ನನಗಂತೂ 2023 ಬದುಕಿನ ಪಾಠ ಕಲಿಸಿದ ವರ್ಷ. ಅಪ್ಪನೂ-ಅಮ್ಮನೂ ಇಲ್ಲದ ಈ ವರ್ಷ. 2018 ರಿಂದ ಅಪ್ಪನಿಲ್ಲದಿದ್ದರೂ ಕಳೆದ ವರ್ಷದವರೆಗೆ ಅಮ್ಮ ಇದ್ದರು. ಮೊನ್ನೆ ಮೊನ್ನೆಯವರೆಗೆ ಅಮ್ಮನಿಲ್ಲದಿದ್ದರೂ ಪ್ರತೀ ತಿಂಗಳು ಅಮ್ಮನ ನೆನಪು. ಆ ನಂತರ ವರ್ಷದ ಕಾರ್ಯಕ್ರಮ. ಹೀಗಾಗಿ ಅಮ್ಮ ಜೊತೆಗೇ ಇದ್ದಾರೆ ಅನಿಸುತ್ತಿತ್ತು. ಆ ಬಳಿಕ ಅಮ್ಮನಿಲ್ಲದ ದಿನಗಳು... ನೆನಪಾಗುವ ದಿನಗಳು... ಈ ಇಡೀ ವರ್ಷ ಅಮ್ಮನೇ ಹೇಳಿದ, ಅಪ್ಪ ಹೇಳುತ್ತಿದ್ದ ಮಾತುಗಳು ಪ್ರಾಕ್ಟಿಕಲ್ ಬದುಕಿಗೆ ಪಾಠವಾಯಿತು. ಅಂದು ಅಪ್ಪ ಹೇಳುತ್ತಿದ್ದಾಗ, ಅಮ್ಮ ಎಚ್ಚರಿಸುತ್ತಿದ್ದಾಗ, ಅದೆಲ್ಲಾ ಸುಮ್ಮನೆ ಹಾಗಿಲ್ಲ... ಎಂದು ಹೇಳುತ್ತಿದ್ದ ದಿನಗಳು ಗಟ್ಟಿಯಾಗಿ ನೆನಪಾದ್ದು ಈ ವರ್ಷ. ಅಪ್ಪ ಯಾಕೆ ಹಾಗಿದ್ದರು ಎಂದು ಅರ್ಥವಾದ ವರ್ಷ. ಬದುಕಿನ ಪಾಠಗಳು ಹಾಗೇ... ತಡವಾಗಿಯೇ ಅರ್ಥವಾಗುತ್ತದೆ. ಈಗ ನಾನೂ ಅಪ್ಪನಾಗಿ ಮಕ್ಕಳಿಗೆ ಅದನ್ನೇ ಹೇಳುವಾಗಲೂ, ಪ್ರತಿಕ್ರಿಯೆ ಬರುವಾಗಲೂ ನನ್ನ ಬಾಲ್ಯ,ಯೌವನ ನೆನಪಾಗುತ್ತದೆ....
