09 ಫೆಬ್ರವರಿ 2008

ಸಿಟಿ ಅಂದ್ರೆನೇ ತಲೆ ನೋವು... ಟ್ರಾಫಿಕ್ ಅಂದ್ರೆ ಇನ್ನಷ್ಟು....



ಮಿತ್ರ ವಿನಾಯಕ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದ.

ಬೆಂಗಳೂರಿಗೆ ಉದ್ಯೋಗಕ್ಕಾಗಿ ತೆರಳಿದ 6 ತಿಂಗಳ ಬಳಿಕ ಮನೆಗೆ ಬಂದಿದ್ದ.ಹಿಂದಿನ ಸ್ನೇಹವನ್ನು ಆತ ಮರೆತಿರಲಿಲ್ಲ. ಹೇಗಿದ್ರೂ "ನಮ್ಮೂರ" ಹುಡುಗ ಅಲ್ವಾ ಬೆಂಗಳೂರಿಗೆ ಹೋದ ಮೇಳೆ ಆತನ ಹಾವ-ಭಾವ,ಮಾತಿನ ಶೈಲಿ ಬದಲಾಗಿರಲಿಲ್ಲ.ಹಾಗಾಗಿ ಕೊಂಚ ನೆಮ್ಮದಿಯಾಯಿತು.ಸುಮ್ಮನೆ ಕೇಳಿದೆ ಹೇಗಿದೆ ಕೆಲ್ಸ,ಹೇಗಿದೆ ಬೆಂಗ್ಳೂರು?.ಅಷ್ಟೇ ಪ್ರಾಮಾಣಿಕವಾಗಿ ವಿನಾಯಕ ಹೇಳಿದ " ಬೇಡ ಮಾರಾಯ.ಸಾಕಗಿ ಹೋಯ್ತು.ದಿನವಿಡೀ ಕೆಲ್ಸ್ ಕೆಲ್ಸ್..ಫ್ರೆಂಡ್ಸ್ ಗಳೊದಿಗೆ ಒಂದಿಷ್ಟು ಮಾತಾಡೋಕು ಸಮಯವಿಲ್ಲ.ರಾತ್ರಿ ಹಗಲೆನ್ನದೆ ಕೆಲಸ.ಒಂದು ರೀತಿಯಲ್ಲಿ ನಗರದ ಜನರಿಗೆ ಹಗಲು ರಾತ್ರಿಯ ವ್ಯತ್ಯಾಸವೇ ಗೊತ್ತಿಲ್ಲ.ಒಂದೊಂದು ಪ್ರದೇಶದಲ್ಲಿ ಮಧ್ಯರಾತ್ರಿಯೂ ಹಗಲು ವೇಳೆ ಇದ್ದಷ್ಟೇ ಜನ ಇರುತ್ತಾರೆ.ನನಗಂತೂ ನೆಮ್ಮದಿಯೇ ಇಲ್ಲವಾಗಿದೆ.ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿ ಶುದ್ದ ಗಾಳಿ,ಮನಸ್ಸುಗಳ ಕೊರತೆಯಿದೆ,ಮಾತ್ರವಲ್ಲ ಇಲ್ಲಿನಂತೆ ಬೆಳೆಯಲು ಸಾಧ್ಯವಿಲ್ಲ" ಅಂತ ಹೇಳುತ್ತ ನಾನು ಈಗ ಇಲ್ಲಿನ ಶುದ್ದ ಗಾಳಿಯನ್ನು ತುಂಬಾ ಸೇವಿಸಿಕೊಂಡು ಹೋಗುತ್ತೇನೆ ಎಂದು ವಿವರಿಸುತ್ತಲೇ ಹೋದ.ಆತನಿಗೆ ಕೇವಲ 6 ತಿಂಗಳಲ್ಲೇ ಹಾಗೆ ಅನ್ನಿಸಲು ಕಾರಣ ಬೇರೆಯೇನಿಲ್ಲ ಚಿಕ್ಕಂದಿನಿಂದಲೂ ಆತ ಬೆಳೆದದ್ದು ಹಳ್ಳಿಯಲ್ಲೇ..!.ಈಗ ಅದರಲ್ಲಿ ಅಚ್ಚರಿಯೇನಿಲ್ಲ ಹಳ್ಳಿಯ ಮಂದಿಗೆ ನಗರಕ್ಕೆ ಹೋದರೆ ಹಾಗೆ ಅನ್ನಿಸದೆ ಇರದು.ಇನ್ನು ಒಂದು ವರ್ಷದಲ್ಲಿ ಆತನೂ ನಗರದ ಬದುಕಿಗೆ "ಹೊಂದಿಕೊಡರೆ" ಆಗಲೂ ಅಚ್ಚರಿಯಿಲ್ಲ.ಈಗ ನನಗನ್ನಿಸುತ್ತದೆ ಇದ್ದುದರಲ್ಲಿ ನಾನು ಧನ್ಯ..!. ಏಕೆ ಗೊತ್ತಾ ನಾನಿನ್ನೂ ಇಲ್ಲೇ ಇದ್ದೇನಲ್ಲಾ..! ಶುದ್ದ ಗಾಳಿ,ಒಂದಿಷ್ಟು ಶುದ್ದ ಜನ,ಶುದ್ದ ಮನಸ್ಸು ಸಿಗುತ್ತಲ್ಲಾ.ಹಣದ ವಿಚಾರ ಬಿಡಿ..

ಇಂದು ನನ್ನಂತಹ ಅನೇಕ ಯುವಕರು ಹಳ್ಳಿಯ ಬೇರನ್ನು ಬಿಟ್ಟು ನಗರದ ಬಳ್ಳಿಯ ಕಡೆಗೆ ಹೋಗುವಾಗ ನಾನು ಇಲ್ಲೇ ಇದ್ದೇನಲ್ಲಾ ಅಂತ ಅನೇಕ ಬಾರಿ ಅನ್ನಿಸಿತ್ತು.ಆರಂಭದಲ್ಲಂತೂ ಹಳ್ಳಿ ಬೇಡ ನಗರವೇ ವಾಸಿ ಎಂದು ಕೆಲಸದ ಹುಡುಕಾಟ ಆರಂಭಿಸಿದ್ದೆ.ಮನಸ್ಸು ತೊಳಲಾಟದಲ್ಲಿತ್ತು.ಒಮ್ಮೆ ಅವಕಾಶವೂ ಸಿಕ್ಕಿತು.ಮತ್ತೆ ಮನಸ್ಸು ಬೇಡ ಎಂದಿತು ಹಳ್ಳಿಯಲ್ಲೇ ಉಳಿದೆ..!

ಈಗ ಹಳ್ಳಿಯ ಕಡೆಗೆ ನೋಡಿದರೆ ಅಲ್ಲಿ ಯುವಕರ ದಂಡೇ ಕಡಿಮೆಯಾಗುತ್ತಿದೆ.ಅಲ್ಲಿ ಮೊದಲಿನ ಆರ್ಭಟದ ಚಟುವಟಿಕೆ ಈಗ ಕಾಣುತ್ತಿಲ್ಲ.ಸಭೆ ಸಮಾರಂಭಗಳಲ್ಲಿ ತಲೆ ಕೂದಲು ಬೆಳ್ಳಗಾದವರೇ ಕಾಣಸಿಗುತ್ತಾರೆ.ಅಂತಹವರ ನಡುವೆ ನನ್ನಂತಹ ಕೆಲ ಹುಡುಗರು ಸಿಗುತ್ತಾರೆ.ಇಂದಿನ ನನ್ನ ಮಿತ್ರರು ಹಳ್ಳಿಯನ್ನು ಬಿಟ್ಟು ನಗರವನ್ನು ಸೇರಲೂ ಕಾರಣವಿದೆ.ಇಲ್ಲಿ ಸೌಲಭ್ಯಗಳಲ್ಲಿ,ಹಣ ಸಂಪಾದನೆಯ ದಾರಿಗಳು ಸುಲಭವಲ್ಲ ಎಂದೆಲ್ಲಾ ಚಿಂತಿಸಿ "ಸುಲಭ"ದ ದಾರಿಯನ್ನು ಅರಸುತ್ತಾರೆ.ಅದಕ್ಕೆ ತಕ್ಕಂತೆ ನಮ್ಮ ಸಮಾಜದಲ್ಲಿ ಅದನ್ನೇ ಮಾತನಾಡುತ್ತಾರೆ.ಇನ್ನು 10 ವರ್ಷಗಳ ನಂತರ ಹೇಗಪ್ಪಾ?.ಹಳ್ಳಿ ಅಂದರೆ ಕಷ್ಟ....! ಹೀಗೇ ಮಾನಸಿಕವಾಗಿ ನನ್ನ ಮಿತ್ರರನ್ನು ದುರ್ಬಲರಾನ್ನಾಗಿಸುತ್ತಾ ಹೋಗುತ್ತಾರೆ.ಇನ್ನೊಂದು ನೋಡಿ ಒಬ್ಬರು,ನಿನಗೇನು ಕೆಲಸ? ಏನು ಕೃಷಿಯಲ್ಲೇ ಇದ್ದಿ ? ಬೇರೆ ಕೆಲಸ ನೋಡಿಲ್ವಾ.? ಅಂತ ಕೇಳುತ್ತಾರೆ.ಅವರಿಗೆ ನಾನು ಹೇಳುವುದು, ಸ್ವಾಮಿ ಕೃಷಿಯೂ ಒಂದು ಕೆಲಸವೇ. ಆದರೆ ಫಲ ಮಾತ್ರ ಇಂದಿನಿಂದ ನಾಳೆಗಲ್ಲ ವರ್ಷದ ಬಳಿಕ.ಅದನ್ನು ಅರ್ಥ ಮಾಡಿಕೊಳ್ಳಿ.ಕೃಷಿಕ ಎಂದಿಗೂ ನಿರುದ್ಯೋಗಿಯಲ್ಲ ,ಆತ ಸೋಮಾರಿಯೂ ಅಲ್ಲ.ಆತ ನಿಮಗಿಂತ ಭಿನ್ನ.ಆತ "ಸ್ವತಂತ್ರ" ಎಂದು ಛೇಡಿಸುತ್ತೇನೆ.ನನ್ನ ಮಿತ್ರರಿಗೆ ಇಂತಹವರ ಮಾತು ಮನಸ್ಸನ್ನು ನಾಟಿತು ಅವರು ನಗರದ ಹಾದಿ ಹಿಡಿದರು.ತಪ್ಪಿಲ್ಲಾ ಬಿಡಿ ನಮ್ಮ ಸಮಾಜವೇ ಅವರನ್ನು ಹಾಗೆ ಮಾಡಿದ್ದು.

