫೦೦ ಉದ್ಯೋಗಿಗಳನ್ನು ಕೆಲಸದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದೆ. ಇನ್ನೂ ೩೦೦೦ ಮಂದಿಗೆ ಅಭದ್ರತೆ ಕಾಡಿದೆ.ಮುಂದೆ ಐಟಿ ಕಂಪನಿಗಳ ಭವಿಷ್ಯ ಹೀಗೆ ಮುಂದುವರಿಯುತ್ತಾ... ಅಥವಾ ಸುಧಾರಿಸುತ್ತಾ... ಎನ್ನುವ ಆತಂಕ ಇದ್ದೇ ಇದೆ. ಇಂತಹ ಘಟನೆಗಳು ನಮ್ಮ ಆರ್ಥಿಕ ವ್ಯವಸ್ಥೆ ಧಕ್ಕೆಯುಂಟು ಮಾಡುವ ಸಂದರ್ಭಗಳೂ ಇರುವುದರಿಂದ ಈಗಲೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಹೀಗಾಗಿ ಮುಂದಿನ ಭವಿಷ್ಯವು ನಾವು ನೆನೆಸಿದಷ್ಟು ಸುಲಭವಾಗಿಲ್ಲ ಎನ್ನುವುದು ಈಗಲೇ ಗೋಚರವಾಗುತ್ತಿದೆ. ಹಳ್ಳಿಯ ಮಂದಿಯೂ ಚಿಂತಿಸಬೇಕಾದ ಕಾಲ ಬಂದಿದೆ.ಹಳ್ಳಿಯಲ್ಲಿ ಈಗ ನೆಮ್ಮದಿಯಿದ್ದರೂ ಮುಂದಿನ ದಿನಗಳ ಬಗ್ಗೆ ಯೋಚಿಸಬೇಕಾಗಿದೆ. ನಗರದ ಮಂದಿಗಂತೂ ಇತರ ಹತ್ತಾರು ತಲೆನೋವಿನ ನಡುವೆ ಈಗ ಉದ್ಯೋಗ ,ಉಗ್ರರ ಬಗ್ಗೆಯೂ ಚಿಂತಿಸಬೇಕಾದ ಅನಿವಾರ್ಯತೆಯಿದೆ.

15 ಫೆಬ್ರವರಿ 2008

ಇದೇಕೆ ಹೀಗೆ ....



ಇಲ್ಲಿ ಒಂದೆರಡು ಪ್ರಕರಣಗಳನ್ನು ನಿಮ್ಮ ಮುಂದೆ ಇಡ್ತೇನೆ... ಇದು ಕಟ್ಟುಕತೆಯಲ್ಲ... ನಮ್ಮೂರಿನ ,ನಮ್ಮ ನಡುವಿನ ಸತ್ಯ ಸಂಗತಿಗಳು. ಹಳ್ಳಿಯ ನನಗೆ ನಿಜಕ್ಕೂ ಅಚ್ಚರಿ ಹಾಗೂ ಆತಂಕವಾಗುತ್ತಿದೆ.ಸಮಾಜದಲ್ಲಿ ಹೀಗೂ ನಡೆಯುತ್ತದಾ..?. ಇಂಥವರೂ ಇದ್ದಾರಾ..?

ನಿಮಗೇನೆನ್ನಿಸುತ್ತದೆ ಎನ್ನುವುದನ್ನ ನನ್ನ Email ID puchhappady@yahoo.co.in ಗೆ ತಿಳಿಸಿ. ಅದು ಇನ್ನೊಂದು ಮಂಥನಕ್ಕೆ ಕಾರಣವಾಗಬಹುದು......!.

- ಒಂದು ಹಳ್ಳಿ.

ಅಲ್ಲಿನ ಕುಟುಂಬವೊಂದರಲ್ಲಿ 5 ಜನ. ತಂದೆ ತಾಯಿ, 2 ಗಂಡು, 1 ಹೆಣ್ಣು ಮಕ್ಕಳು.ತಂದೆ ಸಾಮಾನ್ಯ ಸ್ಥಿತಿವಂತರು.ಮಕ್ಕಳೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದರು.ಎಲ್ಲರೂ ಉದ್ಯೋಗದ ಹಾದಿ ಹಿಡಿದರು.ಮದುವೆಯೂ ಆಯಿತು.ತಂದೆಯ ಆಸ್ಥಿಯಲ್ಲಿ ಸಮಪಾಲು ನಡೆಯಿತು. ಅದಾದ ನಂತರ ಅಣ್ಣ- ತಮ್ಮರ ಒಳಗೊಳಗೆ ಒಂದು ಪೈಪೋಟಿ ಸುರುವಾಯಿತು .ಏನು ಗೊತ್ತಾ..? ತಂದೆ ನನ್ನ ಬಳಿ ... ನನ್ನ ಬಳಿ ಎಂಬ ಚರ್ಚೆ. ಆ ಚರ್ಚೆ ಹಿಂದೆ ಸ್ವಾರ್ಥವೂ ಇತ್ತು.ಏಕೆ ಗೊತ್ತಾ? ತಂದೆಯ ಹೆಸರಲ್ಲಿ ಜೀವ ವಿಮೆಯಿತ್ತು.ಅದೂ ಸುಮಾರು ಒಂದೆರಡು ಲಕ್ಷ ಅಲ್ಲ.ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿತ್ತು. ಹಾಗಾಗಿ ತಂದೆ ಸತ್ತರೆ ಅದು ಸಿಗುತ್ತಲ್ಲಾ ಎಂಬ ಆಸೆ.ಸರಿ ಅದು ಕೊನೆಗೆ ತಂದೆಯ ಬೇಡಿಕೆಯಂತೆ ಹಿರಿಮಗನಲ್ಲಿ ಉಳಿಯುವ ಮಾತುಕತೆಯಾಯಿತು. ಆಗಲೆ ಸುರುವಾಗಿದ್ದು ವಿವಾದ. ಮನೆಯೊಳಗೆ ಕೋಲಾಹಲ. ಅದು ಗೊತ್ತಲ್ಲ.. ಅಲ್ಲಿ ನಿಜವಾದ ಪ್ರೀತಿಯಿರಲಿಲ್ಲ.. ಅಲ್ಲಿದ್ದದ್ದು ಸ್ವಾರ್ಥ.ಹಾಗಾಗಿ ಜಗಳ ಬಂದೇ ಬರುತ್ತೆ.ಸ್ವಲ್ಪ ಸಮಯದ ನಂತರ "ಅಕಾಲಿಕ"ವಾಗಿ ತೀರಿಕೊಂಡ್ರು. ಹಾಗೆ ತೀರಿಕೊಂಡರೆ ಮಾತ್ರಾ ಅಲ್ಲವೇ ದುಡ್ಡು ಸಿಗೋದು?. ನಂತರ ಊರಿಡೀ ಸುದ್ದಿ ಹಬ್ಬಿತು.ಆದರೆ ಮಕ್ಕಳಿಗೆ ದುಡ್ಡಿ ಸಿಕ್ಕಿತಲ್ಲಾ?.

- ಇದು ಇನ್ನೊಂದು ಘಟನೆ.

ಅವರಿಗೆ ಏಕೈಕ ಪುತ್ರ.5 ಜನ ಪುತ್ರಿಯರು.ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಅವರು ಮನೆ ಮನೆ ಅಲೆದು 10 ರೂ ವಿನಿಂದ ಹಿಡಿದು 100 ರೂ ವರೆಗೆ ಕೇಳಿಕೊಂಡು.ಸುಮಾರು 15 ವರ್ಷ ಓದಿಸಿದರು.ಆತನಿಗೆ ಉದ್ಯೋಗ ಸಿಕ್ತು.ಅತ್ಯುನ್ನತ ಹುದ್ದೆಗೆ ಏರಿದ.ಹುದ್ದೆಗೆ ಏರುತ್ತಿದ್ದಂತೆಯೇ ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಆತ ಎರಡು ವರ್ಷಕ್ಕೊಮ್ಮೆ ಬಂದ.ಮತ್ತೆ ಮತ್ತೆ...... ಈಗ ತಂದೆ ಹಾಸಿಗೆ ಹಿಡಿದಿದ್ದಾರೆ. ಮಗನ ನೆನಪಾಗುತ್ತೆದೆ. ಆತ ಮೊನ್ನೆ ಬಂದಿದ್ದ ಅಂತ ನೆನಪಿಸಿ.. ಆತ ಫೋನ್ ಮಾಡಿದರೆ ಸಾಕು ಡಾಕ್ಟು ಬಂದು ನೋಡುತ್ತಾರೆ.ಅಂತ ಹಾಸಿಗೆಯಿಂದಲೂ ಮಗನ ಮೇಲೆ ಗೌರವ ತೋರುತ್ತಾರೆ.ಆದರೆ ಆತ ಇಂದಿಗೂ ಆ ಮನೆಗೆ ಬಂದಿಲ್ಲ.ಮನೆಗೆ ಕನಿಷ್ಠ ದೂರವಾಣಿ ಸಂಪರ್ಕವನ್ನೂ ಮಾಡಿಸಿಲ್ಲ. ಆಸ್ಪತ್ರೆಗೆ ದಾಖಲಾಗಿರುವಾಗ ದೂರವಾಣಿಯ ಮೂಲಕ ಮಾತನಾಡಿ ಹುಶಾರಾರುತ್ತೀರಾ ಅಂತ ಸಂತೈಸಿದ್ದಾನೆ. ನೀವು ಅದೆಲ್ಲಾ ಬಿಡಿ. ಆತ ನಗರಕ್ಕೆ ತೆರಳಿ ಸುಮಾರು ೨೫ ವರ್ಷವಾಗಿರಬಹುದು ಒಮ್ಮೆಯೂ ತಂದೆ-ತಾಯಿಯನ್ನು ನಗರ ತೋರಿಸಲೆಂದು ಕರಕೊಂಡು ಹೋಗಿಲ್ಲ...!?