ಎರಡು ವರ್ಷದಿಂದ ಆರ್ಥಿಕವಾಗಿಯೂ ಸವಾಲಿನ ವರ್ಷ. ಅಮ್ಮನ ಚಿಕಿತ್ಸೆ, ಅಮ್ಮನ ಸೇವಾ ಕಾರ್ಯ. ಆ ಬಳಿಕ ಅಮ್ಮ ಇಲ್ಲವಾದ ನಂತರದ ಇಡೀ ವರ್ಷದ ಕಾರ್ಯ.ವರ್ಷದ ಕಾರ್ಯ. ಈ ನಡುವೆ ಕೃಷಿ ಕಾರ್ಯದಲ್ಲಿ ಹವಾಮಾನದ ಕಾರಣದಿಂದ ಕಳೆದ ವರ್ಷ ಅಡಿಕೆ ಬೆಳೆಗೂ ಹಾನಿ. ಈ ನಡುವೆ ಕೆಲವು ಆರ್ಥಿಕ ಒತ್ತಡಗಳು, ಕೆಲವು ಹಳೆ ಬಾಕಿಗಳು, ಮಕ್ಕಳಿಗೆ ಅಗತ್ಯಕ್ಕೆ ಬೇಕಾದ ವಸ್ತುಗಳು, ಬೇಕೋ ಬೇಡದೆಯೋ ಕೆಲವು ಕಾರ್ಯಗಳು, ಖರೀದಿಗಳು, ಮಕ್ಕಳ ಖುಷಿಯನ್ನೂ ಕಡಿಮೆ ಮಾಡುವುದು ಹೇಗೆ.... !, ಕೃಷಿ ಕಾರ್ಯದ ಕೆಲಸ, ಹಾಗಿದ್ದರೂ ಇಡೀ ವರ್ಷ ಹೇಗೆ ನಿಭಾಯಿಸಿದ್ದೋ..! ಗೊತ್ತಿಲ್ಲ. ಈ ವರ್ಷದ ಕೊನೆಗೆ ಆರ್ಥಿಕವಾಗಿ ಹರಸಾಹಸ ಪಡಬೇಕಾದೀತೋ ಏನೋ ಅಂತ ಅಂದು ಭಯವಾಗಿತ್ತು. ಆದರೆ ಈ ವರ್ಷದ ಕೊನೆಯ ದಿನದವರೆಗೂ ಅಡಿಕೆ ಉಳಿದುಕೊಂಡಿದೆ. ಹೊಸ ಅಡಿಕೆ ಯಾವಾಗ ಒಣಗುತ್ತದೋ ಎಂದು ಕಾಯಬೇಕಾಗಿ ಬರಲಿಲ್ಲ.... ಮೊನ್ನೆ ಅನಿಸಿತು, ಪಿತೃ ಕಾರ್ಯ ಹಾಗೂ ದೇವಕಾರ್ಯಗಳು ಬಹುಶ: ಬಲ ನೀಡಿತು ಅಂತ ಅನಿಸಿತು. ಬೇರೆ ಯಾವ ಶಕ್ತಿಯೂ ನನ್ನ ಜೊತೆ ಈ ವರ್ಷ ಇರಲಿಲ್ಲ...
ಈ ನಡುವೆ ಕೆಲವು ಸಮಯದ ಹಿಂದೆ , ಯಾವ ಕಾರಣವೂ ಇಲ್ಲದೆ ವಿಷಾದ ತುಂಬಿ ಹೋಯ್ತು. ಅನೇಕ ಬಾರಿ ಬಾತ್‌ರೂಂ ವಿಷಾದವನ್ನು ಕಳೆಯಲು ಒಳ್ಳೆಯ ಗೆಳೆಯನಾಗಿತ್ತು. ಮನೆಯ ಮುಖ್ಯಸ್ಥನೇ ವಿಷಾದ ತುಂಬಿದರೆ ಹೇಗೆ ಅಂತ ಆಗಾಗ ಅನಿಸುತ್ತಿತ್ತು. ನನಗೆ ಆಪ್ತರಾದ ಒಂದಿಬ್ಬರು ಇದ್ದಾರೆ. ಅವರ ಜೊತೆ ಆಗಾಗ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೆ... ಅವರು ಯಾವತ್ತೂ ಮನಸ್ಸಿನಲ್ಲಿ ಕೆಟ್ಟದ್ದು ಯೋಚನೆ ಮಾಡದೇ ನೀಡುವ ಒಳ್ಳೆಯ ಸಲಹೆ... ಆಗಾಗ ರೀಫ್ರೆಶ್ ಮಾಡುತ್ತಿತ್ತು. ಅದಾದ ಬಳಿಕ ಈಚೆಗೆ ಮಕ್ಕಳ ಶಾಲೆಗೆ ಹೋಗಿದ್ದಾಗ ಭಗವದ್ಗೀತೆಯ ಬಗ್ಗೆ ಡಾ.