ಆದ್ರೆ ಈಗ ಹಳ್ಳಿ ಬದಲಾಗುತ್ತಿದೆ.ಹಳ್ಳಿ ಅಂದ್ರೆನೇ ನೆಮ್ಮದಿ.ಈಗ ಯಂತ್ರಗಳು ಬಂದಿದೆ,ತಾಂತ್ರಿಕ ವ್ಯವಸ್ಥೆ ಬಲಗೊಡಿದೆ,ಸೌಲಭ್ಯಗಳು ನಗರಕ್ಕಿಂತ ಏನು ಕಮ್ಮಿ ಎನ್ನುವಷ್ಟು ಬರತೊಡಗಿದೆ.ಮನೆಯಿಂದಲೇ ಜಗತ್ತನ್ನು ಅಂತರ್ ಜಾಲದ ಮೂಲಕ ಸುತ್ತಾಡಬಹುದು,ಅಮೇರಿಕಾದ ಮಿತ್ರನಲ್ಲಿ ಚಾಟ್ ಮಾಡಬಹುದು, ಇನ್ನು ಮೊಬೈಲ್,ಟಿವಿ,ಕಾರು ಕಡಿಮೆ ವೆಚ್ಚದಲ್ಲಿ ಲಭ್ಯವಾದರೆ ಬಹುರೂಪಿ ಬಂಗ್ಲೆ.... ಹೀಗೆ ಏನು ಬೇಕು ಎಲ್ಲವೂ ಇಲ್ಲಿ ಈಗ ಲಭ್ಯ.ಅದಕ್ಕಿಂತ ಹೆಚ್ಚು ಮಾನಸಿಕವಾದ ನೆಮ್ಮದಿ,ಕುಟುಂಬದವರೊಂದಿಗಿನ ಒಡನಾಟ... ಮಿತ್ರರೊಂದಿಗಿನ ಓಡಾಟ... ಹರಟೆಗೆ ಸಮಯ... ಶುದ್ದ ಗಾಳಿ... ಮನಸ್ಸುಗಳು... ಇದೆಲ್ಲವೂ ನಗರದಲ್ಲಿ ಸಾಧ್ಯನಾ..? ಹಾಗಾಗಿ ಹಳ್ಳಿ ಅಂದ್ರೆ ಅದೇ ಸ್ವರ್ಗ ಅಂತ ನನ್ನ ಇನ್ನೊಬ್ಬ ಮಿತ್ರ ಹೇಳಿದ್ದು ಹೌದು ಅಂತ ಅನ್ನಿಸಿತು.ಇಲ್ಲಿ ಕೆಲವೊಂದು ತೊಂದರೆಗಳಿವೆ ಬಿಡಿ.ಅದೆಲ್ಲಾ ಏನೂ ಮಹಾ ಅಲ್ಲ.ನಗರದ ಬದುಕು ನೋಡಿದ್ರೆ ಅದು ಸಮಸ್ಯೆಯೇ ಅಲ್ಲ.ಇಲ್ಲಿ 5 ಕಿ ಮೀ ಹೋಗಲು 5 ನಿಮಿಷ ಸಾಕಾದರೆ ನಗರದಲ್ಲಿ ಏನಿಲ್ಲವೆಂದರೂ 30 ನಿಮಿಷ ಗ್ಯಾರಂಟಿ..!.ಅಲ್ಲೆಲ್ಲಾ ಟ್ರಾಫಿಕ್... ಟ್ರಾಫಿಕ್....!.ಅದೂ ಬೇರೆ ತಲೆ ನೋವು.ತುರ್ತಾಗಿ ಹೋಗಲಿದ್ದರೆ ದೇವರೇ ಗತಿ..!ಇನ್ನು ಕರೆಂಟ್ ಕೈ ಕೊಟ್ರೆ ಗೋವಿಂದ ... ನೀರಿಲ್ಲಾಂದ್ರೆ ಶಿವ .. ಶಿವಾ.. ಮೊಬೈಲ್ ಇಲ್ಲಾಂದ್ರೆ ಬದುಕೇ ಇಲ್ಲ..ದಿನಸಿ ,ತರಕಾರಿಗಳ ಬೆಲೆ ಏರಿದ್ರೆ ಅಯ್ಯೋ...! ಹೇಗಿದೆ ಬದುಕು..?.

ನನ್ನ ಮಿತ್ರೆರೇ ಒಂದು ಗಮನಿಸಿ,ನನ್ನ ಪರಿಚಿತರೊರ್ವರು ಬೇಕಾದವರೊಬ್ಬರು ನಗರಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾರೆ.ಈಗ ಅವರು ನೂತನವಾಗಿ ಸ್ಥಳವೊಂದನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ.ಅವರು ನಗರದಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿದ್ದವರು.ಈಗ ಜಾಗ ನೋಡುವುದೆಲ್ಲಿ ಗೊತ್ತಾ.? ಅಚ್ಚರಿಯಾಗಬಹುದು... ಹಳ್ಳಿಯ ಪ್ರಶಾಂತವಾದ ಸ್ಥಳವನ್ನು...!. ಇನ್ನೊಬ್ಬರು ಈಗಾಗಲೇ ಖರೀದಿಸಿದ್ದಾರೆ. ತಿಂಗಳಿಗೊಮ್ಮೆ ಬೆಂಗಳೂರಿನಿಂದ ಬರುತ್ತಿದ್ದಾರೆ.ಈಗ ಅವರು ಹೇಳುವುದು ಏನು ಗೊತ್ತಾ This is permanent asset..!

ಮಿತ್ರರೇ ನಗರದಲ್ಲಿ ಸಂಪಾದಿಸಿ..ಆದರೆ ಹಳ್ಳಿಯ ಸೊಗಡನ್ನು ಮರೆಯಬೇಡಿ.ಮತ್ತೆ ಹಳ್ಳಿಗೇ ಬನ್ನಿ ನೀವು ಕ್ರಿಯಾಶೀಲರಾದರೇ ಹಳ್ಳಿಯಲ್ಲೇ ಚಿಕ್ಕದೊಂದು ಉದ್ಯೋಗವನ್ನೂ ಮಾಡಬಹುದು.ಇಲ್ಲವಾದರೆ ಸಂಘಟನೆಗಳಲ್ಲಿ ದುಡಿಯಬಹುದು ಆ ಮೂಲಕ ನಮ್ಮ ಕೆರಿಯರ್ ರೂಪಿಸಬಹುದು ಅಲ್ವಾ.? ಹಣ ಇರಲಿ.... ನೆಮ್ಮದಿಯೂ ಬೇಕಲ್ವಾ..!

ಮಿತ್ರ ವಿನಾಯಕನನ್ನು ನಾನು ನೆನಪಿಸಿಕೊಂಡದ್ದು ಅವನ ಚಟುವಟಿಕೆಗೆ,ಈಗಲೂ ನನಗೂ ಅವನಿಗಿರುವ ಮಿತ್ರತ್ವದ ಬಗ್ಗೆ ಆತನಿಗೆ ಹಳ್ಳಿಯ ಮೇಲಿರುವ ಪ್ರೀತಿಯ ಬಗ್ಗೆ. ವಿನಾಯಕ ನಗರದಲ್ಲಿದ್ದರೂ ನನ್ನ ಬಗ್ಗೆ ಅಂದರೆ ಹಳ್ಳಿಯ ಬಗ್ಗೆ ಚಿಂತಿಸುತ್ತಾನಲ್ಲ ನನಗೆ ಅದು ಖುಶಿ ಕೊಟ್ಟಿತು. ವಿನಾಯಕ ನನ್ನನ್ನು ಮತ್ತೆ ಮತ್ತೆ ನೆನಪಿಸಿದೆಯಲ್ಲಾ Hatsoff And also Good luck.

08 ಫೆಬ್ರವರಿ 2008

ಲೋವೋಲ್ಟೇಜ್...... ಇದು ರೈತರ ಬವಣೆ..

ಸುಳ್ಯ ಎಇಇಯವರೊಂದಿಗೆ ಭಾರತೀಯ ಕಿಸಾನ್ ಸಂಘದ ಸದಸ್ಯರು





ಮೆಸ್ಕಾಂ ವ್ಯಾಪ್ತಿಯ ದ.ಕ.ಜಿಲ್ಲೆಯ ಬಹುತೇಕ ರೈತರಿಗೆ ವಿವಿಧ ಸಮಸ್ಯೆಗಳ ನಡುವೆ ಈಗ ಲೋವೋಲ್ಟೇಜ್ ಸಮಸ್ಯೆ ಕಾಡತೊಡಗಿದೆ.ಹಲವು ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಅಪ್ರಯೋಜನವಾಗಿದೆ.ಇದು ಕಳೆದ ಹತ್ತಾರು ವರ್ಷಗಳ ಸಮಸ್ಯೆ.ಈಗ ಈ ಸಮಸ್ಯೆ ಶಾಶ್ವತವೋ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ 4 ಜಿಲ್ಲೆಗಳು ಒಳಗೊಂಡಿದೆ.ಒಟ್ಟು 26322 ಚದರ ಮೀಟರ್ ಜನರಿಗೆ ಪ್ರಯೋಜನವಾಗಿದ್ದು 2 ವೃತ್ತಗಳಲ್ಲಿ 7 ವಿಭಾಗಗಳಿದ್ದು 35 ಉಪವಿಭಾಗಗಳಿವೆ.ಒಟ್ಟು 15,30,054 ಗ್ರಾಹಕರಿದ್ದಾರೆ.ಅದರಲ್ಲಿ 10,38,534 ಗೃಹಬಳಕ 1,39,794 ವಾಣಿಜ್ಯ,1,81,440ಪಂಪುಸೆಟ್ಟು, 17,417 ಇಂಡಸ್ಟ್ರೀ,11,174 ಬೀದಿದೀಪಗಳು ಸೇರುತ್ತವೆ.2006-07ರಲ್ಲಿ 78,69,889 ಲಕ್ಷ ರೂ ಆದಾಯವು ಮೆಸ್ಕಾಂಗೆ ಬಂದಿರುತ್ತದೆ.ಆದರೂ ವ್ಯವಸ್ಥೆ ಸರಿಯಾಗಿಲ್ಲ..!.

ಸದ್ಯ ಪುತ್ತೂರು ಹಾಗು ಸುಳ್ಯ ತಾಲೂಕಿನ ಸಮಸ್ಯೆಯ ಕಡೆಗೆ ನಾನು ಯೋಚಿಸುತ್ತೇನೆ.ಹಾಗೆಂದು ಇತರ ತಾಲೂಕುಗಳಲ್ಲಿ ಸಮಸ್ಯೆ ಇಲ್ಲ ಎಂದೇನಲ್ಲ.ಸುಳ್ಯವು ನನ್ನ ತಾಲೂಕು ಕೇಂದ್ರ,ಪುತ್ತೂರು ತೀರಾ ಪರಿಚಿತ ಪ್ರದೇಶ.