ಇದೆರಡು ಪ್ರಕರಣಗಳಲ್ಲ.ಇಂತಹುದೇ ಕೆಲ ಪ್ರಕರಣಗಳು ನೆನಪಿನ ಪಟಲದಲ್ಲಿದೆ.ಆದರೆ ಅದು ಕೆಲವೊಮ್ಮೆ ಮತ್ತೆ ಮತ್ತೆ ಕಾಡುತ್ತಲ್ಲಾ ಆಗ ಹೊರಹಾಕಿಬಿಡಬೇಕೆನ್ನಿಸಿತು. ಇದು ಹಳ್ಳಿಯೊಳಗಿನ ಕತೆ. ಹಾಗಾದರೆ ನಗರದಲ್ಲಿ....??

ಯಾವಾಗ ನಾವು ಕಾರ್ಪೋರೇಟ್ ಸಂಸ್ಕೃತಿಯ ಭಾಗವಾದೆವೋ ಅಂದಿನಿಂದ ಇಂತಹ ಪ್ರಕರಣಗಳೂ ಹೆಚ್ಚಲು ಆರಂಭವಾಯಿತೇನೋ..?.

ಒಂದು ದಿನದ ಪ್ರೀತಿಯಲ್ಲಿ....



ಪ್ರೀತಿ.....!!!.

ಈ ಎರಡಕ್ಷರದ ಹಿಂದೆ ಹತ್ತಾರು ಪ್ರಶ್ನೆಗಳು.... ಕೆಲವೊಂದು ನಿಗೂಢಗಳು.....

ಪ್ರೀತಿಸಲು ಕಾರಣ ಬೇಕೇ?.. ಆದರೆ ಕಾರಣವಿಲ್ಲದೆ ಪ್ರೀತಿಸಲು ಸಾಧ್ಯವೇ..? ಪ್ರೀತಿಸಲು ಒಂದೇ ದಿನ ಸಾಕೇ...? ಸಾಕಾದರೆ ಅದು ಎಂತಹ ಪ್ರೀತಿ...?

ನಾನು ಹೀಗೆಯೇ ಪ್ರೀತಿಯ Definitionಗಾಗಿ ತುಂಬಾ ತಡಕಾಡಿದೆ.ಉತ್ತರ ಸಿಕ್ಕಿದ್ದು ಕೊನೆಗೂ "ಪ್ರೀತಿ" ಅಂತಲೇ...
ಅದನ್ನು ವ್ಯಾಖ್ಯಾನಿಸುವುದು ಹೇಗೆ?.ಎರಡು ಮನಸ್ಸುಗಳ ಬೆಸುಗೆಯೇ..? ಮನಸ್ಸುಗಳ ಭಾವದ ಹರಿದಾಟವೇ.. ಭಾವನೆಯ ಸಂಚಾರವೇ...? ಇಲ್ಲ ಎದು ಸಾಧ್ಯವಿಲ್ಲ...! ಹಾಗಿದ್ದರೆ ಅದೆಲ್ಲವನ್ನು ಒಂದೇ ದಿನದಲ್ಲಿ ವ್ಯಕ್ತಪಡಿಸಲು ಸಾಧ್ಯವಾ..?

ಪ್ರೀತಿಯನ್ನು ತೋರ್ಪಡಿಸುವುದು ಹೇಗೆ?

ನನಗೆ "ನಿನ್ನಲ್ಲಿ" ಪ್ರೀತಿಯಿದೆ ಎನ್ನುವುದನ್ನು ಹೇಗೆ ವ್ಯಕ್ತಪಡಿಸಲಿ? ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ-ತಂಗಿ.... ಸೇರಿದಂತೆ ಸಮಾಜದ ಸಮಸ್ತ ಜೀವಿಗಳಲ್ಲಿ ಪ್ರೀತಿಯಿದೆ ಎನ್ನುವುದನ್ನು ಹೇಗೆ ಹೊರಹಾಕಲಿ. ಅಲ್ಲ.. ಪ್ರೀತಿಯನ್ನು ಒಂದೇ ದಿನದಲ್ಲಿ ವ್ಯಕ್ತ್ಯಪಡಿಸಲು ಸಾಧ್ಯನಾ... ಅಂತ ನನಗೆ ಪದೇ ಪದೇ ಕಾಡುತ್ತದೆ.ಹಾಗೆ ಸಾಧ್ಯವಾಗಿದ್ದರೆ ಇಂದು ಇಷ್ಟು ತೊಳಲಾಟವೇಕೆ.? ನನಗನ್ನಿಸುವುದು ಆ ಒಂದು ದಿನದ ಪ್ರೀತಿಯಲ್ಲಿ ನಿಜವಾದ ಪ್ರೀತಿಯ ಸ್ಪರ್ಶ ಇಲ್ಲ... ಅದು "ಬೇರೆಯೇ" ಅರ್ಥ ಪಡೆಯುವ ಪ್ರೀತಿ ಅಂತ ನಾನು ಭಾವಿಸಿಕೊಂಡಿದ್ದೇನೆ.

ಕೆಂಗುಲಾಬಿ.... ಇದಕ್ಕೆ ಸಾತ್ ನೀಡುವ ಹಚ್ಚ ಹಸುರಿನ ಗಿಡ... ಅದರ ನೋಟವೇ ಚಂದ...ಪ್ರೀತಿಯ ಇನ್ನೊಂದು ರೂಪ...

ಅದರ ಸ್ಪರ್ಶವೇ ಅಧ್ಬುತ.... ಅನುದಿನವೂ ಅದು ಹಾಗೇ ಅಲ್ಲೇ ಇದ್ದರೆ ಎಷ್ಟು ಚೆನ್ನ.... ಮುಂಜಾನೆಯ ಒಂದು ನೋಟವೇ ಇಡೀ ದಿನದ ಬದುಕಿಗೆ ಸ್ಪೂರ್ತಿ.ಅಂತಹ ಗುಲಾಬಿಯನ್ನು ಒಂದು ದಿನದ ಪ್ರೀತಿಗಾಗಿ ಏಕೆ ನೀಡಬೇಕು.ಒಂದೇ ದಿನದಲ್ಲಿ ಬಾಡುವ ಹೂವನ್ನು ಹಚ್ಚ ಹಸುರಾಗಿದ್ದ ಗಿಡದಿಂದ ಏಕೆ ಕೀಳಬೆಕು?.ಮರುದಿನಕ್ಕೆ ಬಾಡಿ ಹಳತಾಗುವ ಆ ಸನ್ನಿವೇಶಕ್ಕೆ ಎದೆಮಾಡಿಕೊಡುವ ಬದಲು ಅನುದಿನವೂ ಅದೇ "ಪ್ರೀತಿ" ಹಚ್ಚ ಹಸುರಾಗಿದ್ದರೆ ಏನು ಚಂದ. ಹಾಗೆಂದೆ ಆ ಹೂವು ಅನುದಿನವೂ ಹಾಗೇ ಇರುತ್ತದೆಂಬ ಭ್ರಮೆ ನನಗಿಲ್ಲ.

ಪ್ರೇಮಿಗಳು....

ಪ್ರೀತಿಯ ಭಾಗವೇ ಪ್ರೀಮಿಗಳು.ಒಂದು ದಿನದ ಪ್ರೇಮಿಗಳ ದಿನಾಚರಣೆ ಮಾಡದ ಕಾರಣಕ್ಕೆ "ಬಲಿದಾನ"ಗೈದವರೂ ಪ್ರೇಮಿಗಳೇ. ಎಂತಹ "ಕುರುಡು"....

ನನಗೆ ತಿಳಿದ ಒಂದು ಪ್ರಕರಣ.....