ಶ್ರೀಶಕುಮಾರ್ ಮಾತನಾಡಿದ್ದರು. ಭಗವದ್ಗೀತೆಯ ಸಾರವು ಮತ್ತೆ ಮನಸ್ಸನ್ನು ರೀಫ್ರೆಶ್ ಮಾಡಿತು. ವಿಷಾದ ಭಾವದಿಂದ ಹೊರಬರುವಂತೆ ಮಾಡಿತು. ಅದರ ಜೊತೆಗೇ ಒಂದಷ್ಟು ಗೆಳೆಯರೂ ಸಕಾರಾತ್ಮಕವಾಗಿ ಮಾತನಾಡಿದರು. ಮೆಟ್ಟಿಲಾಗುವುದು ಯಾವತ್ತೂ ಒಳ್ಳೆಯದೇ, ಹಾಗೆಂದು ಯಾವತ್ತೂ ಮೆಟ್ಟಿಲಾಗಬಾರದು.! ಎನ್ನುವುದೂ ಈ ವರ್ಷ ಕಲಿತ ಬಹುಮುಖ್ಯ ಪಾಠ.
ಅನೇಕರನ್ನು ಎತ್ತಿ ಹಿಡಿದದ್ದು ಇದೆ, ಅವರ ಒಳ್ಳೆಯ ತನ ನೋಡಿ ಎತ್ತಿ ಹಿಡಿದದ್ದು ಇದೆ. ಅವರ ರಕ್ಷಣೆ ಮಾಡಿದ್ದು ಇದೆ. ಅಂದರೆ ಅವರ ಏಳಿಗೆಗೆ ಮೆಟ್ಟಿಲಾದ್ದು ಇದೆ. ಆದರೆ ಕೊನೆಗೆ ಅವರೇ "ಬತ್ತಿ" ಇರಿಸಿದ್ದು ಬಹುದೊಡ್ಡ ತಿರುವು ಈ ವರ್ಷದ್ದು. ಯಾವ ಕಾರ್ಯವೂ ತಿಳಿದವನಿಗೆ ಇಡೀ ಪಾಠ ಮಾಡಿ ಕೊನೆಗೇ ತಿರುಗು ಬಾಣವಾದ್ದು ಈ ವರ್ಷದ ಇನ್ನೊಂದು ಪಾಠ.
ಯಾರೋ ಕೆಲವರು ಅವರಿಗೆ ಬೇಕಾದ ಹಾಗೆ ಬಳಸಿಕೊಂಡದ್ದು ಇನ್ನೊಂದು. ನಂಬಿ ಕೆಡುವುದು ಹೇಗೆ ಎಂದು ಈ ವರ್ಷ ತಿಳಿಯಿತು...!. ನಾನು ಬರೆಯಬೇಕು ಎಂದು ಅಂದುಕೊಂಡೆ, ಆದರೆ ಬರೆಯಲಿಲ್ಲ, ಡಿಲೀಟು ಮಾಡಿದೆ, ಯಾಕೆ ಸುಮ್ಮನೆ ನಿಷ್ಟೂರು..!. ನೀನು ಬರೆದಿದ್ದು ಒಳ್ಳೆಯದೇ, ಮಾತನಾಡಿದ್ದು ಸೂಪರ್ ಅಂತ ಹೇಳಿದವರು ಹಲವರು....! ಆದರೆ ಅದೇ ವಿರೋಧ ಅಂತ ಆದಾಗ, ವಾಸ್ತವ ವಿಷಯ ಅದು ಅಂತ ತಿಳಿದರೂ ಆ ಕಡೆಯಲ್ಲಿ ಹೋಗಿ "ಅವ ಸರಿ ಇಲ್ಲ.." ಎಂದದ್ದದೂ ತಿಳಿದುಕೊಂಡದ್ದು ಇನ್ನೊಂದು ಬಹುಮುಖ್ಯ ಪಾಠ..!.