ಪುತ್ತೂರು ತಾಲೂಕಿನ ಉಪವಿಭಾಗದಲ್ಲಿ 15 ಸಾವಿರ ಪಂಪ್ ಸೆಟ್ಟುಗಳು ಕಾರ್ಯನಿರ್ವಹಿಸಿದರೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಗೃಹಬಳಕೆಯ ಸಂಪರ್ಕಗಳಿವೆ.ಇದರಿಂದ ಮುಂದೆ ಬಂದರೆ ಸುಳ್ಯ ತಾಲೂಕು.ಇಲ್ಲಿ ಸುಮಾರು 7 ಸಾವಿರ ಪಂಪ್ ಸೆಟ್ಟುಗಳು ,ಸುಮಾರು 18 ಸಾವಿರ ಗೃಹಬಳಕೆಯ ಸಂಪರ್ಕಗಳಿವೆ.ಆದರೆ ಇಲ್ಲಿನ ಯಾವುದೇ ಕೃಷಿಕರಿಗೆ ತೋಟಗಳಿಗೆ ನೀರುಣಿಸಲಾಗದೇ ಪರಿತಪಿಸಬೇಕಾಗಿದೆ.ಕಾರಣ ಲೋವೋಲ್ಟೇಜ್. ಅಂದರೆ ಒಂದು ತಂತಿಯಲ್ಲಿ 230 ವೋಲ್ಟೇಜ್ ಇರಬೇಕಾದಲ್ಲಿ ಕೇವಲ 90 ಅಥವಾ ಅದಕ್ಕಿಂತ ಕಡಿಮೆಯೇ...!. ಹಾಗಾದರೆ ಎಂತಹ ಪರಿಸ್ಥಿತಿ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ.!?.

ಹಾಗೆಂದು ಈ ಸಮಸ್ಯೆ ಮೆಸ್ಕಾಂಗೆ ಗೊತ್ತಿಲ್ಲ ಎಂದೇನಲ್ಲ.ತಿಳಿದಿದ್ದರೂ ಸುಮ್ಮನಿರುತ್ತದೆ.ಹೋಗಿ ಕೇಳಿದರೆ ಹೌದು..ಹೌದು .. ಅದು ಕೆಪಿಟಿಸಿಎಲ್ ನವರಿಂದ ಸಮಸ್ಯೆಯಾಗುತ್ತಿರುವುದು ಎಂದು ನಮ್ಮಲೇ ಗೋಗರೆಯುತ್ತಾರೆ..!ಆದರೆ ಇವರಿಗೂ ಜವಾಬ್ದಾರಿ ಇದೆ ಎನ್ನುವ ಕನಿಷ್ಟ ತಿಳುವಳಿಕೆಯೂ ಇಲ್ಲ ಎನ್ನುವುದು ಅವರ ಬಂಡವಾಳವನ್ನು ತೋರಿಸುತ್ತದೆ.

ಕೃಷಿಕರದ್ದೇ ಸಂಘಟನೆಯಾದ ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಘಟಕವು ಗುರುವಾರದಂದು ಸುಳ್ಯದ ಮೆಸ್ಕಾಂ ಕಚೇರಿಗೆ ನಿಯೋಗದೊಂದಿಗೆ ತೆರಳಿ ಸುಮಾರು 10 ಅಂಶಗಳನ್ನು ಮುಂದಿಟ್ಟು ಎಇಇ ಶಿವಕುಮಾರ್ ಅವರೊಂದಿಗೆ ಚರ್ಚಿಸಿತು.ಆಗ ಅವರದು ಭರವಸೆ... ಹಾಗೆ ಮಾಡುತ್ತೇವೆ... ಹೀಗೆ ಅದು ಸಮಸ್ಯೆ.... ಅದು ಕೆಪಿಟಿಸಿಎಲ್ ಅವರ ಸಮಸ್ಯೆ.... ಮೇಲಾಧಿಕಾರಿಯನ್ನು ಕೇಳುತ್ತೇನೆ... ಎನ್ನುವ ಉತ್ತರ ಬಿಟ್ಟರೆ ಖಡಾಖಂಡಿತ ಉತ್ತರ ಸಿಗಲೇ ಇಲ್ಲ.ಇನ್ನೊಂದು ವಿಷಯ ಎಂದರೆ ಎಇಇಯವರು ಹೊಸಬರಾದ್ದರಿಂದ ಅವರಲ್ಲಿ ಅನುಭವದ ಕೊರತೆ ಕಂಡುಬಂದಿತ್ತು.ಆದರೆ ಭರವಸೆಗೆ ಕೊರತೆ ಇರಲಿಲ್ಲ..!

ಭಾರತೀಯ ಕಿಸಾನ್ ಸಂಘದ ಸುಳ್ಯ ಘಟಕ ಎಇಇ ಮುಂದಿಟ್ಟ ಅಂಶಗಳು ಇವು..

* ನೀರಾವರಿ ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ಲೋವೋಲ್ಟೇಜ್ ನಲ್ಲಿರುತ್ತದೆ.

*ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ನಲ್ಲಿ ನಿರಂತರತೆ ಇರುವುದಿಲ್ಲ

*ಸಾಯಂಕಾಲ 6 ರಿಂದ 10 ಗಂಟೆಯೊಳಗೆ ಅನಿಯಮಿತ ವಿದ್ಯುತ್ ಕಡಿತ

*ಕೃಷಿಕರಿಗೆ ಪಂಪ್ ಸೆಟ್ಟುಗಳಿಗೆ ಪ್ರತಿದಿನ 12 ಗಂಟೆ ವಿದ್ಯುತ್

*ತಾಲೂಕಿಗೆ ಹಲವೆಡೆ ಹಗಲು ಕೇವಲ 4 ಗಂಟೆ ಮಾತ್ರಾ ವಿದ್ಯುತ್ ಪೂರೈಕೆಯಾಗುತ್ತದೆ.

ಈ ಸಮಸ್ಯೆಗಳಿಂದ ಅನುಭವಿಸುವ 10 ತೊಂದರೆಗಳನ್ನು ತಿಳಿಸಲಾಯಿತು.

ಭಾರತೀಯ ಕಿಸಾನ್ ಸಂಘವು ಇಷ್ಟೆಲ್ಲಾ ಪ್ರಯತ್ನ ನಡೆಸುತ್ತಿರುವಾಗ ರೈತರ ಬಗ್ಗೆ ಮಾತನಾಡುವ ನಮ್ಮ ಜನಪ್ರತಿನಿಧಿಗಳು ವಿದ್ಯುತ್ ಸಮಸ್ಯೆಯ ಬಗ್ಗೆ ತುಟಿಬಿಚ್ಚಿಲ್ಲ.ಅವರು ಏನಿದ್ದರೂ ಉಚಿತ ವಿದ್ಯುತ್ ನೀಡುವ ಯೋಚನೆಯಲ್ಲಿದ್ದಾರೆ.ಇಂತಹ ಲೋವೋಲ್ಟೇಜ್ ಸಮಸ್ಯೆಗಳ ನಡುವೆಯೇ ಉಚಿತ ವಿದ್ಯುತ್ ಬಗ್ಗೆ ರೈತರು ಕನಸು ಕಾಣಬಹುದೇ..? ಈಗಿನ ಪರಿಸ್ಥಿತಿಯಲ್ಲಿ ಉಚಿತ ಬೇಡ ಗುಣಮಟ್ಟದ ವಿದ್ಯುತ್ ನೀಡಿದರೆ ಸಾಕು..!

ಭಾರತೀಯ ಕಿಸಾನ್ ಸಂಘದ ನಿಯೋಗದಲ್ಲಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಉಪಾದ್ಯಕ್ಷ ಪ್ರಭಾಕರ ರೈ, ಕೋಶಾಧಿಕಾರಿ ಆನಂದ ಗೌಡ, ಜತೆ ಕಾರ್ಯದರ್ಶಿ ಈಶ್ವರ ಭಟ್,ಗುತ್ತಿಗಾರು ಘಟಕದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ,ಕಾರ್ಯದರ್ಶಿ ಕುಮಾರಸ್ವಾಮಿ ಮೇಲ್ತೋಟ , ಎಣ್ಮೂರು ಘಟಕದ ಅಧ್ಯಕ್ಷ ರಮೇಶ್ ಕೋಟೆ ಭಾಗವಹಿಸಿದ್ದರು.

ಕೊನೆಯ ಮಾತು : ಕಿಸಾನ್ ಸಂಘದ ಪ್ರಮುಖರು ಮೆಸ್ಕಾಂ ಎಇಇಯವರಲ್ಲಿ ನೀವು ನಗರಕ್ಕೆ ವಿದ್ಯುತ್ ನಿರಂತರ ಕೊಡುತ್ತೀರಲ್ಲ ರೈತರಿಗೆ ಯಾಕೆ ಸಿಂಗಲ್ ಫೇಸ್ ಕೂಡಾ ಕೊಡುವುದಿಲ್ಲ ಎಂದಾಗ ಹಾಗಲ್ಲ ನಗರದಲ್ಲಿ ರೆವೆನ್ಯೂ ಇರುತ್ತಲ್ಲಾ ಅದಕ್ಕೆ ಕೊಡುತ್ತೇವೆ ಎಂದರು ಎಇಇ. ಹಾಗಾದ್ರೆ ಅದರ ಅರ್ಥ ಏನು ಹಳ್ಳಿಗಳಿಂದ ರೆವೆನ್ಯೂ ಬರೋದಿಲ್ವೇ..?. ಹಾಗೆ ನೋಡಿದ್ರೆ ಅತ್ಯಂತ ಪ್ರಾಮಾಣಿಕವಾಗಿ ರೆವೆನ್ಯೂ ಬರೋದು ಹಳ್ಳಿಗಳಿಂದಲೇ ಸ್ವಾಮಿ..! ಇನ್ನಾದ್ರೂ ಅರ್ಥ ಮಾಡ್ಕೊಳ್ಳಿ..

06 ಫೆಬ್ರವರಿ 2008

ಪುರಂದರೋತ್ಸವದಲ್ಲಿ ಸಂಗೀತ ಸುಧೆ..



ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪುರಂದರೋತ್ಸವದ ಪ್ರಯುಕ್ತ ಗಾನ ಕಲಾಶ್ರೀ ಡಾ.ಸುಕನ್ಯ ಪ್ರಭಾಕರ್ ಮೈಸೂರು ಮತ್ತು ತಂಡದವರಿಂದ ಹರಿದಾಸ ಸಂಕೀರ್ತನೆಯು ನಡೆಯಿತು.