ಪುತ್ತೂರಲ್ಲಿ ಡಿಪ್ಲೋಮಾ ಓದುತ್ತಿದ್ದಾಗಿನ ಸಮಯ...ನನ್ನ ಮಿತ್ರ ರಾಜೇಶ ಒಬ್ಬಳು ಹುಡುಗಿಯ ಹಿಂದೆ ಬಿದ್ದ.ಅದಕ್ಕೆ ಪ್ರೀತಿಯ ಹೆಸರು ನೀಡಿಕೊಂಡ.ಅವಳಿಗೆ ಅರಿವಿಲ್ಲದಂತೆ ಅವಳ ಹಿಂದೆ ಕಾಲೇಜು ಕಾರಿಡಾರ್.. ಹೋಟೇಲ್... ಬಸ್ ಸ್ಟ್ಯಾಂಡ್ .. ಹೀಗೆ ತಿರುಗಾಡಿದ.ಅಷ್ಟೂ ತಿರುಗಾಡಿದ್ದು ಎಂಬ ಎರಡು ಶಬ್ದ ಹೇಳಲು.ಕೊನೆಗೂ ಧೈರ್ಯ ತಂದು ಹೋಟೇಲ್ ಒಂದರಲ್ಲಿ ಪತ್ರವೊದನ್ನು ವೋಡಿದ.ಅದು ದೊಡ್ಡ ಸುದ್ದಿಯಾಯಿತು.ಕಾಲೇಜಿಗೂ ದೂರು ಹೋಯಿತು. ಆತ ಕಾಲೇಜಿನಿಂದ ಡಿಬಾರ್...!!.ಮರುದಿನ ರೂಂನಲ್ಲಿ ನಿದ್ರೆ ಮಾತ್ರೆ ತಿಂದು ಸಾವಿನತ್ತ ಹೊರಟ.ಮಿತ್ರರ ಸಕಾಲಿಕ ಪ್ರಯತ್ನದಿಂದ ಬದುಕಿದ.ಇಂದಿಗೂ ಆತ ಇದ್ದಾನೆ. ಪ್ರೀತಿ ಹಾಗಲ್ಲ ಅಂತಾನೆ...!]

ಈ ಪ್ರಕರದಣಲ್ಲಿ ನಾನು ಗಮನಿಸಿದ್ದು, ಆತನ ಪ್ರೀತಿ ಯಾವ ದಿಕ್ಕಿನಲ್ಲಿತ್ತು? ಆಲ್ಲಿ ಕೇವಲ ಒಂದು "ಬಯಕೆ'ಯ ಹಿಂದಿನ ಪ್ರೀತಿ ಮಾತ್ರಾ ಕಾಣುತ್ತಿತ್ತು. ಅದಕ್ಕಾಗಿ ಆತ ಅಲೆದಾಡಿದ... ನಿರಾಶನಾದ... ಸಾವಿನತ್ತ ಪ್ರಯಾಣಿಸಿದ... ಇದು ವಿಚಿತ್ರ.

ಇನ್ನೊಂದು ಸಂಗತಿ.

ಅದೇ ವರ್ಷ ಒಬ್ಬಳು ಯುವತಿಯ ಆತ್ಮಹತ್ಯೆ ನಡೆಯಿತು.ಅವಳು ವಿವಾಹಿತಳು.ಅವರ ವಿವಾಹದ ಹಿಂದೆ 1 ವರ್ಷದ ಪ್ರೇಮವಿತ್ತು.ಅಲ್ಲಿಗೆ ಅವರಿಬ್ಬರ ಸಂಬಂಧ ಕೊನೆಗೊಂಡಿತ್ತು.ಈ ಪ್ರಕರಣದಲ್ಲೂ ಪ್ರೀತಿಯ ಹಿಂದೆ ಒಂದು ಬಯಕೆ ಮಾತ್ರಾ ಎನ್ನುವುದು ಅರಿವಾಗುತ್ತದೆ.

ಇಂದು ಎಲ್ಲೆಲ್ಲೂ ನೋಡಿ.ಪ್ರೀತಿಯ ಶಬ್ದ ಹೆಚ್ಚು ಅಲೆದಾಡುವುದು ಕಾಲೇಜು ಕ್ಯಾಂಪಸ್ ಗಳಲ್ಲೇ.ನೀವು ಅಲ್ಲೆಲ್ಲಾ ಗಮನಿಸಿ ನೋಡಿ ಅಲ್ಲಿ ಈ ಪ್ರೀತಿಗೆ " ಕಾಮ" ದ ಸ್ಪರ್ಷ ಕಾಣುತ್ತದೆ. ಅಥವಾ "ಮಜಾ"ದ ಪರಿಕಲ್ಪನೆ ಕಾಣುತ್ತದೆ. ಅದಕ್ಕೆ ಒಂದೆರಡು ವರ್ಷದ ನಂತರ ಅರ್ಥವೇ ಇರುವುದಿಲ್ಲ.ಇನ್ನೂ ಪಕ್ವವಾಗದ ಮನಸ್ಸುಗಳಲ್ಲಿ ಪ್ರೀತಿ ಆ ಅರ್ಥದಲ್ಲಿ ,ಆ ದಾರಿಯಲ್ಲಿ ಸಾಗುತ್ತಿದೆ. ನಗರದಲ್ಲಿ ಅನೇಕ ಪ್ರಕರಣಗಳು ಪ್ರೀತಿ, ಪ್ರೇಮದ ಹೆಸರಲ್ಲಿ ಬಯಲಾಗುತ್ತಿವೆ.
ಇದಕ್ಕೆ ಕಾರಣವೇನು?.

ಇಂದು ಯುವಜನತೆಯನ್ನು ಆಕರ್ಷಿಸಲು ಪ್ರೀತಿ.. ಪ್ರೀತಿ, ಪ್ರೇಮದ ಸಿನಿಮಾಗಳು..., ಮಾಧ್ಯಮಗಳು..., ಎಲ್ಲೆಂದರಲ್ಲಿ ಅದೇ ವಿಚಾರಗಳನ್ನು ನೋಡುವ ಅಪ್ರಬುದ್ಧ ಮನಸ್ಸುಗಳು ಅದನ್ನೇ ತಮ್ಮೊಳಗೆ ಆಹ್ವಾನಿಸುತ್ತಾರೆ.ಅದರ ಪರಿಣಾಮವೇ ಇಂದಿನ ದಿನ... ಒಂದು ದಿನದ "ಪ್ರೀತಿ"ಗೆ ಮಹತ್ವ...

"ಪ್ರೀತಿ"ಯ ಎರಡಕ್ಷರದಲ್ಲಿ ಮಾನಸಿಕವಾಗಿ ಅದ್ಧುತ ಅನುಭವ..... ಅಲ್ಲಿ ಸಿಗುವ ಮಾನಸಿಕ ಸುಖ- ಸಂತಸ.. ಅಗಾಧತೆ... ಅಗಲಿಕೆಯ ನೊವು.... ಹೇಗೆ ವಿವರಿಸುವುದು.

ಇದು ಕೇವಲ ಗಂಡು-ಹೆಣ್ಣಿಗೇ ಮೀಸಲಲ್ಲ. ಮಿತ್ರ , ಅಣ್ಣ-ತಮ್ಮ , ಅಕ್ಕ -ತಂಗಿ... ಹೀಗೆ ಯಾರಲ್ಲಿಬೇಕಾದರೂ ಪ್ರಿತಿ ಇರಬಹುದಲ್ವಾ......

ಆದರೂ ನನಗನ್ನಿಸುತ್ತದೆ " ಒಂದೇ ದಿನದ ಪ್ರೀತಿ " ಶಾಶ್ವತವಾ...ಅದು ಸಾಧ್ಯಾನಾ......?

13 ಫೆಬ್ರವರಿ 2008

ಚಿಲ್ಲರೆ ಇಲ್ಲಾರಿ.....



ಚಿಲ್ಲರೆ ಸಮಸ್ಯೆ...!!!

ಚಿಲ್ಲರೆ ಇಲ್ಲಾಂದ್ರೆ ಆತ ತೋರಿಸುವುದು "ಚಿಲ್ಲರೆ" ಬುದ್ದಿಯನ್ನೇ.ಹಾಗಾಗಿ ನಾವೂ "ಚಿಲ್ಲರೆ"ಗಳಾಗುವ ಮೊದಲು ನಮ್ಮಲ್ಲಿ ಚಿಲ್ಲರೆ ರೆಡಿಯಾಗಿರುವುದು ಒಳ್ಳೆಯದಲ್ವಾ..!