ಬದುಕು ಎಂದರೆ ಹಾಗೇ ಅಲ್ಲವೇ, ಅನೇಕರು ಮಾತನಾಡುತ್ತಾ ಸಲಹೆ ಕೇಳುತ್ತಾರೆ, ಪ್ರಾಮಾಣಿಕವಾದ, ಯಾವ ಕಲ್ಮಶವೂ ಇಲ್ಲದ ಸಲಹೆಗಳೇ ವಿರೋಧ ಅಂತ ಆಗಿ ಬಿಟ್ಟಿತು...!. ಅಂದರೆ ಈ ಸಲಹೆಯೇ ಮತ್ಸರದ ಸಲಹೆ ಅಂತ ಅನಿಸಿ ಬಿಟ್ಟದ್ದು ಈಗಲೂ ಸಹಿಸಿಕೊಳ್ಳಲಾಗದ ನೋವು. ಆ ದಿನದಿಂದಲೇ ಸಲಹೆಯನ್ನೇ ನಿಲ್ಲಿಸಿ ಬಿಡುವುದು ಮಾತ್ರವಲ್ಲ ಕೇಳಿದರೂ ಮೌನವೇ ಉತ್ತರ ಅಥವಾ ಹೆಚ್ಚಿನ ಮಾಹಿತಿ ಇಲ್ಲ ಅಂತಲೇ ಹೇಳಿಬಿಡುವುದು ಕ್ಷೇಮ ಅಂತ ಈ ವರ್ಷದ ಅನಿಸಿ ಬಿಟ್ಟಿದೆ. ಈ ವಿಷಾದದ ವೇಳೆ ಮಾತೊಂದು ಮತ್ತೆ ನನಗೆ ಸ್ಫೂರ್ತಿ ನೀಡಿತು, "ಮರದ ಹುಳ ಮರವನ್ನೇ ತಿನ್ನುವುದು", ಹಾಗಾಗಿ ಪ್ರಾಮಾಣಿಕವಾದ, ಯಾವ ಮತ್ಸರವೂ ಇಲ್ಲದೆ ನೀಡಿದ ಸಲಹೆ ಆದ್ದರಿಂದ ಯಾವ ವಿಷಾದವೂ ಬೇಕಿಲ್ಲ.
ಪೂಜೆ ಮಾಡುವುದೇ ಹೃದಯದಿಂದ ದೇವರನ್ನು ತಂದು. ಅಂದರೆ ಆತ್ಮದ ಪರಿಶುದ್ಧತೆಯೇ ಪೂಜೆ. ಮನಸ್ಸು, ಆತ್ಮದ ಪರಿಶುದ್ಧತೆ ಇದ್ದರೆ, ಈ ಕಾಲದಲ್ಲಿ ಯಾವ ಪೂಜೆಯೂ ಬೇಕಾಗಿಲ್ಲ. ಹಾಗಾಗಿಯೇ ಇನ್ನೊಬ್ಬರ ಅವನತಿ ಬಯಸಿದರೆ "ಮರದ ಹುಳ ಮರವನ್ನೇ ತಿನ್ನುವುದು" ಎಂದು ಓದಿದ ಮಾತುಗಳು ಮತ್ತೆ ಮತ್ತೆ ಸಮಾಧಾನ ಪಡಿಸಿತು. ಆದರೆ ಬದುಕಿಗೆ ಎಚ್ಚರಿಕೆ ನೀಡಿದ ಪಾಠ ಎಂದರೆ , ಯಾವತ್ತೂ ಸಲಹೆ ನೀಡಬೇಕಾದ್ದು ನಿನ್ನ ಅರಿತವರಿಗೆ ಮಾತ್ರಾ...!