ಆದರೆ ದೊಡ್ಡ ಕಲಾವಿದರೊಬ್ಬರ ಸಂಗೀತವನ್ನು ಆಲಿಸಲು ಸೇರಿದ ಆಸಕ್ತರು ಮಾತ್ರ ವಿರಳವಾಗಿತ್ತು.ಅದಕ್ಕೆ ಪ್ರಚಾರದ ಕೊರತೆಯೇ ಮುಖ್ಯ ಕಾರಣವಾಗಿತ್ತು.ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು.ಸುಮಾರು 2 ಗಂಟೆಗಳ ಕಾಲ ಸಂಗೀತ ಲೋಕದಲ್ಲಿ ತೇಲುವಂತೆ ಸುಕನ್ಯಾ ಪ್ರಭಾಕರ್ ಮಾಡಿದ್ದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಸುಬ್ರಹ್ಮಣ್ಯ ಜೇಸೀಯಿಂದ ಜನೋಪಯೋಗಿ ಕಾರ್ಯಕ್ರಮ...




ಜೇಸೀಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಜೇಸೀ ದಿ.ಕುಮಾರ ನಾಯರ್ ಸ್ಮರಣಾರ್ಥ ನಿರಂತರ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಸಪ್ತಾಹವು ಸುಬ್ರಹ್ಮಣ್ಯದಲ್ಲಿ ನಡೆಯಿತು.

ತರಬೇತಿ ಸಪ್ತಾಹವನ್ನು ಕೃಷಿಕ ಕೆ.ವಿ.ಸುಧೀರ್ ಉಧ್ಘಾಟಿಸಿದರು.ನಂತರದ ದಿನಗಳಲ್ಲಿ ಯಶಸ್ಸು ಕನಸಲ್ಲ,ಮಾನವೀಯ ಸಂಬಂಧಗಳು,ಮೌಲ್ಯಾಧಾರಿತ ಶಿಕ್ಷಣ,ಪರೀಕ್ಷಾ ಪೂರ್ವತಯಾರಿ,ಯಶಸ್ಸು,ಪರಿಣಾಮಕಾರಿ ಸಂಹನ ಹಾಗೂ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜೇಸೀ ವಲಯ ತರಬೇತುದಾರರಾದ ಸವಿತಾರ ಮುಡೂರು, ವಿಮಲಾರಂಗಯ್ಯ, ಚಂದ್ರಶೇಖರ ಕುಕ್ಕುಪುಣಿ, ರಾಜೇಶ್ ಕೆಡಿಂಜೆ, ಸೋಮಶೇಖರ ನೇರಳ, ಬಿ.ವಿಠಲ ರಾವ್, ಹಾಗೂ ಕೃಷ್ಣ ಮೋಹನ್ ಆಗಮಿಸಿದರು.

ಇದೇ ಸಂದರ್ಭದಲ್ಲಿ ಅನುಗ್ರಹ ಮಾಸಪತ್ರಿಕೆ ಮತ್ತು ಸ್ವಪ್ನ ಸಾಕಾರ ಗೃಹ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜೇಸೀ ಅಧ್ಯಕ್ಷ ಚಂದ್ರಶೇಖರ ನಾಯರ್, ಕಾರ್ಯದರ್ಶಿ ರೋಹಿತ್, ಜೇಸೀರೆಟ್ ಅಧ್ಯಕ್ಷೆ ಸ್ವಪ್ನಾ ವೆಂಕಟೇಶ್,ಜೇಜೇಸಿ ಅಧ್ಯಕ್ಷೆ ಅಲಕಾ ಎಂ.ಜಿ, ಮೊದಲಾದವರು ಭಾಗವಹಿಸಿದ್ದರು.ವಿವಿಧ ಕಾರ್ಯಕ್ರಮಗಳನ್ನು ಸುಬ್ರಹ್ಮಣ್ಯದ ವಿವಿಧ ಕಾಲೇಜು,ಶಾಲೆಗಳಲ್ಲಿ ನಡೆಸಲಾಗಿತ್ತು.

05 ಫೆಬ್ರವರಿ 2008

ನಮ್ಮ ರೈತರು ಈಗಲೂ ಸ್ವಾಭಿಮಾನಿಗಳು....



ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಸಂಗತಿ ಈಗ ನಗರದ ಮಂದಿಗೆ ಅರ್ಥವಾಗತೊಡಗಿದೆ.ಇದಕ್ಕೆ ಕಾರಣವೇನು ಎಂಬುದನ್ನು ಈಗಲೇ ಸರಿಯಾಗಿ ಚಿಂತಿಸತೊಡಗಿದ್ದಾರೆ.ಜನಪ್ರತಿನಿಧಿಗಳು ಜಾಗೃತರಾಗಬೇಕಾದ್ದು ಈಗ ಅನಿವಾರ್ಯವಾಗಿದೆ.

ಇಡೀ ದೇಶಕ್ಕೆ ಹಾಗೂ ಇಲ್ಲಿನ ಜನರಿಗೆ ಬೇಕಾದ ಗೋಧಿ,ಭತ್ತ ಹಾಗೂ ಇನ್ನಿತರ ಧಾನ್ಯಗಳನ್ನು ಅತ್ಯಂತ ರಸಭರಿತವಾಗಿ ಬೆಳೆಯುವವನು ರೈತ.ಹಾಗಾಗಿ ಆತನೇ ಈ ದೇಶದ ಬೆನ್ನೆಲುಬು ಎಂಬುದರಲ್ಲಿ ಎರಡು ಮಾತಿಲ್ಲ.ಒಂದು ವೇಳೆ ಆತನ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಅದು ದೇಶದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.ಆಗಲೂ ನಮ್ಮ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದ ಆಹಾರದ ಕೊರತೆ,ಭದ್ರತೆಗೆ ಧಕ್ಕೆ ಗ್ಯಾರಂಟಿ.

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಅನುಭವಿಸಿದ ಸಂಕಷ್ಟದಂತೆ ಉತ್ತರಪ್ರದೇಶದ ಹಳ್ಳಿಯ ರೈತರಿಗೂ ಈಗ ಆದದ್ದು ಇದೇ.ಅಲ್ಲಿನ ಕಬ್ಬು ಹಾಗೂ ಗೋಧಿ ಬೆಳೆಗಾರರು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ.ಕಬ್ಬು ಬೆಳೆದು ಕಾರ್ಖಾನೆಗೆ ಕೊಂಡೋದರೆ ಅಲ್ಲಿನ ತಾಂತ್ರಿಕ ತೊಂದರೆ ರೈತರ ಮೇಲೆ ಪರಿಣಾಮ ಬೀರಿದೆ.ಇದರಿಂದ ಗೋಧಿಯನ್ನು ಅರೆಯಲು ಸಾಧ್ಯವಾಗದೆ ಬಾಕಿಯಾಗಿ ಉಳಿದಿದೆ.ಗಮನಿಸಿ ನೋಡಿ ದೇಶಕ್ಕೆ ಅಂದಾಜಿನ ಪ್ರಕಾರ ಸುಮಾರು 75 ರಿಂದ 77 ಮಿಲಿಯನ್ ಟನ್ ಗೋಧಿಯ ಅವಶ್ಯಕತೆ ಇದೆ.ಅದೆಲ್ಲವನ್ನೂ ನಮ್ಮ ರೈತರು ನೀಡುತ್ತಾರೆ ಮತ್ತೆ ಕಡಿಮೆಯಾದರೆ ಮಾತ್ರಾ ತರಿಸಲಾಗುತ್ತದೆ. ಆದರೆ ಈಗಿನ ಅಂದಾಜಿನ ಪ್ರಕಾರ ಸುಮಾರು 7 ಮಿಲಿಯನ್ ಟನ್ ಕೊರತೆ ಉಂಟಾಗುವ ಸಾಧ್ಯತೆಯಿದ್ದು ಇದನ್ನು ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಹೀಗಾದರೆ ಸುಮಾರು 10 ಸಾವಿರ ಕೋಟಿ ರೂ ಗಳ ಮೌಲ್ಯದ ಗೋಧಿಯನ್ನು ತರಿಸಬೇಕಾಗಬಹುದು...!.ಆದರೆ ವಿದೇಶಗಳಲ್ಲಿ ಅಲ್ಲಿನ ಅವಶ್ಯಕತೆಗನುಗುಣವಾಗಿ ಗೋಧಿಯನ್ನು ಬೆಳೆಯುವ ಕಾರಣ ಅಲ್ಲೂ ಗೋಧಿಗೆ ಬೆಲೆ ಏರಿಕೆ ಕಂಡು ಬಂದರೆ ಇಲ್ಲೂ ಅದರ ಪರಿಣಾಮ ಬೀರುವುದು ಗ್ಯಾರಂಟಿ.ಇದೆಲ್ಲದರೆ ಪರಿಣಾಮ ದೇಶದ ಆಹಾರ ಭದ್ರತೆಯ ಮೇಲೆ ತೀವ್ರ ಪರಿಣಾಮ.

ಹಳ್ಳಿಯ ರೈತನಿಗೆ ಇದೆಲ್ಲದರ ಚಿಂತೆ ಬೇಡ ಏಕೆಂದರೆ ಇಂತಹ ವ್ಯವಸ್ಥೆಯಿಂದ ತನಗೆ ಲಾಭವಾಗದಿರಬಹುದು ಆದರೆ ಹೊಟ್ಟೆಹೊರೆಯಲು ಚಿಂತೆಯಿಲ್ಲ. ಆತನಿಗೆ ಅವಶ್ಯಕತೆಯುಳ್ಳ ಧವಸಗಳನ್ನು ಆತನೇ ಬೆಳೆದಿರುತ್ತಾನೆ.ಸರಕಾರದಿಂದ ಕೃಷಿಕರಿಗೆ ಯಾವುದೇ ಸಹಕಾರ ,ಪ್ರೋತ್ಸಾಹಗಳನ್ನು ನೀಡದೇ ಇದ್ದುದರ ಪರಿಣಾಮದಿಂದ ಈಗ ಇಂತಹ ಘಟನೆಗಳು ನಡೆಯುತ್ತವೆ.