ಮೊನ್ನೆ ಹಾಗೇ ಆಯಿತು.ಪತ್ರಿಕೆಯೊಂದನ್ನು ಪಡೆಯಲು 5 ರೂ ನೀಡಿದೆ.ಪತ್ರಿಕೆಗೆ 2.50 ರೂ ಅಲ್ವಾ.. ಅಂಗಡಿಯಾತ ನನಗೆ 2 ರೂ ನೀಡಿ 50 ಪೈಸೆಯ ಒಂದು ಚಾಕೋಲೇಟ್ ನೀಡಿದ.ಇದೇನು ಅಂತ ನಾನು ಕೇಳಿದೆ.ಆತ ಹೇಳಿದ "ಸಾರ್ ಚಿಲ್ಲರೆ ಇಲ್ಲ.." . ಹಾ.. ಸರಿ ಎಂದು ಸ್ವಲ್ಪ ಈ ಕಡೆ ಬಂದು ಪತ್ರಿಕೆ ನೋಡುತ್ತಾ ಚಿಂತಿಸಿದೆ.ಚಿಲ್ಲರೆಗೆ ಚಾಕೋಲೇಟ್... ಇದನ್ನು ಯಾರಿಗಪ್ಪಾ ನೀಡೋದು..? ಹೀಗೆ ವಿವಿಧ ಆಯಾಮಗಳಲ್ಲಿ ನೋಡಿದೆ. ನನಗೆ ಅಧಿಕಪ್ರಸಂಗ.ಸುಮ್ಮನೆ ತಲೆ ಹಾಳು ವಿಷಯಕ್ಕೆ ಯೋಚನೆಯೇಕೆ..? ಪತ್ರಿಕೆಯನ್ನು ಗಂಭೀರವಾಗಿ ಓದಿದೆ... ಹಾಗೇ "ಬಾಯಿ ಸಿಹಿ" ಮಾಡುತ್ತಾ....

ಮರುದಿನ ಅದೇ ಅಂಗಡಿಗೆ ಹೋಗಿ ಪತ್ರಿಕೆ ಪಡೆಯುವಾಗ 2 ರೂ ನೀಡಿ ಒಂದು ಚಾಕೋಲೇಟ್ ನೀಡಿದೆ. ಆತ ಇದೇನು ಇನ್ನು 50 ಪೈಸೆ......? ಎಂದು ರಾಗ ಎಳೆದ.ನಾನು "ಚಿಲ್ಲರೆ ಇಲ್ಲ.." ಎಂದೆ.ಆದ್ರೆ ಆತ ಒಪ್ಪ ಬೇಕೇ..? ಆದು ಆಗಲ್ಲ ಅಂತಾನೆ.ಹಾಗಿದ್ರೆ ನೀವು ನಿನ್ನೆ ಹೀಗೇ ಕೊಟ್ರಲ್ಲ ಎಂದರೆ.ಅದೂ.... ಇದೂ... ಅನ್ನುತ್ತಾ... ಚಿಲ್ಲರೆ ಇಲ್ಲಾಂದ್ರೆ ಪತ್ರಿಕೆ ಇಲ್ಲಾ ಅನ್ನುತ್ತಾನೆ...! ಏನಿದು ಅವಸ್ಥೆ..!?

ಕಾಲವೇ ಹಾಗೆ.ನನಗೊಂದು ನ್ಯಾಯ....... ನಿನಗೊಂದು ನ್ಯಾಯ...... ಅಲ್ವಾ..?

ಈ ಅಂಗಡಿಯವರು ಚಿಲ್ರೆ ಇದ್ರೂ ಒಂದು ಚಾಕೋಲೇಟ್ ಕೊಡುತ್ತಾರೆ.ಆಗ ಒಂದು ಪತ್ರಿಕೆಯ ಜೊತೆ ಒಂದು ಚಾಕೋಲೇಟ್ ಉಚಿತ ಎಂದರೂ ಪೈಸೆ 50..! ಆದರೆ ಅಂಗಡಿಯವನಿಗೆ 3 ರೂ ವ್ಯಾಪಾರ.ಒಟ್ಟು ಲಾಭ ಏನಿಲ್ಲವೆಂದರೂ 1 ರೂ..! ಹೇಗಿದೆ ವ್ಯವಹಾರ!.ಭಾನುವಾರ ಮತ್ತು ಶುಕ್ರವಾರ ಅಂಗಡಿಯಾತನಿಗೆ ನಷ್ಟವಂತೆ.ಅಂದು ಪತ್ರಿಕೆಗೆ 3 ರೂ ಅಲ್ವಾ..! ಈ ಚಿಲ್ಲರೆ ಬುದ್ದಿಯನ್ನು ಹೇಳಿದ್ದು ಇನ್ನೊಬ್ಬ ಅಂಗಡಿಯಾತ...! ಜನ ಹೆಚ್ಚಾಗಿ ಸುಮ್ಮನಿರುತ್ತಾರಂತೆ.ಯಾಕೆ ಗೊತ್ತಾ ಈ 50 ಪೈಸೆ ಏಕೆ ಚರ್ಚೆ?ಹೇಗಿದ್ರೂ ಒಂದು ಚಾಕೋಲೇಟ್ ನೀಡಿದ್ದಾನೆ ಇನ್ನೂ ಎರಡು ಪಡಕೊಂಡ್ರೆ ಮನೆ ಮಕ್ಕಳಿಗೆ ಆಗುತ್ತೇ ಅಂತ ಇನ್ನೆರಡು ಕೊಡಿ ಅಂತಾರೆ.ಹಾಗಾಗಿ ವ್ಯಾಪಾರ 5 ರೂ...!?. ಇದು ತಪ್ಪಲ್ಲ.ಅಂಗಡಿ ಹಾಕಿದ್ದು ವ್ಯಾಪರಕ್ಕಲ್ವಾ.ಅದರಲ್ಲಿನ Technic ಗೊತ್ತಿರಬೇಕಷ್ಟೆ...! ಹೀಗೆ....

ಚಿಲ್ಲರೆ ಅಂದಾಗ ಇನ್ನು ನೆನಪಾಗುವುದು ಬಸ್ ಕಂಡಕ್ಟರ್.ಸಾರ್ ಚಿಲ್ರೆ ಇಲ್ಲ ಇಳಿಯುವಾಗ ತಗೊಳ್ಳಿ ಅಂತ ಟಿಕೆಟ್ ಹಿಂದೆ ಬರೆಯುತ್ತಾನೆ.ನಮಗೂ ನೆನಪಿಲ್ಲ.ಆತನಿಗೆ ನೆನಪಿದ್ರೂ ನಮ್ಮನ್ನು ನೋಡುವಾಗ ಮರೆತಿರುತ್ತದೆ..!.ಬಸ್ಸಿಳಿದು ಮನೆಗೆ ಬಂದಾಗ ನೆನಪಾಗುತ್ತದೆ ಚಿಲ್ಲರೆ.ಇಂತಹ ಹತ್ತಾರು ಸಂಗತಿಗಳು,ಜಗಳಗಳೂ ನಡೆದದ್ದಿದೆ.ಅದೆಲ್ಲವೂ "ಚಿಲ್ಲರೆ"ಗಾಗಿ.ಹಾಗಾಗಿಯೇ ಸ್ವಲ್ಪ ಚಿಲ್ಲರೆ ನಿಮ್ಮಲ್ಲಿ ಸದಾ ಇರಲಿ.ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಚಿಲ್ಲರೆಯಾಗಿ ಯೋಚಿಸಿದ್ದು....! ಹೀಗೆ....!

12 ಫೆಬ್ರವರಿ 2008

ಮಾಯದ ಮಳೆಯೇ ಏನು ನಿನ್ನ ಲೀಲೆ....



ಎರಡು ದಿನಗಳ ಹಿಂದೆ ಊರಿನ ವಾತಾವರಣ ಸರಿ ಇರಲಿಲ್ಲ.

ಮಂಗಳವಾರ ಮಧ್ಯಾಹ್ನ ತುಂತುರು ಹನಿ ಬೀಳಲಾರಂಭಿಸಿತು.ಒಂದೆರಡು ಗಂಟೆಗಳ ಕಾಲ ಊರಿಡೀ ಹನಿ ಹನಿ ಮಳೆ ಇಳೆಗೆ ಸೇರಿತು.ಸ್ವಲ್ಪ ಹೊತ್ತಿನಲ್ಲೇ ಭುವಿಯಿಂದ ಭಾನಿನವರೆಗೆ ಮಣ್ಣಿನ ವಾಸನೆ ಹಬ್ಬಿತು.ಅಷ್ಟು ಹೊತ್ತು ಮಳೆ.....ಮಾಯದ ಮಳೆ......ತುಂತುರು ಮಳೆ......