ಕೃಷಿಯಲ್ಲಿ ಸೋಲು ಗೆಲುವುಗಿಂತಲೂ ಮುಖ್ಯ ಪ್ರಯತ್ನ. ಅಪ್ಪ ಯಾವತ್ತೂ ಕೃಷಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದರು. ಯಾವತ್ತೂ ಕುಗ್ಗಿರಲಿಲ್ಲ. ಹೊಸತು ... ಹೊಸತು. ಹಾಗಾಗಿ ಕೃಷಿ ಯಾವತ್ತೂ ಸೋಲಲು ಬಿಡಲಿಲ್ಲ.ಈಗಲೂ ಕೂಡಾ....
ನನಗೂ ನೆನಪಿತ್ತು... ಮೊನ್ನೆ ನಮ್ಮ ಮನೆಯ ಮಿತ್ರ ಹೇಳುತ್ತಿದ್ದರು, ಅಂದೆಲ್ಲಾ ನವೆಂಬರ್ ತಿಂಗಳಲ್ಲ್ಲಿ ಬಿದ್ದ ಅಡಿಕೆಯನ್ನು ಗೂಡಲ್ಲಿ ಹಾಕಿ ಒಣಗಲು ಹಾಕಿ, ಒಣಗಿಸಿ ಡಿಸೆಂಬರ್ ಮೊದಲ ವಾರದಿಂದಲೇ ಮಾರಾಟ ಮಾಡಬೇಕಿತ್ತು. ಅಂದರೆ ಊಟಕ್ಕೆ, ಕೃಷಿ ಕಾರ್ಯಕ್ಕೆ ಹಣ ಬೇಕಾಗಿತ್ತು. ಈಚೆಗೆ ಎರಡು ವರ್ಷದ ನಿರಂತರ ಪ್ರಯತ್ನದ ನಡುವೆಯೂ ಈ ವರ್ಷದ ಕೊನೆಗೂ ಆರ್ಥಿಕ ಪರಿಸ್ಥಿತಿ ಕೈಕೊಡಬಹುದೇ ಅಂತ ಅಂದುಕೊಂಡಿದ್ದೆ, ಆದರೆ ಹಾಗೆ ಆಗಲಿಲ್ಲ.
ಅಪ್ಪ ಪಟ್ಟ ಶ್ರಮ, ಅಮ್ಮ ಪಟ್ಟ ಶ್ರಮ ನೆನಪಿತ್ತು, ಸ್ವಲ್ಪ ಎಚ್ಚರ ವಹಿಸಿಕೊಂಡೆ. ಈ ವರ್ಷ ಅದುವೇ ಪಾಠ ಆಯ್ತು. ಅಮ್ಮ ಹೇಳುತ್ತಿದ್ದ ಮಾತು ನೆನಪಾಯ್ತು, ಪೇಟೆಯಲ್ಲಿ ಎಲ್ಲವೂ ಬೇಕಾದ್ದೇ, ಆದರೆ ನಮಗೆ ಯಾವುದು ಅಗತ್ಯ, ಅತೀ ಅಗತ್ಯ ಅದನ್ನು ಮಾತ್ರಾ ಖರೀದಿ ಮಾಡು ಎಂದ ಮಾತು ನೆನಪಾಯ್ತು. ಅಪ್ಪ ಬರೆಯುತ್ತಿದ್ದ ಲೆಕ್ಕದ ಪುಸ್ತಕ ಈಚೆಗೆ ಸಿಕ್ಕಿತು. ಅದರಿಂದ ಲೆಕ್ಕದ ಶಿಸ್ತು ಸಿಕ್ಕಿತು. ಒಂದು ರೂಪಾಯಿ ಖರ್ಚಾದರು ಅದು ಯಾವುದಕ್ಕೆ ಖರ್ಚಾಯಿತು ಎಂಬ ಲೆಕ್ಕ ನನಗೂ ಎಚ್ಚರಿಸಿತು.. ಇದಕ್ಕಾಗಿಯೇ ಈ ವರ್ಷ ಬದುಕಿನ ಲೆಕ್ಕದ ಪಾಠದ ವರ್ಷ.