ಈಗ ಸಂಕಷ್ಟಗಳನ್ನು ಎದುರಿಸಬೇಕಾದವರು ನಗರದ ಮಂದಿ ಹಾಗು ಜನನಾಯಕರು.ಹಾಗಾಗಿ ರೈತ ಇಂದಿಗೂ ದೇಶದ ಬೆನ್ನೆಲುಬಾಗಿಯೇ ಉಳಿದಿದ್ದಾನೆ. ಆತನೇ ಈ ದೇಶದ ಆರ್ಥಿಕ ವ್ಯವಸ್ಥೆಯ ಹಾಗು ಆಹಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.ನಗರದ ಐಟಿ - ಬಿಟಿ ಉದ್ಯಮಿಗಳಿಗೆ ನೀಡಿದಷ್ಟೇ ಮಹತ್ವ ಹಳ್ಳಿಯ ರೈತನಿಗೂ ನೀಡಬೇಕು ಎನ್ನುವುದು ತಿಳಿಯುವುದು ಇಂತಹ ಸಂದರ್ಭಗಳಲ್ಲಿ.

ಒಂದು ತುಲನಾತ್ಮಕ ವಿಚಾರವನ್ನು ನಾನು ಓದಿದ್ದೆ ಅದನ್ನು ಇನ್ನೊಮ್ಮೆ ನೆನಪಿಸಿ ನಿಮ್ಮ ಮುಂದಿಡುತ್ತೇನೆ.ಆಗ ನಮ್ಮ ರೈತರ ಸ್ವಾಭಿಮಾನ ಏನು ಎಂಬುದು ಅರ್ಥವಾಗಬಹುದು.

1970 ರಲ್ಲಿ 1 ಕಿಲೋ ಭತ್ತದ ಹಾಗು ಗೋಧಿಯ ಸರಾಸರಿ ಬೆಲೆ ಕೇವಲ 60 ಪೈಸೆ.ಅದೇ ಸಮಯದಲ್ಲಿ ಕೂಲಿಯಾಳುಗಳ ಸಂಬಳ 3 ರೂ, ಸರಕಾರಿ ನೌಕರರ ಸಂಬಳ ಮಾಸಿಕವಾಗಿ 90 ರೂ, 1 ಗ್ರಾಂ ಚಿನ್ನದ ಬೆಲೆ 15 ರೂ, 50 ಕಿಲೋ ಸಿಮೆಂಟಿನ ಬೆಲೆ 5 ರೂ. ಅದುವೇ 7 ರ ಹೊತ್ತಿಗೆ 1 ಕಿಲೋ ಗೋಧಿ,ಭತ್ತದ ಸರಾಸರಿ ಬೆಲೆ 6 ರಿಂದ 10 ರೂ ಚಿನ್ನದ ಬೆಲೆ ನಿಮಗೆ ಗೊತ್ತೇ ಇದೆ.ಸಿಮೆಂಟಿನ ಬೆಲೆ 230 ರೂ, ಇನ್ನು ಸರಕಾರಿ ನೌಕರರ ಸಂಬಳದ ಬಗ್ಗೆ ಹೇಳಬೇಕಾಗಿಲ್ಲ.

ಹಾಗಾದರೆ ನಿಜವಾಗಲೂ ಕೃಷಿಯುತ್ಪನ್ನಗಳ ಬೆಲೆ ಏರಿಕೆಯಾಗಿದೆಯೇ?ಇತರ ವಸ್ತುಗಳ ಬೆಲೆ ಏರಿದ ಅನುಪಾತದಲ್ಲಿ ಕೃಷಿಯುತ್ಪನ್ನಗಳ ಬೆಲೆಯೇರಿಕೆಯಾಗಿದ್ದರೆ ಅವುಗಳ ಬೆಲೆಯ ಬಗ್ಗೆ ಲೆಕ್ಕ ಹಾಕಿ.ಈಗ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.ಅದರಲ್ಲಿ ತೆಂಗು,ಅಡಿಕೆ,ಕಾಳುಮೆಣಸು,ಕಾಫಿ,ಕಬ್ಬು,ತರಕಾರಿ,ರಾಗಿ ಸೇರಿದಂತೆ ಹಲವು ರೈತರು ಸೇರುತ್ತಾರೆ.ಆದರೂ ಇಂದು ರೈತರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ.ಅಲ್ಲಿಯ ಸಮಸ್ಯೆ ಬೆಲೆ ಕುಸಿತ.ಇದರಿಂದಾಗಿ ರೈತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.ಇಂದಿನ ಪರಿಸ್ಥಿತಿ ನೋಡಿದರೆ 1 ಕಿಲೋ ಗೋಧಿ,ಭತ್ತದ ಬೆಲೆ 30 ರಿಂದ 40 ರೂ ಇರಬೇಕಾಗಿತ್ತು.ಆದರೆ ಇಂದಿಗೂ ಅವುಗಳ ಬೆಲೆ 10 ರಿಂದ 12 ಆದರೂ ರೈತರು ನೆಮ್ಮದಿಯಿಂದಿದ್ದಾರೆ.ಅದು ನೋಡಿ ರೈತರ ಸ್ವಾಭಿಮಾನ.ಅವರ ಋಣ ಭಾರವನ್ನು ತೀರಿಸಲು ಸಾಧ್ಯವೇ?.

ಸರಕಾರಗಳು ಯಾವುದೇ ಸರಕಾರಿ ನೌಕರರಿಗೆ ನಿವೃತ್ತ ವೇತನ ನೀಡುತ್ತದೆ.ಅಂತಹ ವೇತನ ಸುಮಾರು 5000 ಕೋಟಿ ರೂ ಆದರೆ ಸರಕಾರವು ಕೃಷಿಗೆ ನೀಡುವ ಸಹಾಯಧನ ಎಷ್ಟು ಗೊತ್ತೇ? ಕೇವಲ 10 ಸಾವಿರ ಕೋಟಿ.ಅದು ದೇಶದ ಸುಮಾರು 75 ಕೋಟಿ ರೈತರಿಗೆ..!?

ಆದರೂ ರೈತರು ಧೃತಿಗೆಡಲಿಲ್ಲ.ಈಗ ನಮ್ಮ ರೈತರ ಮೇಲೆ ಅಭಿವೃದ್ಧಿ ಹೆಸರಲ್ಲಿ ನಿರಂತರ ಧಾಳಿ ನಡೆಯುತ್ತಿದೆ.ಹೀಗಾಗಿ ಅವರು ದಿಕ್ಕೆಟ್ಟಿದ್ದಾರೆ. ಸರಕಾರಗಳು ಸುಮ್ಮನಾಗಿವೆ.ನೂರಾರು ವರ್ಷಗಳಿಂದ ಅದೇ ಹೊಲದಲ್ಲಿ,ತೋಟದಲ್ಲಿ ದುಡಿದು ಏಕಾಏಕಿ ಹೊಲವನ್ನು ಇನ್ನಾವುದೋ ಅಭಿವೃದ್ಧಿ ಕಾರ್ಯಗಳಿಗೆ ಬಿಡಬೇಕು ಎನ್ನುವುದು ಯಾವ ನ್ಯಾಯ?ಇನ್ನೊಂದಡೆ ಸರಕಾರಗಳು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ನೀಡಲು ಪ್ರಯತ್ನಿಸದೆ ಇನ್ನಾವುದೋ ತಂತ್ರದಲ್ಲಿ ಮುಳುಗುತ್ತದೆ.ಅದಕ್ಕೆಲ್ಲಾ ಉತ್ತರವಾಗಿ ಇಂದು ಚಿಕ್ಕ ಶಾಕ್ ರೈತರು ನೀಡಲಾರಂಭಿಸಿದ್ದಾರೆ.ಸರಕಾರ, ಈ ದೇಶ ಅವರಿಗೆ ಏನು ಉತ್ತರ ನೀಡೀತು?.

ಅದಕ್ಕೆ ಸರಿಯಾಗಿ ನಮ್ಮ ಕೃಷಿ ಸಚಿವರುಗಳು ಇರುತ್ತಾರೆ ರೈತರನ್ನು ಉದ್ಧರಿಸಲು ಅಲ್ಲ.... ಮುಗಿಸಲು ... ಮಾನಗೆಟ್ಟವರು...

04 ಫೆಬ್ರವರಿ 2008

ಸಕಲೇಶಪುರ - ಬಿ ಸಿ ರೋಡ್ ರಸ್ತೆಗೆ 61 ಕೋಟಿ ರೂ



ಮುನಿಯಪ್ಪರಿಂದ ಆನೆಯ ದರ್ಶನ



ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರದಂದು ಆಗಮಿಸಿ ಪೂಜೆ ಸಲ್ಲಿಸಿದರು.ಇದೇ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಾಂಶ ಇಲ್ಲಿದೆ.

* ಸಿ ಆರ್ ಎಫ್ ನಿಂದ ಸಕಲೇಶಪುರ - ಶಿರಾಡಿ-ಬಿ ಸಿ ರೋಡ್ ರಸ್ತೆಗೆ 61 ಕೋಟಿ ಬಿಡುಗಡೆ.ಇದರಲ್ಲಿ ಪೂರ್ತಿ ಡಾಮರೀಕರಣ,ಅಗತ್ಯವಿದ್ದೆಡೆ ಕಾಂಕ್ರೀಟ್ ರಸ್ತೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು.ಈ ಕಾಮಗಾರಿಯನ್ನು ರಾಜ್ಯದ ಎನ್.ಎಚ್.ಇಲಾಖೆಯ ವತಿಯಿಂದ ಮಾಡಲಾಗುತ್ತದೆ.

* ಶಿರಾಡಿ ಘಾಟಿ ರಸ್ತೆಯನ್ನು ಮಳೆಗಾಲದ ಮುನ್ನ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಸೂಚನೆ. ವಿಳಂಬಕ್ಕೆ ಮಳೆಗಾಲದ ಅವಧಿ ಕಾರಣ.

*ಶಿರಾಡಿ ಘಾಟಿಯಲ್ಲಿ ಘನ ವಾಹನ ಇನ್ನೂ 2 ತಿಂಗಳ ಓಡಾಟ ನಿಲುಗಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಹಾಸನ ಮತ್ತು ಮಂಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ.ಲಘು ವಾಹನಗಳಿಗೆ ಪ್ರವೇಶದ ಅವಕಾಶ.

* ಸುಬ್ರಹ್ಮಣ್ಯ ಸಂಪರ್ಕ ರಸ್ತೆಗಳ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದು ಚರ್ಚೆ.

* ರಸ್ತೆ ವಿಚಾರದಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗದಂತೆ ತರಿಸಲಾಗಿದೆ.ಅತ್ಯಂತ ಮುತುವರ್ಜಿಯಿಂದ ಕೆಲಸ.

*ರೈಲ್ವೇಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದು ನಿಜ.ಈ ಬಗ್ಗೆ ಲಾಲೂ ,ವೇಲು ಅವರಿಗೆ ಹೇಳಿದ್ದೇನೆ.ಸರಿಪಡಿಸಲು ಒತ್ತಾಯಿಸಿದ್ದೆನೆ.