ಸುಳ್ಯ ತಾಲೂಕಿನಾದ್ಯಂತ ಮಾತ್ರವಲ್ಲ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ಮಳೆ ಜಿನುಗಿತು.ನಗರದ ದ್ವಿಚಕ್ರ ಸವಾರರು "ನೆನೆ"ದು ಸಾಗಿದರೆ ,ಸಭೆ ಸಮಾರಂಭಗಳು ತುರಾತುರಿಯಲ್ಲಿ ನಡೆಯಿತು.ಹಳ್ಳಿಯ ಕೃಷಿಕರು ಮಾತ್ರಾ ಕಂಗಾಲು.ಹೊಲದ ಬೆಳೆ ಬಿದ್ದು ಹೋಗುವ ಆತಂಕ.ಅಡಿಕೆ ತೋಟದ ಕೃಷಿಕರಿಗೆ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡಿ ಮುಚ್ಚುವ ತುರಾತುರಿ.ಆದರೂ ಕೊನೆಗೆ ಒಂದು ಸ್ವಲ್ಪ ಒದ್ದೆಯೇ.ಇನ್ನೊಂದೆಡೆ ತೋಟದ ಹಿಂಗಾರಕ್ಕೆ ಬೀಳುವ ಹೊಡೆತದ ಚಿಂತೆ.ಹೀಗೆ ಅನಿರೀಕ್ಷಿತ ಮಳೆ ಎಲ್ಲರಿಗೂ ಒಮ್ಮೆ ಶಾಕ್ ನೀಡಿದರೆ ರಬ್ಬರ್ ಬೆಳೆಗಾರನಿಗೆ ಮಾತ್ರಾ ಒಮ್ಮೆ ಸ್ವಲ್ಪ ನೆಮ್ಮದಿಯಾಯಿತು.... ಹಾ... ಮಳೆ ...... ಎಂದು ಉದ್ಗರಿಸಿದ.

ಹಳ್ಳಿಯ ಅಜ್ಜಿ ಹೇಳುತ್ತಿದ್ದರಂತೆ "ಪುಯಿಂತೆಲ್ಟ್ ಬರ್ಸ ಬತ್ಂಟ ಪುಚ್ಚೆಗ್ಲಾ ಗಂಜಿ ಇಜ್ಜಾಂತೆ ಆವು". (ಮಕರ ಮಾಸದಲ್ಲಿ ಮಳೆ ಬಂದರೆ ಬೆಕ್ಕಿಗೂ ಅನ್ನ ಇಲ್ಲದಂತಾಗುವುದು).ಇದು ಅಪಾಯಕಾರಿ ಮಳೆ ಎನ್ನುವುದಕ್ಕೆ ಈ ಗಾದೆ.

ಅಬ್ಬಾ ಪ್ರಕೃತಿಯ ಲೀಲೆ ಏನು..?

ಗುರುವಿನ ಗುಲಾಮರು.... ಪ್ರತಿಭಟನೆಯ ಸುಲ್ತಾನರು..........





"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ಕಾಲ ಈಗ ಮುಗಿದುಹೋಗಿದೆ.

ಈಗೇನಿದ್ದರೂ ಗುರುವಿಗೇ ತಿರುಮಂತ್ರ..!.ಈಗ ಅದೂ ಅಲ್ಲ ಗುರುವಿನ ವಿರುದ್ದವೇ ಪ್ರತಿಭಟನೆ...!ಅದೂ ಏಕವಚನದಲ್ಲಿ..!ಹೌದು ಇದು ನಡೆದಿದೆ.

ಹಾಗೆಂದು ಪೂರ್ಣ ವಿದ್ಯಾರ್ಥಿಗಳದ್ದೇ ತಪ್ಪು ಅಂತ ಅಲ್ಲ ಅವರನ್ನು ಅಲ್ಲಿ ಬೆಳೆಸಿದ್ದೇ ಹಾಗೇ..!ಅದರ ಒಂದು ರೂಪ ಈಗ ವ್ಯಕ್ತವಾಗಿದೆ ಅಷ್ಟೇ..!.

ನನಗೀಗಲೂ ನೆನಪಿದೆ.ಆಗ ನಾನು 7 ನೇ ತರಗತಿಯಲ್ಲಿದ್ದೆ.ನನ್ನ ಮಿತ್ರ ಕೃಷ್ಣಪ್ರಸಾದ ಸಹಿತ 5 ಮಂದಿ ಒಂದೇ ಬೆಂಚಲ್ಲಿದ್ದೆವು.ಒಮ್ಮೆ ಅಧ್ಯಾಪಕರೊಬ್ಬರು ನಾವು ಗಲಾಟೆ ಮಾಡಿದೆವೆಂಬ ಕಾರಣಕ್ಕೆ ಹೊಡೆದಿದ್ದರು.ಅದರಿಂದ ನನ್ನ ಮಿತ್ರರಿಗೆ ಹಾಗೂ ನನಗೂ ತೀವ್ರ ಗಾಯವೂ ಆಗಿತ್ತು.ಆಗ ನಾವಾರು ಅದನ್ನು ಮನೆಯಲ್ಲೂ ಹೇಳಿರಲಿಲ್ಲ.ಪ್ರತಿಭಟನೆಯ ಬಗ್ಗೆಯೂ ಚಿಂತಿಸಿರಲಿಲ್ಲ.ಅಂದರೆ ನಾವು ಪುಕ್ಕಲರು ಅಂತಲ್ಲ. ಅದು ಹೊಡೆದದ್ದು ಮೇಸ್ಟ್ರು ಅಂತ ಸುಮ್ಮನಿರುತ್ತಿದ್ದೆವು.ಆದರೆ ಈಗ ನೊಡಿ 5 ತರಗತಿಯವನು ಅಧ್ಯಾಪಕರನ್ನೇ ಗದರಿಸುತ್ತಾನೆ..!.ಅದಲ್ಲ ನಮಗೆ ಹೊಡೆದಿದ್ದ ಮೇಸ್ಟ್ರು ಈಗಲೂ ಸಿಕ್ಕಾಗ ಮಾತನಾಡುತ್ತಾ ಹೇಳುತ್ತಾರೆ "ನೀವಿದ್ದಷ್ಟು ಉತ್ತಮ ಬ್ಯಾಚ್ ಗಳು ಈಗಿಲ್ಲ" ಅವರೇ ನೆನಪಿಸಿ ನಾವು ಹೊಡೆದದ್ದು ನಿಮ್ಮ ಒಳ್ಳೆಯದಕ್ಕೇ ಅನ್ನುತ್ತಾರೆ. ನಾವು ಅದನ್ನು ಮರೆತಿದ್ದೀವಲ್ಲ ಸಾರ್ ಎಂದಾಗ ಅವರು ಹೌದಾ.... ಅಂತಾರೆ.ಮಂಗಳವಾರ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ನೋಡಿದ ನನಗೆ ನನ್ನ ಬಾಲ್ಯವೊಮ್ಮೆ ನೆನಪಾಗಿ ಬಿಟ್ಟಿತು.ವಿಷಯ ಅದಲ್ಲ......

ಇದು ನಡೆದದ್ದು ಸುಳ್ಯ ತಾಲೂಕಿನ ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ.ಅದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.ರಾಜರಸ್ತೆ ಬದಿಯ ಕಾಲೇಜಿನ ಮಹಾದ್ವಾರದ ಬಳಿ ಕುಳಿತು "ಇದು ಅಧ್ಯಾಪಕರ" ವಿರುದ್ದದ ಪ್ರತಿಭಟನೆ ಎಂಬ ಬೋರ್ಡೊಂದನ್ನು ಹಾಕಿ ಸುಮಾರು 18 ವಿದ್ಯಾರ್ಥಿಗಳು ಧಿಕ್ಕಾರ ಕೂಗುತ್ತಿದ್ದರು.ಅವರಲ್ಲಿ ಒಬ್ಬ ನಾಯಕನಲ್ಲಿ ಕೇಳಲಾಯಿತು.. ಏನು ವಿಷಯ..?. ಆತ ಒಂದು ಜೆರಾಕ್ಸ್ ಪ್ರತಿಯನ್ನು ನೀಡಿದ.ಅದರಲ್ಲಿ ಸುಮಾರು 8 ಅಂಶಗಳಿದ್ದವು.ಆತ ಹೇಳಿದ,ನಮಗೆ ಈ ಶೈಕ್ಷಣಿಕ ವರ್ಷದಲ್ಲಿ ಅಧ್ಯಾಪಕರಿಂದ ಅನ್ಯಾಯವಾಗಿದೆ..... . ಆದರೆ ಆ 8 ಅಂಶಗಳಲ್ಲಿ ಪಾಠ-ಪ್ರವಚನಗಳ ಬಗ್ಗೆ ನೋಡಿದರೆ ಕಾಣಿಸಿದ್ದು ಕೇವಲ ಒಂದು ಮಾತ್ರಾ..!?. ಹಾಗಾದರೆ ಏನು ವಿಷಯ..?. ನಿಮಗೆ ಕುತೂಹಲವಿದ್ದರೆ ಇದನ್ನು ಓದಿ ನಂತರ ಅದರ ಕೆಳಗೆ ಓದಿ....

* ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಖಾಯಂ ಪ್ರಾಂಶುಪಾಲರಾಗಿದ್ದರೂ ವಾರದಲ್ಲಿ 2 ದಿವಸ ಮಾತ್ರಾ ಇಲ್ಲಿ ಕೆಲಸ ಮಾಡುತ್ತಾರೆ.

*ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾದ ಕೂಸಪ್ಪ ಇವರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಬೇಕಿದ್ದು ಕೇವಲ 2 ದಿವಸ ಕೆಲಸ ಮಾಡುತ್ತಾರೆ.

* ಈ ಶೈಕ್ಷಣಿಕ ವರ್ಷ ಫೆಬ್ರವರಿ 25 ಕ್ಕೆ ಮುಗಿಯಲಿದ್ದು ಯಾವುದೇ ಪಾಠ-ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಮುಗಿಸದೆ 15 ದಿವಸ ಮುಂಚಿತವಾಗಿ ತರಗತಿ ಕೊನೆಗೊಳಿಸಿದ್ದಾರೆ.

*ಈ ವರುಷ ಶಾಲಾ ಕ್ಯಾಲೆಂಡರ್ ಗೆ ಎಂದು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಕ್ಯಾಲೆಂಡರ್ ಕೂಡಾ ಕೊಡದೇ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.

*ಪ್ರೌಡಶಾಲಾ ವಿಭಾಗದ ಶಿಕ್ಷಕರಾದ ನೀಲಪ್ಪ ಇವರು ಸ್ವಾತಂತ್ರ್ಯ ದಿನಾಚರಣೆಗೆ ವಿದ್ಯಾರ್ಥಿಗಳಿಂದ ತಲಾ 30 (500 ವಿದ್ಯಾರ್ಥಿ) ಸಂಗ್ರಹಿಸಿ ಕೇವಲ ಒಂದು ಲಾಡು ಕೊಟ್ಟು ಹಣ ನುಂಗಿ ಹಾಕಿರುತ್ತಾರೆ.

* ಪ್ರೌಡಶಾಲಾ ಶಿಕ್ಷಕ ನೀಲಪ್ಪ ಕಾಲೇಜಿನ ವಿಚಾರದಲ್ಲಿ ಮೂಗು ತೂರಿಸಿಕೊಂಡು ವಿದ್ಯಾರ್ಥಿಗಳಿಗೆ ಸದಾ ಬೈಯುವ ಕಾಯಕ ವಿದ್ಯಾರ್ಥಿನಿಯರ ಜೊತೆ ಮೈಮುಟ್ಟಿ ಮಾತನಾಡುವ ಕಾಮುಕ.

*ನಮ್ಮ ಕಾಲೇಜಿಗೆ ಕನ್ನಡ ಪಠ್ಯ ವಿಷಯಕ್ಕೆ ಸ್ವ ಇಚ್ಚೆಯಿಂದ ಬಂದ ಗೌರವ ಶಿಕ್ಷಕಿಯನ್ನು ನೀಲಪ್ಪ ಮಾಸ್ಟರ್ ಬೆದರಿಸಿ ಹಿಂದಕ್ಕೆ ಕಳುಹಿಸಿದ್ದಾರೆ.

* ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಭಾರತಿಯವರು ಕ್ಲಾಸಿನಲ್ಲಿ ಪ್ರವಚನಕ್ಕಿಂತ ಬೈಗುಳ ಸುರಿಮಳೆ ಸುರಿಸುತ್ತಾರೆ.

ಇದು ವಿದ್ಯಾರ್ಥಿಗಳ ಅನ್ಯಾದ ಪಟ್ಟಿ...!?.

ಈಗ ಈ ವಿವಾದ ಬರಲು ಕಾರಣವೇನು ಗೊತ್ತಾ ... ಅದನ್ನು ವಿದ್ಯಾರ್ಥಿಗಳು ವಿವರಿಸುವುದು ಹೀಗೆ...

ಈ ಶೈಕ್ಷಣಿಕ ವರ್ಷದಲ್ಲಿ ಇಷ್ಟೆಲ್ಲಾ ಅನ್ಯಾಯಗಳನ್ನು ಸಹಿಸಿಕೊಂಡ ನಾವು ಶೈಕ್ಷಣಿಕ ವರ್ಷದ ಬೇಡಿಕೆಯಾದ ಶಾಲಾ ವಾರ್ಷಿಕೋತ್ಸವ ,ಕ್ರೀಡೋತ್ಸವ ಮಾಡದೇ ನಮ್ಮ ಕೊನೆಯ ಬೇಡಿಕೆಯಾದ ಬೀಳ್ಕೊಡುಗೆ ಸಮಾರಂಭ ಮತ್ತು ಫೋಟೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಬೇಡಿಕೊಂಡೆವು ಅದನ್ನು ಮಾಡದೇ ನಮ್ಮನ್ನು ಕೆಟ್ಟ ರೀತಿಯಲ್ಲಿ ಬೈದು ಮನೆಗೆ ಅಟ್ಟಿದರು.ಹಾಗಾಗಿ ಈಗ ಪ್ರಾಂಶುಪಾಲರು ,ಉಪನ್ಯಾಸಕ ಕೂಸಪ್ಪ ,ಹಾಗೂ ಅಧ್ಯಾಪಕ ನೀಲಪ್ಪ ಇವರ ಧೋರಣೆ ವಿರುದ್ದ ನಮ್ಮ ಪ್ರತಿಭಟನೆ ಎನ್ನುವ ವಿದ್ಯಾರ್ಥಿಗಳು ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ.

ಇದಿಷ್ಟು ವಿದ್ಯಾರ್ಥಿಗಳ ಆರೋಪ.... ಅವರಿಗಾದ ಅನ್ಯಾಯ...!?.

ಈ ಬಗ್ಗೆ ಕಾಲೇಜನ್ನು ಕೇಳಿದರೆ ಯಥಾಪ್ರಕಾರ ವಿದ್ಯಾರ್ಥಿಗಳ ಮೇಲೇಯೇ ಆರೋಪ.ಅದು ಸರಿ ಬಿಡಿ ಎಲ್ಲೆಡೆಯೂ ಹಾಗೆ.ನಮ್ಮ ತಪ್ಪನ್ನು ನಾವು ಹೇಳುತ್ತೇವಾ...? ಹೇಳಿದ್ದುಂಟಾ...?

ಇಲ್ಲಿನ ಸಂಗತಿಗಳನ್ನು ಗಮನಿಸಿದರೆ,ವಿದ್ಯಾರ್ಥಿಗಳಿಗೆ ಅನ್ಯಾಯವಾದ ಸಂಗತಿಗಳಲ್ಲಿ ಗಂಭೀರವಾದದ್ದು ಕಾಣಿಸುವುದಿಲ್ಲ.ಆದರೂ ಏಕೆ ಪ್ರತಿಭಟನೆ.ಅದು ಏಕೆ ಗೊತ್ತಾ?. ಅಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳನ್ನು ಹಾಗೆ ಬೆಳೆಸಿದ್ದಾರೆ.ಗುರುವಿನ ಮಾರ್ಗದರ್ಶನ ಹೇಗಿರುತ್ತೋ ಹಾಗೇ ಅಲ್ವೇ ವಿದ್ಯಾರ್ಥಿಗಳು ಬೆಳೆಯೋದು.ನನಗೆ ಆತ್ಮೀಯರಾದ ಒಂದಿಬ್ಬರು ಉಪನ್ಯಾಸಕರಿದ್ದಾರೆ.ಅವರು ಗುತ್ತಿಗಾರಿನಲ್ಲಿ ಅಲ್ಲ.ಅದು ಪುಣ್ಯ. ಆ ಉಪನ್ಯಾಸಕರಿಗೆ ಇಂದಿಗೂ ವಿದ್ಯಾರ್ಥಿಗಳು ಎಂತಹ ಗೌರವ ನೀಡುತ್ತಾರೆ. ಒಬ್ಬ ವಿದ್ಯಾರ್ಥಿ ಅವರ ಬಗ್ಗೆ ಹೇಳುತ್ತಾನೆ, ಅವರು ನಿಜವಾದ "ಗುರುಗಳು"..! . ಅಂದರೆ ಅವರು ಪಾಠದ ಜೊತೆಗೆ ಇತರ ವಿಷಯಗಳ ,ತಮ್ಮ ಅನುಭವಗಳನ್ನು ಹೇಳುತ್ತಾರೆ.ಅದು ಸರಿಯಾಗೂ ಇರುತ್ತದೆ.ವಿದ್ಯಾರ್ಥಿಗಳಿಗೆ ಅದು ದಾರಿ ದೀಪವಾಗುತ್ತದೆ.