ಇಷ್ಟೂ ವರ್ಷ ಒಂದು ಉದ್ದೇಶ, ಒಂದು ಸಿದ್ದಾಂತ ಅಂತ ಓಡಾಡಿದ್ದು ಹೌದು. ಹೀಗೇ ಓಡಾಡುತ್ತಿದ್ದಾಗ ಅಪ್ಪ ಅಂದೇ ಎಚ್ಚರಿಸಿದ್ದು..!. ಆದರೂ ಓಡಾಡಿದ್ದೂ ಸತ್ಯ. ಸಿದ್ದಾಂತದ ಕಾರಣಕ್ಕೆ ಕೆಲವೊಂದು ಅವಕಾಶ ತಪ್ಪಿದ್ದು ಹೌದು. ಕೆಲವು ಕಾರಣಗಳು , ನನ್ನದೇ ಆದ ನಿಲುವುಗಳು ನನಗೆ ಕೈಕೊಟ್ಟದ್ದು ಹೌದು. ನಾನು ಕಲಿತಿರುವ ಮೂಲ ಸಂಗತಿಗಳನ್ನು ತಪ್ಪಿ ಎಂದೂ ನಡೆದಿಲ್ಲ ಎನ್ನುವ ಸಮಾಧಾನ ಇದೆ. ಈ ಖುಷಿಯೇ ಮತ್ತೆ ಮತ್ತೆ ಕೆಲಸ ಮಾಡುವಂತೆ ಪ್ರೇರೇಪಣೆ ನೀಡುತ್ತದೆ. ನಾವು ಕಾಲಕ್ಕೆ ತಕ್ಕ ಹಾಗೆ ಅಪ್ಡೇಡ್ ಆಗಬೇಕು ಎನ್ನುವ ಪಾಠ ಸರಿಯಾದ್ದು.
ಅಪ್ಪ ಅಮ್ಮ ಇಲ್ಲದ ಮೇಲೆ ಅವರ ಕನಸುಗಳನ್ನು ಬೆಳೆಸಬೇಕು, ಅದೂ ಸಕಾರಾತ್ಮಕವಾಗಿ. ಅಪ್ಪ ಬಹಳಷ್ಟು ಸಿಟ್ಟಾಗುತ್ತಿದ್ದರು, ಅಮ್ಮ ಬಹಳಷ್ಟು ಸಮಾಧಾನ ಮಾಡುತ್ತಿದ್ದರು. ಅಪ್ಪ ಯಾಕೆ ವಿಪರೀತ ಸಿಟ್ಟಾಗುತ್ತಿದ್ದರು ಅಂತ ಈಗ ಅರಿವಾಗಿದೆ. ಅಮ್ಮ ಯಾಕೆ ಸಮಾಧಾನ ಆಗಿದ್ದರು ಎಂದು ಅರಿವಾಗಿದೆ. ಅಪ್ಪ ಹೇಳಿದ ಮಾತುಗಳನ್ನು ಈಚೆಗೆ ನಮ್ಮ ಮನೆಯ ಮಿತ್ರ ಹೇಳಿದ್ದರು. "ಇವನು ಮನೆ, ಈ ಜಾಗವನ್ನು ಉಳಿಸಿಕೊಂಡಾನೇ, ಹೀಗೆ ಮಾಡಿದರೆ ನೆಕ್ಕಿ ತಿಂದಾರು, ಇವನನ್ನು ಬಿಡಲಿಕ್ಕಿಲ್ಲ" ಅಂತ ಹೇಳಿದ್ದರಂತೆ..!. ಅವರು ಹೇಳಿರುವ ಭಾವವು ಈ ವರ್ಷ ಅರ್ಥವಾಯಿತು..!.