*ರೈಲ್ವೇ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ

* ಮಳೆಗಾಲದ ನಂತರ ಬೆಂಗಳೂರು-ಮಂಗಳುರು ರೈಲು ಓಡಾಟ.ಅದುವರೆಗೆ ಈಗಿನಂತೆ ಮಂಗಳೂರು-ಬೆಂಗಳೂರು ರೈಲು ಓಡಾಟ.

ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಇಲಾಖಾ ಮುಖ್ಯ ಅಭಿಯಂತರ ಬಿಸ್ಸೇ ಗೌಡ ,ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು

ಕೊನೆಯ ಮಾತು : ಮಾಧ್ಯಮದ ಮಿತ್ರರೊಬ್ಬರು ಸಚಿವರಲ್ಲಿ ರಾಜ್ಯಕ್ಕೆ ರಸ್ತೆಯ ಬಗ್ಗೆ ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಕೇಳಿದರು.ಸಚಿವರು ಮೆಲ್ಲನೆ ಹೇಳಿದ್ದು ಈಗ ಲೆಕ್ಕ ಇಲ್ಲ ಅದನ್ನು ಬೆಂಗಳೂರಲ್ಲಿ ಪ್ರೆಸ್ ನಲ್ಲಿ ಹೇಳ್ತೇನೆ ಎಂದರು.
ಮಿತ್ರರೊಂದಿಗೆ ಮತ್ತೆ ನಾವು ಮಾತನಾಡಿದೆವು ಅಷ್ಟೂ ಅನುದಾನ ಬಂದಿದೆಯಂತೆ....! ಹಾಗಾಗಿಯೇ ರಾಜ್ಯದ ರಸ್ತೆ ಇಷ್ಟೂ ಸೂಪರ್....!?

03 ಫೆಬ್ರವರಿ 2008

ಅಪ್ಪ - ಮಕ್ಕಳ ರಾಜಕೀಯ...!



ಇದು ನಮ್ಮಲ್ಲಿ ಮಾತ್ರವಲ್ಲ... ಅಲ್ಲೂ ಇದೆ..!

ರಾಜಕೀಯದ "ರಣ"ರಂಗ... ಎಲ್ಲರೂ ಇಲ್ಲಿ ಸಮಾನರು.ಈಗ ಹೊಲಸು ..ಗಬ್ಬೆದ್ದು ಹೋಗಿದೆ.

ಇಲ್ಲಿ ತಂದೆಯನ್ನು ಮಗ ಹೀಯಾಳಿಸಲೂ ಬಹುದು ಮಗನನ್ನು ತಂದೆ ಜರಿಯಲೂ ಬಹುದು.ಆದರೆ "ತನ್ನ ತಂದೆಯನ್ನೇ ಒಪ್ಪಿಕೊಳ್ಳದಿರುವುದು" ಎಂತಹ ರಾಜಕೀಯ.. ಅದರ ಅರ್ಥವೇನು.?.ತಾಯಿಯ ಮಾತಿನ ಮೇಲೆ ಅಂಬಿಕೆ ಇಲ್ಲ ಅಂತಲೇ ಅಲ್ವಾ.?ಇಂಥವರೂ ರಾಜಕೀಯದಲ್ಲಿ ಇರುತ್ತಾರಾ..!?.ಈ ಮಟ್ಟಕ್ಕೆ ರಾಜಕೀಯ ಇಳಿದು ಬಿಟ್ಟಿತಾ..!?.

ಘಟನೆ ಇದು...

ಇತ್ತೀಚೆಗೆ ಕೇರಳದಲ್ಲಿ ನ್ಯಾಶನಲ್ ಕಾಂಗ್ರೇಸ್ (NCP)ಪಾರ್ಟಿಯ ‍ ಸಭೆ ನಡೆಯಿತು.ಅದರಲ್ಲಿ ಆ ಪಕ್ಷದ ಮುಖಂಡ ಮುರಳೀಧರನ್ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹೇಳಿದರು " ನಾನು ಅವರನ್ನು(ಕರುಣಾಕರನ್) ತಂದೆ ಎಂದು ಒಪ್ಪಿಕೊಳ್ಳಲಾರೆ" ಎಂದಿದ್ದರು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕರುಣಾಕರನ್ ಅವರದ್ದು ಕೇರಳದ ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಹೆಸರು.ಅವರ ಪುತ್ರ ಮುರಳೀಧರನ್.ಕಾಂಗ್ರೇಸ್ ಪಕ್ಷದಲ್ಲೇ ಇದ್ದ ಕರುಣಾಕರನ್ ತಮ್ಮ ಪುತ್ರನನ್ನೂ ಅದೇ ಪಕ್ಷದಲ್ಲಿ ಬೆಳೆಸಿದರು.ಕೆಲವೊಂದು ಬದಲಾವಣೆಗಳಿಂದ ಎನ್ ಸಿ ಪಿ (NCP)ಎಂಬ ಪಕ್ಷವನ್ನು ಸೇರಿ ಕೇರಳದಲ್ಲಿ ಮತ್ತೆ ಮಿಂಚಿದರು.ಆ ಬಳಿಕ ವೈಯಕ್ತಿಕ ವಿಚಾರದಲ್ಲಿ ಅವರ ಪುತ್ರ ಮುರಳೀಧರನ್ ಅವರೊಂದಿಗೆ ಜಗಳ ಏರ್ಪಟ್ಟಿತು.ಕೊನೆಗೆ ಮತ್ತೆ ಕಾಂಗ್ರೇಸ್ ಪಕ್ಷಕ್ಕೆ ಸೇರಿದರು.ಈಗ ಕರುಣಾಕರನ್ ಪುತ್ರ ಮುರಳೀಧರನ್ NCP ಮುಖ್ಯ ನಾಯಕ.ಈ ಹಿನ್ನೆಲೆಯಲ್ಲಿ ಮುರಳೀಧರನ್ ಅವರು ಇತ್ತೀಚೆಗೆ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಕರುಣಾಕರನ್ ಅವರು ನಮ್ಮ ಪಕ್ಷದಲ್ಲಿ ಸಮಾಲೋಚಿಸದೇ ಕಾಂಗ್ರೇಸ್ ಸೇರಿದರು ಅದರಿಂದ ನಮಗೇನು ನಷ್ಟವಿಲ್ಲ, ಕಾಂಗ್ರೇಸಿಗೂ ಲಾಭವಿಲ್ಲ.ಈಗ ನಾನು ಅವರನ್ನು ತಂದೆ ಎಂದೂ ಒಪ್ಪಿಕೊಳ್ಳಲಾರೆ" ಎಂದು ಹೇಳಿದರು.

ಇದು ವಿವಾದ....

ಈಗ ವಿವಾದದ ಹೊರಗೆ ಬಂದು ನೋಡೋಣ...

ನಮ್ಮಲ್ಲೂ ತಂದೆ - ಮಕ್ಕಳ ರಾಜಕೀಯವಿದೆ.ಆದರೆ ಆ ಥರದ್ದಲ್ಲ.ಮಗನನ್ನೇ ಅಧಿಕಾರಕ್ಕೆ ತರಬೇಕೆನ್ನುವ ಒಂದೇ ಒಂದು ಆಸೆ.ತಂದೆಗೆ ಅಧಿಕಾರ ಚಲಾಯಿಸುವ ಬಯಕೆ.ಮಗನನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕೆಂಬ ಬಯಕೆ.ಈಗ ಅದು ಬಯಲಾಗಿ ಬಿಟ್ಟಿದೆ.ಇದೊಂದು ಸಾರ್ವಕಾಲಿಕ ಸತ್ಯ.ಅದು ತಪ್ಪೂ ಅಲ್ಲ ಬಿಡಿ. ಆ ಅಧಿಕಾರದ ಆಸೆಗಾಗಿ ತಂದೆಯನ್ನು ಮಗ... ಮಗನನ್ನು ತಂದೆ ಸಾರ್ವಜನಿಕವಾಗಿ ಹಾಗೆ...ಹೀಗೆ.. ಅಂತ ಹೇಳುವುದಿದೆ .. ಆದರೆ ಇದು ಹಾಗಲ್ಲ ತಂದೆಯನ್ನೇ ಒಪ್ಪಿಕೊಳ್ಳುವುದಿಲ್ಲ ಅಂತ ಹೇಳುವುದರ ಅರ್ಥವೇವೇನು..? ಅದರ ಹಿಂದೆ ಹತ್ತಾರು ಪ್ರಶ್ನೆ ಹುಟ್ಟುತ್ತವೆ ಉತ್ತರಕ್ಕಾಗಿ ತಡಕಾಡಬೇಕಾಗಬಹುದು..!.

ಜಗತ್ತಿನ ಇತರೆಲ್ಲೆಡೆ ನೋಡಿದರೂ ಭಾರತದಷ್ಟು ಹೀನ ರಾಜಕೀಯ ಸಿಗಲಾರದೇನೋ?.ಇಲ್ಲಿ ಮಾಡಬೇಕಾದ್ದನ್ನೆಲ್ಲಾ ಬಿಟ್ಟು ಮಾಡಬಾರದ್ದನ್ನೆಲ್ಲಾ ರಾಜಕಾರಣಿಗಳು ಮಾಡಿಬಿಡುತ್ತಾರೆ..!ಅಭಿವೃದ್ಧಿಯ ಕಡೆಗೆ ವಾಲಿ ಕಮಿಶನ್ ಹೊಡೆದುಬಿಡುತ್ತಾರೆ.ಇದೆಲ್ಲಾ ರಾಜಕೀಯ ಸ್ವಾಮಿ.... ರಾಜಕೀಯ... ಅದೆಲ್ಲವೂ ಅಧಿಕಾರಕ್ಕಾಗಿ...!!

ಇತ್ತೀಚೆಗೆ ಕೇರಳದ ಜನ ಪತ್ರಿಕೆಯಲ್ಲಿ ಅಪ್ಪ-ಮಕ್ಕಳ ರಾಜಕೀಯದ ಸುದ್ದಿ ಓದುವುದನ್ನು ಬಿಟ್ಟಿದ್ದಾರಂತೆ..! ಟಿ.ವಿಯಲ್ಲಿ ಧಾರವಾಹಿಯಂತೆ ಬರುತ್ತಿದೆಯಂತೆ ಹಾಗಾಗಿ ಅದು Common ಎನ್ನುತ್ತಾರೆ.ಮೊನ್ನೆ ಮೊನ್ನೆ ನಮ್ಮಲ್ಲೂ ಆಗಿತ್ತಲ್ಲಾ ಹಾಗೆ...!!