ಆದರೆ ಇಲ್ಲಿ ಹಾಗಲ್ಲ.ಅದಕ್ಕಾಗೆ ಗುತ್ತಿಗಾರಿನಲ್ಲಿ ಅಧ್ಯಾಪಕರ ವಿರುದ್ದವೇ ಪ್ರತಿಭಟನೆ.

ನಿಜವಾಗಲೂ ವಿದ್ಯಾರ್ಥಿಗಳು ಗಮನಿಸಬೇಕು.2 ವರ್ಷ ಪಾಠ ಹೇಳಿದ(ಅವರು ಮಾರ್ಗದರ್ಶನ ಮಾಡಿರದೇ ಇರಲಿ) ಗುರುಗಳನ್ನು ಹಾಗೆ ಬೀದಿ ಬದಿಯಲ್ಲಿ ಧಿಕ್ಕಾರ ಕೂಗುವುದು,ಏಕವಚನದಲ್ಲಿ ಕೂಗುವುದು ನಮ್ಮ ಸಂಸ್ಕೃತಿಯಲ್ಲ.ಅಧ್ಯಾಪಕರು ಸಂಸ್ಕೃತಿಯ ಪಾಠ ಮಾಡದೇ ಇರಲಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾಗಲೂ ಒಂದು 10 ವರ್ಷದ ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಎಂತಹ ಅಜಗಜಾಂತರ...!? ಅಂದು ಗುರುವಿಗೆ ಕಲಿಸಬೇಕೆನ್ನುವ ಮನಸ್ಸಿತ್ತು. ಇಂದು ಹಣ ಮಾಡಬೇಕೆನ್ನುವ ಮನಸ್ಸಿದೆ....! ಹಾಗಾಗಿ ಈಗ ಆತಂಕವಾಗುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎತ್ತೆ ಸಾಗುತ್ತಿದೆ, ಏನಾಗುತ್ತಿದೆ.ಇದಕ್ಕೆ ಕಾರಣರಾರು..?.ಇದಕ್ಕೇನು ಪರಿಹಾರ..?.ವಿದ್ಯಾರ್ಥಿಗಳ ಇಂದಿನ ಮನಸ್ಥಿತಿಯೇ....? ಸಮಾಜವಾ....?.ಉತ್ತರ ಮಾತ್ರಾ ಸಿಗುತ್ತಿಲ್ಲ...!.

ಕೊನೆಯ ಮಾತು : ಒಂದು ಸಂಸ್ಥೆಯ ಒಳಗಿನ ಗುಟ್ಟು ಗೊತ್ತಾಗುವುದು ಹೇಗೆ?.ಅಲ್ಲಿನ ಸಿಬ್ಬಂದಿಗಳೊಳಗೆ ಅಸಮಾಧಾನವಿದ್ದಾಗ ಮಾತ್ರಾ ತಾನೆ?.ಅದು ಶಿಕ್ಷಣ ಸಂಸ್ಥೆಗಳಲ್ಲೂ ಕಂಡುಬಂದರೆ ... ವ್ಯಕ್ತವಾಗುವುದು ವಿದ್ಯಾರ್ಥಿಗಳ ಮೂಲಕ ತಾನೆ..?. ಅದನ್ನೇ ವಿದ್ಯಾರ್ಥಿಗಳೂ ಮಾಡುವುದಲ್ಲವೇ. ಗುತ್ತಿಗಾರಿನ ಪ್ರತಿಭಟನೆಯಲ್ಲಿ ಸ್ವಲ್ಪ ಆ ಅಂಶವೂ ಕಂಡುಬಂತು.ಆದರೆ ಕ್ಲಾಸಿನಲ್ಲಿದ್ದ 58 ವಿದ್ಯಾರ್ಥಿಗಳ ಪೈಕಿ ಪ್ರತಿಭಟನೆಯಲ್ಲಿದ್ದದ್ದು ಕೇವಲ 18 ಮಂದಿ ಮಾತ್ರಾ..? ಹುಡುಗಿಯರಾರೂ ಇರಲಿಲ್ಲ..! ಈ 18 ಮಂದಿಗೆ ಮಾತ್ರಾ ಅನ್ಯಾಯವಾದದ್ದಾ.... ಅಂತ ಒಂದು ಅನುಮಾನ..

11 ಫೆಬ್ರವರಿ 2008

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ....



ಈಶ್ವರಪ್ಪ ಕುಟುಂಬ..



ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರದಂದು ಕುಟುಂಬ ಸಮೇತರಾಗಿ ಭೇಟಿ ನೀಡಿದರು.ಇದೇ ವೇಳೆ ಅವರು ದೇವಳದಲ್ಲಿ ಆಶ್ಲೇಷ ಬಲಿ ಸೇವೆ ಹಾಗೂ ತಮ್ಮ ಮೊಮ್ಮಗನಿಗೆ ನಾಣ್ಯದ ತುಲಾಭಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ನಾನು ಈಶ್ವರಪ್ಪನವರಲ್ಲಿ ಮಾತನಾಡಿದೆ.ವಿವಾದಗಳು ,ಭಿನ್ನಮತಗಳ ಬಗ್ಗೆ ಮಾತನಾಡಲಿಲ್ಲ ಅಷ್ಟು ಸಮಯ ಇದ್ದಿರಲಿಲ್ಲ ನನಗೂ ತುರ್ತು.. ಅವರಿಗೂ ಹಾಗೆ..,ಅವರಲ್ಲಿ ಕೇಳಿದ್ದು ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ.ಅವರ ತುರ್ತಿನ ನಡುವೆ ಕೇವಲ ಒಂದೆರಡು ನಿಮಿಷಗಳ ಕಾಲ ಮಾತ್ರಾ ಮಾತಿಗೆ ಸಿಕ್ಕರು.ಅದರ ಸಾರಾಂಶ ಇಷ್ಟು...

* ಚುನಾವಣೆಗೆ ಮುನ್ನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಆಗ್ರಹ

* ಮರುವಿಂಗಡಣೆಯಾದರೆ ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೂ ಪ್ರಾತಿನಿಧ್ಯ ದೊರೆಯುತ್ತದೆ

*ಕೇಂದ್ರ ಸಚಿವ ಸಂಪುಟದಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳದೆ ವಿಳಂಬ ಏಕೆ?

* ಕ್ಷೇತ್ರ ಮರುವಿಂಗಡಣೆ ವಿಳಂಬಕ್ಕೆ ಕಾಂಗ್ರೇಸ್ ಕಾರಣ

*ಚುನಾವಣೆ ಮುಂದೂಡಿಕೆಗೆ ಕಾಂಗ್ರೇಸ್ ಈ ತಂತ್ರ ಅನುಸರಿಸುತ್ತಿದೆ

* ಚುನಾವಣೆ ವಿಳಂಬದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತ

* ಹಾಗಾಗಿ ಕೇಂದ್ರವು ತಕ್ಷಣವೇ ಕ್ಷೇತ್ರ ಮರುವಿಂಗಡಣೆಗೆ ಕ್ರಮ, ಸಚಿವ ಸಂಪುಟದಲ್ಲಿ ತೀರ್ಮಾನ ಮತ್ತು ನಿರ್ಣಯ ತೆಗೆದುಕೊಳ್ಳಲು ಒತ್ತಾಯ

* ಒಟ್ಟಿನಲ್ಲಿ ಚುನಾವಣೆ ವಿಳಂಬ ಸಲ್ಲದು

ಕೊನೆಯ ಮಾತು : ಸುಬ್ರಹ್ಮಣ್ಯದಲ್ಲಿ ಕೆ.ಎಸ್.ಈಶ್ವರಪ್ಪನವರು ದೇವಳದ ಒಳಾಂಗಣಕ್ಕೆ ಹೋಗಿ ಸಂಕಲ್ಪ ಮಾಡಿಸಿ
ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ಭೇಟಿ ನೀಡಿದ ಬಳಿಕ ಹೊರಬಂದು ಅಲ್ಲಿ ಸುಮ್ಮನೆ ನಿಂತಿದ್ದರು.ಒಬ್ಬ ಯಾತ್ರಾರ್ಥಿ ಬಂದು "ಸರ್ ನೀವು ಫಿಲ್ಮ್
ಇಂಡಸ್ಟ್ರಿಯವರಾ"ಅಂತ ಪ್ರಶ್ನಿಸಿದ.ಆಗ ಈಶ್ವರಪ್ಪನವರು "ಅಲ್ಲ ನಾನು ಎಕ್ಸ್ ಮಿನಿಸ್ಟ್ರು ಕಣಯ್ಯಾ.."ಅಂದರು.ಜೊತೆಗೆ ಇದ್ದವರು "ಮಾಜಿ ಮಂತ್ರಿಗಳು.."ಅಂದರು.ಆ ಯಾತ್ರಾರ್ಥಿ ಏಕೆ ಹಾಗೆ ಪ್ರಶ್ನಿಸಿದನೋ ಗೊತ್ತಿಲ್ಲ.ನನಗಂತೂ ಆಗ ಅನ್ನಿಸಿತು ನಮ್ಮ ರಾಜಕೀಯ ಈಗ ನಿಜಕ್ಕೂ ಹಾಗೇ
ಅಲ್ವಾ..? ಮೊನ್ನೆ ಮೊನ್ನೆ ಹಾಗೇ ಅನ್ಸಿತ್ತು..!.ಅದೊಂದು ಫಿಲ್ಮ್ ಇಂಡಸ್ಟ್ರೀ ತರವೇ. ದುಡ್ಡು ಹಾಕಿದ್ದನ್ನು ತೆಗೆಯುದು ಅಷ್ಟೇ..! ಇನ್ನೊಂದು ಅಂಶ ಅಂದರೆ ನಮ್ಮ ರಾಜಕೀಯದ ಮಂದಿಯನ್ನು ಜನ ಅಧಿಕಾರದ ನಂತರ ಮರೆಯುತ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿ ಬೇಕಾ..?.