ಅಪ್ಪನಿಲ್ಲದ 4 ವರ್ಷ ಅಮ್ಮ ಇದೆಲ್ಲವನ್ನೂ ಅರ್ಥ ಮಾಡಿಸಲು ಪ್ರಯತ್ನಪಟ್ಟರೂ ಅರ್ಥ ಆಗಲಿಲ್ಲ. ಅನೇಕ ಬಾರಿ ಯಾರದ್ದೋ ಸುದ್ದಿ ಮಾತನಾಡುವಾಗ ಅಮ್ಮ ಎಚ್ಚರಿಸಿದ್ದು, ಅದರಿಂದ ಏನು ಪ್ರಯೋಜನ, ಅವರೇನಾದರೂ ಮಾಡಲಿ, ನಮ್ಮ ಕೆಲಸ ಮಾಡಿದರಾಯಿತು, ಜಗಳ ಬೇಡ ಎಂದು ಸಮಾಧಾನವೇ ಬದುಕಿಗೆ ಮುಖ್ಯ ಎನ್ನುತ್ತಾ ಕೊನೆಯವರೆಗೂ ಎಲ್ಲಾ ನೀವನ್ನೂ ಸಹಿಸಿಕೊಂಡು, ಚೆನ್ನಾಗಿ ನೋಡಿದ್ದೀರಿ ಎನ್ನುತ್ತಾ ಇಲ್ಲವಾದರು. ಇದರ ಮಹತ್ವ ಈ ವರ್ಷ ತಿಳಿದುಕೊಂಡೆ... ಸಮಾಧಾನವೇ ಬದುಕು..., ನಾಳೆಯ ಭರವಸೆಯೇ ಬದುಕು..
ಈಚೆಗೆ ಕಾರ್ಯಕ್ರಮ ಒಂದರಲ್ಲಿ ಇದ್ದೆ, ಒಬ್ಬರು ನನ್ನ ಪುಟ್ಟ ಮೀಡಿಯಾದ ಬಗ್ಗೆ, ಮಾಡುವ ಕೆಲಸಗಳ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದರು. ನನಗೇ ಗೊತ್ತಿಲ್ಲದ ಹಾಗೆ ಅವರು ಬಹಳ ಪ್ರೇರಣೆ ನೀಡಿದರು. ಈ ವರ್ಷದ ಕೊನೆಗೆ ಸಿಕ್ಕಿರುವ ಈ ಖುಷಿ , ಮುಂದಿನ ಹೆಜ್ಜೆ ಬಹಳ ಸಹಕಾರಿ. ಅದಕ್ಕಾಗಿಯೇ ಇದುವರೆಗೂ ಸಹಕಾರ ಮಾಡಿರುವ ಎಲ್ಲರನ್ನೂ ನೆನೆದುಕೊಳ್ಳುತ್ತಾ, ಮುಂದಿನ ವರ್ಷ ಸಕಾರಾತ್ಮಕ ವರ್ಷವಾಗಿಸಬೇಕು.
ಬದುಕು ಇನ್ನಷ್ಟು ಸುಂದರವಾಗಲಿ ಮುಂದಿನ ವರ್ಷ.... ಕೆಲವು ಜವಾಬ್ದಾರಿಗಳು ಇವೆ. ಕೆಲವು ಕೊಡಲು ಇದೆ, ಕೆಲವು ಬರಲು ಇದೆ ಎನ್ನುವ ಎಚ್ಚರಿಕೆ ಇದೆ. ಇದೆಲ್ಲವೂ ಈ ವರ್ಷ ಸೊನ್ನೆಯಾಗಿ.. "ರಾಮ" ಈ ಬಾರಿ ದೇಶದಲ್ಲಿ ಪ್ರತಿಷ್ಟಾಪನೆಯಾದಂತೆ ಇಡೀ ವರ್ಷದ ಕಾರ್ಯದಲ್ಲೂ ರಾಮನ ಆದರ್ಶವೇ ಇರಲಿ ಎನ್ನುವ ಆಶಯ..