ಈಗ ಹೊಸ ಮಾತು : "ರಾಜಕೀಯವನ್ನು ನಂಬಿದವ ಕೋಡಂಗಿ : ಮಾಡಿದವನ 'ಪಟ್ಟ'(ಅ)ಭದ್ರ..."!

02 ಫೆಬ್ರವರಿ 2008

ವೀರಪ್ಪ ಮೊಯಿಲಿಯವರಿಂದ "ಪುಣ್ಯ"ಕೋಟಿಯ "ಕತೆ".....




ಇದು ದ.ಕ ಜಿಲ್ಲಾ ಮಟ್ಟದ ಯುವಜನ ಮೇಳ 2007-08 ರ ಉದ್ಘಾಟನಾ ಸಮಾರಂಭ.

ನಡೆದದ್ದು ಸುಳ್ಯ ತಾಲೂಕಿನ ದುಗ್ಗಲಡ್ಕದ ಸರಕಾರಿ ಪ್ರೌಢಶಾಲಾ ವಠಾರ.ಫೆ.2 ರಂದು ಶನಿವಾರ.ಸಮಯ ಬೆಳಗ್ಗೆ 11 ರ ಹೊತ್ತು.

ಯುವಜನ ಮೇಳವನ್ನು ಉದ್ಘಾಟಿಸಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ,ಭಾರತ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿಯವರು.ನಂತರ ಅತ್ಯಂತ ಮೋಡಿಯ ಮಾತುಗಳನ್ನಾಡಿದರು.ಹೌದು..ಹೌದು.. ಎಂಬಂತೆ ಜನ ತಲೆದೂಗಿದರು.ಇಡೀ ಭಾಷಣ ಇದ್ದದ್ದು 13 ನಿಮಿಷ.ಭಾಷಣದುದ್ದಕ್ಕೂ ಅವರ ಮಾತಿನಲ್ಲಿ ಶಬ್ದಗಳೊಂದಿಗಿನ ಚೆಲ್ಲಾಟ ಖುಷಿಯಾಗಿತ್ತು.ನಡು ನಡುವೆ ಕೆಲವು ತತ್ತ್ವಗಳನ್ನು ಹೇಳಿದರು.ಕೊನೆಗೆ ಅವರು ಸಭೆಯ ಮುಂದೆ ತೆರೆದಿಟ್ಟದ್ದು "ಪುಣ್ಯ"ಕೋಟಿಯ "ಕತೆ".... ಗೋವಿನ ಕತೆ... ಅದರ ಸಾರಾಂಶ ಹೀಗೆ... ಅದನ್ನು ಅವರ ಮಾತಿನಲ್ಲೇ ಹೇಳುವುದಾದರೆ....

ನಾನು ಓದುತ್ತಿದ್ದಾಗ ಪುಣ್ಯಕೋಟಿಯ ಕತೆ ಇತ್ತು.ಈಗ ಉಂಟಾ ಇಲ್ವಾ ಗೊತ್ತಿಲ್ಲ.. ನಾನು ಕತೆಯನ್ನು ಹೀಗೆ ಕಂಡುಕೊಂಡೆ....

ಹುಲಿ - ಆಕಳನ್ನು ಹಿಡಿದು ತಿನ್ನುವುದು ಪ್ರಕೃತಿ : ಆಕಳ ಸತ್ಯವನ್ನು ಹುಲಿ ಮೆಚ್ಚಿರುವುದು ಸಂಸ್ಕೃತಿ

ಆಕಳು ತನ್ನ ಕರುವಿನ ಬಗ್ಗೆ ಹೇಳಿಕೊಂಡದ್ದು ಪ್ರಕೃತಿ ; ಹುಲಿ ಕನಿಕರಿಸಿದ್ದು ಸಂಸ್ಕೃತಿ

ಒಂದನ್ನೊಂದು ತಾನು ತಿಂದು ಬದುಕುವುದು ಸಾವು - ಇದು ನಾಗರೀಕತೆಯ ಸಾವು,ಸಂಸ್ಕೃತಿಯ ನಾಶ

ಒಂದನ್ನೊಂದು ತಿಳಿದು ಬದುಕುವುದು ನಿಜವಾದ ಬದುಕು.........

ಹೀಗೆ ವ್ಯಾಖ್ಯಾನಿಸಿದ ಅವರು ಇಂದು ಕತೆಗಳನ್ನು ಕತೆಗಳಾಗಿ ಅನುಭವಿಸುವುದಲ್ಲ ಅದರಾಚೆಗಿನ ಸತ್ಯವನ್ನು ತಿಳಿಯಬೇಕು.ತಪ್ಪನ್ನು ಮಾಡುವುದು ವಿಕೃತಿ.. ನಾವು ಇದ್ದದ್ದೇ ಸರಿಯಲ್ಲ .. ತಿದ್ದುವುದು ಸಂಸ್ಕೃತಿ.. ಅದು ಇಂತಹ ಸಮಾರಂಭದ ಮೂಲಕ ಯುವಕರು ಅರಿತುಕೊಳ್ಳಬೇಕು ಎನ್ನುತ್ತಾ ಕೊನೆಯಲ್ಲಿ ಭರವಸೆಯೊoದನ್ನು ನೀಡಿ ಭಾಷಣ ಮುಗಿಸಿದರು.ನಂತರ ಸಮಾರಂಭದಿಂದ ನಿರ್ಗಮಿಸಿದರು ಕೂಡಾ.....!

ಮೊಯಿಲಿಯವರಿಗಿಂತ ಮೊದಲು ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡ ಯುವಜನಮೇಳದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನಂತರ ಮಾತನಾಡಿ ಪಂಚಸೂತ್ರಗಳಿಂದ ಆರಂಭಿಸಿ ವಿದ್ಯೆಯ ಮಹತ್ವವನ್ನು ಹೇಳಿ ತಮ್ಮ ಸಾಧನೆಯನ್ನು ಹೇಳಿದರು.

ಸಭಾಧ್ಯಕ್ಷತೆಯನ್ನು ಜಿ.ಪಂ ಉಪಾಧ್ಯಕ್ಷೆ ಜಯಶ್ರೀ ಕೋಡಂದೂರು ವಹಿಸಿದ್ದರು .ವೇದಿಕೆಯಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ,ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಸದಸ್ಯ ಚಂದ್ರಕುಮಾರ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ,ಸುಳ್ಯದ ಮೀನಾಕ್ಷಿ ಗೌಡ,ರಾಜ್ಯ ಯುವಪ್ರಶಸ್ತಿ ವಿಜೇತ ಟಿ.ಎಂ.ಶಹೀದ್,ಸುಳ್ಯ ತಾ.ಪಂ ಅಧ್ಯಕ್ಷ ಶಂಕರ್ ಪೆರಾಜೆ,ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ವಿಶ್ವನಾಥ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಸಿ.ರಮೇಶ್, ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮವು ಭಾನುವಾರವೂ ನಡೆಯುತ್ತದೆ.

ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್,ಯುವಜನ ಸೇವಾ ಕ್ರೀಡಾ ಇಲಾಖೆ,ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ,ಮಿತ್ರ ಯುವಕ ಮಂಡಲ ಕೊಯಿಕುಳಿ,ನವೋದಯ ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ನಡೆಸಿದ್ದವು.

ವಳಲಂಬೆ ಜಾತ್ರೆ..

ದೇವರ ಬಲಿ ಉತ್ಸವ



ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು.

ಈ ದೇವಸ್ಥಾನವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ನಾಗ ದೋಷ ನಿವಾರಣೆಗೆ ಪ್ರಸಕ್ತವಾದ ಸ್ಥಳವಾಗಿದೆ.ಇಲ್ಲಿ ಆಶ್ಲೇಷ ಬಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಈ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆ ನೂತನ ಸಭಾಭವನ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಭಕ್ತಾಭಿಮಾನಿಗಳ ಸಹಕಾರವನ್ನು ಆಡಳಿತವು ಕೋರಿದೆ.

ದೇವಳದ ಸಂಪರ್ಕಕ್ಕೆ : 08257-282600

01 ಫೆಬ್ರವರಿ 2008

ಮೂಕ ಪ್ರಾಣಿಯ ವೇದನೆ....

ನೀನಾರಿಗಾದೆಯೋ ಎಲೆ ಮಾನವ....





ಸಮಯ ಸಂಜೆ ಗಂಟೆ 5.30 ಕಳೆದಿತ್ತು.

ಕೆಲಸದವರು ಮನೆಗೆ ತೆರಳುವ ಹೊತ್ತಾಗಿತ್ತಾದರೂ ನಿಂತಿದ್ದರು.ಯಾವುದೇ ಪಶುವೈದ್ಯರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.ಅಂತೂ 5.35 ಕ್ಕೆ ಒಬ್ಬರು ವೈದ್ಯರು ಸಿಕ್ಕರು."ಸರ್ ..... ಕೂಡಲೇ ಬನ್ನಿ ಹಸುವಿಗೆ ಹುಷಾರಿಲ್ಲ ........ "ಎಂದು ದೂರವಾಣಿಯಲ್ಲಿ ಹೇಳಿ ಫೋನು ಕುಕ್ಕಿಯಾಯಿಗಿತ್ತು. ಮತ್ತೆ ನೆನಪಾಯಿತು.ಡಾಕ್ಟರ್ ಅವರ ಬೈಕ್ ಇಂದಿಲ್ಲ...! ಕೂಡಲೇ ಮತ್ತೆ ದೂರವಾಣಿ ರಿಂಗಿಸಿದಾಗ ಅತ್ತ ಕಡೆಯಿಂದ ಉತ್ತರವಿರಲಿಲ್ಲ.ಹಾಗಾಗಿ ಬೈಕ್ ಏರಿ ಹೊರಟಾಯಿತು.ಶಾಪಿಗೆ ತಲಪಿದಾಗ ಅವರು ಇನ್ನೊಂದು ಕಡೆ ಹೋಗಿಯಾಗಿತ್ತು...!?.ಅಂತೂ 5 ನಿಮಿಷ ಉದ್ವೇಗದಿಂದ ನಿಂತಿದ್ದಾಗ ವೈದ್ಯರು ಬಂದರು.ತಕ್ಷಣವೇ ಡಾಕ್ಟರ್ ಬೇರೆಯವರ ಬೈಕಲ್ಲಿ ಹೊರಟರು.ಹಸು ಆಗಲೂ ಮಲಗಿಕೊಂಡೆ ಇತ್ತು.ಹಟ್ಟಿಗೆ ಬಂದ ಡಾಕ್ಟರ್ ಟ್ರೀಟ್ ಮಾಡಲು ಆರಂಭಿಸಿದರು.ಒಂದು 5 ನಿಮಿಷವಾಗಿರಬಹುದು,ಕ್ಯಾಲ್ಸಿಯಂ ನೀಡುತ್ತಲೇ ಇದ್ದರು ಹಸು ಒಮ್ಮೆ ಅಂಬಾ..... ಎಂದಿತು.....!!. ವೈದ್ಯರು ಆಗಲೂ ಇನ್ನೊಂದು ಔಷಧಿಗೆ ತಯಾರಿ ನಡೆಸುತ್ತಿದ್ದರು.ನಮ್ಮ ಆಪ್ತ [ಕಾರ್ಯದರ್ಶಿ] ಕೆಲಸಗಾರ ಶ್ರೀಧರ ಕಣ್ಣ ಸನ್ನೆ ಮಾಡಿದ. ವೈದ್ಯರು ಹಸುವಿನ ಹೊಟ್ಟೆ,ಎದೆಯನ್ನು ಅಲುಗಾಡಿಸಿದರು...... ಮುಖ ನೋಡಿ ಛೆ....!! ಅಂದರು. ಮತ್ತೆ ಹೇಳಿದರು no more..! ಇಲ್ಲಿಗೆ ಹಸುವಿನ ಜೀವ ಹಾರಿಯಾಗಿತ್ತು. ವೈದ್ಯರ ಮುಖದಲ್ಲಿ ನೋವಿನ ಛಾಯೆ ... ತಂದೆಯವರು ಆಗ ತಾನೆ ಹೇಳಿದ್ದರು "ಹಸು ಈಗ ಎದ್ದು ನಿಲ್ಲುತ್ತೆ..." ಅಷ್ಟೂ ವಿಶ್ವಾಸವಿತ್ತು.. ಮನೆಮಂದಿಗೆ, ಕೆಲಸಗಾರರ ಮುಖದಲ್ಲೂ ವಿಷಾದದ ಛಾಯೆ.