10 ಫೆಬ್ರವರಿ 2008

ತುಳುನಾಡಿನಲ್ಲೀಗ "ಕೆಡ್ಡಸ"ದ ನೆನಪುಗಳು...

ಕೆಡ್ಡಸದ ಮಹತ್ವವನ್ನು ಹೇಳುತ್ತಾ ಮನೆ ಮನೆಗೆ ಸಾಗುವ ಭೂತನರ್ತಕ





ತುಳುನಾಡಿನ ಆಚರಣೆಗಳೆಲ್ಲವೂ ವಿಶೇಷ.ಮಳೆಗಾಲದಲ್ಲಿ ಆಟಿಯ ಸೊಬಗು,ಅದರ ವೈಜ್ಞಾನಿಕ ಹಿನ್ನೆಲೆಯು ಅತ್ಯಂತ ಸಕಾಲಿಕವಾಗಿ ಕಂಡುಬಂದರೆ ಈಗ "ಕೆಡ್ಡಸ"ವೂ ಕೂಡಾ ಅಷ್ಟೇ ಮಹತ್ವವನ್ನು ಪಡೆಯುತ್ತದೆ.ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೆಡ್ಡಸ ಆಚರಣೆಯು ನಡೆಯುತ್ತಿದೆ.ಈಗ ಕೆಡ್ಡಸವು ಭಾನುವಾರದಿಂದ ಆರಂಭಗೊಂಡು ೩ ದಿನಗಳ ಕಾಲ ನಡೆಯುತ್ತದೆ.

ಪ್ರತೀ ಬಾರಿಯೂ ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವ ಈ ಆಚರಣೆಯು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಮಹತ್ವ ಪಡೆದಿದೆ.ಜಾನಪದ ಕಲೆಗಳ ತವರೂರು ಎನಿಸಿದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದಿಗೂ ಈ ಆಚರಣೆಗೆ ಅತ್ಯಂತ ಮಹತ್ವವಿದೆ.ಕೆಡ್ಡಸ ಆರಂಭವಾಗುವ ಕೆಲ ದಿನಗಳ ಮೊದಲು ಊರಿನ ಜಾನಪದ ಹಾಗೂ ಭೂತನರ್ತನದ ಪ್ರಮುಖರು ಮನೆ ಮನೆಗೆ ತೆರಳಿ ಕೆಡ್ಡಸದ ಪಾಡ್ಡನವನ್ನು ಹೇಳಿ ಮನೆ ಮಂದಿ ನೀಡುವ ಹುಳಿ-ಮೆಣಸು ಹಾಗೂ ಇನ್ನಿತರ ವಸ್ತುಗಳನ್ನು ಪಡೆಯುತ್ತಾರೆ.ಮನೆಗಳಲ್ಲಿ ಹೇಳುವ ಪಾಡ್ಡನದಲ್ಲಿ ಕೆಡ್ಡಸದಂದು ನಡೆಯುವ ಊರಿನ ಕಟ್ಟುಪಾಡುಗಳನ್ನು ವಿವರಿಸುತ್ತಾರೆ. ಅದರಲ್ಲಿ ಊರಿನ ಭೂತಸ್ಥಾನದ ಬಾಗಿಲು ತೆರೆಯುವುದರಿಂದ ಆರಂಭಿಸಿ ಊರಿನ ಮಂದಿ ಶಿಕಾರಿಗೆ ತೆರಳುವುದು ,೩ ದಿನಗಳ ಕಾಲ ಹಸಿ,ಒಣಗಿದ ಮರಗಳನ್ನು ಮುರಿಯಬಾರದು, ಭೂಮಿ ಅದುರಬಾರದು ಎಂದು ವಿವರಿಸುತ್ತಾರೆ.ಆ ಪ್ರಕಾರ ೩ ದಿನಗಳ ಕಾಲ ಊರಿನ ಮಂದಿ ನಡೆದುಕೊಳ್ಳಬೇಕು ಎನ್ನುವುದು ವಾಡಿಕೆ.

"ಕೆಡ್ಡಸ"ವನ್ನು ಗ್ರಾಮೀಣರು ವಿವರಿಸುವುದು ಹೀಗೆ. ಆ ೩ ದಿನಗಳ ಕಾಲ ಭೂದೇವಿಯು ಋತುಮತಿಯಾಗಿರುತ್ತಾಳೆ.ಅಷ್ಟು ದಿನಗಳ ಕಾಲ ಭೂಮಿಯಲ್ಲಿರುವ ನಾವು ಸದ್ದಿಲ್ಲದೆ ಕುಳಿತುಕೊಳ್ಳಬೇಕು, ಭೂಮಿ ತಾಯಿಗೆ ಅರಶಿನ, ಎಣ್ಣೆ ಹಾಕಬೇಕು... ಎಂದು ಹೇಳುತ್ತಾರೆ.

ಆದರೆ ಈ ಆಚರೆಣೆಯ ಹಿಂದೆ ಒಂದು ತಾತ್ತ್ವಿಕವಾದ ಕಾರಣವಿರಬಹುದು. ವೈಜ್ಞಾನಿಕವಾಗಿ ಯೋಚಿಸಿದರೆ ವರ್ಷವಿಡೀ ಭೂಮಿಯಿಂದ ಲಾಭ ಪಡೆಯುವ ನಾವು ಕನಿಷ್ಟ ೩ ದಿನಗಳ ಕಾಲ ಭೂಮಿಗೆ ಸಮರ್ಪಿಸಬೇಕೆನ್ನುವ ಚಿಂತನೆಯಿರಬಹುದು.ಇನ್ನು ಊರಿನ ಜನತೆ ಶಿಕಾರಿಗೆ ಹೋಗಬೇಕು ಎನ್ನುವ ಕಲ್ಪನೆಯ ಹಿಂದೆ ನೋಡಿದರೆ ಕೃಷಿಗೆ ಹಾನಿಮಾಡುವ ಕಾಡು ಪ್ರಾಣಿಗಳನ್ನು ವರ್ಷಕ್ಕೊಂದು ಬಾರಿ ಇಡೀ ಊರೇ ಒಟ್ಟಾಗಿ ಕಾಡು ಪ್ರಾಣಿಯ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶವಿದ್ದಿರಬಹುದು.ಏಕೆಂದರೆ ಈಗಿನಂತೆ ತಾಂತ್ರಿಕ ಬೇಲಿಗಳು ಅಂದು ಇದ್ದಿರಲಿಲ್ಲ.ಇಂದು ಕಾಡು ಪ್ರಾಣಿಗಳು ತೀರಾ ವಿರಳವಾದ್ದರಿಂದ ಶಿಕಾರಿಯ ಮಾತು ಬರುವುದಿಲ್ಲ.

ಇಂತಹ ಆಚರಣೆಗಳು ಸಾಂಘಿಕ ಕಾರ್ಯಕ್ರಮಗಳು ಇಡೀ ಊರಿನ ಸಾಮರಸ್ಯಕ್ಕೆ ಕಾರಣವಾಗುತ್ತಿದ್ದವು.ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬನೂ ತುರ್ತಿನಲ್ಲಿರುವ ಕಾರಣ ಕೆಡ್ಡಸದಂತಹ ಸಾಂಘಿಕ ಆಚರೆಣೆಗಳು ನೆಲೆ ಕಳೆದುಕೊಳ್ಳುತ್ತಿವೆ.ಆದರೆ ಅಂತಹ ಆಚರಣೆಗಳನ್ನು ಮಾತ್ರವಲ್ಲ ಜಾನಪದೀಯ ಕಲೆಗಳನ್ನು ಇಂದಿಗೂ ಮೊಗ್ರದಂತಹ ಊರಿನಲ್ಲಿ ಬೆಳೆಸಿಕೊಂಡುಬಂದಿರುವುದು ನಿಜಕ್ಕೂ ಶ್ಲಾಘನೀಯ.