ನಾನು ಇಷ್ಟೆಲ್ಲಾ ಹೇಳಿದ್ದು ಒಂದು "ಮೂಕ ಪ್ರಾಣಿ"ಯ ವೇದನೆಯೊಂದರ ಕತೆ.ನಮ್ಮ ಮನೆಯಲ್ಲೇ ಈ ಘಟನೆ ನಡೆದಿತ್ತು.ಆ ನೋವು ಈಗಲೂ ಮನಸ್ಸಿನಲ್ಲಿದೆ.ಏಕೆಂದರೆ ನಾವೆಲ್ಲಾ ಮಾತನಾಡುವ ಪ್ರಾಣಿಗಳು... ಅವುಗಳು ಪಾಪ ....! ಎಷ್ಟು ನೋವು ಅವುಭವಿಸಿರ ಬಹುದಲ್ವಾ..? ಅದು pregnent ಹಸು ಬೇರೆ. ಆ ಹಸು ಸತ್ತಾಗ ನಮಗೆಲ್ಲಾ ಅನಿಸಿದ್ದು .. ಛೆ ಅದು ಇದ್ದಿದ್ದರೆ .. ಅಷ್ಟು ಹಾಲು ಸಿಗುತ್ತಿತ್ತು..... ಇಷ್ಟು ಲಾಭ ಆಗುತ್ತಿತ್ತು... ಅಂತ ... ಅದು ಸಹಜವೇ. ನಾವು ಮನುಷ್ಯರಲ್ವಾ.!. ಆದ್ರೆ ಆ ದನದ ನೋವಿನ ಬಗ್ಗೆ....!?.

ಆ ಮೂಕ ಪ್ರಾಣಿಗೆ ಸಾಯುವ 3 ದಿನದ ಹಿಂದೆ ಜ್ವರ ಕಾಣಿಸಿಕೊಡಿತು.ತಕ್ಷಣವೇ ಪ್ರಮುಖ ಪಶು ವೈದ್ಯರೊಬ್ಬರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತು.ನಂತರ ಜ್ವರ ಕಡಿಮೆಯಾಗಿತ್ತಾದರೂ ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿತ್ತು. ಆದರೂ ಚಿಕಿತ್ಸೆ ನೀಡುತ್ತಲೇ ಇತ್ತು.ಹಾಗೇ ದಿನ 3 ಆಗಿತ್ತು.ಕೊನೆಗೆ ಸಾವು ಸಂಭವಿಸಿತು.ಆಗ ತಿಳಿದದ್ದು ಅದಕ್ಕೆ "ಬೆಬಿಸಿಯಾ" ಎನ್ನುವ ಜ್ವರ.ಇದು ಉಣ್ಣಿಯಿಂದ ಹರಡುವ ಜ್ವರ.ಮಲೆನಾಡಿನ ಭಾಗದಲ್ಲಿ ಈ ಜ್ವರವಿದೆ ಅಂತ ನಮಗೂ ತಿಳಿದಿತ್ತು. ಈ ಮೊದಲು ನಮ್ಮಲ್ಲೆಲ್ಲಾ ಹಸುಗಳಿಗೆ ಬಂದಿತ್ತು... ನಾನೂ ಆ ಬಗ್ಗೆ ಲೇಖನವನ್ನೂ ಬರೆದಿದ್ದೆ. ಆದರೆ ಏನು ಈ ಬಾರಿ ನಮಗೆ ಆ ಜ್ವರದ ಲಕ್ಷಣಗಳೇ ತಿಳಿಯಲಿಲ್ಲ...!?.

ಪಾಪ ಹಸುಗಳು..!ಮೂಕಪ್ರಾಣಿಗಳ ವೇದನೆ ಏನಿರಬಹುದು?.ತಮ್ಮ ನೋವು ನಲಿವುಗಳನ್ನು ಅವು ಹಂಚಿಕೊಳ್ಳುವ ರೀತಿ.... ನೋವು ಅವುಭವಿಸುವ ರೀತಿ ..? ಅವುಗಳು ಪಡುವ ಯಾತನೆ..?.ವೈದ್ಯರುಗಳು Trail and error method ನಲ್ಲಿ ಔಷಧಿಯನ್ನು ನೀಡಬೇಕು.ಅವರ ಪ್ರತಿದಿನದ ಅನುಭವವನ್ನು ಪ್ರಯೋಗಿಸಿ ನೋಡಬೇಕು..!ಕೊನೆಗೆ ಯಾವುದಾದರೊಂದು ಔಷಧಿಯಲ್ಲಿ ಗುಣವಾಗುತ್ತದೆ.ಗೋವುಗಳು ನಮಗೆ ಮಾತೃಸಮಾನ ಅವಳು "ದೇವತೆ" ಅವಳಿಗೆ ಹೀಗೆ ನೋವುಗಳು ಬರಬಾರದು ಅಂತ ನಾವೆಲ್ಲಾ ಮನಸ್ಸಿನಲ್ಲಿ ಧ್ಯಾನಿಸುತ್ತೇವೆ... ಆದರೂ ಹೀಗೆಲ್ಲಾ ಒಮ್ಮೊಮ್ಮೆ ಆಗಿ ಬಿಡುತ್ತದೆ...?

ನಾವಾದರೂ ಮಾನವರು ನಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳಲು ಭಗವಂತ ಎಷ್ಟೊಂದು ಮಾಧ್ಯಮಗಳನ್ನು ,ಅವಕಾಶಗಳನ್ನು ಒದಗಿಸಿದ್ದಾನೆ...! ಆದರೂ ನಾವೇಕೆ ಹೀಗೆ..? ಆ ನೋವು-ನಲಿವುಗಳ ಅಭಿವ್ಯಕ್ತದ ನಡುವೆ ಮದ-ಮತ್ಸರಗಳು ನಮ್ಮ ನಡುವೆಯೇ ತಾಂಡವವಾಡುತ್ತವೆ..?ಇನ್ನೊಬ್ಬನ ಅವನತಿಯಲ್ಲೇ ಏಕೆ ಸಂತೋಷ ಪಡುತ್ತೇವೆ.. ಏಕೆ ಅವನ ಕಾಲೆಳೆಯುವ ಪ್ರಯತ್ನ ನಡೆಸುತ್ತೆವೆ.ಇದನ್ನೆಲ್ಲಾವೀಕ್ಷಿಸುವ ಭಗವಂತ ಅಂದರೆ"ಸೃಷ್ಠಿ" ನಮ್ಮನ್ನೆಲ್ಲಾ "ಗೋವು"ಗಳಂತೆ ಮೂಕರನ್ನಾಗಿಸಿದರೆ..?ಗೋವುಗಳಿಗೆ ಮಾತು ನೀಡಿದರೆ..?ಹೀಗೆ ನನ್ನಲ್ಲಿ ಚಿಂತನೆ ಹುಟ್ಟಿದ್ದು ನಮ್ಮನೆಯ ಗೋವೊಂದು ಸತ್ತಾಗ.ಆದರೆ ಆ ಚಿಂತನೆ ಕಾರ್ಯರೂಪಕ್ಕೆ ಬರದು ಎನ್ನುವ ಕಲ್ಪನೆ ನನಗಿದೆ.ಆದರೂ ಅತ್ಯಂತ ಶ್ರೇಷ್ಠ ಜೀವಿಯಾಗಿರುವ ಮನುಷ್ಯ ಏಕೆ ಹೀಗೆ ಎನ್ನುವ ನನ್ನ ಏಕಾಂತದ ಧ್ಯಾನಕ್ಕೆ ಉತ್ತರವೇ ಸಿಕ್ಕಿಲ್ಲ.

ನನಗಂತೂ ನನ್ನ ಕುಟುಂಬದವರು,ನನ್ನ ಮಿತ್ರರು,ನನ್ನ ಬಂಧುಗಳು ಎತ್ತರೆಕ್ಕೆ ಬೆಳೆದಷ್ಟು ,ಉನ್ನತ ಹುದ್ದೆಯಲ್ಲಿ ಸಾಗಿದಷ್ಟು ಖುಷಿಯಾಗ್ತಿದೆ.ಅವರೆಲ್ಲಾ "ನನ್ನವರಲ್ಲಾ" ಎನ್ನುವ ಅವ್ಯಕ್ತ ಭಾವನೆ ನನ್ನಲ್ಲಿದೆ.ಆದರೆ ಅದುವೇ ದೂರವಾದಾಗ ವೇದನೆಯಾಗುತ್ತದೆ.ಗೋವಿನ ವಿಚಾರದಲ್ಲೂ ನನಗಾದದ್ದೂ ಅದೇ.. ಛೇ ಹಾಗಾಗಬಾರದಿತ್ತು.ಆದರೆ ಇನ್ನೇನು....!?